ಜಗ ದಗಲ

Update: 2023-03-07 05:23 GMT

ಸಿಂಹಸಂತತಿ ವೃದ್ಧಿ

ವಿಶ್ವದ ಅಪರೂಪದ ಸಿಂಹ ಪ್ರಭೇದವೊಂದು ಪಶ್ಚಿಮ ಆಫ್ರಿಕಾದಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿನ ಸೋದರ ಪ್ರಭೇದಕ್ಕೆ ಹೋಲಿಸಿದರೆ ಈ ಅಪರೂಪದ ಪ್ರಭೇದ ಕಣ್ಮರೆಯಾಗುವ ಹಂತದಲ್ಲಿವೆ. ಅಂಥ ಪ್ರಭೇದದ ಸಿಂಹವೊಂದು ಈಗ ಮೂರು ಮರಿಗಳಿಗೆ ಜನ್ಮ ನೀಡಿದೆ. ಅಳಿವಿನಂಚಿನಲ್ಲಿರುವ ಈ ಪ್ರಭೇದವನ್ನು ರಕ್ಷಿಸಬಹುದು ಎಂಬ ಭರವಸೆ ಮೂಡಿದೆ.

ವಿಜ್ಞಾನಿಗಳ ಪ್ರಕಾರ, ಈ ಅಪರೂಪದ ಸಿಂಹಗಳು ಕೆಲವೇ ನೂರು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ನೈಜೀರಿಯಾ, ಬೆನಿನ್, ನೈಜರ್ ಮತ್ತು ಬುರ್ಕಿನಾ ಫಾಸೊದಲ್ಲಿ ಒಂದು ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಅವುಗಳು ಇಲ್ಲವಾಗುತ್ತಿವೆ. ಸೆನೆಗಲ್‌ನ ನಿಯೊಕೊಲೊ- ಕೋಬಾ ನ್ಯಾಷನಲ್ ಪಾರ್ಕ್‌ನಲ್ಲಿ ಕೇವಲ 29 ಸಿಂಹಗಳಷ್ಟೇ ಉಳಿದಿವೆಯಂತೆ. ಬೇಟೆ ಮತ್ತು ಕೃಷಿ ಪ್ರದೇಶಕ್ಕೆ ಅವುಗಳ ಆವಾಸಸ್ಥಾನಗಳ ಅತಿಕ್ರಮಣವಾಗುತ್ತಿರುವುದು ಅವುಗಳು ಅಳಿಯುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಈಗ, ಈ ನ್ಯಾಷನಲ್ ಪಾರ್ಕ್ ವ್ಯಾಪ್ತಿಯ ಕಾಡಿನಲ್ಲಿಯೇ ಮೂರು ಮರಿಗಳ ಜನನವಾಗಿದೆ. ಅವುಗಳಲ್ಲಿ ಎರಡು ಗಂಡು, ಒಂದು ಹೆಣ್ಣು.

ಅವು ಈಗ ನಿಯೊಕೊಲೊ-ಕೋಬಾದಲ್ಲಿ ಬೆಳೆಯುತ್ತಿರುವ ಸಿಂಹಸಂತತಿಯ ಭಾಗವಾಗಿವೆ. 2011ರಲ್ಲಿ ಇಲ್ಲಿನ ಸಿಂಹಗಳ ಸಂಖ್ಯೆ 10-15 ಮಾತ್ರವಿತ್ತು. ಸಿಂಹಸಂರಕ್ಷಣೆಗೆ ಸೆನೆಗಲೀಸ್ ಅಧಿಕಾರಿಗಳು ಮತ್ತು ಸಿಂಹ ಸಂರಕ್ಷಣಾ ಸಂಸ್ಥೆ ಪ್ಯಾಂಥೆರಾ 2016ರಲ್ಲಿ ತೊಡಗಿಸಿಕೊಂಡವು.

ತೀರಾ ಅಪಾಯದಲ್ಲಿರುವ ಈ ಸಿಂಹಪ್ರಭೇದ ಭಾರತದಲ್ಲಿ ಕಂಡುಬರುವ ಸಿಂಹಗಳಿಗೆ ಹೆಚ್ಚು ಹತ್ತಿರವಾದವುಗಳು ಎಂದು ವಿಜ್ಞಾನಿಗಳು ಭಾವಿಸುತ್ತಾರೆ.

ಈಗ ಮರಿ ಹಾಕಿರುವ ಸಿಂಹಿಣಿಗೆ ಅಳವಡಿಸಲಾಗಿದ್ದ ಜಿಪಿಎಸ್ ಕಾಲರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ, ಅದು ಬೇಟೆಗೆ ತುತ್ತಾಗಿರಬಹುದು ಎಂದೇ ವಿಜ್ಞಾನಿಗಳು ಹೆದರಿದ್ದರು. ಅದು ಕೊನೆಯದಾಗಿ ಕಾಣಿಸಿಕೊಂಡಿದ್ದ ಸ್ಥಳದಲ್ಲಿ ಕ್ಯಾಮರಾ ಟ್ರ್ಯಾಪ್‌ಗಳನ್ನು ಇರಿಸಿದಾಗ, ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯ ಭಾಗದಲ್ಲಿ ಅದು ಮರಿಗಳನ್ನು ನೋಡಿಕೊಳ್ಳುತ್ತಿರುವುದು ಗೊತ್ತಾಯಿತು. ಅದು ಮರಿಗಳಿಗೆ ಜನ್ಮ ಕೊಡುತ್ತಿರುವುದು ಇದು ಮೂರನೇ ಬಾರಿ ಎಂದು ಹೇಳಲಾಗಿದೆ.

ಕಳೆದ 20 ವರ್ಷಗಳಲ್ಲಿ ಜಾಗತಿಕ ಸಿಂಹಗಳ ಸಂಖ್ಯೆ 25,000ಕ್ಕಿಂತ ಕಡಿಮೆಯಾಗಿದೆ. ಆಫ್ರಿಕಾದಲ್ಲಿ ಅರ್ಧದಷ್ಟು ಸಂಖ್ಯೆಯ ಸಿಂಹಗಳು ಇಲ್ಲವಾಗಿವೆ. ಆವಾಸಸ್ಥಾನ ಇಲ್ಲವಾಗಿರುವುದರ ಜೊತೆಗೆ, ಏಶ್ಯದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಬಳಸಲಾಗುವ ಸಿಂಹದ ಮೂಳೆಗಳ ವ್ಯಾಪಾರ ಕೂಡ ಸಿಂಹಪ್ರಭೇದದ ಪಾಲಿಗೆ ಅಪಾಯ ತಂದೊಡ್ಡಿದೆ.

ಸೆನೆಗಲ್‌ನ ನಿಯೊಕೊಲೊ-ಕೋಬಾದಲ್ಲಿ, ಸಂರಕ್ಷಣಾಕಾರರು 2025ರ ವೇಳೆಗೆ 50 ಸಿಂಹಗಳನ್ನು ಮತ್ತು 2030ರ ವೇಳೆಗೆ 100 ಸಿಂಹಗಳನ್ನು ಕಾಣುವ ಗುರಿಯನ್ನು ಹೊಂದಿದ್ದಾರೆ. ಬೇಟೆಯಾಡುವಿಕೆ ವಿರುದ್ಧದ ಕೆಲಸ ಮತ್ತು ಮೇಲ್ವಿಚಾರಣಾ ಕಾರ್ಯಾಚರಣೆಗಳನ್ನು ಈ ನ್ಯಾಷನಲ್ ಪಾರ್ಕ್‌ನಲ್ಲಿ ಅವರು ಸತತವಾಗಿ ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಮುಳ್ಳುಹಂದಿಗಳಿಂದ ಗಾಯಗೊಂಡು ಸಾಯುವ ಅಪಾಯದಲ್ಲಿದ್ದ ಮತ್ತೊಂದು ಸಿಂಹಿಣಿಯನ್ನೂ ವಿಜ್ಞಾನಿಗಳು ರಕ್ಷಿಸಿದ್ದಾರೆ. ಅದು ಈಗ ಆರೋಗ್ಯವಾಗಿದೆ ಎನ್ನಲಾಗಿದ್ದು, ಸಿಂಹಗಳ ಸಂತತಿ ವರ್ಧಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಎಂದು ಅವರು ಭಾವಿಸಿದ್ದಾರೆ.

ಕಾಡಿನ ಕಥೆ

ಅಮೆಝಾನ್ ಅರಣ್ಯನಾಶಕ್ಕೂ ಪ್ರಾದೇಶಿಕವಾಗಿ ಬೀಳುವ ಮಳೆಯ ಪ್ರಮಾಣಕ್ಕೂ ಸ್ಪಷ್ಟ ಸಂಬಂಧವಿದೆ ಎಂಬುದನ್ನು ಸಂಶೋಧಕರು ಸಾಬೀತುಪಡಿಸಿದ್ದಾರೆ. ಈ ಸಂಶೋಧನೆ ಅಮೆಜಾನ್ ಮತ್ತು ಕಾಂಗೋ ಜಲಾನಯನ ಪ್ರದೇಶಗಳು ಮತ್ತು ಆಗ್ನೇಯ ಏಶ್ಯದಲ್ಲಿ ಕೃಷಿ ಕಂಪೆನಿಗಳು ಮತ್ತು ಸರಕಾರಗಳು ಅರಣ್ಯ ರಕ್ಷಣೆಗೆ ಹೆಚ್ಚು ಹೂಡಿಕೆ ಮಾಡಲು ಪ್ರೇರಣೆಯಾಗಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

ಉಷ್ಣವಲಯದ ದೇಶಗಳಲ್ಲಿ ಮಳೆಕಾಡುಗಳನ್ನು ತೆರವುಗೊಳಿಸಿದಷ್ಟೂ ಅದರ ಪರಿಣಾಮವನ್ನು ಸ್ಥಳೀಯ ರೈತರು ಎದುರಿಸಬೇಕಾಗುತ್ತದೆ. ಬೆಳೆಗಳು ಮತ್ತು ಹುಲ್ಲುಗಾವಲುಗಳಿಗಾಗಿ ಮಳೆಯನ್ನೇ ನೆಚ್ಚಿರುವ ರೈತರು ಅತಂತ್ರರಾಗುತ್ತಾರೆ ಎಂದು ಅಧ್ಯಯನ ಹೇಳುತ್ತದೆ.

ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಬರಹ, ಅಮೆಝಾನ್‌ನ ಅವನತಿ ಆಗಲೇ ಒಂದು ಹಂತ ಮುಟ್ಟಿಬಿಟ್ಟಿದೆ ಎನ್ನುತ್ತದೆ. ಮಳೆಕಾಡು ತನ್ನದೇ ಆದ ಮಳೆಯನ್ನು ತರಲು ಅಸಮರ್ಥವಾಗುತ್ತದೆ. ಆಗ ಕಾಡೇ ಒಣಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.

ಅರಣ್ಯನಾಶವಾಗುತ್ತಿರುವ ಪ್ರದೇಶಗಳಲ್ಲಿ ಕಡಿಮೆ ಮರಗಳ ಪರಿಣಾಮವಾಗಿ ವಾತಾವರಣ ಶುಷ್ಕವಾಗುತ್ತದೆ. ಮರಗಳ ನಾಶ ಬಾಷ್ಪೀಕರಣವನ್ನು ಕಡಿಮೆ ಮಾಡುತ್ತದೆ ಮತ್ತಿದು ಸ್ಥಳೀಯವಾಗಿ ಮಳೆ ಕಡಿಮೆಯಾಗಲು ಕಾರಣವಾಗುತ್ತದೆ.

ಲೀಡ್ಸ್ ವಿಶ್ವವಿದ್ಯಾನಿಲಯದ ತಂಡ ಪ್ಯಾಂಟ್ರೊಪಿಕಲ್ ಪ್ರದೇಶಗಳಲ್ಲಿ ಉಪಗ್ರಹ ಮತ್ತು ಹವಾಮಾನ ದಾಖಲೆಗಳನ್ನು ಬಳಸಿಕೊಂಡು ಇದನ್ನು ಸಾಬೀತುಪಡಿಸಿದೆ. ಅರಣ್ಯನಾಶದ ಪ್ರದೇಶದಲ್ಲಿ ಶೇ.1ರಷ್ಟು ಅರಣ್ಯನಾಶದಿಂದ ಶೇ. 0.25ರಷ್ಟು ಮಳೆ ಪ್ರತೀ ತಿಂಗಳೂ ಕಡಿಮೆಯಾಗಿರುವುದು ಗೊತ್ತಾಗಿದೆ.

ಅಧ್ಯಯನ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಲೀಡ್ಸ್ ವಿಶ್ವವಿದ್ಯಾನಿಲಯದ ಪ್ರೊ. ಡೊಮಿನಿಕ್ ಸ್ಪ್ರಾಕ್ಲೆನ್ ಪ್ರಕಾರ, ಅಮೆಝಾನ್‌ನಲ್ಲಿ ಬೀಳುವ ಶೇ. 25ರಿಂದ ಶೇ. 50ರಷ್ಟು ಮಳೆ ಮತ್ತೆ ಬೆಳೆಸಿದ ಮರಗಳಿಂದಾಗಿಯೇ ಬೀಳುತ್ತಿರುವುದು. ಅರಣ್ಯವನ್ನು ‘ವಿಶ್ವದ ಶ್ವಾಸಕೋಶ’ ಎಂದು ಹೇಳಲಾಗುತ್ತದೆಯಾದರೂ, ಆ ಪ್ರದೇಶದ ಸುತ್ತಲೂ ನೀರನ್ನು ಪಂಪ್ ಮಾಡುವ ಹೃದಯದಂತೆಯೂ ಕೆಲಸ ಮಾಡುತ್ತದೆ.

ಮತ್ತಷ್ಟು ಅರಣ್ಯನಾಶದ ಸಂಭವನೀಯ ಪರಿಣಾಮಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸುತ್ತಾರೆ. ಕಾಂಗೋ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದಂತೆ, ಕಾಡಿನ ನಷ್ಟದ ಪ್ರಮಾಣದ ಆಧಾರದ ಮೇಲೆ ಶತಮಾನದ ಅಂತ್ಯದ ವೇಳೆಗೆ ತಿಂಗಳಿಗೆ 16 ಮಿ.ಮೀ. ಮಳೆಯ ಕುಸಿತವನ್ನು ಅವರು ಅಂದಾಜಿಸಿದ್ದಾರೆ.

ಅರಣ್ಯ ನಾಶವಾದಾಗ, ಅದರಾಚೆಗೂ ನೂರಾರು ಅಥವಾ ಸಾವಿರಾರು ಕಿ.ಮೀ.ಗಳಷ್ಟು ವ್ಯಾಪ್ತಿಯಲ್ಲಿ ನಗರಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಅದರ ಪರಿಣಾಮಗಳು ಉಂಟಾಗುವ ಸಾಧ್ಯತೆಯ ಬಗ್ಗೆಯೂ ಅಧ್ಯಯನ ಹೇಳಿದೆ. ಅರಣ್ಯ ಪ್ರದೇಶದ ಪ್ರತೀ ಶೇ. 10ರಷ್ಟು ನಾಶಕ್ಕೆ ಅನುಗುಣವಾಗಿ ಶೇ. 1.25ರಷ್ಟು ಬೆಳೆ ಇಳುವರಿ ಕುಸಿಯಬಹುದು ಎಂಬುದನ್ನು ಅಧ್ಯಯನ ಗಮನಿಸಿದೆ.

ಮತ್ತೊಂದು ‘ಮೋಯಿ’

ಇದು ಹೊಸ ಮೋಯಿಯ ವಿಚಾರ. ಮೋಯಿ ಅಂದರೆ ಈಸ್ಟರ್ ದ್ವೀಪದ ಸಾಂಪ್ರದಾಯಿಕ ಏಕಶಿಲೆಯ ಪ್ರತಿಮೆಗಳಲ್ಲಿ ಒಂದು. ಮೋಯಿಗಳು ಉದ್ದವಾದ ಮುಖಗಳನ್ನು ಹೊಂದಿರುವ, ಕಾಲುಗಳಿರದ ವಿಶಿಷ್ಟವಾದ ಏಕಶಿಲೆಯ ಕಲ್ಲಿನ ಆಕೃತಿಗಳಾಗಿವೆ. ಈಗ ಹೊಸದಾಗಿ ಅಂಥದೊಂದು ಮೋಯಿ, ಜ್ವಾಲಾಮುಖಿಯ ಕುಳಿಯಲ್ಲಿ ಒಣ ಸರೋವರದ ತಳದಲ್ಲಿ ಕಂಡುಬಂದಿದೆ ಎನ್ನುತ್ತಿವೆ ವರದಿಗಳು.

ರಾನೊ ರಾರಾಕು ಜ್ವಾಲಾಮುಖಿಯೊಳಗಿನ ಕುಳಿಯಲ್ಲಿ ಚಿಲಿ ದೇಶದ ಮೂರು ವಿಶ್ವವಿದ್ಯಾನಿಲಯಗಳ ವೈಜ್ಞಾನಿಕ ತಂಡ ಈ ಪ್ರತಿಮೆಯನ್ನು ಪತ್ತೆ ಮಾಡಿದೆ.

ಚಿಲಿಯ ಪಶ್ಚಿಮಕ್ಕೆ 3,500 ಕಿ.ಮೀ. ದೂರದಲ್ಲಿರುವ ರಾಪಾ ನುಯಿ ಎಂದೂ ಕರೆಯಲ್ಪಡುವ ದ್ವೀಪದಲ್ಲಿ ಅಕ್ಟೋಬರ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚಿನಲ್ಲಿ ಆ ಪ್ರದೇಶದಲ್ಲಿದ್ದ ಹಲವಾರು ಮೋಯಿಗಳು ಸುಟ್ಟುಹೋದವು. ಈಗ ಪತ್ತೆಯಾಗಿರುವ ಮೋಯಿ 2018ರಲ್ಲಿ ಒಣಗಲು ಪ್ರಾರಂಭಿಸಿದ ಸರೋವರದ ಮಧ್ಯಭಾಗದಲ್ಲಿದೆ. ಈ ವಿಚಾರವನ್ನು ಜ್ವಾಲಾಮುಖಿ ಕಾಣಿಸಿಕೊಳ್ಳುವ ರಾಪಾ ನುಯಿ ನ್ಯಾಷನಲ್ ಪಾರ್ಕನ್ನು ನೋಡಿಕೊಳ್ಳುವ ಮಾವು ಹೆನುವಾ ಸಮುದಾಯದ ನಿರ್ದೇಶಕರು ಹೇಳಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಹಿಂದೆ 200 ಅಥವಾ 300 ವರ್ಷಗಳ ಕಾಲ ಈ ಸರೋವರ 3 ಮೀ. ಆಳವಾಗಿತ್ತು, ಅದರರ್ಥ, ಈ ಮೋಯಿ ಅಲ್ಲಿ ಯಾವುದೇ ಮನುಷ್ಯರು ಬಿಟ್ಟಿದ್ದಲ್ಲ ಎನ್ನುತ್ತಾರೆ ಅವರು.

ಈ ಮೋಯಿ 1.6 ಮೀ. ಎತ್ತರವಿದ್ದು, ಸ್ಪಷ್ಟವಾಗಿ ಗುರುತಾಗಬಲ್ಲ ವೈಶಿಷ್ಟ್ಯಗಳೊಂದಿಗೆ ಪೂರ್ಣ ದೇಹವನ್ನು ಹೊಂದಿದೆ. ಅಧ್ಯಯನ ನಡೆಯಬೇಕಿದೆ ಎನ್ನುತ್ತಿದೆ ಪತ್ತೆ ಮಾಡಿರುವ ತಂಡ. ಈ ಮೋಯಿಯನ್ನು ಅದು ಇರುವ ಸ್ಥಳದಿಂದ ತೆಗೆದುಹಾಕುವ ಯಾವುದೇ ಯೋಜನೆಗಳಿಲ್ಲ. ರಾನೊ ರಾರಾಕು ಜ್ವಾಲಾಮುಖಿ ಮತ್ತು ಅಲ್ಲಿನ ಮೋಯಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. 1888ರಲ್ಲಿ ಚಿಲಿಯು ಸ್ವಾಧೀನಪಡಿಸಿಕೊಳ್ಳುವ ಮೊದಲು ಈಸ್ಟರ್ ದ್ವೀಪದಲ್ಲಿ ಪಾಲಿನೇಷ್ಯನ್ ಜನ ವಾಸಿಸುತ್ತಿದ್ದರು.

Similar News