ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವ ಜವಾಬ್ದಾರಿ ಯಾರದ್ದು?
ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಾಗ ದೇಶಾದ್ಯಂತ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆದು ಅಣ್ಣಾ ಹಝಾರೆ ನೇತೃತ್ವದಲ್ಲಿ ದಿಲ್ಲಿಯ ಜಂತರ್‌ಮಂತರ್ ಮತ್ತು ದೇಶದ ರಸ್ತೆಗಳಲ್ಲಿ ಸಾಮೂಹಿಕವಾಗಿ ನಾಗರಿಕರು ಭ್ರಷ್ಟಾಚಾರದ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಅದರಲ್ಲಿ ವಿಶೇಷವಾಗಿ ಲೋಕಪಾಲ್ ಬಿಲ್ಲನ್ನು ಸಂಸತ್ತಿನಲ್ಲಿ ಮಂಡಿಸಬೇಕು, ಅದನ್ನು ಜಾರಿಗೊಳಿಸಿದರೆ ದೇಶದಲ್ಲಿರುವ ಭ್ರಷ್ಟಾಚಾರ ಸಂಪೂರ್ಣ ನಾಶವಾಗುತ್ತದೆ ಎಂದು ನಂಬಿಸಲಾಗಿತ್ತು. ಭ್ರಷ್ಟಾಚಾರದ ವಿರುದ್ಧ ಮನಸ್ಥಿತಿ ಇರುವ ವಿಶೇಷವಾಗಿ ಮಧ್ಯಮ ವರ್ಗ, ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಕಂಪೆನಿಯ ಕೆಲವು ನೌಕರರು ಹೋರಾಟದ ಹಾದಿ ತುಳಿದಿದ್ದರು. ಆ ಸಂದರ್ಭದಲ್ಲಿ ಸಿಎಜಿ ವರದಿಯ ಅಂದಾಜು ಲೆಕ್ಕಚಾರದ 2ಜಿ ಸ್ಪೆಕ್ಟ್ರಂ ಹಂಚಿಕೆಯ 1,76,000 ಕೋಟಿ ರೂ. ಭ್ರಷ್ಟಾಚಾರ ಎನ್ನುವ ಬಹುದೊಡ್ಡ ಮೊತ್ತವನ್ನು ಜನರಿಗೆ ತಿಳಿಸಲಾಯಿತು, ಅಲ್ಲದೇ ಕೋಲ್‌ಗೇಟ್ ಹಗರಣದ ಅವಾಸ್ತವಿಕ ಅಂಶಗಳನ್ನು ರಸ್ತೆಗೆ ತರಲಾಗಿತ್ತು. ಸ್ಥಳೀಯ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರದಿಂದ ಬೇಸತ್ತ ಮಧ್ಯಮ ವರ್ಗದ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಆನಂತರ ಅವೆಲ್ಲ ಹಗರಣಗಳ ಆರೋಪಿಗಳು ಆರೋಪ ಮುಕ್ತರಾಗಿ ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಲ್ಲದೆ ಅಂದಿನ ಸಿಎಜಿ ವಿನೋದ್ ರಾಯ್ ಅವರು ನಿವೃತ್ತಿಯಾದ ನಂತರ ದೇಶದ ಜನರ ಮುಂದೆ ಕ್ಷಮಾಪಣೆ ಸಹ ಕೇಳಿರುವುದು 2ಜಿ ಸ್ಪೆಕ್ಟ್ರಂ, ಕೋಲ್‌ಗೇಟ್ ಎಲ್ಲವೂ ಪಿತೂರಿಯ ಭಾಗವೆಂದು ಭಾವಿಸಬಹುದು.
ಇದು ಅಂದಿನ ಯುಪಿಎ ಸರಕಾರವನ್ನು ಅಸ್ಥಿರಗೊಳಿಸುವ ಭಾಗವಾಗಿ ಬಳಸಿರಬಹುದು ಎಂಬ ಸಂಶಯ ಕಾಡುತ್ತಿದೆ, ಇಲ್ಲದಿದ್ದರೆ ಲೋಕಪಾಲ್ ಬಿಲ್ 2011ನ್ನು ಅಂದಿನ ಸರಕಾರ ಡಿಸೆಂಬರ್ 2013ರಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದು ಜನವರಿ 1, 2014ಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿರುವ ಲೋಕಪಾಲ್ ಬಿಲ್‌ನ್ನು ಅನುಷ್ಠಾನಗೊಳಿಸಲು ಸರಿಸುಮಾರು ಎಂಟು ವರ್ಷಗಳನ್ನು ಕೇಂದ್ರದ ಈಗಿನ ಸರಕಾರ ತೆಗೆದುಕೊಂಡಿದೆ. ಭ್ರಷ್ಟಾಚಾರದ ವಿರುದ್ಧವಿರುವ ಯಾವುದೇ ಸರಕಾರ ಸದರಿ ಲೋಕಪಾಲ್‌ನ್ನು ವಿಕೇಂದ್ರೀಕರಣಗೊಳಿಸಿ, ಸಶಕ್ತಗೊಳಿಸಿ ಜಾರಿಗೊಳಿಸಬೇಕಿತ್ತು, ಆದರೆ ದೇಶದ ಜನರಿಗೆ ಲೋಕಪಾಲ್ ಎಂಬ ಸಂಸ್ಥೆ ಇದೆ ಎನ್ನುವುದೇ ಗೊತ್ತಿರದ ಹಾಗೆ ನೋಡಿಕೊಳ್ಳಲಾಗಿದೆ. ಅಲ್ಲದೆ ದೇಶದಲ್ಲಿ ಸಾಕಷ್ಟು ಕಾನೂನುಗಳು ಭ್ರಷ್ಟಾಚಾರದ ವಿರುದ್ಧ ಜಾರಿಯಲ್ಲಿವೆ, ಆದರೆ ಅವುಗಳಿಗೆ ಕಣ್ಣು, ಕಿವಿ ಇಲ್ಲದಂತಾಗಿದೆ, ಭ್ರಷ್ಟಾಚಾರದ ಬಗ್ಗೆ ಯಾರೇ ದೂರು ಕೊಟ್ಟರೂ ದೂರು ಕೊಟ್ಟವರನ್ನೇ ಅಪರಾಧಿ ಎನ್ನುವ ರೀತಿ ಬಿಂಬಿಸಲಾಗುತ್ತಿದೆ, ಇದರಿಂದ ಸಾಮಾನ್ಯ ನಾಗರಿಕ ಭ್ರಷ್ಟಾಚಾರದ ಬಗ್ಗೆ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾನೆ.
ಈಗ ಕರ್ನಾಟಕದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಭ್ರಷ್ಟಾಚಾರದ ಎಲ್ಲೆ ಮಿತಿ ಮೀರಿ ಹೋಗಿರುವ ಹಲವು ಪ್ರಕರಣಗಳು ಜನರ ಮುಂದೆ ಬಂದು ಹೋಗಿವೆ. ಅದು ಕೋವಿಡ್-19 ಔಷಧಿ ಸಾಮಗ್ರಿಗಳ ಖರೀದಿ ಇರಬಹುದು, ಕೋವಿಡ್-19 ರೋಗಿಗಳಿಗೆ ಬೆಡ್‌ಗಳನ್ನು ಒದಗಿಸುವುದು, ಕಾರ್ಮಿಕರಿಗೆ ಕಿಟ್ ಹಂಚಿಕೆಯಿಂದ ಹಿಡಿದು ಹಲವಾರು ಸಚಿವರ ವಿರುದ್ಧ ನೋಂದಾಯಿತ ಗುತ್ತಿಗೆದಾರರು ಮಾಡಿರುವ ಆರೋಪಗಳು, ಬೆಳಗಾವಿಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಸೇರಿದಂತೆ ಇತ್ತೀಚೆಗೆ ತುಮಕೂರಿನ ಗುತ್ತಿಗೆದಾರನ ಆತ್ಮಹತ್ಯೆ, ಪೊಲೀಸ್ ಇನ್‌ಸ್ಪೆೆಕ್ಟರ್ ಆತ್ಮಹತ್ಯೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಹತ್ತು ಲಕ್ಷ ರೂಪಾಯಿಯೊಂದಿಗೆ ವಿಧಾನಸೌಧಕ್ಕೆ ಬಂದಿರುವುದು ಇತ್ಯಾದಿ ಪ್ರಕರಣಗಳು ರಾಜ್ಯದಲ್ಲಿ ಯಾವ ಮಟ್ಟಕ್ಕೆ ಸರಕಾರದಲ್ಲಿ ಭ್ರಷ್ಟಾಚಾರದ ಕೈಗಳು ಚಾಚಿವೆ ಎನ್ನುವುದಕ್ಕೆ ಪುರಾವೆಯಾಗಿದೆ. ಇದರ ಬಗ್ಗೆ ಪಾರದರ್ಶಕವಾಗಿ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತಿಳಿಸುವುದು ಸರಕಾರದ ಜವಾಬ್ದಾರಿ.
ಭ್ರಷ್ಟಾಚಾರ ಇಷ್ಟೊಂದು ಪ್ರಮಾಣದಲ್ಲಿ ಸಮಾಜದಲ್ಲಿ ನೆಲೆಯೂರಲು ಮತ್ತು ವ್ಯಾಪಕವಾಗಿ ಹರಡಲು ಸರಕಾರಿ ನೌಕರರ ವರ್ಗಾವಣೆ ದಂಧೆ ಕಾರಣವೆಂದು ಹೇಳಲಾಗುತ್ತಿದೆ. ಇಂದು ಯಾವ ಸರಕಾರಿ ನೌಕರನೂ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ರೀತಿ ವ್ಯವಸ್ಥೆ ಸೃಷ್ಟಿಯಾಗಿದೆ. ಈ ವ್ಯವಸ್ಥೆಯಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡಬಹುದು ಎನ್ನುವ ಸಾಕಷ್ಟು ಉದಾಹರಣೆಗಳು ಸಮಾಜದಲ್ಲಿವೆ. ಅದು ಸರಕಾರಿ ಜಮೀನು ಖಾಸಗಿಯವರಿಗೆ ವರ್ಗಾವಣೆ ಮಾಡುವುದು, ಸಿವಿಲ್ ಕಾಮಗಾರಿಯನ್ನೇ ಮಾಡದೆ ಬಿಲ್ಲು ಎತ್ತಿಕೊಳ್ಳುವುದು, ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವುದು, ಒಬ್ಬರ ಸೈಟು ಮತ್ತೊಬ್ಬರ ಹೆಸರಿಗೆ ವರ್ಗಾಯಿಸುವುದು, ಆಯ್ಕೆಯಾಗದೇ ಸರಕಾರಿ ನೌಕರಿ ಆದೇಶ ಪಡೆಯುವುದು, ಪರೀಕ್ಷೆಯನ್ನೇ ಬರೆಯದೆ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿಸುವುದು, ಅನುಮತಿಯಿಲ್ಲದೆ ಮನೆ ಕಟ್ಟುವುದು, ಬೋರ್‌ವೆಲ್‌ಗಳನ್ನು ಕೊರೆಯದೇ ಬಿಲ್ಲು ಎತ್ತುವುದು, ಒಂದೇ ಕಾಮಗಾರಿಗೆ ನಾಲ್ಕು ಇಲಾಖೆಗಳಿಂದ ಬಿಲ್ಲು ತೆಗೆದುಕೊಳ್ಳುವುದು, ಅನಗತ್ಯ ಕಾಮಗಾರಿಗಳಿಗೆ ಅನುಮೋದನೆ ನೀಡುವುದು, ಜನಪ್ರತಿನಿಧಿಗಳಿಗೆ ಖುಷಿಪಡಿಸಲು ಸಂಬಂಧವಿಲ್ಲದ ಕಾಮಗಾರಿಗಳಿಗೆ ಸರಕಾರವೇ ಅನುಮತಿ ನೀಡುವುದು, ಪಾರದರ್ಶಕ ಕಾಯ್ದೆ ಮೂಲಕ ಕಾಮಗಾರಿಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತದೆಯಾದರೂ ಎಲ್ಲಾ ಭ್ರಷ್ಟರೂ ಸೇರಿಕೊಂಡು ಯಾರು ಎಷ್ಟೇ ಕಡಿಮೆ ಮೊತ್ತಕ್ಕೆ ಟೆಂಡರ್ ಅರ್ಜಿ ಹಾಕಿದರೂ ತಮಗೆ ಬೇಕಾದವರಿಗೆ ಕಾಮಗಾರಿ ನೀಡುವ ಹಂತಕ್ಕೆ ಬಂದಿರುವುದು, ಟೆಂಡರ್ ಕರೆಯುವುದಕ್ಕೆ ಮುಂಚೆ ಕಾಮಗಾರಿ ನಿರ್ವಹಿಸುವ ಹಂತಕ್ಕೆ ದಾರ್ಷ್ಟ್ಯತನ ಬಂದಿರುವುದು, ದೊಡ್ಡ ದೊಡ್ಡ ಕುಳಗಳು ಕಾಮಗಾರಿಗೆ ಸಂಬಂಧಿಸಿದಂತೆ ತಾವೇ ಅಂದಾಜು ಪತ್ರಿಕೆ ತಯಾರು ಮಾಡಿಕೊಂಡು ತಂದು ಇಲಾಖೆಗಳಿಗೆ ನೀಡುತ್ತಿರುವ ಪ್ರಕರಣಗಳು ಸೇರಿದಂತೆ ಇಂತಹ ನೂರಾರು ಪ್ರಕರಣಗಳ ಮೂಲಕ ಸಾರ್ವಜನಿಕರ ಮಧ್ಯೆ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದರಿಂದ ಎಲ್ಲರೂ ಒಂದಲ್ಲ ಒಂದು ರೀತಿ ಕಿರಿಕಿರಿ ಅನುಭವಿಸುತ್ತಿದ್ದಾರೆ, ಕೆಲವರು ತಾತ್ಕಾಲಿಕ ಸುಖ ಅನುಭವಿಸುತ್ತಿದ್ದಾರೆ, ಇನ್ನೂ ಕೆಲವೊಬ್ಬರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ, ಆದರೆ ದೇಶದ ಬೆಳವಣಿಗೆಗೆ ಇದು ಮಾರಕ ಎನ್ನುವುದು ಎಲ್ಲರೂ ಮರೆತಂತಿದ್ದೇವೆ.
ದೇಶ ಮತ್ತು ರಾಜ್ಯಗಳನ್ನು ನಡೆಸುತ್ತಿರುವ ಸರಕಾರಗಳು ವಿಪರೀತ ಸಾಲ ಮಾಡಿ ದೇಶ/ರಾಜ್ಯವನ್ನು ಆಳುತ್ತಿವೆ. ಅದನ್ನು ಯಾರ ತಲೆಗೆ ಕಟ್ಟುತ್ತಿದ್ದಾರೆ ಎನ್ನುವ ಪರಿಜ್ಞಾನ ಜನತೆಗೆ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. 2022-23ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ದೇಶದ ಒಕ್ಕೂಟ ಸರಕಾರದ ಒಟ್ಟು ಸಾಲ 153 ಲಕ್ಷ ಕೋಟಿ ರೂ. ಗೆ ಏರಲಿದೆ ಎಂದು ಹೇಳಿದೆ, ಇದರಲ್ಲಿ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರ ಮಾಡಿದ ಸಾಲ 103 ಲಕ್ಷ ಕೋಟಿ ರೂ. ಎಂದು ಹೇಳಲಾಗಿದೆ. ಅಂದರೆ 70 ವರ್ಷಗಳಿಂದ ಆಡಳಿತ ನಡೆಸಿದ ಸರಕಾರಗಳು ಕೇವಲ 51 ಲಕ್ಷ ಕೋಟಿ ರೂ. ಸಾಲ ಮಾಡಿದರೆ, ಈಗಿನ ಸರಕಾರ ಕಳೆದ ಎಂಟು ವರ್ಷಗಳಲ್ಲಿ 103 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಆಶ್ಚರ್ಯಕರವಾಗಿದೆ. ಅದಲ್ಲದೆ ರಾಜ್ಯಗಳು ಬೇರೆ ಸಾಲ ಮಾಡಿವೆ. ಅದರಲ್ಲಿ 2022-23ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕರ್ನಾಟಕ ರಾಜ್ಯ ಸರಕಾರದ ಒಟ್ಟು ಸಾಲ 5,18,366 ಕೋಟಿ ರೂ. ಎಂದು ಬಜೆಟ್ ಪುಸ್ತಕದಲ್ಲಿ ಹೇಳಲಾಗಿದೆ. ಅಲ್ಲದೆ ಈಗಿನ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಾಗ 2018-19ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 2,46,000 ಕೋ.ರೂ ಎಂದು ಹೇಳಲಾಗಿದೆ. ಅಂದರೆ ಈಗಿನ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಮಾಡಿರುವ ಒಟ್ಟು ಸಾಲ ಎರಡುವರೆ ಲಕ್ಷ ಕೋಟಿ ರೂ.ಗೂ ಅಧಿಕವೆಂದೇ ಹೇಳಲಾಗುತ್ತಿದೆ. ಸಾಲ ಮಾಡಿ ತುಪ್ಪತಿನ್ನು ಎನ್ನುವ ಗಾದೆ ಮಾತಿನಂತಿದೆ ಸರಕಾರದ ಆಡಳಿತ. ಈ ಸಾಲದ ಹೊಣೆ ಹೊರುವವರು ಯಾರು, ಯಾವ ಪರುಷಾರ್ಥಕ್ಕೆ ಈ ಸಾಲ? ಇಷ್ಟೊಂದು ಪ್ರಮಾಣದಲ್ಲಿ ಸಾಲ ಮಾಡಿದ ನಂತರವೂ ಜನರ ಸಮಸ್ಯೆಗಳು ಬಗೆಹರಿದೆವೆಯೇ? ಇದು ಯಕ್ಷ ಪ್ರಶ್ನೆಯಾಗಿದೆ.
ಈಗ ರಾಜ್ಯದಲ್ಲಿ ನೋಂದಾಯಿತ ಗುತ್ತಿಗೆದಾರರ ಸಂಘದವರು ಪದೇ ಪದೇ ಶೇ. 40 ಕಮಿಷನ್ ನೀಡುವ ಕುರಿತು ಸರಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡುತ್ತಿದ್ದಾರೆ. ಇತಿಹಾಸದಲ್ಲಿ ಸರಕಾರದ ಜೊತೆಗೆ ಕೆಲಸ ಮಾಡುವ ಯಾವುದೇ ಗುತ್ತಿಗೆದಾರ ಸರಕಾರದ ವಿರುದ್ಧವಾಗಲಿ, ಶಾಸಕರ ವಿರುದ್ಧವಾಗಲಿ ಕಮಿಷನ್ ನೀಡಿರುವ ಬಗ್ಗೆಯಾಗಲೀ, ನೀಡುವ ಬಗ್ಗೆಯಾಗಲೀ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ ಇಡೀ ಸಂಘವೇ ಆರೋಪ ಮಾಡುತ್ತಿರುವಾಗ ಅದನ್ನು ಅಲ್ಲಗಳೆಯುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಕಾಮಗಾರಿ ನಿರ್ವಹಿಸಿರುವ ಸುಮಾರು 25 ಸಾವಿರ ಕೋ.ರೂ ಬಿಲ್ಲುಗಳು ಬಾಕಿ ಇವೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ, ಇಷ್ಟೊಂದು ಪ್ರಮಾಣದಲ್ಲಿ ಸರಕಾರದಲ್ಲಿ ದುಡ್ಡು ಇಲ್ಲದೆ ಕಾಮಗಾರಿ ನಿರ್ವಹಣೆಗೆ ಆದೇಶ ಮಾಡುವುದು ಯಾವ ಪುರುಷಾರ್ಥಕ್ಕೆ? ಹಿಂದಿನವರು ಮಾಡಿದ್ದಾರೆ ಆದ್ದರಿಂದ ನಾವು ಮಾಡುತ್ತೇವೆ ಎನ್ನುವುದು ಯಾವ ನ್ಯಾಯ? ಗುತ್ತಿಗೆದಾರರು ಒಬ್ಬ ಸಚಿವರ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆದು ತನಿಖೆಗೆ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಕನಿಷ್ಠ ಗಂಭೀರತೆ ರಾಜ್ಯವನ್ನಾಳುವವರಿಗೆ ಇಲ್ಲದಿದ್ದರೆ ಹೇಗೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಶೇ. 40 ಕಮಿಷನ್ ಸರಕಾರವಿದೆ ಎಂದು ಹಾಸ್ಯ ಮಾಡಿ ರಾಜ್ಯದ ಮರ್ಯಾದೆ ತೆಗಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭ್ರಷ್ಟಾಚಾರದ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ದೊಡ್ಡ ದೊಡ್ಡ ಪ್ರಕರಣಗಳು ಕಣ್ಣಿಗೆ ಕಾಣುವಂತಿವೆ. ಅಂತಹ ಪ್ರಕರಣಗಳಲ್ಲಿ ತನಿಖೆ ಮುಗಿದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವ ಸಾಕಷ್ಟು ಕಡತಗಳು ಸರಕಾರದ ಹಂತದಲ್ಲಿವೆ. ಇದನ್ನು ವಿಲೇವಾರಿ ಮಾಡಲು ಒಂದು ವ್ಯವಸ್ಥೆ ಮಾಡುವ ಜವಾಬ್ದಾರಿ ಸರಕಾರಕ್ಕಿಲ್ಲವೇ?
ಇತ್ತೀಚೆಗೆ ಕೃಷ್ಣ ಕೊಳ್ಳದ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ತನಿಖೆಗೆ ಬಂದಂತಹ ಸದನ ಸಮಿತಿಗೆ ಅಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರು ಜನರನ್ನು ಛೂಬಿಟ್ಟು ಘೇರಾವ್ ಹಾಕುವ ಮಟ್ಟಕ್ಕೆ ಹೋಗಿ, ಸದನ ಸಮಿತಿ ಸ್ಥಳ ವೀಕ್ಷಣೆ ಮಾಡದೆ ವಾಪಸ್ ಹೋಗುವಂತಹ ಸ್ಥಿತಿ ನಿರ್ಮಾಣವಾಯಿತು. ಈಗಿನ ಬಹುತೇಕ ಶಾಸಕರು, ಸಂಸದರು, ಸಚಿವರ ಕುಟುಂಬದವರು ನೇರವಾಗಿ ಅಥವಾ ಪರೋಕ್ಷವಾಗಿ ಸರಕಾರದ ಗುತ್ತಿಗೆದಾರಿಕೆಯಲ್ಲಿ ಭಾಗವಹಿಸುತ್ತಿರುವುದೇ ಇದಕ್ಕೆ ಮೂಲ ಕಾರಣ. ಇಲ್ಲಿ ಪರಿಶೀಲನೆ, ಆಡಳಿತ ನಿರ್ವಹಣೆ, ಕಾನೂನು ಕ್ರಮಜರುಗಿಸುವ ಅಧಿಕಾರ ಇರುವವರೇ ಕಾಮಗಾರಿ ನಿರ್ವಹಣೆ ಮಾಡಿದರೆ ಯಾವ ಗುಣಮಟ್ಟದ ಕೆಲಸ ನಿರೀಕ್ಷಿಸಲು ಸಾಧ್ಯ? ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಡಳಿತ ಸರಕಾರಗಳು ಕಾರ್ಯನಿರ್ವಹಿಸುವಲ್ಲಿ ವಿಫಲಗೊಂಡಾಗ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ಅಂತಹದರಲ್ಲಿ ಈ ಸರಕಾರದ ವಿರುದ್ಧ ಬರುತ್ತಿರುವ ಶೇ. 40 ಕಮಿಷನ್ ಆರೋಪದ ಬಗ್ಗೆ ನ್ಯಾಯಾಲಯಗಳು ಆಗಲೀ/ಲೋಕಾಯುಕ್ತ ಸಂಸ್ಥೆಯಾಗಲೀ ಸುಮೋಟೋ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ಮಾಡಲು ಯಾಕೆ ಮನಸ್ಸು ಮಾಡುತ್ತಿಲ್ಲ ಎನ್ನುವುದೇ ತಿಳಿಯದಾಗಿದೆ.
ಈ ದೇಶ ನನ್ನದು, ಈ ರಾಜ್ಯ ನನ್ನದು, ಈ ಊರು ನನ್ನದು, ಈ ಸರಕಾರ ಖರ್ಚು ಮಾಡುತ್ತಿರುವ ಅನುದಾನ ನನ್ನದು ಎನ್ನುವ ಭಾವನೆಯೊಂದಿಗೆ ಜಾತಿ, ಧರ್ಮ, ಪ್ರದೇಶ, ಪಕ್ಷ ಹೊರತುಪಡಿಸಿ ದೇಶದ ನಾಗರಿಕರು ಭ್ರಷ್ಟಾಚಾರದ ಪ್ರಕರಣಗಳಿಗೆ ಪ್ರತಿಕ್ರಿಯೆ ನೀಡುವುದು ಬಹಳ ಅವಶ್ಯಕತೆ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಜ್ಞಾವಂತಹ ನಾಗರಿಕರು ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರವೇ ಹೆಮ್ಮರವಾಗಿ ಬೆಳೆದು ನಿಂತಾಗ ನಾವೆಲ್ಲ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ ಎನ್ನುವ ಕನಿಷ್ಠ ಮುಂದಾಲೋಚನೆ ಇಲ್ಲದೇ ಇದ್ದರೆ ತುಂಬಾ ಕಷ್ಟ.