ಭಾರತೀಯ ಮಹಿಳೆ ಅಂದರೆ ಯಾರು?

Update: 2023-03-09 04:09 GMT

ಪುಟ್ಟದೊಂದು ಪೇಟೆಗೆ ತಾಗಿಕೊಂಡಿರುವ ಹಳ್ಳಿಯೊಂದರಲ್ಲಿ ನಾನು ವಾಸಿಸುತ್ತಿದ್ದೇನೆ. ಅದು ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶ. ನಾವು ಅಕ್ಕಪಕ್ಕದ ಮಹಿಳೆಯರು ಆಗಾಗ ಕಷ್ಟಸುಖ ಮಾತಾಡಿಕೊಳ್ಳುವುದು, ಅಗತ್ಯ ಬಿದ್ದಾಗ ಪರಸ್ಪರ ಸಹಾಯ ಮಾಡಿಕೊಳ್ಳುವುದು ಇದ್ದೇ ಇರುತ್ತದೆ. ಒಮ್ಮೆ ಹೀಗೆ ಮಾತಾಡಿಕೊಳ್ಳುತ್ತಿರುವಾಗ ಪಕ್ಕದ ಮನೆಯ ಮುಸ್ಲಿಮ್ ಮಹಿಳೆಯೊಬ್ಬರು ‘‘ನಮ್ಮ ಭಾರತೀಯ ಸಂಸ್ಕೃತಿ ಎಷ್ಟು ಚಂದ ಅಲ್ವಾ?’’ ಅಂದರು. ‘‘ಎಂತ ಚಂದ?’’ ಎಂದು ನಾನು ಪ್ರಶ್ನಿಸಿದೆ. ಅದಕ್ಕವರು ನಗುತ್ತಾ ‘‘ಸೀರೆ, ಕುಂಕುಮ, ಬಳೆ ಎಲ್ಲಾ ಚಂದ ಅಲ್ವಾ?’’ ಎಂದರು. ನಮ್ಮ ಮಾತುಕತೆ ಮುಂದುವರಿಯಿತು. ಅದಿಲ್ಲಿ ಪ್ರಸ್ತುತ ಅಲ್ಲ. ಪ್ರಸ್ತುತ ಏನು ಅಂದರೆ ‘ಭಾರತಮಾತೆ’ ಎಂಬ ಕಲ್ಪನೆ ಒಬ್ಬ ಹಿಂದೂ ಮಹಿಳೆಯ ಚಿತ್ರಣದಲ್ಲಿದೆ. ಆ ಚಿತ್ರಣವನ್ನು ನನಗೆ ಮತ್ತಷ್ಟು ಮನವರಿಕೆ ಮಾಡಿಕೊಟ್ಟವಳು ಒಬ್ಬ ಮುಸ್ಲಿಮ್ ಮಹಿಳೆ. ಅವಳಿಗೆ ತಾನು ಕೂಡಾ ಆ ಸಂಸ್ಕೃತಿಯ ಭಾಗ ಎಂಬ ಪ್ರಜ್ಞೆಯಿದೆ. ಆದರೆ ತನ್ನ ಪ್ರಾತಿನಿಧ್ಯ ಭಾರತ ಮಾತೆಯ ಚಿತ್ರಣದಲ್ಲಿ ಇಲ್ಲ ಎಂಬುದು ಅವಳ ಅರಿವಿಗೆ ಬಂದಂತಿರಲಿಲ್ಲ.

ನಮ್ಮ ಸಾರ್ವಜನಿಕ ಶುಭ ಸಮಾರಂಭಗಳ ಶೈಲಿಯನ್ನೇ ನೋಡಿ. ಅತಿಥಿಗಳನ್ನು ಪೂರ್ಣಕುಂಭ ಹೊತ್ತ ನಾರಿಮಣಿಯರೇ ಸ್ವಾಗತಿಸುತ್ತಾರೆ. ಯಾಕೆ ಅಲ್ಲಿ ಒಬ್ಬ ಬುರ್ಖಾ ಧರಿಸಿದ, ಬಿಳಿ ಗೌನ್ ತೊಟ್ಟ, ಚೂಡಿದಾರ ಧರಿಸಿದ ಅಥವಾ ಯಾವುದೋ ಬುಡಕಟ್ಟು ಜನಾಂಗದ ವಸ್ತ್ರ ತೊಟ್ಟ ಮಹಿಳೆ ಇರಬಾರದು? ಅಷ್ಟಕ್ಕೂ ಯಾಕೆ ಮಹಿಳೆಯರೇ ಇರಬೇಕು? ಹೆಣ್ಣು-ಗಂಡಿನ ಜೋಡಿ ಯಾಕೆ ಇರಬಾರದು?

ಸದ್ಯದ ಪರಿಸ್ಥಿತಿಯಲ್ಲಿ ನಾವು ಪ್ರಶೆಗಳನ್ನೇ ಕೇಳಬಾರದು. ಕೇಳಿದರೆ ರಾಷ್ಟ್ರದ್ರೋಹಿಗಳಾಗಿಬಿಡುತ್ತೇವೆ. ದೇಶದಲ್ಲಿ ಮಹಿಳೆಯರ ಮೇಲೆ ಇಷ್ಟೆಲ್ಲಾ ಲೈಂಗಿಕ ದೌರ್ಜನ್ಯಗಳಾಗುತ್ತವೆ. ಅದನ್ನೂ ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ, ಅವರ ಬೆನ್ನಿಗೆ ನಿಲ್ಲುವ ಧರ್ಮರಾಜಕಾರಣವನ್ನು ನೋಡುವಾಗ ಮಹಿಳೆಯರಿಗೆ ಈ ದೇಶದಲ್ಲಿ ಸ್ವಾಭಿಮಾನದಿಂದ ಬದುಕುವ ಹಕ್ಕೇ ಇಲ್ಲವೆನಿಸುತ್ತದೆ. ಅದರಲ್ಲೂ ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯರಾಗಿದ್ದರೆ ಅವರು ಮೇಲ್ಜಾತಿಯ ಜನಗಳಿಗೆ ಭೋಗದ ವಸ್ತುಗಳಾಗಿಯೇ ಕಾಣುತ್ತಾರೆ. ಅದೇ ಕಾರಣದಿಂದಾಗಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರ ಮಾಡಿದವರನ್ನು ‘ಸಂಸ್ಕಾರಿ ಬ್ರಾಹ್ಮಣರು’ ಎಂದು ಕರೆದು ಅವರು ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲವೆಂದು ಬಿಜೆಪಿಯ ಶಾಸಕನೊಬ್ಬ ಹೇಳುತ್ತಾನೆ. ಅಪರಾಧಿಗಳು ಜೈಲಿನಿಂದ ಹೊರಬಂದಾಗ ಅವರಿಗೆ ಹೂಹಾರ ಹಾಕಿ ಸ್ವಾಗತಿಸಲಾಗಿತ್ತು. ಇದು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ ಎಂಬ ಕನಿಷ್ಠ ಜ್ಞಾನವೂ ಈ ರಾಜಕಾರಣಿಗಳಿಗೆ ಇಲ್ಲವೆಂದರೆ ನಮ್ಮದು ಯಾವ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ?

ಇದೇ ರೀತಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ೨೦೨೦ರಲ್ಲಿ ೧೯ ವರ್ಷದ ದಲಿತ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಅತ್ಯಾಚಾರ ಎಸಗಿದ್ದರು. ಎರಡು ವಾರಗಳ ನಂತರ ಆಕೆ ದಿಲ್ಲಿಯ ಆಸ್ಪತ್ರೆಯಲ್ಲಿ ತೀರಿಹೋದಳು. ಜಿಲ್ಲಾಡಳಿತವೇ ಅವಳ ತಂದೆ ತಾಯಿಗಳಿಗೂ ತಿಳಿಸದೆ ನಟ್ಟ ನಡುರಾತ್ರಿಯಲ್ಲಿ ಅತ್ಯಂತ ಗುಪ್ತವಾಗಿ ಅವಳ ಅಂತ್ಯಸಂಸ್ಕಾರ ಮಾಡಿತ್ತು. ಅತ್ಯಾಚಾರ ಆರೋಪಿಗಳೆಲ್ಲಾ ಮೇಲ್ಜಾತಿಯ ಠಾಕೂರರಾಗಿದ್ದರು. ಬಂಧಿತ ನಾಲ್ವರು ಆರೋಪಿಗಳಲ್ಲಿ ಮೂವರನ್ನು ದೋಷಮುಕ್ತರೆಂದು ಬಿಡುಗಡೆ ಮಾಡಲಾಗಿದೆ.

ಅಪರಾಧಿಯೆನ್ನಲಾದವನ ಮೇಲೆಯೂ ಅತ್ಯಾಚಾರದ ಕೇಸ್ ಹಾಕಲಾಗಿಲ್ಲ. ದೇಶ ಕಂಡ ಅತ್ಯಂತ ಅಮಾನುಷವಾದ, ಹೀನಾಯ ಪ್ರಕರಣ ಇದು. ಈ ಪ್ರಕರಣವನ್ನು ವರದಿ ಮಾಡಲೆಂದು ಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ವಿನಾಕಾರಣ ಜೈಲಿಗೆ ದಬ್ಬಲಾಗಿತ್ತು. ೨೮ ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದ ಸಿದ್ದಿಕ್ ಇದೇ ಫೆಬ್ರವರಿಯಲ್ಲಿ ಬಿಡುಗಡೆಗೊಂಡರು. ತನ್ನ ಅಮೂಲ್ಯವಾದ ಎರಡೂವರೆ ವರ್ಷಗಳನ್ನು ಜೈಲಿನಲ್ಲಿ ಕಳೆದ ಪತ್ರಕರ್ತನ ನೋವು ಪ್ರಭುತ್ವಕ್ಕೆ ಅರ್ಥವಾಗಲು ಸಾಧ್ಯವೇ?

ನಮ್ಮದು ಪುರುಷಪ್ರಧಾನ್ಯತೆಯ ಸಮಾಜ. ಇಲ್ಲಿ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಳ್ಳುವುದೇ ಅಪರಾಧವಾಗುತ್ತದೆ. ಬಾಲ್ಯದಲ್ಲಿ ತನ್ನ ಮೇಲೆ ತಂದೆಯಿಂದಲೇ ಅತ್ಯಾಚಾರವಾಗಿತ್ತು ಎಂದು ಮೊನ್ನೆ ಖುಷ್ಬು ಹೇಳಿಕೊಂಡರು. ಈಗ ಪುರುಷ ಮನಸ್ಥಿತಿಯ ಅತೃಪ್ತ ಆತ್ಮಗಳು ಅವರನ್ನು ಅಸಹ್ಯವಾಗಿ ಟ್ರೋಲ್ ಮಾಡುತ್ತಿವೆ. ಶ್ರುತಿ ಹರಿಹರನ್ ತನ್ನ ಸಹನಟನೊಬ್ಬ ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಿಕೊಂಡರೆ ಇಡೀ ಕನ್ನಡ ಚಿತ್ರರಂಗವೇ ಅವಳ ಮೇಲೆ ಮುಗಿಬಿದ್ದಿತ್ತು. ಇಂದಿಗೂ ಅವರು ವೃತ್ತಿಯಲ್ಲಿ ಮೇಲೇಳಲಾಗಲೇ ಇಲ್ಲ. ಈ ದೇಶದಲ್ಲಿ ಗಂಡು ಹೆಣ್ಣಿನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದರೂ ಸಮಾಜ ಅವನ ಪರವಾಗಿಯೇ ನಿಲ್ಲುತ್ತದೆ. ಅವನನ್ನು ಕ್ಷಮಿಸಿಬಿಡುತ್ತದೆ. ಇವರೊಂದಿಗೆ ಪುರುಷ ಮನಸ್ಥಿತಿಯ ಮಹಿಳೆಯರೂ ಜೊತೆಗೂಡುತ್ತಾರೆ.

ಭಾರತೀಯ ಪುರುಷರಿಗೆ ಮಹಿಳೆಯರೆಂದರೆ ಒಂದು ಭೋಗವಸ್ತು ಅಷ್ಟೇ. ಅದಕ್ಕೆ ಯಾವ ವರ್ಗತಾರತಮ್ಯವೂ ಇಲ್ಲ. ಕಲಶ ಹೊರಿಸಿ ಮೆರೆಸುವವರು ಅವರೇ. ಚಾರಿತ್ರ್ಯವಧೆ ಮಾಡಿ ಬಾಯಿ ಮುಚ್ಚಿಸುವವರು ಅವರೇ. ಕಥುವಾದಲ್ಲಿ ಬಾಲಕಿಯೊಬ್ಬಳನ್ನು ದೇವಸ್ಥಾನದಲ್ಲೇ ಕೂಡಿಹಾಕಿ ನಿರಂತರವಾಗಿ ಅತ್ಯಾಚಾರ ಮಾಡಿ ಕೊಂದಾಗ ಆರೋಪಿಗಳ ಪರವಾಗಿ ಬಿಜೆಪಿಯ ಇಬ್ಬರು ಸಚಿವರೇ ಮೆರವಣಿಗೆ ಮಾಡಿದರೆ ಸಾಮಾಜಿಕ ನ್ಯಾಯ ಎಂಬುದಕ್ಕೆ ಅರ್ಥವೇನಾದರೂ ಇದೆಯೇ?

ಸಂತ್ರಸ್ತರ ಪರವಾಗಿ ಧ್ವನಿ ಎತ್ತುವಾಗಲೂ ಜಾತಿ ಧರ್ಮವೇ ಪರಿಗಣನೆಗೆ ಬಂದು ಆರೋಪಿಗಳ ಪರವೇ ಪ್ರಭುತ್ವ ನಿಂತಾಗ, ನಾವೆಲ್ಲರೂ ಭಾರತೀಯರು, ಭಾರತ ಮಾತೆಯ ಪುತ್ರರು ಭಾರತೀಯ ಸಂಸ್ಕೃತಿ ಎಂಬುದೆಲ್ಲಾ ಕೇವಲ ಸ್ಲೋಗನ್‌ಗಳಾಗಿ ಉಳಿದುಬಿಡುತ್ತದೆ.

ದೇಶ ವಿಭಜನೆಗೆ ಕಾರಣವಾಗುವ ಧರ್ಮಾಧಾರಿತ ಹತ್ಯೆಗಳಾದಾಗ, ಲೈಂಗಿಕ ದೌರ್ಜನ್ಯಗಳು ನಡೆದಾಗ ದೇಶ ಒಂದಾಗಿ ಪ್ರತಿಭಟಿಸಬೇಕು. ಹಾಗೆ ಆಗುತ್ತಿಲ್ಲ. ಯಾಕೆ?

ಕೆಲವು ಸಂದರ್ಭಗಳಲ್ಲಿ ಜನತೆ ಸಾಮೂಹಿಕವಾಗಿ ಪ್ರತಿಭಟಿಸಿದರೂ ನ್ಯಾಯ ಮರೀಚಿಕೆಯೇ ಆಗುತ್ತದೆ. ಧರ್ಮಸ್ಥಳದ ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ ಪ್ರಕರಣ ಹಳ್ಳ ಹಿಡಿದದ್ದು ನಮಗೆಲ್ಲಾ ಗೊತ್ತೇ ಇದೆ. ಆದರೆ ನಿರ್ಭಯಾ ಪ್ರಕರಣಕ್ಕೆ ಎಷ್ಟೊಂದು ಪ್ರಚಾರ ಮತ್ತು ಪ್ರತಿರೋಧ ವ್ಯಕ್ತವಾಯಿತು ಎಂದರೆ ಹೊಸದೊಂದು ಕಾನೂನು ಹುಟ್ಟಿಗೇ ಕಾರಣವಾಯಿತು. ಯಾಕೆ ಹೀಗೆ? ಆಕೆ ವಿದ್ಯಾವಂತಳಾಗಿದ್ದಳು, ಮೇಲ್ವರ್ಗಕ್ಕೆ ಸೇರಿದವಳಾಗಿದ್ದಳು ಎಂಬುದು ಕಾರಣವಾಯಿತೆ? ಉಳಿದ ಲೈಂಗಿಕ ಸಂತ್ರಸ್ತರ ಯಾತನೆ ಅಲ್ಪವೇ? ಕೆಳವರ್ಗದ ಹೆಣ್ಣು ನರಳುವುದು ಸಹಜ ಎಂಬ ಪಾಳೇಗಾರಿಕೆ ಮನಸ್ಥಿತಿಯನ್ನು ಈ ಸಮಾಜ ಇನ್ನೂ ಪೋಷಿಸುತ್ತಿದೆಯೇ?

ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಿರೆರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ ಮುಂತಾದೆಡೆ ಹೋಗಿ ನೋಡಿ. ನಾವು ಯಾವುದನ್ನು ಭಾರತೀಯ ಸಂಸ್ಕೃತಿಯ ಪ್ರತೀಕಗಳೆಂದು ಬಿಂಬಿಸುತ್ತೇವೆಯೋ ಅದರ ಕುರುಹುಗಳೇ ಅಲ್ಲಿಲ್ಲ. ಗಡಿರಾಜ್ಯಗಳಾದ ಲೇಹ್ ಲಡಾಖ್, ಲಾಹೂಲ್ ಸ್ಮಿತಿ ಜಿಲ್ಲೆಗಳಲ್ಲಿ ಬೌದ್ಧ ಧರ್ಮದ್ದೇ ಪಾರಮ್ಯ. ಸ್ಥೂಲವಾಗಿ ಹೇಳುವುದಾದರೆ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಅಸ್ಮಿತೆಗಳಿರುವಾಗ ಪ್ರತ್ಯೇಕ ನಾಡದೇವತೆಯ ಪರಿಕಲ್ಪನೆಯನ್ನು ಹೊಂದುವುದು ಭಾರತದಂತಹ ಒಕ್ಕೂಟ ರಾಷ್ಟ್ರದ ಒಗ್ಗಟ್ಟಿಗೆ ಬಲ ತರುತ್ತದೆ. ಅಮೆರಿಕದ ಹಾಗೆ. ನಮ್ಮದೂ ಒಕ್ಕೂಟ ಸರಕಾರವೇ. ಆದರೆ ಅದು ಸಂವಿಧಾನದಲ್ಲಿ ಮಾತ್ರ ಇದೆ. ವಾಸ್ತವದಲ್ಲಿ ಕೇಂದ್ರ ಸರಕಾರವೇ ರಾಜ್ಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಹಾಗಾಗಿಯೇ ದಕ್ಷಿಣ ಭಾರತೀಯರನ್ನು ಕೇಂದ್ರ ಸರಕಾರದ ಸಚಿವರೊಬ್ಬರು ‘‘ದಕ್ಷಿಣದ ಕಪ್ಪುಜನರೊಡನೆ ನಾವು ಸಾಮರಸ್ಯದಿಂದ ಬಾಳುತ್ತಿದ್ದೇವೆ’’ ಎಂದು ಹೇಳುವ ಧಾರ್ಷ್ಟ್ಯವನ್ನು ತೋರಿಸುತ್ತಾರೆ.

ನಾವು ಮುಲಾಜಿಗೆ ಒಳಗಾಗಿದ್ದೇವೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಲಾಗದ ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಿದ್ದೇವೆ. ರೂಪಕಗಳ, ಪ್ರತೀಕಗಳ ಅಡಿಯಲ್ಲಿ ನಲುಗಿದ್ದೇವೆ. ಪೊಳ್ಳು ಆದರ್ಶಗಳಿಗೆ  ಬುದ್ಧಿಯನ್ನು ಅಡವಿಟ್ಟಿದ್ದೇವೆ. ನಾವು ನಾವಾಗಿಯೇ ಬದುಕುವುದು ಯಾವಾಗ? ಅದು ನಮ್ಮ ಸಮಾಜ ಬದಲಾದಾಗ. ಅಂದರೆ ಸ್ತ್ರೀಯನ್ನು ನೋಡುವ ದೃಷ್ಟಿಕೋನ ಬದಲಾದಾಗ. ಅದಕ್ಕೆ ಭಾರತ ಮಾತೆ ಕೇವಲ ವಾಸ್ತವದ ಹೆಣ್ಣಾಗಬಾರದು. ಅದು ಒಂದು ಸಂಕೇತವಾಗಬೇಕು. ಆ ಸಂಕೇತ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು.

Similar News