ದೇಶದಲ್ಲೀಗ ಪ್ರಕಾಶಿಸುತ್ತಿರುವವರು ಯಾರು?

Update: 2023-02-11 08:00 GMT

ಹಿಂದುತ್ವವಾದ, ರಾಮಮಂದಿರ ನಿರ್ಮಾಣ, ಸಬ್ ಕಾ ವಿಕಾಸ್ ಮೊದಲಾದ ಘೋಷಣೆಗಳ ಮುಖಾಂತರ ಭಾರತೀಯರನ್ನು ನಂಬಿಸಿ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿದ ಎನ್‌ಡಿಎ ಸರಕಾರದ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ಸಾಂವಿಧಾನಿಕ ನಿಯಮಾವಳಿಗಳು ಮತ್ತು ಪ್ರಜಾಸತ್ತಾತ್ಮಕ ನಡವಳಿಕೆಗಳಿಗೆ ಎಳ್ಳಷ್ಟೂ ಬೆಲೆ ಸಿಗುತ್ತಿಲ್ಲ. ಪ್ರಜಾಪ್ರಭುತ್ವವು ಪ್ರಧಾನಿಯವರ ನೇತೃತ್ವದಲ್ಲಿ ಶ್ರೀಮಂತರ ಪ್ರಭುತ್ವವಾಗಿ ರೂಪುಗೊಂಡಿರುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದಿವೆ. ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೊದಲಾದ ಸಂಸ್ಥೆಗಳನ್ನು ತಮ್ಮ ಮನೋಧರ್ಮ ಮತ್ತು ರಾಜಕೀಯ ಆಕಾಂಕ್ಷೆಗಳಿಗೆ ದಾಳವಾಗಿಸಿಕೊಂಡು ಭಾರತವನ್ನು ಹಗರಣಗಳು ಮತ್ತು ತಾರತಮ್ಯಗಳ ದೇಶವನ್ನಾಗಿಸಿರುವುದು ಮೋದಿ ಸರಕಾರದ ಕಾಲಘಟ್ಟದ ವಿಶೇಷವಾಗಿದೆ. ಇಂದು ಭಾರತವನ್ನು ರಾಮರಾಜ್ಯ ಮಾಡುವ ಆವೇಶದಲ್ಲಿ ಬಹುಜನರ ಮೂಲಭೂತ ಹಕ್ಕುಗಳು ಮತ್ತು ಬದುಕುವ ಅವಕಾಶಗಳನ್ನು ಕಸಿದುಕೊಂಡು ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.

ಅವ್ಯವಸ್ಥೆಯನ್ನು ಸಂವಿಧಾನಾತ್ಮಕ ನೆಲೆಗಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸದ್ಬಳಕೆ ಮಾಡಿಕೊಂಡು ವಿರೋಧಿಸುವ ಪ್ರಜ್ಞಾವಂತರು, ಸಂವಿಧಾನ ನಿಷ್ಠರು ಮತ್ತು ಅಪ್ಪಟ ರಾಷ್ಟ್ರಭಕ್ತರನ್ನು ನಗರದ ನಕ್ಸಲೀಯರು ಎಂದು ಬಿಂಬಿಸಿ ವರ್ಷಗಟ್ಟಲೆ ಜೈಲಿಗೆ ದಬ್ಬಲಾಗಿದೆ. ಭಾರತವು ವಿಶ್ವದಲ್ಲಿ 5ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆಯೆಂದು ಬೀಗುವ ಪ್ರಧಾನಿಯವರಿಗೆ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಕಡೆಯ ದೇಶಗಳಲ್ಲಿ ಒಂದಾಗಿರುವುದು ಸರಿಯಾಗಿ ಅರ್ಥವಾಗಿಲ್ಲವೇ. ಒಂದು ದೇಶದ ಆರ್ಥಿಕತೆಯನ್ನು ಮುಂದುವರಿಸಬೇಕಾದರೆ ಮೊದಲ ಆದ್ಯತೆ ಮಾನವಾಭಿವೃದ್ಧಿ ಮತ್ತು 2ನೇ ಆದ್ಯತೆ ಸುಸ್ಥಿರ ಅಭಿವೃದ್ಧಿ ಎಂಬ ಕನಿಷ್ಟ ಪ್ರಜ್ಞೆ ನಮ್ಮನ್ನು ಆಳುತ್ತಿರುವವರಿಗೆ ತಿಳಿದಿರಬೇಕಾಗಿದೆ. ಭಾರತವು ಮೋದಿಯವರ ಆಡಳಿತದಲ್ಲಿ ಮಾನವಾಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗಳಲ್ಲಿ ಬಹಳ ಹಿಂದುಳಿದಿರುವುದು ''2030ರ ದಶಕವು ಭಾರತದ ದಶಕವಾಗಿರುತ್ತದೆ'' ಎಂಬ ಮೋದಿಯವರ ಆಶಯವನ್ನು ಸುಳ್ಳಾಗಿಸುತ್ತದೆ.

ಭಾರತವು ಪ್ರಜಾಪ್ರಭುತ್ವದ ತಾಯಿ, ಬುದ್ಧರು ಪ್ರಜಾಪ್ರಭುತ್ವದ ರೂವಾರಿ, ಅಂಬೇಡ್ಕರ್ ಸಂವಿಧಾನ ಶಿಲ್ಪಿ, ನಾನು ಭರತ ಭೂಮಿಯಿಂದ ಬಂದವನು ಎಂದೆಲ್ಲ ವಿದೇಶಿಗಳಲ್ಲಿ ಬೀಗುವ ಮೋದಿಯವರ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಬದಲಿಗೆ ಮೇಲ್ಜಾತಿ ಪ್ರಭುತ್ವ ಪ್ರಕಾಶಿಸುತ್ತಿದೆ. ಗೌತಮ್ ಅದಾನಿ, ಅನಿಲ್ ಅಂಬಾನಿ ಅವರಂತಹ ಶ್ರೀಮಂತರು ಮೋದಿಯವರ ನಾಯಕತ್ವದಲ್ಲಿ ವಿಜೃಂಭಿಸುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ತಗ್ಗಿಸಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಜೀವಗಳಿಗೆ ಮೋದಿಯವರ ಸರಕಾರದಲ್ಲಿ ಕಿಂಚಿತ್ತೂ ಬೆಲೆಯಿಲ್ಲವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾರತವು ಮೊದಲ ಸಾಲಿನ ರಾಷ್ಟ್ರಗಳ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ. ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಪ್ರಮುಖ ವೇದಿಕೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಬಿಡುಗಡೆಗೊಳಿಸಿರುವ ದಾಖಲೆಗಳು ಇದಕ್ಕೆ ಪುರಾವೆ ಒದಗಿಸುತ್ತವೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಷ ಮಂಡಿಸಲಾದ ಆಯವ್ಯಯದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಿಂತ ಕೈಗಾರಿಕೆ ಕೇಂದ್ರಿತ ಸೌಕರ್ಯಗಳು, ಕೃಷಿ ಅಭಿವೃದ್ಧಿಗಿಂತ ಕೈಗಾರಿಕಾಭಿವೃದ್ಧಿ, ಮಾನವಾಭಿವೃದ್ಧಿಗಿಂತ ಶ್ರೀಮಂತರ ಅಭಿವೃದ್ಧಿ, ಭಾರತೀಯರ ಅಭಿವೃದ್ಧಿಗಿಂತ ಅಲ್ಪಸಂಖ್ಯಾತ ಹಿಂದುತ್ವ ವಾದಿಗಳ ಅಭಿವೃದ್ಧಿ, ಮಾನವತಾ ವಾದಿಗಳ ಅಭಿವೃದ್ಧಿಗಿಂತ ಮನುವಾದಿಗಳ ಅಭಿವೃದ್ಧಿಗಳಿಗೆ ವಿಶೇಷ ಮಹತ್ವ ಲಭಿಸಿದೆ. ಈ ಹಿನ್ನೆಲೆಯಲ್ಲಿ 2030 ಭಾರತದ ದಶಕವಾಗುವುದರಲ್ಲಿ ಯಾವುದೇ ಭರವಸೆ ಕಂಡುಬರುವುದಿಲ್ಲ.

ಎನ್‌ಡಿಎ ಸರಕಾರ ಬಹುಜನರ ಅಭಿವೃದ್ಧಿಗೆ ಮಾರಕವೆಂಬುದನ್ನು ವಿವಿಧ ಜನವರ್ಗಗಳ ಅಭಿವೃದ್ಧಿಗೆ ಹಂಚಿಕೆಯಾಗಿರುವ ಅನುದಾನದ ಪ್ರಮಾಣ ಸ್ಪಷ್ಟವಾಗಿ ತಿಳಿಸುತ್ತದೆ. ಕೆಲವರನ್ನು ಕೆಲವು ಕಾಲ ವಂಚಿಸಬಹುದು, ಎಲ್ಲರನ್ನೂ ಎಲ್ಲ ಕಾಲಕ್ಕೂ ವಂಚಿಸಲಾಗುವುದಿಲ್ಲ ಎಂಬ ಸತ್ಯವನ್ನು ಮೋದೀಜಿ ಬಳಗ ಅರ್ಥಮಾಡಿಕೊಳ್ಳಬೇಕು. ಇತ್ತೀಚೆಗೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 2004ರಿಂದ 2010ರವರೆಗೆ ಹಗರಣ, ಹಿಂಸಾಚಾರದ ದಶಕ ಎಂದು ಬಣ್ಣಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ಛೇಡಿಸಿದ್ದಾರೆ. ಆದರೆ ಎಲ್‌ಐಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳಿಂದ ಲಕ್ಷಾಂತರ ಕೋಟಿ ರೂಪಾಯಿಗಳು ಗೌತಮ್ ಅದಾನಿಯವರ ಸಂಸ್ಥೆಗೆ ಅಪ್ರಜಾಸತ್ತಾತ್ಮಕವಾಗಿ ವರ್ಗಾವಣೆಯಾಗಿರುವುದು ಅಂತರ್‌ರಾಷ್ಟ್ರೀಯ ಹಗರಣವಾಗಿ ರೂಪುಗೊಂಡಿದ್ದರೂ ಮೋದಿಯವರು ಅದರ ಬಗ್ಗೆ ತಮ್ಮ ವಂದನಾ ನಿರ್ಣಯದಲ್ಲಿ ಚಕಾರವೆತ್ತದಿರುವುದು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೌತಮ್ ಅದಾನಿ ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಏರಿದ ನಂತರ ಅವರ ಅದೃಷ್ಟದಲ್ಲಿ ಉಲ್ಕಾಪಾತದ ಏರಿಕೆ ಕಂಡುಬಂದಿದೆ. ಜೊತೆಗೆ ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಆರೋಪದ ಬಗ್ಗೆ ಮೋದಿಯವರು ದಿವ್ಯ ಮೌನ ವಹಿಸಿದ್ದಾರೆ. ಇದರ ಹಿಂದಿನ ಮರ್ಮವೇನು ಎಂದು ತಿಳಿಯಲು ಇಡೀ ದೇಶ ಉತ್ಸುಕವಾಗಿದ್ದರೂ ಜನತೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.

Similar News