ಮತ್ತೆ ಬೇಸಿಕ್ ಫೋನ್ ಕಡೆಗೆ ಜನರ ಒಲವು?!
ಹೇಳಿಕೇಳಿ ಇದು ಸ್ಮಾರ್ಟ್ ಫೋನ್ ಕಾಲ. ಸ್ಮಾರ್ಟ್ ಫೋನ್ ಖರೀದಿಸುವುದೆಂದರೆ ಕಚೇರಿಗೆ ಒಂದು ಅತ್ಯಾಧುನಿಕ ಕಂಪ್ಯೂಟರ್ ಖರೀದಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳಿರುತ್ತವೆ. ದಿನಕ್ಕೊಂದು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುತ್ತವೆ. ಆದರೆ ಸ್ಮಾರ್ಟ್ ಫೋನ್‌ಗಳ ಈ ಮುಗಿಯದ ಕ್ರೇಜ್ ನಡುವೆಯೇ ಹಳೆಯ ಬೇಸಿಕ್ ಫೋನ್‌ಗಳ ಕಡೆ ಮತ್ತೊಮ್ಮೆ ಜನರು ಮನಸ್ಸು ಮಾಡತೊಡಗಿದ್ದಾರೆ. ಇದು ನಿಜವಾಗಿಯೂ ವಿಶೇಷ ಬೆಳವಣಿಗೆ. 90ರ ದಶಕ ಹಾಗೂ 2000ದ ಆರಂಭಿಕ ವರ್ಷಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದ ಬೇಸಿಕ್ ಫೋನ್‌ಗಳನ್ನು ಯುವಜನ ಡಂಬ್ ಫೋನ್ ಎಂದು ಕರೆಯುತ್ತಾರೆ.
ಅತಿ ಕಡಿಮೆ ಫೀಚರ್‌ಗಳುಳ್ಳ ಇವುಗಳಲ್ಲಿ ಕಾಲ್ ಮಾಡುವುದು, ಕಾಲ್ ಸ್ವೀಕರಿಸುವುದು, ಎಸ್‌ಎಂಎಸ್ ಮಾಡುವ ಆಯ್ಕೆ ಇರುತ್ತವೆ. ಆದರೆ ಈಗ ಎಲ್ಲರಿಗೂ ತೀರಾ ಅನಿವಾರ್ಯ ಎಂಬಂತಾಗಿರುವ ಇಂಟರ್‌ನೆಟ್ ಇವುಗಳಲ್ಲಿ ಸಿಗದು. ಕೆಲವು ಬೇಸಿಕ್ ಫೋನ್‌ಗಳಲ್ಲಿ ರೇಡಿಯೋ ಕೇಳಿ ಆಹ್ಲಾದಿಸಬಹುದು. ಸೋಷಿಯಲ್ ಮೀಡಿಯಾ ಇದರಲ್ಲಿಲ್ಲ. 2000 ಇಸವಿಗಿಂತ ಮೊದಲು ಬಹಳ ಬಳಕೆಯಲ್ಲಿದ್ದವುಗಳೆಲ್ಲ ಬೇಸಿಕ್ ಫೋನ್‌ಗಳೇ. ಈಗ ಮತ್ತೆ ಸಾಕಷ್ಟು ಮಂದಿಯ ಕೈಗೆ ಈ ಬೇಸಿಕ್ ಫೋನ್‌ಗಳು ಬಂದಿವೆ ಎನ್ನುವುದು ಹೊಸ ಸುದ್ದಿ.
ಇವತ್ತು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಸ್ಮಾರ್ಟ್ ಫೋನ್ ನಮ್ಮನ್ನೇ ನಿಯಂತ್ರಿಸುವ ಮಟ್ಟಕ್ಕೆ ತಲುಪಿವೆ. ನಾವು ಅದನ್ನು ಬಳಸುತ್ತಿದ್ದೇವೆಯೇ ಅಥವಾ ಅದೇ ನಮ್ಮನ್ನು ನುಂಗಿ ಹಾಕಿದೆಯೇ ಎಂಬ ಮಟ್ಟಕ್ಕೆ ನಾವು ಸ್ಮಾರ್ಟ್ ಫೋನ್‌ನಲ್ಲಿ ಮೈಮರೆತಿದ್ದೇವೆ. ಅದರಿಂದ ಸುಲಭವಾಗಿ, ವೇಗವಾಗಿ ಸಾಕಷ್ಟು ಕೆಲಸ ಆಗುತ್ತದೆಂಬುದು ಹೌದು. ಆದರೆ ಸ್ಕ್ರೋಲ್ ಮಾಡಿದಷ್ಟೂ ಬರುವ ವೀಡಿಯೊಗಳು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ನಮ್ಮ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಬದುಕನ್ನೇ ಬದಲಾಯಿಸಿಬಿಟ್ಟಿವೆ. ಖಿನ್ನತೆಯಂತಹ ರೋಗಗಳಿಗೆ ಕಾರಣವಾಗುತ್ತಿವೆ. ನಮ್ಮ ಮಕ್ಕಳು ಸ್ಮಾರ್ಟ್ ಫೋನ್ ಇಲ್ಲದೆ ಬದುಕೇ ಇಲ್ಲ ಎಂಬಂತಾಗಿಬಿಟ್ಟಿದ್ದಾರೆ.
ಅವರಿಗೆ ಶಿಕ್ಷಣ, ಆಟ, ವಿನೋದ, ಮನರಂಜನೆ, ಮಿತ್ರ ಎಲ್ಲವೂ ಅದೇ ಆಗಿಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಹಾಗಾಗಿಯೇ ಸ್ಮಾರ್ಟ್ ಫೋನ್ ಬಿಟ್ಟು ಹಳೆಯ ಬೇಸಿಕ್ ಫೋನ್ ಅಥವಾ ಡಂಬ್ ಫೋನ್ ಕಡೆ ಮತ್ತೊಮ್ಮೆ ಜನರು ಮನಸ್ಸು ಮಾಡತೊಡಗಿದ್ದಾರೆ. ನೋಕಿಯಾದ ಅತಿಹೆಚ್ಚು ಮಾರಾಟವಾದ ಮೊಬೈಲ್ ಎಂಬ ಖ್ಯಾತಿ ಗಳಿಸಿದ್ದ 3310 ಹ್ಯಾಂಡ್‌ಸೆಟ್ 2017ರಲ್ಲಿ ರೀಲಾಂಚ್ ಆದಾಗ ಈ ಬೇಸಿಕ್ ಫೋನ್‌ಗಳ ಮರುಹುಟ್ಟೇ ಆದಹಾಗಾಯ್ತು. ಅದು ಕೈಗೆಟಕುವ ಬೆಲೆಯಲ್ಲಿಯೇ ಸ್ಮಾರ್ಟ್ ಫೋನ್‌ಗಳಿಗೆ ಪರ್ಯಾಯವನ್ನು ಕೊಟ್ಟಿತು. ಮೊಬೈಲ್ ಮಾರುಕಟ್ಟೆಯಲ್ಲಿ ಅವು ದೊಡ್ಡ ಜಾಗವನ್ನೇ ಪಡೆದವು. ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬರುವಷ್ಟು ಗುಣಮಟ್ಟದ ಲಾಂಗರ್ ಬ್ಯಾಟರಿ ಲೈಫ್, ಹೆಚ್ಚು ಬಾಳಿಕೆ ಮತ್ತು ಕಡಿಮೆ ದರದ ಕಾರಣಕ್ಕಾಗಿಯೇ ಮನೆಮಾತಾದವು.
ಇಂಗ್ಲೆಂಡ್‌ನಂತಹ ದೇಶದಲ್ಲಿ 2021ರಲ್ಲಿ ಪ್ರತೀ ಹತ್ತು ಮಂದಿಯ ಪೈಕಿ ಒಬ್ಬರಲ್ಲಿ ಬೇಸಿಕ್ ಫೋನ್ ಬಳಕೆಯಲ್ಲಿತ್ತು. ಬೇಸಿಕ್ ಫೋನ್‌ಗಳ ಬೆಲೆ ಅಬ್ಬಬ್ಬಾ ಎಂದರೆ 8 ಪೌಂಡ್ ಅಂದರೆ ಸುಮಾರು 800 ರೂ. ಭಾರತದಲ್ಲಿಯೂ ರೂ. 1,500ಕ್ಕಿಂತ ಕಡಿಮೆ ಬೆಲೆಗೆ ಈ ಫೋನ್‌ಗಳು ಸಿಗುತ್ತವೆ.
ಈಚಿನ ಕೆಲವು ಅಧ್ಯಯನಗಳು ಹೇಳುತ್ತಿರುವ ಪ್ರಕಾರ, ಸ್ಮಾರ್ಟ್ ಫೋನ್‌ಗಳ ಮಾರಾಟ ಕಡಿಮೆಯಾಗುತ್ತಿದೆ. ಫೀಚರ್ ಫೋನ್‌ಗಳಿಂದ ಸ್ಮಾರ್ಟ್ ಫೋನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿರುವವರ ಸಂಖ್ಯೆ ಕುಸಿಯುತ್ತಿದೆ. 2018ರಿಂದ 2021ರ ನಡುವೆ ಬೇಸಿಕ್ ಫೋನ್‌ಗಳ ಗೂಗಲ್ ಸರ್ಚ್ ಶೇ. 89 ಹೆಚ್ಚಾಗಿದೆ. ಇವತ್ತು ಭಾರತದಲ್ಲಿ 35 ಕೋಟಿಗೂ ಹೆಚ್ಚು ಮಂದಿ ಈ ಬೇಸಿಕ್ ಅಥವಾ ಡಂಬ್ ಫೋನ್ ಬಳಸುತ್ತಿದ್ದಾರೆ ಎನ್ನುತ್ತಿವೆ ವರದಿಗಳು. ಕಳೆದ ವರ್ಷ 3.5 ಕೋಟಿ ಭಾರತೀಯರು ಮಾತ್ರವೇ ಹೊಸದಾಗಿ ಸ್ಮಾರ್ಟ್ ಫೋನ್‌ಗಳ ಕಡೆ ಹೋಗಿದ್ದಾರೆ. 2 ವರ್ಷಗಳ ಹಿಂದೆ ಈ ಸಂಖ್ಯೆ 6 ಕೋಟಿ ಇತ್ತು.
ಜಾಗತಿಕವಾಗಿಯೂ ಈ ಬೇಸಿಕ್ ಫೋನ್‌ಗಳ ಮಾರಾಟದಲ್ಲಿ ಹೆಚ್ಚಳ ಕಾಣುತ್ತಿರುವುದನ್ನು ವರದಿಗಳು ತೋರಿಸುತ್ತವೆ, 2019ರಲ್ಲಿ 40 ಕೋಟಿ ಬೇಸಿಕ್ ಫೋನ್‌ಗಳು ಮಾರಾಟವಾಗಿದ್ದರೆ, 2021ರಲ್ಲಿ 100 ಕೋಟಿಗೆ ಈ ಪ್ರಮಾಣ ಹೆಚ್ಚಿದೆ.
ಹೀಗೆ ಸ್ಮಾರ್ಟ್ ಫೋನ್‌ಗಳ ಮಾರಾಟ ತಗ್ಗುತ್ತಿರುವುದಕ್ಕೆ ಹಣದುಬ್ಬರದಂಥ ಕಾರಣಗಳಿದ್ದರೂ ಇರಬಹುದು. ಆದರೆ, ಜನರಿಗೆ ಸ್ಮಾರ್ಟ್ ಫೋನ್‌ಗಳ, ಸೋಷಿಯಲ್ ಮೀಡಿಯಾದ ಮಾಯಾ ಜಾಲದಿಂದ ಬಿಡಿಸಿಕೊಳ್ಳಬೇಕು ಎನ್ನಿಸುತ್ತಿರುವುದು ಮಾತ್ರ ಸುಳ್ಳಲ್ಲ. ಬೇಕಾದ ಮಾಹಿತಿಯನ್ನು ಸ್ವಲ್ಪತಡವಾಗಿಯೂ ಕಂಪ್ಯೂಟರ್ ಮುಂದೆ ಕೂತು ಪಡೆಯಬಹುದು, ಅದಕ್ಕಾಗಿ ನಮ್ಮನ್ನು ನಾವೇ ಸ್ಮಾರ್ಟ್ ಫೋನ್ ಗುಲಾಮರಾಗಿಸಿಕೊಳ್ಳುವುದು ಬೇಡ ಅನ್ನುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಕ್ ಫೋನ್‌ಗಳಿಂದ ನಮ್ಮ ಖಾಸಗಿತನ ಉಳಿಯುತ್ತದೆ ಎಂಬ ವಾದ ಜೋರಾಗಿ ಕೇಳಿ ಬರುತ್ತಿದೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಬುದ್ಧಿಮತ್ತೆಯ, ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ನೂರಾರು ವರದಿಗಳು ಹೇಳುತ್ತಿವೆ.
ಅಗತ್ಯ ವಿಷಯಗಳ ಮೇಲಿನ ಏಕಾಗ್ರತೆ ಕಡಿಮೆ ಮಾಡುತ್ತಿವೆ ಎನ್ನುತ್ತಿವೆ ಅಧ್ಯಯನಗಳು. ಸೋಷಿಯಲ್ ಮೀಡಿಯಾ ಹುಟ್ಟುಹಾಕಿರುವ ಭ್ರಮಾಲೋಕ ಕೂಡ ಆರೋಗ್ಯದ ಮೇಲೆ ತೀವ್ರ ಹಾನಿ ಉಂಟುಮಾಡುತ್ತಿದೆ. ಲೈಕುಗಳು, ಶೇರುಗಳು, ಕಮೆಂಟುಗಳು, ಸ್ಕ್ರೋಲ್ ಮಾಡಿದಷ್ಟೂ ಬರುವ ಫೀಡುಗಳ ವ್ಯೆಹದಲ್ಲಿ ಸಿಲುಕುವ ಮನುಷ್ಯನ ಮೇಲೆ ಹಿಡಿತ ಸಾಧಿಸುವ ಸ್ಮಾರ್ಟ್ ಫೋನ್‌ಗಳು ನೆಮ್ಮದಿಯನ್ನೇ ಕಸಿದುಕೊಳ್ಳುತ್ತಿವೆ. ಅಮೂಲ್ಯ ಸಮಯವನ್ನು ಕೆಲಸಕ್ಕೆ ಬಾರದ್ದರಲ್ಲಿ ಹಾಳುಮಾಡುವಂತಾಗಿದೆ. ಸ್ಮಾರ್ಟ್ ಫೋನ್‌ಗಳ ಮೇಲೆ ಸುರಿಯುವ ದುಡ್ಡು ಕೂಡ ಸಣ್ಣ ಮೊತ್ತದ್ದಲ್ಲ. ಸಂಬಂಧಿಗಳ ಬಳಿ, ಸ್ನೇಹಿತರ ಬಳಿ ಲೇಟೆಸ್ಟ್ ಎಡಿಷನ್ ಇದೆ. ನಮ್ಮ ಬಳಿ ಇರುವುದು ಹಳೆಯದು... ಈ ಥರದ ಕೀಳರಿಮೆಯಲ್ಲಿ ಕೆಟ್ಟ, ಅನಗತ್ಯ ಪೈಪೋಟಿಗಿಳಿಸುತ್ತದೆ. ಫ್ರೀ ಆ್ಯಪ್‌ಗಳ ಹೆಸರಲ್ಲಿ ನಮ್ಮ ಖಾಸಗಿತನವನ್ನೇ ಮಾರಾಟ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇಷ್ಟೆಲ್ಲ ಆದಮೇಲೆ ಸಿಗುವುದು ಏನು ಎಂದು ಕೇಳಿಕೊಂಡರೆ ಸಮರ್ಥ ಉತ್ತರವಿಲ್ಲ. ಅದಕ್ಕಿಂತ ಹೆಚ್ಚಾಗಿ ನೆಮ್ಮದಿಯೇ ಇರಲಾರದ ಸ್ಥಿತಿ.
ಸ್ಮಾರ್ಟ್ ಫೋನ್ ಬಿಟ್ಟು ಬಿಡುವುದು ಇವತ್ತು ಹೇಳಿದಷ್ಟು ಸುಲಭ ಅಲ್ಲ. ಯಾವುದಾದರೂ ಮಾಹಿತಿ ಹುಡುಕಲು, ಅದನ್ನು ಇನ್ನೊಬ್ಬರಿಗೆ ಕಳಿಸಲು, ಕೂಡಲೇ ಪೇಮೆಂಟ್ ಮಾಡಲು, ಪೇಮೆಂಟ್ ಪಡೆಯಲು, ಲೊಕೇಶನ್ ಹುಡುಕಲು, ಟ್ಯಾಕ್ಸಿ ಬುಕ್ ಮಾಡಲು.... ಹೀಗೆ ತೀರಾ ಸಣ್ಣಪುಟ್ಟ ಕೆಲಸಕ್ಕೂ ಸ್ಮಾರ್ಟ್ ಫೋನ್ ಬೇಕೇ ಬೇಕು ಎಂಬಂತಾಗಿದೆ. ಹಾಗಾಗಿ ಸ್ಮಾರ್ಟ್ ಫೋನ್ ಬಿಟ್ಟು ಬೇಸಿಕ್ ಫೋನ್‌ಗೆ ಹೋಗುವುದು ದೊಡ್ಡ ಸವಾಲು. ಆದರೆ ನೆಮ್ಮದಿಯಾಗಿರಬೇಕು ಎಂದುಕೊಳ್ಳುವವರು ಸ್ಮಾರ್ಟ್ ಫೋನ್‌ಗಳಿಂದ ಸ್ವಲ್ಪಸ್ವಲ್ಪವೇ ದೂರವಾಗುವ ಹಾದಿ ಹುಡುಕತೊಡಗಿದ್ದಾರೆ.
ಬಹಳಷ್ಟು ಜನರು ಈ ಬೇಸಿಕ್ ಫೋನ್ ಕಡೆ ಹೋಗುವ ಸ್ಮಾರ್ಟ್ ಹೆಜ್ಜೆ ಇಟ್ಟಿದ್ದಾರೆ. ಹಾಗಾಗಿ ಮನಸ್ಸಿದ್ದಲ್ಲಿ ಮಾರ್ಗವಿದೆ. ಅಷ್ಟೇ. ಸ್ಮಾರ್ಟ್ ಫೋನ್‌ನಿಂದ ಆಗುವ ತೊಂದರೆಗಳ ಕಾರಣಕ್ಕೆ ಫೋನನ್ನೇ ಬದಲಿಸಬೇಕಿಲ್ಲ. ನಿಮಗೆ ಬೇಡವಾದವುಗಳಿಂದ ದೂರವಿರುವ ಆಯ್ಕೆಯೂ ನಿಮ್ಮದೇ ಆಗಿರುತ್ತದೆ. ಸೋಷಿಯಲ್ ಮೀಡಿಯಾ ನೀವು ಯಾವುದರ ಬಗ್ಗೆ ಕುತೂಹಲ ತೋರಿಸಿದ್ದೀರಿ ಎಂಬುದರ ಆಧಾರದ ಮೇಲೆಯೇ ನಿಮ್ಮ ಮುಂದೆ ಅಂತಹ ಸರಕನ್ನು ತಂದು ರಾಶಿಹಾಕುತ್ತವೆ. ಅದರ ಬದಲು ನೀವೇ ಅವುಗಳ ಬಗ್ಗೆ ಕುತೂಹಲ ತೋರಿಸದಿದ್ದರೆ ಆಯಿತು. ಯಾವ ರೀತಿಯ ಫೋನ್ ಬಳಸುತ್ತೀರಿ ಅನ್ನುವುದಕ್ಕಿಂತ ಅದನ್ನು ಹೇಗೆ ಬಳಸುತ್ತೀರಿ ಅನ್ನೋದು ಮುಖ್ಯ ಎಂಬ ವಾದಗಳೂ ಇನ್ನೊಂದೆಡೆಗಿವೆ.
ಏನೇ ಇರಲಿ, ಬೇಸಿಕ್ ಫೋನ್‌ಗಳತ್ತ ಹೊರಳುವುದು ಸ್ಮಾರ್ಟ್ ಆಯ್ಕೆಯಾಗಬಲ್ಲದು ಎಂಬುದನ್ನಂತೂ ಒಪ್ಪಬಹುದು.