'ಕೋಟಿಗೊಬ್ಬ' ಇರ್ಫಾನ್
ಬೆಂಗಳೂರು: ತುಮಕೂರು ರಸ್ತೆಯ ಫ್ಲೈ ಓವರ್. ರವಿವಾರ ಸಂಜೆ 5:30 ರ ಸುಮಾರು. ಹೋಂಡಾಸಿಟಿ ಕಾರೊಂದು ಫ್ಲೈ ಓವರ್ ಮೇಲೆ ಕೆಟ್ಟು ನಿಂತಿದೆ. ಒಳಗೆ ಇಬ್ಬರು ವೃದ್ದರು, ಮೂವರು ಸಣ್ಣ ಮಕ್ಕಳು. ಮಹಿಳೆಯೊಬ್ಬರು ಕಾರಿನ ಹಿಂದೆ ನಿಂತು ಹಿಂದೆ ಬರುವ ಕಾರು, ವಾಹನಗಳಿಗೆಲ್ಲಾ ಸೈಡ್ ನಲ್ಲಿ ಹೋಗಲು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ. ತಮ್ಮ ಕಾರು ಕೆಟ್ಟು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿದೆ, ಜನ ಎಲ್ಲಿ ಬಂದು ಗಲಾಟೆ ಮಾಡ್ತೋರೋ, ಟ್ರಾಫಿಕ್ ಪೊಲೀಸರು ಬಂದು ಇನ್ನೇನು ಗತಿ ಮಾಡ್ತಾರೋ ಎನ್ನುವ ದುಗುಡ ಮಹಿಳೆಯ ಮುಖದಲ್ಲಿ ಮನೆ ಮಾಡಿತ್ತು. ಆಕೆಯ ಪತಿ ನಾರಾಯಣ್ , ಹಿಂದೆ ಸಾಲು ಗಟ್ಟಿದ್ದ ಕಾರುಗಳ ಹಾರನ್ ಗೇ ಬೆದರಿ ಹೋಗಿದ್ದರು. ಎಲ್ಲರೂ ನಾರಾಯಣ್ ದಂಪತಿಗೆ ಗುರಾಯಿಸಿಕೊಂಡು ಹೋಗುವವರೇ ಹೊರತು, ಕಾರಿಳಿದು ಬಂದು ಏನಾಯ್ತು ಎಂದು ಕೇಳುವಷ್ಟು ವ್ಯವದಾನ, ಸೌಜನ್ಯ ಮಾತ್ರ ಯಾರಲ್ಲೂ ಕಾಣಲಿಲ್ಲ.
ಆದರೆ, ಒಬ್ಬ ಸ್ಮಾರ್ಟ್ ಹುಡುಗ ಮಾತ್ರ ಕಾರು ನಿಲ್ಲಿಸಿ ಕೆಳಗಿಳಿದರು. ಕೆಟ್ಟು ನಿಂತ ಕಾರನ್ನು ಪರೀಕ್ಷಿಸಿದರು. ಕಾರಿನ ಕ್ಲಚ್ ಹೋಗಿತ್ತು. ಬಳಿಕ ಆ ಸ್ಮಾರ್ಟ್ ಯುವಕನೇ ಫ್ಲೈಓವರ್ ಮೇಲೆ ಹೋಗುವ ವಾಹನಗಳನ್ನೆಲ್ಲಾ ನಿಲ್ಲಿಸಿ ನಿಮ್ಮಲ್ಲಿ ಹಗ್ಗ ಇದೆಯೇ, ಕಾರು ಕೆಟ್ಟಿದೆ, ಅದನ್ನು ಎಳೆಯಬೇಕು ಎಂದು ಬೇಡಿಕೊಳ್ಳುತ್ತಿದ್ದರು. ಸುಮಾರು 40-50 ಕಾರುಗಳು ಪಾಸ್ ಆದವು. ಕೊನೆಗೆ ಲಗೇಜ್ ಗಾಡಿಯವನೊಬ್ಬ ಕೊಟ್ಟ ಹಗ್ಗದ ಒಂದು ತುದಿಯನ್ನು ತಮ್ಮ ಕಾರಿಗೆ ಕಟ್ಟಿಕೊಂಡು, ಮತ್ತೊಂದು ತುದಿಯನ್ನು ಕೆಟ್ಟ ಕಾರಿಗೆ ಕಟ್ಟಿ ಎಳೆಯಲು ಶುರು ಮಾಡಿದರು.
ಈ ಸ್ಮಾರ್ಟ್ ಹುಡುಗನ ಹೆಸರು ಇರ್ಫಾನ್. ಆಮೇಲೆ ಗೊತ್ತಾಗಿದ್ದೆಂದರೆ, ಇರ್ಫಾನ್ ಕನ್ನಡ ಸಿನಿಮಾ ನಟ. ಕೋಟಿಗೊಬ್ಬ ಸಿನಿಮಾದಲ್ಲಿ ಸಹನಟ ಆಗಿದ್ದವರು. ಸದ್ಯದಲ್ಲೇ ಇವರ ನಾಯಕತ್ವದ "ಬೀಗ" ಸಿನೆಮಾ ತೆರೆ ಕಾಣಲಿದೆಯಂತೆ.
ಇರಲಿ, ಮತ್ತೆ ಫ್ಲೈ ಓವರ್ ಗೆ ಬರೋಣ. ಇರ್ಫಾನ್ ತಮ್ಮ ಕಾರಿಗೆ ಕಟ್ಟಿ ಎಳೆಯುತ್ತಿದ್ದ ಹಗ್ಗ ತುಂಡಾಯಿತು. ಬಳಿಕ ಬೇರೆ ದಾರಿ ಇಲ್ಲದೆ, ತಮ್ಮ ಕಾರನ್ನು ತಮ್ಮ ಜತೆಗಿದ್ದ ಸಂಗಾತಿಗೆ ಕೊಟ್ಟು ಅವರಿಗೆ ಚಲಾಯಿಸಲು ಹೇಳಿದರು. ಕೆಟ್ಟುನಿಂತ ಕಾರನ್ನು ತಾವೇ ಹಿಂದಿನಿಂದ ತಳ್ಳುತ್ತಾ ಫ್ಲೈ ಓವರ್ ನಿಂದ ಕೆಳಗಿನವರೆಗೂ ಸುಮಾರು ಅರ್ಧ ಕಿಲೋ ಮೀಟರ್ ತಳ್ಳಿದರು.
ಕೆಟ್ಟ ಕಾರಿನಲ್ಲಿದ್ದ ಕುಟುಂಬದವರನ್ನು ಇರ್ಫಾನ್ ಅವರ ಸಂಗಾತಿಯೇ ಕರೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡರು.
ಇನ್ನೇನು ಕಾರನ್ನು ಫ್ಲೈ ಓವರ್ ನಿಂದ ಕೆಳಗಿನವರೆಗೂ ತಳ್ಳಿಕೊಂಡು ಬರುವ ವೇಳೆಗೆ ಟ್ರಾಫಿಕ್ ಪೊಲೀಸರು ಬಂದರು. "ಏನ್ರೀ ನಿಮ್ದು ಬೇಗ ಗಾಡಿ ತೆಗೀರಿ" ಎಂದು ಡ್ಯೂಟಿ ಮಾಡಲು ಆರಂಭಿಸಿದರು.
ಸುಮಾರು ಒಂದೂವರೆ ಗಂಟೆ ಕಾಲ ಇರ್ಫಾನ್ ಸಂಗಾತಿಗಳು ನಾರಾಯಣ್ ಅವರ ಕುಟುಂಬಕ್ಕೆ ನೆರವಾದರು.
ಫ್ಲೈ ಓವರ್ ನಿಂದ ಕೆಳಗಿನವರೆಗೂ ತಮ್ಮನ್ನು ಕರೆತಂದಕ್ಕಾಗಿ ನಾರಾಯಣ್ ದಂಪತಿ ಮತ್ತು ಪುಟಾಣಿ ಮಕ್ಕಳು ಇರ್ಫಾನ್ ಸಂಗಾತಿಗೆ ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದರು.