ದಲಿತೋದ್ಧಾರವೆಂದರೆ...

Update: 2023-02-04 06:01 GMT

ಬಾಬಾಸಾಹೇಬರು ಸ್ಥಾಪಿಸುತ್ತಿದ್ದ ಸಂಘಟನೆಗಳಾಗಲಿ, ಪತ್ರಿಕೆಗಳಾಗಲಿ ಅಥವಾ ಹೋರಾಟಗಳಾಗಲಿ ಅವೆಲ್ಲವೂ ಇಡೀ ಸಮುದಾಯದ ಆತ್ಮಗೌರವವನ್ನು, ಸ್ವಾಭಿಮಾನವನ್ನು ಎತ್ತಿಹಿಡಿಯುವ, ಜಾತ್ಯತೀತ ಸಮಾಜ ನಿರ್ಮಾಣದ ಆಶಯವುಳ್ಳ ಹಾಗೂ ತೀವ್ರ ಹೋರಾಟಗಳ ಮೂಲಕ ಸಾಮಾಜಿಕ ನ್ಯಾಯವನ್ನು ಪಡೆಯುವ ಸಲುವಾಗಿ ರೂಪುಗೊಳ್ಳುತ್ತಿದ್ದವೆಂಬುದು ಸ್ಮರಣೀಯ. ಆದರೆ, ಅವರ ಹೆಸರಿನಲ್ಲಿ ನಾವಿಂದು ಸ್ಥಾಪಿಸುತ್ತಿರುವ ಸಂಘಗಳ ಗುರಿ ಏನು? ಸಾಗಬೇಕಾದ ದಿಕ್ಕು ಯಾವುದು? ಎಂಬುದರ ಬಗ್ಗೆ ಅರ್ಥೈಸಿಕೊಳ್ಳಬೇಕಾಗಿದೆ.



ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಮುದಾಯದ ಹಿತ ಬಯಸಿ ಸ್ಥಾಪಿತಗೊಳ್ಳುವ ಅಂಬೇಡ್ಕರ್ ಹೆಸರಿನ ದಲಿತ ಸಂಘಗಳ ಗುರಿ ಏನು? ಎತ್ತ? ಎಂಬ ಬಗ್ಗೆ ಗಮನ ಹರಿಸಿದಾಗ ಬಹಳಷ್ಟು ವಿಷಾದ ಮತ್ತು ಸಂಕಟವಾಗುವುದರಲ್ಲಿ ಎರಡು ಮಾತಿಲ್ಲ. ನಾಮಾಂಕಿತದಿಂದಿಡಿದು ಉದ್ಘಾಟನೆ, ಭವನ ನಿರ್ಮಾಣ, ಪ್ರತಿಮೆ ಸ್ಥಾಪನೆ ಮತ್ತು ಜಯಂತ್ಯುತ್ಸವಗಳ ಸುತ್ತ ವಿಜೃಂಭಿಸುವ ಕೆಲವು ಸಂಘಗಳು ಸಾಮಾಜಿಕ ನ್ಯಾಯ ಪರವಾದ ಹೋರಾಟಗಳಲ್ಲಿ ಗುರುತಿಸಿಕೊಳ್ಳುವುದು ತುಸು ಕಡಿಮೆಯೇ. ಸಂವಿಧಾನ ಸಂರಕ್ಷಣೆಯ ಹೋರಾಟಗಳಿರಲಿ, ಜಾತಿವಾದ, ಕೋಮುವಾದಗಳನ್ನು ಹಿಮ್ಮೆಟ್ಟಿಸುವ, ಮೀಸಲಾತಿ ಪರವಾದ ಚಳವಳಿಗಳಿರಲಿ ಅಥವಾ ಒಟ್ಟು ಸಮುದಾಯದ ಹಿತರಕ್ಷಣೆಯ ಪರವಾದ ಚಟುವಟಿಕೆಗಳಿರಲಿ ಅವುಗಳೊಂದಿಗೆ ಭಾಗವಹಿಸುವಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲವೆಂಬುದನ್ನು ಗಮನಿಸಬಹುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ರೊಟ್ಟಿ ಬುತ್ತಿ ಕಟ್ಟಿಕೊಂಡು ಕಂಕುಳಲ್ಲಿ ಸಣ್ಣ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಹೋರಾಟದ ಕೂಗನ್ನೆಬ್ಬಿಸುವ ಗ್ರಾಮಾಂತರ ಪ್ರದೇಶಗಳ ಮಹಿಳೆಯರು, ವಯಸ್ಸಾದ ವೃದ್ಧರು, ವಿದ್ಯಾರ್ಥಿ ಯುವಜನರ ಘೋಷಣೆಗಳು ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಅಬ್ಬರಿಸಿದರೂ ಇಲ್ಲಿನ ನಗರವಾಸಿ ದಲಿತ ಸಮುದಾಯದ ಸ್ಪಂದನೆ ಮಾತ್ರ ಸಮಾಧಾನಕರವಾಗಿಲ್ಲ ಎಂಬುದು ಸತ್ಯವೂ ಹೌದು.

ಹಳ್ಳಿಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ದಲಿತ ಸಂಘಗಳನ್ನು ಸ್ಥಾಪಿಸಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿಸಬೇಕೆಂಬ ಧ್ಯೇಯ ಹೊತ್ತವರು ವಿಚಾರ ಸಂಕಿರಣ, ಚರ್ಚೆ, ಸಂವಾದ ಮುಂತಾದ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ಬಡ ಮಕ್ಕಳಿಗೆ ಶೈಕ್ಷಣಿಕ ಅವಶ್ಯಕತೆಗಳನ್ನು ದೊರಕಿಸಿಕೊಟ್ಟು ಶಿಕ್ಷಣಕ್ಕೆ ಮಹತ್ವ ನೀಡಬೇಕೆನ್ನುವ ಮಹದಾಸೆ ಕೆಲವರದಾದ್ದರೆ, ತಮ್ಮ ಬದುಕನ್ನು ಧಾರ್ಮಿಕತೆಗೆ ಒಗ್ಗಿಸಿಕೊಂಡ ಮಂದಿ ಜಯಂತಿಯ ನೆಪದಲ್ಲಿ ಅನ್ನದಾನ, ನೀರು ಮಜ್ಜಿಗೆ, ಪಾನಕ ವಿತರಿಸುವ, ಹಣ್ಣು ಕಾಯಿ, ಗಂಧದ ಕಡ್ಡಿ, ಕರ್ಪೂರ ಬೆಳಗಿ ಅಂಬೇಡ್ಕರ್ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ರಥಯಾತ್ರೆ ಮಾತ್ರವಲ್ಲ, ಹಾರ ತುರಾಯಿ, ಆರ್ಕೆಸ್ಟ್ರಾ, ಫ್ಲೆಕ್ಸು, ಕಟೌಟು, ಹರಿಕಥೆ, ಭಜನೆ, ಕೀ ಚೈನು, ಟಿ ಶರ್ಟುಗಳ ಹಾವಳಿ, ಇದೀಗ ಬೀದಿ ತುಂಬಾ ಡಿ.ಜೆ.ಗಳು ಅವಶ್ಯವೆಂದು ವಾದಿಸುವವರಿಗೇನೂ ಕಮ್ಮಿ ಇಲ್ಲ. ಮತ್ತೂ ಕೆಲವರು ಕುರಿ ಕೋಳಿ, ಕಡಿದು ಜಾತ್ರೆಯೋಪಾದಿಯಲ್ಲಿ ಗ್ರಾಮ ದೇವತೆಗಳ ಹಬ್ಬದ ಮಾದರಿಯಲ್ಲಿ ಏಕೆ ಮಾಡಬಾರದು? ಎಂದು ಪ್ರಶ್ನಿಸುವವರನ್ನು ಕಂಡಾಗ ಅಂತಹ ವ್ಯಕ್ತಿ ಮತ್ತು ಶಕ್ತಿಗಳಿಗೆ ವಿವೇಕ ಮೂಡುವುದು ಯಾವಾಗ? ಎಂಬ ಪ್ರಶ್ನೆ ಎಲ್ಲರೆದುರು ನಿಂತಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹುಟ್ಟಿಕೊಳ್ಳುವ ದಲಿತ ಸಂಘಟನೆಗಳ ಕತೆ ಒಂದಾದರೆ, ನಗರ ಪ್ರದೇಶಗಳಲ್ಲಿ ಹುಟ್ಟುವ ಸಂಘಗಳ ಕತೆ ಮತ್ತೊಂದು ಬಗೆಯದು. ಎಪ್ರಿಲ್ 14 ಮತ್ತು ಡಿಸೆಂಬರ್ 6ರಂದು ಮಾತ್ರ ಎದ್ದು ಬಾಬಾಸಾಹೇಬರ ಫೋಟೊಗೆ ಸಂಪ್ರದಾಯವೆಂಬಂತೆ ಹೂ ಮಾಲೆ ಹಾಕಿ ನಂತರ ವರ್ಷಪೂರ್ತಿ ಮಲಗಿಬಿಡುವ ಸಂಘಗಳು ಹಾಗೂ ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್‌ಹೆಡ್ ಸಂಘಗಳ ನಡುವೆ ಸರಕಾರಿ ಇಲಾಖೆಗಳಲ್ಲಿ ಸ್ಥಾಪಿತಗೊಳ್ಳುವ ಅಂಬೇಡ್ಕರ್ ಹೆಸರಿನ/ ಇಲಾಖೆಗಳ ಹೆಸರಿನ ಎಸ್‌ಸಿ/ಎಸ್‌ಟಿ ಅಧಿಕಾರಿ/ನೌಕರರ ಸಂಘಗಳು ನೇಮಕಾತಿ, ಭಡ್ತಿ, ಆಯಕಟ್ಟಿನ ಸ್ಥಳ, ವರ್ಗಾವಣೆಗಳಿಗೆ ಸೀಮಿತವಾಗುಳಿದರೆ, ಕೆಲವೊಮ್ಮೆ ಆಡಳಿತ ಮಂಡಳಿಗಳು ಅಂಬೇಡ್ಕರ್ ಜಯಂತಿಗೆ ನೀಡುವ ಆರ್ಥಿಕ ನೆರವಿನಿಂದ ಒಂದಷ್ಟು ಸನ್ಮಾನ, ಭಾಷಣಗಳ ಭೋರ್ಗರೆತ, ಹಾಡು, ಕುಣಿತಗಳಿಗೆ ಮನಸೋತು ಅಂಬೇಡ್ಕರ್‌ಗೆ ಜೈ ಎಂದುಬಿಟ್ಟರೆ ಸಾಕೆ? ಅದರಿಂದ ಸಮುದಾಯದ ಹಿತಾಸಕ್ತಿ ಮತ್ತು ಆತ್ಮಗೌರವವನ್ನು ಎತ್ತಿಹಿಡಿಯುವ ಸಾಮಾಜಿಕ ಹೋರಾಟದ ರಥವನ್ನು ಮುನ್ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ನಾವಿಂದು ಚಿಂತಿಸಬೇಕಾಗಿದೆ.

ಕಾರಣ, ಬಾಬಾಸಾಹೇಬರ ಅವಿರತ ಹೋರಾಟದ ನಂತರವೂ ಅಸ್ಪಶ್ಯತೆ ಕೊನೆಯಾಗಲಿಲ್ಲ, ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳಿಗೆ ಕಡಿವಾಣ ಬೀಳಲಿಲ್ಲ, ಸಾಮಾಜಿಕ ನ್ಯಾಯ ವಂಚಿತರ ವೇದನೆ ಮುಗಿದಿಲ್ಲ, ಸಂವಿಧಾನದ ಆಶಯಗಳನ್ನು ಕಾಪಾಡುವ ಹೊಣೆಗಾರಿಕೆಗೆ ಶಕ್ತಿ ಬರಲಿಲ್ಲ. ಆದರೆ, ನಮ್ಮ ಸಂಘಗಳು, ಜಯಂತಿಗಳು, ಉತ್ಸವಗಳು, ಪ್ರಶಸ್ತಿ ಸನ್ಮಾನಗಳು ಯಾವ ಉದ್ದೇಶ ಸಾಧನೆಗೆ ಪೂರಕವಾಗಿವೆ ಎಂಬುದರ ಆತ್ಮಾವಲೋಕನ ನಮ್ಮೆಲ್ಲರಲ್ಲೂ ಅಗತ್ಯವಿದೆ. ಬಾಬಾಸಾಹೇಬರು ಸ್ಥಾಪಿಸುತ್ತಿದ್ದ ಸಂಘಟನೆಗಳಾಗಲಿ, ಪತ್ರಿಕೆಗಳಾಗಲಿ ಅಥವಾ ಹೋರಾಟಗಳಾಗಲಿ ಅವೆಲ್ಲವೂ ಇಡೀ ಸಮುದಾಯದ ಆತ್ಮಗೌರವವನ್ನು, ಸ್ವಾಭಿಮಾನವನ್ನು ಎತ್ತಿಹಿಡಿಯುವ, ಜಾತ್ಯತೀತ ಸಮಾಜ ನಿರ್ಮಾಣದ ಆಶಯವುಳ್ಳ ಹಾಗೂ ತೀವ್ರ ಹೋರಾಟಗಳ ಮೂಲಕ ಸಾಮಾಜಿಕ ನ್ಯಾಯವನ್ನು ಪಡೆಯುವ ಸಲುವಾಗಿ ರೂಪುಗೊಳ್ಳುತ್ತಿದ್ದವೆಂಬುದು ಸ್ಮರಣೀಯ.

ಆದರೆ, ಅವರ ಹೆಸರಿನಲ್ಲಿ ನಾವಿಂದು ಸ್ಥಾಪಿಸುತ್ತಿರುವ ಸಂಘಗಳ ಗುರಿ ಏನು? ಸಾಗಬೇಕಾದ ದಿಕ್ಕು ಯಾವುದು? ಎಂಬುದರ ಬಗ್ಗೆ ಅರ್ಥೈಸಿಕೊಳ್ಳಬೇಕಾಗಿದೆ. ಈ ಸಮುದಾಯಕ್ಕೆ ಅವಶ್ಯವಾಗಿ ಬೇಕಾದ ವಿದ್ಯೆ, ಉದ್ಯೋಗ, ವಸತಿ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ದೊರಕಿಸಿಕೊಡುವಂತಾಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮುದಾಯದ ಉನ್ನತಿಗೆ ರೂಪಿಸುವ ಪ್ರತೀ ವರ್ಷದ ಆಯವ್ಯಯದ ಪ್ರತೀ ಪೈಸೆಯೂ ಈ ಸಮಾಜದ ಸಾಮಾಜಿಕ, ಆರ್ಥಿಕ ಅಭ್ಯುದಯಕ್ಕೆ ನೆರವಾದರೆ ಆಗ ಮಾತ್ರ ದಲಿತೋದ್ಧಾರ ಎಂಬ ಮಾತಿಗೆ ಮೌಲ್ಯ ಸಿಕ್ಕೀತು

Similar News