ಕೋವಿಡ್ ಸೋಂಕಿನ ಮೂಲ ಚೀನಾದ ರಕೂನ್ ತಳಿಯ ನಾಯಿಗಳು: ಅಧ್ಯಯನ ವರದಿ‌

Update: 2023-03-17 16:11 GMT

ನ್ಯೂಯಾರ್ಕ್, ಮಾ.17: ಚೀನಾದ ವುಹಾನ್ ಪ್ರಾಂತದ ಸಮುದ್ರಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಅಂತರಾಷ್ಟ್ರೀಯ ತಜ್ಞರ ತಂಡ ವರದಿ ಮಾಡಿದೆ.

2020ರಲ್ಲಿ ವುಹಾನ್ನ ಹುವಾನನ್ ಸಮುದ್ರಖಾದ್ಯ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶಗಳಿಂದ ತೆಗೆದ ಸ್ರಾವ(ಗಂಟಲುದ್ರವ ಇತ್ಯಾದಿ)ದ ಅನುವಂಶಿಕ ಡೇಟಾವನ್ನು ಅಧ್ಯಯನ ತಂಡ ಸಂಗ್ರಹಿಸಿದೆ. ಮಾರುಕಟ್ಟೆಗೆ ಪ್ರಾಣಿಗಳನ್ನು ಸಾಗಿಸಲು ಬಳಸಲಾದ ಬೋನುಗಳು, ಗೂಡುಗಳು ಹಾಗೂ ಮಾರುಕಟ್ಟೆಯ ಗೋಡೆ, ನೆಲದಿಂದ ಈ ಸ್ರಾವಗಳನ್ನು ಸಂಶೋಧಕರು ಸಂಗ್ರಹಿಸಿದ್ದರು. 

ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಹೀಗೆ ಸಂಗ್ರಹಿಸಲಾದ ಒಂದು ಸ್ಯಾಂಪಲ್ ರಕೂನ್ ನಾಯಿಗಳದ್ದಾಗಿದ್ದು ಇದರಲ್ಲಿ ಸೋಂಕಿತ ವೈರಸ್ ಕಂಡುಬಂದಿದೆ. ಈ ಸಂಶೋಧನೆಯು, ಕೋವಿಡ್ ಸೋಂಕು ಕಾಡುಪ್ರಾಣಿಗಳಿಂದ ಮನುಷ್ಯನಿಗೆ ಹರಡಿರುವ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ಒದಗಿಸಿದೆ . ಮಾರುಕಟ್ಟೆಯಲ್ಲಿನ ಪ್ರಾಣಿಗಳು ಸೋಂಕು ಪೀಡಿತವಾಗಿರುವುದನ್ನು ಇದು ಬಲವಾಗಿ ಸೂಚಿಸಿದೆ ಎಂದು ಸಂಶೋಧಕರ ತಂಡದಲ್ಲಿದ್ದ ವಿಜ್ಞಾನಿ ಏಂಜೆಲಾ ರಸ್ಮುಸೆನ್ ಹೇಳಿದ್ದಾರೆ.

ಚೀನಾದ ಸಂಶೋಧಕರು ಜಿಐಎಸ್ಎಐಡಿ(ಗ್ಲೋಬಲ್ ಇನೀಷಿಯೇಟಿವ್ ಆನ್ ಶೇರಿಂಗ್ ಆವಿಯನ್ ಇನ್ಫ್ಲುಯೆಂಝಾ ಡೇಟ)ಯಲ್ಲಿ ಅಪ್ಲೋಡ್ ಮಾಡಿರುವ ಅನುವಂಶಿಕ ಡೇಟಾವನ್ನು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ನ ವಿಜ್ಞಾನಿಗಳು ಡೌನ್ಲೋಡ್ ಮಾಡಿಕೊಂಡು ಅಧ್ಯಯನ ನಡೆಸಿದ ವರದಿ ಇದಾಗಿದೆ. ಹುವಾನನ್ ಮಾರುಕಟ್ಟೆಯಲ್ಲಿ ಮಾರಾಟಮಾಡಲು ಪ್ರಾಣಿಗಳನ್ನು ತಂದ ವ್ಯಕ್ತಿಯು ಕೋವಿಡ್ ಸೋಂಕಿತನಾಗಿರುವ ಸಾಧ್ಯತೆಯಿದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದರು.  

Similar News