ಪ್ರಭುತ್ವದ ಮೂಗಿನಡಿಯೇ ಹಿಂಸೆಯ ತಲವಾರು ಝಳಪಿಸುವವರು

Update: 2023-02-10 04:36 GMT

ಮೊನ್ನೆಮೊನ್ನೆಯಷ್ಟೇ ದಿಲ್ಲಿ ಕೋರ್ಟ್ ಜಾಮಿಯಾ ವಿವಿ ಬಳಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನು ಬಲಿಪಶು ಮಾಡಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಷಡ್ಯಂತ್ರದ ಆರೋಪ ಹೊರಿಸಿ ಶರ್ಜೀಲ್ ಇಮಾಮ್, ಸಫೂರಾ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತಿತರರನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಜೈಲಿನಲ್ಲಿಡಲಾಯಿತು. ಆದರೆ ಅವರು ತಪ್ಪಿತಸ್ಥರೇ ಅಲ್ಲ, ಅವರು ಹಿಂಸಾಚಾರದಲ್ಲಿ ಭಾಗವಹಿಸಲೇ ಇಲ್ಲ ಎಂದು ಹೇಳಿದ ಕೋರ್ಟ್, ಪೊಲೀಸರು ಆ ಅಮಾಯಕರನ್ನು ಬಲಿಪಶು ಮಾಡಿದ್ದಾರೆಂದು ಹೇಳಿತು. ಮೂರ್ನಾಲ್ಕು ವರ್ಷಗಳಿಂದ ಹಿಂಸೆಯ ಕಳಂಕ ಹೊತ್ತಿದ್ದ ಆ ವಿದ್ಯಾರ್ಥಿ ನಾಯಕರನ್ನು ದೋಷಮುಕ್ತ ಗೊಳಿಸಿತು. ಅದೇ ದಿಲ್ಲಿಯಲ್ಲಿಯೇ ಈಗ ಮತ್ತೊಂದು ಆಘಾತಕಾರಿ ವಿದ್ಯಮಾನ ನಡೆದಿದೆ. ವರದಿಗಳ ಪ್ರಕಾರ, ದಿಲ್ಲಿಯ ಜಂತರ್ ಮಂತರ್‌ನಲ್ಲಿ ರವಿವಾರ ಹಿಂದುತ್ವ ಗುಂಪುಗಳು ಸೇರಿದ್ದ ಕಾರ್ಯಕ್ರಮದಲ್ಲಿ ಮತ್ತೆ ಕ್ರೈಸ್ತರು ಹಾಗೂ ಮುಸಲ್ಮಾನರ ಹತ್ಯಾಕಾಂಡಕ್ಕೆ ಕರೆ ಕೊಡಲಾಗಿದೆ. ಕಾವಿಧಾರಿಯೊಬ್ಬ ‘‘ನೀವು ಯಾವಾಗ ಮುಸ್ಲಿಮರನ್ನೂ, ಕ್ರಿಶ್ಚಿಯನ್ನರನ್ನೂ ಕೊಲ್ಲುತ್ತೀರಿ?’’ ಎಂದು ಹಿಂದೂಗಳನ್ನು ನೇರವಾಗಿ ಕೇಳಿದ್ದಾನೆ.

ಅಷ್ಟಕ್ಕೇ ನಿಲ್ಲುವುದಿಲ್ಲ ಆ ಕಾವಿಧಾರಿಯ ಅಬ್ಬರ. ‘‘ತರಕಾರಿ ಕತ್ತರಿಸುವ ಚಾಕುವಿನಿಂದ ಏನೂ ಆಗೋದಿಲ್ಲ. ತಲವಾರು, ಕತ್ತಿ, ಬಂದೂಕುಗಳನ್ನೂ ಮನೆಮನೆಗಳಲ್ಲೂ ಶೇಖರಿಸಿಡಿ. ಒಂದು ಕೈಯಲ್ಲಿ ಶಸ್ತ್ರವನ್ನೂ ಇನ್ನೊಂದು ಕೈಯಲ್ಲಿ ಶಾಸ್ತ್ರವನ್ನೂ ಇಟ್ಟುಕೊಳ್ಳಿ. ಕ್ರೈಸ್ತರಿರಲಿ, ಮುಸಲ್ಮಾನರಿರಲಿ... ನಮ್ಮ ಸಮಾಜದ ಮೇಲೆ, ನಮ್ಮ ಶಾಸ್ತ್ರಗಳ, ಮಹಿಳೆಯರ ಮೇಲೆ ದಾಳಿ ಮಾಡುವವರ ವಿರುದ್ಧ ದೇಶದ್ರೋಹದ ಕೇಸು ಹಾಕಿ. ಅವರನ್ನು ಗಡಿಯಲ್ಲಿ ಗುಂಡಿಟ್ಟು ಕೊಲ್ಲಿ. ರಸ್ತೆಮಧ್ಯೆಯೇ ಸಾಯಿಸಿ’’ ಎಂಬ ಕರೆ ನೀಡುತ್ತಾನೆ ಆ ಕಾವಿಧಾರಿ.
ಹೀಗೆ ವಿಷ ಕಾರಲಾಗಿರುವುದು, ಹತ್ಯಾಕಾಂಡಕ್ಕೆ ಕರೆಕೊಟ್ಟಿರುವುದು ಧೀರೇಂದ್ರ ಕೃಷ್ಣ ಶಾಸ್ತ್ರಿ ಎಂಬಾತನನ್ನು ಬೆಂಬಲಿಸಿ ನಡೆದ ಕಾರ್ಯಕ್ರಮದಲ್ಲಿ. ತಮ್ಮ ಯೂಟ್ಯೂಬ್ ವೀಡಿಯೊಗಳ ಮೂಲಕ ಮೂಢನಂಬಿಕೆ ಮತ್ತು ದ್ವೇಷವನ್ನು ಹರಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿರುವ ವ್ಯಕ್ತಿ ಆತ.
ಇದೇ ಹೊತ್ತಲ್ಲಿ ಅಲ್ಲಿಯೇ ಇನ್ನೊಂದು ವೇದಿಕೆಯಲ್ಲಿ, ಸುದರ್ಶನ್ ಟಿವಿ ಪ್ರಧಾನ ಸಂಪಾದಕ ಸುರೇಶ್ ಚೌಹಾಂಕೆ ಪರವಾಗಿ ಬಿಜೆಪಿ ಹರ್ಯಾಣ ಘಟಕದ ಮಾಧ್ಯಮ ಸಂಯೋಜಕ ಸೂರಜ್ ಪಾಲ್ ಅಮು ಮಾತನಾಡಿರುವುದೂ ವರದಿಯಾಗಿದೆ. 2021ರಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಕೊಲ್ಲುವ ಮಾತನಾಡಿದ್ದ ಆರೋಪದ ಮೇಲೆ ತನಿಖೆಗೆ ಒಳಪಟ್ಟಿರುವ ವ್ಯಕ್ತಿ ಚೌಹಾಂಕೆ. ಚೌಹಾಂಕೆಯನ್ನು ವಿರೋಧಿಸುವವರ, ಹಿಂದೂ ರಾಷ್ಟ್ರವನ್ನು ವಿರೋಧಿಸುವವರ ವಿರುದ್ಧ ಹಿಂಸಾಚಾರಕ್ಕೆ ಸೂರಜ್ ಪಾಲ್ ಕರೆನೀಡಿರುವ ವೀಡಿಯೊ ಕೂಡ ಹರಿದಾಡುತ್ತಿದೆ.
ಅಚ್ಚರಿಯ ಸಂಗತಿಯೆಂದರೆ, ಇಷ್ಟು ಭಯಂಕರವಾಗಿ ಹಾಡಹಗಲೇ ಬೀದಿಯಲ್ಲೇ ನಿಂತು ಹಿಂಸಾಚಾರಕ್ಕೆ, ಹತ್ಯಾಕಾಂಡಕ್ಕೆ ಕರೆನೀಡಲಾಗಿದ್ದರೂ ದಿಲ್ಲಿ ಪೊಲೀಸರು ಮಾತ್ರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಬಗ್ಗೆ ವರದಿ ಮಾಡಿದ ಒಂದು ಸುದ್ದಿ ಪೋರ್ಟಲ್‌ಗೆ ನೋಟಿಸ್ ಕಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದಕ ಪೋಸ್ಟ್ ಮಾಡದಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಎಂತಹ ವಿಚಿತ್ರ? ಆ ಪೋರ್ಟಲ್ ಕೂಡ ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ. ‘‘ಅಷ್ಟಕ್ಕೂ ಪೊಲೀಸರು ನಮಗೇಕೆ ಈ ನೋಟಿಸ್ ಕಳಿಸಿದ್ದಾರೆ? ಇದು ಹತ್ಯಾಕಾಂಡಕ್ಕೆ ಕರೆಕೊಟ್ಟಿರುವ ಆ ಕಾವಿಧಾರಿ ಕ್ರಿಮಿನಲ್‌ಗಳಿಗೆ ಹೋಗಬೇಕಾಗಿರುವ ನೋಟಿಸ್ ಅಲ್ಲವೇ?’’ ಎಂದು ಅದು ಪ್ರಶ್ನಿಸಿದೆ.
ನಿಜ. ಹಿಂಸಾಚಾರಕ್ಕೆ ಕರೆ ಕೊಟ್ಟ ಕಾವಿಧಾರಿಗಳಿಗೆ ನೋಟಿಸ್ ಕೊಡಲಾರದವರು, ಅದನ್ನು ವರದಿ ಮಾಡಿದವರಿಗೆ ಪ್ರಚೋದನಾಕಾರಿ ಪೋಸ್ಟ್ ಮಾಡುತ್ತಿದ್ದೀರಿ ಎಚ್ಚರ ಎನ್ನುತ್ತಿದ್ದಾರೆ. ಅಲ್ಲಿ ಕಾನೂನಿನ ತಾಕತ್ತು ತೋರಿಸಲಿಕ್ಕಾಗದವರು, ಇಲ್ಲಿ ಅಮಾಯಕರ ಎದುರು ತಮ್ಮ ಪೊಲೀಸ್ ದರ್ಪ ತೋರುತ್ತಾರೆ.

Similar News