ಬೆಲಾರಸ್ ನಲ್ಲಿ ಪರಮಾಣು ಶಸ್ತ್ರಾಸ್ತ್ರ ನೆಲೆ: ಪುಟಿನ್ ಘೋಷಣೆ

Update: 2023-03-26 16:55 GMT

ಮಾಸ್ಕೊ, ಮಾ.26: ರಶ್ಯವು ನೆರೆದೇಶ ಬೆಲಾರಸ್ ನಲ್ಲಿ ಪರಮಾಣು ಶಸ್ತ್ರಾಸ್ತ್ರ ನೆಲೆಯನ್ನು ಸ್ಥಾಪಿಸಲಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ.

ಇದರೊಂದಿಗೆ 1990ರ ಬಳಿಕ ಇದೇ ಪ್ರಥಮ ಬಾರಿಗೆ ದೇಶದ ಹೊರಗೆ ರಶ್ಯದ ಪರಮಾಣು ಶಸ್ತ್ರಾಸ್ತ್ರ ನೆಲೆಗೆ ಚಾಲನೆ ದೊರಕಲಿದೆ. ಉಕ್ರೇನ್ ಯುದ್ಧದ ಕಾರಣ ಪಶ್ಚಿಮದ ದೇಶದೊಂದಿಗಿನ ಉದ್ವಿಗ್ನತೆ ಹೆಚ್ಚಿರುವ ಹಾಗೂ ರಶ್ಯದಿಂದ ಪರಮಾಣು ಅಸ್ತ್ರ ಬಳಕೆಯ ಸಾಧ್ಯತೆಯ ಬಗ್ಗೆ ರಶ್ಯದ ಸೇನಾಧಿಕಾರಿಗಳು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಪುಟಿನ್ ಈ ಘೋಷಣೆ ಮಾಡಿರುವುದು ಗಮನಾರ್ಹವಾಗಿದೆ.

ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ದೇಶದಲ್ಲಿ ನೆಲೆಗೊಳಿಸುವ ಬಗ್ಗೆ ಬೆಲಾರಸ್ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಷೆಂಕೋ ಈ ಹಿಂದೆಯೇ ಪ್ರಸ್ತಾವಿಸಿದ್ದರು. ಇದರಲ್ಲಿ ಅಸಹಜವೇನೂ ಇಲ್ಲ. ಅಮೆರಿಕವು ಹಲವು ದಶಕಗಳಿಂದ ಇದನ್ನು ಮಾಡುತ್ತಿದೆ. ತನ್ನ ಮಿತ್ರದೇಶಗಳ ನೆಲದಲ್ಲಿ ತನ್ನ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಮೆರಿಕ ನಿಯೋಜಿಸಿದೆ. ನಮ್ಮ ಬದ್ಧತೆಗಳನ್ನು ಉಲ್ಲಂಘಿಸದೆ ಇದನ್ನೇ ನಾವೂ ಮಾಡುವ ಬಗ್ಗೆ ಸಮ್ಮತಿಸಿದ್ದೇವೆ.

ಪರಮಾಣು ಅಸ್ತ್ರಗಳ ಪ್ರಸಾರ ನಡೆಸುವುದಿಲ್ಲ ಎಂಬ ಅಂತರಾಷ್ಟ್ರೀಯ ಬದ್ಧತೆಯನ್ನು ಉಲ್ಲಂಘಿಸದೆ ಇದನ್ನು ಮಾಡಲಿದ್ದೇವೆ ಎಂದು  ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪುಟಿನ್ ಹೇಳಿದ್ದಾರೆ. ಯುದ್ಧತಂತ್ರದ ಪರಮಾಣು ಅಸ್ತ್ರಗಳನ್ನು ಯುದ್ಧಕ್ಷೇತ್ರದಲ್ಲಿ ನಿರ್ದಿಷ್ಟ ಲಾಭಗಳಿಗಾಗಿ ಬಳಸಲಾಗುತ್ತದೆ.

ಬೆಲಾರಸ್ ನಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರ ನೆಲೆಯ ನಿರ್ಮಾಣ ಕಾರ್ಯ  ಜುಲೈ 1ರ ಒಳಗೆ ಪೂರ್ಣಗೊಳ್ಳಲಿದೆ. ನಾವು ಬೆಲಾರಸ್ಗೆ ಪರಮಾಣು ಶಸ್ತ್ರಾಸ್ತ್ರದ ನಿಯಂತ್ರಣವನ್ನು ವರ್ಗಾಯಿಸುವುದಿಲ್ಲ. ಪರಮಾಣು ಶಸ್ತ್ರಗಳನ್ನು ಹೊತ್ತೊಯ್ಯುವ ಸಾಮಥ್ರ್ಯವಿರುವ 10 ಯುದ್ಧವಿಮಾನಗಳನ್ನು ಈಗಾಗಲೇ ಬೆಲಾರಸ್ನಲ್ಲಿ ನೆಲೆಗೊಳಿಸಲಾಗಿದೆ. ಅಲ್ಲದೆ ಪರಮಾಣು ಶಸ್ತ್ರಾಸ್ತ್ರಗಳ ಉಡಾವಣೆಗೆ ಅಗತ್ಯವಿರುವ ಇಸ್ಕಾಂಡರ್ ಕ್ಷಿಪಣಿ ವ್ಯವಸ್ಥೆಗಳನ್ನೂ ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.  ಆದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆಲಾರಸ್ನಲ್ಲಿ ಯಾವಾಗ ನೆಲೆಗೊಳಿಸಲಾಗುತ್ತದೆ ಎಂಬ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.

1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದುಬಿದ್ದಾಗ, ಹೊಸದಾಗಿ ಸ್ವಾತಂತ್ರ್ಯ ಪಡೆದ ರಶ್ಯ, ಉಕ್ರೇನ್, ಬೆಲಾರಸ್ ಮತ್ತು ಕಝಕಿಸ್ತಾನದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನೆಲೆಗೊಳಿಸಲಾಗಿತ್ತು. 1992ರಲ್ಲಿ ನಡೆದ ಒಪ್ಪಂದದಂತೆ ಪರಮಾಣು ಶಸ್ತ್ರಾಸ್ತ್ರಗಳನ್ನು ರಶ್ಯಕ್ಕೆ ವರ್ಗಾಯಿಸಲು ಉಳಿದ 3 ದೇಶಗಳು ಸಮ್ಮತಿಸಿದ್ದು ವರ್ಗಾವಣೆ ಪ್ರಕ್ರಿಯೆ 1996ರಲ್ಲಿ ಪೂರ್ಣಗೊಂಡಿತ್ತು.

ಅಪಾಯಕಾರಿ, ಬೇಜವಾಬ್ದಾರಿ ಹೇಳಿಕೆ: ನೇಟೊ

 ಬೆಲಾರಸ್ ನಲ್ಲಿ ರಶ್ಯ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರ ನೆಲೆ ಸ್ಥಾಪಿಸಲಿದೆ ಎಂಬ ರಶ್ಯ ಅಧ್ಯಕ್ಷರ ಘೋಷಣೆ ಅಪಾಯಕಾರಿ ಮತ್ತು ಬೇಜವಾಬ್ದಾರಿಯ ಹೇಳಿಕೆಯಾಗಿದೆ ಎಂದು ನೇಟೊ ಟೀಕಿಸಿದೆ.

ನೇಟೊ ಜಾಗರೂಕವಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿ ರಶ್ಯದ ನಡೆಯಲ್ಲಿ ಇದುವರೆಗೆ ಯಾವುದೇ ಬದಲಾವಣೆ ನಮ್ಮ ಗಮನಕ್ಕೆ ಬಂದಿಲ್ಲ. ಬದಲಾವಣೆಯಾದರೆ  ನಾವೂ ನಮ್ಮದೇ ರೀತಿಯಲ್ಲಿ  ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ನೇಟೊದ ವಕ್ತಾರರು ಹೇಳಿದ್ದಾರೆ.

ನೇಟೊ ದೇಶಗಳು ಪರಮಾಣು ಶಸ್ತ್ರಾಸ್ತ್ರ ಹಂಚಿಕೊಳ್ಳುತ್ತಿವೆ ಎಂಬ ರಶ್ಯದ ಉಲ್ಲೇಖದಲ್ಲಿ ಸತ್ಯಾಂಶವಿಲ್ಲ. ನೇಟೊ ಮಿತ್ರದೇಶಗಳು ತಮ್ಮ ಅಂತರಾಷ್ಟ್ರೀಯ ಭಾದ್ಯತೆಯನ್ನು ಸಂಪೂರ್ಣ ಗೌರವಿಸಿ ಮುಂದಿನ ಹೆಜ್ಜೆಯಿಡುತ್ತವೆ. ಆದರೆ ರಶ್ಯ ನಿರಂತರವಾಗಿ ತನ್ನ ಶಸ್ತ್ರಾಸ್ತ್ರ ನಿಯಂತ್ರಣ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

Similar News