ಅವೈಜ್ಞಾನಿಕ ಕಾಮಗಾರಿಗಳಿಂದ ಆರೋಗ್ಯ ಸಮಸ್ಯೆ
ಮಾನ್ಯರೇ,
ಬೆಂಗಳೂರು ನಗರದ ನಾಗರಿಕರು ಸೇರಿದಂತೆ ಇಡೀ ರಾಜ್ಯದ ಲಕ್ಷಾಂತರ ನಾಗರಿಕರಲ್ಲಿ ಶ್ವಾಸಕೋಶದ ಸಂಬಂಧಿತ ಕಾಯಿಲೆಗಳು ಮತ್ತು ಕೆಮ್ಮು ಕಳೆದ 3-4 ತಿಂಗಳ ಅವಧಿಯಲ್ಲಿ ಅತಿ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಂತೂ ಜನ ಉಸಿರಾಟದ ಸಮಸ್ಯೆಯಿಂದ ಮತ್ತು ಕೆಮ್ಮಿನ ಕಾರಣಕ್ಕಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದಕ್ಕೆ ಕಾರಣ ಬಿಬಿಎಂಪಿ ಮತ್ತು ರಾಜ್ಯ ಸರಕಾರ ಬೆಂಗಳೂರು ನಗರ ಮತ್ತು ಇತರ ಅನೇಕ ಕಡೆಗಳಲ್ಲಿ ನಡೆಸುತ್ತಿರುವ ಅವೈಜ್ಞಾನಿಕವಾದ ಕಾಮಗಾರಿಗಳಿಂದ ಆಗುತ್ತಿರುವ ತೊಂದರೆ. ಎಲ್ಲಾ ಕಡೆಯಲ್ಲೂ ಪಾದಚಾರಿ ಮಾರ್ಗಗಳನ್ನು ಅಗೆಯಲಾಗುತ್ತಿದೆ. ಚರಂಡಿ ನೀರಿನ ಮಾರ್ಗಗಳನ್ನು ರಿಪೇರಿಯ ನೆಪದಲ್ಲಿ ಕಿತ್ತು ಹಾಕಿದ್ದಾರೆ. ಜೊತೆಗೆ ಕೆಲವು ಕಂಪೆನಿಗಳ ಕೇಬಲ್‌ಗಳ ಅಳವಡಿಕೆಗಾಗಿ ಭೂಮಿಯನ್ನು ಅಗೆಯಲಾಗುತ್ತಿದೆ. ಈ ಕಾಮಗಾರಿಗಳಿಗೆ ಬಳಸುತ್ತಿರುವ ಜಲ್ಲಿಪುಡಿಯ ಧೂಳು ಸಾವಿರಾರು ನಾಗರಿಕರ ಶ್ವಾಸಕೋಶಕ್ಕೆ ಅಪಾಯವನ್ನುಂಟು ಮಾಡಿದೆ.
ಮಳೆಗಾಲದ ಸಮಯದಲ್ಲಿ ಮಳೆ ಬಂದ ಕಾರಣದಿಂದ ಧೂಳು ಏಳುತ್ತಿರಲಿಲ್ಲ. ಈಗ ಮಳೆಯಿಲ್ಲದ ಕಾರಣದಿಂದ ಧೂಳಿನ ಸಮಸ್ಯೆಯಿಂದ ನಾಗರಿಕರು ತತ್ತರಿಸಿ ಹೋಗಿದ್ದಾರೆ, ವಾತಾವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಧೂಳಿನ ಸಮಸ್ಯೆಯಿಂದಾಗಿ ನಾಗರಿಕರು ಸಂಚರಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಿದ್ದರೆ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನುದಾನವನ್ನು ಬಳಸಿಕೊಳ್ಳಬೇಕು ಎನ್ನುವ ಕಾತುರದಲ್ಲಿ ಅವೈಜ್ಞಾನಿಕವಾದ, ಗುಣಮಟ್ಟವಿಲ್ಲದ, ದೂರದೃಷ್ಟಿತ್ವವಿಲ್ಲದ, ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಕಾಣದ ಕೈಗಳು ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇವರ ದುರಾಸೆ, ಪ್ರಚಾರದ ಹುಚ್ಚಿನಿಂದಾಗಿ ನಾಗರಿಕರು ಆಸ್ಪತ್ರೆಗಳಿಗೆ ಸೇರಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.