ತೈವಾನ್ ಸಮರಾಭ್ಯಾಸ ಯಶಸ್ವಿ: ಚೀನಾ ಘೋಷಣೆ

Update: 2023-04-10 18:12 GMT

ಬೀಜಿಂಗ್, ಎ.10: ತೈವಾನ್ ಅನ್ನು ಸುತ್ತುವರಿದು ಕಳೆದ 3 ದಿನಗಳಿಂದ ನಡೆಸುತ್ತಿದ್ದ ಮಿಲಿಟರಿ ಸಮರಾಭ್ಯಾಸ ಯಶಸ್ವಿಯಾಗಿ  ಪೂರ್ಣಗೊಂಡಿದೆ ಎಂದು ಚೀನಾ ಸೋಮವಾರ ಘೋಷಿಸಿದೆ.

ಸಮರಾಭ್ಯಾಸವು ನಿಜವಾದ ಯುದ್ಧಪರಿಸ್ಥಿತಿಗಳಲ್ಲಿ ಸೇನೆಯ ವಿವಿಧ ಶಾಖೆಗಳ ಸಮಗ್ರ ಜಂಟಿ ಯುದ್ಧಸಾಮಥ್ರ್ಯವನ್ನು ಸಮಗ್ರವಾಗಿ ಪರೀಕ್ಷಿಸಿದೆ ಎಂದು ಚೀನಾ ಸೇನೆಯ ಪೂರ್ವ ತುಕಡಿಯ ಹೇಳಿಕೆ ತಿಳಿಸಿದೆ.

ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ರಕ್ಷಿಸಲು ಬಯಸುವುದಾದರೆ ಯಾವುದೇ ರೀತಿಯ ತೈವಾನ್ ಸ್ವಾತಂತ್ರ್ಯ ಪ್ರತ್ಯೇಕತಾವಾದವನ್ನು ದೃಢವಾಗಿ ವಿರೋಧಿಸಬೇಕಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಎಚ್ಚರಿಸಿದ್ದಾರೆ. ಚೀನಾದ ಶಾಂಡಾಂಗ್ ಯುದ್ದವಿಮಾನ ಸೋಮವಾರದ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದೆ ಎಂದವರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಅಮೆರಿಕವು ಸೋಮವಾರ ಕ್ಷಿಪಣಿ ನಿರ್ದೇಶಿತ ಸಮರನೌಕೆ `ಯುಎಸ್ಎಸ್ ಮಿಲಸ್' ಅನ್ನು ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ರವಾನಿಸಿದೆ. ಈ ನೌಕಾಯಾನದ ಸ್ವಾತಂತ್ರ್ಯವು ಸಮುದ್ರ ಹಕ್ಕು, ಸ್ವಾತಂತ್ರ್ಯ ಮತ್ತು ಸಮುದ್ರದ ಕಾನೂನುಬದ್ಧ ಬಳಕೆಯ ಅವಕಾಶವನ್ನು ಎತ್ತಿಹಿಡಿದಿದೆ ಎಂದು ಅಮೆರಿಕದ ನೌಕಾಪಡೆ ಹೇಳಿದೆ.

ಚೀನಾದ ಸಮರಾಭ್ಯಾಸವು ಈ ಪ್ರದೇಶದ ಶಾಂತಿ, ಸ್ಥಿರತೆಯನ್ನು ದುರ್ಬಲಗೊಳಿಸಿದೆ. ಸರ್ವಾಧಿಕಾರದ ವಿಸ್ತರಣೆಯನ್ನು ತಡೆಯಲು ತೈವಾನ್ ಅಮೆರಿಕದೊಂದಿಗೆ ನಿಕಟ ಸಂಪರ್ಕ ಮುಂದುವರಿಸಲಿದೆ ಎಂದು ತೈವಾನ್ನ ವಿದೇಶಾಂಗ ಇಲಾಖೆ ಹೇಳಿದೆ.

Similar News