ದೀಪದ ಕೆಳಗಿನ ಕತ್ತಲೆ ಓಡಿಸಲಿ ದ.ಕ. ಕಸಾಪ ರಜತ ಸಮ್ಮೇಳನ

Update: 2023-02-03 06:12 GMT

ಕನ್ನಡ ಸಾಹಿತ್ಯ ಪರಿಷತ್ ಶತಮಾನ ಕಂಡಿರುವ ಕನ್ನಡಿಗರ ಒಂದು ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಯ ಹೊರತಾಗಿಯೂ ಅದು ಅನೇಕ ಅಧ್ವಾನಗಳ ಗೂಡು ಸಹ ಹೌದು. ಇತ್ತೀಚಿನ ವರ್ಷಗಳಲ್ಲಂತೂ ಅದು ಬಹಳ ಸಲ ರಾಜಕೀಯ ಮತ್ತು ಧಾರ್ಮಿಕ ಮುಖವಾಡ ಹೊತ್ತು ಅಲ್ಲಿಯ ರಾಜ್ಯ ಅಧ್ಯಕ್ಷರುಗಳ ಸ್ವಾರ್ಥಪರ ಚಿಂತನೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ನೇರ ಗುರಿಯಾಗಿ ನಗೆಪಾಟಲಾದದ್ದು ಇದೆ. ಈ ಬಾರಿಯ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೆಲವು ಆಗುಹೋಗುಗಳು ಬಹುಶಃ ಇದಕ್ಕೆ ತಾಜಾ ಉದಾಹರಣೆ. ಇವುಗಳ ಹೊರತಾಗಿಯೂ ಕಸಾಪದ ಕೆಲವು ಜಿಲ್ಲಾ ಮತ್ತು ತಾಲೂಕು ಘಟಕಗಳು ತಮ್ಮ ಇತಿಮಿತಿಯ ಒಳಗೆ ಕಾರ್ಯಾಚರಿಸುತ್ತಿದ್ದು, ಅದರಲ್ಲೂ ತಮ್ಮ ನಿಬಂಧನೆಗಳಿಗೆ ಅನುಸಾರ ಸಮ್ಮೇಳನ ಇತ್ಯಾದಿಗಳನ್ನು ಹಮ್ಮಿಕೊಂಡು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಪ್ರಯತ್ನದಲ್ಲಿದೆ.

ಈ ಹಿನ್ನೆಲೆಯಲ್ಲಿ ದ.ಕ. ಕಸಾಪ ತನ್ನ ಅಸ್ತಿತ್ವದ ಆರಂಭದಿಂದಲೂ ಒಂದು ಸಕ್ರಿಯ ಘಟಕ. ಒಂದಲ್ಲ ಒಂದು ಚಟುವಟಿಕೆಗಳನ್ನು ಆಯೋಜಿಸಿ ಕರಾವಳಿ ಕರ್ನಾಟಕದಲ್ಲಿ ಸರಿಸುಮಾರು ನಾಲ್ಕು ದಶಕಗಳಿಂದ ಜನಮನದಲ್ಲಿ ಬೇರೂರಿದ ಸಂಸ್ಥೆ. ಆದರೆ ಈ ಸುದೀರ್ಘ ಅವಧಿಯಲ್ಲಿ ಅದು ಕಂಡ ಅಧ್ಯಕ್ಷರ ಸಂಖ್ಯೆ ಮೂರ್ನಾಲ್ಕು ಮಾತ್ರ. ನಿಬಂಧನೆಗಳಲ್ಲಿರುವ ನ್ಯೂನತೆ ಮತ್ತು ಇಲ್ಲಿಯ ಕಡಿಮೆ ಕಸಾಪ ಸದಸ್ಯರ ಸಂಖ್ಯೆ ಹಾಗೂ ಅದರೊಳಗೂ ನಿರ್ಮಾಣವಾಗಿದ್ದ ಜಾತಿ, ಧರ್ಮ ಆಧಾರಿತ ಲೆಕ್ಕಾಚಾರ ಸುದೀರ್ಘ ಕಾಲ ಹೊಸಮುಖ ಮತ್ತು ಹೊಸ ಆಲೋಚನೆಗೆ ಆನಿರ್ವಾಯವಾಗಿ ಅವಕಾಶ ನಿರಾಕರಿಸುತ್ತಲೇ ಬಂದಿತ್ತು. ಆದರೆ ಅದೃಷ್ಟವಶಾತ್ ಕಳೆದ ಬಾರಿಯ ಕಸಾಪ ಚುನಾವಣೆ ಇವುಗಳನ್ನೆಲ್ಲ ಮೆಟ್ಟಿ ನಿಂತು ಸುಮಾರು ಎರಡು ದಶಕಗಳ ನಂತರ ಹೊಸ ಅಧ್ಯಕ್ಷರೊಬ್ಬರನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಇದೀಗ ಅವರ ಸಾರಥ್ಯದಲ್ಲಿ 25ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಜತ ಸಂಭ್ರಮದೊಂದಿಗೆ ಜಿಲ್ಲೆಗೆ ಅತೀ ಅಗತ್ಯವಿರುವ ಸಾಹಿತ್ಯ ಸಾಮರಸ್ಯ ಸಮೃದ್ಧಿ ಎಂಬ ಆಶಯದೊಂದಿಗೆ ಹೇಮಾವತಿ ವಿ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಫೆ. 3ರಿಂದ 5ರ ತನಕ ಆಯೋಜಿಸುತ್ತಿದೆ. ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನೇತ್ರಾವತಿಯ ಹರಿವಿಗೂ ಹೊಸ ಚಿಂತನೆ ನೀಡುವ ಶಕ್ತಿ ಇರುವ ಉಜಿರೆಯಲ್ಲಿ. ಇತ್ತೀಚಿನ ದಶಕಗಳಲ್ಲಿ ಕಸಾಪಕ್ಕೆ ತನ್ನ ಚಟುವಟಿಕೆಗಳಿಗೆ ಆರ್ಥಿಕ ತೊಂದರೆ ಏನಿಲ್ಲ, ಅದರಲ್ಲೂ ಸಮ್ಮೇಳನಗಳಿಗೆ ಸಾಕಷ್ಟು ನಿರ್ದಿಷ್ಟ ದೊಡ್ಡ ಮೊತ್ತ ಹಾಗೂ ಸ್ಥಳೀಯ ಸಹಕಾರ ಹೇರಳವಾಗಿ ದೊರೆಯುತ್ತಿದೆ. ಇಂತಹ ಆಶಾದಾಯಕ ವಿದ್ಯಮಾನದ ನಡುವೆ ಸಮಾಜದ ಎಲ್ಲರನ್ನೂ ಒಳಗೊಂಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಕನ್ನಡಿಗರ ಬಹುಕಾಲದ ಕನಸು. ಇಂತಹ ಕನಸು 25ನೇ ದ.ಕ. ಕಸಾಪ ಸಮ್ಮೇಳನದ ಆಗುಹೋಗುಗಳಲ್ಲಿ ಬಹುತೇಕ ನನಸಾಗುವಂತೆ ಭಾಸವಾಗುತ್ತಿದೆ. ಯಾವುದೇ ಧಾರ್ಮಿಕ ಮುಖಂಡರ ಅನಗತ್ಯ ಉಪಸ್ಥಿತಿ ಇಲ್ಲದ ಸಾಹಿತ್ಯ ಸಮ್ಮೇಳನ ದ.ಕ. ಜಿಲ್ಲೆಯಲ್ಲಿ ಸಹ ಸಾಧ್ಯವಿದೆ. ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯ ಸನ್ಮಾನವನ್ನೂ ನಾವು ನಿಲ್ಲಿಸಬಲ್ಲೆವು. ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳಲ್ಲಿ ಎಲ್ಲ ಮತ ಧರ್ಮ, ಜಾತಿಯವರಿಗೂ ಸಮಾನ ಅವಕಾಶ ಬೇಕು, ಎಂಬ ಜಿಲ್ಲೆಯ ಬಹುಜನರ ಕೂಗನ್ನು ಸಾಕಾರಗೊಳಿಸುವ ಒಂದು ಪ್ರಾಮಾಣಿಕ ಪ್ರಯತ್ನ ಇಲ್ಲಿ ನಡೆದಿದೆ.

ಇಷ್ಟಕ್ಕೆ ಇದು ಸೀಮಿತ ವಾಗದೆ ಮುಂದಿನ ತನ್ನೆಲ್ಲ ಚಟುವಟಿಕೆಗಳಲ್ಲೂ ನಿಬಂಧನೆ ಗಳನುಸಾರ ಇದೇ ಹೆಜ್ಜೆ ದ.ಕ. ಕಸಾಪದ ಮೂಲಮಂತ್ರವಾಗಲಿ. ಕಸಾಪದ ಹುದ್ದೆ ನಿಜಾರ್ಥದ ಕನ್ನಡ ಸೇವೆಗೆ ಎಂಬ ಸ್ಪಷ್ಟ ಅರಿವಿನೊಂದಿಗೆ ಎಲ್ಲ ತಾಲೂಕು ಘಟಕಗಳು ಸಹ ಈ ಬಗ್ಗೆ ಚಿಂತಿಸಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟರ ಮಟ್ಟಿಗಿನ ಅಚ್ಚುಕಟ್ಟುತನದಲ್ಲಿ ಖಾಸಗಿ ನೆಲೆಯ ಕನ್ನಡ ಸಮ್ಮೇಳನ ನಡೆದರೂ ಕಸಾಪ ಸಮ್ಮೇಳನ ಜನಸಾಮಾನ್ಯರ, ಕಟ್ಟ ಕಡೆಯ ವ್ಯಕ್ತಿಗೂ ಹೆಮ್ಮೆ ತರುವ ಸಮ್ಮೇಳನವಾಗಲಿ.

Similar News