ದುಬಾರಿಯಾಗುತ್ತಿದೆ ಶವ ಸಂಸ್ಕಾರ
ಮಾನ್ಯರೇ,
ಬೆಂಗಳೂರು ನಗರದಲ್ಲಿ ಅನೇಕ ಕಡೆಗಳಲ್ಲಿರುವ ವಿದ್ಯುತ್ ಚಿತಾಗಾರಗಳು ಪದೇ ಪದೇ ರಿಪೇರಿ ಆಗುತ್ತಿರುತ್ತದೆ. ಬನಶಂಕರಿ ವಿದ್ಯುತ್ ಚಿತಾಗಾರ ಕೆಟ್ಟು ಎಷ್ಟೋ ತಿಂಗಳುಗಳಾಗಿವೆ. ಇದೇ ಪರಿಸ್ಥಿತಿ ನಗರದ ಹಲವಾರು ವಿದ್ಯುತ್ ಚಿತಾಗಾರಗಳಲ್ಲೂ ಇದೆ. ಇದರಿಂದಾಗಿ ಮೃತದೇಹಗಳನ್ನು ಸುಡುವ ಸಂಸ್ಕೃತಿ ಇರುವ ಜನರು ತಮ್ಮ ಕುಟುಂಬಗಳಲ್ಲಿ ಮೃತಪಟ್ಟವರನ್ನು ಸುಡಲು ಸೌದೆಯನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಈ ಸೌದೆಗೆ ಕೆಲವು ಸ್ಮಶಾನಗಳಲ್ಲಿ 6 ಸಾವಿರದಿಂದ 10 ಸಾವಿರ ರೂ. ತನಕ ದರವನ್ನು ನಿಗದಿಪಡಿಸಿರುತ್ತಾರೆ. ಸಾಮಾನ್ಯವಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರ ಸಾವಾದರೆ ಶವ ಸಂಸ್ಕಾರ ಮಾಡುವುದೇ ದೊಡ್ಡ ಹೊರೆಯಾಗುತ್ತಿದೆ.
ಈ ಮೊದಲು ಬಿಬಿಎಂಪಿ ವತಿಯಿಂದ ಶವಗಳನ್ನು ಸಾಗಿಸಲು ಹಲವಾರು ವಾಹನಗಳಿದ್ದವು. ಈಗ ಬಿಬಿಎಂಪಿಯಲ್ಲಿ ಶವ ಸಾಗಿಸುವ ವಾಹನಗಳ ಕೊರತೆ ಇದೆ. ಇರುವ ವಾಹನಗಳ ಸ್ಥಿತಿಯಂತೂ ಹೇಳತೀರದು. ಅಲ್ಲಲ್ಲಿ ಕೆಲವು ಸೇವಾ ಸಂಸ್ಥೆಯವರು ಶವ ಸಾಗಿಸುವ ವಾಹನಗಳನ್ನು ಉಚಿತವಾಗಿ ನೀಡುತ್ತಾರೆ. ಇವುಗಳ ಲಭ್ಯತೆ ಇಲ್ಲದ ಸಮಯದಲ್ಲಿ ಇದಕ್ಕೂ 500ರಿಂದ 1000 ರೂ. ತನಕ ನೀಡಬೇಕಾಗಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಒಂದು ಮನೆಯಲ್ಲಿ ಸಾವಾದರೆ ಸಂಸ್ಕಾರಕ್ಕೆ ಸಾವಿರಾರು ರೂ.ಗಳ ಖರ್ಚು ಬರುತ್ತಿದೆ. ಇನ್ನು ಸ್ಮಶಾನಗಳಲ್ಲಿ ಸೌದೆಗೆ ದರವನ್ನು ಯಾವ ಮಾನದಂಡದ ಮೇಲೆ ನಿಗದಿಪಡಿಸುತ್ತಾರೋ, ಇದಕ್ಕೆ ಟೆಂಡರ್‌ಗಳನ್ನು ಕರೆದಿದ್ದಾರೋ ಯಾವುದೂ ತಿಳಿಯುತ್ತಿಲ್ಲ. ಹಾಗಾಗಿ ಸರಿಯಾದ ವಿದ್ಯುತ್ ಚಿತಾಗಾರದ ವ್ಯವಸ್ಥೆಯಿದ್ದರೆ ಮಾತ್ರ ಜನಸಾಮಾನ್ಯರು ಕಡಿಮೆ ಹಣದಲ್ಲಿ ಸಂಸ್ಕಾರ ಮಾಡಬಹುದು.