ಗುಬ್ಬಚ್ಚಿಗಳೇ, ಮತ್ತೆ ಬರುವಿರಾ?

Update: 2023-03-18 19:30 GMT

ಈಗ ನಮ್ಮೆಲ್ಲಾ ನೋವು ನಲಿವುಗಳನ್ನು ದೂರ ಮಾಡಲು ಗುಬ್ಬಚ್ಚಿಗಳೇ ಇಲ್ಲದಾಗಿವೆ. ನಾವೇ ಅವುಗಳನ್ನು ದೂರ ಓಡಿಸಿದ್ದೇವೆ. ಒಂದು ಕಾಲಕ್ಕೆ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಸಾಮಾನ್ಯವಾಗಿದ್ದ ಒಂದು ಸಣ್ಣ ಪಕ್ಷಿ ಇಂದು ನಮ್ಮ ನೆಲೆಯಿಂದ ದೂರವಾಗಿದೆ. ಕೆಂಪು ಪಟ್ಟಿಗೆ ಸೇರಿದ ಅನೇಕ ಜೀವಿಗಳ ಸಾಲಿಗೆ ಗುಬ್ಬಚ್ಚಿಯೂ ಸೇರಿರುವುದು ನೋವಿನ ಸಂಗತಿ.


ಪುರ್ರನೇ ಹಾರಿ ಬಂದು ತಂತಿ ಅಥವಾ ಹಗ್ಗದ ಮೇಲೆ ಕುಳಿತು, ಕತ್ತು ಹೊರಳಿಸಿ ಆಚೀಚೆ ನೋಡಿ, ಯಾರೂ ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು, ಮೆಲ್ಲನೆ ಗೂಡಿನತ್ತ ತೆರಳಿ, ಅಲ್ಲಿದ್ದ ಮರಿಗಳಿಗೆ ಕೊಕ್ಕಿನಲ್ಲಿದ್ದ ಹುಳವನ್ನು ನೀಡಿ, ಮರಿಗಳನ್ನು ಕಣ್ತುಂಬ ನೋಡಿಕೊಂಡು ಪುನಹ ಪುರ್ರನೆ ಹಾರಿ ಹೋಗಿ ಹುಳಗಳನ್ನು ಹೆಕ್ಕಿ ತಂದು ಮರಿಗಳಿಗೆ ಉಣಿಸುವುದನ್ನೇ ಇಡೀ ದಿನದ ಕಾಯವನ್ನಾಗಿಸಿಕೊಂಡಿದ್ದ ಗುಬ್ಬಚ್ಚಿಗಳ ನೋಟ ಇಂದು ಕಾಣದಾಗಿದೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳ ಇಂತಹ ದಿನಚರಿ ಈಗ ಕಾಣದಾಗಿದೆ. ಮನೆಯ ಹೆಂಚು/ಬೊಂಬಿನ ಮಾಡಿನಲ್ಲಿ ಗೂಡು ಕಟ್ಟಿ ಮರಿಗಳನ್ನು ಸಾಕಿ ಸಲಹುತ್ತಿದ್ದ ಗುಬ್ಬಚ್ಚಿಗಳು ನಮ್ಮ ಆವಾಸದಿಂದ ದೂರ ಸರಿದಿವೆ. ಅವುಗಳೇನು ದೂರ ಸರಿದಿಲ್ಲ. ನಾವೇ ದೂರ ಹೋಗುವಂತೆ ಮಾಡಿದ್ದೇವೆ. ನಮ್ಮ ಐಶಾರಾಮಿ ಜೀವನ ಗುಬ್ಬಚ್ಚಿಗಳ ಜೀವನಕ್ಕೆ ಮಾರಕವಾಯಿತು. ಇದನ್ನರಿತ ಗುಬ್ಬಚ್ಚಿಗಳು ಅನಿವಾರ್ಯವಾಗಿ ನಮ್ಮಿಂದ ದೂರವಾದವು.

ನಾವು ಚಿಕ್ಕವರಿದ್ದಾಗ ಗುಬ್ಬಚ್ಚಿಗಳು ಗೂಡು ಕಟ್ಟಿ ಸಂಸಾರ ಮಾಡಲು ವಿಪುಲ ಅವಕಾಶಗಳಿದ್ದವು. ಆಗ ಮನೆಗಳು ಈಗಿನಂತೆ ಸಿಮೆಂಟ್ ಕಾಡು ಆಗಿರಲಿಲ್ಲ. ಬಹುತೇಕವಾಗಿ ನೈಸರ್ಗಿಕ ವಸ್ತುಗಳೇ ಮನೆಯ ಮೂಲಾಧಾರವಾಗಿರುತ್ತಿದ್ದವು. ಕಂಬ, ಮಾಡು, ಹೊದಿಕೆ, ಕಿಟಕಿ, ಬಾಗಿಲು, ಗೋಡೆ ಎಲ್ಲವೂ ನೈಸರ್ಗಿಕ ವಸ್ತುಗಳೇ ಆಗಿರುತ್ತಿದ್ದವು. ಗುಬ್ಬಚ್ಚಿಗಳು ಗೂಡು ಕಟ್ಟಿ ತನ್ನದೇ ಆದ ಜೀವನ ನಡೆಸಲು ಸಾಕಷ್ಟು ಅವಕಾಶಗಳಿರುತ್ತಿದ್ದವು. ಅಲ್ಲದೆ ಅಂದು ಗುಬ್ಬಚ್ಚಿಗಳಿಗೆ ಬೇಕಾದ ಆಹಾರ ಮನೆಯ ಅಂಗಳದಲ್ಲಿ ಸುಲಭವಾಗಿ ಸಿಗುತ್ತಿತ್ತು. ಆಗ ಪ್ರತೀ ಮನೆಯಲ್ಲೂ ಧಾನ್ಯಗಳನ್ನು ಹಸನು ಮಾಡುತ್ತಿದ್ದರು. ಅಳಿದುಳಿದ, ಹಾಳಾದ, ಹುಳಹಿಡಿದ ಕಾಳುಗಳು, ಧಾನ್ಯಗಳನ್ನು ಮನೆಯ ಮುಂದೆ ಚೆಲ್ಲುತ್ತಿದ್ದರು. ಕಾಳು ಕಡಿಗಳನ್ನು ಚೆಲ್ಲಿದೊಡನೆ ಅದೆಲ್ಲಿಂದಲೋ ಚಿಂವ್ ಚಿಂವ್ ಎನ್ನುತ್ತಾ ಪುರ್ರನೇ ಒಂದಾದ ನಂತರ ಒಂದು ಹಾರಿ ಬರುತ್ತಿದ್ದವು. ಕ್ಷಣಾರ್ಧದಲ್ಲಿ ಅಲ್ಲಿ ಗುಬ್ಬಿಚ್ಚಿಗಳ ಹಿಂಡು ನೆರೆಯುತ್ತಿತ್ತು. ಇಡೀ ದಿನ ಸೊಂಪಾದ ಆಹಾರ ಸಿಗುತ್ತಿತ್ತು. ಆ ಜಾಗ ಬಿಟ್ಟು ಕದಲದೇ ಅಲ್ಲೇ ಬೀಡು ಬಿಡುತ್ತಿದ್ದವು. ಜೊತೆಗೆ ಅಂದಿನ ಮಕ್ಕಳು ಗುಬ್ಬಚ್ಚಿಯ ಅಪ್ಪಟ ಪ್ರೇಮಿಗಳಾಗಿದ್ದರು. ಅವರು ತಮ್ಮ ಊಟದ ಮೊದಲ ತುತ್ತನ್ನು ಗುಬ್ಬಚ್ಚಿಗೆ ಅರ್ಪಿಸುತ್ತಿದ್ದರು. ಬಹುತೇಕ ಮಕ್ಕಳು ಮನೆಯ ಹೊರಗೆ ಜಗಲಿ ಅಥವಾ ಅಂಗಳದಲ್ಲಿ ಕೂತು ಊಟಮಾಡುತ್ತಿದ್ದರು. ತಾವು ಉಣ್ಣುವ ತಟ್ಟೆಯಲ್ಲಿನ ಕೆಲ ತುತ್ತುಗಳನ್ನು ಗುಬ್ಬಿಗಳಿಗೆ ನೀಡುತ್ತಿದ್ದರು. ಹಾಗಾಗಿ ಮಕ್ಕಳನ್ನು ಕಂಡೊಡನೆ ಗುಬ್ಬಿಗಳು ಚಿಂವ್, ಚಿಂವ್ ಎಂದು ಪುರ್ರನೇ ಹಾರಿ ಬರುತ್ತಿದ್ದವು.

ಅಲ್ಲದೆ ಅಂದು ದನಕರುಗಳನ್ನು ಮನೆಯ ಪಕ್ಕದಲ್ಲಿ ಅಥವಾ ಮನೆಯ ಮುಂದಿನ ಬಯಲು ಜಾಗದಲ್ಲಿ ಕಟ್ಟುತ್ತಿದ್ದರು. ದನಕರುಗಳು ಹಾಕಿದ ಸಗಣಿಯಲ್ಲಿದ್ದ ಕಾಳುಗಳನ್ನು, ಹುಳಗಳನ್ನು ಗುಬ್ಬಚ್ಚಿಗಳು ಹೆಕ್ಕಿ ತಿನ್ನುತ್ತಿದ್ದವು. ಆದರೆ ಈಗ ಮನೆಗಳೆಲ್ಲವೂ ಕಾಂಕ್ರಿಟ್ ಮನೆಗಳಾಗಿದ್ದು ಗುಬ್ಬಚ್ಚಿಗಳು ಗೂಡು ಕಟ್ಟಲು ಅವಕಾಶವೇ ಇಲ್ಲದಂತಾಗಿದೆ. ಜೊತೆಗೆ ಅವುಗಳಿಗೆ ಸಿಗುತ್ತಿದ್ದ ಆಹಾರಕ್ಕೆ ನಾವೇ ಕಲ್ಲು ಹಾಕಿದ್ದೇವೆ. ಇಂದು ಯಾವ ಧಾನ್ಯವನ್ನೂ ಹಸನು ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸ್ವಚ್ಛ ಮಾಡಿದ ಪ್ಯಾಕೆಟ್ ಆಹಾರ ಪದಾರ್ಥಗಳನ್ನು ತರುತ್ತಿದ್ದೇವೆ. ಅಂಗಡಿಯಿಂದ ತಂದು ನೇರವಾಗಿ ಬಾಣಲೆ/ಕುಕ್ಕರ್‌ಗೆ ಹಾಕುತ್ತೇವೆ. ಇದರಿಂದ ಗುಬ್ಬಚ್ಚಿಗಳಿಗೆ ಆಹಾರವೂ ಸಿಗುತ್ತಿಲ್ಲ. ಕನಿಷ್ಠ ಪಕ್ಷ ಕುಡಿಯಲು ನೀರೂ ಇಲ್ಲದಾಗಿದೆ. ಅಂದು ಮನೆಯ ಪಕ್ಕದಲ್ಲಿ ಅಥವಾ ಮನೆಯ ಮುಂದೆ ಕಾಲು ತೊಳೆಯಲೆಂದು ಮೀಸಲಿದ್ದ ಕಲ್ಲುದೋಣಿ ಇಂದು ಮಾಯವಾಗಿದೆ. ಮನೆಗೆ ಅಂಟಿಕೊಂಡಂತಿದ್ದ ಗಿಡಮರಗಳು ಇಂದು ಇಲ್ಲದಾಗಿವೆ. ಗಿಡಮರಗಳ ಜಾಗದಲ್ಲಿ ಮತ್ತೊಂದು ಮನೆ ಎದ್ದು ನಿಂತಿದೆ. ಕಲ್ಲುದೋಣಿ ಮನೆಯ ಬುನಾದಿ ಸೇರಿದೆ. ಇವುಗಳ ಜೊತೆಗೆ ಇಂದಿನ ಕೃಷಿ ಪದ್ಧತಿಯೂ ಗುಬ್ಬಚ್ಚಿಗಳು ನಮ್ಮಿಂದ ದೂರ ಸರಿಯಲು ಕಾರಣವಾಗಿರುವುದು ದುರಂತದ ಸಂಗತಿ. ಆಗಿನ ಕಾಲದಲ್ಲಿ ಹೊಲಗದ್ದೆಗಳಲ್ಲಿ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು.

ಇದರಿಂದ ಗುಬ್ಬಚ್ಚಿಗಳಿಗೆ ಯಥೇಚ್ಛವಾಗಿ ಆಹಾರ ದೊರೆಯುತ್ತಿತ್ತು. ಈಗ ಎಲ್ಲೆಡೆ ತೋಟಗಾರಿಕಾ ಬೆಳೆಗಳದ್ದೇ ಹಾವಳಿ. ತೋಟಗಾರಿಕಾ ಬೆಳೆಗಳಿಗೆ ಬಲೆಯ ಸಂರಕ್ಷಣೆ. ಬಲೆಗಳು ಪರೋಕ್ಷವಾಗಿ ಗುಬ್ಬಚ್ಚಿಗಳ ಜೀವಕ್ಕೆ ಸಂಚಕಾರ ತರುವ ಕೊಲೆಪಾತಕಿಗಳಾಗಿವೆ. ಇನ್ನು ನಮ್ಮ ಮನೆಯ ಒಳಾಂಗಣ ವಿನ್ಯಾಸವೂ ಬದಲಾಗಿರುವುದು ಅವುಗಳ ಆವಾಸಕ್ಕೆ ಮಾರಕವಾಗಿದೆ. ಅಂದು ಮನೆಯೊಳಗೆ ಫೋಟೋ ಫ್ರೇಮ್‌ಗಳ ಹಿಂದಿನ ಜಾಗದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಳ್ಳುತ್ತಿದ್ದವು. ಇಂದು ಫೋಟೊಗಳಿದ್ದರೂ ಅವು ಗೋಡೆಗೆ ಅಂಟಿಕೊಂಡಿವೆ. ಅವುಗಳ ಹಿಂದಿನ ಜಾಗ ಮಾಯವಾಗಿದೆ. ರಾತ್ರಿ ಬೆಳಕಿಗಾಗಿ ಬಳಸುವ ಪ್ರಕಾಶಮಾನ ಬೆಳಕು ಸಹ ಗುಬ್ಬಚ್ಚಿಗಳ ಸಂತತಿಗೆ ಮಾರಕವಾಗಿದೆ. ಇವೆಲ್ಲವುಗಳನ್ನು ಗಮನಿಸಿದರೆ ಗುಬ್ಬಚ್ಚಿಗಳು ಯಾಕೆ ಬೇಕು ಎನಿಸದಿರದು. ಗುಬ್ಬಚ್ಚಿಗಳು ನಮ್ಮ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದ ಪಕ್ಷಿಗಳಾಗಿವೆ. ಮನೆ ಪಕ್ಕದ ಗಿಡಮರಗಳಲ್ಲಿನ ಹುಳ, ಕ್ರಿಮಿಕೀಟಗಳನ್ನು ತಿಂದು ಗಿಡಕ್ಕೆ ಹಾಗೂ ಮನೆಗೆ ಕ್ರಿಮಿ/ಕೀಟನಾಶಕದಂತೆ ಸೇವೆ ಸಲ್ಲಿಸುತ್ತಿದ್ದವು. ಮನೆಯ ಸಮೀಪ ಹಾವು, ಚೇಳು ಮುಂತಾದ ವಿಷಕಾರಿಗಳು ಬಂದಾಗ ಚಿಂವ್ ಚಿಂವ್ ಎಂಬ ಸದ್ದನ್ನು ಹೊರಡಿಸುವ ಮೂಲಕ ಮನೆಯವರಿಗೆ ಎಚ್ಚರಿಕೆ ನೀಡುತ್ತಿದ್ದವು. ಅಂದಿನ ಬಹುತೇಕ ಜನರು ಮನೆಯ ಸಮೀಪ ಹಾರಾಡುವ, ಆಟವಾಡುವ, ಜಗಳವಾಡುವ ಗುಬ್ಬಚ್ಚಿಗಳನ್ನು ನೋಡುವ ಮೂಲಕ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವುಗಳಿಗಿಂತ ಮುಖ್ಯವಾಗಿ ಜೀವವೈವಿಧ್ಯತೆಯಲ್ಲಿ ಗುಬ್ಬಚ್ಚಿಗಳೂ ಸಹ ಮೊದಲ ಸಾಲಿನಲ್ಲಿರಬೇಕಾದ ಪಕ್ಷಿಗಳಾಗಿವೆ. ಆದರೆ ಈಗ ನಮ್ಮೆಲ್ಲಾ ನೋವು ನಲಿವುಗಳನ್ನು ದೂರ ಮಾಡಲು ಗುಬ್ಬಚ್ಚಿಗಳೇ ಇಲ್ಲದಾಗಿವೆ.

ನಾವೇ ಅವುಗಳನ್ನು ದೂರ ಓಡಿಸಿದ್ದೇವೆ. ಒಂದು ಕಾಲಕ್ಕೆ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಸಾಮಾನ್ಯವಾಗಿದ್ದ ಒಂದು ಸಣ್ಣ ಪಕ್ಷಿ ಇಂದು ನಮ್ಮ ನೆಲೆಯಿಂದ ದೂರವಾಗಿದೆ. ಕೆಂಪು ಪಟ್ಟಿಗೆ ಸೇರಿದ ಅನೇಕ ಜೀವಿಗಳ ಸಾಲಿಗೆ ಗುಬ್ಬಚ್ಚಿಯೂ ಸೇರಿರುವುದು ನೋವಿನ ಸಂಗತಿ. ಅತಿ ವೇಗವಾಗಿ ನಶಿಸುತ್ತಿರುವ ಸಂತತಿಗಳಲ್ಲಿ ಇದೂ ಒಂದಾಗಿದೆ. ಆದರೂ ಇನ್ನೂ ಪ್ರಪಂಚದ ಮೂರನೇ ಎರಡರಷ್ಟು ಭೂ ಮೇಲ್ಮೈಯಲ್ಲಿ ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ. ಇಂದು ನಾವು ಅಭಿವೃದ್ದಿಯ ಹೆಸರಿನಲ್ಲಿ ನಮ್ಮ ಸಹಜೀವಿಗಳ ಜೀವನಕ್ಕೆ ಕುತ್ತು ತರುತ್ತಿದ್ದೇವೆ. ಇದರ ಪರಿಣಾಮವನ್ನು ನಾವೀಗಾಗಲೇ ಎದುರಿಸುತ್ತಿದ್ದೇವೆ. ಆದರೂ ನಮಗಿನ್ನೂ ಬುದ್ಧಿ ಬರುತ್ತಿಲ್ಲ. ಕಾಂಕ್ರಿಟ್ ಕಟ್ಟಡದ ಜೊತೆಗೆ ಪ್ರಾಣಿ ಪಕ್ಷಿಗಳ ಜೀವನಕ್ಕೆ ಅನುಕೂಲವಾಗುವಂತಹ ಮನೆಯ ವಿನ್ಯಾಸವನ್ನು ಮಾಡಿಕೊಂಡರೆ ನಮ್ಮ ಜೊತೆಗೆ ಅವು ಬದುಕುತ್ತವೆ. ಮಾರುಕಟ್ಟೆಯಿಂದ ತಂದ ದವಸ ಧಾನ್ಯಗಳಲ್ಲಿ ಒಂದಿಷ್ಟನ್ನು ಅವುಗಳಿಗೆ ಮೀಸಲಿಡೋಣ. ಮನೆಯ ಪಕ್ಕ ಅಥವಾ ಮನೆಯ ಮುಂದೆ ಜಾಗ ಇಲ್ಲದಿದ್ದರೂ ಪರವಾಗಿಲ್ಲ. ಕೊನೆಪಕ್ಷ ಮನೆಯ ಮೇಲೆ ಹಳೆಯ ಬಕೆಟ್, ಟಬ್ ಅಥವಾ ಇನ್ನಿತರ ವಸ್ತುಗಳಲ್ಲಿ ಪಕ್ಷಿಗಳಿಗೆ ನೀರು ಇಡೋಣ. ಆ ಮೂಲಕ ಮುಂಬರುವ ಬೇಸಿಗೆಯಲ್ಲಿ ಒಂದಿಷ್ಟು ಚಿಕ್ಕ ಚಿಕ್ಕ ಪಕ್ಷಿಗಳಿಗೆ ಆಶ್ರಯ ನೀಡೋಣ. ಸಾಧ್ಯವಾದಷ್ಟೂ ಮನೆಯ ಹೊರಗೋಡೆಯಲ್ಲಿ ಗುಬ್ಬಚ್ಚಿಗಳಿಗಾಗಿ ಒಂದಿಷ್ಟು ಸಂದು ಗೊಂದುಗಳನ್ನು ನಿರ್ಮಿಸುವ ಮೂಲಕ ಗೂಡು ಕಟ್ಟಿಕೊಳ್ಳಲು ಅವಕಾಶ ಮಾಡೋಣ. ತೆರೆದ ಪ್ರದೇಶದಲ್ಲಿ ಕಾಳು ಕಡಿಗಳನ್ನು ಹರಡುವ ಮೂಲಕ ಅವುಗಳಿಗೆ ಆಹಾರದ ಖಾತ್ರಿ ನೀಡೋಣ. ಪ್ರತಿವರ್ಷ ಮಾರ್ಚ್ 20ರಂದು ಆಚರಿಸುವ ಗುಬ್ಬಚ್ಚಿಗಳ ದಿನವನ್ನು ವರ್ಷವಿಡೀ ಆಚರಿಸುವ ಮೂಲಕ ಅವುಗಳನ್ನು ಮತ್ತೆ ನಮ್ಮ ಸಹವಾಸಕ್ಕೆ ಸ್ವಾಗತಿಸೋಣವೇ?

Similar News