ಗ್ರಂಥಾಲಯದ ಶೌಚಾಲಯಗಳನ್ನು ಸರಿಪಡಿಸಿ

Update: 2023-02-10 18:16 GMT

ಮಾನ್ಯರೇ,

ಮಂಗಳೂರಿನ ವೆಲೆನ್ಸಿಯಾ ವೃತ್ತದ ಬಳಿ ಮಹಾನಗರ ಪಾಲಿಕೆಗೆ ಸೇರಿದ ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಪಾರ್ಕು ಹಾಗೂ ಗ್ರಂಥಾಲಯವಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಡೆಸಲ್ಪಡುವ ಇದಕ್ಕೆ ನಗರದ ‘ಕೇಂದ್ರ ಗ್ರಂಥಾಲಯ ಮಂಗಳೂರು’ ಎಂಬ ಹೆಸರಿದೆ.
ಗ್ರಂಥಾಲಯ ಹಾಗೂ ಪಾರ್ಕಿಗೆ ಬರುವ ಸಾರ್ವಜನಿಕರಿಗಾಗಿ ಗ್ರಂಥಾಲಯದ ಪಕ್ಕದಲ್ಲಿ 2 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗಂಡಸರು ಹಾಗೂ ಹೆಂಗಸರಿಗಾಗಿ ಇರುವ ಈ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದುದರಿಂದ; ಕಳೆದ ಐದಾರು ವರ್ಷಗಳಿಂದ ತೀರಾ ಹದಗೆಟ್ಟಿದ್ದು ಪಾಳು ಬಿದ್ದಿವೆ. ಹೆಂಗಸರ ಶೌಚಾಲಯದ ಬಾಗಿಲು ಮುರಿದು ಬಿದ್ದಿದೆ. ಗಂಡಸರ ಶೌಚಾಲಯದ ಬಾಗಿಲು ಒಳಗಿನಿಂದ ಹಾಕಲಾಗದು. ಎರಡು ಶೌಚಾಲಯದೊಳಗೂ ಗಿಡ ಗಂಟಿಗಳು ತುಂಬಿಹೋಗಿವೆ. ಅಲ್ಲಿ ನೀರಿನ ಸರಬರಾಜು ಕೂಡಾ ನಿಂತಿದ್ದು, ಜನರು ಅಲ್ಲೇ ಪಕ್ಕದಲ್ಲಿ ಮೂತ್ರ ವಿಸರ್ಜಿಸುವುದರಿಂದಾಗಿ ಪರಿಸರವೆಲ್ಲ ಗಬ್ಬು ವಾಸನೆಯಿಂದ ಕೂಡಿದೆ.ಸಾರ್ವಜನಿಕರು ನೀಡಿದ ತೆರಿಗೆಯಿಂದ ನಿರ್ಮಿಸಿದ ಈ ಶೌಚಾಲಯಗಳು ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿದೆ.
 ಗ್ರಂಥಾಲಯಕ್ಕೆ ಓದಲು ಬರುತ್ತಿರುವವರ ಉಪಯೋಗಕ್ಕಾಗಿ ನಿರ್ಮಿಸಿದ ಈ ಶೌಚಾಲಯಗಳನ್ನು ಸಂಬಂಧಪಟ್ಟವರು ಇನ್ನಾದರೂ ಈ ಕೂಡಲೇ ರಿಪೇರಿ ಮಾಡಿ ಜನರ ಬಳಕೆಗೆ ಸಿದ್ಧಮಾಡಿಕೊಡಬೇಕಾಗಿದೆ.
 

Similar News