2023-24ರ ಕೇಂದ್ರ ಬಜೆಟ್: ಕೊಟ್ಟದ್ದೆಷ್ಟು? ಕಳೆದದ್ದೆಷ್ಟು?
2023-24ರ ಮುಂಗಡ ಪತ್ರವು ಪ್ರಮುಖವಾಗಿ ಮೋದಿ ಸರಕಾರದ ಬಂಡವಾಳಶಾಹಿ ನೀತಿಯ ಪ್ರತೀಕ ಹಾಗೂ ರೈತ ಮತ್ತು ಬಡವರ ವಿರೋಧವೂ ಆಗಿದೆ. ದೇಶದ ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಯಾವ ನೀಲನಕ್ಷೆಯನ್ನೂ ಅದು ಹೊಂದಿಲ್ಲ. ಮುಖ್ಯವಾಗಿ, ಮುಂಗಡ ಪತ್ರದಲ್ಲಿ ವಿವಿಧ ಕ್ಷೇತ್ರಗಳಿಗೆ ಮೀಸಲಾಗಿಟ್ಟಿರುವ ಹಣವು ಮುಂದುವರಿಯುತ್ತವೋ ಅಥವಾ ಪರಿಷ್ಕೃತ ಅಂದಾಜುಗಳು ತಯಾರಾದಾಗ ಇಳಿಕೆಯಾಗುತ್ತವೋ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.
ಕೆಲವು ದಿನಗಳ ಹಿಂದೆ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಮುಂಗಡ ಪತ್ರವನ್ನು ಮಂಡಿಸಿದರು. ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳಿಗೆ ಕೊಟ್ಟಿರುವ ಅನುದಾನಗಳನ್ನು ಗಮನಿಸಿದರೆ, ಅದು ಪ್ರಧಾನ ಮಂತ್ರಿಯವರ ಮುಂಗಡ ಪತ್ರ ಎನ್ನಿಸುತ್ತದೆ. ಈ ಮುಂಗಡ ಪತ್ರ ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದಲೇ ರಚಿಸಲ್ಪಟ್ಟಿದೆ ಎಂದು ಅನ್ನಿಸುತ್ತದೆ! ಅವರು ತಮ್ಮ ಮುಂಗಡ ಪತ್ರವು ‘ಅಮೃತ ಕಾಲ’ದ ದೃಷ್ಟಿಯನ್ನು ಹೊಂದಿದೆ ಎಂದು ವಿವರಿಸಿದರು. ಆದರೆ, ಅವರು ಸರಕಾರ ಎದುರಿಸುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ಬಗ್ಗೆ ಕಿಂಚತ್ತೂ ಪ್ರಸ್ತಾವಿಸಲಿಲ್ಲ. ಆದರೆ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋಲಿಸಿದರೆ, ಅಮೃತ ಕಾಲವು ಒಂದು ಮರೀಚಿಕೆ ಎನ್ನಿಸುತ್ತದೆ.
ಆದರೂ, ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಹಣದುಬ್ಬರದ ಅವಳಿ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಲು ಒತ್ತಾಯಿಸಿದಾಗ ಸಚಿವರು ಮೂಲಸೌಕರ್ಯ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಿರುವುದರ ಪರಿಣಾಮವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ವಾದಿಸಿದರು. ಆದರೆ, ‘ವೈಟ್ ಕಾಲರ್’ ಮತ್ತು ಸಂಬಂಧಿತ ಉದ್ಯೋಗಗಳನ್ನು ಸೃಷ್ಟಿಸಲು ತಮ್ಮ ಸರಕಾರದ ಹೆಜ್ಜೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಏಕಲವ್ಯ ಮಾದರಿಯ ಶಾಲೆಗಳು 38,000 ಅಧ್ಯಾಪಕರನ್ನು ನೇಮಕ ಮಾಡುತ್ತವೆ ಎನ್ನುವ ಮುಂಗಡ ಪತ್ರದ ಭರವಸೆ ಪೂರ್ಣವಾಗಿ ಸಾಕಾರಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಣದುಬ್ಬರಕ್ಕೆ ಸಂಬಂಧಿಸಿದಂತೆ, ಶ್ರೀಮತಿ ಸೀತಾರಾಮನ್ ಅವರು ಸಗಟು ಮತ್ತು ಚಿಲ್ಲರೆ ಹಣದುಬ್ಬರ ಎರಡರಲ್ಲೂ ಇಳಿಕೆಯಾಗಿದೆ ಎಂದು ಹೆಮ್ಮೆಯಿಂದ ಘೋಷಿಸಿದರು. ಆದರೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಪೆಟ್ರೋಲ್, ಡೀಸೆಲ್, ಆಹಾರ ಧಾನ್ಯಗಳು, ತರಕಾರಿಗಳು ಇತ್ಯಾದಿಗಳ ಬೆಲೆಯಲ್ಲಿ ಇಳಿಕೆಯಾಗಿಲ್ಲ ಎಂಬುದು ಸತ್ಯ. ಎಪ್ರಿಲ್‌ನಲ್ಲಿ ಬಜೆಟ್ ಜಾರಿಗೆ ಬಂದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಕಡಿತವು ಜನಸಾಮಾನ್ಯರಿಗೆ ತಲುಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
ಮುಂಗಡ ಪತ್ರದಲ್ಲಿನ ಹಣಕಾಸು ಹಂಚಿಕೆಯನ್ನು ಕಳೆದ ಸಾಲಿನ ಹಂಚಿಕೆಗಳಿಗೆ ಹೋಲಿಸುವುದು ಈ ಲೇಖನದ ಉದ್ದೇಶವಾಗಿದೆ ಏಕೆಂದರೆ, ಆ ಹೋಲಿಕೆಯ ಆಧಾರದ ಮೇರೆಗೆ 2023-24ರ ಮುಂಗಡ ಪತ್ರದ ಹಂಚಿಕೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎನ್ನುವ ನೈಜ ಚಿತ್ರಣ ಸಿಗಲು ಸಾಧ್ಯ.
ಬಜೆಟ್‌ನಲ್ಲಿ ಗುರುತಿಸಲಾದ ಪ್ರಮುಖ ಕ್ಷೇತ್ರಗಳ ವಿವರಣೆಯನ್ನು ಗಮನಿಸಿದರೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮಕ್ಕಾಗಿ, 2022-23ರ ಮುಂಗಡ ಪತ್ರದಲ್ಲಿದ್ದ ರೂ. 73,000 ಕೋಟಿ, 2023-24ರಲ್ಲಿ ರೂ. 60,000 ಕೋಟಿಗೆ ಕಡಿಮೆಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನರೇಗಾ ಯೋಜನೆಗೆ ಮೀಸಲಾಗಿಡಲಾದ ಅತ್ಯಂತ ಕಡಿಮೆ ಮೊತ್ತ. ಉದ್ಯೋಗ ಯೋಜನೆಯು ಜನವರಿ 31ರಂದು ಕೇವಲ 6.5 ಪ್ರತಿಶತದಷ್ಟಿದೆ ಎಂಬ ಅಂಶವನ್ನು ಗಮನಿಸಿದರೆ ಇದು ನಿಜವಾಗಿಯೂ ಖಂಡನೀಯ. ನರೇಗಾ ಮುಖ್ಯಸ್ಥ ನಿಖಿಲ್ ಡೇ ಅವರು ಬಜೆಟ್ ಹಂಚಿಕೆಯಲ್ಲಿನ ಕಡಿತವನ್ನು ತೀವ್ರವಾಗಿ ಖಂಡಿಸಿದ್ದಾರೆ. 2022-23ರಲ್ಲಿ ರೂ. 1,810 ಕೋಟಿಯಷ್ಟಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮದ ಮೊತ್ತ ರೂ. 610 ಕೋಟಿಗೆ ಇಳಿದಿದ್ದು, ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಬಿಜೆಪಿ ಸರಕಾರ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದರ ಸಂಕೇತವಾಗಿದೆ. ಸಂತಸದ ಸಂಗತಿಯೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರ ದುರ್ಬಲ ವರ್ಗಗಳಿಗೆ ಹಂಚಿಕೆ ಹೆಚ್ಚಾಗಿದೆ. ಈ ಬಜೆಟ್‌ನ ವೈಶಿಷ್ಟ್ಯವೆಂದರೆ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ರೂ. 4,000 ಕೋಟಿಗಳನ್ನು ಮೀಸಲಿಡಲಾಗಿದೆ, ಬಹುಶಃ, ಇದೇ ವರ್ಷದಲ್ಲಿ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಎಸ್‌ಸಿ, ಎಸ್‌ಟಿ ಮತದಾರರನ್ನು ಓಲೈಸುವ ದೃಷ್ಟಿಯಿಂದ ಹೆಚ್ಚಳ ಮಾಡಿರಬಹುದು ಎನ್ನಿಸುತ್ತದೆ.
‘ಆಯುಷ್ಮಾನ್ ಭಾರತ್’ ಯೋಜನೆಯಡಿ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ 2022-23ರಲ್ಲಿನ ರೂ. 6,457 ಕೋಟಿಗಳಿಂದ 2023-24ರ ಬಜೆಟ್‌ನಲ್ಲಿ ರೂ. 7,200 ಕೋಟಿಗಳಿಗೆ ಏರಿಕೆಯಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗಾಗಿ ಹಂಚಿಕೆಯು 2022-23ರ ರೂ. 48,000 ಕೋಟಿಗಳಿಂದ ರೂ. 79,590 ಕೋಟಿಗೆ ಏರಿಕೆಯಾಗಿದೆ. ಆದರೂ 2022-23ರ ಪರಿಷ್ಕೃತ ಅಂದಾಜಿನ ಪ್ರಕಾರ ರೂ. 77,130 ಕೋಟಿಗಳಷ್ಟಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಈ ಬಜೆಟ್‌ನಲ್ಲಿ ರೂ. 19,000 ಕೋಟಿಗಳ ಹಂಚಿಕೆಯು ಮುಂದುವರಿದಿದೆ. ಆದರೆ, ವ್ಯವಸಾಯಕ್ಕೆ ಸಂಬಂಧಿಸಿದಂತೆ ಹಿಂದಿನ ಮುಂಗಡ ಪತ್ರಕ್ಕಿಂತ ಸ್ವಲ್ಪವೇ ಏರಿಕೆಯಾಗಿದೆ. ಇದು ಮೋದಿ ಸರಕಾರವು ರೈತರ ಬಗ್ಗೆ ಅನುಸರಿಸುತ್ತಿರುವ ಡೋಂಗಿ ನೀತಿಯನ್ನು ಬಿಂಬಿಸುತ್ತದೆ. ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಹಂಚಿಕೆಯೂ 2022-23ರ ರೂ. 930 ಕೋಟಿ ಅಂಕಿಅಂಶದಿಂದ ರೂ. 759 ಕೋಟಿಗೆ ಇಳಿದಿದೆ. ಇದು ನಿಜಕ್ಕೂ ಶೋಚನೀಯವಾಗಿದ್ದು ಸರಕಾರದ ಘೋಷಿತ ಕಾಳಜಿಗೆ ವಿರುದ್ಧ್ದವಾಗಿದೆ. ಅಂತೆಯೇ, ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಹಂಚಿಕೆಯು ಸುಮಾರು ರೂ. 500 ಕೋಟಿಗಳಷ್ಟು ಕುಸಿತ ಕಂಡಿದೆ; ರಾಷ್ಟ್ರೀಯ ಜೀವನೋಪಾಯ ಮಿಷನ್ ಕೂಡ ಸುಮಾರು 150 ಕೋಟಿಗಳಷ್ಟು ಕಡಿತವನ್ನು ಕಂಡಿದೆ. ಅಂತೆಯೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ (ಪಿಎಂಕಿಸಾನ್) ಹಂಚಿಕೆಯು ರೂ. 68,000 ಕೋಟಿಗಳಿಂದ ರೂ. 60,000 ಕೋಟಿಗಳಿಗೆ ಇಳಿದಿದೆ. ಇದೂ ಖಂಡನಾರ್ಹವಾಗಿದ್ದು, ರೈತರ ವಿರುದ್ಧವಾಗಿದೆ. ರಾಷ್ಟ್ರೀಯ ಶಿಕ್ಷಣ ಮಿಷನ್‌ನ ಹಂಚಿಕೆಯನ್ನು ರೂ. 39,553 ಕೋಟಿಗಳಿಂದ ರೂ. 38,953ಕ್ಕೆ ಇಳಿಸಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ, ಬಜೆಟ್‌ನಲ್ಲಿ ಒಟ್ಟಾರೆ ಹಂಚಿಕೆಯು ಶೇ.13ರಷ್ಟು ಹೆಚ್ಚಳವಾಗಿದೆ. ಆದರೆ, 2022-23ರ ಬಜೆಟ್‌ನ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ, ಹೆಚ್ಚಳವು ಸುಮಾರು ರೂ.10,000 ಕೋಟಿ ಮಾತ್ರವಾಗಿದ್ದು ಪ್ರಸಕ್ತ ರೂ. 1,12,899 ಕೋಟಿಗಳಷ್ಟಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ, ಎರಡಕ್ಕೂ ಸೇರಿದಂತೆ ಈ ಮೊತ್ತವು ಅತ್ಯಂತ ಕಡಿಮೆ. ಇದರಿಂದ ಶಿಕ್ಷಣದ ಗುಣ ಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಮೂಲ ಸೌಕರ್ಯಕ್ಕೆ, ವಿಶೇಷವಾಗಿ ರೈಲ್ವೆಗೆ ಸಂಬಂಧಿಸಿದಂತೆ ಮುಂಗಡ ಪತ್ರದಲ್ಲಿ ಹೆಚ್ಚಿನ ಮೊತ್ತವನ್ನು ಕಾದಿರಿಸಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ರೂ. 5.4 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ, ಆ ಹಣದ ಬಹುಪಾಲು ಸಂಬಳ ಮತ್ತು ಪಿಂಚಣಿಗೇ ವಿನಿಯೋಗವಾಗಲಿದೆ. ಕೇವಲ ರೂ. 1.62 ಲಕ್ಷ ಕೋಟಿ ಮಾತ್ರ ಮಿಲಿಟರಿ ಆಧುನೀಕರಣಕ್ಕೆ ಖರ್ಚಾಗಲಿದೆ. ದೇಶವು ಚೀನಾ ಮತ್ತು ಇತರ ಮೂಲಗಳಿಂದ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಹಿಮ್ಮೆಟ್ಟಿಸಲು ಈ ಮೊತ್ತ ಸಹಾಯಕವಾಗಬಲ್ಲದೇ ಎನ್ನುವುದರ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.
ಅಂತಿಮವಾಗಿ ಹೇಳುವುದಾದರೆ, 2023-24ರ ಮುಂಗಡ ಪತ್ರವು ಪ್ರಮುಖವಾಗಿ ಮೋದಿ ಸರಕಾರದ ಬಂಡವಾಳಶಾಹಿ ನೀತಿಯ ಪ್ರತೀಕ ಹಾಗೂ ರೈತ ಮತ್ತು ಬಡವರ ವಿರೋಧವೂ ಆಗಿದೆ. ದೇಶದ ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಯಾವ ನೀಲನಕ್ಷೆಯನ್ನೂ ಅದು ಹೊಂದಿಲ್ಲ. ಮುಖ್ಯವಾಗಿ, ಮುಂಗಡ ಪತ್ರದಲ್ಲಿ ವಿವಿಧ ಕ್ಷೇತ್ರಗಳಿಗೆ ಮೀಸಲಾಗಿಟ್ಟಿರುವ ಹಣವು ಮುಂದುವರಿಯುತ್ತವೋ ಅಥವಾ ಪರಿಷ್ಕೃತ ಅಂದಾಜುಗಳು ತಯಾರಾದಾಗ ಇಳಿಕೆಯಾಗುತ್ತವೋ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.
-ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಮಾಜಿ ಪ್ರಾಧ್ಯಾಪಕರು.