ಬಿಜೆಪಿಯ ದಿಲ್ಲಿ ನಾಯಕರು 40 ಪರ್ಸೆಂಟ್ ಕಮಿಷನ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?: ಬಿ.ವಿ. ಶ್ರೀನಿವಾಸ್

Update: 2023-03-09 10:29 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ನಾವು ರಾಜ್ಯದಲ್ಲಿನ ನಿರುದ್ಯೋಗ, ಬೆಲೆಯೇರಿಕೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಮೋದಿ, ಅಮಿತ್ ಶಾ ಕರ್ನಾಟಕದಲ್ಲಿ 10 ಪರ್ಸೆಂಟ್ ಇದೆ ಎನ್ನುತ್ತಿದ್ದರು. ಈಗ ಅವರು 40 ಪರ್ಸೆಂಟ್ ಕಮಿಷನ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಹಾಗಾದರೆ ಎಷ್ಟು ಪರ್ಸೆಂಟ್ ದಿಲ್ಲಿಗೆ ಹೋಗುತ್ತಿದೆ? ಇದೂ ಬೆಳಕಿಗೆ ಬರಬೇಕಲ್ಲವೆ?

  ಚುನಾವಣೆಗೆ ಕೆಲವೇ ದಿನಗಳು ಬಾಕಿಯಿವೆ. ಯುವ ಕಾಂಗ್ರೆಸ್ ಕಡೆಯಿಂದ ಯಾವ ರೀತಿಯ ಸಿದ್ಧತೆ ನಡೆದಿದೆ?
ಬಿ.ವಿ. ಶ್ರೀನಿವಾಸ್: ಸಮಸ್ಯೆಯಲ್ಲಿರುವವರು, ಕಷ್ಟ ಎದುರಿಸುತ್ತಿರುವವರು ಕರ್ನಾಟಕದ ಯುವಕರು. ಸರಕಾರ ಕೊಟ್ಟಿರುವ ಭರವಸೆಗಳೆಲ್ಲ ಸುಳ್ಳಾಗಿವೆ. ಅಚ್ಛೇದಿನ್ ಎಂದರು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದರು. 9 ವರ್ಷಗಳಾದವು. 18 ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು. ಆದರೆ ಉದ್ಯೋಗ ಕಿತ್ತುಕೊಳ್ಳುವ ಕೆಲಸ ಆಯಿತು. ನೋಟ್‌ಬ್ಯಾನ್ ಆದಾಗ ಸಣ್ಣಪುಟ್ಟ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳು ಎಲ್ಲವನ್ನೂ ವ್ಯವಸ್ಥಿತವಾಗಿ ಮುಗಿಸಿಬಿಟ್ಟರು. ಇವೆೆಲ್ಲದರ ಜೊತೆ ಬೆಲೆಯೇರಿಕೆ. ನೇಮಕಾತಿಗಳಲ್ಲಿನ ಅವ್ಯವಹಾರ.

  ಬಿಜೆಪಿಯ ಹೆಚ್ಚಿನ ಮತದಾರರು ಯುವಕರು. ನೀವು ಹೇಗೆ ಅವರನ್ನು ತಲುಪುತ್ತೀರಿ?
ಬಿ.ವಿ. ಶ್ರೀನಿವಾಸ್: ಕಾಂಗ್ರೆಸ್ ಎಂದರೆ ಇತಿಹಾಸವುಳ್ಳ ಪಕ್ಷ. ಬಿಜೆಪಿಯೆಂದರೆ ಬೆಲೆಯೇರಿಕೆ, ನಿರುದ್ಯೋಗ ಎಂಬುದು ಸ್ಪಷ್ಟವಾಗಿ ಯುವಕರಿಗೆ ಈಗ ಮನದಟ್ಟಾಗಿದೆ. ಬಿಜೆಪಿಯವರು ಈಗ ವರ್ಷಕ್ಕೆ 2 ಕೋಟಿ ಉದ್ಯೋಗ ಎನ್ನುವುದನ್ನು ಮರೆತಿದ್ದಾರೆ. ಗುಜರಾತ್ ಮಾಡೆಲ್ ಅನ್ನು ಮರೆತಿದ್ದಾರೆ. ಈಗ ಅಮಿತ್ ಶಾ ರಾಜ್ಯಕ್ಕೆ ಬಂದು ‘‘ಇದು ಟಿಪ್ಪುಸುಲ್ತಾನ್ ವರ್ಸಸ್ ಸಾವರ್ಕರ್ ಚುನಾವಣೆ’’ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಇರುವುದು ನಿರುದ್ಯೋಗದ ಸಮಸ್ಯೆ. ಅದರ ಬಗ್ಗೆ ಮಾತಾಡಬೇಕಲ್ಲವೆ?

  ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆಯಂತೆ?
ಬಿ.ವಿ. ಶ್ರೀನಿವಾಸ್: ಕಾಂಗ್ರೆಸ್ ಸರಕಾರ ಇದ್ದಾಗಿನ ನೀತಿಗಳು, ಅದು ತಂದ ಸುಧಾರಣೆಗಳು ಮತ್ತು ಅತಿ ಹೆಚ್ಚು ನೇಮಕಾತಿ ಅದಕ್ಕೆ ಕಾರಣ. ಬಿಜೆಪಿಯವರೇಕೆ ಪಟ್ಟಿ ಕೊಡುತ್ತಿಲ್ಲ? ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಎಂದು ಕೇಳುತ್ತಿದ್ದೇವೆ. ಅವರ ಬಳಿ ಉತ್ತರವಿಲ್ಲ. ಧರ್ಮ, ಕೋಮುವಾದ ಇಟ್ಟುಕೊಂಡು ಯುವಕರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಗೋರಕ್ಷಣೆಯಂತೆ. ಎಂಬಿಎ, ಇಂಜಿನಿಯರಿಂಗ್ ಓದಿದವರಿಗೆ ಸರಿಯಾದ ಕೆಲಸ ಕೊಡಲಾಗುತ್ತಿಲ್ಲ.

  ಆದರೆ ಅವರೇ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ?
ಬಿ.ವಿ. ಶ್ರೀನಿವಾಸ್: ಹಿಮಾಚಲ ಪ್ರದೇಶದಲ್ಲಿಯೂ ಚುನಾವಣೆ ನಡೆಯಿತು. ಅಲ್ಲಿ ಶೇ. 98-99 ಹಿಂದೂಗಳೇ. ಅದು ಜೆ.ಪಿ. ನಡ್ಡಾ ಅವರ ರಾಜ್ಯ. ಅಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರ ಹಿಡಿದಿದೆ. ಮುಂದೆ ರಾಜಕೀಯ ಚಿತ್ರಣವನ್ನು ಬದಲು ಮಾಡಲಿರುವ ರಾಜ್ಯ ಕರ್ನಾಟಕ.

  ಅದಕ್ಕೆ ಬೇಕಾದ ಸಿದ್ಧತೆಗಳು ನಿಮ್ಮಿಂದ ಆಗುತ್ತಿವೆಯೇ?
ಬಿ.ವಿ. ಶ್ರೀನಿವಾಸ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರಾದಂದಿನಿಂದ ಕ್ಷೇತ್ರದಲ್ಲಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಸತತವಾಗಿ ಕೆಲಸದಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಖರ್ಗೆಯವರು ರಾಜ್ಯದಲ್ಲಿ ಪಕ್ಷ ಬಲಪಡಿಸುತ್ತಿದ್ದಾರೆ.

  ಕಾಂಗ್ರೆಸ್‌ಗೆ ರಾಜ್ಯದಲ್ಲಿ ನಾಯಕತ್ವ ಇದೆ. ಆದರೆ ಸಂಘಟನೆ ಎಂದು ಬಂದಾಗ ತಳಮಟ್ಟದಲ್ಲಿ ಬಿಜೆಪಿಯ ಹಾಗೆ ಇಲ್ಲ ಎನ್ನಿಸುತ್ತದೆ?
ಬಿ.ವಿ. ಶ್ರೀನಿವಾಸ್: ಖಂಡಿತ ಇಲ್ಲ. ಕಳೆದ ಉಪಚುನಾವಣೆ ಸಂದರ್ಭವನ್ನು ಗಮನಿಸಿ. ಪಂಚಾಯತ್ ಚುನಾವಣೆಗಳನ್ನು ಗಮನಿಸಿ. ಹಾಗೆಯೇ ಎಂಎಲ್‌ಸಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಒಳ್ಳೆಯ ಫಲಿತಾಂಶವನ್ನು ಪಡೆದಿದೆ. ಆದರೆ ಇವರು ಯಾರಾದರೂ ಧ್ವನಿಯೆತ್ತಿದರೆ ಅದನ್ನು ಹತ್ತಿಕ್ಕಲು ಈ.ಡಿ., ಸಿಬಿಐ, ಐಟಿ ಬಳಸುತ್ತಾರೆ. ಬಿಜೆಪಿ ಶಾಸಕರೇ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

  ಅವರು ಹೇಳುವುದು ನಾವು ಲೋಕಾಯುಕ್ತ ಬಲಪಡಿಸಿದ್ದೇವೆ, ಕಾಂಗ್ರೆಸ್ ಅದನ್ನು ಬದಿಗೆ ಸರಿಸಿತ್ತು ಎಂದು?
ಬಿ.ವಿ. ಶ್ರೀನಿವಾಸ್: ಹಾಗಾದರೆ ಕರ್ನಾಟಕದ ಬಿಜೆಪಿಯ ಯಾವ ನಾಯಕರೂ ಹೊರಗಡೆ ಇರಲು ಸಾಧ್ಯವೇ ಇಲ್ಲ. ಈಶ್ವರಪ್ಪ, ಸಿ.ಟಿ. ರವಿ ಎಲ್ಲರೂ ಜೈಲಿಗೆ ಹೋಗಬೇಕಾಗುತ್ತದೆ. ಅವರಿಗೇಕೆ ಐಟಿ, ಈ.ಡಿ. ರೇಡ್ ಇಲ್ಲ? ಕಾಂಗ್ರೆಸ್‌ನವರಿಗೆ ಮಾತ್ರವೆ? ಏಜೆನ್ಸಿಗಳನ್ನು ಕೈಯಲ್ಲಿಟ್ಟುಕೊಂಡು ರಾಜ್ಯದ ನಾಯಕರನ್ನು ಹೆದರಿಸುತ್ತಿದ್ದಾರೆ. ಚುನಾವಣೆ ಎದುರಿಸಲು ಅವರ ಬಳಿ ಏನಿದೆ? ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಧರ್ಮದ ಹೆಸರಿನಲ್ಲಿ ಚುನಾವಣೆ ಲಾಭ ಪಡೆಯುವುದು ಮಾತ್ರವೇ ಅವರ ಅಜೆಂಡ. ಹಿಂದುತ್ವದ ನಶೆಯನ್ನು ಇಡೀ ರಾಜ್ಯಕ್ಕೆ ಹಬ್ಬಿಸುತ್ತಿದ್ದಾರೆ. ಇವಾವುದೂ ಅಗತ್ಯವಿಲ್ಲ. ಜೈಕಾರ ಹಾಕುವುದರಿಂದ ಯಾರಿಗಾದರೂ ಊಟ ಸಿಗುತ್ತದೆಯೆ? ಯುವಕರು, ವಿದ್ಯಾರ್ಥಿಗಳು ಎಷ್ಟೊಂದು ಸಮಸ್ಯೆಯಲ್ಲಿದ್ದಾರೆ. ಈಗ ಹೊಸ ಶಿಕ್ಷಣ ನೀತಿ ತಂದಿದ್ದಾರೆ. ಒಂದು ರೀತಿಯ ಟೆಲಿವಿಷನ್ ಗಿರಾಕಿಗಳು ಇವರೆಲ್ಲ. 

  ಎನ್‌ಎಸ್‌ಯುಐ ಸಣ್ಣ ಸಮಸ್ಯೆ ಯನ್ನೂ ತೆಗೆದುಕೊಂಡು ಹೋರಾಟ ಮಾಡುತ್ತಿದ್ದ ದಿನಗಳಿದ್ದವು. ಅದರ ಹೋರಾಟ ಈಚಿನ ದಿನಗಳಲ್ಲಿ ಕುಗ್ಗಿದೆಯೆ?
ಬಿ.ವಿ. ಶ್ರೀನಿವಾಸ್: ಈಗಲೂ ಎನ್‌ಎಸ್‌ಯುಐ ಎನ್‌ಇಪಿ, ಪಠ್ಯಪುಸ್ತಕ ವಿಚಾರದಲ್ಲಿ ಉಗ್ರ ಹೋರಾಟ ಮಾಡಿತು. ಎನ್‌ಇಪಿಯಿಂದ ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆ ಬರಬಹುದು ಎಂಬುದನ್ನು ಹೇಳಲಾಯಿತು. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಪಠ್ಯಪುಸ್ತಕ ವಿಚಾರದಲ್ಲಿ ಕುವೆಂಪು, ನಾರಾಯಣಗುರು, ಬಸವಣ್ಣ, ಟಿಪ್ಪ್ಪು ಅವರಿಗೆ ಅವಮಾನವೆಸಗಿರುವ ವಿಚಾರಕ್ಕೆ ಶಿಕ್ಷಣಮಂತ್ರಿಯ ಮನೆಯೆದುರು ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದಾಗ ಆ ವಿದ್ಯಾರ್ಥಿ ಸಂಘಟನೆ ನಾಯಕರ ಮೇಲೆ ದೇಶದ್ರೋಹದವರೆಗೂ ಕೇಸ್ ಹಾಕಲಾಯಿತು. ಎಲ್ಲ ಮಂತ್ರಿಗಳು ಅವರ ವಿರುದ್ಧ ಹೇಳಿಕೆ ಕೊಟ್ಟರು. 22 ದಿನ ಜೈಲುವಾಸವನ್ನೂ ಹೋರಾಟಗಾರರು ಅನುಭವಿಸಬೇಕಾಯಿತು. ಅಷ್ಟೊಂದು ಭಯವೆ ಇವರಿಗೆ? ಅವರ ಯೋಚನೆ ದೇಶವಿಭಜನೆ. ರಾಜ್ಯ ವಿಭಜನೆ. ಮತಗಳನ್ನು ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸ.

  ಬಿಜೆಪಿ ಟಿಪ್ಪುಬಗ್ಗೆ ಮಾತಾಡುತ್ತದೆ. ನೀವು ಸಾವರ್ಕರ್ ಬಗ್ಗೆ ಮಾತಾಡುತ್ತೀರಿ? ನಿಮಗೂ ಅವರಿಗೂ ಏನು ವ್ಯತ್ಯಾಸ?
ಬಿ.ವಿ. ಶ್ರೀನಿವಾಸ್: ನಾವು ಸಾವರ್ಕರ್ ಬಗ್ಗೆ ಮಾತನಾಡುತ್ತಿಲ್ಲ. ಅವರು ಕ್ಷಮೆಯಾಚನೆ ಮಾಡಿದ್ದವರು. ಅವರ ವಿಚಾರ ನಮಗೆ ಅಗತ್ಯವಿಲ್ಲ. ನಾವು ರಾಜ್ಯದಲ್ಲಿನ ನಿರುದ್ಯೋಗ, ಬೆಲೆಯೇರಿಕೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಮೋದಿ, ಅಮಿತ್ ಶಾ ಕರ್ನಾಟಕದಲ್ಲಿ 10 ಪರ್ಸೆಂಟ್ ಇದೆ ಎನ್ನುತ್ತಿದ್ದರು. ಈಗ ಅವರು 40 ಪರ್ಸೆಂಟ್ ಕಮಿಷನ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಹಾಗಾದರೆ ಎಷ್ಟು ಪರ್ಸೆಂಟ್ ದಿಲ್ಲಿಗೆ ಹೋಗುತ್ತಿದೆ? ಇದೂ ಬೆಳಕಿಗೆ ಬರಬೇಕಲ್ಲವೆ?

  ಯುವಕರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಚಾರವಾಗಿ?
ಬಿ.ವಿ. ಶ್ರೀನಿವಾಸ್: ಸಾಕಷ್ಟು ಯುವಕರು ಆಕಾಂಕ್ಷಿಗಳಿದ್ದಾರೆ. ಅವರಿಗೆ ನಿಜವಾಗಿಯೂ ಹಕ್ಕಿದೆ. 50 ವರ್ಷದ ಒಳಗಿನವರಿಗೆ ಶೇ. 50ರಷ್ಟು ಮೀಸಲಾತಿ ಎಲ್ಲ ಚುನಾವಣೆಗಳಲ್ಲಿಯೂ ಸಿಗಬೇಕು ಎಂದು ರಾಯ್ಪುರ ಅಧಿವೇಶನದಲ್ಲಿಯೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದಕ್ಕೆ ಗೆಲ್ಲುವ ಸಾಮರ್ಥ್ಯದ ಮಾನದಂಡ ಕೂಡ ಅಷ್ಟೇ ಮುಖ್ಯ.

  ನೀವೇನಾದರೂ ಸ್ಪರ್ಧಿಸುವ ಆಲೋಚನೆ ಮಾಡಿದ್ದೀರಾ?
ಬಿ.ವಿ. ಶ್ರೀನಿವಾಸ್: ಅಂತಹ ಯಾವುದೇ ಯೋಚನೆಗಳಿಲ್ಲ. ಪಕ್ಷ ಏನು ಹೇಳುತ್ತದೆಯೊ ಅದನ್ನು ಕೇಳುವುದು ಅಷ್ಟೆ. ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಹೋರಾಟ ಮಾಡಬೇಕು. ಪಕ್ಷ ಬಲಪಡಿಸುವುದಕ್ಕೆ ನಿಷ್ಠೆಯಿಂದ ಕೆಲಸ ಮಾಡಬೇಕಿದೆ. ಸಂವಿಧಾನವನ್ನು ಉಳಿಸಲು, ಈ ದೇಶ, ಕರ್ನಾಟಕ ರಾಜ್ಯ, ಇಲ್ಲಿನ ಯುವಕರು, ರೈತರು, ಮಹಿಳೆಯರನ್ನು ಉಳಿಸಲಿಕ್ಕೆ ಕೆಲಸ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಮಾಡುತ್ತೇವೆ.

  ರಾಜ್ಯದಲ್ಲಿ ಕೆಲ ಸಂದರ್ಭಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಅಳತೆ ಮೀರಿದ ನಡವಳಿಕೆ ಪಕ್ಷಕ್ಕೆ ಧಕ್ಕೆ ಉಂಟುಮಾಡುತ್ತದೆಯೆ?
ಬಿ.ವಿ. ಶ್ರೀನಿವಾಸ್: ಕೆಲವೊಮ್ಮೆ ತಪ್ಪು ಸಹಜ. ಒಂದೆರಡು ತಪ್ಪುಗಳಾದ ಮೇಲೆ ತಿದ್ದಿಕೊಂಡು ಈಗ ಸಂಘಟನೆಯನ್ನು ಬಲಪಡಿಸಲು ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

  ಧರ್ಮ ಮತ್ತು ಹಿಂದುತ್ವದ ಹಾದಿಯಲ್ಲಿರುವ ಕರ್ನಾಟಕದ ಯುವಜನತೆ ಈ ಬಾರಿ ಕಾಂಗ್ರೆಸನ್ನು ಬೆಂಬಲಿಸುತ್ತಾರೆ ಅನ್ನಿಸುತ್ತದೆಯೆ? ಯಾಕೆ ಬೆಂಬಲಿಸಬೇಕು?
ಬಿ.ವಿ. ಶ್ರೀನಿವಾಸ್: ಈ ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸ. ಕಾಂಗ್ರೆಸ್‌ನ ದೂರದೃಷ್ಟಿ ಅಂಥದ್ದು. ಯಾವ ಗೊಂದಲವೂ ಇಲ್ಲದೆ ಈ ಬಾರಿ ಯುವಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಯಾಕೆಂದರೆ, ಬಿಜೆಪಿಯ ಅವ್ಯವಹಾರಗಳು, ಹೇಳುವುದೊಂದು ಮಾಡುವುದೊಂದು ಎಂಬುದು ಗೊತ್ತಾಗಿದೆ.   

  ರಾಯ್ಪುರದಲ್ಲಿ ಖರ್ಗೆಯವರು 2024ರ ಚುನಾವಣೆಯಲ್ಲಿ ಸಮಾನಮನಸ್ಕ ಪಕ್ಷಗಳ ಜೊತೆ ಮೈತ್ರಿ ವಿಚಾರವಾಗಿಯೂ ಹೇಳಿದ್ದಾರೆ. ಕರ್ನಾಟಕದಲ್ಲಿ ಅದರ ಅಗತ್ಯ ಕಾಣಿಸುತ್ತದೆಯೆ ನಿಮಗೆ?
ಬಿ.ವಿ. ಶ್ರೀನಿವಾಸ್: ಕರ್ನಾಟಕದಲ್ಲಿ ಯಾವುದೇ ರೀತಿಯ ಮೈತ್ರಿ ಅಗತ್ಯವಿಲ್ಲ ಎನ್ನಿಸುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ಏನಿದ್ದರೂ ಪಕ್ಷದ ಹಿರಿಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ.

  ನೀವು ಘೋಷಿಸಿರುವ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪುತ್ತದೆಯೆ?
ಬಿ.ವಿ ಶ್ರೀನಿವಾಸ್: ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಸರಕಾರ ಮಾತ್ರ. ಎಲ್ಲರಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಾರೆ. ಯೋಜನೆಗಳ ಬಗ್ಗೆ ಗ್ಯಾರಂಟಿ ಕಾರ್ಡ್ ಮಾಡಲಾಗಿದೆ. ಅದನ್ನು ಮನೆಮನೆಗೆ ಹೋಗಿ ತಲುಪಿಸುವುದಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರೆಲ್ಲರಿಗೂ ಟಾರ್ಗೆಟ್ ಕೊಡಲಾಗಿದೆ. ಹೊರರಾಜ್ಯಗಳಲ್ಲಿ ಕೆಲಸ ಮಾಡಿ ಗೊತ್ತಿರುವ ಯುವ ನಾಯಕರಿಗೂ ಇಲ್ಲಿನ ಜವಾಬ್ದಾರಿಗಳನ್ನು ವಹಿಸಲಾಗಿದೆ. ಹಳ್ಳಿಯ ಕೊನೆಯ ಮನೆಯ ವ್ಯಕ್ತಿಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ತಲುಪಿಸುವ ಕೆಲಸ, ಸರಕಾರ ಬಂದಮೇಲೆ ಅದನ್ನು ಜಾರಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ.

Similar News