ನಿವೃತ್ತರ ಪ್ರವೃತ್ತಿ ತಳ ಸಮುದಾಯದ ಅಭಿವೃದ್ಧಿಯ ಕಡೆಗಿರಲಿ
ನಮ್ಮ ನಡುವಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಜ್ಞಾವಂತ ದಲಿತ ಸಮುದಾಯದ ಸರಕಾರಿ ಅಧಿಕಾರಿ ನೌಕರರಲ್ಲಿ ಸಮುದಾಯದ ಬಗೆಗಿನ ಕಾಳಜಿಯನ್ನು ಸಂಶಯಿಸಲಾಗದು. ವಿದ್ಯಾಭ್ಯಾಸ ಹಾಗೂ ನಿರುದ್ಯೋಗದ ಹಂತದಲ್ಲಿದ್ದ ತುಡಿತ ಸರಕಾರಿ ನೌಕರಿಯೊಂದು ದೊರೆತ ನಂತರ ಎದುರಾಗುವ ಸರಕಾರದ ಸೇವಾ ನಿಯಮಗಳು, ವೃತ್ತಿ ಸಂಬಂಧಿತ ನಿಬಂಧನೆಗಳು, ಇಲಾಖೆ ಮತ್ತು ಮೇಲಧಿಕಾರಿಗಳ ಕಟ್ಟಪ್ಪಣೆಗಳು, ಕೆಲಸ ನಿರ್ವಹಣೆಯ ಹೊಣೆಗಾರಿಕೆಗಳು ಸುತ್ತುವರಿದು ಅವರನ್ನು ಮೂಕ ಪ್ರೇಕ್ಷಕನನ್ನಾಗಿಸುವುದು ಸಹಜವೇ. ಆದರೂ, ಬದ್ಧತೆಯುಳ್ಳ ಅಧಿಕಾರಿಗಳು ದಲಿತ ಸಂಘಟನೆಗಳಿಗೆ, ಅಶಕ್ತ ದಲಿತ ವ್ಯಕ್ತಿಗಳಿಗೆ ತಮ್ಮ ಇತಿಮಿತಿಗಳಲ್ಲಿ ನೆರವಾದ ಘಟನೆಗಳನ್ನು ಮರೆಯುವಂತಿಲ್ಲ. ಇದರ ನಡುವೆ ಅನೇಕ ಬಾರಿ ಸಮುದಾಯದ ಹಿತವನ್ನು ಬಯಸುವ ವ್ಯಕ್ತಿಗಳಿಗೆ ಎದುರಾಗುವ ವೈಯಕ್ತಿಕ ಬದುಕಿನ ಸವಾಲುಗಳು ಹೈರಾಣಾಗಿಸಿ ಯಾವ ಸಹವಾಸವೂ ಬೇಡವೆಂದು ನಿರ್ಲಿಪ್ತರಾಗುಳಿದ ಘಟನೆಗಳೂ ಉಂಟು.
ಸಮಾಜವನ್ನು ಅರ್ಥೈಸಿಕೊಂಡ ಸುಶಿಕ್ಷಿತರು ತಾವು ಹುಟ್ಟಿಬಂದ ಸಮುದಾಯಕ್ಕೆ ಕಿಂಚಿತ್ತಾದರೂ ನೆರವಾಗಬೇಕೆಂಬ ಅಭಿಲಾಷೆ ಹೊಂದಿರುವಂತೆಯೇ ಬಡತನದ ಬೇಗೆಯಲ್ಲಿ ನೊಂದು ಬೆಂದು ಈಗಷ್ಟೇ ಸರಕಾರಿ ನೌಕರಿಯೊಂದನ್ನು ಗಳಿಸಿರುವ ಕೆಲವರು ಸಮಾಜದೊಳಗಿನ ವ್ಯವಸ್ಥೆಯನ್ನು ಕಂಡು ತಮ್ಮ ಜಾತಿಯನ್ನು ಹೇಳಿಕೊಳ್ಳದೆ, ಸ್ವಜಾತಿ ಪ್ರೇಮವನ್ನೂ ತೋರದೆ ತಾವಾಯಿತು, ತಮ್ಮ ಪಾಡಾಯಿತು ಎಂದು ಕಡತಗಳೊಂದಿಗೆ ಮಾತನಾಡುತ್ತಾ ದಿನ ನೂಕುವವರೂ ಕಾಣಿಸುತ್ತಾರೆ. ಇದರ ನಡುವೆ ನೌಕರರ ಸಂಘದ ಪ್ರತಿನಿಧಿಗಳೆಂದು ಹೇಳಿಕೊಂಡು ತಿರುಗಾಡುವವರು, ಕಿರುಕುಳ ಕೊಡುವ ಅಧಿಕಾರಿಗಳಿಗೆ ಸಿ.ಆರ್.ಇ. ಸೆಲ್ ಅಥವಾ ದಲಿತ ಸಂಘಟನೆಗಳಿಗೆ ದೂರು ಸಲ್ಲಿಸಿ ಚುರುಕು ಮುಟ್ಟಿಸಿರುವವರು, ಮಾತು ಮಾತಿಗೂ ಜಾತಿಯನ್ನೇ ಪ್ರಧಾನವಾಗಿಸಿಕೊಂಡು ಎಲ್ಲರನ್ನೂ ಎದುರು ಹಾಕಿಕೊಂಡವರು, ಚಟಗಳಿಗೆ ಬಲಿಯಾಗಿ ಅದನ್ನು ದೈನಂದಿನ ವೃತವನ್ನಾಗಿಸಿ ಕೊಂಡವರು, ಕೆಲಸ ಕಲಿಯುವ ಆಸಕ್ತಿ ತೋರದೆ ಸೋಮಾರಿತನವನ್ನು, ಕೆಲವೊಮ್ಮೆ ಉದ್ಧಟತನವನ್ನು ಅದೂ ಅಲ್ಲದೆ ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಳ್ಳದೆ ಕಾಲ ತಳ್ಳುವವರು, ಸಂಘ ಸಂಸ್ಥೆಗಳು ಬೆಂಬಲಕ್ಕಿವೆ ಎಂದು ಮೇಲಧಿಕಾರಿಗಳ ಎದುರು ಧಿಮಾಕು ತೋರುವವರೂ ಸಿಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಇದನ್ನು ನಿರಾಕರಿಸಿದರೆ ಆತ್ಮವಂಚನೆ ಮಾಡಿಕೊಂಡಂತೆ.
ಉನ್ನತ ವ್ಯಾಸಂಗ ಮಾಡಿ ದೈನಂದಿನ ವ್ಯಾವಹಾರಿಕ ಜ್ಞಾನವನ್ನು ಗ್ರಹಿಸಿ, ಭಾಷೆ ಸಂವಹನದಲ್ಲಿ ಪಕ್ವವಾಗಿ, ಕಾಲೋಚಿತ ಸಂಗತಿಗಳಿಗೆ ಮುಖಾಮುಖಿಯಾಗಿ, ನೀತಿ ನಿಯಮಗಳ ಚೌಕಟ್ಟಿನಲ್ಲಿ ಪ್ರಬುದ್ಧತೆಯನ್ನು ತೋರುವ ಈ ಸಮುದಾಯದ ಅಧಿಕಾರಿ/ನೌಕರರನ್ನು ಕಡೆಗಣಿಸುವ, ಅವರ ಜ್ಞಾನಸಂಪತ್ತಿನ ಬಗ್ಗೆ ಸಂದೇಹಿಸುವ, ವ್ಯಂಗ್ಯ ಹಾಗೂ ಕುಚೋದ್ಯವನ್ನು ಮೈಗೂಡಿಸಿಕೊಂಡಿರುವ ಪೂರ್ವಾಗ್ರಹಪೀಡಿತ ವ್ಯವಸ್ಥೆ ನಮ್ಮೆದುರು ಇರುವುದು ಸತ್ಯವಷ್ಟೆ. ಮಾತ್ರವಲ್ಲ, ದಲಿತ ಸಮುದಾಯದ ಅಧಿಕಾರಿ/ನೌಕರರ ಏಳಿಗೆಯನ್ನು ಸಹಿಸದೆ ಬೌದ್ಧಿಕ ಪ್ರತಿಭೆಯನ್ನು ಕಂಡು ಕರುಬುತ್ತಾ ಅನಗತ್ಯವಾಗಿ ಪದೇ ಪದೇ ವರ್ಗಾವಣೆಯ ಶಿಕ್ಷೆ ಕೊಟ್ಟು ಮೂಲೆಗುಂಪು ಮಾಡಿ ಮಾನಸಿಕ ಕಿರುಕುಳ ಕೊಟ್ಟ ಹಾಗೂ ಕೊಡುವ ಜಾತಿವಾದಿ ವ್ಯವಸ್ಥೆ ನಮ್ಮೆದುರು ಇಲ್ಲವೆಂದು ಎದೆತಟ್ಟಿ ಯಾರೂ ಹೇಳಲಾರರು. ಇಂತಹ ಸಂಕೀರ್ಣ ಸವಾಲುಗಳ ನಡುವೆ ತಮ್ಮ ವೈಯಕ್ತಿಕ ಬದುಕಿನ ಎಲ್ಲ ಜಂಜಾಟಗಳ ಜೊತೆ ಜೊತೆಗೆ ಸರಕಾರಿ ಸೇವಾವಧಿಯನ್ನೂ ತೃಪ್ತಿಕರವಾಗಿ ಪೂರೈಸಿ ನಿವೃತ್ತಿಗೊಳ್ಳುವ ಈ ಸಮುದಾಯದ ಅಧಿಕಾರಿ/ ನೌಕರರು ನಿವೃತ್ತಿಯ ನಂತರದ ಬದುಕನ್ನು ವ್ಯವಸ್ಥಿತವಾಗಿ ಕಟ್ಟಿಕೊಳ್ಳುವವರು ಇರುವಂತೆಯೇ, ರಾಜಕಾರಣದತ್ತ ಆಸಕ್ತಿ ಬೆಳೆಸಿಕೊಂಡು ಅದೃಷ್ಟದ ಬಾಗಿಲು ತಟ್ಟಿದರೂ ಯಶಸ್ವಿಯಾದವರು ಬೆರಳೆಣಿಕೆಯಷ್ಟಿರಬಹುದು. ಆದರೆ, ಒಟ್ಟಾರೆ ಫಲಶ್ರುತಿ ಮಾತ್ರ ಶೂನ್ಯವೇ. ವಯೋ ನಿವೃತ್ತಿಯ ನಂತರ ಬೆನ್ನಟ್ಟುವ ವೃದ್ಧಾಪ್ಯ, ಅನಾರೋಗ್ಯ, ಸಾಂಸಾರಿಕ ತಾಪತ್ರಯಗಳು, ಮಾನಸಿಕ ಒತ್ತಡ ಹೀಗೆ ಸಾಲುಸಾಲಾಗಿ ವಕ್ಕರಿಸಿಬಿಡುವ ಗಂಡಾಂತರಗಳ ನಡುವೆಯೂ ಕೆಲವರು ಪೌರಾಣಿಕ ನಾಟಕಗಳತ್ತ, ಮತ್ತೆ ಕೆಲವರು ದೇವಸ್ಥಾನ ಮಠ ಮಂದಿರಗಳ ಸುತ್ತ, ಮತ್ತೂ ಕೆಲವರು ಹತಾಶೆ, ಅಸಮಾಧಾನ, ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಕಾಲಹರಣ ಹೀಗೆ, ತಮಗೆ ಸರಿ ಕಂಡ ಹಾದಿಯತ್ತ ತಮ್ಮನ್ನು ತೊಡಗಿಸಿಕೊಳ್ಳುವವರೂ ಅಲ್ಲಲ್ಲಿ ಕಾಣಿಸುತ್ತಾರೆಂಬುದು ಸುಳ್ಳಲ್ಲ. ಜೊತೆಗೆ ನಮಗೆ ವಯಸ್ಸಾಯಿತು... ಎಂದು ಸಂಕಟಪಡುವವರು ಸಹ.
ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಜೀವಂತವಿರುವ ಅಸ್ಪಶ್ಯತೆ, ಜಾತೀಯತೆಯನ್ನು ನಿರ್ಮೂಲನೆಗೊಳಿಸಲು ಸರಕಾರಿ ಸೇವೆಯ ನಿವೃತ್ತಿಯ ನಂತರವಾದರೂ ಈ ಸಮುದಾಯದ ನಿವೃತ್ತ ಅಧಿಕಾರಿ/ನೌಕರರ ಹೆಜ್ಜೆಗಳು ತಮ್ಮ ತಮ್ಮ ಹಟ್ಟಿ/ಕಾಲನಿಗಳತ್ತ ಸಾಗಿ ಸಮಾಜ ಪರಿವರ್ತನೆಯ ಮಹಾಪುರುಷರ ಚಿಂತನೆಗಳನ್ನು ಪ್ರಸರಿಸುವ, ಜಾತಿವಿನಾಶ, ಅಸ್ಪಶ್ಯತೆ ನಿವಾರಣೆ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಬೀಜಗಳನ್ನು ಬಿತ್ತುವ ಮೂಲಕ ಬಾಬಾ ಸಾಹೇಬರ ಕನಸುಗಳನ್ನು ನನಸು ಮಾಡುವತ್ತ ತೊಡಗಿಸಿಕೊಂಡರೆ ಸೇವಾವಧಿಯ ಮೀಸಲಾತಿ ಫಲಾನುಭವಿಗಳು ಹಾಗೂ ನಿವೃತ್ತ ಅಧಿಕಾರಿ/ನೌಕರರ ಬದುಕು ಸಾರ್ಥಕವಾಗುವುದಲ್ಲದೆ ಮುಂದಿನ ಪೀಳಿಗೆಗೆ ಮಾರ್ಗದರ್ಶನದ ಜೊತೆಗೆ ಅವರಲ್ಲಿ ಭರವಸೆಯನ್ನೂ ಚಿಗುರಿಸಬಹುದಲ್ಲವೆ?