ಮಾಂಟ್ರಿಯಲ್ ಒಪ್ಪಂದ: ಒಂದು ಹೆಜ್ಜೆ ಮುಂದೆ

ಬಹುವಚನ

Update: 2023-01-06 05:39 GMT

ಮಾಂಟ್ರಿಯಲ್ ಒಪ್ಪಂದ ಕಗ್ಗತ್ತಲಿನಲ್ಲಿ ಕಂಡುಬಂದ ಒಂದು ಬೆಳ್ಳಿ ಗೆರೆ ಎನ್ನಬಹುದು. ಆದರೆ, 30x30 ಗುರಿ ಮುಟ್ಟಲು ಸಾಧ್ಯವೇ? ಜಪಾನಿನಲ್ಲಿ ನಡೆದ ಐಚಿ-11ರ ಗುರಿಯಾದ 2020ರೊಳಗೆ ಭೂಮಿ-ಒಳನಾಡು ಜಲಪ್ರದೇಶಗಳ ಶೇ.17 ಹಾಗೂ ಕರಾವಳಿ/ಸಮುದ್ರ ಜೀವಿಗಳಲ್ಲಿ ಶೇ.10ರಷ್ಟರ ಸಂರಕ್ಷಣೆ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‌ಇಪಿ) ಮತ್ತು ಅಂತರ್‌ರಾಷ್ಟ್ರೀಯ ನಿಸರ್ಗ ಸಂರಕ್ಷಣೆ ಕೇಂದ್ರದ ‘ಪ್ರೊಟೆಕ್ಟೆಡ್ ಪ್ಲಾಂಟ್ ರಿಪೋರ್ಟ್, 2020’ರ ಅನ್ವಯ ಶೇ.17ರಷ್ಟು ಭೂಮಿ ಹಾಗೂ ಶೇ.8ರಷ್ಟು ಸಮುದ್ರದ ರಕ್ಷಣೆ ಮಾತ್ರವಷ್ಟೇ ಸಾಧ್ಯವಾಗಿದೆ.

ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಜೈವಿಕ ವೈವಿಧ್ಯ ಸಮಾವೇಶ(ಸಿಬಿಡಿ)ದಲ್ಲಿ ಮಾಂಟ್ರಿಯಲ್-ಕುನ್ಮಿಂಗ್ ಒಪ್ಪಂದಕ್ಕೆ ಭಾರತ ಸೇರಿದಂತೆ 196 ದೇಶಗಳು ಡಿಸೆಂಬರ್ 19ರಂದು ಸಹಿ ಹಾಕಿವೆ. ಪ್ಯಾರಿಸ್ ಒಪ್ಪಂದದಷ್ಟೇ ಚರಿತ್ರಾರ್ಹ ಎನ್ನಿಸಿಕೊಂಡಿರುವ ಈ ಒಪ್ಪಂದದ ಗುರಿ-ಭೂಮಿ, ಸಾಗರ ಮತ್ತು ಕರಾವಳಿಗಳ ರಕ್ಷಣೆ.

ಮಾಂಟ್ರಿಯಲ್ ಸಮಾವೇಶಕ್ಕೆ ಸ್ವಲ್ಪಮೊದಲು ಈಜಿಪ್ಟ್‌ನಲ್ಲಿ ಸಿಒಪಿ(ಹವಾಮಾನ ಬದಲಾವಣೆ ಸಮಾವೇಶ-27)ನಡೆದಿತ್ತು. ಸಿಬಿಡಿ ಹಾಗೂ ಸಿಒಪಿಗಳ ಮೂಲ 1992ರ ರಿಯೋ ಶೃಂಗ. ಹೀಗಿದ್ದರೂ, ಸಿಬಿಡಿಯು ಸಿಒಪಿಯಷ್ಟು ಮಾಧ್ಯಮ ಹಾಗೂ ಜಗತ್ತಿನ ಗಮನ ಸೆಳೆಯುವುದಿಲ್ಲ. ಏಕೆಂದರೆ, ಸಿಒಪಿಯಲ್ಲಿ ದೇಶಗಳ ಮುಖ್ಯಸ್ಥರು, ವಿಜ್ಞಾನಿಗಳು, ರಾಜತಾಂತ್ರಿಕರು ನೆರೆಯುತ್ತಾರೆ. ಭೂಮಿಯನ್ನು ಉಳಿಸುವ ದೊಡ್ಡ ದೊಡ್ಡ ಘೋಷಣೆ ಮಾಡುತ್ತಾರೆ. ಭೂಮಿಯು ಹಸಿರುಮನೆ ಅನಿಲಗಳಿಂದ ಕಾಯಿಸಿದ ಕಡಾಯಿಯಂತೆ ಬಿಸಿಯಾಗಿದೆ. ಚಂಡಮಾರುತಗಳು, ಧ್ರುವ ಪ್ರದೇಶದಲ್ಲಿ ವೇಗವಾಗಿ ಕರಗುತ್ತಿರುವ ಹಿಮರಾಶಿ, ಓತಪ್ರೋತವಾಗಿ, ಅಕಾಲಿಕ ಹಾಗೂ ಕಡಿಮೆ ಅವಧಿಯಲ್ಲಿ ಅಧಿಕ ಮಳೆ, ಚಳಿ ಹಾಗೂ ಬೇಸಿಗೆಕಾಲದ ವ್ಯತ್ಯಯಗಳು ವಾತಾವರಣದ ಬದಲಾವಣೆಯನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿದೆ. ಆದರೆ, ಜೈವಿಕ ವೈವಿಧ್ಯದ ಕಣ್ಮರೆ ಇಷ್ಟು ದೃಗ್ಗೋಚರವಲ್ಲ.

ಜೈವಿಕ ವೈವಿಧ್ಯ ಜಗತ್ತಿನ ಆಧಾರ. ವಿಜ್ಞಾನಿಗಳು ಗುರುತಿಸಿರುವ 1.6 ದಶಲಕ್ಷ ಪ್ರಭೇದಗಳಲ್ಲಿ ಒಂದು ಭಾಗವಷ್ಟೇ ಉಳಿದುಕೊಂಡಿದೆ. ಈ ಜೀವವೈವಿಧ್ಯ ಒಂದು ದಿನದಲ್ಲಿ ಸೃಷ್ಟಿಯಾದುದಲ್ಲ. ಅದಕ್ಕೆ 4 ಶತ ಕೋಟಿ ವರ್ಷ ತೆಗೆದುಕೊಂಡಿದೆ. ವಿಜ್ಞಾನಿಗಳ ಪ್ರಕಾರ, ಈಗಾಗಲೇ ಐದು ಬಾರಿ ಜೀವಿಗಳ ಸಾಮೂಹಿಕ ನಿರ್ವಂಶ ಪ್ರಕ್ರಿಯೆ ಸಂಭವಿಸಿದೆ ಮತ್ತು ಭೂಮಿ ಆರನೇ ನಿರ್ವಂಶದತ್ತ ಮುನ್ನಡೆಯುತ್ತಿದೆ. ಭೂಮಿ ಹಾಗೂ ಸಾಗರದ 10 ಲಕ್ಷ ಜೀವಪ್ರಭೇದಗಳು ಸಂಪೂರ್ಣ ನಿರ್ವಂಶದ ಮಾರ್ಗದಲ್ಲಿವೆ. ವಿಶ್ವ ಸಂಸ್ಥೆ ಪ್ರಕಾರ, 34,000 ಸಸ್ಯ ಹಾಗೂ 5,200 ಪ್ರಾಣಿ ಹಾಗೂ 8ರಲ್ಲಿ 1 ಪಕ್ಷಿ ಪ್ರಬೇಧಗಳು ನಿರ್ವಂಶದ ಭೀತಿ ಎದುರಿಸುತ್ತಿವೆ. ಜೊತೆಗೆ, ಶೇ. 30ರಷ್ಟು ಸಾಕುಪ್ರಾಣಿಗಳ ತಳಿಗಳು ಕೂಡ ಅಪಾಯದಲ್ಲಿವೆ. ಕಳೆದ 50 ವರ್ಷದಲ್ಲಿ ಪ್ರಬೇಧಗಳ ಕಣ್ಮರೆಯಾಗುವಿಕೆ ತೀವ್ರ ವೇಗ ಪಡೆದುಕೊಂಡಿದೆ. ಜೈವಿಕ ವೈವಿಧ್ಯದ ತೊಟ್ಟಿಲಾದ ಕಾಡುಗಳು ಕಳೆದ ಶತಮಾನದಲ್ಲಿ ಶೇ.45ರಷ್ಟು ಕಣ್ಮರೆಯಾಗಿವೆ. ಪಶ್ಚಿಮ ಘಟ್ಟಗಳು, ಅಮೆಝಾನ್/ಸಾರವಾಕ್‌ನ ಅರಣ್ಯಗಳು ಗಣಿಗಾರಿಕೆ, ಬೆಂಕಿ, ರಬ್ಬರ್-ಕೋಕೊ ಕೃಷಿ, ಮರಮಟ್ಟು ಕಟಾವು, ಉದ್ಯಮ-ಕೃಷಿಗಾಗಿ ನಾಶವಾಗುತ್ತಿವೆ. ಹೀಗಿದ್ದರೂ, ವಾತಾವರಣದಲ್ಲಿ ಇಂಗಾಲದ ಹೆಚ್ಚಳಕ್ಕೆ ಸಿಗುವ ಪ್ರಾಮುಖ್ಯತೆ ಜೈವಿಕ ವೈವಿಧ್ಯ ನಾಶಕ್ಕೆ ಸಿಗುತ್ತಿಲ್ಲ.

ಜೈವಿಕ ವೈವಿಧ್ಯ ಕಣ್ಮರೆಗೆ ಇರುವ ಮೂರು ಪ್ರಮುಖ ಕಾರಣಗಳೆಂದರೆ, ಭೂಮಿಯ ಬಳಕೆಯಲ್ಲಿ ಬದಲಾವಣೆ(ಶೇ.30), ಜೈವಿಕ ಸಂಪನ್ಮೂಲಗಳ ಅತಿ ಬಳಕೆ(ಶೇ.20) ಮತ್ತು ಹವಾಮಾನ ಬದಲಾವಣೆ ಹಾಗೂ ಮಾಲಿನ್ಯ(ಶೇ.14). ಔದ್ಯಮಿಕ ಕೃಷಿ/ಹವಾಮಾನ ಬದಲಾವಣೆ ಹಾಗೂ ಕೀಟನಾಶಕ-ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಶೇ.40ರಷ್ಟು ಭೂಮಿ ತನ್ನ ಫಲವತ್ತತೆ ಕಳೆದುಕೊಂಡಿದೆ ಮತ್ತು ಅತಿ ನೀರಾವರಿಯಿಂದಾಗಿ ಕೃಷಿ ಭೂಮಿ ಜವಳುಗಟ್ಟುತ್ತಿದೆ.

ಒಪ್ಪಂದವೇನು?:

ಮಾಂಟ್ರಿಯಲ್ ಒಪ್ಪಂದದಲ್ಲಿರುವ 30x30 ಗುರಿ ಎಂದರೇನು? 2030ರೊಳಗೆ ಶೇ.30ರಷ್ಟು ಭೂಮಿ-ಸಮುದ್ರವನ್ನು ರಕ್ಷಿಸುವುದು. ಜೊತೆಗೆ, ಆದಿವಾಸಿಗಳ ಆವಾಸಸ್ಥಾನವನ್ನು ಸಂರಕ್ಷಿಸುವುದು ಮತ್ತು ಅವರನ್ನು ಒಕ್ಕಲೆಬ್ಬಿಸದಂತೆ ಖಾತ್ರಿಗೊಳಿಸುವುದು; ಕೀಟನಾಶಕಗಳು ಹಾಗೂ ಅಪಾಯಕಾರಿ ರಾಸಾಯನಿಕಗಳಿಂದಾಗುವ ಒಟ್ಟಾರೆ ಪರಿಣಾಮವನ್ನು ಅರ್ಧಕ್ಕೆ ಕಡಿಮೆಗೊಳಿಸುವುದು.

ಮಾಂಟ್ರಿಯಲ್ ಒಪ್ಪಂದ ಕಗ್ಗತ್ತಲಿನಲ್ಲಿ ಕಂಡುಬಂದ ಒಂದು ಬೆಳ್ಳಿ ಗೆರೆ ಎನ್ನಬಹುದು. ಆದರೆ, 30x30 ಗುರಿ ಮುಟ್ಟಲು ಸಾಧ್ಯವೇ? ಜಪಾನಿನಲ್ಲಿ ನಡೆದ ಐಚಿ-11ರ ಗುರಿಯಾದ 2020ರೊಳಗೆ ಭೂಮಿ-ಒಳನಾಡು ಜಲಪ್ರದೇಶಗಳ ಶೇ.17 ಹಾಗೂ ಕರಾವಳಿ/ಸಮುದ್ರ ಜೀವಿಗಳಲ್ಲಿ ಶೇ.10ರಷ್ಟರ ಸಂರಕ್ಷಣೆ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‌ಇಪಿ) ಮತ್ತು ಅಂತರ್‌ರಾಷ್ಟ್ರೀಯ ನಿಸರ್ಗ ಸಂರಕ್ಷಣೆ ಕೇಂದ್ರದ ‘ಪ್ರೊಟೆಕ್ಟೆಡ್ ಪ್ಲಾಂಟ್ ರಿಪೋರ್ಟ್, 2020’ರ ಅನ್ವಯ ಶೇ.17ರಷ್ಟು ಭೂಮಿ ಹಾಗೂ ಶೇ.8ರಷ್ಟು ಸಮುದ್ರದ ರಕ್ಷಣೆ ಮಾತ್ರವಷ್ಟೇ ಸಾಧ್ಯವಾಗಿದೆ.

ಜಾಗತಿಕ ಜೈವಿಕವೈವಿಧ್ಯ ಚೌಕಟ್ಟು(ಜಿಬಿಎಫ್) 2030ರೊಳಗೆ 4 ಧ್ಯೇಯ ಹಾಗೂ 23 ಗುರಿಗಳನ್ನು ಸಾಧಿಸುವ ಉದ್ದೇಶ ಹೊಂದಿದೆ. ಬಡ ದೇಶಗಳಿಗೆ ಪರಿಸರಸ್ನೇಹಿ ತಂತ್ರಜ್ಞಾನದ ವರ್ಗಾವಣೆ ಮತ್ತು ಅದನ್ನು ಅಳವಡಿಸಿಕೊಳ್ಳಲು ಶ್ರೀಮಂತ ದೇಶಗಳು 2025ರೊಳಗೆ 20 ಶತಕೋಟಿ ಡಾಲರ್ ಹಾಗೂ 2030ರೊಳಗೆ 30 ಶತಕೋಟಿ ಡಾಲರ್ ಸಂಗ್ರಹಿಸಿ ವಿತರಿಸಬೇಕಿದೆ. ಆದರೆ, ಹಿಂದಿನ ಸಮಾವೇಶಗಳಲ್ಲಿ ನೀಡಿದ ಇಂಥ ವಾಗ್ದಾನಗಳು ಒಮ್ಮೆಯೂ ಈಡೇರಿಲ್ಲ. ಜೊತೆಗೆ, ನಿಸರ್ಗದ ಮೇಲೆ ದುಷ್ಪರಿಣಾಮ ಬೀರುವ ಸಬ್ಸಿಡಿ(ವಾರ್ಷಿಕ 500 ದಶಲಕ್ಷ ಡಾಲರ್) ಕಡಿತಗೊಳಿಸುವುದು ಹಾಗೂ ಹಾಳಾಗಿರುವ ಪರಿಸರ ವ್ಯವಸ್ಥೆಯ ಶೇ.30ರಷ್ಟನ್ನು ಸರಿಪಡಿಸುವುದು ಒಪ್ಪಂದದಲ್ಲಿದೆ.

ಅನುಷ್ಠಾನಕ್ಕೆ ಅಡೆತಡೆಗಳೇನು?:

30x30ರ ಕೂಗು ಎದ್ದಿದ್ದು 2019ರಲ್ಲಿ ಸೈನ್ಸ್ ಅಡ್ವಾನ್ಸ್ಡ್ ಜರ್ನಲ್‌ನಲ್ಲಿ ಪ್ರಕಟಗೊಂಡ ವರದಿಯಿಂದ. ಅಮೆರಿಕದ ಎನ್‌ಜಿಒ ರಿಸಾಲ್ವ್, 30x30ರ ಗುರಿಯನ್ನು ಮುಟ್ಟಲು ನೆರವಾಗುವ ಪ್ರಾಂತ/ಪ್ರದೇಶಗಳನ್ನು ಗುರುತಿಸಿತು. ಆದರೆ, ಇವು ಜೈವಿಕ ಸಂರಕ್ಷಣೆಗೆ ರಚನೆಯಾದ ಅಂತರ್ ಸರಕಾರಗಳ ಗುಂಪು- ಕೊಯಲಿಷನ್ ಫಾರ್ ನೇಚರ್ ಆಂಡ್ ಪೀಪಲ್‌ನ ಸದಸ್ಯರಲ್ಲ. 100ಕ್ಕೂ ಅಧಿಕ ದೇಶಗಳು ಈ ಒಕ್ಕೂಟದ ಸದಸ್ಯರಾಗಿದ್ದರೂ, ಅಪಾರ ಜೈವಿಕ ವೈವಿಧ್ಯವಿರುವ ಲ್ಯಾಟಿನ್ ಅಮೆರಿಕದ ಬ್ರೆಝಿಲ್, ಬೊಲಿವಿಯ ಮತ್ತು ಅರ್ಜೆಂಟೀನಾ, ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಕಾಂಬೋಡಿಯ ಮತ್ತು ಏಶ್ಯದ ಚೀನಾ, ರಶ್ಯ ಹಾಗೂ ವಿಯಟ್ನಾಂ ಈ ಗುಂಪಿನ ಸದಸ್ಯರಲ್ಲ.

ಮೊದಲನೆಯದಾಗಿ, 30x30 ಜೈವಿಕ ಸಮೃದ್ಧ ಪ್ರದೇಶಗಳನ್ನು ಬಲಾಢ್ಯರು ಕೈವಶ ಮಾಡಿಕೊಳ್ಳಲು ನೆರವಾಗುತ್ತದೆ ಎನ್ನುವ ದೂರು ಇದೆ. 30x30ರ ವಿರುದ್ಧ ಆಂದೋಲನ ನಡೆಸಿದ ಲಂಡನ್ ಮೂಲದ ಎನ್‌ಜಿಒ ಸರ್ವೈವಲ್ ಇಂಟರ್‌ನ್ಯಾಷನಲ್, ಅದರಿಂದ 300 ದಶಲಕ್ಷ ಜನ ಭೂಮಿ-ಜೀವನಾಧಾರವನ್ನು ಕಳೆದುಕೊಳ್ಳುತ್ತಾರೆ ಎಂದು ಆರೋಪಿಸಿತ್ತು. ಇವರಲ್ಲಿ ಹೆಚ್ಚಿನವರು ಬುಡಕಟ್ಟು ಜನರು ಹಾಗೂ ಆದಿವಾಸಿಗಳು. ಸಂರಕ್ಷಿತ ಅರಣ್ಯ, ಅಭಯಾರಣ್ಯದಂಥ ಕಾಯ್ದಿಟ್ಟ ಪ್ರದೇಶಗಳು ಜನರಿಗೆ ಪ್ರವೇಶಾವಕಾಶವನ್ನು ನಿರ್ಬಂಧಿಸುತ್ತವೆ. 1990ರಲ್ಲಿ ಶಕ್ತಿ ಮರುದುಂಬುವ ಗುಣಗಳನ್ನು ಹೊಂದಿದೆ ಎನ್ನಲಾದ ಆರೋಗ್ಯಪಾಚ ಸಸ್ಯದ ಮಾರಾಟಕ್ಕೆ ಕೇರಳದ ಕಣಿಯರು ತಮಿಳುನಾಡಿನ ಆಯುರ್ವೇದ ಔಷಧ ಉದ್ಯಮದೊಡನೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಗಿಡಗಳು ಸಂರಕ್ಷಿತ ಪ್ರದೇಶದಲ್ಲಿ ಇದ್ದುದರಿಂದ, ಅದನ್ನು ಸಾಗಿಸಲು ಅನುಮತಿ ನಿರಾಕರಿಸಲಾಯಿತು. ಸಂರಕ್ಷಣೆ ಪ್ರಯತ್ನಗಳಿಗೆ ಜನರ ಬೆಂಬಲ ಸಿಗದೆ ಇರುವುದಕ್ಕೆ ಇದೇ ಕಾರಣ.

ಎರಡನೇ ಆತಂಕ- ಹಣಕಾಸು ಕ್ರೋಡೀಕರಣ ಮತ್ತು ಹಂಚಿಕೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜೈವಿಕ ಸಂರಕ್ಷಣೆ, ಪ್ರಕೃತಿಯ ಮರುಸ್ಥಾಪನೆ, ಮಾಲಿನ್ಯ ನಿಯಂತ್ರಣ ಮತ್ತು ಹವಾಮಾನ ಬದಲಾವಣೆ ತಡೆ ಪ್ರಯತ್ನ ಗಳಿಗೆ ನೆರವಾಗಲು 1991ರಲ್ಲಿ ಜಾಗತಿಕ ಪರಿಸರ ಸೌಲಭ್ಯ(ಜಿಇಎಫ್) ಆರಂಭವಾಯಿತು. ಬಡ ದೇಶಗಳಿಗೆ ಪರಿಸರಸ್ನೇಹಿ ತಂತ್ರಜ್ಞಾನದ ವರ್ಗಾವಣೆ ಮತ್ತು ಅಳವಡಿಕೆಗೆ ಶ್ರೀಮಂತ ದೇಶಗಳು 2025 ರೊಳಗೆ 20 ಶತಕೋಟಿ ಡಾಲರ್ ಹಾಗೂ 2030ರೊಳಗೆ 30 ಶತಕೋಟಿ ಡಾಲರ್ ನೀಡಬೇಕಿದೆ. ಆದರೆ, ಭಾರತ ಸೇರಿದಂತೆ 22 ದೇಶಗಳ ಗುಂಪು ಪ್ರತಿವರ್ಷ 200 ಶತ ಕೋಟಿ ಡಾಲರ್ ನೀಡಬೇಕೆಂದು ಒತ್ತಾಯಿಸುತ್ತಿವೆ. ಈ ಅನುದಾನವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಕಾಂಗೋ ಆಕ್ಷೇಪ ವ್ಯಕ್ತಪಡಿಸಿತ್ತು. ಆಫ್ರಿಕಾದ ಕೆಲವು ದೇಶಗಳು ಒಪ್ಪಂದವನ್ನು ತಮ್ಮ ಮೇಲೆ ಹೇರಲಾಗಿದೆ ಎಂದು ದೂರಿದವು. ಒಪ್ಪಂದವು ಜೈವಿಕ ವೈವಿಧ್ಯದ ಮೇಲೆ ಉದ್ಯಮಗಳಿಂದ ಆಗುವ ಪರಿಣಾಮಗಳನ್ನು ವರದಿ ಮಾಡಬೇಕೆಂದು ಒತ್ತಾಯಿಸುತ್ತದೆಯೇ ಹೊರತು ಅದನ್ನು ಕಡ್ಡಾಯಗೊಳಿಸಿಲ್ಲ. ಪ್ರಮುಖ ಅಂಶವೆಂದರೆ, ರಿಪಬ್ಲಿಕನ್ ಸದಸ್ಯರ ಪ್ರತಿರೋಧ ದಿಂದ ಅಮೆರಿಕ ಒಪ್ಪಂದದಲ್ಲಿ ಭಾಗಿಯಾಗಿಲ್ಲ. ಇದರಿಂದ ಒಪ್ಪಂದ ಸಡಿಲಗೊಳ್ಳುತ್ತದೆ. ಶ್ರೀಮಂತ ದೇಶಗಳು ಬಡ ದೇಶಗಳಿಗೆ ಸಂರಕ್ಷಣೆ ಪ್ರಯತ್ನಗಳಿಗೆ ಉದಾರವಾಗಿ ಹಣಕಾಸು ನೀಡಬೇಕು ಎನ್ನುವುದು ಭಾರತದ ನಿಲುವಾಗಿತ್ತು. ಆದರೆ, ಶ್ರೀಮಂತ ದೇಶಗಳು ಕಾಸು ಬಿಚ್ಚಲು ಸಿದ್ಧವಿಲ್ಲ.

ಮೂರನೇ ಅಂಶ- ಎಲ್ಲ ದೇಶಗಳಿಗೂ ತಮ್ಮ ಜೈವಿಕ ಸಂಪನ್ಮೂಲದ ಮೇಲೆ ಹಕ್ಕು ಇದೆ ಎಂದು ಸಿಬಿಡಿ ಹೇಳುತ್ತದೆ. ಆದರೆ, ವಂಶವಾಹಿ ಮಾಹಿತಿ ಡಿಜಿಟಲ್ ರೂಪದಲ್ಲಿ ಮುಕ್ತವಾಗಿ ಲಭ್ಯವಿರುವುದರಿಂದ, ಸಂಪನ್ಮೂಲಗಳು ಹಾಗೂ ಸಾಂಪ್ರದಾಯಿಕ ಜ್ಞಾನ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಸ್ಥಳೀಯ ಜ್ಞಾನದ ಮಾರಾಟದಿಂದ ಬಂದ ಆದಾಯವನ್ನು ಸಮುದಾಯದೊಂದಿಗೆ ನ್ಯಾಯಬದ್ಧ ಹಾಗೂ ಸಮವಾಗಿ ಹಂಚಿ ಕೊಳ್ಳಬೇಕೆಂದು ನಗೋಯಾ ಸಂಹಿತೆ ಹೇಳುತ್ತದೆ. ಭಾರತದ ಸಮುದಾಯಗಳು ಅತಿ ಹೆಚ್ಚು ಐಆರ್‌ಸಿಸಿ(ಅಂತರ್‌ರಾಷ್ಟ್ರೀಯವಾಗಿ ಗುರುತಿಸಲ್ಪಡುವ ಅನುಸರಣೆ ಪ್ರಮಾಣಪತ್ರ)ಗಳನ್ನು ನೀಡಿ, ಲಾಭ ಹಂಚಿಕೆ ಕಾನೂನು ಹಾಗೂ ವ್ಯವಸ್ಥೆಯನ್ನು ರೂಪಿಸಿದ್ದರೂ, ಸ್ಥಳೀಯ ಸಮುದಾಯಗಳಿಗೆ ಜೈವಿಕ ಸಂಪನ್ಮೂಲಗಳ ವಾಣಿಜ್ಯೀಕರಣದ ಲಾಭ ದಕ್ಕುತ್ತಿಲ್ಲ. ತಮಿಳುನಾಡಿನ ಶೋಲಾ ಅರಣ್ಯಗಳ ಕುರಿಂಜಿ ಜೇನು ಸಂಗ್ರಹಕಾರರ ಉದಾಹರಣೆಯನ್ನು ನೋಡೋಣ. 12 ವರ್ಷಕ್ಕೊಮ್ಮೆ ಅರಳುವ ಕುರಿಂಜಿ(ಸ್ಟ್ರೋಬಿಲಾಂಥಸ್ ಕುಂತಿಯಾನಾ)ಯ ಜೇನುತುಪ್ಪ ವಿಶಿಷ್ಟ ರುಚಿಯುಳ್ಳದ್ದು. ಇದನ್ನು ಸಂಗ್ರಹಿಸುವ ಪೆರಿಯನ್ ಆದಿವಾಸಿ ಸಮುದಾಯ ಹಾಗೂ ಕೊಡೈಕೆನಾಲ್ ಮೂಲದ ಎನ್‌ಜಿ ಹೂಪೋ ಆನ್ ಎ ಹಿಲ್, 2019ರಲ್ಲಿ ಚೆನ್ನೈ ಮೂಲದ ರಫ್ತು ಸಂಸ್ಥೆ ಜಾಸ್ಮಿನ್ ಕಾಂಕ್ರಿಟ್ ಎಕ್ಸ್‌ಪೋರ್ಟ್ಸ್ ಮತ್ತು ಫ್ರಾನ್ಸ್‌ನ ಸುಗಂಧ ತಯಾರಿಕೆ ಸಂಸ್ಥೆ ಫರ್ಮೆನಿಸ್ ಗ್ರಾಸ್ ಜೊತೆಗೆ ಜೇನಿನ ವಿಶಿಷ್ಟತೆಗೆ ಕಾರಣವಾಗುವ ಕಣವನ್ನು ಕಂಡುಹಿಡಿಯಲು ಒಪ್ಪಂದ ಮಾಡಿಕೊಂಡವು. ಆನಂತರ ಏನೇನೂ ಆಗಲಿಲ್ಲ. ಇದಲ್ಲದೆ, ಕೀಟನಾಶಕಗಳ ಬಳಕೆಯನ್ನು ಮತ್ತು ಕೃಷಿ ಸಬ್ಸಿಡಿಯನ್ನು ಕಡಿಮೆ ಮಾಡಬೇಕು ಎಂಬ ಅಂಶ ಕೂಡ ವಿವಾದ ಸೃಷ್ಟಿಸಬಹುದು.

1992ರ ರಿಯೋ ಶೃಂಗದ ಬಳಿಕ 30 ವರ್ಷಗಳಲ್ಲಿ ಸಿಬಿಡಿಯ 15 ಶೃಂಗಗಳು ನಡೆದಿವೆ. ಆದರೆ, ಆಶಯಗಳು ಈಡೇರಿಲ್ಲ. ಉಷ್ಣಾಂಶ ಹೆಚ್ಚಳವನ್ನು 1.5 ಡಿಸೆ ಮಿತಿಗೊಳಿಸುವ ಮೂಲಕ ಹವಾಮಾನ ಬದಲಾವಣೆಗೆ ತಡೆಯೊಡ್ಡುವುದು ಹಾಗೂ ಜೀವಪ್ರಭೇದಗಳ ನಿರ್ವಂಶ ನಿಲ್ಲಿಸಲುಬೇಕಾದ್ದು ಕಾಂಗರೂ ಜಿಗಿತವೇ ಹೊರತು ಆಮೆಯ ನಡೆಯಲ್ಲ.

Similar News