ಭಯಾನಕ ಭೂಕಂಪ ಮತ್ತು ಆನಂತರದ ತಲ್ಲಣ, ತಳಮಳಗಳು

Update: 2023-03-09 04:18 GMT

ಭೂಕಂಪಕ್ಕೆ ಮೊದಲೇ ವಾಯವ್ಯ ಸಿರಿಯಾದಲ್ಲಿ 18 ಲಕ್ಷದಷ್ಟು ನಿರಾಶ್ರಿತರು ತಾತ್ಕಾಲಿಕ ಡೇರೆಗಳು ಮತ್ತು ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಅನೇಕರು ಹೆಪ್ಪುಗಟ್ಟುವಂಥ ಚಳಿಯಲ್ಲಿ ಮನೆಯಿಲ್ಲದ ಸ್ಥಿತಿಯಲ್ಲಿ ಅನಿವಾರ್ಯವಾಗಿ ಹೊರಗಡೆ ಕಳೆಯಬೇಕಾಗಿ ಬಂದಿದೆ. ಇನ್ನೂ ದುಃಖದ ಸಂಗತಿಯೆಂದರೆ, ಟೆಂಟ್ಗಳ ಬೆಲೆ 200 ಡಾಲರ್ಗಳಿಂದ 400 ಡಾಲರ್ವರೆಗೆ ಏರಿದ್ದು, ಕೈಗೆಟುಕಲಾರದಂತಾಗಿದೆ ಎಂಬುದು.


ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಭಯಾನಕ ಭೂಕಂಪವಾಗಿ ಒಂದು ತಿಂಗಳು ಕಳೆಯಿತು. ಫೆಬ್ರವರಿ 6ರಂದು ನಡೆದ ಆ ಭೂಕಂಪ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಕನಿಷ್ಠ 50,000 ಜನರನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಈವರೆಗಿನ ಅಂದಾಜಿನಂತೆ 2,14,000 ಕಟ್ಟಡಗಳು ನೆಲಸಮವಾಗಿವೆ. ಇನ್ನೂ ಹಲವು ಕಟ್ಟಡಗಳು ಬೀಳುವ ಹಂತದಲ್ಲಿವೆ.
ಇದು ಇಲ್ಲಿಗೇ ಮುಗಿದಿಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಯಾಕೆಂದರೆ, ಅವಶೇಷಗಳಡಿ ಸಿಕ್ಕಿರುವ ದೇಹಗಳೆಲ್ಲವನ್ನೂ ಈಗಾಗಲೇ ಪತ್ತೆಹಚ್ಚಲಾಗಿದೆ ಎಂದು ಹೇಳುವ ಹಾಗಿಲ್ಲ. ಬದುಕುಳಿದವರು ತಮ್ಮವರಿಗಾಗಿ ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ. ಅನೇಕರನ್ನು ಸತ್ತಿದ್ದಾರೆ ಎಂದು ಇನ್ನೂ ಅಧಿಕೃತವಾಗಿ ಹೇಳಲಾಗಿಲ್ಲ. ಟರ್ಕಿಯೊಂದರಲ್ಲೇ ಸಾವು ನೋವು, ಹಾನಿ 11 ಪ್ರಾಂತಗಳಾದ್ಯಂತ ವ್ಯಾಪಿಸಿದೆ. ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಡಿಡಬ್ಲ್ಯೂ ಮಾಧ್ಯಮ ಕೇಳಿದ್ದಕ್ಕೆ ಟರ್ಕಿ ಸಚಿವರು ಉತ್ತರಿಸಿಲ್ಲ.
ಈ ಭೂಕಂಪದ ಬಳಿಕ ಮತ್ತೊಂದು ಸತ್ಯವೂ ಬಯಲಾಗಿದೆ. ಅದೆಂದರೆ, ಕಟ್ಟಡ ನಿರ್ಮಾಣ ಕಂಪೆನಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇರುವುದು. ಭೂಕಂಪ ನಿರೋಧಕ ಎನ್ನಲಾದ ಕಟ್ಟಡಗಳೂ ಬಿದ್ದಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದು ಬಹಿರಂಗವಾಗಿದೆ. ಕಟ್ಟಡ ನಿರ್ಮಾಣ ನಿಯಮ ಉಲ್ಲಂಘಿಸಿರುವವರು ಸಾವಿರ ಲೆಕ್ಕದಲ್ಲಿ ಇರಬಹುದೆಂದು ಅನುಮಾನಿಸಲಾಗಿದೆ. ಕನಿಷ್ಠ 235 ಜನರನ್ನು ಬಂಧಿಸಲಾಗಿದೆ. 330ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆದಿದೆ. ವಿದೇಶಗಳಲ್ಲೂ ಕೆಲವರು ಇದ್ದಾರೆನ್ನಲಾಗಿದೆ. ಇನ್ನೂ 270 ಶಂಕಿತರಿಗಾಗಿ ಬಂಧನ ವಾರಂಟ್ ಹೊರಡಿಸಲಾಗಿದೆ. ಅವರಲ್ಲಿಯೂ ಕೆಲವರು ಇದೇ ಭೂಕಂಪಕ್ಕೆ ಬಲಿಯಾಗಿದ್ದಾರೆ.

ಹಾಗೆ ನೋಡಿದರೆ ಇದು ಸುಳಿವಿಲ್ಲದೆಯೇ ಎರಗಿದ ವಿಪತ್ತೇನೂ ಅಲ್ಲ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ ವರ್ಷಗಳ ಹಿಂದೆಯೇ ಈ ಬಗ್ಗೆ ಎಚ್ಚರಿಸಿತ್ತು. ವಿಪತ್ತುಗಳಿಂದ ಉಂಟಾಗಬಹುದಾದ ಅಪಾಯ ಕಡಿಮೆ ಮಾಡಲು 2019ರಿಂದ 2021ರವರೆಗೆ ಯೋಜನೆಗಳನ್ನೂ ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು.
ಕಹ್ರಮನ್ಮಾರಾಸ್ ಪ್ರಾಂತದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಲಿದೆ ಎಂದು 2020ರಲ್ಲಿಯೇ ಮುನ್ಸೂಚನೆ ನೀಡಲಾಗಿತ್ತು. ಅದು ಫೆಬ್ರವರಿ 6ರಂದು ನಿಜವೇ ಆಗಿಹೋಯಿತು.


ಯುನಿಸೆಫ್ ಪ್ರಕಾರ, ಸುಮಾರು 50 ಲಕ್ಷ ಮಕ್ಕಳು ಭೂಕಂಪದ ತೀವ್ರ ಪರಿಣಾಮಕ್ಕೆ ತುತ್ತಾಗಿದ್ದಾರೆ. ಅವಶೇಷಗಳ ಅಡಿಯಿಂದ ರಕ್ಷಿಸಲ್ಪಟ್ಟ, ಗಂಭೀರವಾಗಿ ಗಾಯಗೊಂಡಿರದ 1,911 ಮಕ್ಕಳಲ್ಲಿ 1,543 ಮಕ್ಕಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ಆರೈಕೆ ಮುಂದುವರಿದಿದೆ. 81 ಮಕ್ಕಳನ್ನು ಇನ್ನೂ ಗುರುತಿಸಬೇಕಾಗಿದೆ.

ದುರಂತ ಒಂದೆಡೆಯಾದರೆ, ಇಂಥದ್ದರ ನಡುವೆಯೂ ಹಬ್ಬುವ ವದಂತಿಗಳು ಮತ್ತೊಂದೆಡೆ. ಭೂಕಂಪದಿಂದ ತತ್ತರಿಸಿದ ನೆಲವೂ ಅದಕ್ಕೆ ಹೊರತಾಗಿಲ್ಲ.

ಟರ್ಕಿಯಲ್ಲಿ ಈ ವರ್ಷ ಅಧ್ಯಕ್ಷೀಯ ಮತ್ತು ಸಂಸತ್ತಿನ ಚುನಾವಣೆಗಳಿವೆ. ಈ ವಿಪತ್ತು ಅದರ ಪಾಲಿಗೆ ದೊಡ್ಡ ಸವಾಲಾಗಿದೆ. ಭೂಕಂಪದ ನಂತರ ಪ್ರಚಾರವೂ ಕೆಲಕಾಲ ನಿಂತಿತು. ಈಗ ಮತ್ತೆ ನಿಧಾನವಾಗಿ ರಾಜಕಾರಣ ಶುರುವಾದಂತಿದೆ ಎನ್ನುತ್ತಿವೆ ವರದಿಗಳು.

ಮೇ ತಿಂಗಳಲ್ಲಿಯೇ ಚುನಾವಣೆ ನಡೆಯುವ ಸುಳಿವನ್ನು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಮೊನ್ನೆಯಷ್ಟೇ ಖಚಿತಪಡಿಸಿದ್ದಾರೆ. ಮೇ 14ರಂದು ಚುನಾವಣೆ ನಡೆಸುವ ಬಗ್ಗೆ ಈ ವಾರ ಅಧಿಕೃತ ಆದೇಶ ಬರುವ ಸಾಧ್ಯತೆ ಇದೆ. ದುರಂತಕ್ಕೆ ಮೊದಲು ಕಳೆದ ಜನವರಿಯಲ್ಲಿಯೇ ಅವರು ಚುನಾವಣೆ ಬಗ್ಗೆ ಘೋಷಣೆ ಮಾಡಿದ್ದರು. ಭೂಕಂಪದಿಂದ ತೀವ್ರ ಹಾನಿಗೊಳಗಾದ ನಗರಗಳಲ್ಲಿ ಮತದಾನ ಹೇಗೆ ನಡೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಅಧ್ಯಕ್ಷೀಯ ಚುನಾವಣೆಗಾದರೆ ಇತರ ನಗರಗಳಲ್ಲಿಯೂ ಮತ ಚಲಾಯಿಸಬಹುದು. ಆದರೆ ಸಂಸತ್ತಿನ ಚುನಾವಣೆಗೆ ಹಾಗಾಗುವುದಿಲ್ಲ ಎಂಬುದು ಈಗ ಕಾಡುತ್ತಿರುವ ಚಿಂತೆ ಎನ್ನಲಾಗಿದೆ.

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ದೊಡ್ಡಮಟ್ಟದ ಪುನರ್ನಿರ್ಮಾಣ ಕಾರ್ಯ ನಡೆಯಬೇಕಿದೆ. ಭೂಕಂಪದಿಂದಾಗಿ ಏನಿಲ್ಲವೆಂದರೂ 34.2 ಶತಕೋಟಿ ಡಾಲರ್ ಮೌಲ್ಯದ ಹಾನಿಯಾಗಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಟರ್ಕಿಶ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಪ್ರಕಾರ, ಭೂಕಂಪ ವಲಯದ 11 ಪ್ರಮುಖ ನಗರಗಳಲ್ಲಿ ಸರಿಸುಮಾರು ಒಂದು ಕೋಟಿ ನಲ್ವತ್ತು ಲಕ್ಷ ಜನರು ವಾಸಿಸುತ್ತಿದ್ದಾರೆ. ದೇಶದ ಜಿಡಿಪಿಯ ಸುಮಾರು ಶೇ. 9.8ರಷ್ಟಿರುವ ಪ್ರಾದೇಶಿಕ ಆರ್ಥಿಕತೆ ಕೃಷಿ, ಪಶುಸಂಗೋಪನೆ, ಜೊತೆಗೆ ಜವಳಿ, ಉಕ್ಕು ಮತ್ತು ಇಂಧನವನ್ನು ಆಧರಿಸಿದೆ.

ಅರ್ಥಶಾಸ್ತ್ರಜ್ಞ, ಹಣಕಾಸು ಸಚಿವಾಲಯದ ಮಾಜಿ ಅಧೀನ ಕಾರ್ಯದರ್ಶಿ ಮಹ್ಫಿ ಎಗಿಲ್ಮೆಜ್, ಭೂಕಂಪದ ಆರ್ಥಿಕ ಪರಿಣಾಮಗಳ ಕುರಿತು ವಿವರವಾದ ಅಧ್ಯಯನ ಪ್ರಕಟಿಸಿದ್ದಾರೆ. ಭಗ್ನಾವಶೇಷಗಳನ್ನು ತೆಗೆಯುವುದು, ಹಾನಿ ಗೊಳಗಾದ ವಸತಿ ಕಟ್ಟಡಗಳು ಮತ್ತು ಮೂಲಸೌಕರ್ಯಗಳ ದುರಸ್ತಿ, ಹೊಸ ಮನೆಗಳ ನಿರ್ಮಾಣ, ಸಂತ್ರಸ್ತರಿಗೆ ಆರ್ಥಿಕ ಪರಿಹಾರ ಇತ್ಯಾದಿಗಳೆಲ್ಲ ಸೇರಿ ಒಟ್ಟು ವೆಚ್ಚ 48.7 ಶತಕೋಟಿ ಡಾಲರ್ ಮುಟ್ಟಲಿದೆ ಎಂಬುದು ಅವರ ಲೆಕ್ಕಾಚಾರ. ಅದರಲ್ಲಿ 27 ಶತಕೋಟಿ ಡಾಲರ್ ಹೊಸ ವಸತಿ ನಿರ್ಮಾಣಕ್ಕೇ ಹೋಗುತ್ತದೆ ಎಂಬುದನ್ನೂ ಅವರು ಗುರುತಿಸಿದ್ದಾರೆ.

ವಿಪತ್ತಿನ ಆರ್ಥಿಕ ಪರಿಣಾಮ ಇಲ್ಲಿಗೇ ನಿಲ್ಲುವುದಿಲ್ಲ. ಅನೇಕ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚುವುದರಿಂದ, ಈಗಾಗಲೇ ಅಧಿಕವಾಗಿರುವ ಹಣದುಬ್ಬರ ಇನ್ನಷ್ಟು ಹೆಚ್ಚಲಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. 2023ರ ಅಂತ್ಯಕ್ಕೆ ಹಣದುಬ್ಬರ ಕನಿಷ್ಠ ಶೇ. 50ರಷ್ಟಕ್ಕೆ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇವೆಲ್ಲ ಒಂದು ಬಗೆಯದ್ದಾದರೆ, ಭೂಕಂಪದ ನಂತರ ಟರ್ಕಿಯಲ್ಲಿ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲಾಗಿದೆ. ರೇಡಿಯೊ ಮತ್ತು ಟೆಲಿವಿಷನ್ ಸುಪ್ರೀಮ್ ಕೌನ್ಸಿಲ್ ಈಗಾಗಲೇ ಮೂರು ಟಿವಿ ಸ್ಟೇಷನ್ಗಳಿಗೆ ದುರಂತದ ಪ್ರಸಾರ ಮಾಡಿದ್ದಕ್ಕಾಗಿ ಸುಮಾರು 4,26,000 ಡಾಲರ್ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಈ ನಡುವೆ ಅಧ್ಯಕ್ಷ ಎರ್ದೊಗಾನ್ ಮತ್ತವರ ಸರಕಾರದ ರಾಜೀನಾಮೆಗೂ ಒತ್ತಾಯಗಳು ಕೇಳಿಬಂದವು.

ರಾಜೀನಾಮೆಗೆ ಒತ್ತಾಯಿಸಿದ್ದ ಪ್ರಮುಖ ಸಾಕರ್ ಕ್ಲಬ್ಗಳಾದ ಫೆನರ್ಬಾಹ್ಸ್ ಮತ್ತು ಬೆಸಿಕ್ಟಾಸ್ನ ಬೆಂಬಲಿಗರು ಕ್ರೀಡಾಕೂಟಗಳಿಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ.

ಇನ್ನು ಉತ್ತರ ಸಿರಿಯಾದಲ್ಲಿನದ್ದು ಭಯಾನಕ ಸ್ಥಿತಿ. 12 ವರ್ಷಗಳ ಅಂತರ್ಯುದ್ಧದಿಂದ ಬಸವಳಿದುಹೋಗಿದ್ದ ಆ ನೆಲಕ್ಕೆ ಈಗ ಭೂಕಂಪದಿಂದ ಚೇತರಿಸಿಕೊಳ್ಳಲೇ ಸಾಧ್ಯವಾಗದಂಥ ಹೊಡೆತ. ದುರಂತದ ನಂತರದ ವಾರಗಳಲ್ಲಿ ಸಿರಿಯಾದಿಂದ ಮಾಹಿತಿ ಬಂದಿರುವುದೇ ಕಡಿಮೆ ಎಂಬ ವರದಿಗಳಿವೆ. ಸುಮಾರು 88 ಲಕ್ಷ ಜನರು ಭೂಕಂಪದ ಪರಿಣಾಮ ಎದುರಿಸಬೇಕಾಗಿದೆ. ಹಲವರು ನಿರಾಶ್ರಿತರಾಗಿದ್ದಾರೆ. ಅಧಿಕೃತವಾಗಿ ಅದು ಘೋಷಿಸಿರುವ ಪ್ರಕಾರ 5,900 ಮಂದಿ ಸತ್ತಿದ್ದಾರೆ. ಆದರೆ ನಿಜವಾದ ಅಂಕಿ ಅಂಶವು ಖಂಡಿತವಾಗಿಯೂ ಹೆಚ್ಚಿರುತ್ತದೆ ಎಂಬುದು ವಿಶ್ವಸಂಸ್ಥೆಯ ಅಂದಾಜು.

ಅಂತರ್ರಾಷ್ಟ್ರೀಯ ಗಡಿಗಳನ್ನು ನಿರ್ಬಂಧಿಸಿರುವು ದರಿಂದ, ಭೂಕಂಪಗಳ ನಂತರದ ಮೊದಲ ಕೆಲವು ದಿನಗಳಲ್ಲಿ ಅನೇಕ ಸಿರಿಯನ್ನರು ಯಾವುದೇ ಸಹಾಯ ಪಡೆಯದಂತಾಗಿತ್ತು. ಈಗ ಸಿರಿಯಾಕ್ಕೆ ನೆರವು ಹೋಗು ತ್ತಿದೆಯಾದರೂ, ಅದು ಸಂತ್ರಸ್ತರನ್ನು ತಲುಪುತ್ತಿಲ್ಲ ಎಂದು ಹೇಳಲಾಗುತ್ತಿದೆ. ಭೂಕಂಪ ವಲಯದ ಹೆಚ್ಚಿನ ಪ್ರದೇಶಗಳು ಸರಕಾರದ ಸಂಪೂರ್ಣ ನಿಯಂತ್ರಣದಲ್ಲಿಲ್ಲ. 20 ಲಕ್ಷಕ್ಕಿಂತಲೂ ಹೆಚ್ಚು ಜನರಿರುವ ಇಡ್ಲಿಬ್ ನಗರ ಉಗ್ರ ಸಂಘಟನೆಗಳ ನಿಯಂತ್ರಣದಲ್ಲಿದ್ದು, ಅಧಿಕೃತ ನೆರವು ಇಲ್ಲಿಗೆ ಬರುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ.

ಭೂಕಂಪಕ್ಕೆ ಮೊದಲೇ ವಾಯವ್ಯ ಸಿರಿಯಾದಲ್ಲಿ 18 ಲಕ್ಷದಷ್ಟು ನಿರಾಶ್ರಿತರು ತಾತ್ಕಾಲಿಕ ಡೇರೆಗಳು ಮತ್ತು ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಅನೇಕರು ಹೆಪ್ಪುಗಟ್ಟುವಂಥ ಚಳಿಯಲ್ಲಿ ಮನೆಯಿಲ್ಲದ ಸ್ಥಿತಿಯಲ್ಲಿ ಅನಿವಾರ್ಯವಾಗಿ ಹೊರಗಡೆ ಕಳೆಯಬೇಕಾಗಿ ಬಂದಿದೆ. ಇನ್ನೂ ದುಃಖದ ಸಂಗತಿಯೆಂದರೆ, ಟೆಂಟ್ಗಳ ಬೆಲೆ 200 ಡಾಲರ್ಗಳಿಂದ 400 ಡಾಲರ್ವರೆಗೆ ಏರಿದ್ದು, ಕೈಗೆಟುಕಲಾರದಂತಾಗಿದೆ ಎಂಬುದು.

ಒಟ್ಟಾರೆ ಟರ್ಕಿ ಹಾಗೂ ಸಿರಿಯಾಗಳು ಭೂಕಂಪದಿಂದ ನಲುಗಿ ಹೋಗಿವೆ. ರಾಜಕೀಯ, ಭ್ರಷ್ಟಾಚಾರ, ಭೇದಭಾವ, ಸ್ವಾರ್ಥ ಇವೆಲ್ಲವನ್ನೂ ಮೀರಿ ಮತ್ತೆ ದೇಶ ಕಟ್ಟುವ ಕೆಲಸ ಅಲ್ಲಿ ಆಗಬೇಕಿದೆ. ಅದಕ್ಕೆ ಇಡೀ ವಿಶ್ವವೇ ಈ ಎರಡು ದೇಶಗಳಿಗೆ ಆಸರೆಯಾಗಬೇಕಿದೆ. ಭಾರತವಂತೂ ಸಹಾಯಹಸ್ತ ಚಾಚಿದೆ. ಪ್ರತೀ ದೇಶವೂ, ಪ್ರತಿಯೊಬ್ಬರೂ ತಮ್ಮಿಂದಾಗುವ ಸಹಕಾರ ನೀಡಬೇಕಿದೆ.

Similar News