ನಶಿಸುತ್ತಿದ್ದ ನೇಪಾಳದ ಕಾಡು ಮತ್ತೆ ಹಸಿರಾದ ಬಗೆ
ಇಂದು ಸಮುದಾಯ ಅರಣ್ಯಗಳು ಸುಮಾರು 23 ಲಕ್ಷ ಹೆಕ್ಟೇರ್ಗಳನ್ನು ಆಕ್ರಮಿಸಿಕೊಂಡಿವೆ. ಅಂದರೆ ನೇಪಾಳದ ಮೂರನೇ ಒಂದು ಭಾಗದಷ್ಟು ಅರಣ್ಯ. 30 ಲಕ್ಷ ಕುಟುಂಬಗಳನ್ನು ಒಳಗೊಂಡಿರುವ 22,000ಕ್ಕೂ ಹೆಚ್ಚು ಸಮುದಾಯ ಅರಣ್ಯ ಗುಂಪುಗಳಿಂದ ಈ ಅರಣ್ಯ ಪ್ರದೇಶ ನಿರ್ವಹಿಸಲ್ಪಡುತ್ತಿದೆ.
ಅದು 1970ರ ದಶಕ. ನೇಪಾಳ ದೊಡ್ಡಮಟ್ಟದ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಜಾನುವಾರುಗಳ ಮೇಯಿಸುವಿಕೆ ಮತ್ತು ಉರುವಲು ಮೊದಲಾದ ಉದ್ದೇಶಕ್ಕೆ ಬಳಕೆಯಾಗುತ್ತ, ನೇಪಾಳದ ಕಾಡು ನಾಶವಾಗತೊಡಗಿತ್ತು. ಪರಿಣಾಮ, ಭಾರೀ ಪ್ರವಾಹ ಮತ್ತು ಭೂಕುಸಿತವನ್ನೂ ಎದುರಿಸಬೇಕಾಯಿತು. ದೊಡ್ಡ ಮಟ್ಟದಲ್ಲಿ ಮರು ಅರಣ್ಯೀಕರಣ ಆಗದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು 1979ರ ವಿಶ್ವಬ್ಯಾಂಕ್ ವರದಿಯೂ ಎಚ್ಚರಿಸಿತು. ದೇಶದ ಕಾಡು 1990ರ ವೇಳೆಗೆ ಬಹುಪಾಲು ನಾಶವಾದೀತೆಂಬ ಎಚ್ಚರಿಕೆಯನ್ನೂ ಅದು ಕೊಟ್ಟಿತ್ತು.
ಅಂಥದೊಂದು ಎಚ್ಚರಿಕೆ ಬಂದ ಬಳಿಕ ಸುಮ್ಮನೆ ಕೂರಲಿಲ್ಲ ನೇಪಾಳ ಸರಕಾರ. 1980 ಮತ್ತು 1990ರ ದಶಕಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅರಣ್ಯ ನಿರ್ವಹಣೆಯ ಕ್ರಮವನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಿತು. 1993ರಲ್ಲಿ ಪ್ರಮುಖ ಅರಣ್ಯ ಕಾಯ್ದೆ ಸಾಧ್ಯವಾದದ್ದೂ ಇದರಿಂದಾಗಿಯೇ. ಈ ಕಾಯ್ದೆ ರಾಷ್ಟ್ರೀಯ ಅರಣ್ಯಗಳನ್ನು ಸಮುದಾಯ ಅರಣ್ಯ ಗುಂಪುಗಳಿಗೆ ಹಸ್ತಾಂತರಿಸಲು ನೇಪಾಳದ ಅರಣ್ಯರಕ್ಷಕರಿಗೆ ಅವಕಾಶ ಮಾಡಿಕೊಟ್ಟಿತು. ಈ ಸಮುದಾಯ-ನೇತೃತ್ವದ ನಿರ್ವಹಣೆ ಫಲಿತಾಂಶ ಕೊಡದೇ ಇಲ್ಲ. ಇರುವುದಿಲ್ಲವೇನೋ ಎಂಬ ಸ್ಥಿತಿ ಮುಟ್ಟಿದ್ದ ಕಾಡು ಮತ್ತೆ ಬೆಳೆದಿದೆ. ದುಪ್ಪಟ್ಟಾಗಿದೆ. ಇತ್ತೀಚಿನ ನಾಸಾ ಅನುದಾನಿತ ಸಂಶೋಧನೆ ಈ ಬೆಳವಣಿಗೆಯನ್ನು ಕಂಡುಕೊಂಡಿದೆ.
1992ರಲ್ಲಿ ಶೇ. 26ರಷ್ಟಿದ್ದ ಕಾಡು 2016ರ ಹೊತ್ತಿಗೆ ಶೇ.45ರಷ್ಟಾಗಿದೆ. ನೇಪಾಳಿ ಹಳ್ಳಿಗಳಲ್ಲಿನ ಜನರೊಂದಿಗೆ ನಡೆಸಿದ ಸಂದರ್ಶನಗಳು ಇಂಥ ಬೆಳವಣಿಗೆಗೆ ಸಮುದಾಯ ಅರಣ್ಯ ನಿರ್ವಹಣೆಯೇ ಕಾರಣ ಎಂಬುದನ್ನು ತಿಳಿಸಿವೆ. ಹಿಮಾಲಯ ಮತ್ತು ಗಂಗಾ ನದಿಯ ಬಯಲು ಪ್ರದೇಶಗಳ ನಡುವೆ ಅರಣ್ಯ ಬೆಳವಣಿಗೆ ಹೆಚ್ಚಾಗಿ ಸಂಭವಿಸಿದೆ.
ಸಮುದಾಯಗಳು ಅರಣ್ಯಗಳನ್ನು ಸಕ್ರಿಯವಾಗಿ ನಿರ್ವಹಿಸಲು ಪ್ರಾರಂಭಿಸಿದ ನಂತರ, ಅವು ಮುಖ್ಯವಾಗಿ ನೈಸರ್ಗಿಕ ಪುನರುತ್ಪಾದನೆಯ ಪರಿಣಾಮವಾಗಿ ಮತ್ತೆ ಬೆಳೆದವು ಎಂದು ನಾಸಾ ಲ್ಯಾಂಡ್ ಕವರ್ ಲ್ಯಾಂಡ್ ಯೂಸ್ ಚೇಂಜ್ ಪ್ರಾಜೆಕ್ಟ್ನ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ನೇಪಾಳವು 1993ರ ಅರಣ್ಯ ಕಾಯ್ದೆಯನ್ನು ಅಂಗೀಕರಿಸುವ ಮೊದಲು, ಅರಣ್ಯಗಳ ನಿರ್ವಹಣೆ ಸರಕಾರದ ಕೈಯಲ್ಲಿತ್ತು ಮತ್ತು ಅದು ಸಕ್ರಿಯವಾಗಿರಲಿಲ್ಲ. ಯಾವಾಗ ಜನರ ಕೈಗೆ ಬಂತೊ ಎಲ್ಲವೂ ಬದಲಾಯಿತು. ಜನರು ಕಾಡುಗಳನ್ನು ಬಳಸುತ್ತಿದ್ದರೇ ಹೊರತು, ಅವುಗಳನ್ನು ರಕ್ಷಿಸುವ ಹೊಣೆಯೂ ತಮ್ಮದೆಂದು ಅವರಿಗೆ ಮನವರಿಕೆ ಮಾಡುವವರಿರಲಿಲ್ಲ. ಕಾಡನ್ನು ಸಕ್ರಿಯವಾಗಿ ನಿರ್ವಹಿಸಲು ಅವರಿಗೆ ಅವಕಾಶವೂ ಇರಲಿಲ್ಲ. ಆ ನಿಟ್ಟಿನಲ್ಲಿ ಯಾವುದೇ ಪ್ರೋತ್ಸಾಹವೂ ಇರಲಿಲ್ಲ. ಇದರ ಪರಿಣಾಮವಾಗಿ, ಕಾಡುಗಳು ಜಾನುವಾರುಗಳನ್ನು ಮೇಯಿಸಲು ಮತ್ತು ಉರುವಲಿಗಾಗಿ ಬಳಕೆಯಾಗುತ್ತಿದ್ದವು.
ಸಮುದಾಯ ಅರಣ್ಯ ನಿರ್ವಹಣೆಯ ಅಡಿಯಲ್ಲಿ, ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಮುದಾಯ ಗುಂಪುಗಳೊಂದಿಗೆ ಸೇರಿದರು. ಅರಣ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಮತ್ತು ನಿರ್ವಹಿಸಬಹುದು ಎಂಬುದನ್ನು ವಿವರಿಸುವ ಯೋಜನೆಗಳ ಅನುಷ್ಠಾನಕ್ಕೆ ಕೆಲಸ ಮಾಡಿದರು. ಮೊದಲಾದರೆ ಜನರು ಅರಣ್ಯಗಳಿಂದ ಹಣ್ಣುಗಳು, ಔಷಧ, ಮೇವು ಮೊದಲಾದ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಹೊರತೆಗೆಯುತ್ತಿದ್ದರು ಮತ್ತು ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಯಾವಾಗ ಈ ಯೋಜನೆ ಸಕ್ರಿಯವಾಯಿತೋ, ಆಗ ಮೇಯಿಸುವಿಕೆ ಮತ್ತು ಮರಗಳನ್ನು ಉರುವಲಿಗಾಗಿ ಕತ್ತರಿಸುವುದರ ಮೇಲೆ ನಿರ್ಬಂಧ ಬಿತ್ತು ಮತ್ತು ಅವು ಸೀಮಿತ ಪ್ರಮಾಣದಲ್ಲಿ ಮಾತ್ರವೇ ನಡೆಯುವಂತೆ ನೋಡಿಕೊಳ್ಳಲಾಯಿತು. ಸಮುದಾಯದ ಸದಸ್ಯರು ಅರಣ್ಯಗಳ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಗಸ್ತು ತಿರುಗುವಿಕೆಯಂಥ ಕ್ರಮಗಳು ಇರುತ್ತಿದ್ದವು.
ಕಠ್ಮಂಡುವಿನ ಪೂರ್ವ ಭಾಗದಲ್ಲಿರುವ ಬಾಗ್ಮತಿ ಪ್ರಾಂತದ ಜಿಲ್ಲೆಗಳಾದ ಕಭ್ರೆ ಪಲಂಚೋಕ್ ಮತ್ತು ಸಿಂಧು ಪಾಲ್ಚೋಕ್ ಪ್ರದೇಶಗಳಲ್ಲಿ ಅರಣ್ಯ ಹೇಗೆ ಪ್ರಗತಿಯಾಗಿದೆ ಎಂಬುದನ್ನು ನಾಸಾ ಸಂಶೋಧನೆ ಗಮನಿಸಿದೆ. 1980ರ ದಶಕದ ಆರಂಭದಿಂದ, ಆಸ್ಟ್ರೇಲಿಯ ಸರಕಾರ ಈ ಜಿಲ್ಲೆಗಳಲ್ಲಿ ಮರ ನೆಡುವ ಯೋಜನೆಗಳಿಗೆ ಮತ್ತು ಸಮುದಾಯ ಅರಣ್ಯ ಗುಂಪುಗಳ ಅಭಿವೃದ್ಧಿಗೆ ಹಣಕಾಸು ಒದಗಿಸಿತು. ಅನೇಕ ಸಮುದಾಯದ ಕಾಡುಗಳಲ್ಲಿ ಸಕ್ರಿಯ ನಿರ್ವಹಣೆಯು ಮರಗಳನ್ನು ಸ್ವಾಭಾವಿಕವಾಗಿ ಮತ್ತೆ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಆದರೆ ಸಸ್ಯವರ್ಗದಿಂದ ದೂರವಿರುವ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಮರಗಳನ್ನು ನೆಡುವ ಪ್ರಯತ್ನಗಳು ಅಗತ್ಯವಾಗಿವೆ.
ಒಂದು ಸಮುದಾಯ ಅರಣ್ಯ (ನೇಪಾಳಿಯಲ್ಲಿ ದೇವಿಥಾನ್ ಅಥವಾ ಪವಿತ್ರ ತೋಪು ಎಂದು ಕರೆಯಲಾಗುತ್ತದೆ) ಕಭ್ರೆ ಪಲಂಚೋಕ್ ಪೂರ್ವಕ್ಕೆ ಇದೆ. 1988ರ ಹಿಂದಿನ ಲ್ಯಾಂಡ್ಸ್ಯಾಟ್ ಡೇಟಾವನ್ನು ಗಮನಿಸಿದರೆ, ಸಂಶೋಧನಾ ಗುಂಪು ದೇವಿಥಾನ್ ಸಮುದಾಯ ಅರಣ್ಯವು 1988ರಲ್ಲಿ ಕೇವಲ ಶೇ. 12ರಷ್ಟು ಅರಣ್ಯವನ್ನು ಹೊಂದಿತ್ತು, ಅದು 2016ರಲ್ಲಿ ಶೇ. 92ಕ್ಕೆ ಏರಿತು.
ದೇವಿಥಾನ್ ಸಮುದಾಯ ಅರಣ್ಯವು 2000ರವರೆಗೆ ಔಪಚಾರಿಕ ಸಮುದಾಯ ಅರಣ್ಯವಾಗಿರಲಿಲ್ಲವಾದರೂ, 1993ರ ಅರಣ್ಯ ಕಾಯ್ದೆಯ ನಂತರ ಸಮುದಾಯವು ಅನೌಪಚಾರಿಕ ಸಮುದಾಯ ಅರಣ್ಯ ನಿರ್ವಹಣಾ ಗುಂಪಾಗಿ (ಮೇಯಿಸುವಿಕೆ ಮತ್ತು ಇಂಧನವನ್ನು ಸಂಗ್ರಹಿಸುವುದನ್ನು ಸೀಮಿತಗೊಳಿಸುವ ಕಾನೂನುಗಳೊಂದಿಗೆ) ಸಂಘಟಿತವಾಯಿತು. ಅನೌಪಚಾರಿಕ ನಿರ್ವಹಣೆಯ ಮೊದಲ ಕೆಲವು ವರ್ಷಗಳಲ್ಲಿ ಮರಗಳು ಮತ್ತು ಸಸ್ಯವರ್ಗಗಳು ವೇಗವಾಗಿ ಪುನರುತ್ಪಾದನೆಗೊಳ್ಳುತ್ತವೆ. ಮೇಲಾವರಣದ ಹೊದಿಕೆಯನ್ನು ವಿಸ್ತರಿಸುತ್ತವೆ. ಮೇವಿನ ಲಭ್ಯತೆಯನ್ನೂ ಅಧ್ಯಯನವು ಗಮನಿಸಿದೆ.
ಇಂದು ಸಮುದಾಯ ಅರಣ್ಯಗಳು ಸುಮಾರು 23 ಲಕ್ಷ ಹೆಕ್ಟೇರ್ಗಳನ್ನು ಆಕ್ರಮಿಸಿಕೊಂಡಿವೆ. ಅಂದರೆ ನೇಪಾಳದ ಮೂರನೇ ಒಂದು ಭಾಗದಷ್ಟು ಅರಣ್ಯ. 30 ಲಕ್ಷ ಕುಟುಂಬಗಳನ್ನು ಒಳಗೊಂಡಿರುವ 22,000ಕ್ಕೂ ಹೆಚ್ಚು ಸಮುದಾಯ ಅರಣ್ಯ ಗುಂಪುಗಳಿಂದ ಈ ಅರಣ್ಯ ಪ್ರದೇಶ ನಿರ್ವಹಿಸಲ್ಪಡುತ್ತಿದೆ. 2010 ಮತ್ತು 2015ರ ನಡುವೆ ಇಂಥ ಅರಣ್ಯೀಕರಣದಲ್ಲಿ ಪ್ರಗತಿ ಸಾಧಿಸಿರುವ ಮೂರು ದೇಶಗಳು ಫಿಲಿಪ್ಪೀನ್ಸ್ (ಶೇ. 3.3), ಚಿಲಿ (ಶೇ. 1.8) ಮತ್ತು ಲಾವೊ ಪಿಡಿಆರ್ (ಶೇ. 0.9) ಎಂಬುದನ್ನು 2016ರ ವಿಶ್ವಸಂಸ್ಥೆಯ ಅರಣ್ಯಗಳ ಸ್ಥಿತಿಯ ಕುರಿತ ವರದಿ ಕಂಡುಹಿಡಿದಿದೆ. ಕಭ್ರೆ ಪಲಂಚೋಕ್ ಮತ್ತು ಸಿಂಧು ಪಾಲ್ಚೋಕ್ ಸಮುದಾಯ ಅರಣ್ಯಗಳಲ್ಲಿ 2010 ಮತ್ತು 2015ರ ನಡುವಿನ ಅರಣ್ಯ ಬೆಳವಣಿಗೆ ಶೇ. 1.84ರಷ್ಟಾಗಿದೆ.
(ಕೃಪೆ: ನಾಸಾ ಅರ್ಥ್ ಅಬ್ಸರ್ವೇಟರಿ ವೆಬ್ಸೈಟ್)