ಅಂಬೇಡ್ಕರ್ ಅವರಿಗೆ ಅವಮಾನ: ಇದು ಮನುರೋಗದ ಮಾದರಿ

Update: 2023-02-13 18:34 GMT

ಬಾಬಾಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ ಜ್ಞಾನದ ಸಂಕೇತ ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ಎಂಬ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾಸಾಹೇಬರ ವಿದ್ವತ್ತು ಮತ್ತು ಮಾನವ ಕುಲಕ್ಕೆ ಅವರು ನೀಡಿದ ಜ್ಞಾನವನ್ನು ಅರಿತು ಅವರ ಜನ್ಮದಿನವನ್ನು "world knowledge day' ಎಂದು ಘೋಷಿಸಿದೆ. ಈ ಕ್ಷಣಕ್ಕೂ ಬಾಬಾಸಾಹೇಬರ ವಿದ್ಯಾರ್ಹತೆಗೆ ಸರಿಸಾಟಿಯಾದ ಒಬ್ಬನೇ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ! ಬಾಬಾಸಾಹೇಬರು ಬರೆದ ಭಾರತದ ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ವಿಶ್ವವೇ ಕೊಂಡಾಡುತ್ತಿದೆ. ವಿಶ್ವದ ವಿದ್ವಾಂಸರುಗಳೇ ಬಾಬಾಸಾಹೇಬರನ್ನು ಆದರ್ಶವಾಗಿಸಿಕೊಂಡಿದ್ದಾರೆ.

ಈ ದೇಶದ ಬಹುಸಂಖ್ಯಾತ ಬಡಜನರ, ಮಹಿಳೆಯರ, ಕೃಷಿಕಾರ್ಮಿಕರನ್ನು ಗುಲಾಮಗಿರಿಯಿಂದ ವಿಮುಕ್ತಿಗೊಳಿಸಲು ಸ್ವಾಭಿಮಾನದ ಬದುಕು ಕೊಡಲು ತನ್ನಿಡೀ ಬದುಕನ್ನೇ ತ್ಯಾಗಮಾಡಿದ ದಾರ್ಶನಿಕ ಬಾಬಾಸಾಹೇಬರು. ಇಂತಹ ಘನತೆಯ ವ್ಯಕ್ತಿತ್ವವನ್ನು ಭಾರತದ ಕೀಳುಮನಸ್ಸಿನ ಕ್ರಿಮಿಗಳು ಕಾಲದಿಂದಲೂ ಕಡೆಗಣಿಸುತ್ತಲೇ ಬಂದಿವೆ. ಅವರು ತಮಗಿಂತ ಕೆಳಗಿನ ಜಾತಿಯವರು, ಹಾಗಿದ್ದೂ ತಮಗಿಂತ ಹೆಚ್ಚು ಜ್ಞಾನ ಸಂಪಾದಿಸಿದರು ಅದಲ್ಲದೆ ತಮ್ಮ ಅಧೀನದಲ್ಲಿದ್ದ ಬಡಜನರು, ಮಹಿಳೆಯರನ್ನು ವಿಮುಕ್ತಿಗೊಳಿಸಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಒಂದು ಷಡ್ಯಂತ್ರದ ಚಳವಳಿಯನ್ನೇ ಕೈಗೊಂಡರು. ಅವರ ಪ್ರತಿಮೆಗಳನ್ನು ಒಡೆಯುವುದು, ಅವರ ಕೃತಿಗಳನ್ನು ಸುಡುವುದು, ಅವರ ಸಂವಿಧಾನವನ್ನು ಲೇವಡಿ ಮಾಡುವುದು, ಅವರ ಬೆಂಬಲಿಗರನ್ನು ಬೆದರಿಸುವುದು, ಕೊಲ್ಲುವುದು ಹೀಗೆ ದೇಶಾದ್ಯಂತ ಈ ದ್ವೇಷವನ್ನು ಹರಡಿದರು. ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ನಡೆದ ಎರಡು ಪ್ರಕರಣಗಳಲ್ಲಿ ಭಾರತ ಭಾಗ್ಯ ವಿಧಾತ ಬಾಬಾಸಾಹೇಬರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆ. ಮೊದಲನೆಯದು ಬೆಂಗಳೂರಿನ ಜೈನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮಾಡಿದ 'ಹಾಸ್ಯ ಪ್ರಹಸನ'ದಲ್ಲಿ ಅವರು ಹಾಸ್ಯಕ್ಕೆ ಬಳಸಿಕೊಂಡಿದ್ದು ಅಂಬೇಡ್ಕರ್ ಅವಹೇಳನ, ಮೀಸಲಾತಿಯ ವ್ಯಂಗ್ಯ ಮತ್ತು ಎಸ್‌ಸಿ/ಎಸ್‌ಟಿಗಳ ವಿಡಂಬನೆ.

ಎರಡನೆಯದು ಯಾವನೋ ಸಂಘಪರಿವಾರದ ಒಬ್ಬ ಪುಢಾರಿ ''ಗಾಂಧಿಯನ್ನು ನಮ್ಮ ಗೋಡ್ಸೆ ಗುಂಡಿಕ್ಕಿ ಕೊಂದಂತೆ ನಾನು ಅಂಬೇಡ್ಕರ್ ಅವರನ್ನೂ ಗುಂಡಿಕ್ಕಿ ಕೊಲ್ಲುತ್ತಿದ್ದೆ'' ಎಂದಿರುವ ಮಾತು. ಇದರಲ್ಲಿ ತೀರಾ ಅಸಹ್ಯ ಎನಿಸಿದ್ದು ಜೈನ್ ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ವರ್ತನೆ. ಇವರು ಕೀಳು ಅಭಿರುಚಿಯ ಪ್ರಹಸನ ಪ್ರದರ್ಶಿಸಿ ನೆರೆದ ವಿದ್ಯಾರ್ಥಿ ಸಮುದಾಯ ಮತ್ತು ಶಿಕ್ಷಕ ಸಮುದಾಯವನ್ನು ರಂಜಿಸುತ್ತಾರೆಂದರೆ ಇವರ ಶಿಕ್ಷಣ, ಇವರ ಪೋಷಕರು ಮತ್ತು ಇವರ ಶಿಕ್ಷಕರು ಇವರಿಗೆ ಕಲಿಸಿರುವ ವಿದ್ಯೆ ಮತ್ತು ಸಂಸ್ಕಾರ ಎಂತಹ ಹೀನವಾದುದು ನೋಡಿ.

ಈ ಪ್ರಹಸನವನ್ನು ನೋಡಿ ಅಲ್ಲಿ ನೆರೆದಿರುವ ಶಿಕ್ಷಿತರಾದ ಸಂಭಾವಿತರೆನಿಸಿಕೊಂಡವರೆಲ್ಲರೂ ಗಹಗಹಿಸಿ ನಗುತ್ತಾರೆ ಎಂದರೆ ಅವರೆಲ್ಲರ ವಿಕೃತ ಮನೋಭಾವವನ್ನು ಯಾವುದಕ್ಕೆ ಹೋಲಿಸಬೇಕು? ಇದು ಇಂದಿನ ರೋಗವಲ್ಲ, ತಲೆತಲಾಂತರಗಳಿಂದ ತಾವೇ ಮೇಲು ತಾವೇ ಶ್ರೇಷ್ಠ ಎಂದು ಭ್ರಮಿಸಿಕೊಂಡು ಬಂದಿರುವವರ ಅನುವಂಶಿಕ ಮನುರೋಗ. ತಮ್ಮೆಳಗಿರುವ ಈ ಮೇಲರಿಮೆಯ ರೋಗ, ಜನಾಂಗೀಯ ದ್ವೇಷ, ಇತರ ಸಹಮಾನವರ ಮೇಲಿನ ತಿರಸ್ಕಾರ ಧೋರಣೆಯನ್ನು ಅನೂಚಾನವಾಗಿ ತಮ್ಮ ಮುಂದಿನ ತಲೆಮಾರುಗಳಿಗೆ ತಪ್ಪದೆ ಪ್ರಜ್ಞಾಪೂರ್ವಕವಾಗಿ ದಾಟಿಸಿಕೊಂಡು ಬಂದಿರುವ ನಿಜವಾದ ಸಂಸ್ಕಾರ. ಹಾಗಾಗಿಯೇ ಭಾರತದ ಒಡಲೊಳಗೆ ವಿನಾಕಾರಣವಾದ ಜನಾಂಗೀಯ ಅಸಹನೆ ಕುದಿಯುತ್ತಿದೆ ಮತ್ತು ಕೊಳೆತು ನಾರುತ್ತಿದೆ. ಇಂತಹ ಮನೋರೋಗವನ್ನೇ ಇವರು ಶಿಕ್ಷಣ, ಶುದ್ಧತೆ ಮತ್ತು ಸಂಸ್ಕಾರ ಎಂದು ತಮ್ಮ ಮಕ್ಕಳಿಗೆ ಎಗ್ಗಿಲ್ಲದೆ ಕಲಿಸಿದ್ದಾರೆ. ಅದರ ಪರಿಣಾಮವೇ ಇಂತಹ ಅಪದ್ಧಗಳು.

ಹಳ್ಳಿಯ ಮೂಢರಿಂದ ಹಿಡಿದು ಪಟ್ಟಣದ ಉನ್ನತ ಶಿಕ್ಷಣ ಕಲಿತವರ ತನಕವೂ ಈ ಮನೋವ್ಯಾಧಿ ಒಂದೇ ತೆರನಾಗಿದೆ. ಮತ್ತದು ನೂರಾರು ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಅಷ್ಟೇ ತೀವ್ರವಾಗಿ ಈ ತಂತ್ರಜ್ಞಾನದ ಪರಾಕಾಷ್ಟೆಯ ಕಾಲದಲ್ಲೂ ಇದೆ ಎಂದರೆ ಇವರು ಕಲಿತ ವಿದ್ಯೆ ಇಷ್ಟೆ. ಈ ವಿದ್ಯೆಯನ್ನೇ ಇವರು ಶಿಕ್ಷಣವೆಂದು ಭ್ರಮಿಸಿದ್ದಾರೆ.

 'ಮನುಷ್ಯ ಜಾತಿ ತಾನೊಂದೇ ವಲಂ' ಎಂದ ಪಂಪಕವಿ. ಈ ದೇಶದಲ್ಲಿ ಜನಿಸಿದ ಬುದ್ಧ, ಬಸವಾದಿ ಶರಣರು, ಮಹಾತ್ಮಾ ಕಬೀರ, ಪರಮಹಂಸ, ವಿವೇಕಾನಂದ, ಪೆರಿಯಾರ್, ನಾರಾಯಣಗುರು ಎಲ್ಲರೂ ಹೇಳಿದ್ದು ಮಾನವರೆಲ್ಲಾ ಒಂದೇ ಎಂದು. ಅವರ ಇಡೀ ಹೋರಾಟ ಅಥವಾ ಚಳವಳಿ ನಡೆದುದೇ ಈ ಅಸಮಾನತೆ ಎಂಬ ಮನುರೋಗದ ವಿರುದ್ಧ್ದ. ದುರಂತವೆಂದರೆ ದಾರ್ಶನಿಕರ ಈ ಮಾತುಗಳು ಕೇವಲ ಓದಿ ಅಂಕಗಳಿಸಲು ಮಾತ್ರವೇ ಎಂದುಕೊಂಡು ತಮ್ಮ ಶ್ರೇಷ್ಠತೆಯ ವ್ಯಸನವನ್ನು ತಮ್ಮ ಮಕ್ಕಳಿಗೆ ಕಲಿಸುವುದನ್ನೇ ಸಂಪ್ರದಾಯ, ಧರ್ಮ ಮತ್ತು ಸಂಸ್ಕಾರವೆಂದುಕೊಂಡಿರುವ ಇಂತಹ ದುಷ್ಟ ಮನುರೋಗಿಗಳಿಂದಾಗಿಯೇ ಈ ದೇಶದಲ್ಲಿ ಜಾತೀಯತೆ, ಜಾತಿಯಾಧಾರಿತ ಅಸಮಾನತೆ ಈ ಕ್ಷಣಕ್ಕೂ ಅಷ್ಟೇ ಪ್ರಬಲವಾಗಿ ಉಳಿದುಕೊಂಡು ಬಂದಿದೆ. ಇಂತಹ ರೋಗಗ್ರಸ್ಥರಿಗಾಗಿಯೇ ಬಾಬಾಸಾಹೇಬರು ಜಾತಿವಿನಾಶ ಕೃತಿ ಬರೆದು ಮುಖಕ್ಕೆ ಹಿಡಿದು ನೀವು ನಿಜಕ್ಕೂ ಮನುಷ್ಯಕುಲದವರಾಗಿದ್ದರೆ ಇದನ್ನು ಅನುಸರಿಸಿ ಎಂದು ಸವಾಲು ಎಸೆದುದು. ಈ ಕ್ಷಣಕ್ಕೂ ಈ ಸವಾಲನ್ನು ಶ್ರೇಷ್ಠತೆಯ ವ್ಯಸನದ ಯಾವೊಬ್ಬನೂ ಸ್ವೀಕರಿಸಿಲ್ಲ. ಯಾಕೆಂದರೆ ಇವರ ಈ ಮನುರೋಗವು ಇವರನ್ನು ಮಂಕುಮಾಡಿದೆ. ಇದರಲ್ಲಿ ಅವರು ಆನಂದಪಡುತ್ತಿದ್ದಾರೆ. ಈ ಮನುರೋಗ ಶಿಕ್ಷಣದಿಂದ ನಾಶವಾಗಬಹುದು ಎಂದುಕೊಂಡೆವು. ಆದರೆ ಅವರ ಶಿಕ್ಷಣ ಕ್ರಮವೂ ಈ ಮನುರೋಗವನ್ನೇ ಶ್ರೇಷ್ಠ ಎಂದು ಬೋಧಿಸುತ್ತಿದೆ! ಇದೇ ಅಪಾಯಕಾರಿ.

ಇದನ್ನು ಬದಲಿಸದ ಹೊರತು ಇಂತಹವರನ್ನು ಸರಿಪಡಿಸಲಾಗುವುದಿಲ್ಲ. ನಮಗಿರುವ ಬಹುದೊಡ್ಡ ಸವಾಲು ಎಂದರೆ ನಮ್ಮ ಜನರಿಗೆ ಮನುಷ್ಯತ್ವದ ಶಿಕ್ಷಣ ಕೊಡುವುದು ಮತ್ತು ಶ್ರೇಷ್ಠ ಕನಿಷ್ಠಗಳ ಅನಿಷ್ಟ ಮನಸ್ಥಿತಿಯನ್ನು ಹೊಡೆದುಹಾಕುವುದೇ ಆಗಿದೆ. ಇದೇ ಬಾಬಾಸಾಹೇಬರು ಹೇಳಿದ ಜಾಗೃತಿಯಾಗಿದೆ ಮತ್ತು ಈ ಮೂಲಕವೇ ನಾವು ಸಂಘಟಿತರಾಗಬೇಕಿದೆ ಮತ್ತು ಅಧಿಕಾರ ಹಿಡಿಯಬೇಕಿದೆ. ಇದೇ ಈ ಮನುರೋಗ ಪೀಡಿತ ಜನಸಮುದಾಯಕ್ಕೆ ನಾವು ಕೊಡುವ ಚಿಕಿತ್ಸೆಯಾಗಬೇಕಿದೆ.

Similar News