'ಭಾರತ್ ಜೋಡೊ ಯಾತ್ರೆ' ದಿಲ್ಲಿಯವರೆಗೆ...

Update: 2022-12-27 04:26 GMT

'ಭಾರತ್ ಜೋಡೊ ಯಾತ್ರೆ'ಯುದ್ದಕ್ಕೂ ರಾಹುಲ್ ಅವರು ಮುಖ್ಯವಾಗಿ ಮೂರು ವಿಚಾರಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಮೊದಲನೆಯದಾಗಿ, ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಬೇಡಿಕೆ. ಎರಡನೆಯದಾಗಿ, ಬಂಡವಾಳಶಾಹಿಯ ಖಂಡನೆ ಮತ್ತು ಸವಾಲು. ಮೂರನೆಯದು, ದ್ವೇಷ ಮತ್ತು ಧರ್ಮಾಂಧತೆಯ ವಿರುದ್ಧ ಮಾತು. ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿರುವ ಯಾತ್ರೆ ಇದುವರೆಗೆ ದಿಲ್ಲಿ, ಹರ್ಯಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿದೆ. ಈಗಾಗಲೇ ಸುಮಾರು 3,000 ಕಿಲೋಮೀಟರ್‌ಗಳನ್ನು ಕ್ರಮಿಸಿದ್ದು, ಜನವರಿ ಅಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುವ ಮೊದಲು ಒಟ್ಟು 3,570 ಕಿ.ಮೀ. ಪ್ರಯಾಣಿಸಲಿದೆ. ಒಟ್ಟು 12 ರಾಜ್ಯಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು 3,500 ಕಿ.ಮೀ.ಗೂ ಅಧಿಕ ಭಾರತ್ ಜೋಡೊ ಯಾತ್ರೆ ಪೂರ್ಣಗೊಳಿಸಿದ್ದು, ದಿಲ್ಲಿಯಲ್ಲಿ ಒಂಭತ್ತು ದಿನಗಳ ಬಿಡುವು ತೆಗೆದುಕೊಂಡಿದ್ದಾರೆ.

ಮೊನ್ನೆ ಡಿಸೆಂಬರ್ 24ರ ಸಂಜೆ ಭಾರತ್ ಜೋಡೊ ಯಾತ್ರೆ ದಿಲ್ಲಿ ಮುಟ್ಟಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಂಪು ಕೋಟೆಯ ಮುಂದೆ ನಿಂತು ಭಾರೀ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಅವರ ತೀವ್ರ ಟೀಕಾಕಾರರೂ ಕೂಡ ತಲೆದೂಗುವ ಹಾಗಿದ್ದವು ಅವರ ಮಾತುಗಳು ಎನ್ನುತ್ತಿವೆ ವರದಿಗಳು. ಭಾವನೆ ಮತ್ತು ವಾಸ್ತವ ಎರಡನ್ನೂ ಬೆಸೆದು ರಾಹುಲ್ ಆಡಿದ್ದ ಮಾತುಗಳಲ್ಲಿ, ಖಚಿತ ಜನಪರವಾದ ಕಾಳಜಿಯೊಂದು ಅವರ ಅಂತರಾಳದಿಂದ ವ್ಯಕ್ತವಾಯಿತೆಂಬುದನ್ನು ಕೆಲವರಾದರೂ ಗುರುತಿಸಿದ್ದಾರೆ.
ಅವರ ಭಾಷಣ ನಡುನಡುವೆ ಸಭಿಕರೊಂದಿಗೆ ಸಂವಾದದ ರೂಪವನ್ನೂ ಪಡೆಯುತ್ತಿತ್ತು. ದೇಶದಲ್ಲಿ ನೈಜ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಅದು ಹಿಂದೂ-ಮುಸ್ಲಿಮ್ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ದೂಷಿಸಿದರು.
ದೇಶದಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿಯು ದ್ವೇಷವನ್ನು ಹರಡುತ್ತಿದೆ ಎಂದ ಅವರು, ''ನಾನು 2,800 ಕಿಲೋಮೀಟರ್ ನಡೆದಿದ್ದೇನೆ. ಆದರೆ ಯಾವುದೇ ದ್ವೇಷವನ್ನು ನೋಡಲಿಲ್ಲ. ಆದರೆ ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತೇನೆ'' ಎಂದರು. ''ಈ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಲು ಬಯಸುತ್ತಾರೆ. ನಾವು ಹೇಳುವ ವಾಸ್ತವವನ್ನು ಮಾಧ್ಯಮಗಳು ಎಂದಿಗೂ ತೋರಿಸುವುದಿಲ್ಲ. ತೆರೆಮರೆಯಿಂದ ಬರುವ ಕಟ್ಟುಕಥೆಗಳೇ ಇದಕ್ಕೆ ಕಾರಣ'' ಎಂದು ರಾಹುಲ್ ಮಾಧ್ಯಮದ ನಡೆಯನ್ನು ಟೀಕಿಸಿದರು.
''ಮಾಧ್ಯಮದವರು ಏನು ಮಾಡುತ್ತಾರೆ ಎಂಬುದು ಅವರ ತಪ್ಪಲ್ಲ. ಅವರ ಯಜಮಾನರು ಲಗಾಮು ಹಿಡಿದಿದ್ದಾರೆ'' ಎಂದು ವ್ಯಂಗ್ಯವಾಡಿದ ರಾಹುಲ್, ಅವರ 'ಯಜಮಾನರು' ಯಾರು ಎಂದು ಸಭಿಕರನ್ನು ಕೇಳಿದಾಗ, ನೆರೆದಿದ್ದವರು ''ಅಂಬಾನಿ ಮತ್ತು ಅದಾನಿ'' ಎಂದು ಕೂಗಿದರು. ಜನರ ಹಣವನ್ನು ಕದಿಯುವ ಮೊದಲು ಸಂತ್ರಸ್ತರ ಗಮನವನ್ನು ಬೇರೆಡೆಗೆ ಸೆಳೆಯುವ ಭಾರತದ ಶ್ರೀಮಂತರನ್ನು ಪಿಕ್‌ಪಾಕೆಟರ್‌ಗಳಿಗೆ ಹೋಲಿಸಿದ ಅವರು, ದೇಶದ ದುರಂತ ಆರ್ಥಿಕ ಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಚ್ಚು ದೂಷಿಸಬೇಡಿ ಎಂದು ಸಭಿಕರಿಗೆ ಹೇಳಿದರು. ಮೋದಿ ತಮ್ಮ ಶ್ರೀಮಂತ ಸ್ನೇಹಿತರನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅವರೇ ಮೋದಿಯವರನ್ನು ನಿಯಂತ್ರಿಸುತ್ತಾರೆ ಎಂದೂ ರಾಹುಲ್ ಟೀಕಿಸಿದರು.
ಪಕ್ಷದಲ್ಲಿ ನಾಯಕರಾಗಿ ಅವರ ಸೋಲು ಅಥವಾ ದುರದೃಷ್ಟಗಳೇನೇ ಇದ್ದರೂ, ದೇಶದ ರಾಜಕೀಯದಲ್ಲಿ ಅವರ ಪಾತ್ರದ ಬಗ್ಗೆ ಏನೇ ಟೀಕೆಗಳಿದ್ದರೂ, ದೇಶದ ಶ್ರೀಮಂತ ಕೈಗಾರಿಕೋದ್ಯಮಿಗಳೊಂದಿಗಿನ ಪ್ರಧಾನ ಮಂತ್ರಿಯ ಸಾಮೀಪ್ಯವನ್ನು ನಿರಂತರವಾಗಿ ಮತ್ತು ನಿಯಮಿತವಾಗಿ ಟೀಕಿಸುತ್ತಲೇ ಬಂದ ದೇಶದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ರಾಹುಲ್ ಒಬ್ಬರು ಎಂಬುದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ದೇಶದ ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಅದರ ಪ್ರಭಾವವನ್ನು ನಿಯಮಿತವಾಗಿ ಟೀಕಿಸುವುದನ್ನು ನಿಲ್ಲಿಸದ ಕೆಲವೇ ಪ್ರಮುಖ ನಾಯಕರಲ್ಲಿ ಅವರು ಕೂಡ ಒಬ್ಬರು.
ಅವರ ಇನ್ನೊಂದು ಮಾತು ಈ ಸಂದರ್ಭದಲ್ಲಿ ತುಂಬ ಸುದ್ದಿಯಾಯಿತು. ಅವರು ಹೇಳಿದರು: ''ಚಳಿಗಾಲದಲ್ಲಿ ಕೇವಲ ಟೀ ಶರ್ಟ್‌ನಲ್ಲಿ ತಿರುಗಾಡಲು ನಿಮಗೆ ಚಳಿಯಾಗುವುದಿಲ್ಲವೇ? ಎಂದು ವರದಿಗಾರರು ನನ್ನನ್ನು ಕೇಳುತ್ತಲೇ ಇರುತ್ತಾರೆ. ಆದರೆ ಅವರೆಂದೂ ಬಡ ರೈತರು ಮತ್ತು ಕಾರ್ಮಿಕರಿಗೆ ಅದೇ ಪ್ರಶ್ನೆಯನ್ನು ಏಕೆ ಕೇಳುವುದಿಲ್ಲ?''
ಭಾರತ್ ಜೋಡೊ ಯಾತ್ರೆಯುದ್ದಕ್ಕೂ ರಾಹುಲ್ ಅವರು ಮುಖ್ಯವಾಗಿ ಮೂರು ವಿಚಾರಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಮೊದಲನೆಯದಾಗಿ, ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಬೇಡಿಕೆ. ಎರಡನೆಯದಾಗಿ, ಬಂಡವಾಳಶಾಹಿಯ ಖಂಡನೆ ಮತ್ತು ಸವಾಲು. ಮೂರನೆಯದು, ದ್ವೇಷ ಮತ್ತು ಧರ್ಮಾಂಧತೆಯ ವಿರುದ್ಧ ಮಾತು.
ರಾಹುಲ್ ಅವರ ಈ ಮೂರು ನಿಲುವುಗಳು ದೇಶಾದ್ಯಂತ ಜನರ ಮನಗೆದ್ದಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ರಾಹುಲ್ ಪ್ರತಿಪಾದಿಸುತ್ತ ಬಂದಿರುವಂತೆ, ಜಾತ್ಯತೀತತೆ ಮತ್ತು ಏಕತೆ ನಿಜವಾಗಿ ಜೀವಂತವಾಗಿದೆ. ಆದರೆ ಹಿಂದೂ-ಮುಸ್ಲಿಮ್ ವಿಭಜನೆ ತಂತ್ರವೇ ಮೂಲ ಸಮಸ್ಯೆ. ಸರಕಾರ ಅದನ್ನು ನಿರಂತರವಾಗಿ ಮಾಡುತ್ತ ಬಂದಿದೆ ಮತ್ತು ಇದಕ್ಕಾಗಿ ತನ್ನ ಅಂಕೆಯಲ್ಲಿರುವ ಮಾಧ್ಯಮವನ್ನು ಅದು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ.
ಮೋದಿಯವರಿಗೆ ಭಾರೀ ಜನಬೆಂಬಲ ಇದೆಯೆಂಬುದು ಕೂಡ ಮಾಧ್ಯಮಗಳದ್ದೇ ಸೃಷ್ಟಿಯೆನ್ನುತ್ತಾರೆ ರಾಹುಲ್. ''ದೇಶದಲ್ಲಿ ನಿಜವಾಗಿಯೂ 'ಮೋದಿ ಅಲೆ' ಇದ್ದರೆ, ನಾವು ಸರಕಾರವನ್ನು ಟೀಕಿಸುತ್ತೇವೆ ಎಂಬ ಕಾರಣಕ್ಕಾಗಿ ಜನರು ತಮ್ಮ ನಗರಗಳ ಮೂಲಕ ಯಾತ್ರೆ ಸಾಗುತ್ತಿದ್ದಾಗ ಕಲ್ಲು ಎಸೆಯಬೇಕಿತ್ತು, ಅಲ್ಲವೇ? ಬದಲಿಗೆ, ಅವರು ನಮ್ಮ ಮೇಲೆ ಹೂವಿನ ದಳಗಳನ್ನು ಸುರಿಸಿದ್ದರು. ಹಾಗೆಂದರೆ ಅರ್ಥವೇನು? ಇದರರ್ಥ ಜಾತ್ಯತೀತತೆ ಮತ್ತು ಏಕತೆಯ ಕಲ್ಪನೆಯು ಹೆಚ್ಚಿನ ಜನರಲ್ಲಿ ಇನ್ನೂ ಜೀವಂತವಾಗಿದೆ ಮತ್ತು ಚೆನ್ನಾಗಿದೆ!''
ಯಾತ್ರೆಯುದ್ದಕ್ಕೂ ವ್ಯಕ್ತವಾದ ಜನಬೆಂಬಲ ಕೂಡ, ದೇಶ ಹೊಸದೊಂದಕ್ಕಾಗಿ ತವಕಿಸುತ್ತಿದೆ ಎಂಬುದನ್ನೇ ಹೇಳುತ್ತಿದೆ. ಈ ಯಾತ್ರೆಯು ಹಿಂದೂ-ಮುಸ್ಲಿಮ್ ನಡುವಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಯಾತ್ರೆಯು ವಾಸ್ತವವಾಗಿ ಸಾಮಾಜಿಕ ಮಾಧ್ಯಮ ಮತ್ತು ಸಮಾಜದಲ್ಲಿನ ದ್ವೇಷದ ಮಟ್ಟವನ್ನು ಕಡಿಮೆ ಮಾಡಿದೆ ಎಂಬ ಅಭಿಪ್ರಾಯಗಳಿವೆ.
ಜನಸಾಮಾನ್ಯರು ದೈನಂದಿನ ವಸ್ತುಗಳ ಬೆಲೆ ಕೈಗೆ ನಿಲುಕಲಾರದ ಮಟ್ಟಕ್ಕೆ ಏರಿರುವುದರ ಬಗ್ಗೆ ಅಸಹನೆ ಹೊಂದಿರುವುದು ಸುಳ್ಳಲ್ಲ. ಈ ಹಿಂದೆ ಗ್ಯಾಸ್ ಸಿಲಿಂಡರ್ ಗೆ ರೂ. 400. ಈಗ ಇದರ ಬೆಲೆ ರೂ. 1,200. ಒಬ್ಬ ಕಾರ್ಮಿಕ ಅದನ್ನು ಹೇಗೆ ಭರಿಸಬಲ್ಲ? ಎಂಬಂಥ ಪ್ರಶ್ನೆಗಳು ಜನಸಾಮಾನ್ಯರ ಮಧ್ಯೆಯಿಂದ ಏಳುತ್ತಿವೆ. ''ಕೆಲವೊಮ್ಮೆ ಕೇಜ್ರಿವಾಲ್, ಕೆಲವೊಮ್ಮೆ ಮೋದಿ. ಇವರಿಬ್ಬರೂ ಸರದಿಯಂತೆ ರಾಷ್ಟ್ರವನ್ನು ಲೂಟಿ ಮಾಡಿದ್ದಾರೆ. ಮೋದಿ ಬಡವರನ್ನು ದುರ್ಬಲಗೊಳಿಸಿದ್ದಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಬಲ್ಲಷ್ಟು ಮಟ್ಟಿಗೆ ನಿಜವಾಗಿಯೂ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜನಸಾಮಾನ್ಯರು ಬಲ್ಲವರಾಗಿದ್ದಾರೆ.
ಈ ಅಭಿಪ್ರಾಯ ಹೇಳಿದ ಆಟೊ ಚಾಲಕನ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತ ರಾಹುಲ್ ಹೇಳಿದ್ದು: ''ನಾನು ಅವನ ಕೈ ಕುಲುಕಿದಾಗ ಮತ್ತು ಅವನ ಸಂಕ್ಷಿಪ್ತ ಆದರೆ ಸ್ಪಷ್ಟವಾದ ಮತ್ತು ಒಳನೋಟವುಳ್ಳ ಮಾತುಗಳಿಗಾಗಿ ಧನ್ಯವಾದ ಹೇಳಿದಾಗ, ಅವನ ಕೈ ಎಷ್ಟು ಒರಟಾಗಿತ್ತು ಎಂಬುದನ್ನು ಗಮನಿಸದೆ ಇರಲು ಸಾಧ್ಯವಾಗಲಿಲ್ಲ.''

Similar News