ರಾಜತ್ವದ ಮಾಯೆ!

Update: 2023-04-02 04:33 GMT

ರಾಜರ ವಿಷಯಕ್ಕೆ ಬಂದಾಗ ಎರಡು ಮುಖ್ಯವಾದ ಅಂಶವನ್ನು ಗಮನಿಸಬೇಕು.

ಒಂದು ಸಾಮಾನ್ಯರಿಗೆ ರಾಜರ ಬಗ್ಗೆ ಇರುವ ಧೋರಣೆ.

ರಾಜರಿಗೆ ಇತರರ ಬಗ್ಗೆ ಇರುವ ಧೋರಣೆ. ಅದರ ಜೊತೆಗೆ ಜಿಜ್ಞಾಸೆ ಅಂತ ಇನ್ನೊಂದೂ ಸೇರಿಸಿಕೊಳ್ಳಬಹುದು ರಾಜರು ಒಳ್ಳೆಯವರೇ ಅಥವಾ ಕೆಟ್ಟವರೇ?

ಒಂದೂರಲ್ಲಿ ಒಬ್ಬ ರಾಜ ಇದ್ದ ಅಂತ ಶುರುವಾಗೋ ಕತೆಯಿಂದ ಹಿಡಿದು, ಇತಿಹಾಸದಲ್ಲಿ ಇಂತಿಂತಹ ಕಾಲದಿಂದ ಇಂತಿಂತಹ ಕಾಲದವರೆಗೂ ಆಳಿದ ರಾಜ ಅಂತ ದಾಖಲೆಗೆ ಸಿಗುತ್ತಾರಲ್ಲಾ; ಆ ರಾಜರಲ್ಲಿ ಯಾರು ಒಳ್ಳೆಯ ರಾಜ ಅಥವಾ ಕೆಟ್ಟ ರಾಜ ಎಂದು ಪತ್ತೆ ಹಚ್ಚುವುದು?

ಈಗ ಜನ ಸಾಮಾನ್ಯರು ರಾಜರನ್ನು ಯಾಕಷ್ಟು ಆಪ್ತವಾಗಿ ಉಲ್ಲೇಖಿಸುವುದು ಎಂದು ನೋಡೋಣ.

ರಾಜ ಎಂದರೆ ಸರ್ವಾಧಿಕಾರವನ್ನು ಹೊಂದಿರುವವನು. ಅವನಿಗೆ ಅಧಿಕಾರ, ಹಣ ಮತ್ತು ಪ್ರಭಾವಗಳು ಇರುವುದರಿಂದ ಎಲ್ಲಾ ಒಳ್ಳೆಯದನ್ನೂ ಅನುಭವಿಸಲು ಸಾಧ್ಯವಿರುತ್ತದೆ. ಅವನಿಗಾಗಿ ಕೆಲಸ ಮಾಡಲು ಎಷ್ಟೊಂದು ಜನರಿರುತ್ತಾರೆ. ಎಲ್ಲರೂ ಗೌರವಿಸುತ್ತಾರೆ, ಹೆದರುತ್ತಾರೆ. ಅವನ ಮಾತಿಗೆ ಯಾರೂ ಎದುರಾಡುವುದಿಲ್ಲ. ಅವನ ಮಾತೇ ನಡೆಯುತ್ತದೆ.

ಆದರೆ, ತಮಾಷೆಯ ವಿಷಯವೆಂದರೆ ಈ ಆಸೆಯೇ ಎಲ್ಲಾ ಸಾಮಾನ್ಯ ಮನಸ್ಸುಗಳಿಗೆ ಸಾಮಾನ್ಯ.

ವ್ಯಕ್ತಿಯ ಮನಸ್ಸು ಇತರರು ತನಗಿಂತ ಕೆಳಗಿರುವುದನ್ನೇ ಸದಾ ಬಯಸುತ್ತಿರುತ್ತದೆ. ಅದಕ್ಕೆ ಸದಾ ಅಧಿಕಾರದ ದಾಹ, ಸುಖದ ಬಯಕೆ ಮತ್ತು ಇತರರಿಗಿಂತ ಮೇಲಾಗಿರುವಂತಹ ಗೆಲುವಿನ ಹಟ. ಇದನ್ನು ಸಾಧಿಸಿಕೊಳ್ಳಲೇನೇ ಬೇಕಾಗಿರುವುದು ರಾಜಪೀಠ. ಇನ್ನೂ ಬಹುದೊಡ್ಡ ವ್ಯಂಗ್ಯವೆಂದರೆ ರಾಜರಾಗಿದ್ದವರು ಏನೂ ಸಾಧಿಸಲಾಗದೇ, ಪಾಡು ಪಟ್ಟುಕೊಂಡು, ಸುಖಿಸಲಾಗದೇ ಮಣ್ಣಾಗಿದ್ದಾರೂ, ಅದರ ಉದಾಹರಣೆಗಳು ಅದೆಷ್ಟೇ ಕಣ್ಣೆದುರಿಗಿದ್ದರೂ ತಾನು ರಾಜನಾದರೆ ಸುಖವಾಗಿರುವೆ ಎಂಬ ಭ್ರಮೆಯೇ ಸದಾ ಈ ಮನಸ್ಸಿಗೆ.

ಹಾಗಾಗಿ ರಾಜತ್ವದ ಪರಿಕಲ್ಪನೆಯು ಕಾಮನ್ ಮೈಂಡ್ ಹೊಂದಿರುವ ಸೂಪರ್ ಐಡಿಯಾ. ಚೆಂದವಾಗಿರುವ ಹುಡುಗಿಯನ್ನು ನೋಡಿದರೆ ರಾಜಕುಮಾರಿ ಎನ್ನುವುದು, ಹುಡುಗನಿಗೆ ರಾಜಕುಮಾರ ಎನ್ನುವುದು, ಚೆನ್ನಾಗಿ ಬಾಳಲಿ ಎನ್ನಬೇಕಾದರೆ ರಾಜಕುಮಾರಿಯಂತೆ ಅಥವಾ ರಾಜಕುಮಾರನಂತೆ ಬದುಕು ಎನ್ನುವುದು ಸಾಮಾನ್ಯ. ಆದರೆ ವಿಷಾದದ ಸಂಗತಿ ಎಂದರೆ ರಾಜಕುಮಾರ, ರಾಜಕುಮಾರಿ, ರಾಣಿ, ರಾಜ, ಅರಮನೆಯ ಇತರ ಸಂಬಂಧಿಗಳು ಯಾರೂ ಸಾಮಾನ್ಯ ಜನರು ಕಲ್ಪಿಸಿಕೊಳ್ಳುವಂತೆ ಸುಖವಾಗಿ ಇರುವುದೇ ಇಲ್ಲ. ಅವರಿಗೆ ಲೌಕಿಕವಾಗಿ ವಸ್ತುಗಳೇನೋ ದೊರಕಬಹುದು.

ಆದರೆ ಮಾನಸಿಕವಾಗಿ ಸದಾ ಒತ್ತಡ, ಭಾವನಾತ್ಮಕವಾಗಿ ಸದಾ ತಳಮಳ. ಅದನ್ನು ಮಣಿಸಿಕೊಳ್ಳಲು ತಮಗೆ ಕಷ್ಟವಿಲ್ಲದೇ ಸಿಗುವ ಲೌಕಿಕದ ವಸ್ತುಗಳಿಂದ ಯತ್ನಿಸುತ್ತಾರೆ. ಅವರುಗಳಲ್ಲೇ ಅತ್ಯಂತ ಹೆಚ್ಚು ಮಾದಕವಸ್ತುಗಳ ವ್ಯಸನಿಗಳಿರುವುದು. ಇದರಿಂದ ಅವರ ಮಾನಸಿಕ ಸಮಸ್ಯೆ ಮತ್ತು ಭಾವನಾತ್ಮಕ ತಳಮಳಕ್ಕೆ ಒಂದು ಹಂತಕ್ಕೆ ಪೈನ್ ಕಿಲ್ಲರ್ ಸಿಗುವುದು. ಆದರೆ ಸಮಸ್ಯೆಗಳು ತೀವ್ರಗೊಳ್ಳುವುದು. ರಾಜರು ಅಥವಾ ರಾಜರ ಮನೆಯವರಾಗಿ ರುವ ಕಾರಣದಿಂದ ಅನುಸರಿಸಲೇ ಬೇಕಾದ ಪ್ರೊಟೋಕಾಲ್‌ಗಳು, ಮುಕ್ತವಾಗಿ ವ್ಯವಹರಿಸಲು, ಅಭಿವ್ಯಕ್ತಗೊಳಿಸಿಕೊಳ್ಳಲು ಸಾಧ್ಯವಾಗದ ಕಟ್ಟುಪಾಡುಗಳು ಇರುತ್ತವೆ.

ಅವರಿಗೆ ಸರಿಸಮಾನವಾಗಿ ಅವರ ಜೊತೆಗೇ ಇರುವವರಿಂದಂತೂ ಆಗುವ ಹಿಂಸೆ ಆಡಲಾಗದು, ಅನುಭವಿಸಲಾಗದು. ರಾಜರ ಸಂಗಡವಿರುವವರಿಗೆ ಯಾವಾಗ ಏನಾಗುತ್ತದೆ ಎಂದು ಯಾರಿಗೂ ಹೇಳಲಾಗದು. ಅವೆಲ್ಲವೂ ಅವರವರ ತಿಕ್ಕಲುತನಗಳ ಮಟ್ಟವನ್ನು ಅವಲಂಬಿಸಿರುತ್ತವೆ. ಎಷ್ಟೋ ಕಾಲ ಚೆನ್ನಾಗಿಯೇ ಇರುವ ರಾಜ ಅಥವಾ ರಾಜ ಮನೆತನದವರು ಒಮ್ಮಿಂದೊಮ್ಮೆಲೇ ಯಾವುದೋ ವಿಷಯಕ್ಕೆ ಹೇಗೆ ತಿರುಗಿಕೊಳ್ಳುತ್ತಾರೆ.

ಯಾವ ಅಥವಾ ಯಾರ ಪ್ರಭಾವಕ್ಕೆ ಒಳಗಾಗಿ ಏನು ಮಾಡುತ್ತಾರೆ ಎಂದು ಹೇಳಲು ಯಾರಿಗೂ ಸಾಧ್ಯವೇ ಇಲ್ಲ. ತಮ್ಮ ಇಡೀ ಜೀವನವನ್ನೇ ರಾಜರ ಸೇವೆಗೆಂದು ಮುಡಿಪಾಗಿಟ್ಟು ರಾಜನಿಷ್ಠೆ ತೋರುತ್ತಾ ಬಂದಿದ್ದರೂ ಒಂದು ದಿನ ಅವರಿಂದಲೇ ತಮ್ಮ ಮಾನ ಮತ್ತು ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ತಮ್ಮ ಒಡಹುಟ್ಟುಗಳನ್ನು ನಿರ್ನಾಮ ಮಾಡುವಂತಹ ಉದಾಹರಣೆಗಳು ವಿಶ್ವದ ಉದ್ದಗಲಕ್ಕೂ ಸಿಗುತ್ತವೆ. ಸಾಮಾನ್ಯ ಕುಟುಂಬಗಳಲ್ಲಿ ಆಗುವ ಕುಂಟುಂಬಸ್ಥರ ಕೊಲೆಗಳಿಗಿಂತ ರಾಜ ಕುಟುಂಬಗಳಲ್ಲಿ ಆಗಿರುವ ಹತ್ಯೆಗಳ ಪ್ರಮಾಣವೇ ಹೆಚ್ಚು. ಏಕೆಂದರೆ ಲೌಕಿಕ ಸಂಪತ್ತು ಮತ್ತು ಅಧಿಕಾರದ ಆಸೆ.

ಸಾಧಾರಣ ರೈತ ಅಥವಾ ಶ್ರಮಿಕ ಕುಟುಂಬದಲ್ಲಿ ಇರುವಷ್ಟು ನೆಮ್ಮದಿ ಎಂದೆಂದಿಗೂ ರಾಜರಿಗೆ ಇರಲಾರರು. ಅದು ಅಕ್ಬರನೋ, ಅಶೋಕನೋ, ಅಜಾತಶತ್ರುವೋ, ಅಮೋಘವರ್ಷ ನೃಪತುಂಗನೋ; ಯಾರಾದರೂ ಸರಿಯೇ ಅವರ ಕೌಟುಂಬಿಕ ಸಮಸ್ಯೆಗಳ ಸಂಕೀರ್ಣತೆ, ಭಯಾನಕ ತಲೆನೋವುಗಳು, ಕುಟುಂಬಸ್ಥರ ನಡುವಿನ ಬಿಕ್ಕಟ್ಟು ಮತ್ತು ಕಚ್ಚಾಟಗಳು; ಯಾವುದೂ ತಪ್ಪಿದ್ದಲ್ಲ.

ಆದರೂ ಸಾಮಾನ್ಯ ಮನದ ಆಸೆ ಅಸಮಾನ್ಯ ರಾಜ ಅಥವಾ ರಾಣಿಯಂತೆ ಬಾಳುವುದು. ರಾಜತ್ವದ ಆಸೆ ಪಡುವುದೆಂದರೆ ಲೌಕಿಕದ ಬಯಕೆಗಳಷ್ಟೇ ಹೊರತು ಇನ್ನೇನೂ ಇಲ್ಲ. ಇನ್ನು ಯಾವನೊಬ್ಬನೂ ರಾಜ ಒಳ್ಳೆಯವನೆಂದು ಹೇಳಲು ಸಾಧ್ಯವಾಗದು. ಕಡಿಮೆ ಕೇಡಿಗನೆಂದು ಮಾತ್ರವೇ ಗುರುತಿಸಬಹುದು. ಇತರರನ್ನು ತನ್ನ ಅಧೀನದಲ್ಲಿಟ್ಟುಕೊಂಡು, ತನ್ನ ವಿರುದ್ಧ ಯಾರೇ ಬಂಡೆದ್ದರೂ ಅವರನ್ನು ನಿವಾರಿಸಿಕೊಳ್ಳುವಂತಹ ಆತ್ಮಕೇಂದ್ರಿತ ಮತ್ತು ಅಧಿಕಾರ ಕೇಂದ್ರಿತ ವ್ಯಕ್ತಿಯಷ್ಟೇ ರಾಜನಾಗಿರುತ್ತಾನೆ. ಚಕ್ರವರ್ತಿಯಾಗಿರುವುದು ಹೆಮ್ಮೆ, ಘನತೆ, ಗೌರವ ಎನ್ನುವುದಾದರೆ ಆತನ ಅಧೀನದಲ್ಲಿರುವವರ ಅರ್ಹತೆಯನ್ನು ಅಥವಾ ಗೌರವವನ್ನು ಏನೆಂದು ಗುರುತಿಸುವುದು? ಒಬ್ಬ ಸಾಮಾನ್ಯ ಮನುಷ್ಯನು ತನ್ನ ಸಹಜೀವಿಯನ್ನು ಈತನೂ ನನ್ನಂತೆಯೇ ಈ ಜಗತ್ತಿನಲ್ಲಿ ಸಮಾನ ಘನತೆ ಗೌರವದಿಂದ ಬದುಕುವ ಹಕ್ಕನ್ನು ಹೊಂದಿರುತ್ತಾನೆ ಎಂಬ ಮಾನವ ಹಕ್ಕಿನ ಬಗ್ಗೆ ರಾಜರ ಕುರಿತಾಗಿ ಮಾತಾಡುವಂತೆಯೇ ಇಲ್ಲ.

ಕೊನೆಗೊಂದು ಕ್ರೂರ ವ್ಯಂಗ್ಯ: ಸಾಮಾನ್ಯ ಮನಸ್ಸಿನ ರಾಜತ್ವದ ಆಸೆ ಈಗ ನೆರವೇರುವುದಿಲ್ಲ ಎಂದು ಗೊತ್ತಿದೆ. ಅದಕ್ಕೆ ಜನಪ್ರಿಯ ನಟನಾಗಬೇಕು, ರಾಜಕಾರಣಿಯಾಗಬೇಕು, ದೊಡ್ಡ ಸೆಲೆಬ್ರಿಟಿಯಾಗಬೇಕು, ಸ್ಟಾರ್ ಆಗಬೇಕು, ಕನಿಷ್ಠಪಕ್ಷ ಒಳ್ಳೆಯ ಪಟಾಲಂ ಇರುವ ರೌಡಿಯಾದರೂ ಆಗಿರಬೇಕು ಎಂದು ಮನಸ್ಸು ಹಾತೊರೆಯುತ್ತಲೇ ಇರುತ್ತದೆ. ಬಿಟ್ಟೆನೆಂದರೂ ಬಿಡದ ರಾಜತ್ವದ ಮಾಯೆ!

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ