ಅದಾನಿ ಕಲ್ಲಿದ್ದಲು ಉದ್ಯಮ: ಮೋದಿ ಸರಕಾರ ಮೆತ್ತಿಕೊಂಡ ಮಸಿಯೆಷ್ಟು?

Update: 2023-03-04 08:07 GMT

ಮೋದಿ ಸರಕಾರದ ನಿರ್ಧಾರಗಳು, ಮೋದಿ ರಾಜಕೀಯ ಬೆಳವಣಿಗೆಗೆ ಸಮಾನಾಂತರವಾಗಿಯೇ ಅದಾನಿ ವ್ಯವಹಾರವೂ ಬೆಳೆಯುವುದಕ್ಕೆ ಕಾರಣವಾದವು. ಅದು, ಇತರ ಅನೇಕ ಖಾಸಗಿ ಕಂಪೆನಿಗಳ ವ್ಯವಹಾರಕ್ಕೆ ಅಡ್ಡಗಾಲಿಟ್ಟು ಅದಾನಿ ಕಲ್ಲಿದ್ದಲು ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವಲ್ಲಿಯವರೆಗೂ ಮುಂದುವರಿಯಿತು. ಇಲ್ಲಿಯವರೆಗೆ, ಅದಾನಿ ಕಂಪೆನಿ 80 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲನ್ನು ತೆಗೆದಿದೆ ಎಂದು ವರದಿ ಹೇಳುತ್ತದೆ.


ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಹಗರಣ ನಡೆದಿದೆ ಎಂದು ಅದಕ್ಕೆ ಎಷ್ಟು ಮಸಿ ಹಚ್ಚಲು ಸಾಧ್ಯವೊ ಅಷ್ಟು ಮಸಿ ಹಚ್ಚಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಶುದ್ಧವಾಗಿದೆಯೆ? ಅದು ತಾನೇ ತನ್ನ ಕೈಯಾರೆ ಮಸಿ ಹಚ್ಚಿಕೊಂಡಿರುವ ವಿಚಾರ ಹಂತಹಂತವಾಗಿ ಬಯಲಾಗುತ್ತಿದೆ.

ಪ್ರಧಾನಿ ಮೋದಿಯವರ ಉದ್ಯಮಿ ಮಿತ್ರ ಗೌತಮ್ ಅದಾನಿ ಅವರಿಗೆ ಭಾರತ ಸರಕಾರ ಅಸಾಧಾರಣ ಸಹಾಯ ನೀಡಿದೆ, ಅದಾನಿ ಕಲ್ಲಿದ್ದಲು ವ್ಯವಹಾರಕ್ಕೆ ಸಂಪೂರ್ಣ ಸಾಥ್ ಕೊಟ್ಟಿದೆ ಎಂಬುದನ್ನು ಬಹಿರಂಗಪಡಿಸುವ ದಾಖಲೆಗಳನ್ನಿಟ್ಟುಕೊಂಡು ಅಲ್ ಜಝೀರಾ.ಕಾಂ ಸುದೀರ್ಘ ವರದಿ ಮಾಡಿದೆ.

ಖಾಸಗಿ ವಲಯಕ್ಕೆ ಕಲ್ಲಿದ್ದಲು ಬ್ಲಾಕ್ ಹಸ್ತಾಂತರಿಸುವಲ್ಲಿ ಮಹಾ ತಪ್ಪಾಗಿದೆ, ಪಾರದರ್ಶಕತೆಯ ಕೊರತೆಯಿದೆ ಎಂದೆಲ್ಲ ಹೇಳಿದ್ದ ಪ್ರಧಾನಿ ಮೋದಿಯವರ ಕಚೇರಿ, ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ಗೆ ಕೊಟ್ಟ ವಿನಾಯಿತಿ ಮಾತ್ರ ಸಣ್ಣದಲ್ಲ. ಭಾರತದ ದಟ್ಟ ಅರಣ್ಯ ಪ್ರದೇಶಗಳಲ್ಲಿನ 450 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲನ್ನು ಹೊಂದಿರುವ ಬ್ಲಾಕ್ನಲ್ಲಿ ಗಣಿಗಾರಿಕೆ ಮಾಡಲು ಅದಾನಿಗೆ ಮೋದಿ ಸರಕಾರ ಅವಕಾಶ ಮಾಡಿಕೊಟ್ಟಿತು. ಆದರೆ ಅದಾನಿ ಗ್ರೂಪ್ಗೆ ಏಕೆ ಅಂಥ ವಿನಾಯಿತಿ ನೀಡಲಾಗಿದೆ ಎಂಬುದನ್ನು ಸರಕಾರ ವಿವರಿಸಿಲ್ಲ ಎಂಬುದನ್ನು ಭಾರತ ಮೂಲದ ಲಾಭರಹಿತ ಮಾಧ್ಯಮ ಸಂಸ್ಥೆಯಾದ ದಿ ರಿಪೋರ್ಟರ್ಸ್ ಕಲೆಕ್ಟಿವ್ (ಟಿಆರ್ಸಿ) ಮತ್ತು ಅಲ್ ಜಝೀರಾಕ್ಕೆ ಸಿಕ್ಕಿರುವ ದಾಖಲೆಗಳು ತೋರಿಸುತ್ತಿವೆ ಎಂದು ಅದು ವರದಿ ಮಾಡಿದೆ.

ರಾಜ್ಯ ಸರಕಾರಗಳ ಒಡೆತನದ ಕಂಪೆನಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಮತ್ತು ಅದೆಲ್ಲವೂ ಶಾಸಕಾಂಗದ ಅನುಮತಿಯಿಲ್ಲದೆ ನಡೆದಿದೆ ಎಂದು ಗಮನಿಸಿದ ಸುಪ್ರೀಂ ಕೋರ್ಟ್ 2014ರಲ್ಲಿ 204 ಕಲ್ಲಿದ್ದಲು ಬ್ಲಾಕ್ಗಳ ಹಂಚಿಕೆಯನ್ನು ರದ್ದುಗೊಳಿಸಿತು. ಆ ಕಂಪೆನಿಗಳು ಗಣಿಗಾರಿಕೆಯ ಲಾಭದಾಯಕ ವ್ಯವಹಾರವನ್ನು ಖಾಸಗಿ ಕಂಪೆನಿಗಳಿಗೆ ಗೌಪ್ಯ ಒಪ್ಪಂದಗಳಲ್ಲಿ ಮುಚ್ಚಿಟ್ಟ ಬೆಲೆಗೆ ಹಸ್ತಾಂತರಿಸುತ್ತಿದ್ದವು. ಜುಲೈ 2008ರಲ್ಲಿ ಅದಾನಿ ಗ್ರೂಪ್ ಕೂಡ ಅಂತಹ ಒಂದು ಗುತ್ತಿಗೆ ಹೊಂದಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮೋದಿ ಸರಕಾರ ತೆಗೆದುಕೊಂಡ ನಿರ್ಧಾರದ ಅಡಿಯಲ್ಲಿ ಅದಾನಿ ಕಂಪೆನಿಗೆ ಮತ್ತೆ ವಿನಾಯಿತಿ ಸಿಕ್ಕಿತ್ತು. ಮೋದಿ ಸರಕಾರದ ನಿರ್ಧಾರಗಳು, ಮೋದಿ ರಾಜಕೀಯ ಬೆಳವಣಿಗೆಗೆ ಸಮಾನಾಂತರ ವಾಗಿಯೇ ಅದಾನಿ ವ್ಯವಹಾರವೂ ಬೆಳೆಯುವುದಕ್ಕೆ ಕಾರಣವಾದವು. ಅದು, ಇತರ ಅನೇಕ ಖಾಸಗಿ ಕಂಪೆನಿಗಳ ವ್ಯವಹಾರಕ್ಕೆ ಅಡ್ಡಗಾಲಿಟ್ಟು ಅದಾನಿ ಕಲ್ಲಿದ್ದಲು ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವಲ್ಲಿಯವರೆಗೂ ಮುಂದುವರಿಯಿತು. ಇಲ್ಲಿಯವರೆಗೆ, ಅದಾನಿ ಕಂಪೆನಿ 80 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲನ್ನು ತೆಗೆದಿದೆ ಎಂದು ವರದಿ ಹೇಳುತ್ತದೆ.

ಯುಪಿಎ ಸರಕಾರ ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡುವ ಬದಲು, ಕೈಗಾರಿಕೆಗಳಿಗೆ ಅಪಾರದರ್ಶಕ ಮತ್ತು ವಿವೇಚನಾ ವಿಧಾನದ ಮೂಲಕ ಕನಿಷ್ಠ ಮೊತ್ತಕ್ಕೆ ಹಂಚಿಕೆ ಮಾಡಿದ್ದು, ಸರಕಾರದ ಬೊಕ್ಕಸಕ್ಕೆ 22 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಸಿಎಜಿ ಹೇಳಿದಾಗ, ಅದನ್ನು 2014ರ ರಾಷ್ಟ್ರೀಯ ಚುನಾವಣಾ ಪ್ರಚಾರದಲ್ಲಿ ಮೋದಿ ಪ್ರಬಲ ಅಸ್ತ್ರವಾಗಿಸಿಕೊಂಡಿದ್ದರು. ಕಲ್ಲಿದ್ದಲು ಹಗರಣ ಇಡೀ ದೇಶದ ಮುಖವನ್ನು ಕಪ್ಪಾಗಿಸಿದೆ ಎಂದರು. ಎಐಸಿಸಿಯನ್ನು ಆಲ್ ಇಂಡಿಯಾ ಕೋಲ್ ಕಾಂಗ್ರೆಸ್ ಎಂದು ಜರೆದರು. ಅಂತಿಮವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಮೇಲೆ ನಡೆದದ್ದೇ ಕಲ್ಲಿದ್ದಲು ಗಣಿಗಳ ಪಾರದರ್ಶಕ ಎಂದು ಹೇಳಲಾದ ಮರು ಹರಾಜು ಆಟ.

ಆದರೆ ನಿಜವಾಗಿಯೂ ಅದು ಪಾರದರ್ಶಕವಾಗಿತ್ತೆ? ಅಲ್ ಜಝೀರಾ ತನಿಖೆ ಬಯಲು ಮಾಡಿರುವ ಪ್ರಕಾರ, ಸರಕಾರ ಖಾಸಗಿ ನಿಗಮಗಳಿಗೆ ಸ್ಪರ್ಧಾತ್ಮಕ ಪ್ರಕ್ರಿಯೆಯನ್ನು ಬೈಪಾಸ್ ಮಾಡಲು ಅವಕಾಶ ಮಾಡಿಕೊಟ್ಟಿತು. ಹೇಗೆ ಸರಕಾರ ಕಲ್ಲಿದ್ದಲು ಹರಾಜಿನಲ್ಲಿ ಸ್ಪರ್ಧೆ ಕಡಿಮೆ ಮಾಡಿ ಗಣಿ ಪಡೆದುಕೊಳ್ಳುವುದಕ್ಕೆ ಶೆಲ್ ಕಂಪೆನಿಗಳನ್ನು ಬಳಸಲು ಆರ್ಪಿ-ಸಂಜೀವ್ ಗೋಯೆಂಕಾ (ಆರ್ಪಿಎಸ್ಜಿ) ಗುಂಪಿಗೆ ಅವಕಾಶ ಮಾಡಿಕೊಟ್ಟಿತು, ಹಾಗೆಯೇ ಯಾವ ಕಲ್ಲಿದ್ದಲು ಹಗರಣದ ಬಗ್ಗೆ ಅಬ್ಬರದ ಟೀಕೆ ಮಾಡಿ ಅಧಿಕಾರಕ್ಕೆ ಬರಲಾಗಿತ್ತೋ ಅದೇ ಕಲ್ಲಿದ್ದಲು ಹಗರಣ ಕಾಲದ ವ್ಯವಹಾರಗಳನ್ನು ಮುಂದುವರಿಸಲು ಗೌತಮ್ ಅದಾನಿ ಒಡೆತನದ ಸಮೂಹಕ್ಕೆ ಮತ್ತೊಂದು ಮಾರ್ಗದ ಮೂಲಕ ಹೇಗೆ ಸಹಾಯ ಮಾಡಿತು ಎಂಬುದನ್ನು ಅಲ್ ಜಝೀರಾ ತನಿಖೆ ಬಹಿರಂಗಪಡಿಸುತ್ತದೆ.

ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಬ್ಲಾಕ್ಗಳನ್ನು ಖಾಸಗಿ ವಲಯದ ಸಂಸ್ಥೆಗಳಿಗೆ ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಕಂಪೆನಿಗಳಿಗೂ ಹಂಚಿಕೆ ಮಾಡಲಾಗಿತ್ತು. ಅವು ಮತ್ತೆ ಖಾಸಗಿ ಕಂಪೆನಿಗಳಿಗೆ ರಹಸ್ಯ ಒಪ್ಪಂದಗಳ ಅಡಿಯಲ್ಲಿ ಬಹಿರಂಗಪಡಿಸದ ದರಗಳಲ್ಲಿ ಗಣಿಗಾರಿಕೆಯ ಹಕ್ಕುಗಳನ್ನು ನೀಡಿದ್ದವು. ಗಣಿಗಾರಿಕೆ ಉದ್ಯಮದ ಭಾಷೆಯಲ್ಲಿ ಆ ಒಪ್ಪಂದಗಳನ್ನು ಮೈನ್ ಡೆವಲಪರ್ ಮತ್ತು ಆಪರೇಟರ್ (ಎಂಡಿಒ) ಒಪ್ಪಂದಗಳು ಎಂದು ಕರೆಯಲಾಗುತ್ತದೆ.

ಅದಾನಿ ಗ್ರೂಪ್ ಎಂಡಿಒ ಮಾರ್ಗವನ್ನೇ ಕಲ್ಲಿದ್ದಲು ವ್ಯವಹಾರಕ್ಕೆ ಲಾಭದಾಯಕ ಪ್ರವೇಶವಾಗಿ ಬಳಸಿಕೊಂಡಿತು. ಕ್ರಮೇಣ ಅದಾನಿ ಸಮೂಹ ಭಾರತದ ಅತಿದೊಡ್ಡ ಕಲ್ಲಿದ್ದಲು ಎಂಡಿಒ ಆಗಿ ಹೊರಹೊಮ್ಮಿದ್ದು, ಪ್ರಸಕ್ತ, 2,800 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲು ಹೊಂದಿರುವ ಬ್ಲಾಕ್ಗಳಿಗಾಗಿ ಅದು ಒಂಭತ್ತು ಎಂಡಿಒ ಒಪ್ಪಂದಗಳನ್ನು ಹೊಂದಿದೆ ಎನ್ನುತ್ತದೆ ವರದಿ.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮೋದಿ ಸರಕಾರ ಎಲ್ಲಾ 204 ಕಲ್ಲಿದ್ದಲು ಬ್ಲಾಕ್ಗಳನ್ನು ಹಿಂದಿನ ಫಲಾನುಭವಿಗಳ ಬಗ್ಗೆ ಚಿಂತಿಸದೆ ಹರಾಜು ಮಾಡುವ ಅವಕಾಶ ಪಡೆದಿತ್ತು. ಹೊಸ ಕಾನೂನನ್ನು ತಂದ ಮತ್ತು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಕಾನೂನುಗಳನ್ನು ತಿದ್ದುಪಡಿ ಮಾಡಿದ ಸರಕಾರ, ಕಲ್ಲಿದ್ದಲು ಬ್ಲಾಕ್ಗಳನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಹರಾಜು ಮಾಡುವುದಾಗಿಯೂ, ಉಚಿತವಾಗಿ ಹಂಚುವುದಿಲ್ಲ ಎಂದೂ ಹೇಳಿಕೊಂಡಿತು. ಆದರೆ ಅದು ಕೇವಲ ಅರ್ಧ ಸತ್ಯವಾಗಿತ್ತು ಎನ್ನುತ್ತದೆ ವರದಿ.

ಯಾವುದನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದಿತ್ತೋ ಅದನ್ನೇ ಮೋದಿ ಸರಕಾರ ಶಾಸಕಾಂಗದ ಬೆಂಬಲದೊಂದಿಗೆ ಮಾಡಿತ್ತು ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಕಂಪೆನಿಗಳಿಗೆ ಮತ್ತೊಮ್ಮೆ ವಿವೇಚನೆಯ ಹಂಚಿಕೆಗೆ ಸ್ವತಃ ಅಧಿಕಾರ ನೀಡಿತು. ವಿವಾದಾತ್ಮಕ ಎಂಡಿಒ ಒಪ್ಪಂದಗಳಿಗೆ ಸ್ಪಷ್ಟ ಶಾಸಕಾಂಗ ಬೆಂಬಲ ನೀಡಲಾಯಿತು. ಮಾದರಿ ಒಪ್ಪಂದವನ್ನು ಸಹ ಸಿದ್ಧಪಡಿಸಲಾಯಿತು. ಜನರ ಮಾಹಿತಿಗೆ ಒಪ್ಪಂದವು ಸಿಗದಂತಿರುವಂತೆ ನೋಡಿಕೊಳ್ಳಲಾಯಿತು ಮಾತ್ರವಲ್ಲ, ರಾಜ್ಯ ಸರಕಾರ ಖಾಸಗಿ ಕಂಪೆನಿಗೆ ಗಣಿ ಕೊಟ್ಟ ಬೆಲೆ ಇಲ್ಲಿಯೂ ಯಾರಿಗೂ ಗೊತ್ತಾಗುವುದಿಲ್ಲ ಎನ್ನುತ್ತದೆ ಅಲ್ ಜಝೀರಾ ವರದಿ.

ಇದಾದ ನಂತರದ ಸರಕಾರದ ಮುಂದಿನ ಹೆಜ್ಜೆಯೇ ಅದಾನಿ ಗ್ರೂಪ್ಗೆ ನೆರವಾಗುವುದಾಗಿತ್ತು. ಹೊಸದಾಗಿ ಗಣಿಗಳನ್ನು ಮಂಜೂರು ಮಾಡಿದ ರಾಜ್ಯ ಸರಕಾರಗಳು, ಕೋರ್ಟ್ ರದ್ದುಪಡಿಸಿದ್ದ ಹಂಚಿಕೆಗಳನ್ನು ಹೊಂದಿದ್ದ ಹಿಂದಿನ ಮಾಲಕರು ಎಂಡಿಒ ಒಪ್ಪಂದಗಳನ್ನು ಮುಂದುವರಿಸಲು ಅನುಮತಿಸುವ ಅವಕಾಶವನ್ನು ಸರಕಾರ ಕಾನೂನಿನಲ್ಲಿ ಸೇರಿಸಿತು. ಕಲ್ಲಿದ್ದಲು ಗಣಿಗಾರಿಕೆಗೆ ಯಾವ ಖಾಸಗಿ ಕಂಪೆನಿ ಕಡಿಮೆ ಶುಲ್ಕ ವಿಧಿಸಲು ಸಿದ್ಧ ಎಂಬುದನ್ನು ತಿಳಿಯಲು ರಾಜ್ಯಗಳು ಹೊಸದಾಗಿ ಹರಾಜು ನಡೆಸಬೇಕಾಗಿರಲಿಲ್ಲ. ರದ್ದಾದ ಎಂಡಿಒ ಒಪ್ಪಂದಗಳನ್ನು ಅದೇ ಕಂಪೆನಿಯೊಂದಿಗೆ ಪುನಃ ಮಾಡಿಕೊಳ್ಳಬಹುದಿತ್ತು. ಈ ಅಸಾಧಾರಣ ನಿಬಂಧನೆ, ಎರಡು ಗಣಿಗಳಿಗೆ ಅದಾನಿ ಗ್ರೂಪ್ ಕಂಪೆನಿಗಳನ್ನು ಪುನಃ ಎಂಡಿಒ ಆಗಿಸಲು ಬಿಜೆಪಿ ಆಡಳಿತದ ರಾಜ್ಯ ಸರಕಾರಕ್ಕೆ ಅನುಕೂಲಕರವಾಯಿತು.

2007ರಲ್ಲಿ, 450 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲು ಹೊಂದಿರುವ ಗಣಿಯಾದ ಪಾರ್ಸಾ ಈಸ್ಟ್ ಮತ್ತು ಕೆಂಟೆ ಬಸನ್ ಅನ್ನು ರಾಜಸ್ಥಾನದ ಸರಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿಯಾದ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ (ಆರ್ಆರ್ವಿಯುಎನ್ಎಲ್) ಗೆ ಹಂಚಲಾಗಿತ್ತು. ಬ್ಲಾಕ್ ಅನ್ನು ಹಂಚುವ ಒಂದು ವರ್ಷಕ್ಕಿಂತ ಮುಂಚೆ, ರಾಜಸ್ಥಾನದ ಸಾರ್ವಜನಿಕ ವಲಯದ ಕಂಪೆನಿ ಅದಾನಿ ಗ್ರೂಪ್ ಅನ್ನು ತನ್ನ ಜಂಟಿ ಉದ್ಯಮ, ಪಾರ್ಸಾ ಕೆಂಟೆ ಕಾಲೀಯರೀಸ್ ಲಿಮಿಟೆಡ್ ಗೆ ಪಾಲುದಾರನನ್ನಾಗಿ ಆಯ್ಕೆ ಮಾಡಿತು. ಈ ಜಂಟಿ ವ್ಯವಹಾರದಲ್ಲಿ ಅದಾನಿ ಗ್ರೂಪ್ ಶೇ. 74 ಷೇರುಗಳನ್ನು ಹೊಂದಿದ್ದರೆ, ಸರಕಾರಿ ಸ್ವಾಮ್ಯದ ಸಂಸ್ಥೆ ಶೇ. 26 ಷೇರುಗಳನ್ನು ಹೊಂದಿತ್ತು.

ಜುಲೈ 2008ರಲ್ಲಿ, ಈ ಜಂಟಿ ಉದ್ಯಮ ಛತ್ತೀಸ್ಗಡದ ಹಾಸ್ಡಿಯೊ ಅರಂಡ್ ಅರಣ್ಯಗಳಲ್ಲಿ ಪಾರ್ಸಾ ಈಸ್ಟ್ ಮತ್ತು ಕೆಂಟೆ ಬಸನ್ ಕಲ್ಲಿದ್ದಲು ಗಣಿಗಾಗಿ ಎಂಡಿಒ ಒಪ್ಪಂದಕ್ಕೆ ಸಹಿ ಹಾಕಿದಾಗ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಮುಖ್ಯಮಂತ್ರಿಯಾಗಿದ್ದರೆ, ಛತ್ತೀಸ್ಗಡದಲ್ಲಿ ರಮಣ್ ಸಿಂಗ್ ಸರಕಾರವಿತ್ತು. 2013ರ ಹೊತ್ತಿಗೆ, ಕಲ್ಲಿದ್ದಲು ಉತ್ಪಾದನೆ ಪ್ರಾರಂಭವಾಯಿತು. 2014ರಲ್ಲಿ, ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದ 204 ಹಂಚಿಕೆಗಳಲ್ಲಿ, ರಾಜಸ್ಥಾನದ ಸರಕಾರಿ ಸ್ವಾಮ್ಯದ ಸಂಸ್ಥೆಯ ಈ ಗಣಿಗಾರಿಕೆ ಹಕ್ಕು ಕೂಡ ಒಂದಾಗಿತ್ತು.

ಮಾರ್ಚ್ 26, 2015ರಂದು, ಅದೇ ಬ್ಲಾಕ್ ಅನ್ನು ಆರ್ಆರ್ವಿಯುಎನ್ಎಲ್ಗೆ ಅದರ ಎರಡು ಉಷ್ಣ ವಿದ್ಯುತ್ ಕೇಂದ್ರಗಳಿಗೆ ಇಂಧನ ನೀಡಲು ಮರುಹಂಚಿಕೆ ಮಾಡಲಾಯಿತು. ಹಳೆಯ ಎಂಡಿಒ ಒಪ್ಪಂದಗಳನ್ನು ಮರುಸ್ಥಾಪಿಸಲು ಸಮ್ಮತಿಸುವ ಹೊಸ ಕಲ್ಲಿದ್ದಲು ಕಾನೂನಿನ ಷರತ್ತಿನ ಅಡಿಯಲ್ಲಿ, ರಾಜಸ್ಥಾನದ ಸರಕಾರಿ ಸ್ವಾಮ್ಯದ ಸಂಸ್ಥೆ ತನ್ನ ಅದಾನಿ ಗ್ರೂಪ್ ನೇತೃತ್ವದ ಜಂಟಿ ಉದ್ಯಮದೊಂದಿಗೆ ಕಲ್ಲಿದ್ದಲು ಹಗರಣ ಕಾಲದ ಒಪ್ಪಂದವನ್ನೇ ಮುಂದುವರಿಸಿತು ಎಂಬುದನ್ನು ದಾಖಲೆಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.

ಗಣಿಗಳು, ಖನಿಜಗಳು ಮತ್ತು ಕಲ್ಲಿದ್ದಲು ಕ್ಷೇತ್ರದ ರಹಸ್ಯ ವರದಿಯನ್ನು, ಸರಕಾರದ ಚಿಂತಕರ ಚಾವಡಿ ನೀತಿ ಆಯೋಗ, ಪ್ರಧಾನ ಮಂತ್ರಿಗೆ ನೇರವಾಗಿ ವರದಿ ಮಾಡುವ ದೇಶದ ಅತ್ಯಂತ ಹಿರಿಯ ಅಧಿಕಾರಿಯಾದ ಕ್ಯಾಬಿನೆಟ್ ಕಾರ್ಯದರ್ಶಿಯೊಂದಿಗೆ ಹಂಚಿಕೊಂಡಿದೆ. ಯಾವ ದಿನಾಂಕದಂದು ಎಂಬುದು ಕೂಡ ಬಹಿರಂಗವಾಗಿಲ್ಲ. ವರದಿ ಒಳಗೊಂಡಿರುವ ಅಂಶಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಯೂ ಅದು ಸಿಗದಂತೆ ಸರಕಾರ ನಿರ್ಬಂಧಿಸಿದೆ. ಆದರೆ ಆ ವರದಿಗೆ ಸಂಬಂಧಿಸಿದ ಇತರ ಪತ್ರವ್ಯವಹಾರಗಳ ವಿವರ ಟಿಆರ್ಸಿಗೆ ಲಭ್ಯವಾಗಿದೆ ಎಂದು ಅಲ್ ಜಝೀರಾ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಆ ರಹಸ್ಯ ವರದಿ ಎಂಡಿಒ ಗುತ್ತಿಗೆ ವ್ಯವಹಾರದ ತೀವ್ರ ಪರಿಶೀಲನೆಗೆ ಶಿಫಾರಸು ಮಾಡಿದೆಯೆಂಬ ಅಂಶ ಗೊತ್ತಾಗಿದೆ. ಅಲ್ ಜಝೀರಾಗಾಗಿ ಟಿಆರ್ಸಿ ಮಾಹಿತಿ ಹಕ್ಕು ಮೂಲಕ ಮಾರ್ಚ್ 2020ರಲ್ಲಿ ಪಡೆದಿರುವ ವಿವರಗಳು, ಎಂಡಿಒ ಮಾದರಿ ಎಷ್ಟು ದೋಷಪೂರಿತ ಎಂಬುದರ ಚರ್ಚೆ ಪ್ರಧಾನಿ ಕಚೇರಿ ಮತ್ತು ಇತರ ಸರಕಾರಿ ಇಲಾಖೆಗಳ ನಡುವೆ ನಡೆದಿದೆ ಎಂಬುದನ್ನು ತೋರಿಸಿವೆ ಎಂದು ವರದಿ ಹೇಳಿದೆ.

ಆ ಕೆಲವು ದಾಖಲೆಗಳ ಪ್ರಕಾರ, 2020ರ ಮಾರ್ಚ್ 4ರಂದು ನೀತಿ ಆಯೋಗದ ಸಿಇಒಗೆ ಬರೆದ ಪತ್ರದಲ್ಲಿ, ಪ್ರಧಾನಿ ಕಚೇರಿಯ ಆಗಿನ ಉಪಕಾರ್ಯದರ್ಶಿ ಮತ್ತು ಪ್ರಸಕ್ತ ಆಪ್ತ ಕಾರ್ಯದರ್ಶಿ ಹಾರ್ದಿಕ್ ಶಾ, ಎಂಡಿಒ ನೇಮಕಾತಿ ರೀತಿಯು ಸ್ಥಿರತೆ ಮತ್ತು ಪಾರದರ್ಶಕತೆಯನ್ನು ಹೊಂದಿಲ್ಲ ಎಂದು ಬರೆದಿದ್ದಾರೆ. ಗುಜರಾತ್ ಕೇಡರ್ ಅಧಿಕಾರಿಯಾಗಿರುವ ಶಾ, ಪ್ರಧಾನಿಯವರ ಅಧಿಕಾರಿಗಳ ಗುಂಪಿನಲ್ಲಿರುವ ಐವರು ಅತ್ಯುನ್ನತ ಅಧಿಕಾರಿಗಳಲ್ಲಿ ಒಬ್ಬರು. ಬ್ಲಾಕ್ಗಳ ಹಂಚಿಕೆಗೆ ಮೊದಲು ಎಂಡಿಒಗಳ ನೇಮಕ ಸೂಕ್ತವಲ್ಲ ಮತ್ತು ಭವಿಷ್ಯದಲ್ಲಿ ಇದನ್ನು ಸಮ್ಮತಿಸಲಾಗದು ಎಂಬ ಕ್ಯಾಬಿನೆಟ್ ಕಾರ್ಯದರ್ಶಿಯ ಮಾತನ್ನು ಶಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಮುಂದುವರಿಸಕೂಡದೆಂಬ ಪ್ರಧಾನಿ ಕಚೇರಿಯ ನಿಲುವನ್ನು ನೀತಿ ಆಯೋಗ ಮತ್ತು ಕಲ್ಲಿದ್ದಲು, ಹಣಕಾಸು, ಗಣಿ ಮತ್ತು ಉಕ್ಕಿನ ಸಚಿವಾಲಯಗಳು ಒಪ್ಪಿಕೊಂಡಿದ್ದು, ಭವಿಷ್ಯದಲ್ಲಿ ಅಂತಹ ಯಾವುದೇ ಒಪ್ಪಂದಗಳಿಗೆ ಅವಕಾಶ ನೀಡದಿರಲು ನಿರ್ಧರಿಸಿವೆ. ಈ ಸಚಿವಾಲಯಗಳ ಅಧಿಕಾರಿಗಳು ಪ್ರಧಾನಿ ಕಚೇರಿಯ ಶಿಫಾರಸು ವಿಚಾರವಾಗಿ ಚರ್ಚಿಸಲು 2020ರಲ್ಲಿ ಎರಡು ಬಾರಿ, ಆಗಸ್ಟ್ 25 ಮತ್ತು ಅಕ್ಟೋಬರ್ 7ರಂದು ಸಭೆ ಸೇರಿದ್ದರು ಮತ್ತು ಅಲ್ಲಿ, ಅದಾನಿ ಗ್ರೂಪ್ಗೆ ಕೊಡಲಾದ ರಾಜಸ್ಥಾನದ ಪಾರ್ಸಾ ಗಣಿ ಗುತ್ತಿಗೆಯಲ್ಲಿ ಕಲ್ಲಿದ್ದಲು ಹಗರಣ ಕಾಲದ ಎಂಡಿಒ ಒಪ್ಪಂದವೇ ಮುಂದುವರಿದಿರುವುದನ್ನು ಅಧಿಕಾರಿಗಳು ಪ್ರಸ್ತಾಪಿಸಿರುವುದು ಗೊತ್ತಾಗಿದೆ.

ಆದರೂ, ಮೋದಿ ಸರಕಾರದ 2015ರ ಕಲ್ಲಿದ್ದಲು ಕಾನೂನಿನಲ್ಲಿರುವ ಅದಾನಿ ಗ್ರೂಪ್ಗೆ ಸಹಾಯ ಮಾಡಿದ ಷರತ್ತನ್ನು ಬದಲಾಯಿಸಬಾರದು ಎಂಬ ಶಿಫಾರಸು ಕೂಡ ಅಲ್ಲಿ ಬಂತು. ಬದಲಾಗಿ, ಹಳೆಯ ಎಂಡಿಒ ಒಪ್ಪಂದಗಳನ್ನು ಮುಂದುವರಿಸದಿರುವ ಷರತ್ತುಗಳನ್ನು ಭವಿಷ್ಯದ ಒಪ್ಪಂದಗಳಲ್ಲಿ ಸೇರಿಸಬೇಕು ಎಂದು ನಿರ್ಧರಿಸಲಾಯಿತು. ಅಂದರೆ, ಅದಾನಿ ಗ್ರೂಪ್ನ ಎಂಡಿಒ ಡೀಲ್ ಯಾವುದೇ ಧಕ್ಕೆಯಿಲ್ಲದೆ ಮುಂದುವರಿಯುವುದಕ್ಕೆ ಅಲ್ಲಿ ಒಪ್ಪಲಾಗಿದೆ ಎಂಬುದು ಖಚಿತವಾಗುತ್ತದೆ ಎಂದು ಅಲ್ ಜಝೀರಾ ವರದಿ ಹೇಳುತ್ತದೆ.

ಅಲ್ಲದೆ, ಪಾರದರ್ಶಕತೆಯ ಕೊರತೆ ಕುರಿತು ಪ್ರಧಾನಿ ಕಚೇರಿ ವ್ಯಕ್ತಪಡಿಸಿದ್ದ ಕಳವಳಕ್ಕೆ ಪರಿಹಾರವಾಗಿ, 2017ರ ಕಲ್ಲಿದ್ದಲು ಬ್ಲಾಕ್ ಹಂಚಿಕೆ ನಿಯಮಗಳಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಎಂಬ ವಾಕ್ಯಕ್ಕೂ ಮೊದಲು ಪಾರದರ್ಶಕ ಎಂಬ ಪದ ಸೇರಿಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಅಂದರೆ ಹೊಸ ಎಂಡಿಒಗಳ ಆಯ್ಕೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಇರುತ್ತದೆ ಎಂದು ನಿಯಮವಿರಲಿದೆ ಎಂದು ಹೇಳಿರುವ ವರದಿ, ಅಧಿಕಾರಿಗಳು ಸೂಚಿಸಿದ ಈ ಪರಿಹಾರವನ್ನು ಕಾಸ್ಮೆಟಿಕ್ ಸೊಲ್ಯೂಷನ್ ಎಂದು ವ್ಯಂಗ್ಯ ಮಾಡಿದೆ.

ಅದಾನಿ ಸಮೂಹವು ಮೋದಿ ಸರಕಾರದ ಅಸಾಧಾರಣ ನಿಬಂಧನೆಯ ಏಕೈಕ ಫಲಾನುಭವಿಯಾಗಿ ಉಳಿಯಿತು. ಮೋದಿ ಸರಕಾರದ ಉನ್ನತ ಅಧಿಕಾರಿಗಳು ಅದನ್ನು ಅನುಚಿತ ಎಂದು ಒಪ್ಪಿಕೊಂಡರೂ ಮುಂದುವರಿಯಲು ಅನುಮತಿ ನೀಡಿದರು ಎಂದು ಅಲ್ ಜಝೀರಾ ವರದಿ ಹೇಳುತ್ತದೆ.

ಟಿಆರ್ಸಿ ಮತ್ತು ಅಲ್ ಜಝೀರಾ ಕಳುಹಿಸಿದ ವಿವರವಾದ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್ ವಕ್ತಾರರು, ಎಲ್ಲಾ ಗುತ್ತಿಗೆಗಳನ್ನು ಕಾನೂನಿಗೆ ಅನುಗುಣವಾಗಿ ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ನೀಡಲಾಗಿದೆ ಎಂದಿರುವುದಾಗಿಯೂ, ಕಲ್ಲಿದ್ದಲು ಸಚಿವಾಲಯ, ಎಂಡಿಒ ಮತ್ತು ನೀತಿ ಆಯೋಗ ತಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲವೆಂದೂ ಅಲ್ ಜಝೀರಾ ಹೇಳಿದೆ.

Similar News