ಮೋದಿ ಸರಕಾರದ ಸೆಸ್ ಸುಲಿಗೆ

ಕರ್ನಾಟಕದ ಬೊಕ್ಕಸಕ್ಕೆ ಪ್ರತಿವರ್ಷ 23,000 ಕೋಟಿ ರೂ. ಕೇಂದ್ರದ ಕನ್ನ!

Update: 2022-12-29 04:46 GMT

 
ಭಾಗ-2

ಹೇಳಿದ್ದು ಮಾರುದ್ದ- ಕೊಟ್ಟಿದ್ದು ಗೇಣುದ್ದ!

ಮೋದಿ ಸರಕಾರದ ಅಂಕಿಅಂಶಗಳನ್ನೇ ಹಿಂದಿರುಗಿ ಗಮನಿಸುವುದಾದರೆ, ಮೋದಿ ಸರಕಾರದ ಅವಧಿಯಲ್ಲಿ ರಾಜ್ಯಗಳಿಗೆ ದಕ್ಕಿರುವ ಪಾಲು ಹೀಗಿದೆ:

2014-15ರಲ್ಲಿ- ಶೇ. 27.4,

2015-16ರಲ್ಲಿ ಶೇ. 34.77,

2016-17ರಲ್ಲಿ- ಶೇ. 35.43,

2017-18ರಲ್ಲಿ- ಶೇ. 35.37

ಹಾಗೂ 2018-19ರಲ್ಲಂತೂ ರಾಜ್ಯಗಳಿಗೆ ದಕ್ಕಿರುವ ಪಾಲು ಕೇವಲ ಶೇ. 33.87 ಮಾತ್ರ!

ಹೀಗೆ ಮೋದಿ ಸರಕಾರ ರಾಜ್ಯಗಳಿಗೆ ಯಾವೊಂದು ವರ್ಷದಲ್ಲೂ ಶೇ. 42ರಷ್ಟು ಪಾಲನ್ನು ರಾಜ್ಯಗಳಿಗೆ ಕೊಡದಿದ್ದರೂ 2019ರ ಚುನಾವಣೆಯಲ್ಲಿ ಕೋ ಆಪರೇಟೀವ್ ಫೆಡರಲಿಸಂ ಬಗ್ಗೆಯೂ ಪ್ರಚಾರ ಮಾಡಿಕೊಂಡಿತು.

ಅಷ್ಟು ಮಾತ್ರವಲ್ಲ, 2021ನೇ ಸಾಲಿನ ಬಜೆಟ್‌ನಲ್ಲಿ ನಮೂದಿಸಿರುವ 2020-21ನೇ ಸಾಲಿನ ಬಜೆಟ್‌ನ ಪರಿಷ್ಕೃತ ಅಂಕಿಅಂಶಗಳ ಪ್ರಕಾರ ರಾಜ್ಯಗಳ ಪಾಲು ಶೇ. 28.9ಕ್ಕೇ ಇಳಿದಿತ್ತು. 2021-22ನೇ ಸಾಲಿನ ಬಜೆಟ್‌ನದೂ ಅದೇ ಕಥೆ. ಇದಕ್ಕೆ ಒಂದು ಕಾರಣ ತೆರಿಗೆಯ ಪಾಲನ್ನು ಹೆಚ್ಚಿಸಿದಂತೆ ನಾಟಕವಾಡಿದ ಮೋದಿ ಸರಕಾರ ಮತ್ತೊಂದು ಕಡೆ ಅನುದಾನ ಹಾಗೂ ಷರತ್ತಿನ ಯೋಜನಾ ಪಾಲನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದ್ದು.

ಸೆಸ್ ದರೋಡೆ- ವಂಚನೆಯ ಪ್ರಧಾನ ಸಾಧನ

ಅದೆಲ್ಲಕ್ಕಿಂತ ಮುಖ್ಯವಾಗಿ ಮೋದಿ ಸರಕಾರ ತೆರಿಗೆಯ ಮೇಲಿನ ಸೆಸ್ ಹಾಗೂ ಸರ್ಚಾರ್ಜ್‌ಗಳನ್ನು ಹಿಂದಿನ ಯಾವುದೇ ಸರಕಾರಗಳು ಹೆಚ್ಚಿಸದಷ್ಟು ಮಟ್ಟಿಗೆ ಹೆಚ್ಚಿಸಿತು. ನಿಯಮಗಳ ಪ್ರಕಾರ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲಿರುತ್ತದೆಯೇ ವಿನಾ ತೆರಿಗೆಯ ಮೇಲಿನ ಸೆಸ್ ಅಥವಾ ಸರ್ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲಿರುವುದಿಲ್ಲ. ಇಂತಹ ಹಗಲು ದರೋಡೆಯನ್ನು ಸಂವಿಧಾನ ಕರ್ತರೂ ಊಹಿಸಿರಲಿಲ್ಲವಾದ್ದರಿಂದ ತೆರಿಗೆ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿರುವ ಆರ್ಟಿಕಲ್ 268, 269 ಮತ್ತು 271ರಲ್ಲಿ ಅದರ ಬಗ್ಗೆ ಯಾವ ನಿರ್ದಿಷ್ಟ ಸೂಚನೆಯೂ ಸಂವಿಧಾನದಲ್ಲಿರಲಿಲ್ಲ. ಹೀಗಾಗಿ 1965ರಲ್ಲಿ ನಾಲ್ಕನೇ ಹಣಕಾಸು ಆಯೋಗ ರಚನೆಯಾಗುವವರೆಗೆ ಸೆಸ್ ಮತ್ತು ಸರ್ಚಾರ್ಜ್‌ಗಳು ಡಿವಿಸಬಲ್ ಪೂಲ್ (ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಜೊತೆ ಹಂಚಿಕೊಳ್ಳುವ ಪಾಲು)ನ ಭಾಗವೇ ಆಗಿತ್ತು. ಆದರೆ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ಒಂದು ನಿರ್ದಿಷ್ಟ ಕಾಲಾವಧಿಗೆ ಮತ್ತು ಒಂದು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ವಿಧಿಸುವುದರಿಂದ ಅದನ್ನು ಸಾಮಾನ್ಯ ಹಂಚಿಕೆಯೊಂದಿಗೆ ಬೆರೆಸಿದರೆ ನಿರ್ದಿಷ್ಟ ಉದ್ದೇಶ ಈಡೇರುವುದಿಲ್ಲ ಎಂಬ ನೆಪದಿಂದ 4ನೇ ಹಣಕಾಸು ಆಯೋಗದಿಂದಾಚೆಗೆ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ವಾಜಪೇಯಿ ನೇತೃತ್ವದ ಎನ್‌ಡಿಎ-1 ಸರಕಾರ ಅಧಿಕಾರಕ್ಕೆ ಬಂದಾಗ ಭಾರತ ಸರಕಾರಕ್ಕೆ 80ನೇ ತಿದ್ದುಪಡಿ ಮಾಡಿ ಸಂವಿಧಾನದ ಆರ್ಟಿಕಲ್ 271ಕ್ಕೆ ತಿದ್ದುಪಡಿಯನ್ನು ತಂದು ಸೆಸ್ ಹಾಗೂ ಸರ್ಚಾರ್ಜ್‌ಗಳನ್ನು ಡಿವಿಸಬಲ್ ಪೂಲ್‌ನಲ್ಲಿ ಸೇರಿಸಬಾರದೆನ್ನುವ ಶಾಸನವನ್ನೇ ಮಾಡಿಬಿಡಲಾಯಿತು.

ಹಾಗಿದ್ದರೂ 13ನೇ ಹಣಕಾಸು ಆಯೋಗವು ಯಾವ ಕಾರಣಕ್ಕೂ ಸೆಸ್‌ನ ಪ್ರಮಾಣ ಹಾಗೂ ಅವಧಿ ಹೆಚ್ಚಾಗಬಾರದೆಂದು ತಾಕೀತು ವಿಧಿಸಿತ್ತು. ಆದರೆ ಮೋದಿ ಸರಕಾರ 14ನೇ ಹಣಕಾಸು ಆಯೋಗದ ಅವಧಿಯಲ್ಲೇ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ಹೆಚ್ಚಿಸುವ ಮೂಲಕ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ತೆರಿಗೆ ಪಾಲಿನಲ್ಲಿ ಸರಾಸರಿ ಶೇ. 8ರಷ್ಟನ್ನು ದೋಚಿದೆ. 15ನೇ ಹಣಕಾಸು ಆಯೋಗದಲ್ಲಂತೂ ಈ ಹಗಲು ದರೋಡೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಇನ್ನೂ ಐದು ವರ್ಷಗಳ ಕಾಲ ನಡೆಯಲಿದೆ. 15ನೇ ಆಯೋಗದ ಪ್ರಕಾರ ಕೇಂದ್ರ ಸರಕಾರದ ಒಟ್ಟಾರೆ ತೆರಿಗೆ ಸಂಗ್ರಹ 2021-26ರ ಐದು ವರ್ಷದ ಅವಧಿಯಲ್ಲಿ ರೂ. 135.2 ಕೋಟಿಯಷ್ಟಾಗಲಿದೆಯೆಂದು ಅಂದಾಜಿಸಲಾಗಿದೆ. ಆಯೋಗವು ರಾಜ್ಯದ ಪಾಲನ್ನು ಶೇ.41 ಎಂದು ನಿಗದಿಗೊಳಿಸಿದೆ. ಆದ್ದರಿಂದ ರಾಜ್ಯಗಳ ಪಾಲು ರೂ. 55 ಲಕ್ಷ ಕೋಟಿಗಳಾಗಬೇಕು. ಅಲ್ಲವೇ? ಆದರೆ ಹಣಕಾಸು ಆಯೋಗವು ಇದರಲ್ಲಿ ಕೇವಲ 103 ಲಕ್ಷ ಕೋಟಿ ರೂ.ಗಳನ್ನು ಮಾತ್ರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕೆಂದು ತಿಳಿಸಿದೆ.

ಏಕೆಂದದೆ ಇನ್ನುಳಿದ 32 ಲಕ್ಷ ಕೋಟಿ ರೂ.ಗಳು ಅಂದರೆ ಶೇ. 23ರಷ್ಟು ಸೆಸ್ ಮತ್ತು ಸರ್ಚಾರ್ಜ್‌ಗಳಿಂದ ಸಂಗ್ರಹಿಸಲಾಗುವುದೆಂದು ಅಂದಾಜಿಸಿದೆ. ಹೀಗಾಗಿ 2021-26ರ ಅವಧಿಯಲ್ಲಿ ರಾಜ್ಯಗಳ ಪಾಲು 103 ಲಕ್ಷ ಕೋಟಿ ರೂ.ಗಳ ಶೇ. 41ರಷ್ಟು ಅಂದರೆ 42.2 ಲಕ್ಷ ಕೋಟಿ ರೂ.ಗಳಿಗೆ ಇಳಿಯಲಿದೆ. ಅಂದರೆ ರಾಜ್ಯಗಳಿಗೆ ಸಲ್ಲಬೇಕಿರುವ 12.8 (55-42.2) ಲಕ್ಷ ಕೋಟಿ ರೂ.ಗಳಷ್ಟು ಸಂಪನ್ಮೂಲವನ್ನು ಮೋದಿ ಸರಕಾರ ಹಗಲು ದರೋಡೆ ಮಾಡಲಿದೆ. ಆದರೆ ಮೊನ್ನೆ ಮೋದಿ ಸರಕಾರವೇ ರಾಜ್ಯಸಭೆ ಯಲ್ಲಿ ಸ್ಪಷ್ಟಪಡಿಸಿರುವಂತೆ ಕೇಂದ್ರ ತೆರಿಗೆಯಲ್ಲಿ ಸೆಸ್‌ನ ಪಾಲು ಶೇ. 23 ಅಲ್ಲ. ಅದು ಶೇ. 28ಕ್ಕೇ ಏರಿದೆ. ಅಂದರೆ ರಾಜ್ಯಗಳ ಜೊತೆ ಈಗ ಕೇಂದ್ರ ಹಂಚಿಕೊಳ್ಳಲಿರುವುದು ರೂ. 103 ಲಕ್ಷ ಕೋಟಿಯಲ್ಲ. ಬದಲಿಗೆ ಕೇವಲ 97 ಲಕ್ಷ ಕೋಟಿ ರೂ.!. ಅಂದರೆ ಕೇವಲ ಸೆಸ್ ಎನ್ನುವ ದರೋಡೆ ನೀತಿಯ ಮುಖಾಂತರ ಮೋದಿ ಸರಕಾರ ಕರ್ನಾಟಕದಂತಹ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ 39 ಲಕ್ಷ ಕೋಟಿ ರೂ. ವಂಚಿಸುತ್ತಿದೆ. ಆದರೆ ಕರ್ನಾಟಕಕ್ಕೆ ಮೋದಿ ಸರಕಾರ ಮಾಡುತ್ತಿರುವ ಅನ್ಯಾಯ ಇಷ್ಟೇ ಅಲ್ಲ. 15ನೇ ಹಣಕಾಸು ಆಯೋಗ-

ಕರ್ನಾಟಕಕ್ಕೆ ಮೋದಿ ಸರಕಾರದ ಮಹಾದ್ರೋಹ

ಇದರ ಜೊತೆಗೆ 15ನೇ ಆಯೋಗವು ರಾಜ್ಯಗಳ ನಡುವಿನ ತೆರಿಗೆಪಾಲು ಹಂಚಿಕೆಗೆ ಹೆಚ್ಚು ಕೆಳಗಿನ ಮಾನದಂಡಗಳನ್ನು ನಿಗದಿಗೊಳಿಸಿದೆ: ಆದಾಯವಿರುವ ರಾಜ್ಯಗಳಿಗೆ ಹೋಲಿಸಿದಲ್ಲಿ ಆಯಾ ರಾಜ್ಯಗಳ ಆದಾಯ ದೂರ (ಇನ್‌ಕಮ್ ಡಿಸ್ಟನ್ಸ್- 45 ಅಂಕ), ಜನಸಂಖ್ಯಾ ಪ್ರಮಾಣ(15), ಜನಸಂಖ್ಯಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು (12.5), ತೆರಿಗೆ ಸಂಗ್ರಹದ ಕ್ರಮಗಳು (2.5), ಪರಿಸರ ಕ್ರಮಗಳು ಇತ್ಯಾದಿಗಳು ಹಾಗೂ ಜನಸಂಖ್ಯಾ ಪ್ರಮಾಣಕ್ಕೆ ಮೊತ್ತಮೊದಲ ಬಾರಿಗೆ 1971ರ ಜನಗಣತಿಗೆ ಬದಲಾಗಿ 2011ರ ಜನಗಣತಿಯನ್ನು ಮಾನದಂಡವನ್ನಾಗಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದ ಕೇಂದ್ರದ ತೆರಿಗೆಯ ಡಿವಿಸಬಲ್ ಪೂಲ್‌ನಲ್ಲಿ ಕರ್ನಾಟಕದ ಪಾಲನ್ನು ಮೋದಿ ಸರಕಾರ ನೇಮಿಸಿದ 15ನೇ ಹಣಕಾಸು ಆಯೋಗ ಶೇ. 4.71ರಿಂದ ಶೇ. 3.64ಕ್ಕೆ ಇಳಿಸಿದೆ. ಅಂದರೆ, ಕೇಂದ್ರದ ತೆರಿಗೆಯ ಪಾಲಿನಲ್ಲಿ ಕರ್ನಾಟಕದ ಪಾಲು ಶೇ. 1.07ರಷ್ಟು ಕಡಿಮೆಯಾಗಿದೆ.

ಕರ್ನಾಟಕಕ್ಕೆ ಮೋದಿ ಸರಕಾರ ಮಾಡುತ್ತಿರುವ ವಂಚನೆಯ ಲೆಕ್ಕಾಚಾರ
ಈಗ ಈ ಎಲ್ಲಾ ಕಾರಣಗಳಿಂದ ಮೋದಿ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಹಣಕಾಸು ವಂಚನೆಯ ಲೆಕ್ಕಾಚಾರ ಮಾಡೊಣ. 15ನೇ ಹಣಕಾಸು ಆಯೋಗದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕೇಂದ್ರೀಯ ತೆರಿಗೆಯ ಪ್ರಮಾಣ ರೂ. 135 ಲಕ್ಷ ಕೋಟಿಗಳಾಗಲಿವೆ. ಅದರಲ್ಲಿ ಮೋದಿ ಸರಕಾರವೇ ಹೇಳುವಂತೆ ಶೇ.41ರಷ್ಟು ರಾಜ್ಯಗಳ ಪಾಲಾಗಿದ್ದರೆ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ಮೋದಿ ಸರಕಾರ 55 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಬೇಕಿತ್ತು. ಅದರಲ್ಲಿ ಕರ್ನಾಟಕದ ಪಾಲು ಶೇ.4.71 ಆಗಿಯೇ ಉಳಿದಿದ್ದರೆ ಕರ್ನಾಟಕಕ್ಕೆ ಮುಂದಿನ ಐದು ವರ್ಷಗಳಲ್ಲಿ ರೂ. 2.6 ಲಕ್ಷ ಕೋಟಿಗಳು ಸಿಗಬೇಕಿತ್ತು. ಅಂದರೆ ಕೇಂದ್ರವು ಕರ್ನಾಟಕಕ್ಕೆ ವರ್ಷಕ್ಕೆ 51,000 ಕೋಟಿ ರೂ.ಗಳನ್ನು ವರ್ಗಾಯಿಸಬೇಕಿತ್ತು.

ಆದರೆ ಈಗ ರಾಜ್ಯ ಸಭೆಯಲ್ಲಿ ಕೇಂದ್ರವೇ ಒಪ್ಪಿಕೊಂಡಂತೆ ಕೇಂದ್ರದ ತೆರಿಗೆಯಲ್ಲಿ ಸೆಸ್ ಅಂದರೆ ರಾಜ್ಯಗಳ ಹಂಚಿಕೊಳ್ಳದ ಪಾಲು ಶೇ. 28.1. ಆದ್ದರಿಂದ ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದು ರೂ. 55 ಲಕ್ಷ ಕೋಟಿಗಳನ್ನಲ್ಲ. ಬದಲಿಗೆ ಕೇವಲ ರೂ. 39.1 ಲಕ್ಷ ಕೋಟಿಗಳನ್ನು. ಅಂದರೆ ಕರ್ನಾಟಕದಂತಹ ರಾಜ್ಯಗಳಿಗೆ ಮೋದಿ ಸರಕಾರ ಮುಂದಿನ ಐದು ವರ್ಷಗಳಲ್ಲಿ 55-39.1= 15 ಲಕ್ಷ ಕೋಟಿ ರೂ.ಗಳಷ್ಟು ಪಂಗನಾಮ ಹಾಕುತ್ತಿದೆ. ಅದರಲ್ಲಿ ಕರ್ನಾಟಕದ ಪಾಲು ಶೇ. 4.71ರಿಂದ 3.64ಕ್ಕೆ ಇಳಿದಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ದಕ್ಕುವುದು ಕೇವಲ ರೂ. 1.42 ಲಕ್ಷ ಕೋಟಿಗಳು ಮಾತ್ರ. ಅಂದರೆ ವರ್ಷಕ್ಕೆ ಕೇವಲ ರೂ. 28,000 ಕೋಟಿಗಳು ಮಾತ್ರ. ಸೆಸ್ ದ್ರೋಹ ಮತ್ತು ಹಣಕಾಸು ಆಯೋಗದ ವಂಚನೆ ಇಲ್ಲದಿದ್ದರೆ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ರೂ. 51,000 ಕೋಟಿ ಸಿಗಬೇಕಿತ್ತು. ಈಗ ಸಿಗುತ್ತಿರುವುದು ಕೇವಲ 28,000 ಕೋಟಿ ರೂ. ಅಂದರೆ ಪ್ರತಿವರ್ಷ ನಿವ್ವಳ 51,000-28,000=23,000 ಕೋಟಿ ರೂ. ವಂಚನೆ. ಹಗಲು ದರೋಡೆ.

ಮತ್ತು ಇದರಲ್ಲೂ ಶೇ.60ಕ್ಕಿಂತ ಜಾಸ್ತಿ ಸಂದಾಯ ಮಾಡುವುದಿಲ್ಲ. ಆದರೂ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆಯೇ ಇಲ್ಲ. ರಾಜ್ಯದ ಸಂಸದರು ಸಂಸತ್ತಿನಲ್ಲಿ ಬಾಯಿ ಬಿಡುವುದಿಲ್ಲ. ವರ್ತಮಾನದಲ್ಲಿ ಮಾಡುತ್ತಿರುವ ಈ ಹಗಲು ದರೋಡೆಯನ್ನು ಬಿಟ್ಟು ಮೊಗಲರ ಕಾಲದಲ್ಲಿ ನಡೆದ ಕಲ್ಪಿತ ಲೂಟಿಯ ಬಗ್ಗೆ ಚರ್ಚಿಸಬೇಕೆಂದು ಸಂಘಪರಿವಾರ ಏಕೆ ಬಯಸುತ್ತದೆಂದು ಈಗಲಾದರೂ ಅರ್ಥ ಮಾಡಿಕೊಳ್ಳಬೇಕಲ್ಲವೇ?

Similar News