ಅಮೆರಿಕದಲ್ಲಿ ತಲ್ಲಣ ಸೃಷ್ಟಿಸಿರುವ 'ಝೈಲಾಜಿನ್' ಎಂಬ ಝೋಂಬಿ ಡ್ರಗ್
ಅಮೆರಿಕದಲ್ಲಿ ವ್ಯಕ್ತಿಯನ್ನು ಹಾರರ್ ಚಿತ್ರಗಳಲ್ಲಿ ತೋರಿಸುವ ರೆಂಬಿಯಂತಾಗಿಸುವ ಡ್ರಗ್ ಒಂದು ಬಂದು ಬಿಟ್ಟಿದೆಯೇ? ಅದು ಅಲ್ಲಿ ಭಾರೀ ದೊಡ್ಡ ಪಿಡುಗಾಗಿ ಕಾಡುತ್ತಿದೆಯೇ? ಇದು ಸದ್ಯ ಭಾರೀ ಚರ್ಚೆಯಲ್ಲಿರುವ ಸುದ್ದಿ.
ಹೌದು. ಅದೊಂದು ಡ್ರಗ್ ಅಮೆರಿಕದಾದ್ಯಂತ ಪ್ರಮುಖ ನಗರಗಳಲ್ಲಿ ತಲ್ಲಣವನ್ನೇ ಸೃಷ್ಟಿಸತೊಡಗಿದೆ. ಈಗಾಗಲೇ ಇರುವ ಡ್ರಗ್ ಪಿಡುಗಿನ ಜೊತೆ ಇದು ಇನ್ನಷ್ಟು ದೊಡ್ಡ ಅಪಾಯ ತಂದೊಡ್ಡಿದೆ.
ಅಮೆರಿಕದಲ್ಲಿ ಪ್ರತೀ ಐದು ನಿಮಿಷಕ್ಕೆ ಒಬ್ಬ ವ್ಯಕ್ತಿ ಮಾದಕವಸ್ತು ಮಿತಿಮೀರಿದ ಸೇವನೆಯಿಂದ ಸಾಯುತ್ತಾನೆ ಎಂದು ವರದಿಗಳು ಹೇಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ಡ್ರಗ್ ಹೊಸ ಕಳವಳಕ್ಕೆ ಕಾರಣವಾಗಿದೆ. ಇದು ತೀರಾ ಹೊಸ ಡ್ರಗ್ ಅಲ್ಲ. ಕೆಲವು ವರ್ಷಗಳಿಂದಲೇ ಅಲ್ಲಿ ಬಳಕೆಯಲ್ಲಿತ್ತು. ಆದರೆ ಈಗ ಇದರ ಅತಿಯಾದ ಬಳಕೆ ಅಲ್ಲಿ ಅಪಾಯಕಾರಿ ಪರಿಣಾಮಗಳನ್ನು ತೋರಿಸುತ್ತಿದೆ.
ಅದನ್ನು ಬಳಸುವವರ ಚರ್ಮದಲ್ಲಿ ತೂತು ಬೀಳಿಸುವ, ಚರ್ಮವೇ ಕೊಳೆಯುವಂತೆ ಮಾಡುವ ಮಾರಕ ಪರಿಣಾಮಕ್ಕೆ ಹಲವರು ಅಲ್ಲಿ ತುತ್ತಾಗುತ್ತಿದ್ದಾರೆ. ಹಾಗಾಗಿಯೇ ಈ ಡ್ರಗ್ ಸೇವಿಸಿದವರು ರೆಂಬಿಯಂತೆ ಆಗುತ್ತಿದ್ದಾರೆ ಎಂದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ.
ಇದರ ಹೆಸರು ಝೈಲಾಜಿನ್. ಟ್ರ್ಯಾಂಕ್ ಎಂದೂ ಇದನ್ನು ಕರೆಯಲಾಗುತ್ತದೆ. ಇದು ಮನುಷ್ಯನನ್ನು ನಿದ್ರೆಯ ಗುಂಗಿನಲ್ಲೇ ಇರುವಂತೆ ಮಾಡುತ್ತದೆ ಮತ್ತು ಒಂದು ಬಗೆಯ ತೀವ್ರ ಅಮಲಿನ ಸ್ಥಿತಿಯನ್ನು ತರುತ್ತದೆ.
ನಿಜವೇನೆಂದರೆ ಇದು ಮನುಷ್ಯರು ಬಳಸುವ ವಸ್ತುವೇ ಅಲ್ಲ. ಪಶುವೈದ್ಯಕೀಯದಲ್ಲಿ ಬಳಕೆಗೆ ಮಾತ್ರವೇ ಅನುಮತಿಯಿರುವ ಇದನ್ನು ಪ್ರಾಣಿಗಳಲ್ಲಿ ಮತ್ತು ಬರಿಸಲು ಬಳಸಲಾಗುತ್ತದೆ. ಆದರೆ, ಇತ್ತೀಚೆಗೆ ಕೊಕೇನ್, ಹೆರಾಯಿನ್ನಂತಹ ನಿಷೇಧಿತ ಡ್ರಗ್ಗಳಲ್ಲಿ ಬೆರೆಸಲಾಗುತ್ತಿದ್ದು, ಮಾದಕ ವ್ಯಸನಿಗಳ ಪಾಲಿಗೆ ಅಗ್ಗದ ದರದಲ್ಲಿಯೇ ಕಾನೂನು ಬದ್ಧವಾಗಿಯೇ ಸಿಗುತ್ತಿದೆ. ಹಾಗಾಗಿ ಅಮೆರಿಕದ ಯುವಜನತೆ ಇದರ ದಾಸರಾಗತೊಡಗಿದ್ದಾರೆ. ಇದನ್ನು ಇಂಜೆಕ್ಷನ್ ರೂಪದಲ್ಲಿ ಮಾತ್ರವಲ್ಲದೆ ನೇರವಾಗಿಯೂ ಸೇವಿಸಬಹುದು. ಮೊದಲೇ ಡ್ರಗ್ಸ್ ಹಾಗೂ ಬಂದೂಕುಗಳು ಅಪಾಯಕಾರಿ ಸನ್ನಿವೇಶ ಸೃಷ್ಟಿಸಿರುವ ಅಮೆರಿಕದಲ್ಲಿ ಇದು ಇನ್ನಷ್ಟು ಗಂಡಾಂತರ ಉಂಟು ಮಾಡುತ್ತಿದೆ.
ಝೈಲಾಜಿನ್ ಮಿತಿಮೀರಿದ ಸೇವನೆ ಎಂತಹ ದುಷ್ಪರಿಣಾಮವನ್ನುಂಟು ಮಾಡುತ್ತದೆಂದರೆ, ಅದು ಓವರ್ಡೋಸ್ಗೆ ಚಿಕಿತ್ಸೆಯಾಗಿ ಕೊಡಲಾಗುವ ಔಷಧಿಗಳು ಕೆಲಸ ಮಾಡದಂತೆ ಮಾಡುತ್ತದೆ. ಜೊತೆಗೆ ಅತಿಯಾದ ನಿದ್ರೆ, ಉಸಿರಾಟದ ತೊಂದರೆಯನ್ನೂ ತರುತ್ತದೆ. ಇವೆಲ್ಲದರ ಜೊತೆಗೇ ಹುಣ್ಣುಗಳಾಗುವುದು ಮತ್ತು ಅಪಾಯಕಾರಿ ವೇಗದಲ್ಲಿ ಅವು ಹೆಚ್ಚುವುದು, ಕಡೆಗೆ ಅದು ಕೊಳೆಯುತ್ತ ಹೋಗಿ ಚರ್ಮ ನಿರ್ಜೀವವಾಗಿ, ಆ ಭಾಗವನ್ನೇ ಕತ್ತರಿಸಬೇಕಾದ ಸಂದರ್ಭವನ್ನು ತಂದಿಡುತ್ತದೆ.
2021ರಲ್ಲಿ, ಫಿಲಡೆಲ್ಫಿಯಾದಲ್ಲಿ ಇದು ಮೊದಲು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಯಿತು. ಅಲ್ಲಿ ಪರೀಕ್ಷಿಸಲಾಗುವ ಶೇ.90ರಷ್ಟು ಡ್ರಗ್ಗಳಲ್ಲಿ ಝೈಲಾಜಿನ್ ಸೇರಿರುವುದು ಗಮನಕ್ಕೆ ಬಂದಿದೆ. ಇತರ ನಿಷೇಧಿತ ಔಷಧಗಳೊಂದಿಗೆ ಸೇರಿಕೊಂಡಾಗ ಇದು ಇನ್ನೂ ಅಪಾಯಕಾರಿ ಎನ್ನಲಾಗುತ್ತದೆ. ಫೆಂಟನಿಲ್ನಂತಹ ಡ್ರಗ್ಗಳಲ್ಲಿ ಇದನ್ನು ಬೆರೆಸಲಾಗುತ್ತಿದ್ದು, ಕೆಲವೇ ಡಾಲರ್ಗಳಿಗೆ ಬೀದಿಯಲ್ಲೇ ಮಾರಾಟ ಮಾಡಲಾಗುತ್ತಿದ್ದು, ಯುವಕರ ಕೈಗೆ ಸುಲಭವಾಗಿ ಸಿಗುತ್ತಿದೆ.
ನ್ಯೂಯಾರ್ಕ್ ಸಿಟಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಪ್ರಕಾರ, 2021ರಲ್ಲಿ ಝೈಲಾಜಿನ್ ಮಿತಿಮೀರಿದ ಸೇವನೆಯಿಂದ ನ್ಯೂಯಾರ್ಕ್ನಲ್ಲಿ 2,668 ಜನರು ಸಾವನ್ನಪ್ಪಿದ್ದಾರೆ. ಇದು ಮಾದಕ ವ್ಯಸನದ ಪಿಡುಗು ಇನ್ನಷ್ಟಾಗಲು ಕಾರಣವಾದೀತೆಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸತೊಡಗಿದ್ದಾರೆ.
ವರದಿಯೊಂದರ ಪ್ರಕಾರ, ಅಮೆರಿಕದಾದ್ಯಂತ ನಗರಗಳಲ್ಲಿ ಝೈಲಾಜಿನ್ ಪ್ರಭಾವ ಕಾಣಿಸತೊಡಗಿದೆ.
ಅದರ ಬಳಕೆ ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಬಳಸುವ ವ್ಯಕ್ತಿಗಳ ಮೈಯೆಲ್ಲ ಹುಣ್ಣಾಗುವಂತೆ ಮಾಡುವ ಅದರ ವಿಲಕ್ಷಣ ಪರಿಣಾಮ ಆರೋಗ್ಯ ವ್ಯವಸ್ಥೆಯನ್ನೇ ನಡುಗಿಸತೊಡಗಿದೆ. ಅಮೆರಿಕದ ಯುವಜನರನ್ನು ಇದು ವಿನಾಶಕ್ಕೆ ಕೊಂಡೊಯ್ಯಲಿದೆ ಎಂದೇ ಹೇಳಲಾಗುತ್ತಿದೆ.