ಬಿಹಾರದ ಬೇಗುಸರೈನಲ್ಲಿ ಬೀದಿ ನಾಯಿ ಹಾವಳಿ: ಎರಡು ದಿನಗಳಲ್ಲಿ 24 ಶ್ವಾನಗಳ ಗುಂಡಿಕ್ಕಿ ಹತ್ಯೆ
ಪಾಟ್ನಾ: ಬಿಹಾರದ (bihar) ಬೇಗುಸರೈ ಜಿಲ್ಲೆಯಲ್ಲಿ ರಾಜ್ಯದ ಪರಿಸರ ಮತ್ತು ಅರಣ್ಯ ಇಲಾಖೆ ಗೊತ್ತುಪಡಿಸಿದ ಶೂಟರ್‌ಗಳು 24 ಬೀದಿ ನಾಯಿಗಳನ್ನು (stray dogs) ಗುಂಡಿಟ್ಟು ಸಾಯಿಸಿದ್ದಾರೆ. ಒಟ್ಟು 15 ನಾಯಿಗಳನ್ನು ಮಂಗಳವಾರ ಗುಂಡು ಹಾರಿಸಿ ಕೊಲ್ಲಲಾಗಿದ್ದರೆ ಬುಧವಾರ ಒಂಬತ್ತು ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ. ಕಳೆದ ವಾರ 12 ಬೀದಿ ನಾಯಿಗಳನ್ನು ಗುಂಡಿಕ್ಕಿ ಸಾಯಿಸಲಾಗಿತ್ತು.
ಬೇಗುಸರೈ ಜಿಲ್ಲೆಯ ಬಚ್ಚ್ವಾರ ಬ್ಲಾಕ್‌ನಲ್ಲಿ ಬೀದಿ ನಾಯಿಗಳು ಕೆಲವು ಜನರ ಮೇಲೆ ದಾಳಿಗೈದು ಹತ್ಯೆಗೈದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ನಾಯಿ ದಾಳಿಗೊಳಗಾದ ಮಹಿಳೆಯೊಬ್ಬಳು ರವಿವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರೆ, ಸೋಮವಾರ ನಾಯಿಗಳು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಹಿಳೆಯರ ಮೇಲೆ ದಾಳಿ ನಡೆಸಿವೆ.
ಒಂದು ವರ್ಷ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಒಂಬತ್ತು ಮಹಿಳೆಯರು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದು ಅಲ್ಲಿನ ಜನರು ಭಯದಿಂದಲೇ ಬದುಕುವಂತಾಗಿದೆ. ಕಳೆದ ತಿಂಗಳೊಂದರಲ್ಲಿಯೇ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕೆಲ ನಾಯಿಗಳು ನರಭಕ್ಷಕವಾಗಿ ಬಿಟ್ಟಿವೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ನಿರುದ್ಯೋಗ ಹೆಚ್ಚಿರುವುದನ್ನು CMIE ತೋರಿಸಿದ ಬಳಿಕ ಖಾಸಗಿ ಸಂಸ್ಥೆಗಳ ಸಮೀಕ್ಷೆ ವಿರುದ್ಧ ಕೇಂದ್ರದ ಎಚ್ಚರಿಕೆ