ಗ್ರಾಮೀಣ ಮಹಿಳೆ: ಸ್ವಾತಂತ್ರ್ಯವೆಂಬುದು ಕನಸು ಮಾತ್ರ

ಇಂದು ವಿಶ್ವ ಮಹಿಳಾ ದಿನ

Update: 2023-03-08 05:16 GMT

ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಜೇಷನ್ ದಾಖಲೆಯ ಪ್ರಕಾರ ಗ್ರಾಮೀಣ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ನೀಡುವ ಕೊಡುಗೆ ಮತ್ತು ಆ ಶ್ರಮದ ಪ್ರತಿಶತದೆಡೆಗೆ ಗಮನ ಹರಿಸಿದರೆ ಕೃಷಿ ಸಂಬಂಧಿತ ಕೆಲಸಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಜಗತ್ತಿನಾದ್ಯಂತ ಶೇ. ೪೧ರಷ್ಟಿದೆ. ಅದರಲ್ಲೂ ಹಿಂದುಳಿದ ದೇಶಗಳಲ್ಲಿ ಆ ಪ್ರಮಾಣ ಶೇ ೪೯ರಷ್ಟು. ಅಂದರೆ ಶೇ. ಅರ್ಧದಷ್ಟು. ಹೀಗಿದ್ದೂ ಮಹಿಳಾ ಪ್ರತಿನಿಧೀಕರಣ ಎಲ್ಲ ಕಡೆಯಲ್ಲೂ ನಿರ್ಲಕ್ಷಿಸಲ್ಪಡುತ್ತಿರಲು ಕಾರಣವೇನು? ಪ್ರಜ್ಞಾವಂತ ಜಗತ್ತು ಈ ತಾರತಮ್ಯವನ್ನು ಎಂದು ಕೊನೆಗಾಣಿಸಬಹುದು?

ಆಧುನಿಕರೆನಿಸಿಕೊಳ್ಳುತ್ತಿದ್ದೇವೆ. ಐಷಾರಾಮದ ಅನೇಕ ವಸ್ತುಗಳು ಕೈಗೆಟಕಿವೆ. ಹಳ್ಳಿಯ ವಯಸ್ಸಾದ ಮಹಿಳೆ ಕೂಡಾ ಕೈಯಲ್ಲೊಂದು ಮೊಬೈಲ್ ಹಿಡಿದು ಕಣ್ಣು ಕಿರಿದುಗೊಳಿಸಿ ಕೀಪ್ಯಾಡ್ ಒತ್ತಿ ನಂಬರುಗಳನ್ನು ನಮೂದಿಸುವುದನ್ನು ಕಂಡಾಗ ಎಲ್ಲೋ ಒಂದೆಡೆ ಸ್ತ್ರೀಯರ ಪರಿಸ್ಥಿತಿ ಬದಲಾಗುತ್ತಿದೆ ಎಂದುಕೊಳ್ಳುತ್ತೇವೆ. ಈ ವಯಸ್ಸಿನಲ್ಲೂ ಮೊಬೈಲ್ ಹಿಡಿದು ತಿರುಗಾಡುವ ಹೆಣ್ಣುಮಕ್ಕಳು ಮತ್ತೇಕೆ ಸ್ವಾತಂತ್ರ್ಯ ಇಲ್ಲ, ಸ್ವಾಯತ್ತತೆ ಇಲ್ಲ ಎನ್ನುತ್ತಾ ಸಮಾನತೆ ಮಂತ್ರ ಜಪಿಸುತ್ತಾ ರಸ್ತೆಗಿಳಿಯುತ್ತಾರೆ ಎಂದುಕೊಳ್ಳುತ್ತದೆ ಜಗತ್ತು.

ಆದರೆ ಈ ನೆಲೆಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬರುವ ಸತ್ಯವೆಂದರೆ ನಮ್ಮ ಬದುಕಿನ ಆದ್ಯತೆಗಳು ಬದಲಾಗಿವೆಯೇ ಹೊರತು ಮಹಿಳೆಯ ಸ್ಥಾನಮಾನವಲ್ಲ. ಪುರುಷನಿಗೆ ಹೆಗಲೆಣೆಯಾಗಿ ಪರಿಗಣಿಸಲ್ಪಡಬೇಕಾದ ಆಕೆಯ ಘನತೆಯಲ್ಲ. ಪಟ್ಟಣದ ಮಹಿಳೆಯರ ವಿಚಾರ ಬದಿಗಿಟ್ಟು ಹಳ್ಳಿಯ ಹೆಣ್ಣುಮಕ್ಕಳ ಮತ್ತು ಗೃಹಿಣಿಯರ ಬದುಕಿನ ಗತಿ ಬದಲಾಗಿದೆಯೇ ಎಂಬುದರ ಕಡೆ ಗಮನ ಹರಿಸಿದರೆ ಕಾಣುವ ಸತ್ಯವೆಂದರೆ ನಾವಿನ್ನೂ ೧೨ನೇ ಶತಮಾನದಿಂದ ಮುಂದೆ ಚಲಿಸಲೇ ಇಲ್ಲ. ಇಂದಿಗೂ ಹಳ್ಳಿಯ ಬಡ ಹೆಣ್ಣುಮಕ್ಕಳು ಒಂದು ಕುಪ್ಪಸದ ಬಟ್ಟೆಗೂ ಗಂಡನ ಬಳಿ ಕೈ ಚಾಚುತ್ತಾರೆ. ಕೂಲಿ ಮಾಡುವ ಹೆಣ್ಣುಮಕ್ಕಳು ದುಡಿದು ಬಂದು ಮನೆಯ ಕೆಲಸವನ್ನೂ ನಿಭಾಯಿಸಿ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡಿದ್ದರೂ ತನ್ನಿಷ್ಟದಂತೆ ಖರ್ಚು ಮಾಡಲನುಮತಿಯಿಲ್ಲ. ಗಂಡ ಎಂಬ ಪುರುಷಾಧಿಕಾರಿಯ ಪರವಾನಿಗೆ ಬೇಕೇ ಬೇಕು.

ಪಟ್ಟಣದ ಹೊರ ದುಡಿಮೆಯ ಮಹಿಳಾ ವರ್ಗದಲ್ಲಿ ಬೆರಳೆಣಿಕೆಯಷ್ಟು ಹೆಣ್ಣುಗಳು ಸ್ವಾಯತ್ತತೆಯ ಸುಖವನ್ನು ಅನುಭವಿಸುತ್ತಾರೆ ಅಷ್ಟೆ. ಆ ಪ್ರಮಾಣ ಬಹಳ ಕಡಿಮೆ. ಆದರೆ ಬಹುತೇಕರು ತನ್ನ ಅಕ್ಷರದ ಜ್ಞಾನದ ಜೊತೆ ಆರ್ಥಿಕ ಸ್ವಾಂತಂತ್ರ್ಯದ ಮೂಲಕ ತನ್ನತನವನ್ನು ಕಾಪಾಡಿಕೊಂಡರೂ, ಬೆವರಿನ ಹನಿಯಿಂದ ಮೂಡಿದ ಎಲ್ಲ ಸಂಬಳವನ್ನು ಆಕೆ ಅನುಭವಿಸುವಂತಿಲ್ಲ. ಪುರುಷನಂತೆ ನಿರ್ಭಿಡೆಯಿಂದ ತನಗಿಷ್ಟವಾದಂತೆ ವ್ಯವಹರಿಸಲಾಗುವುದಿಲ್ಲ. ಪರಾಧೀನ, ಆರ್ಥಿಕ ಅವಲಂಬನೆ ಹೊಂದಿದ ಹಳ್ಳಿಯ ಹೆಣ್ಣು ದಿನವಿಡೀ ಹೊಲಗದ್ದೆಗಳಲ್ಲಿ ಚಾಕರಿ ಮಾಡಿಯೂ ಮನೆಯ ಎಲ್ಲ ಸದಸ್ಯರ ಎಲ್ಲ ಇಷ್ಟಾನಿಷ್ಟಗಳನ್ನು ಪೂರೈಸಿಯೂ ಆಕೆಯ ಬಗ್ಗೆ ಗೌರವ ಇಲ್ಲ. ಸ್ತ್ರೀ ಎಂದರೆ ಮನೆಜನರ ಚಾಕರಿಗೆ ಇರುವವಳು ಎಂಬ ಮನೋಭಾವ ಸಾಂಪ್ರದಾಯಿಕ ಮನಸ್ಸುಗಳಿಂದ ದೂರವಾಗಿಲ್ಲ.

ಗ್ರಾಮೀಣ ಮಹಿಳೆಯರು ಮತ್ತು ಅವರ ಬದುಕಿನ ಆದ್ಯತೆಗಳು ಆಧುನಿಕ ಜಗತ್ತಿನ ಉಪಭೋಗಗಳೊಂದಿಗೆ ತಾಳೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ನಾವು ನಕಾರಾತ್ಮಕವಾಗಿಯೇ ಉತ್ತರವನ್ನು ಕಾಣಬೇಕಾಗುತ್ತದೆ. ಆಕೆ ಹಲವು ರೀತಿಯಿಂದ ಅವಕಾಶ ವಂಚಿತೆ. ಪರಂಪರಾಗತವಾಗಿ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಮನೆಗೆಲಸದ ಜೊತೆಗೆ ಸ್ವಂತ ಕೃಷಿ ಕಾರ್ಯಗಳಲ್ಲಿ ಅಥವಾ ಕೃಷಿ ಕೂಲಿ ಕಾರ್ಮಿಕರಾಗಿ ದಿನಗೂಲಿ ಕೆಲಸದಲ್ಲಿ ಪಾಲ್ಗೊಳ್ಳುತ್ತಲೇ ಬರುತ್ತಿದ್ದಾರೆ. ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುವ ಮಹಿಳೆಯರಿರಲಿ ಅಥವಾ ಸ್ವಂತ ಕುಟುಂಬದ ಭೂಮಿಯಲ್ಲಿ ದುಡಿಯುವ ಮಹಿಳೆಯರೇ ಇರಲಿ, ಅವರೆಲ್ಲ ಮನೆಯ ದೈನಂದಿನ ಕೆಲಸ ಕಾರ್ಯಗಳ ಜೊತೆ ಮನೆಯ ಕೃಷಿ ಕಾರ್ಯದಲ್ಲಿ ಸಹಕರಿಸುತ್ತಾರೆ. ಅದರೊಂದಿಗೆ ಮನೆಯಲ್ಲಿ ಹೈನುಗಾರಿಕೆ, ಹೂತೋಟ ಬೆಳೆಸುವುದು, ತರಕಾರಿ, ಕೋಳಿ ಸಾಕುವುದು ಇಂತಹ ಉಪ ಕೆಲಸಗಳನ್ನು ಆಕೆ ತನ್ನ ಜವಾಬ್ದಾರಿ ಎಂಬಂತೆ ನಿರ್ವಹಿಸುತ್ತಾಳೆ. ಆದರೆ ಇಂತಹ ರೈತ ಕೆಲಸದ ವಿಚಾರ ಬಂದಾಗಲೆಲ್ಲಾ ನಮಗೆ ರೈತ ಎಂಬ ಪುರುಷ ಕಾಣುತ್ತಾನೆಯೇ ಹೊರತು ಮಹಿಳೆ ಕಾಣುವುದಿಲ್ಲ. ಇಲ್ಲಿ ಮಹಿಳೆಯ ಶ್ರಮವನ್ನು ಆಕೆಯ ಸೇವೆ ಎಂದು ಗಣಿಸಲಾಗುತ್ತದೆ. ಹೀಗಾಗಿ ಭೂ ಒಡೆತನದ ಹೆಚ್ಚಿನ ದಾಖಲೆಗಳು ಪುರುಷನ ಹೆಸರಲ್ಲಿ ಇದ್ದು ಮಹಿಳೆ ಕಡೆಗಣನೆಗೆ ಈಡಾಗಿದ್ದಾಳೆ.

ಭೂಮಿಯ ಒಡೆತನ ಅಥವಾ ದನಕರುಗಳನ್ನು ಹೊಂದುವ, ತಮ್ಮ ಹೆಸರಿನಲ್ಲಿ ಹೋದೋಟಗಳನ್ನು ಹೊಂದುವ ಹೀಗೆ ಯಾವ ಸಂಪತ್ತಿನ ಸ್ವಾಮ್ಯದಲ್ಲಿಯೂ ಬಹುತೇಕವಾಗಿ ಆಕೆಗೆ ಆದ್ಯತೆ, ಸ್ವಾಯತ್ತತೆ ನೀಡಲಾಗಿಲ್ಲ. ಹಳ್ಳಿಯಲ್ಲಿ ಹೆಣ್ಣುಮಕ್ಕಳಿಗೆ ಸ್ವನಿರ್ಧಾರಗಳನ್ನು ಮಾಡುವ, ಅವುಗಳನ್ನು ಜಾರಿಗೆ ತರುವ ಅಧಿಕಾರವಿಲ್ಲ. ಕೌಟಂಬಿಕವಾದ ಯಾವುದೇ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಮಹತ್ವ ನೀಡಲಾಗುವುದಿಲ್ಲ.

ಪುರುಷ ನಿಯಂತ್ರಣ ಹೆಚ್ಚಿರುವುದರಿಂದ ಹಳ್ಳಿಯ ಸ್ತ್ರೀ ಸಮುದಾಯದಲ್ಲಿ ಕುಟುಂಬದ ಮರ್ಯಾದೆ ಮತ್ತು ಸಮಾಜದ ನಿಂದನೆಗಳಿಗೆ ಹೆದರುವ ಪ್ರವೃತ್ತಿ ಹೆಚ್ಚಿದ್ದು, ಶೋಷಣೆಗಳನ್ನು ಅಕೆ ಮೌನವಾಗಿ ಸಹಿಸುವ ಗುಣ ಬೆಳೆಸಿಕೊಳ್ಳುವಂತೆ ಮಾಡಿದೆ. ಹಳ್ಳಿಯಲ್ಲಿ ಕುಟುಂಬ ನಿರ್ವಹಣೆಗೆ, ಮನೆಗೆಲಸಕ್ಕಾಗಿ ಆಕೆ ವ್ಯಯಿಸುವ ಶ್ರಮ ಎಲ್ಲವೂ ವೇತನರಹಿತ ಶ್ರಮಗಳೆಂದು ಪರಿಗಣಿಸಲಾಗುತ್ತವೆ. ದಿನವಿಡೀ ಮನೆಯ ಕೆಲಸ ಮಾಡಿಯೂ ಆ ಶ್ರಮಕ್ಕೆ ಕವಡೆ ಕಾಸಿನ ಬೆಲೆ ಇರದು.

ಇನ್ನು ಯಾವುದೇ ಕೂಲಿ ಅಥವಾ ಕೃಷಿ ಕಾರ್ಮಿಕ ಮಹಿಳೆಯರ ಶ್ರಮದ ಅವಧಿಯನ್ನು ಲೆಕ್ಕ ಹಾಕಿದ್ದಲ್ಲಿ ಅವರ ಮನೆಗೆಲಸದ ಅವಧಿ ಮತ್ತು ಹೊರಗೆಲಸದ ಅವಧಿಗಳನ್ನು ಕೂಡಿಸಿದರೆ ಆಕೆ ಪುರುಷನಿಗಿಂತ ಹೆಚ್ಚು ಅವಧಿಯ ಶ್ರಮವನ್ನೂ ಮಾಡಿಯೂ ಕಡಿಮೆ ಸಂಬಳಕ್ಕೆ ತೃಪ್ತಳಾಗಬೇಕಾಗುತ್ತದೆ. ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ. ನಮ್ಮ ಸಂವಿಧಾನ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಹೇಳಿದೆ. ಆದರೆ ಈ ಕಾನೂನಿನ ಪಾಲನೆ ಕೇವಲ ಸರಕಾರಿ ನೌಕರಿಯಲ್ಲಿ ಅಥವಾ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಮಾತ್ರ ಪಾಲನೆಯಾಗುತ್ತಿದೆಯೇ ಹೊರತು ಹಳ್ಳಿಯ ಬಡ ಹೆಣ್ಣುಮಕ್ಕಳ ಅಥವಾ ಕೂಲಿ ಕಾರ್ಮಿಕ ಹೆಣ್ಣುಮಕ್ಕಳ ಶ್ರಮಕ್ಕಲ್ಲ. ಗ್ರಾಮೀಣ ಹೆಣ್ಣು ಮಕ್ಕಳ ಶ್ರಮವನ್ನು ನಿರ್ಲಕ್ಷಿಸಲಾಗಿದೆ. ಆಕೆಯ ಶ್ರಮವನ್ನು ಕಡಿಮೆ ಕೌಶಲ್ಯದ ಮತ್ತು ಅಲ್ಪಉತ್ಪಾದನೆಯ ಶ್ರಮವೆಂದು ಪರಿಗಣಿಸಲಾಗುತ್ತದೆ.

ಅಷ್ಟೇ ಅಲ್ಲ, ಅನೇಕ ಸಂದರ್ಭಗಳಲ್ಲಿ ಸ್ತ್ರೀ ದುಡಿಮೆಯ ಹಣ ಅಥವಾ ಸ್ತ್ರೀಸಬಲೀಕರಣ ಅಥವಾ ಇನ್ನಾವುದೋ ಮೂಲದಿಂದ ಮಹಿಳೆಯ ಹೆಸರಿಗೆ ನೀಡುವ ಸರಕಾರದ ಸೌಲಭ್ಯಗಳು ಆಕೆಯ ಕೈಗೆ ದಕ್ಕದೆ ಆಕೆಯ ಮನೆಯ ಪುರುಷ ಅದರ ಮೇಲೆ ಅಧಿಕಾರ ಚಲಾಯಿಸುವ ಸೂಕ್ಷ್ಮ ಸತ್ಯಗಳು ಎಲ್ಲರಿಗೂ ತಿಳಿದಿರುವಂಥದ್ದೆ. ಇದು ಕೇವಲ ಹಳ್ಳಿಯ ಹೆಣ್ಣು ಅನುಭವಿಸುವ ದೌರ್ಜನ್ಯ ಮಾತ್ರವಲ್ಲ. ಸುಶಿಕ್ಷಿತ ಮಹಿಳೆಯ ದುಡಿಮೆಯ ಫಲವನ್ನು ಕೂಡ ಹೀಗೆ ಪುರುಷ ತನ್ನ ಸ್ವತ್ತಾಗಿಸಿಕೊಳ್ಳುವ ಪ್ರಕರಣಗಳೇನೂ ಕಡಿಮೆ ಇಲ್ಲ.

ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಜೇಷನ್ ದಾಖಲೆಯ ಪ್ರಕಾರ ಗ್ರಾಮೀಣ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ನೀಡುವ ಕೊಡುಗೆ ಮತ್ತು ಆ ಶ್ರಮದ ಪ್ರತಿಶತದೆಡೆಗೆ ಗಮನ ಹರಿಸಿದರೆ ಕೃಷಿ ಸಂಬಂಧಿತ ಕೆಲಸಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಜಗತ್ತಿನಾದ್ಯಂತ ಶೇ. ೪೧ರಷ್ಟಿದೆ. ಅದರಲ್ಲೂ ಹಿಂದುಳಿದ ದೇಶಗಳಲ್ಲಿ ಆ ಪ್ರಮಾಣ ಶೇ ೪೯ರಷ್ಟು. ಅಂದರೆ ಶೇ. ಅರ್ಧದಷ್ಟು. ಹೀಗಿದ್ದೂ ಮಹಿಳಾ ಪ್ರತಿನಿಧೀಕರಣ ಎಲ್ಲ ಕಡೆಯಲ್ಲೂ ನಿರ್ಲಕ್ಷಿಸಲ್ಪಡುತ್ತಿರಲು ಕಾರಣವೇನು? ಪ್ರಜ್ಞಾವಂತ ಜಗತ್ತು ಈ ತಾರತಮ್ಯವನ್ನು ಎಂದು ಕೊನೆಗಾಣಿಸಬಹುದು?

Similar News