ಛತ್ತೀಸ್‌ಗಡದಲ್ಲಿ ಗುಂಪಿನಿಂದ ಚರ್ಚ್‌ಗೆ ದಾಳಿ: ಹಿರಿಯ ಪೊಲೀಸ್ ಅಧಿಕಾರಿಯ ತಲೆಗೆ ಗಾಯ

Update: 2023-01-03 06:27 GMT

ರಾಯಪುರ, ಜ.2: ಛತ್ತೀಸ್‌ಗಡದ ನಾರಾಯಣಪುರ ನಗರದಲ್ಲಿ ಸೋಮವಾರ ಮಧ್ಯಾಹ್ನ ಗುಂಪೊಂದು ಚರ್ಚ್ ಧ್ವಂಸಗೊಳಿಸಿದ್ದು, ತಮ್ಮನ್ನು ಸಮಾಧಾನಿಸಲು ಪ್ರಯತ್ನಿಸಿದ್ದ ಪೊಲೀಸ್ ತಂಡದ ಮೇಲೆಯೇ ಗುಂಪು ದಾಳಿ ನಡೆಸಿದೆ. ನಾರಾಯಣಪುರ ಎಸ್‌ಪಿ ಸದಾನಂದ ಕುಮಾರ ಅವರ ತಲೆಗೆ ಗಂಭೀರ ಗಾಯವಾಗಿದ್ದರೆ ಇತರ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಧ್ಯಾಹ್ನ ಒಂದರಿಂದ ಎರಡು ಗಂಟೆಯ ನಡುವೆ ವಿಶ್ವದೀಪ್ತಿ ಶಾಲೆಯ ಬಳಿ ಜಮಾಯಿಸಿದ್ದ ಗುಂಪು ಅದರ ಆವರಣದಲ್ಲಿಯ ಚರ್ಚ್‌ನ್ನು ಧ್ವಂಸಗೊಳಿಸಲು ಆರಂಭಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಸ್‌ಪಿ ಹಿಂಸಾಚಾರವನ್ನು ತಡೆಯಲು ತನ್ನ ತಂಡದೊಂದಿಗೆ ಅಲ್ಲಿಗೆ ಧಾವಿಸಿದ್ದರು ಮತ್ತು ಗುಂಪಿನಿಂದ ದಾಳಿಗೊಳಗಾಗಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸುಮಾರು ಒಂದು ಗಂಟೆ ಬೇಕಾಗಿತ್ತು. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಗುಂಪೊಂದು ಚರ್ಚ್ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಅಕ್ರಮ ಮತಾಂತರ ಮತ್ತು ಚರ್ಚ್ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆದಿತ್ತು ಎನ್ನಲಾಗಿದೆ.

‘ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕರೆಸಲಾಗಿತ್ತು. ನಾನು ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ನಾವು ಅವರನ್ನು ಕೋರಿಕೊಂಡಿದ್ದೆವು. ಆದರೆ ಅವರಲ್ಲಿ ಕೆಲವರು ಹಿಂಸಾಚಾರಕ್ಕಿಳಿದಿದ್ದರು ಮತ್ತು ಚರ್ಚ್ ಮೇಲೆ ದಾಳಿ ನಡೆಸಿದ್ದರು’ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸದಾನಂದ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಮಂಗಳವಾರ ಕರ್ನಾಟಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿಯ ಸೈಂಟ್ ಮೇರಿಸ್ ಚರ್ಚ್ ಮೇಲೆ ದಾಳಿ ನಡೆಸಿದ್ದ ಅಪರಿಚಿತ ದುಷ್ಕರ್ಮಿಗಳು ಬಾಲಯೇಸುವಿನ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ್ದರು ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಕಳವು ಮಾಡಿದ್ದರು. ಇದೊಂದು ಕಳ್ಳತನ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

Similar News