ನಾಗಾಲ್ಯಾಂಡ್: ಇತಿಹಾಸ ಸೃಷ್ಟಿಸಿದ ಮಹಿಳೆಯರು
ಇಂದು ವಿಶ್ವ ಮಹಿಳಾ ದಿನ
ನಾಗಾಲ್ಯಾಂಡ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನ ಪಡೆದದ್ದು 1963ರಲ್ಲಿ. ಈ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಲ್ಲಿನ ವಿಧಾನಸಭೆಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ. ಲಿಂಗಸಮಾನತೆಗಿದ್ದ ಗೋಡೆ ಕೆಡವಿದ್ದಾರೆ. ಹಾಗೆ ಇತಿಹಾಸ ಸೃಷ್ಟಿಸಿರುವ ಆ ಇಬ್ಬರು ಮಹಿಳೆಯರೆಂದರೆ ಹೆಕಾನಿ ಜಖಾಲು ಮತ್ತು ಸಲ್ಹೌಟುವೊನುವೊ ಕ್ರೂಸ್. ಸ್ಪರ್ಧಿಸಿದ್ದ 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ ಇಬ್ಬರು ಗೆದ್ದಿರುವುದು ವಿಶೇಷ.
ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿರುವ ಹೆಕಾನಿ ಜಖಾಲು, ಆ ಗೆಲುವಿನ ಸಂಭ್ರಮವನ್ನು ಸ್ಥಳೀಯ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತ, ಇದು ರಾಜ್ಯದ ಮಹಿಳೆಯರ ಗೆಲುವು ಎಂದದ್ದು ವಿಶೇಷವಾಗಿತ್ತು.
ಎಲ್ಲಾ ನಾಗಾ ಮಹಿಳೆಯರಿಗೆ ಇದು ನಮ್ಮ ಗೆಲುವು ಎಂದು ಹೇಳಲು ಬಯಸುತ್ತೇನೆ. ನಮ್ಮ ಮಹಿಳೆಯರ ಪಾಲಿಗೆ ಒಳ್ಳೆಯದಾಗಲಿದೆ. ಮತ್ತು ಮಹಿಳೆಯರಿಗೆ ಒಳ್ಳೆಯದಾದಾಗ ರಾಜ್ಯಕ್ಕೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಅವರು ಹೇಳಿದ್ದು ಬಹಳ ಮಹತ್ವದ ಮಾತು.
ಬಿಜೆಪಿ ಮಿತ್ರಪಕ್ಷವಾದ ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಎನ್‌ಡಿಪಿಪಿ)ಯ 48 ವರ್ಷದ ವಯಸ್ಸಿನ ಜಖಾಲು, ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಗೆದ್ದ ಮತ್ತೊಬ್ಬ ಮಹಿಳಾ ಅಭ್ಯರ್ಥಿ, ತಮ್ಮದೇ ಪಕ್ಷದ 56 ವರ್ಷದ ಕ್ರೂಸ್ ಅವರನ್ನೂ ಅಭಿನಂದಿಸಿದ್ದಾರೆ.
ಜಖಾನಿ ಅವರು ಓದಿದ್ದು ದಿಲ್ಲಿಯಲ್ಲಿ. ಬಳಿಕ ಅಮೆರಿಕದಲ್ಲಿ ಕಾನೂನು ಅಧ್ಯಯನ ಮಾಡಿದರು. ಆನಂತರ ಮತ್ತೆ ಹುಟ್ಟೂರಿಗೆ ಮರಳಿ ಯುವಕರಿಗಾಗಿ ಎನ್‌ಜಿಒ ಸ್ಥಾಪಿಸಿದವರು. ಗೆದ್ದಿರುವ ಇಬ್ಬರೂ ಮಹಿಳೆಯರಿಗೆ ತಮ್ಮ ಜವಾಬ್ದಾರಿ ದೊಡ್ಡದಿದೆ ಎಂಬುದರ ಅರಿವಿದೆ. ಅವರೆದುರು ಇರುವುದು ರಾನೋ ಶೈಜಾ ಅವರ ಆದರ್ಶ. ನಾಗಾ ಮಹಿಳಾ ಒಕ್ಕೂಟದ ಮೊದಲ ಅಧ್ಯಕ್ಷೆಯಾಗಿದ್ದವರು ಮತ್ತು 1977ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಮೊದಲ ನಾಗಾ ಮಹಿಳೆ ರಾನೋ ಶೈಜಾ. ನಾಗಾ ದಂಗೆಯ ಸಂದರ್ಭದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಮತ್ತು ಸಂಘರ್ಷ ವಲಯದಲ್ಲಿ ಸಿಲುಕಿರುವ ಮಹಿಳೆಯರ ಅವಸ್ಥೆಯನ್ನು ಎತ್ತಿ ತೋರಿಸಿದ್ದವರು ಶೈಜಾ.
ಜಖಾಲು ಅವರು ರಾಜ್ಯದ ವಾಣಿಜ್ಯ ಕೇಂದ್ರ ಮತ್ತು ರಾಜಧಾನಿ ಕೊಹಿಮಾದ ಹೆಬ್ಬಾಗಿಲಾದ ದಿಮಾಪುರದವರು. ಕಾನೂನು ರಚನೆಯಲ್ಲಿ ಮಹಿಳಾ ದನಿ ಇರಬೇಕೆಂಬ ಆಶಯದ ಹೊರತಾಗಿಯೂ ಅವರಿಗೆ ತಮ್ಮ ಗೆಲುವನ್ನು ಸಂಭ್ರಮಿಸಲು ಕಾರಣಗಳಿವೆ. 183 ಅಭ್ಯರ್ಥಿಗಳ ಪೈಕಿ ನಾಲ್ಕು ಮಹಿಳಾ ಸ್ಪರ್ಧಿಗಳು ಮಾತ್ರ ಇದ್ದರು. ತನ್ನ ಕ್ಷೇತ್ರದಲ್ಲಿ ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ರಸ್ತೆಗಳು ಹೀಗೆ ಸ್ಥಿತಿ ಏನೆಂಬುದನ್ನು ಜಖಾಲು ಗ್ರಹಿಸಿದ್ದರು. ಆ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರೊಬ್ಬರ ಪ್ರಕಾರ, ಆಕೆಯ ಗೆಲುವಿನಿಂದ ರಸ್ತೆಗಳು ಉತ್ತಮಗೊಳ್ಳಲಿವೆ ಎಂಬ ಭರವಸೆ ಹೊಂದಿದ್ದಾರೆ.
ಜಖಾಲು ಅವರು ಯುವಜನರ ಆಕಾಂಕ್ಷೆಗಳಿಗೆ ಹೆಚ್ಚಿನ ಒತ್ತುಕೊಡುವ ತಮ್ಮ ಉದ್ದೇಶ ಹೇಳಿಕೊಂಡಿದ್ದಾರೆ. ಯುವಕರಿಗೆ ಶಿಕ್ಷಣ ಮತ್ತು ಅವರಿಗೆ ಉದ್ಯೋಗ ದೊರಕಿಸಿಕೊಳ್ಳಲು ಪೂರಕವಾಗಬಲ್ಲ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿನ ಪ್ರಯತ್ನಗಳು ಅವರ ಕೆಲಸದ ಮುಖ್ಯ ಭಾಗವಾಗಲಿವೆ. ನಿರುದ್ಯೋಗವು ರಾಜ್ಯದಲ್ಲಿ ಜ್ವಲಂತ ಸಮಸ್ಯೆಯಾಗಿದೆ. ನಾಗಾ ಸಮುದಾಯದ ಬಹಳಷ್ಟು ಯುವಕರು ಉದ್ಯೋಗ ಹುಡುಕಿಕೊಂಡು ವಲಸೆ ಹೋಗುತ್ತಿರುವುದು ಅವರಿಗೆ ಗೊತ್ತಿದೆ.
ಈಗ ಇಬ್ಬರು ಮಹಿಳೆಯರು ವಿಧಾನಸಭೆಗೆ ಹೋದಂತಾಗಿದೆ. ಅಲ್ಲದೆ ಎಸ್. ಫಾಂಗ್ನಾನ್ ಕೊನ್ಯಾಕ್ ಅವರು ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಅವರು ನಾಗಾಲ್ಯಾಂಡ್‌ನ್ನು ಪ್ರತಿನಿಧಿಸುತ್ತಿರುವ ಮೊದಲ ರಾಜ್ಯಸಭಾ ಸದಸ್ಯೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತೊಮ್ಮೆ ಚುನಾವಣೆಯನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ನಾಗಾಲ್ಯಾಂಡ್ ಸರಕಾರ 2006ರಲ್ಲಿ ಮುನ್ಸಿಪಲ್ (ಮೊದಲ ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಿದಾಗಿನಿಂದ ಎಲ್ಲಾ ಪುರುಷರ ಬುಡಕಟ್ಟು ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ವಿರೋಧಿಸುತ್ತಿವೆ. ಅಂತಹ ಮೀಸಲಾತಿಯು ಆರ್ಟಿಕಲ್ 371(ಎ) ಅನ್ನು ಉಲ್ಲಂಘಿಸುತ್ತದೆ ಮತ್ತು ನಾಗಾ ಸಂಸ್ಕೃತಿಯನ್ನು ನಾಶಪಡಿಸುತ್ತದೆ ಎಂಬುದು ಅವರ ವಾದ.
ಮುಷ್ಕರಗಳು, ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ದಶಕಗಳಿಂದ ಚುನಾವಣೆಗಳನ್ನು ಸ್ಥಗಿತಗೊಳಿಸಿವೆ. ಆದರೆ ಮಹಿಳಾ ಗುಂಪುಗಳೂ ಸೇರಿದಂತೆ ಹಲವರ ಸುದೀರ್ಘ ಕಾನೂನು ಹೋರಾಟಗಳು ಸುಪ್ರೀಂ ಕೋರ್ಟ್‌ವರೆಗೂ ಹೋದ ನಂತರ, ಈ ವರ್ಷ ಚುನಾವಣೆಯನ್ನು ಯಾವಾಗ ನಡೆಸಬಹುದು ಎಂಬುದರ ಕುರಿತ ವರದಿ ನೀಡುವಂತೆ ಕೋರ್ಟ್ ರಾಜ್ಯ ಸರಕಾರಕ್ಕೆ ಕೇಳಿದೆ.
ತಾವು ಮಹಿಳಾ ಮೀಸಲಾತಿಗಾಗಿ ಹೋರಾಡುವುದಾಗಿಯೂ ಜಖಾಲು ಹೇಳಿದ್ದಾರೆ. ಮಹಿಳೆಯರಿಗೆ ಮೀಸಲಾತಿಯ ಅಗತ್ಯವಿದೆ ಎಂಬುದನ್ನೂ ಅವರು ಪ್ರತಿಪಾದಿಸಿದ್ದಾರೆ.
ಮಾನವ ಅಭಿವೃದ್ಧಿ ಮತ್ತು ಸಾಮಾಜಿಕ ಸೂಚ್ಯಂಕಗಳ ವಿಚಾರದಲ್ಲಿ ನಾಗಾಲ್ಯಾಂಡ್ ಇನ್ನೂ ಯಾವುದೋ ಕಾಲದಲ್ಲಿ ಇದ್ದ ಹಾಗಿದೆ. ಹಲವಾರು ರಂಗಗಳಲ್ಲಿ ಮಹಿಳೆಯರ ಸಾಧನೆ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದ್ದರೂ, ಇದು ಅವರ ರಾಜಕೀಯ ಸಬಲೀಕರಣಕ್ಕೆ ದಾರಿಯಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ನಾಗಾ ಪದ್ಧತಿಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವುದಿಲ್ಲ. ಅಲ್ಲಿನದು ಪುರುಷ ಪ್ರಧಾನ ವ್ಯವಸ್ಥೆ. ಮಹಿಳೆಯರು ರಾಜಕೀಯಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ, ಹೆಚ್ಚಿನ ಮಹಿಳೆಯರು ವಿದ್ಯಾವಂತೆಯರು ಮತ್ತು ಹೋರಾಡಬಲ್ಲವರು. ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಬಲ್ಲ ಸಾಮರ್ಥ್ಯವೂ ಅವರಿಗಿದೆ.
ಸ್ವಭಾವತಃ ಮಹಿಳೆಯರು ಸಹಾನುಭೂತಿಯುಳ್ಳವರು, ಹೆಚ್ಚು ಸಂವೇದನಾಶೀಲರಾಗಿದ್ದೇವೆ. ಯಾರೂ ಹಿಂದೆ ಬೀಳದಂತೆ ನೋಡಿಕೊಳ್ಳಲು ನಾನು ಯತ್ನಿಸುತ್ತೇನೆ ಎಂದಿದ್ದಾರೆ ಜಖಾಲು.
ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಜೊತೆಗಿನ ಶಾಂತಿ ಒಪ್ಪಂದದಲ್ಲಿನ ಜಿಗುಟಾದ ಅಂಶಗಳನ್ನು ಬಗೆಹರಿಸಲಾಗದೇ ಇರುವುದರಿಂದ, ಇನ್ನೂ ಶಾಂತಿಗಾಗಿ ಹಂಬಲಿಸುತ್ತಿರುವ ರಾಜ್ಯದಲ್ಲಿ ಜನರ ಪಾಲಿಗೆ ಜಖಾಲು ಮಾತುಗಳು ಭರವಸೆಯ ಸಂಕೇತದಂತೆ ಕಾಣಿಸತೊಡಗಿವೆ.
ಕೃಪೆ: thehindu