ಸುವರ್ಣ ಸಂಭ್ರಮವು ದಿಲ್ಲಿ ಕನ್ನಡಿಗರನ್ನು ಕೇಂದ್ರದಲ್ಲಿರಿಸಿಕೊಂಡು ನಡೆಯುತ್ತಿಲ್ಲ
ಇದೀಗ 75 ವರ್ಷಗಳಿಗೆ ಕಾಲಿಟ್ಟಿರುವ ದೆಹಲಿ ಕರ್ನಾಟಕ ಸಂಘವು ತನ್ನದೇ ಇತಿಮಿತಿಯಲ್ಲಿ ನಾಡು ನುಡಿಗಳಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಹೊರನಾಡಿನಲ್ಲಿರುವ ಅನ್ಯ ಭಾಷಿಕರ ನಡುವೆ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸಂಘವು ನಿರಂತರವಾಗಿ ಶ್ರಮಿಸಿದೆ. ಕನ್ನಡದ ಅತ್ಯಂತ ಮಹತ್ವದ ಲೇಖಕರಾದ ಶಿವರಾಮ ಕಾರಂತ, ಎಚ್.ವೈ. ಶಾರದಾಪ್ರಸಾದ್, ಶಾ, ಎಂ.ಎಸ್.ಸತ್ಯು, ಬಾಲು ರಾವ್, ಕೆ.ವಿ. ಸುಬ್ಬಣ್ಣ, ಗಿರೀಶ್ ಕಾರ್ನಾಡ್, ಎಂ. ಚಿದಾನಂದಮೂರ್ತಿ, ಅನಂತಮೂರ್ತಿ, ಯಶವಂತ ಚಿತ್ತಾಲ, ಎಂ.ಎಂ. ಕಲಬುರಗಿ, ಜಿ.ಎಸ್. ಶಿವರುದ್ರಪ್ಪ, ಎಸ್.ಎಲ್. ಭೈರಪ್ಪ, ರಾಘವೇಂದ್ರ ಪಾಟೀಲ, ಎಚ್.ಎಸ್. ವೆಂಕಟೇಶಮೂರ್ತಿ, ವೈದೇಹಿ, ಗೀತಾನಾಗಭೂಷಣ, ಸುಕನ್ಯಾ ಕನಾರಳ್ಳಿ, ಬಿ.ಎ. ವಿವೇಕ ರೈ, ಚನ್ನವೀರ ಕಣವಿ, ಹಂಪ ನಾಗರಾಜಯ್ಯ, ಷ. ಶೆಟ್ಟರ್, ಸಿದ್ದಲಿಂಗ ಪಟ್ಟಣಶೆಟ್ಟಿ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ ಮೊದಲಾದ ಲೇಖಕರ ಜೊತೆಗೆ, ಡಾ. ರಾಜಕುಮಾರ್, ಗಂಗೂಬಾಯಿ ಹಾನಗಲ್, ಪಂಡಿತ ವೆಂಕಟೇಶ್‌ಕುಮಾರ್‌ರಂತಹ ಮಹತ್ವದ ಕಲಾವಿದರೂ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ.ಕರ್ನಾಟಕದ ಜೊತೆಗಣ ನಮ್ಮ ನೆಲೆ ತಪ್ಪದಂತೆ ನೋಡಿಕೊಂಡಿದ್ದಾರೆ.
ಆದರೆ ಕರ್ನಾಟಕ ಸಂಘವು ಇದೇ ಫೆಬ್ರವರಿ 25 ಮತ್ತು 26, 2023ರಂದು ಆಚರಿಸುತ್ತಿರುವ ಸುವರ್ಣ ಮಹೋತ್ಸವ ಆಚರಣೆಯು ಸಂಘದ ಮೂಲ ಉದ್ದೇಶದಿಂದ ಬಹಳ ದೂರ ಸರಿದಿದೆ ಎಂದು ನಾವು ಭಾವಿಸುತ್ತೇವೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮಾವೇಶವಾಗಬೇಕಾಗಿದ್ದ ಸುವರ್ಣ ಸಂಭ್ರಮವು ದಿಲ್ಲಿ ಕನ್ನಡಿಗರನ್ನು ಕೇಂದ್ರದಲ್ಲಿರಿಸಿಕೊಂಡು ನಡೆಯುತ್ತಿಲ್ಲ. ಕನ್ನಡ ನಾಡು ನುಡಿಗೆ ಸೇವೆಸಲ್ಲಿಸಿದ ಲೇಖಕ, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಕಾಣುತ್ತಿಲ್ಲ. ಕಾರ್ಯಕ್ರಮದ ಒಟ್ಟು ಆಯೋಜನೆಯಲ್ಲಿ ಸಂಘದ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುವ ವಿಚಾರವಾಗಿದೆ. ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರಿಗೂ ವಿಷಯ ಸ್ಪಷ್ಟತೆಯಿಲ್ಲ. ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ. ಇಂತಹ ಹಲವು ಕಾರಣಗಳಿಂದಾಗಿ ನಾವು ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಣಯಿಸಿದ್ದೇವೆ.
-ಡಾ. ಪುರುಷೋತ್ತಮ ಬಿಳಿಮಲೆ,
ಸಂಘದ ಮಾಜಿ ಅಧ್ಯಕ್ಷರು, ದೆಕಸಂ
-ಡಾ. ವೆಂಕಟಾಚಲ ಹೆಗಡೆ,
ಸಂಘದ ಮಾಜಿ ಅಧ್ಯಕ್ಷರು, ದೆಕಸಂ
-ವಸಂತ ಶೆಟ್ಟಿ ಬೆಳ್ಳಾರೆ,
ಸಂಘದ ಮಾಜಿ ಅಧ್ಯಕ್ಷರು, ದೆಕಸಂ