ಅವರಿಗೆ ಮೊದಲೇ ಗೊತ್ತಿರಲಿಲ್ಲವೇ ?

Update: 2023-01-09 07:09 GMT

ಸದ್ಯ ರಾಜ್ಯ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿರುವ ಮೂಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಈಗ ಹಣೆ ಹಣೆ ಚಚ್ಚಿಕೊಂಡು ಪರಿತಪಿಸುತ್ತಿದ್ದಾರೆ. ಈ ಬಿಜೆಪಿ ಸಿ.ಟಿ.ರವಿ ರೀತಿಯ ಈಝಿ ಚೇರ್ ರಾಜಕಾರಣಿಗಳಿಗೆ ಸರಿಯಾಗತ್ತೆ. ನಮಗೆ ಹೊಂದಾಣಿಕೆ ಆಗಲ್ಲ. ಬಿಜೆಪಿ ಸೇರಿ ತಪ್ಪು ಮಾಡಿಬಿಟ್ಟೆವು ಎಂದು ಖಾಸಗಿಯಾಗಿ ಹೇಳಿಕೊಂಡು ಕೊರಗುತ್ತಿದ್ದಾರೆ. ಆದರೆ, ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಕಾಲದಿಂದ ಈಗ ಬಿ.ಎಲ್.ಸಂತೋಷ್ ಅವಧಿಯವರೆಗೂ ಅನುಭವಿಸಿದ್ದು- ಅನುಭವಿಸುತ್ತಿರುವುದು ಇವರಿಗೆ ಮೊದಲೇ ಗೊತ್ತಿರಲಿಲ್ಲವೇ? 

ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಉಸಿರಾಟದಷ್ಟೆ ಸಹಜವಾಗಿ ಸುಳ್ಳುಗಳನ್ನು ಪೋಣಿಸುತ್ತಾರೆ, ಸಾಹಿತ್ಯ ಪರಿಷತ್ತಿನ ಘನತೆಗೆ ಅವಮಾನ ಎಸಗಿದ್ದಾರೆ, ಸಾಹಿತ್ಯ ಸಮ್ಮೇಳನ ದಲ್ಲಿ ಮಹಿಳೆಯರನ್ನು ಅವಮಾನಿಸಿದ್ದಾರೆ, ಶೂದ್ರ, ದ್ರಾವಿಡ ಮತ್ತು ಮುಸ್ಲಿಮ್ ಲೇಖಕರು ಹಾಗೂ ಕವಿಗಳ ವಿಚಾರದಲ್ಲಿ ಸನಾತನ ವಿಕೃತಿ ಪ್ರದರ್ಶಿಸಿದರು ಎನ್ನುವ ಆರೋಪಗಳನ್ನೆಲ್ಲಾ ಹಲವರು ಮಾಡುತ್ತಿದ್ದಾರೆ. ಈ ಆರೋಪ ಮತ್ತು ಅಸಮಾಧಾನಗಳ ಸಂಘಟಿತ ರೂಪವಾಗಿ ಸಾಂಪ್ರದಾಯಿಕ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ.

ಆದರೆ ಮಹೇಶ್ ಜೋಶಿಯವರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತು ಮುಖ್ಯವಾಹಿನಿಗಳಲ್ಲಿ ಆರೋಪ ಮಾಡುತ್ತಿರುವವರಿಗೆ ಒಂದು ನೇರ ಪ್ರಶ್ನೆ ಕೇಳಬೇಕಿದೆ. ಜೋಶಿಯವರು ಏನು? ಅವರ ವ್ಯಕ್ತಿತ್ವ ಎಂಥಾದ್ದು? ಶೂದ್ರ-ದ್ರಾವಿಡ-ಮುಸ್ಲಿಮ್ ಮತ್ತು ಮಹಿಳೆಯರ ವಿಚಾರದಲ್ಲಿ ಅವರ ನಿಲುವು-ಒಲವು ಏನು ಎನ್ನುವುದು ಗೊತ್ತಾಗಲು ಸಾಹಿತ್ಯ ಸಮ್ಮೇಳನದವರೆಗೂ ಕಾಯಬೇಕಿತ್ತಾ? ಜೋಶಿಯವರು ಸಾಹಿತ್ಯ ಪರಿಷತ್ ಚುನಾವಣೆಗೆ ನಿಂತಾಗ, ಅವರು ಆರೆಸ್ಸೆಸ್ ಬೆಂಬಲದಲ್ಲಿ ಚುನಾವಣೆ ನಡೆಸಿ ಗೆದ್ದ ನಂತರದ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನ ಸ್ವರೂಪ ಎನಾಗುತ್ತದೆ? ಇದರ ಘನತೆಗೆ ಯಾವ ಗತಿ ಬರುತ್ತದೆ? ಸಾಹಿತ್ಯ ಸಮ್ಮೇಳನ ಎಷ್ಟು ಗೊಡ್ಡು (ಬರಡು) ಆಗಿರುತ್ತದೆ ಎನ್ನುವುದು ಕಾಮನ್ ಸೆನ್ಸ್ ಇದ್ದವರಿಗೆಲ್ಲಾ ಗೊತ್ತಾಗಿತ್ತು.

ಮಹೇಶ್ ಜೋಶಿ ಅವರನ್ನು ಪತ್ರಕರ್ತ ಎಂದುಕೊಂಡು ಅವರ ಸ್ನೇಹವೇ ಪರಮ ಪ್ರಸಾದ ಎಂದು ಕಣ್ಣಿಗೆ ಒತ್ತಿಕೊಂಡಿದ್ದ ಹಲವು ಪತ್ರಕರ್ತರು ಈಗಲೂ ಇದ್ದಾರೆ. ಹಾಗೆಯೇ ಜೋಶಿ ಅವರ ಸ್ನೇಹ ಮತ್ತು ಒಡನಾಟ ಕೂಡ ತಮ್ಮ ವ್ಯಕ್ತಿತ್ವಕ್ಕೆ ಮಾಡಿಕೊಳ್ಳುವ ಅವಮಾನ ಎಂದುಕೊಂಡು ಅವರನ್ನು ಸೋಕಿಸಿಕೊಳ್ಳದೆ ಅವರಿಂದ ಮಾನವೀಯ ಅಂತರ ಕಾಯ್ದುಕೊಂಡಿದ್ದ ನೂರಾರು ಮಂದಿ ಹಿರಿ-ಕಿರಿಯ ಪತ್ರಕರ್ತರು ಈಗಲೂ ಇದ್ದಾರೆ. ಇವರು ಯಾರಿಗೂ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ನಡೆಯುತ್ತಿರುವ ಅಸಹ್ಯಗಳ ಬಗ್ಗೆ ಆಶ್ಚರ್ಯವಾಗಿಲ್ಲ.

ಈಗ ಪರ್ಯಾಯ ಜನ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ, ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಂಡ ಸಾಹಿತ್ಯ ಪರಿಷತ್ ಚುನಾವಣೆ ಸಂದರ್ಭದಲ್ಲೇ ತಮ್ಮ ಸಾಮರ್ಥ್ಯವನ್ನು, ಕ್ರಿಯಾ ಶೀಲತೆಯನ್ನು ಪ್ರದರ್ಶಿಸಿ, ಮಹೇಶ್ ಜೋಶಿ ಅವರ ನಿಲುವು-ಒಲವು ಗಳನ್ನು ನಾಡಿಗೆ ತಿಳಿ ಹೇಳುವ ಕೆಲಸ ಮಾಡಬಹುದಿತ್ತು. ಕನ್ನಡ ಸಾಹಿತ್ಯ ಜಗತ್ತು ಜೋಶಿ ವಿರುದ್ಧದ ಮತಗಳು ವಿಭಜಿನೆ ಆಗದಂತೆ ಇತರ ಪ್ರತಿಸ್ಪರ್ಧಿಗಳನ್ನು ಒಟ್ಟಾಗಿಸಿ, ಕುಳಿತು ಮಾತನಾಡುವ ಪ್ರಯತ್ನ ಮಾಡುವ ಅವಕಾಶ ಇತ್ತು. ಆ ಅವಕಾಶವನ್ನು ಕೈಚೆಲ್ಲಿದ್ದರಿಂದ ಇಂದು ತಲೆ ಮೇಲೆ ಕೈ ಹೊತ್ತುಕೊಳ್ಳುವ ಸಂದರ್ಭ ಬಂದಿದೆ.

 ಇದು ಮಹೇಶ್ ಜೋಶಿಯವರ ವಿಚಾರದಲ್ಲಿ ಮಾತ್ರವಲ್ಲ. ಸಾವರ್ಕರ್, ಗೋಡ್ಸೆ ವಿಚಾರದಲ್ಲೂ ಆಗಿದೆ. ಇವರಿಬ್ಬರನ್ನೂ ತನ್ನ ಎರಡು ಕಣ್ಣುಗಳು ಎಂದು ಬಿಜೆಪಿ ಭಾವಿಸುತ್ತದೆ ಎಂದು ಕಾಂಗ್ರೆಸ್ ಮತ್ತು ನಾನಾ ಸಂಘಟನೆಗಳು ಈಗ ಆರೋಪ ಮಾಡುತ್ತಿವೆ. ಇದಕ್ಕೆ ಭಾರತದ ಸ್ವಾತಂತ್ರದ 75ನೇ ವರ್ಷದ ಅಮೃತ ಮಹೋತ್ಸವದ ಜಾಹಿರಾತಿನಲ್ಲಿ ನೆಹರೂ ಫೋಟೊ ತೆಗೆದು-ಸಾವರ್ಕರ್ ಫೋಟೊ ಹಾಕುವವರೆಗೂ ಕಾಯಬೇಕಿತ್ತಾ? ಇಲ್ಲಿ ಬಿಜೆಪಿ ತನ್ನ ಸಿದ್ಧಾಂತದಲ್ಲಿ ಬದ್ಧತೆ ಪ್ರದರ್ಶಿಸಿದೆ. ನಾವು ಸೈದ್ಧಾಂತಿಕವಾಗಿ ಸಾವರ್ಕರ್‌ವಾದಿಗಳು ಎಂದು ಬಿಜೆಪಿ ಪರಿವಾರದ ಮಂದಿ ಬಹಿರಂಗವಾಗಿ ಸಾರಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಸಾವರ್ಕರ್ ಅವರನ್ನೂ ಪಕ್ಕಕ್ಕೆ ಸರಿಸಿ ನಾವು ಗೋಡ್ಸೆವಾದಿಗಳು ಎಂದು ಬಿಜೆಪಿ ಹೇಳಿಕೊಂಡರೆ ಯಾರಿಗೆ ತಾನೇ ಆಶ್ಚರ್ಯವಾಗುತ್ತದೆ?

 ಹುಟ್ಟಿನಿಂದಲೇ ಸಾವರ್ಕರ್, ಗೋಡ್ಸೆ ಅವರನ್ನು ಭಜಿಸುತ್ತಿದ್ದ ವರು, ಸಂವಿಧಾನವನ್ನು ಬದಲಾಯಿಸಲಿಕ್ಕಾಗಿಯೇ ತಾವು ಅಧಿಕಾರಕ್ಕೆ ಬಂದಿರುವುದು ಎಂದು ಬಹಿರಂಗವಾಗಿ ಘೋಷಿಸಿದವರು, ಮೀಸಲಾತಿ ರದ್ದತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವರ ಕೈಗೆ ಅಧಿಕಾರ ಬಂದರೆ ಮಹಾತ್ಮಾ ಗಾಂಧಿ, ನೆಹರೂ ಸೇರಿ ಬ್ರಿಟಿಷರ ವಿರೋಧಿಗಳನ್ನೆಲ್ಲಾ ಕೆಟ್ಟದಾಗಿ ಚಿತ್ರಿಸುತ್ತಾರೆ ಎನ್ನುವುದಾಗಲಿ, ಸಂವಿಧಾನ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ, ಮೀಸಲಾತಿಯ ಮೂಲಭೂತ ಆಶಯವೇ ನೆಗೆದುಬೀಳುತ್ತದೆ ಎನ್ನುವುದು ಇವರು ಯಾರಿಗೂ ಮೊದಲು ಗೊತ್ತಿರಲಿಲ್ಲವೇ?

 ಈ ಸಂಗತಿಗಳೆಲ್ಲಾ ಬಿಎಸ್ಪಿಯ ಮಾಯಾವತಿಯವರಿಗೆ, ಜೆಡಿಯುನ ನಿತಿಶ್ ಕುಮಾರ್ ಅವರಿಗೆ, ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರಿಗೆ, ಜೆಡಿಎಸ್‌ನ ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಗೆ, ದಿವಂಗತ ಬಂಗಾರಪ್ಪರಂತಹ ಹಲವರಿಗೆ ಮೊದಲೇ ಗೊತ್ತಿರಲಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ಗೆ ಇದೆಲ್ಲಾ ಗೊತ್ತಿರಲಿಲ್ಲವೇ? ಅಂಬೇಡ್ಕರ್‌ವಾದಿಯಾಗಿದ್ದ ಕೊಳ್ಳೇಗಾಲದ ಎನ್.ಮಹೇಶ್ ಅವರು ಸಾವರ್ಕರ್‌ವಾದಿಯಾಗಿ ಬದಲಾದಷ್ಟೇ ಸಲೀಸಾಗಿ ಇವೆಲ್ಲಾ ನಡೆದುಹೋಯಿತಾ? ಈಗ ಮಹೇಶ್ ಜೋಶಿಯವರನ್ನು, ಬಿಜೆಪಿ ಪರಿವಾರದವರನ್ನು ಟೀಕಿಸುತ್ತಿರುವವರೆಲ್ಲರಿಗೂ ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು ತಾನೆ?

 ಮನಮೋಹನ್ ಸಿಂಗ್ ರಂತಹ ಅಪ್ಪಟ ಪ್ರಾಮಾಣಿಕ, ಸರಳ ಸಜ್ಜನ ವ್ಯಕ್ತಿಯನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದ ಕಾಂಗ್ರೆಸೇ ಬಳಿಕ ಹೋಗಿ ಹೋಗಿ ನರೇಂದ್ರ ಮೋದಿಯವರಿಗೆ ದೇಶ ಒಪ್ಪಿಸಿತು. ಈಗ ದೇಶದ ಅಮೂಲ್ಯ ಸಂಪತ್ತೆಲ್ಲಾ ಖಾಸಗಿ ಉದ್ಯಮಿಗಳ ಖಾಸಗಿ ಸಂಪತ್ತಾಗಿ ಖಾತೆ ಬದಲಾವಣೆ ಆಗುತ್ತಿರುವುದಕ್ಕೆ ಬಾಯಿ ಬಡಿದುಕೊಂಡರೆ ಹೇಗೆ? ಮೋದಿ ಅವರ ನೇತೃತ್ವದಲ್ಲಿ ದೇಶದ ಲಾಭದಾಯಕ ಸಂಸ್ಥೆಗಳು ಮತ್ತು ಉದ್ದಿಮೆಗಳಿಗೆ ಯಾವ ಗತಿ ಬರುತ್ತದೆ ಎನ್ನುವುದು ಕಾಂಗ್ರೆಸ್‌ಗೆ ಮೊದಲೇ ಅಂದಾಜಿರಲಿಲ್ಲವೇ? ಇವೆಲ್ಲಾ ಮೊದಲೇ ಗೊತ್ತಿದ್ದದ್ದು ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿ ಮತ್ತು ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಅವರಿಗೆ ಮಾತ್ರನಾ? ದೇಶ ಹೀಗೆ ಮಾರಾಟವಾಗುತ್ತದೆ ಎನ್ನುವುದು ಕಾಂಗ್ರೆಸ್‌ಗಾಗಲಿ, ಆರೆಸ್ಸೆಸ್‌ಗಾಗಲಿ ಗೊತ್ತಿರಲಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಲು ಸಾಧ್ಯವೇ? ಹೀಗಾಗಿ ಇದರಲ್ಲಿ ಬಿಜೆಪಿ ಪರಿವಾರದ ಶಕ್ತಿಗಿಂತ, ಕಾಂಗ್ರೆಸ್ ಮತ್ತು ಜನತಾಪರಿವಾರದ ಅಯೋಗ್ಯತನವನ್ನು, ವೈಫಲ್ಯವನ್ನು ಪ್ರಶ್ನಿಸಬೇಕಲ್ಲವೇ?

 ಅವತ್ತು ಮಂಡಲ್ ವರದಿ ವಿರುದ್ಧ ಎದೆ ಸೆಟೆದು ನಿಂತಿದ್ದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರೇ ಈಗ ಪರಿತಪಿಸುತ್ತಿದ್ದಾರೆ. ಮಂಡಲ್ ವರದಿ ವಿರೋಧಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ತಾವೇ ಮಣ್ಣಾಕಿಬಿಟ್ಟೆವು ಎನ್ನುವುದು ಈಗ ಒಕ್ಕಲಿಗ, ಲಿಂಗಾಯರ ನಾಯಕರಿಗೆ ಗೊತ್ತಾಗಿ ಕರಸೇವಕರು ಹಿಂದಿನಿಂದ ಬಂದು ನಮ್ಮ ತಲೆಗೆ ಹೊಡೆದುಬಿಟ್ಟರು ಎಂದು ಪರಿತಪಿಸುತ್ತಿದ್ದಾರೆ. ಈಗ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿ ಗಾಗಿ ಮೀಸಲಾತಿ ಹೋರಾಟಕ್ಕೆ ಇಳಿದಿದ್ದಾರೆ. ಮಂಡಲ್ ವರದಿ ವಿರೋಧಿಸಿದ ಇವರ ಮೂರ್ಖತನಕ್ಕೆ ಈಗ ಅಯೋಧ್ಯೆಯ ರಾಮ ಕೂಡ ತಥಾಸ್ತು ಎಂದಿದ್ದಾಗಿದೆ ಅಷ್ಟೆ.

ಈ 70 ವರ್ಷಗಳಲ್ಲಿ ದೇಶದಲ್ಲಿ ಏನೂ ಆಗಿಯೇ ಇಲ್ಲ ಎಂದು ಪೆದ್ದು ಪೆದ್ದಾಗಿ ಕಳೆದ 8-10 ವರ್ಷಗಳಿಂಧ ಪ್ರಶ್ನಿಸುತ್ತಿದ್ದ ಶೂದ್ರ-ದಲಿತ-ದ್ರಾವಿಡ ವಿದ್ಯಾರ್ಥಿಗಳೇ ಈಗ ತಮ್ಮ ಕಣ್ಣೆದುರೇ 70 ವರ್ಷಗಳ ಅವಧಿಯಲ್ಲಿ ಶುರುವಾಗಿದ್ದ ಸ್ಕಾಲರ್‌ಶಿಪ್‌ಗಳು, ಫೆಲೋಶಿಪ್‌ಗಳು ಸ್ಥಗಿತಗೊಳ್ಳುತ್ತಿರುವುದನ್ನು ಹಲ್ಲು ಕಚ್ಚಿ ಸಹಿಸಿ ಕೊಳ್ಳುತ್ತಿದ್ದಾರೆ. ತಮ್ಮ ಕಣೆದುರಿಗೇ 70 ವರ್ಷಗಳ ಅವಧಿಯ ಹಾಸ್ಟೆಲ್ ಗಳು, ವಿಶ್ವ ವಿದ್ಯಾನಿಲಯಗಳು ಕುಸಿಯುತ್ತಿರುವುದನ್ನು ಕಣ್ ಕಣ್ ಬಿಟ್ಟುಕೊಂಡು ನೋಡುತ್ತಿದ್ದಾರೆ.

 ಈ 70 ವರ್ಷಗಳಲ್ಲಿ ಸ್ಥಾಪನೆಯಾಗಿ ಮುಗಿಲೆತ್ತರಕ್ಕೆ ಬೆಳೆದಿದ್ದ ಕಾರ್ಪೋರೇಷನ್, ವಿಜಯ ಬ್ಯಾಂಕ್‌ಗಳ ಜತೆಗೆ ಈಗ ಸಹಕಾರಿ ಬ್ಯಾಂಕ್‌ಗಳೂ ಕಣ್ಣು ಮುಚ್ಚುತ್ತಾ, ಲಕ್ಷಾಂತರ ಮಂದಿ ಠೇವಣಿದಾರರು ಯಾರಿಗೆ ಛೀಮಾರಿ ಹಾಕಬೇಕು ಎನ್ನುವುದು ಗೊತ್ತಾಗದೆ ತಮ್ಮ ಮೂರ್ಖತನಕ್ಕೆ ತಾವೇ ಬಯ್ದುಕೊಳ್ಳುತ್ತಾ ಮನೆ ಸೇರಿದ್ದಾರೆ. ಕಳೆದ 70 ವರ್ಷಗಳಿಂದ ಆಗಿದ್ದೆ ಎಲ್ಲದರ ಅನುಕೂಲಗಳನ್ನು ಪಡೆದುಕೊಂಡ ಪ್ರತಿಷ್ಠಿತ ಪಂಡಿತರೇ ಈಗ ತಮ್ಮ ಕಣ್ಣೆದುರಿಗೆ 70 ವರ್ಷಗಳಲ್ಲಿ ನಿರ್ಮಾಣವಾಗಿದ್ದ ಏರ್‌ಪೋರ್ಟ್, ಬಂದರುಗಳು, ರೈಲು-ರೈಲು ಹಳಿಗಳು, ಹೆದ್ದಾರಿಗಳು, ಸಂಶೋಧನಾ ಕೇಂದ್ರಗಳು, ಎನ್‌ಜಿಇಎಫ್, ಎಲ್‌ಐಸಿ ಎಲ್ಲದರ ಮಾರಾಟವನ್ನೂ ನೋಡುತ್ತಿದ್ದಾರೆ.

 ಹೀಗಾಗಿಯೇ ರಸ್ತೆ-ಗುಂಡಿಗಳನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಚಿಸಿ ಎಂದು ಬಹಿರಂಗವಾಗಿ ಫರ್ಮಾನು ಹೊಡಿಸುವ ಧೈರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಬರುತ್ತದೆ. ಇದನ್ನು ಉಳಿದವರು ಅತ್ಯಂತ ನಿರ್ಲಜ್ಜತನ ಎಂದು ಈಗ ಕರೆದರೆ ಪ್ರಯೋಜನವಿಲ್ಲ. ರಸ್ತೆ ಗುಂಡಿಗಳಿಂದ ಆದ ಅಪಘಾತಕ್ಕೆ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು, ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಂತೆ ಬದುಕಿರುವ ಹೊತ್ತಲ್ಲೇ ಹೀಗೆಲ್ಲಾ ಮಾತನಾಡಿ ಧಕ್ಕಿಸಿಕೊಳ್ಳಬಹುದು ಎನ್ನುವ ತಾಕತ್ತು ಕಟೀಲು ಅವರಿಗೆ ಬಂದಿದೆ.

 ಸದ್ಯ ರಾಜ್ಯ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿರುವ ಮೂಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಈಗ ಹಣೆ ಹಣೆ ಚಚ್ಚಿಕೊಂಡು ಪರಿತಪಿಸುತ್ತಿದ್ದಾರೆ. ಈ ಬಿಜೆಪಿ ಸಿ.ಟಿ.ರವಿ ರೀತಿಯ ಈಝಿ ಚೇರ್ ರಾಜಕಾರಣಿಗಳಿಗೆ ಸರಿಯಾಗತ್ತೆ. ನಮಗೆ ಹೊಂದಾಣಿಕೆ ಆಗಲ್ಲ. ಬಿಜೆಪಿ ಸೇರಿ ತಪ್ಪು ಮಾಡಿಬಿಟ್ಟೆವು ಎಂದು ಖಾಸಗಿಯಾಗಿ ಹೇಳಿಕೊಂಡು ಕೊರಗುತ್ತಿದ್ದಾರೆ. ಆದರೆ, ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಕಾಲದಿಂದ ಈಗ ಬಿ.ಎಲ್.ಸಂತೋಷ್ ಅವಧಿಯವರೆಗೂ ಅನುಭವಿಸಿದ್ದು- ಅನುಭವಿಸುತ್ತಿರುವುದು ಇವರಿಗೆ ಮೊದಲೇ ಗೊತ್ತಿರಲಿಲ್ಲವೇ? ಉಮಾಭಾರತಿ, ಅಡ್ವಾಣಿ ಅವರುಗಳಿಗೆ ಬಂದೊದಗಿದ ಗ್ರಹಚಾರ ಇವರಿಗೆ ಇಷ್ಟು ಬೇಗ ಮರೆತುಹೋಗಿದೆಯಾ? ಅಡ್ವಾಣಿ-ಉಮಾಭಾರತಿ-ಯಡಿಯೂರಪ್ಪ ಅವರಿಗೆ ಆಗಿದ್ದು ತಮಗೆ ಆಗುವುದಿಲ್ಲ ಎಂದು ಎಂಟಿಬಿ ನಾಗರಾಜ್, ಡಾ.ಸುಧಾಕರ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ನಾರಾಯಣಗೌಡ ಅವರುಗಳು ನಂಬಿಕೊಂಡರೆ ಅದಕ್ಕೆ ಹೊಣೆ ಯಾರು?

ಹೀಗಾಗಿ ಮಹೇಶ್ ಜೋಶಿಯವರು ಈಗ ಏಕಾಏಕಿ ನಾಗರಿಕವಾಗಿ ವರ್ತಿಸಬೇಕು ಎಂದು ನಿರೀಕ್ಷಿಸುವುದು, ಬಿಜೆಪಿ ಸಂವಿಧಾನ ಬದ್ಧ್ದವಾಗಿ ನಡೆದುಕೊಳ್ಳಬೇಕು ಎಂದು ಆಶಿಸುವುದು ತಪ್ಪಾಗುತ್ತದೆ.

Similar News