ಮಾ.25ರಂದು ರೈತ ಸಂಘದಿಂದ ಪ್ರತಿಭಟನೆ
ಮಂಗಳೂರು : ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ವೀರಪ್ಪ ಗೌಡ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡೆದ ಕೃಷಿ ಅಭಿವೃದ್ಧಿ ಸಾಲ ವಸೂಲಾತಿ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಇದನ್ನು ಸಾಲಕ್ಕಾಗಿ ರೈತ ಆತ್ಮ ಹತ್ಯೆ ಮಾಡಿರುವ ಪ್ರಕರಣವನ್ನುಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಮತ್ತು ರೈತರ ಇತರ ಸಮಸ್ಯೆಗಳನ್ನು ಪರಿಹಾರಕ್ಕೆ ಅಗ್ರಹಿಸಿ ಮಾ.25ರ ಬೆಳಗ್ಗೆ 11ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ನಗರದ ಲೇಡಿಹಿಲ್ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ ಹಾಗೂ ಜಲಸ್ಫೋಟದ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸರಕಾರ ಹಿಂದೇಟು ಹಾಕುತ್ತಿದೆ. ಕಳೆದ 5 ವರ್ಷದಿಂದ ಮನೆ ನಿರ್ಮಾಣಕ್ಕಾಗಿ ಅರ್ಜಿ ಹಾಕುತ್ತಿದ್ದೇವೆ, ಬಿಜೆಪಿ ಸರಕಾರ ಬಂದ ಮೇಲೆ ಅವೈಜ್ಞಾನಿಕ ತೆರಿಗೆ ನೀತಿ,ವಿದೇಶದಿಂದ ಅಡಿಕೆ ಅಮದು, ತೆಂಗಿನಕಾಯಿಯ ಬೆಲೆ ಏರಿಕೆ ಹಾಗೂ ಇತರ ಅಗತ್ಯ ವಸ್ತು ಗಳ ಬೆಲೆ ಗಗನಕ್ಕೆ ಏರಿದೆ ಇದಕ್ಕೆ ಸರಕಾರದ ನೀತಿ ಕಾರಣ ಎಂದು ಅವರು ಆರೋಪಿಸಿದರು.
ಬೆಳ್ತಂಗಡಿ ಭಾಗದ ಆದಿವಾಸಿಗಳ ಸಮಸ್ಯೆಯನ್ನು ನಿರ್ಲಕ್ಷೀಸಲಾಗಿದೆ. ಬಡವರಿಗೆ ಮತ್ತು ಅರ್ಥಿಕವಾಗಿ ಹಿಂದುಳಿದವರಿಗೆ ಮೂಲಭೂತ ಹಕ್ಕುಗಳಾದ ನೀರು, ವಿದ್ಯುತ್ ಹಾಗೂ ಮನೆ ಸೌಕರ್ಯಕ್ಕೆ ನೀಡಿದ ಅರ್ಜಿಯನ್ನು ವಿಲೇವಾರಿ ಮಾಡುತ್ತಿಲ್ಲ. ಅಡಿಕೆ ಎಲೆ ಹಳದಿ ರೋಗ, ಚುಕ್ಕಿರೋಗ ಸಂತ್ರಸ್ಥರನ್ನು ನಿರ್ಲಕ್ಷ ಮಾಡಿ, ಹವಾಮಾನ ಆಧಾರಿತ ಬೆಳೆ ವಿಮೆಯ ಹೆಸರಿನಲ್ಲಿ ರೈತರನ್ನು ವಂಚಿಸಿದೆ. ಜಿಲ್ಲಾಡಳಿತದ ವಿಫಲತೆಯಿಂದ ವಿಮಾ ಕಂಪನಿಗಳು ಸರಕಾರದ ಖಜಾನೆಯಿಂದ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುತ್ತಿದೆ. ಇದರಿಂದ ಬಡಜನತೆ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ರೈತ ಆತ್ಮಹತ್ಯೆಯ ಸಾಮಾಜಿಕ ಪಿಡುಗು ನಮ್ಮ ಶ್ರೀಮಂತ ದ.ಕ ಜಿಲ್ಲೆಯಲ್ಲಿ ಮರುಕಳಿಸುತ್ತಿದೆ. ಲಂಚ ಪಡೆದುಕೊಳ್ಳುವ ಕ್ಷೇತ್ರಕ್ಕೆ ಶಾಸಕರು ಅಧ್ಯಕ್ಷರಾಗಿದ್ದಾರೆ. ಬಡವರ ಅರ್ಜಿಯನ್ನು ವಿಲೇವಾರಿ ಮಾಡದೇ, ಲಂಚ ನೀಡಿದವರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ಸಹಾಕರಿ ಸಂಘಗಳಲ್ಲಿ ಭ್ರಷ್ಟಚಾರ ಹೆಚ್ಚಾಗುತ್ತಿದೆ. ರಾಜ್ಯ ಸರಕಾರವು ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ಮತವನ್ನು ಗಳಿಸಿ ಮೋಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರೈತ ಸಂಘವು ಸರಕಾರಕ್ಕೆ ಎಚ್ಚರಿಕೆ ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ, ಸಂಘದ ಸದಸ್ಯ ಸನ್ನಿ ಡಿಸೋಜಾ ಹಾಗೂ ಸಂಘದ ರಾಜ್ಯ ಸಂಚಾಲಕ ಆದಿತ್ಯ ಕೊಲಾಜೆ ಉಪಸ್ಥಿತರಿದ್ದರು.