ಮಾರ್ವಾಡಿಗಳು ಯಾರು?
ಮಾನ್ಯರೇ,
''ಮೊನ್ನೆ ಒಂದು ಸಭೆಯಲ್ಲಿ ಸಿದ್ದರಾಮಯ್ಯನವರು ಕರಾವಳಿ ಕನ್ನಡಿಗರು ಬ್ಯಾಂಕುಗಳನ್ನು ಕಟ್ಟಿ ಬೆಳೆಸಿದರು, ಆದರೆ ಗುಜರಾತಿನ ಮಾರ್ವಾಡಿಗಳು ಅದನ್ನು ನುಂಗಿ ನೀರು ಕುಡಿದರು'' ಎಂದು ಹೇಳಿದರು. ಗುಜರಾತಿ ಮತ್ತು ಮಾರ್ವಾಡಿ ಈ ಎರಡು ಶಬ್ದಗಳಲ್ಲಿ ಕನ್ನಡಿಗರು ಬಹಳ ಹಿಂದಿನಿಂದಲೂ ಗೊಂದಲ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಿದ್ದರಾಮಯ್ಯನವರ ಮೊನ್ನೆಯ ಹೇಳಿಕೆಯೇ ಸಾಕ್ಷಿ.
ಗುಜರಾತಿಗಳು ಎಂದರೆ ಕೇವಲ ಗುಜರಾತ್ ರಾಜ್ಯದವರು. ಆದರೆ ಮಾರ್ವಾಡಿಗಳು ಅಂದರೆ ಪಾಕಿಸ್ತಾನ ಮತ್ತು ಉತ್ತರ ಗುಜರಾತಿನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ರಾಜಸ್ಥಾನದ ಮಾರ್ವಾಡ್/ಮಾರ್ವಾರ್ ಪ್ರದೇಶದವರು. ಭೌಗೋಳಿಕ ವಿಸ್ತಾರದಲ್ಲಿ ರಾಜಸ್ಥಾನ ಭಾರತದ ಅತಿ ದೊಡ್ಡ ರಾಜ್ಯ. ಅಲ್ಲಿ ಏಳು ಭೌಗೋಳಿಕ ವಲಯ ಹಾಗೂ ಏಳು ಉಪಭಾಷೆಗಳಿವೆ, ಅದರಲ್ಲಿ ಮಾರ್ವಾಡಿ/ಮಾರ್ವಾರಿ ಒಂದು. ಗುಜರಾತಿಗಳ ಹಾಗೂ ಮಾರ್ವಾಡಿಗಳ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಎಲ್ಲವೂ ಬೇರೆ ಬೇರೆ. ಕರ್ನಾಟಕದಲ್ಲಿ ಇರುವ ಮಾರ್ವಾಡಿಗಳಲ್ಲಿ ಕೇವಲ ಜೈನ ಮತ್ತು ವೈಶ್ಯ(ಬನಿಯಾ) ಜಾತಿಯವರು ಮಾತ್ರ ನಮಗೆ ಕಾಣ ಸಿಗುತ್ತಾರೆ. ಇವರಲ್ಲಿ ಹೆಚ್ಚಿನವರು ಲೇವಾದೇವಿ ವ್ಯವಹಾರ ಹಾಗೂ ಚಿನ್ನಾಭರಣ ವ್ಯಾಪಾರ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿರುವ ಗುಜರಾತಿಗಳಲ್ಲಿ ಪಾಟಿದಾರ್, ಪಟೇಲ್, ಜೈನರು, ವಾಣಿಯಾ/ಬನಿಯಾ/ವೈಶ್ಯ, ಸೋಲಂಕಿ, ಕಛ್ಚಿ-ಮುಸ್ಲಿಮ್ ಹೀಗೆ ಎಲ್ಲಾ ಜಾತಿಯವರು ನಮಗೆ ಕಾಣ ಸಿಗುತ್ತಾರೆ. ಗುಜರಾತಿಗಳು ನಮ್ಮ ಕರಾವಳಿಯಲ್ಲಿ ಹೆಚ್ಚಾಗಿ ಅಡಿಕೆ ವ್ಯಾಪಾರ ಮಾಡುತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ಇವರು ಹೆಚ್ಚಾಗಿ ಬಟ್ಟೆ ಅಂಗಡಿ ಹೊಂದಿರುತ್ತಾರೆ. ವಿಶೇಷವೆಂದರೆ ರಾಜಸ್ಥಾನ ಮತ್ತು ಗುಜರಾತ್ ಈ ಎರಡೂ ರಾಜ್ಯಗಳಲ್ಲಿ ಜೈನರು ಶೇ.4ರಷ್ಟು ಇದ್ದರೆ ಕರ್ನಾಟಕ ಸಹಿತ ಭಾರತದ ಇತರ ರಾಜ್ಯಗಳಲ್ಲಿ ಮೂಲ ಜೈನರು ಶೇ.1ಕ್ಕಿಂತಲೂ ಕಡಿಮೆ ಇದ್ದಾರೆ.