ಪೆರು: ತೀವ್ರಗೊಂಡ ಪ್ರತಿಭಟನೆ, ಹಿಂಸಾಚಾರ; ಕಟ್ಟಡಕ್ಕೆ ಬೆಂಕಿ

Update: 2023-01-20 17:27 GMT

ಲಿಮಾ, ಜ.20: ಅಧ್ಯಕ್ಷೆಯ ರಾಜೀನಾಮೆ ಮತ್ತು ಮಧ್ಯಾವಧಿ ಚುನಾವಣೆಗೆ ಆಗ್ರಹಿಸಿ ಪೆರುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು ಗುರುವಾರ ಸಾವಿರಾರು ಮಂದಿ ರಾಜಧಾನಿ ಲಿಮಾದಲ್ಲಿ ಪೊಲೀಸರ ತಡೆಬೇಲಿಯನ್ನು ಧ್ವಂಸಮಾಡಿ ಸರಕಾರ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.

ಸುಮಾರು 3,500 ಪ್ರತಿಭಟನಾಕಾರರು ಪೊಲೀಸರ ತಡೆಬೇಲಿ ಮತ್ತು ಅಶ್ರುವಾಯು ಪ್ರಯೋಗಕ್ಕೂ ಬಗ್ಗದೆ ಮುನ್ನುಗ್ಗಿದ್ದಾರೆ. ಹಲವೆಡೆ ಪೊಲೀಸರತ್ತ ಕಲ್ಲೆಸೆಯಲಾಗಿದೆ. ನಗರದ ಐತಿಹಾಸಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ಅನಾಹುತಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ 8000ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಡಿಸೆಂಬರ್ 8ರಂದು ಎಡಪಂಥೀಯ ಮುಖಂಡ, ಮಾಜಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೋರನ್ನು ಅಧಿಕಾರದಿಂದ ಪದಚ್ಯುತಗೊಳಿಸಲಾಗಿತ್ತು. ಬಳಿಕ ಆಡಳಿತ ಪಕ್ಷದ ಡಿನಾ ಬೊಲುರೇಟ್ ಅಧ್ಯಕ್ಷ ಹುದ್ದೆಗೇರಿದ್ದರು. ಇದನ್ನು ವಿರೋಧಿಸಿ ಕ್ಯಾಸ್ಟಿಲೋರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. ಕಳೆದ 1 ತಿಂಗಳಿಂದ ಮುಂದುವರಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಈ ಮಧ್ಯೆ, ಗಗನಕ್ಕೇರಿದ ಹಣದುಬ್ಬರ ಮತ್ತು ಬೆಲೆಏರಿಕೆಯಿಂದ ಹತಾಶರಾಗಿರುವ ಗ್ರಾಮೀಣ ಪ್ರದೇಶದ ಬಡಜನತೆಯೂ ಸರಕಾರದ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆಗೆ ಕೈಜೋಡಿಸಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಅಧ್ಯಕ್ಷೆ ಡಿನಾ ಬೊಲುರೆಟ್ ಸ್ಪಷ್ಟಪಡಿಸಿದ್ದಾರೆ.

Similar News