ಬದುಕೇ ಜಾತಿ, ಜಾತಿಯೇ ಬದುಕು ಎಂಬ ಕಟು ವಾಸ್ತವ
‘‘ಈ ದೇಶದ ಜನ ಕೇಳುತ್ತಾರೆ, ಅಸ್ಪೃಶ್ಯನಾಗಿ ಬಾಳುವುದೆಂದರೆ ಹೇಗೆಂದು. ಇಲ್ಲಿ ಕಪ್ಪುವರ್ಣದವರು ದಿನನಿತ್ಯ ಅನುಭವಿಸುವ ವರ್ಣಭೇದ ನೀತಿಯಂತೆಯೇ ಜಾತಿಭೇದ ಎಂದು ನಾನು ವಿವರಿಸುತ್ತೇನೆ. ಆದರೆ ಜಾತಿ ಚರ್ಮದ ಬಣ್ಣದಿಂದ ತಿಳಿಯುವುದಿಲ್ಲವಲ್ಲ ಎಂಬ ಮರು ಪ್ರಶ್ನೆ ಎದುರಾಗುತ್ತದೆ.
ಭಾರತದ ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುತ್ತದೆ. ಎಲ್ಲಾ ಜಾತಿಗಳಿಗೂ ಅದರದೇ ಆದ ಪಾತ್ರ ಮತ್ತು ಕರ್ತವ್ಯಗಳಿವೆ. ಎಲ್ಲಾ ಜಾತಿಗಳಿಗೂ ವಾಸಿಸಬೇಕಾದ ಸ್ಥಳ ಗೊತ್ತುಪಡಿಸಲಾಗಿರುತ್ತದೆ. ಅಸ್ಪೃಶ್ಯರಿಗೆ ಆನುವಂಶಿಕವಾಗಿ ಬರುವ ವಿಶೇಷ ಜವಾಬ್ದಾರಿ ಬೇರೆಯವರ ಜಮೀನುಗಳಲ್ಲಿ ಕೂಲಿಯಾಳುಗಳಾಗಿ ದುಡಿಯುವುದು ಅಥವಾ ಹಿಂದೂ ಸಮಾಜದ ಬೇರೆ ಜಾತಿಯವರು ಅಸಹ್ಯವೆಂದು, ಹೊಲಸೆಂದು ಪರಿಗಣಿಸುವ ಕೆಲಸಗಳನ್ನು ಮಾಡುವುದು. ಇಂತಹ ಕೆಲಸ ಮಾಡುವ ಅಸ್ಪೃಶ್ಯರಿಗೆ ಹಳ್ಳಿಗಳಲ್ಲಿ ಬದುಕುವ ಅನುಮತಿಯೇ ಇಲ್ಲ! ಅವರು ಹಳ್ಳಿಯ ಗಡಿಯಾಚೆ ಬಾಳಬೇಕು. ದೇವಾಲಯಗಳಿಗೆ ಅವರಿಗೆ ಪ್ರವೇಶವಿಲ್ಲ. ಬೇರೆ ಜಾತಿಯವರು ಬಳಸುವ ಕೆರೆ, ಬಾವಿ, ನಲ್ಲಿಗಳಿಂದ ನೀರು ತರುವ ಅವಕಾಶಗಳಿಲ್ಲ. ಮೇಲ್ಜಾತಿಯವರ ಜೊತೆಗೆ ಕುಳಿತು ಉಣ್ಣುವ ಹಾಗಿಲ್ಲ. ಅವರು ಬಳಸಿದ ಪಾತ್ರೆ ಪಡಗಗಳನ್ನು ಬಳಸುವಂತಿಲ್ಲ. ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಇಂತಹ ಸಾವಿರಾರು ನಿರ್ಬಂಧ, ಅವಮಾನಗಳಿವೆ. ಪ್ರತೀ ದಿನ ಭಾರತದ ಸುದ್ದಿ ಪತ್ರಿಕೆಯ ಪುಟಗಳನ್ನೊಮ್ಮೆ ತಿರುವಿಹಾಕಿದರೆ ಸೈಕಲ್ ಏರಿದ್ದಕ್ಕೆ, ಚಪ್ಪಲಿ ತೊಟ್ಟಿದ್ದಕ್ಕೆ ಕೊಲೆಯಾದ ಅಥವಾ ತೀವ್ರ ಥಳಿತಕ್ಕೆ ಒಳಗಾದ ಅಸ್ಪೃಶ್ಯರ ಕುರಿತು ಓದುತ್ತೀರಿ.
ಯಾರೂ ಪರಿಚಯವಿಲ್ಲದ ಊರುಗಳಿಗೆ ಹೋದಾಗಲೂ ಜಾತಿ ಯಾವುದು ಎಂದು ನೇರವಾಗಿ ಕೇಳುತ್ತಾರೆ. ಈ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ನೀವು ನನ್ನಂತೆ ವಿದ್ಯಾವಂತಳಾದರೆ, ನೋಡಲಿಕ್ಕೆ ಅಸ್ಪೃಶ್ಯಳಂತೆ ಕಾಣದಿದ್ದರೆ ನಿಮಗೊಂದು ಆಯ್ಕೆಯಿದೆ. ಇರುವ ಸತ್ಯ ಹೇಳಿ ಬಹಿಷ್ಕಾರಕ್ಕೆ, ಅಪಹಾಸ್ಯಕ್ಕೆ, ಕಿರುಕುಳಕ್ಕೆ ಒಳಗಾಗಿ (ದೇಶದ ವಿಶ್ವವಿದ್ಯಾನಿಲಯಗಳಲ್ಲಿ ನಿಯಮಿತವಾಗಿ ಘಟಿಸುವ) ಆತ್ಮಹತ್ಯೆಗೆ ತಳ್ಳಲ್ಪಡುವುದು. ಅಥವಾ ಸುಳ್ಳನ್ನೂ ಹೇಳಬಹುದು. ಆಗ ನಿಮ್ಮನ್ನು ನಂಬದೆ ಅನುಮಾನದಿಂದಲೇ ನೋಡುತ್ತಾ, ನಿಮ್ಮ ಜಾತಿಯನ್ನು ಬೇರೆ ಮಾರ್ಗಗಳಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ‘‘ನಿನ್ನ ತಮ್ಮ ಮದುವೆಯಲ್ಲಿ ಕುದುರೆ ಸವಾರಿ ಮಾಡಿದ್ನ? ನಿನ್ನ ಹೆಂಡತಿ ಕೆಂಪು ಸೀರೆ ಉಟ್ಟಿದ್ದಳೋ ಅಥವಾ ಬಿಳಿ ಸೀರೆ ಉಟ್ಟಿದ್ದಳೋ? ಅವಳು ಯಾವ ಶೈಲಿಯಲ್ಲಿ ಸೀರೆ ಉಡುತ್ತಾಳೆ? ನೀವು ದನದ ಮಾಂಸ ತಿನ್ನುತ್ತೀರಾ? ನಿಮ್ಮ ಮನೆ ದೇವರು ಯಾವುದು?’’ ಇತ್ಯಾದಿ. ಹೇಗೋ ಮಾಡಿ ಸುಳ್ಳನ್ನು ಹೇಳಿ ನಂಬಿಸಿಯೇಬಿಟ್ಟಿರಿ ಎಂದುಕೊಳ್ಳಿ. ನಿಮ್ಮ ಕತೆಗಳನ್ನು ಎಂದೂ ಹೇಳಿಕೊಳ್ಳಲು ಆಗುವುದಿಲ್ಲ. ಕತೆಗಳಿಂದ ಜಾತಿ ತಿಳಿದುಬಿಡುತ್ತದೆ. ಏಕೆಂದರೆ ನಿಮ್ಮ ಬದುಕೇ ಜಾತಿ, ಜಾತಿಯೇ ಬದುಕು. ಪಂಜಾಬ್, ದಿಲ್ಲಿ, ಮುಂಬೈ, ಬೆಂಗಳೂರು, ಮದ್ರಾಸ್, ವಾರಂಗಲ್, ಕಾನ್ಪುರ್, ಕೋಲ್ಕತಾ ಇಲ್ಲೆಲ್ಲೂ ಈ ವಾಸ್ತವ ಬದಲಾಗಿಲ್ಲ.
ನನ್ನ ಇಪ್ಪತ್ತಾರನೇ ವಯಸ್ಸಿಗೆ ನಾನು ಅಮೆರಿಕಕ್ಕೆ ಬಂದೆ. ಇಲ್ಲಿ ಜನರಿಗೆ ಮೈಬಣ್ಣದ ಬಗ್ಗೆ ಇರುವ ಅತಿ ಹೆಚ್ಚು ಆಸಕ್ತಿ, ಹುಟ್ಟಿದ ಜಾತಿಯ ಬಗ್ಗೆಯಿಲ್ಲ. ಇಲ್ಲಿನ ಕೆಲವರು ಭಾರತೀಯರನ್ನು ಇಷ್ಟಪಡುತ್ತಾರೆ, ಇನ್ನು ಕೆಲವರು ದ್ವೇಷಿಸುತ್ತಾರೆ. ಆದರೆ ಅವರ ಭಾವನೆಗಳು ಜಾತಿಯಿಂದ ಬಾಧಿತವಾಗಿಲ್ಲ. ಒಮ್ಮೆ ಅಟ್ಲಾಂಟಾದ ಬಾರ್ ಒಂದರಲ್ಲಿ ನಾನು ಅಸ್ಪೃಶ್ಯಳು ಎಂದು ಒಬ್ಬನ ಬಳಿ ಹೇಳಿಕೊಂಡೆ ಅದಕ್ಕೆ ಅವನು ತಿರಸ್ಕಾರದಿಂದ ಕಾಣಲಿಲ್ಲ. ಇಲ್ಲಿಗೆ ಬಂದು ಕೆಲ ಗೆಳೆಯರೊಡನೆ ಮಾತನಾಡಿದ ಮೇಲೆಯೇ ನನಗೆ ಅರಿವಾಗಿದ್ದು ನನ್ನ ಕತೆಗಳು, ನನ್ನವರ ಕತೆಗಳು ಅಪಮಾನದ, ಮುಜುಗರದ ಕತೆಗಳಲ್ಲವೆಂದು.’’
ಹೀಗೆ ಸುಜಾತಾ ಗಿದ್ಲಾ ತಮ್ಮ ‘Ants among Elephants- An Untouchable Family and the Making of Modern India’ ಎಂಬ ಆತ್ಮಕಥನದಲ್ಲಿ ಬರೆದುಕೊಂಡದ್ದನ್ನು ಓದಿದ್ದು ಜ್ಞಾಪಕವಿದೆ. ವಿದೇಶ ಸುಜಾತಾ ಗಿದ್ಲಾ ಅಂಥವರಿಗೆ ನೀಡಿದ ಹೊಸಬಾಳು ಎಂಥದ್ದು! ಜಾತಿಗಳಿಲ್ಲದ, ಅಸ್ಪೃಶ್ಯತೆಯಿಲ್ಲದ ಆ ಲಿಬರೇಟಿಂಗ್ ಫೀಲಿಂಗ್ ಹೇಗಿದ್ದಿರಬಹುದು! ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ವಿದೇಶದಲ್ಲಿ ಅವರಿಗೆ ಅನುಭವವಾದ ಈ ವಿಮೋಚನೆ ಕುರಿತು ತಮ್ಮ ಬರಹಗಳಲ್ಲಿ ಹೇಳಿಕೊಳ್ಳುತ್ತಾರೆ. ಗಿದ್ಲಾ ಮತ್ತು ಅಂಬೇಡ್ಕರ್ ಅವರನ್ನು ಓದಿದಾಗ ಈ ಹಾಳು ಜಾತಿ ಪದ್ಧತಿಯ ಮಾರಕ ಉಪಟಳ ಭಾರತಕ್ಕೆ ಸೀಮಿತವಾಗಿದೆಯೆಂದು ಖುಷಿಪಟ್ಟಿದ್ದೆ. ಆದರೆ ತಪ್ಪು. ಜಾತಿ ಎಂಬ ಕ್ಯಾನ್ಸರ್ ಇಂದು ವಿಶ್ವದೆಲ್ಲೆಡೆ ಹರಡಿದೆ. ಭಾರತೀಯರು ಎಲ್ಲಿಗೆ ಹೋದರೂ ಅಲ್ಲಿಗೆ ತಮ್ಮ ಜಾತಿಯನ್ನೂ ತೆಗೆದುಕೊಂಡು ಹೋಗುತ್ತಾರೆ. ಅಲ್ಲೂ ತಮ್ಮತಮ್ಮ ಜಾತಿಯ ಸಂಘ, ಮಂಡಳಿಗಳನ್ನು ತೆರೆಯುತ್ತಾರೆ ಎಂಬುದನ್ನು ಬಹುಬೇಗ ತಿಳಿದುಕೊಂಡೆ. ಹೌದು, ಭಾರತೀಯರಿಗೆ ಸುಜಾತಾ ಗಿದ್ಲಾ ಹೇಳುವ ಹಾಗೆ, ಬದುಕೇ ಜಾತಿ, ಜಾತಿಯೇ ಬದುಕು.
ಸುಜಾತಾ ಗಿದ್ಲಾ ಹೇಳುವ ಇನ್ನೊಂದು ಘಟನೆಯ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸುವುದು ಸರಿಯೆನ್ನಿಸುತ್ತದೆ. ಸುಜಾತಾಗೆ ತಾನೊಬ್ಬ ಅಸ್ಪಶ್ಯಳು ಎನ್ನುವ ಅಸ್ಮಿತೆಗಿಂತ ತಾನೊಬ್ಬ ಕ್ರೈಸ್ತಳು ಎನ್ನುವುದು ಹೆಚ್ಚು ಮನನವಾಗಿರುತ್ತದೆ. ಅವರು ವಿದ್ಯಾಭ್ಯಾಸ ಮಾಡುವ ಆಂಧ್ರ ಪ್ರಾಂತದಲ್ಲಿ ಬ್ರಾಹ್ಮಣ ಹುಡುಗರು ಈ ಕ್ರೈಸ್ತ ಹುಡುಗಿಯರನ್ನು ಕಾಗೆ, ಹಂದಿ ಅಂತಲೋ, ತೋಟಿ ಅಂತಲೋ ಕರೆಯುವುದು ಸರ್ವೇಸಾಮಾನ್ಯ. ಸುಜಾತಾ ಓದಲು ಮದ್ರಾಸಿನ ಐಐಟಿ ಸೇರಿದಾಗ ಅಚ್ಚರಿ ಕಾದಿರುತ್ತದೆ. ಅಲ್ಲಿನ ಹಾಸ್ಟೆಲ್‌ನಲ್ಲಿರುವ ಕೇರಳ ಕ್ರಿಶ್ಚಿಯನ್ ಹುಡುಗಿಯರಿಗೆ ಎಲ್ಲಿಲ್ಲದ ಮೇಲರಿಮೆ. ಸುಜಾತಾ ಕ್ರೈಸ್ತ ಧರ್ಮಕ್ಕೆ ಸೇರಿದವರಾದರೂ ಹತ್ತಿರಕ್ಕೂ ಸೇರಿಸದ ಮನಸ್ಥಿತಿ. ಎಲ್ಲಕ್ಕಿಂತ ಹೆಚ್ಚಾಗಿ ಕೇರಳ ಕ್ರಿಶ್ಚಿಯನ್ ಹುಡುಗಿಯರು ಸಂಭಾವಿತರು ಕೂಡ ಆಗಿರುತ್ತಾರೆ. ಒಂದು ದಿನ ಸುಜಾತಾ ಜೆಸ್ಸಿ ಎಂಬ ಹುಡುಗಿಯನ್ನು ವಿಚಾರಿಸಿದಾಗ ಸತ್ಯ ತಿಳಿಯುತ್ತದೆ. ‘‘ನಾವು ಬ್ರಾಹ್ಮಣರು’’ ಎಂದು ಜೆಸ್ಸಿ ಹೇಳುತ್ತಾಳೆ. ‘‘ಹಾಗಾದರೆ ಕ್ರೈಸ್ತ ಮತಕ್ಕೆ ಯಾವಾಗ ಸೇರಿಕೊಂಡಿರಿ?’’ ಎಂದು ಮುಗ್ಧ ಸುಜಾತಾ ಕೇಳುತ್ತಾರೆ.
‘‘ನಾವು ಮೊದಲು ಬ್ರಾಹ್ಮಣ ನಂಬೂದಿರಿಗಳಾಗಿದ್ದೆವು. ಜೇಷ್ಠ ಪುತ್ರನಿಗೆ ಮಾತ್ರ ಪೋಷಕರ ಆಸ್ತಿ ಮತ್ತು ಆತನಿಗೆ ಮಾತ್ರ ಮದುವೆಯ ಭಾಗ್ಯವೆಂಬ ಪದ್ಧತಿ ನಂಬೂದಿರಿಗಳಲ್ಲಿದೆ. ಇದರಿಂದ ಕಿರಿಯ ಪುತ್ರರಿಗೆ ನಯಾಪೈಸೆ ಸಿಗುತ್ತಿರಲಿಲ್ಲ ಮತ್ತು ಅವರು ಕೆಳ ಜಾತಿ ಹೆಣ್ಣುಮಕ್ಕಳ ಸಹವಾಸ ಮಾಡಬೇಕಿತ್ತು ಅಥವಾ ಬ್ರಹ್ಮಚಾರಿಯಾಗಿಯೇ ಉಳಿಯಬೇಕಿತ್ತು. ಈ ವಿಚಿತ್ರ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಕ್ರಿ.ಶ. ೫೦ರಲ್ಲಿ ಕೇರಳದಲ್ಲಿ ಪ್ರವಾಸ ಮಾಡುತ್ತಿದ್ದ ಸಂತ ಥಾಮಸ್ ಸಹಾಯ ಪಡೆದ ನಂಬೂದಿರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು’’ ಎಂದು ಜೆಸ್ಸಿ ತಿಳಿಸುತ್ತಾಳೆ. ಮತ ಬದಲಾಯಿತು ಆದರೆ ಜಾತಿಯ ಸವಲತ್ತುಗಳು, ಮೇಲರಿಮೆ ಹಾಗೆ ಉಳಿಯಿತು. ಬದಲಾಗುವ ಸನ್ನಿವೇಶಗಳಿಗೆ ಹೊಂದಾಣಿಕೆ ಮಾಡಿಕೊಂಡು ಜಾತಿ ಹಸನಾಗಿ ಬೆಳೆಯುವ ಬಗೆಯಿದು.
ಅಮೆರಿಕದಲ್ಲಿ ಜಾತಿಯ ಅಸ್ತಿತ್ವ ಹೇಗಿದೆ? ಸುಜಾತಾ ಅಸ್ಪೃಶ್ಯತೆಯ ಅವಮಾನಗಳಿಂದ ಹೊರಬಂದು ಆತ್ಮವಿಶ್ವಾಸದಿಂದ ತನ್ನ ಕತೆ ಹೇಳಿಕೊಳ್ಳುವ ಅಮೆರಿಕದಲ್ಲಿ ಜಾತಿ ಎಷ್ಟು ಆಳವಾಗಿ ಬೇರುಬಿಟ್ಟಿದೆ? ಇದೇ ಫೆಬ್ರವರಿ ೨೧ರಂದು ಅಮೆರಿಕದ ಸಿಯಾಟಲ್ ನಗರ ಕೌನ್ಸಿಲ್ ಜಾತಿ ತಾರತಮ್ಯವನ್ನು ನಿಷೇಧಿಸಿತು. ವರ್ಣ, ಧರ್ಮ, ಲಿಂಗ ತಾರತಮ್ಯದ ಜೊತೆಗೆ ಜಾತಿ ತಾರತಮ್ಯ ಕಾನೂನು ಬಾಹಿರವಾಯಿತು. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್, ಬ್ರೌನ್, ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯಗಳು ಜಾತಿ ತಾರತಮ್ಯ ತಡೆಗಟ್ಟಲು ಕಠಿಣ ನೀತಿಗಳನ್ನು ಜಾರಿಗೆ ತಂದಿವೆ. ಈಕ್ವಾಲಿಟಿ ಲ್ಯಾಬ್ಸ್ ಮತ್ತಿತರ ಸ್ಥಳೀಯ ಸಂಘಗಳು ಈ ಆದೇಶ ಜಾರಿಗೆ ತರಲು ಸಿಯಾಟಲ್‌ನಲ್ಲಿ ಶ್ರಮಿಸಿದರು.
ಈಕ್ವಾಲಿಟಿ ಲ್ಯಾಬ್ ೨೦೧೬ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿ ನೆಲೆಸಿದ್ದ ನಾಲ್ಕು ದಲಿತರಲ್ಲಿ ಒಬ್ಬರು ಮೌಖಿಕ ಅಥವಾ ದೈಹಿಕ ದಾಳಿಗೆ ಒಳಗಾಗಿದ್ದರು. ಮೂವರಲ್ಲಿ ಇಬ್ಬರಿಗೆ ಕೆಲಸ ಮಾಡುವಲ್ಲಿ ಜಾತಿ ಆಧಾರಿತ ನಿಂದನೆ, ತಾರತಮ್ಯ ಸಹಿಸಬೇಕಾಗಿತ್ತು. ಕೆಲಸ ಮಾಡುವ ಜಾಗಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಸಮುದಾಯಗಳ ಒಡನಾಟಗಳಲ್ಲಿ ಜಾತಿ ತಾರತಮ್ಯ ಎದುರಿಸಿ ಅದರ ವಿರುದ್ಧ ಸಿಡಿದೆದ್ದವರ ಮಾಹಿತಿ ಕಲೆ ಹಾಕಿತ್ತು ಈಕ್ವಾಲಿಟಿ ಲ್ಯಾಬ್.
ಮೈಕ್ರೋಸಾಫ್ಟ್, ಅಮೆಝಾನ್, ಬೋಯಿಂಗ್‌ನಂತಹ ಕಂಪೆನಿಗಳ ತವರೂರಾಗಿರುವ ಸಿಯಾಟಲ್ ನಗರದಲ್ಲೂ ಜಾತಿ ಇಷ್ಟು ಸೊಂಪಾಗಿ ಬೆಳೆಯುತ್ತದೆಂದರೆ ಮನುಸ್ಮತಿಯಲ್ಲಿ ಜನಿಸಿದ ಜಾತಿ ಪದ್ಧತಿಗೆ ಇರುವ ಪ್ರಭಾವ ಎಂಥದ್ದು ಎಂಬುದನ್ನು ನಾವು ಮನಗಾಣಬೇಕು. ಅಮೆರಿಕದ ಸಿಯಾಟಲ್‌ನಂತಹ ನಗರದಲ್ಲೂ ದಲಿತರು ಅವಮಾನ, ತಾರತಮ್ಯ ಎದುರಿಸಬೇಕಾಗುತ್ತದೆ ಎಂದರೆ, ಬೇರೆ ಧರ್ಮದ ಒಳಗೂ ನುಸುಳಿ ಅದು ಜೀವಿಸುವುದಾದರೆ ಜಾತಿ ಎಂಬ ಅಕ್ಟೋಪಸ್ ಬಾಹುಗಳ ಬಲಿಷ್ಠತೆಯನ್ನು ಅಂದಾಜಿಸುವುದು ಕಷ್ಟ.
ಮತ್ತೆ ಭಾರತಕ್ಕೆ ಬರೋಣ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ ೨೦೧೪-೨೦೨೧ರವರೆಗೆ ಭಾರತದ ಐಐಟಿ, ಐಐಎಂ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ೧೨೨ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ೬೮ ಮಂದಿ ಮೀಸಲು ವರ್ಗಕ್ಕೆ ಸೇರಿದವರು. ಇವರಲ್ಲಿ ೨೪ ದಲಿತರು, ೪೧ ಹಿಂದುಳಿದ ವರ್ಗದ ಮತ್ತು ಮೂವರು ಪರಿಶಿಷ್ಟ ಪಂಗಡದವರಿದ್ದಾರೆ.
AIIMSನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ/ಪಂಗಡದವರು ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಫೇಲ್ ಮಾಡುವ ಪದ್ಧತಿಯಿದೆ ಎಂದು ಕಿರೀಟ್ ಪ್ರೇಮ್ ಭಾಯ್ ಸೋಲಂಕಿ ಸಮಿತಿ ವರದಿ ಸಲ್ಲಿಸಿದೆ. ಇದನ್ನು ಮೀರಿ ಎಲೈಟ್ ಸಂಸ್ಥೆಗಳಲ್ಲಿ ಬೋಧಿಸುವ ಶಿಕ್ಷಕರು ಕೂಡ ಸತತ ಜಾತಿ ಆಧಾರಿತ ಕಿರುಕುಳ, ನಿಂದನೆ ಹಾಗೂ ಕಡೆಗಣನೆಗೆ ಒಳಗಾಗುವುದು ರಹಸ್ಯವಾಗಿ ಉಳಿದಿಲ್ಲ. ಇನ್ನು ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿಯಿರುವ ಪರಿಶಿಷ್ಟ ಜಾತಿ/ಪಂಗಡ ಮೀಸಲಿರುವ ಹುದ್ದೆಗಳ ಭರ್ತಿ ಕುರಿತು ಮಾತನಾಡವುದೇ ಬೇಡ.
ದೇಶದ ಎಲೈಟ್ ಶಿಕ್ಷಣ ಸಂಸ್ಥೆಗಳಲ್ಲಿ ರೋಹಿತ್ ವೇಮುಲ, ದರ್ಶನ್ ಸೋಲಂಕಿ, ಅನಿಕೇತ್ ಅಂಭೋರೆ, ಪಾಯಲ್ ತಡ್ವಿಯಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರಾಣ ಬಿಟ್ಟರು, ನಮ್ಮ ದೇಶದಲ್ಲಿ ಜಾತಿ ಎಂಬುದಿಲ್ಲ ಎಂದು ವಾದಿಸುತ್ತೇವೆ. ಜಾತಿ ಎಂಬ ಅಕ್ಟೋಪಸ್ ತನ್ನ ರೂಪ, ಬಣ್ಣ, ಆಕಾರ ಬದಲಾಯಿಸಿ ಎಲ್ಲೆಲ್ಲೂ ನುಸುಳಿದರೂ, ಜಾತಿ ಇಲ್ಲವೆಂದು ವಾದಿಸುತ್ತೇವೆ. ಯಾವುದೇ ಧರ್ಮ, ಜನಾಂಗ, ಜಾತಿ, ಲಿಂಗ, ಪ್ರಾದೇಶಿಕ ತಾರತಮ್ಯವಿಲ್ಲವೆಂಬುದು ಪುಸ್ತಕದಲ್ಲಿಯೇ ಕಳೆದುಹೋಗಿದೆ.