ಮೀಸಲಾತಿ ಎಂಬ ಚುನಾವಣಾ ತಂತ್ರಗಾರಿಕೆ

Update: 2023-03-28 18:46 GMT

ಮಾನ್ಯರೇ,

ಮೀಸಲಾತಿ ಪರಿಕಲ್ಪನೆ ಹುಟ್ಟಿಕೊಂಡಿದ್ದು ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಸದಾಶಯದಿಂದ. ನಮ್ಮ ದೇಶದಲ್ಲಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ ಮುಸ್ಲಿಮರಿಗೆ ಇನ್ನೂ ಸಾಮಾಜಿಕ ನ್ಯಾಯ ದೊರೆತಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಸ್ಲಿಮರನ್ನು ತುಂಬಾ ಅಮಾನವೀಯವಾಗಿ ಕಾಣುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ದೇಶದ್ದೇ ಪ್ರಜೆಗಳಾದ ಅವರನ್ನು ಪರದೇಶಿಗರಂತೆ ನೋಡುವುದು ಬೇಸರದ ಸಂಗತಿ. ಕೆಲವೊಮ್ಮೆ ದೇಶದಲ್ಲಿ ನಡೆಯುವ ತಪ್ಪುಗಳಿಗೆಲ್ಲ ಮುಸ್ಲಿಮರೇ ಕಾರಣ ಎನ್ನುವಂತೆ ಮಾತನಾಡುವ ಜನರು ನಮ್ಮ ನಡುವೆ ಇದ್ದಾರೆ.

ದೇಶದಲ್ಲಿ ಎಲ್ಲರೂ ಸಮಾನರಾಗಿ ಬದುಕಲಿ, ಸಾಮಾಜಿಕ ನ್ಯಾಯ ದೊರೆ ಯಲಿ ಎಂದು ಶಾಹೂ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೀಸಲಾತಿ ನೀಡುತ್ತಿದ್ದರು. ಅದೇ ಕನಸು ಹೊತ್ತ ಬಾಬಾ ಸಾಹೇಬರುಮೀಸಲಾತಿಯನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದರು. ಮೀಸಲಾತಿ ಯಾವಾಗ ಆರಂಭವಾಯಿತೋ ಅಲ್ಲಿಂದಲೇ ಪರ ವಿರೋಧ ಗಳು ಶುರುವಾದವು. ಮೀಸಲಾತಿ ವಿರೋಧಿಸುವುದೇ ನನ್ನ ಜನ್ಮಸಿದ್ಧ ಹಕ್ಕು ಎಂದು ಪಣತೊಟ್ಟ ಬಹುತೇಕರು, ಪ್ರಸಕ್ತ ತಮಗೆ ಇಷ್ಟ ಬಂದಂತೆ ಹಂಚಿಕೊಳ್ಳುತ್ತಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಮುಸ್ಲಿಮರಿಗಾದ ಮೋಸವನ್ನು ಎಂದಿಗೂ ಸಹಿಸಲಾಗದು. ಇರುವ ಮೀಸಲಾತಿ ಉಪಯೋಗಿಸಿಕೊಂಡು, ಶಿಕ್ಷಣ ಮತ್ತು ಸರಕಾರಿ ಕೆಲಸಗಳನ್ನು ಗಿಟ್ಟಿಸಿಕೊಂಡು ಘನತೆಯಿಂದ ಬದುಕುತ್ತಿದ್ದವರನ್ನು ದಿವಾಳಿಯಾಗಿಸುವ ಹುನ್ನಾರದಿಂದ ಮುಸ್ಲಿಮರ ಸಾಮಾಜಿಕವಾಗಿ ಹಿಂದುಳಿದ ವರ್ಗದವರ ಶೇ.4 ಮೀಸಲಾತಿ ಪಟ್ಟಿಯಿಂದ ಅಂದರೆ ( 2 ಬಿ) ತೆಗೆದು ಹಾಕಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯಲ್ಲಿರುವ ಶೇ.10ರಷ್ಟು ಮೀಸಲಾತಿ ಪಟ್ಟಿಗೆ ಸೇರಿಸಲಾಗಿದ್ದು, ಸಂಪೂರ್ಣ ಸಂವಿಧಾನ ವಿರೋಧಿ ನಡೆ. ತರಾತುರಿಯಲ್ಲಿ ಜಾರಿಗೊಳಿಸಿದ ಇಡಬ್ಲುಎಸ್ ಮೀಸಲಾತಿ, ಮುಸ್ಲಿಮ್ ಮೀಸಲಾತಿಯನ್ನು ಕಡಿತಗೊಳಿಸುವ ಒಳಸಂಚಲ್ಲದೆ ಬೇರೇನೂ ಅಲ್ಲ?

ಹಂಚಿ ತಿನ್ನುವುದು ಭಾರತೀಯರ ಸಂಸ್ಕೃತಿ ಎಂದು ಬೊಗಳೆ ಬಿಡುತ್ತಾರೆ. ಆದರೆ ಇಲ್ಲಿ ಕಿತ್ತು ತಿನ್ನುವವರೇ ಹೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಸಮುದಾಯಗಳು ಮೀಸಲಾತಿ ಹೆಚ್ಚಿಸುವ ಕುರಿತು ಹೋರಾಟ ಮಾಡುತ್ತಿವೆ. ಲಿಂಗಾಯತ, ಪಂಚಮಶಾಲಿ ಮತ್ತು ಒಕ್ಕಲಿಗರು 2ಎ ಪಟ್ಟಿಗೆ ಸೇರಿಸಲು ಸರಕಾರವನ್ನು ಒತ್ತಾಯಿಸಿದ್ದರು. ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದು, ಬಿಜೆಪಿ ಸರಕಾರ ತನ್ನ ಅಸ್ತಿತ್ವ ಉಳಿಸಿ ಕೊಳ್ಳಲು ಬೇರೆ ಮಾರ್ಗವಿಲ್ಲದೆ, ಮುಸ್ಲಿಮರನ್ನು 2 ಬಿ ಪಟ್ಟಿಯಿಂದ ತೆಗೆದು ಹಾಕಿ, ಒಕ್ಕಲಿಗರಿಗೆ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವುದು ಚುನಾವಣೆ ತಂತ್ರಗಾರಿಕೆಯಲ್ಲದೆ ಬೇರೇನೂ ಅಲ್ಲ? ನಿಜವಾಗಿಯೂ ಲಿಂಗಾಯತರಿಗೆ ಮೀಸಲಾತಿ ನೀಡುವ ಮನಸ್ಸಿದ್ದರೆ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ- ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗುವ ಹಾಗೆ ನೋಡಿಕೊಳ್ಳಬೇಕಾಗಿತ್ತು. ಅದ್ಯಾಕೋ ಸರಕಾರ ಮನಸ್ಸು ಮಾಡದಿರುವುದು ಬೇಸರದ ಸಂಗತಿ.
 

Similar News