ಮ್ಯಾನ್ಮಾರ್: 3 ಬೌದ್ಧ ಸನ್ಯಾಸಿಗಳ ಸಹಿತ 22 ಮಂದಿಯ ಗುಂಡಿಕ್ಕಿ ಹತ್ಯೆ

Update: 2023-03-17 16:23 GMT

ಯಾಂಗಾನ್, ಮಾ.17: ಮ್ಯಾನ್ಮಾರ್ ನ ನ್ಯಾನ್ನೈಂಟ್ ಬೌದ್ಧ ಮಠದಲ್ಲಿ ಕಳೆದ ವಾರ ಮೂವರು ಬೌದ್ಧಸನ್ಯಾಸಿಗಳ ಸಹಿತ ಕನಿಷ್ಟ 22 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಇದು ಸೇನೆ ನಡೆಸಿದ ಮತ್ತೊಂದು ಸಾಮೂಹಿಕ ಹತ್ಯಾಕಾಂಡವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇದನ್ನು ನಿರಾಕರಿಸಿರುವ ಸೇನಾಡಳಿತದ ವಕ್ತಾರ ಝಾವೊ ಮಿನ್ಟುನ್ `ದಕ್ಷಿಣದ ಶಾನ್ ರಾಜ್ಯದ ಪಿನ್ಲಾಂಗ್ ಪ್ರಾಂತದ ನ್ಯಾನ್ನೈಂಟ್ ಗ್ರಾಮವನ್ನು ಪ್ರವೇಶಿಸಿದ  ಕೆಎನ್ಡಿಎಫ್ ಹಾಗೂ ಮತ್ತೊಂದು ಬಂಡುಗೋರ ಸಂಘಟನೆ ಮನಬಂದಂತೆ ನಡೆಸಿದ ಗುಂಡು ಹಾರಾಟದಲ್ಲಿ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸೇನೆ ಬಂಡುಗೋರ ಪಡೆಗಳನ್ನು ಅಲ್ಲಿಂದ ಓಡಿಸಿದೆ' ಎಂದು ಹೇಳಿದ್ದಾರೆ.

ಆದರೆ ತನ್ನ ಯೋಧರು ನ್ಯಾನ್ನೈಂಟ್ ಗ್ರಾಮ ಪ್ರವೇಶಿಸಿದಾಗ, ಅಲ್ಲಿದ್ದ ಬೌದ್ಧಮಠದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿವೆ. ಇದು ಸೇನೆಯ ಕೃತ್ಯ ಎಂದು ಕೆಎನ್ಡಿಎಫ್ ವಕ್ತಾರರು ಹೇಳಿದ್ದಾರೆ.

ನ್ಯಾನ್ನೈಂಟ್ ಬೌದ್ಧಮಠದ ಸುತ್ತಮುತ್ತಲಿನ  ಪ್ರದೇಶದಲ್ಲಿ ಕಳೆದ 2 ವಾರಗಳಿಂದ ಭಾರೀ ಹೋರಾಟ ನಡೆಯುತ್ತಿದ್ದು ಸುಮಾರು 100 ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ನಿರಾಯುಧ ನಾಗರಿಕರನ್ನು ಗುರಿಯಾಗಿಸಿ  ಸೇನೆಯು ದಾಳಿ ನಡೆಸುತ್ತಿದೆ  ಎಂದು ಸೇನಾಡಳಿತವನ್ನು ವಿರೋಧಿಸುತ್ತಿರುವ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಜಂಟಿಯಾಗಿ ರಚಿಸಿರುವ  `ನ್ಯಾಷನಲ್ ಯುನಿಟಿ' ಛಾಯಾ ಸರಕಾರದ ಮಾನವ ಹಕ್ಕುಗಳ ಸಚಿವ ಆಂಗ್ ಮ್ಯೊ ಮಿನ್ರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

Similar News