‘ನಂದಿನಿ’ಯ ಮೇಲೆ ಬಿಜೆಪಿ-ಕಾರ್ಪೊರೇಟ್ ದಾಳಿ: ಕ್ರೋನಾಲಜಿ ಅರ್ಥಮಾಡಿಕೊಳ್ಳೋಣ!

Update: 2023-04-12 02:42 GMT

ಎಲ್ಲಕ್ಕಿಂತ ಮುಖ್ಯವಾಗಿ ಅಮುಲ್‌ನ ಯೋಜನೆ ಈಗಾಗಲೇ ಅಮಿತ್ ಶಾ ಅವರು ಸಹಕಾರಿ ಇಲಾಖೆಯ ಮೂಲಕ ಪ್ರಾರಂಭಿಸಿರುವ ಕಾರ್ಪೊರೇಟ್ ಪರ ಹಾಲು ರಫ್ತು ಯೋಜನೆಯ ಸಹಕಾರಿ-ಕಾರ್ಪೊರೇಟ್ ಹೈಬ್ರಿಡ್ ವ್ಯವಸ್ಥೆಯ ಭಾಗವೂ ಆಗಿದೆ ಮತ್ತು ಒಟ್ಟಾರೆ ಸಹಕಾರಿ ಕ್ಷೇತ್ರವನ್ನು ಅದರಲ್ಲೂ ಮುಖ್ಯವಾಗಿ ಸಹಕಾರಿ ಕ್ಷೇತ್ರದಲ್ಲಿರುವ ಹಾಲು ಉತ್ಪಾದನೆ, ಸಂಸ್ಕರಣೆ, ಇತರ ಉತ್ಪನ್ನಗಳ ಉತ್ಪಾದನೆ ಮತ್ತು ಅವುಗಳ ದೇಶೀ ಮತ್ತು ವಿದೇಶೀ ಮಾರಾಟ ವ್ಯವಸ್ಥೆಯನ್ನು ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಗಳಿಗೆ ಪರಭಾರೆ ಮಾಡುವ ಮೋದಿ ಸರಕಾರದ ರಾಜಕೀಯ-ಆರ್ಥಿಕತೆಯ ಭಾಗವೂ ಆಗಿದೆ. ಹೀಗಾಗಿ ಇದು ಕೇವಲ ನಂದಿನಿಯನ್ನು ಅಮುಲ್ ನುಂಗಿ ಹಾಕುವ ಕಾರ್ಯಯೋಜನೆಯಲ್ಲ. ಬದಲಿಗೆ ಭಾರತದ ಇಡೀ ಹಾಲು ಉದ್ಯಮವನ್ನು ಕಾರ್ಪೊರೇಟ್ ಧಣಿಗಳಿಗೆ ವರ್ಗಾಯಿಸುವ ನವ ಉದಾರವಾದಿ ಯೋಜನೆಯ ಭಾಗವಾಗಿದೆ.


ಕಳೆದ ಎಪ್ರಿಲ್ 5ರಂದು ಗುಜರಾತಿನ ಅಮುಲ್ ಸಂಸ್ಥೆಯು ಬೆಂಗಳೂರಿನ ಗ್ರಾಹಕರಿಗೆ ನೇರವಾಗಿ ತಾಜಾ ಹಾಲು-ಮೊಸರು ಸರಬರಾಜು ಮಾಡುವುದಾಗಿ ಘೋಷಿಸಿದ ನಂತರ ಕರ್ನಾಟಕದ ನಂದಿನಿಯ ಮೇಲಿನ ದಾಳಿಗೆ ದೊಡ್ಡ ಹುನ್ನಾರವೇ ನಡೆದಿರುವುದು ನಿಚ್ಚಳವಾಗಿದೆ. ಇದರ ವಿರುದ್ಧ ಜನರಿಂದ ಮತ್ತು ವಿರೋಧ ಪಕ್ಷಗಳಿಂದ ರಾಜ್ಯಾದ್ಯಂತ ಪ್ರಬಲವಾದ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಬಿಜೆಪಿಯು ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರಿಂದ ನಂದಿನಿಯನ್ನು ನಾಶ ಮಾಡುವ ಯಾವ ಉದ್ದೇಶವೂ ಅಮುಲ್‌ಗೆ ಇಲ್ಲವೆಂಬ ಸುಳ್ಳು ಹೇಳಿಕೆಯನ್ನು ತರಾತುರಿಯಲ್ಲಿ ಕೊಡಿಸಲಾಗಿದೆ.

ಆದರೆ ಈ ಹೇಳಿಕೆ ಜಯನ್ ಮೆಹ್ತಾ ಅವರೇ ಮೊನ್ನೆ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿದೆ. ಆದ್ದರಿಂದ ಈ ಬದಲಾದ ಹೇಳಿಕೆ ಕೇವಲ ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆಯೆಂಬುದು ಕೂಡ ಸ್ಪಷ್ಟವಾಗಿದೆ. ಏಕೆಂದರೆ ಎರಡು ದಿನಗಳ ಕೆಳಗೆ ಮೆಹ್ತಾ ಅವರು "Financial Express'ಗೆ ನೀಡಿರುವ ಸಂದರ್ಶನದಲ್ಲಿ :
"".. I would like to indicate that we are only looking at e-commerce/quick commerce channels right now. We are not looking at general trade at the moment. ... And a modern trade entry of Amul in Bengaluru will happen only six months later''
(https://www.financialexpress.com/.../amul-vs.../3039474/)

ಎಂದರೆ ಸದ್ಯಕ್ಕೆ ತಾವು ಈ-ಕಾಮರ್ಸ್ ಮೂಲಕ ಹಾಲು ಸರಬರಾಜು ಮಾಡುವ ಉದ್ದೇಶ ಹೊಂದಿದ್ದೇವೆ ಮತ್ತು ಇನ್ನಾರು ತಿಂಗಳ ನಂತರ ಬೆಂಗಳೂರಿನಲ್ಲಿ modern trade ಸಾಧನಗಳ ಮೂಲಕ ಪ್ರವೇಶ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ modern trade ಎಂದರೇನು?

ಆರ್ಥಿಕ ಪರಿಭಾಷೆಯಲ್ಲಿ modern trade ಎಂದರೆ ಉತ್ಪಾದಕರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸುವ ಸಂಪೂರ್ಣ ಏಕಸ್ವಾಮ್ಯ ವ್ಯವಸ್ಥೆ ಮತ್ತು ಅದಕ್ಕೆ ಬೇಕಿರುವ ಮಳಿಗೆ, ದಾಸ್ತಾನು, ಹಾಗೂ ಮಾಲ್‌ಗಳ ಸರಣಿಯನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳ ಸಂಘಟಿತ ಚಿಲ್ಲರೆ ವ್ಯಾಪಾರ ವಹಿವಾಟು ಎಂದರ್ಥ.

ಅಂದರೆ.. ಇನ್ನಾರು ತಿಂಗಳಲ್ಲಿ ಅಮುಲ್ ಸಂಸ್ಥೆಯೂ ಕರ್ನಾಟಕದ ಸ್ಥಳೀಯ ಹಾಲು ಉತ್ಪಾದಕರಿಂದ ನೇರ ಖರೀದಿಸಿ, ದಾಸ್ತಾನು ಮಾಡಿ, ಗ್ರಾಹಕರಿಗೆ ತಲುಪಿಸುತ್ತಾರೆಂದು ಅರ್ಥ. ಅವರ ‘‘ಕೆಂಗೇರಿಯಿಂದ ವೈಟ್ ಫೀಲ್ಡ್ ವರೆಗೂ ತಾಜಾ ಅಮುಲ್ ಹಾಲು ಸವಿಯಿರಿ’’ ಜಾಹೀರಾತಿನ ಉದ್ದೇಶವೂ ಇದೇ ಆಗಿದೆ.
ಅರ್ಥಾತ್ ಗುಜರಾತಿನ ಅಮುಲ್ ಸಂಸ್ಥೆ ನಂದಿನಿಗೆ ಪರ್ಯಾಯವಾದ ಮತ್ತು ಪ್ರತ್ಯೇಕವಾದ ಹಾಲು ಮಾರಾಟವನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಅಮುಲ್‌ನ ಈ ಯೋಜನೆ ಈಗಾಗಲೇ ಅಮಿತ್ ಶಾ ಅವರು ಸಹಕಾರಿ ಇಲಾಖೆಯ ಮೂಲಕ ಪ್ರಾರಂಭಿಸಿರುವ ಕಾರ್ಪೊರೇಟ್ ಪರ ಹಾಲು ರಫ್ತು ಯೋಜನೆಯ ಸಹಕಾರಿ-ಕಾರ್ಪೊರೇಟ್ ಹೈಬ್ರಿಡ್ ವ್ಯವಸ್ಥೆಯ ಭಾಗವೂ ಆಗಿದೆ ಮತ್ತು ಒಟ್ಟಾರೆ ಸಹಕಾರಿ ಕ್ಷೇತ್ರವನ್ನು ಅದರಲ್ಲೂ ಮುಖ್ಯವಾಗಿ ಸಹಕಾರಿ ಕ್ಷೇತ್ರದಲ್ಲಿರುವ ಹಾಲು ಉತ್ಪಾದನೆ, ಸಂಸ್ಕರಣೆ, ಇತರ ಉತ್ಪನ್ನಗಳ ಉತ್ಪಾದನೆ ಮತ್ತು ಅವುಗಳ ದೇಶೀ ಮತ್ತು ವಿದೇಶೀ ಮಾರಾಟ ವ್ಯವಸ್ಥೆಯನ್ನು ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಗಳಿಗೆ ಪರಭಾರೆ ಮಾಡುವ ಮೋದಿ ಸರಕಾರದ ರಾಜಕೀಯ-ಆರ್ಥಿಕತೆಯ ಭಾಗವೂ ಆಗಿದೆ. ಹೀಗಾಗಿ ಇದು ಕೇವಲ ನಂದಿನಿಯನ್ನು ಅಮುಲ್ ನುಂಗಿ ಹಾಕುವ ಕಾರ್ಯಯೋಜನೆಯಲ್ಲ. ಬದಲಿಗೆ ಭಾರತದ ಇಡೀ ಹಾಲು ಉದ್ಯಮವನ್ನು ಕಾರ್ಪೊರೇಟ್ ಧಣಿಗಳಿಗೆ ವರ್ಗಾಯಿಸುವ ನವ ಉದಾರವಾದಿ ಯೋಜನೆಯ ಭಾಗವಾಗಿದೆ. ಏಕೆಂದರೆ ಇಂದು ಭಾರತದ ಹೈನೋದ್ಯಮವು ಅಂದಾಜು 15 ಲಕ್ಷ ಕೋಟಿ ರೂ. ವಹಿವಾಟು ಮಾಡುವ ಕ್ಷೇತ್ರವಾಗಿದೆ. ಅದರೆ ಈ ಕ್ಷೇತ್ರದ ಸಂಘಟಿತ ವಿಭಾಗದಲ್ಲಿ ಭಾರತದಲ್ಲೇ ಮೊದಲನೇ ಸ್ಥಾನದಲ್ಲಿರುವ ಅಮುಲ್ ವರ್ಷಕ್ಕೆ 65,000 ಕೋಟಿ ರೂ. ವಹಿವಾಟು ಮಾಡಿದರೆ ಎರಡನೇ ಸ್ಥಾನದಲ್ಲಿರುವ ನಂದಿನಿ ಕೇವಲ 25,000 ಕೋಟಿ ರೂ. ವಹಿವಾಟು ಮಾಡುತ್ತದೆ. ಹೀಗಾಗಿ ಬಹುಪಾಲು ಕ್ಷೇತ್ರವು ಅಸಂಘಟಿತವಾಗಿದ್ದು ಈ ದೇಶದ ಸಂಘಟಿತ ಚಿಲ್ಲರೆ ಮಾರಾಟದಲ್ಲಿರುವ ದೊಡ್ಡ ದೊಡ್ಡ ಉದ್ಯಮಿಗಳಿಗೆ (ಟಾಟಾ, ಬಿರ್ಲಾ, ಅಂಬಾನಿ..ಇನ್ನಿತರರು) ಇದರ ಮೇಲೆ ಕಣ್ಣು ಬಿದ್ದಿದೆ. ಆದರೆ ಅವರ ಗಮನವಿರುವುದು ಹಳ್ಳಿಹಳ್ಳಿಗೆ ಹೋಗಿ ಹಾಲು ಸಂಗ್ರಹ ಮಾಡುವ ಹೆಚ್ಚು ವೆಚ್ಚದ ವಿಭಾಗದ ಮೇಲಲ್ಲ. ಬದಲಿಗೆ ಹಾಲು ಒಮ್ಮೆ ಸಂಗ್ರಹವಾದ ಮೇಲೆ ಸಂಸ್ಕರಣೆ, ಹಾಲು ಉತ್ಪನ್ನಗಳ ಉತ್ಪಾದನೆ ಮತ್ತು ಅದರ ಮಾರಾಟ ವಿಭಾಗಗಳನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಕಾರ್ಪೊರೇಟ್ ಸಂಸ್ಥೆಗಳು ಹೊಂದಿವೆ. ಈ ಗುರಿ ಸಾಧನೆಗೆಂದೇ ಬಿಜೆಪಿ ಸರಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಜೊತೆಗೂಡಿ ಹಂತಹಂತವಾದ ಯೋಜನೆಯನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುತ್ತಾ ಬಂದಿವೆ. ನಂದಿನಿಯ ಮೇಲೆ ಅಮುಲ್ ದಾಳಿ ಈ ಒಟ್ಟಾರೆ ಬಿಜೆಪಿ ಬೆಂಬಲಿತ ಕಾರ್ಪೊರೇಟ್ ದಾಳಿಯ ಭಾಗ. ಹಾಲು ಸಹಕಾರಿ ಕ್ಷೇತ್ರದಲ್ಲಿ ನಡೆದಿರುವ ಬದಲಾವಣೆಗಳ ಕ್ರೋನಲಜಿ - ಕಾಲಾನುಕ್ರಮಣಿಕೆ-ಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ.

ಕ್ರೋನಾಲಜಿ-1-ಆರ್‌ಸಿಇಪಿ ಮತ್ತು ಭಾರತದ ಹೈನೋದ್ಯಮ 

ಜಗತ್ತಿನ ಹಲವಾರು ಬಲಶಾಲಿ ದೇಶಗಳು ಭಾರತದಂಥ ರಾಷ್ಟ್ರಗಳನ್ನು ಒಟ್ಟುಗೂಡಿಸಿಕೊಂಡು ಆರ್‌ಸಿಇಪಿ ಎಂಬ ಮತ್ತೊಂದು ಮುಕ್ತ ಮಾರುಕಟ್ಟೆ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಮಾಲೋಚನೆಗಳು 2019-20ರಲ್ಲಿ ಭರದಿಂದ ನಡೆದಿತ್ತು. ಆಗ ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಗಳ ಬೃಹತ್ ಡೇರಿ ಉದ್ಯಮಿಗಳು ಸ್ಥಳೀಯ ಕಾರ್ಪೊರೇಟ್ ಉದ್ಯಮಿಗಳೊಂದಿಗೆ ಸೇರಿಕೊಂಡು ಭಾರತದ ಹಾಲು ಉತ್ಪನ್ನ ಮತ್ತು ಮಾರಾಟ ಕ್ಷೇತ್ರವನ್ನು ಕಬಳಿಸುವ ಪ್ರಸ್ತಾಪವನ್ನು ಮಾಡಿದ್ದವು. ಮೋದಿ ಸರಕಾರವು ಹೆಚ್ಚು ಕಡಿಮೆ ಒಪ್ಪಂದ ಮಾಡಿಕೊಳ್ಳುವ ತರಾತುರಿಯಲ್ಲಿತ್ತು. ಆದರೆ ಭಾರತದ ರೈತರ ಬೃಹತ್ ಪ್ರತಿರೋಧ ಮತ್ತು ಚೀನಾ ಪ್ರಾಬಲ್ಯ ಹೆಚ್ಚಿರುವ ಒಕ್ಕೂಟದಲ್ಲಿ ಭಾರತ ಪಾಲುಗೊಳ್ಳುವ ಬಗ್ಗೆ ಅಮೆರಿಕ ಮಾಡಿದ ಆಕ್ಷೇಪಣೆಯ ಕಾರಣಗಳಿಂದಾಗಿ ಮೋದಿ ಸರಕಾರ ಆರ್‌ಸಿಇಪಿ ಭಾಗವಾಗಲಿಲ್ಲ. ಆದರೆ ಆಗಿನಿಂದಲೂ ಭಾರತದ ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಿಗಳಿಗೆ ರೂ. 15 ಲಕ್ಷ ಕೋಟಿಯಷ್ಟು ದೊಡ್ಡದಾದ ಹಾಲು ಉತ್ಪನ್ನ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಪ್ರವೇಶ ಮತ್ತು ಆಧಿಪತ್ಯಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮ ನಿಷ್ಠ ಮಿತ್ರನಾದ ಮೋದಿ ಸರಕಾರದ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದವು.

ಕ್ರೋನಾಲಜಿ-2- ಸರಕಾರದ ಮೇಲೆ ಸಿಐಐ ಹಾಗೂ ಎಫ್‌ಐಸಿಸಿಐ 
ಆರ್‌ಸಿಇಪಿಯಿಂದ ಭಾರತ ಹೊರಬಂದ ಕೂಡಲೇ ಭಾರತದ ಬಹುದೊಡ್ಡ ಉದ್ಯಮಿಗಳ ಒಕ್ಕೂಟವಾಗಿರುವ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ತ್ರೀಸ್ (ಸಿಐಐ) ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಎಫ್‌ಐಸಿಸಿಐ-ಫಿಕ್ಕಿ)ಗಳು ಹಾಲು ಸಹಕಾರಿಗಳನ್ನು ಕಾರ್ಪೊರೇಟೀಕರಿಸುವ ಮತ್ತು ಖಾಸಗಿ ಬಂಡವಾಳದ ಪ್ರವೇಶಕ್ಕೆ ಅವಕಾಶ ಕೊಡಬೇಕೆಂದು ಮೋದಿ ಸರಕಾರದ ಮೇಲೆ ಒತ್ತಡ ಹಾಕಲಾರಂಭಿಸಿದವು. 2020ರಲ್ಲಿ ಸಿಐಐ "Dairy Farmers To New Opportunity' ಎಂಬ ನೀಲನಕ್ಷೆಯನ್ನು ಮತ್ತು 2021 ರಲ್ಲಿ ಫಿಕ್ಕಿ "Development Of Dairy Sector In India' ಎಂಬ ನೀಲ ನಕ್ಷೆಯನ್ನು ಮುಂದಿರಿಸಿದವು.

ಎರಡೂ ಸಂಸ್ಥೆಗಳು ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದವು. ದೊಡ್ಡ ದೊಡ್ಡ ಕಾರ್ಪೊರೇಟ್‌ಗಳ ಪ್ರವೇಶದಿಂದ ಭಾರತವು ಸುಲಭವಾಗಿ ಹಾಲುರಫ್ತು ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಪಡೆಯಬಹುದೆಂಬ ಗುರಿಯನ್ನು ಸರಕಾರದ ಮುಂದಿರಿಸಿದವು. ಇದನ್ನು ಅನುಸರಿಸಿಯೇ ಭಾರತ ಸರಕಾರದ ಪಶುಸಂಗೋಪನಾ ಕಾರ್ಯದರ್ಶಿ ಅತುಲ್ ಚತುರ್ವೇದಿಯವರು, ಖಾಸಗಿ ಬಂಡವಾಳಿಗರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಇತರ ಕ್ಷೇತ್ರಗಳಿಗಿಂತ ಅತಿ ಹೆಚ್ಚಿನ ಲಾಭದ ದರವನ್ನು ಪಡೆಯಬಹುದೆಂದು ಅಂಕಿಅಂಶ ಪೂರೈಸಿದರು. ಆದರೆ ಇವೆಲ್ಲಾ ಆಗಬೇಕೆಂದರೆ ಸಹಕಾರಿ ಕ್ಷೇತ್ರದಲ್ಲಿರುವ ಅಮುಲ್ ಮತ್ತು ನಂದಿನಿಯಂತಹ ಒಕ್ಕೂಟಗಳಲ್ಲೂ ಕಾರ್ಪೊರೇಟ್ ಯಾಜಮಾನ್ಯ ಸಾಧ್ಯವಾಗಬೇಕು. ಆದರೆ ಸಹಕಾರಿ ಕ್ಷೇತ್ರ ರಾಜ್ಯದ ಪಟ್ಟಿಯಲ್ಲಿರುವ ಕ್ಷೇತ್ರ. ಅದರ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಸಾಧ್ಯವಿಲ್ಲ. ಆದರೆ ಬಿಡಿಬಿಡಿಯಾಗಿ ಬೇರೆಬೇರೆ ರಾಜ್ಯಗಳ ಕಾನೂನುಗಳಡಿ ಕೆಲಸ ಮಾಡುವ ಸಹಕಾರಿಗಳು ಒಂದೇ ನಿಯಂತ್ರಣದಡಿ ಬರದಿದ್ದರೆ ರಾಷ್ಟ್ರಮಟ್ಟದ ಕಾರ್ಪೊರೇಟೀಕರಣ ಸಾಧ್ಯವಿಲ್ಲ. ಇವೆಲ್ಲಾ ಆಗಬೇಕೆಂದರೆ ಸಹಕಾರಿ ಕ್ಷೇತ್ರದಲ್ಲೇ ದೊಡ್ಡ ಮಟ್ಟದ ಶಾಸನಾತ್ಮಕ ಮಾರ್ಪಾಡು ಆಗುವ ಅಗತ್ಯವಿತ್ತು.

ಕ್ರೋನಾಲಜಿ-3- ಕೇಂದ್ರದಲ್ಲಿ ಹೊಸ ಸಹಕಾರಿ ಸಚಿವಾಲಯ ಸ್ಥಾಪನೆ 

ಸಹಕಾರಿಗಳ ಕಾರ್ಪೊರೇಟೀಕರಣಕ್ಕೆ ಅಡ್ಡಿಯಾಗುತ್ತಿದ್ದ ಶಾಸನಾತ್ಮಕ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ಮೀರುವುದಕ್ಕಾಗಿಯೇ 2021ರ ಜುಲೈನಲ್ಲಿ ಮೋದಿ ಸರಕಾರ ಕ್ಯಾಬಿನೆಟ್ ದರ್ಜೆಯ ಉಸ್ತುವಾರಿ ಇರುವ ಒಂದು ಹೊಸ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿತು ಮತ್ತು ಅದಕ್ಕೆ ಭಾರತದ ಎರಡನೇ ಅತ್ಯಂತ ಪ್ರಭಾವಶಾಲಿ ಮಂತ್ರಿಯಾದ ಗೃಹಮಂತ್ರಿ ಅಮಿತ್ ಶಾ ಅವರನ್ನು ಹೆಚ್ಚುವರಿಯಾಗಿ ಸಹಕಾರಿ ಮಂತ್ರಿಯನ್ನಾಗಿ ಮಾಡಿತು. ಆ ವೇಳೆಗಾಗಲೇ ರೈತ ಸಹಕಾರಿಗಳನ್ನು ಕಾರ್ಪೊರೇಟೀಕರಿಸುವ ಮೋದಿ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಹೋರಾಟದ ಬಿಸಿ ಸರಕಾರಕ್ಕೆ ತಟ್ಟಿತ್ತು. ಆನಂತರ ಆ ಮೂರೂ ಕಾನೂನುಗಳನ್ನು ಸರಕಾರ ಹಿಂದೆಗೆದುಕೊಂಡರೂ ಮತ್ತೊಮ್ಮೆ ಸಹಕಾರಿ ಸಚಿವಾಲಯದ ಮೂಲಕ ಹೊಸ ಕಾನೂನುಗಳನ್ನು ರಚಿಸಿ ಸಾಹುಕಾರಿ-ಸಹಕಾರಿಗಳಿಬ್ಬರೂ ಇರುವ ಹೈಬ್ರಿಡ್ ಸಹಕಾರಿಗಳನ್ನು ಹುಟ್ಟುಹಾಕುವ ಪ್ರಸ್ತಾಪವನ್ನು ಅಮಿತ್ ಶಾ ಸಚಿವಾಲಯ ಮುಂದಿಟ್ಟಿತು. Farmers Producers Organisation- FPO- ಮೋದಿ ಸರಕಾರ ಇತರ ಸಹಕಾರಿಗಳಲ್ಲಿ ಮುಂದಿಟ್ಟಿರುವ ಅಂತಹ ಒಂದು ಹೈಬ್ರಿಡ್ ಸಹಕಾರಿ. ಕ್ರಮೇಣ ಅದನ್ನು ಹಾಲು ಸಹಕಾರಿಯನ್ನೂ ಒಳಗೊಂಡಂತೆ ಎಲ್ಲದರಲ್ಲೂ ಜಾರಿ ಮಾಡುವ ಇರಾದೆಯನ್ನು ಅಮಿತ್ ಶಾ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಹೊಸ ಸಚಿವಾಲಯ ಅಸ್ತಿತ್ವಕ್ಕೆ ಬಂದಮೇಲೆ ಕಾರ್ಪೊರೇಟೀಕರಣಕ್ಕೆ ಪೂರಕವಾದ ಅಂತಹ 20 ಹೊಸ ಹೊಸ ಬದಲಾವಣೆಗಳನ್ನು ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ ಮಾಡಲಾಗಿದೆ.

ಕ್ರೋನಾಲಜಿ-4- ಬಹುರಾಜ್ಯ ಸಹಕಾರಿ ಒಕ್ಕೂಟ ಮಸೂದೆ 

ಇದರ ಮುಂದಿನ ಹಂತವಾಗಿ ಬಹುರಾಜ್ಯಗಳ ಸಹಕಾರಿಗಳ ನಿರ್ವಹಣೆ ಮತ್ತು ನಿಯಂತ್ರಣಗಳ ಬಗ್ಗೆ 2022ರ ಡಿಸೆಂಬರ್‌ನಲ್ಲಿ ಅಮಿತ್ ಶಾ ಅವರು ಸಂಸತ್ತಿನಲ್ಲಿ ಒಂದು ಹೊಸ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯನ್ನು ಬೇರೆಬೇರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದೇ ಸಹಕಾರಿಗಳ ನಿಯಂತ್ರಣ ಮತ್ತು ನಿರ್ವಹಣೆಗಳಲ್ಲಿ ಆಯಾ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಪರಮಾಧಿಕಾರವಿರುವಂತೆ ರೂಪಿಸಲಾಗಿದೆ. ಈ ಬಹುರಾಜ್ಯ ಸಹಕಾರಿಗಳ ಚುನಾವಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗುತ್ತದೆ. ಅದರಲ್ಲಿ ಕೇಂದ್ರದಿಂದ ನಾಮಾಂಕಿತವಾದ ಮೂವರು ಸದಸ್ಯರು ಇರುತ್ತಾರೆ. ಹಾಗೆಯೇ ಅದರ ನಿರ್ವಹಣೆಯಲ್ಲಿ. ಈ ಬಹುರಾಜ್ಯ ಒಕ್ಕೂಟಗಳ ನಿರ್ವಹಣೆಯಲ್ಲೂ, ವಿಸ್ತರಣೆ ಮತ್ತು ವಿಸರ್ಜನೆಯಲ್ಲೂ ಕೇಂದ್ರಕ್ಕೆ ಪ್ರಧಾನ ಪಾತ್ರವಿರುವಂತೆ ರೂಪಿಸಲಾಗಿದೆ.

ಕ್ರೋನಾಲಜಿ-5- ಅಮುಲ್-ನಂದಿನಿ ವಿಲೀನ ಪ್ರಸ್ತಾಪ

2022ರ ಡಿಸೆಂಬರ್‌ನಲ್ಲಿ ಮಂಡ್ಯದ ಗೆಜ್ಜಲಗೆರೆಯಲ್ಲಿ ನಂದಿನಿಯ ಬೃಹತ್ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದ ಅಮಿತ್ ಶಾ ಅವರು ದೇಶದ ಬಹುದೊಡ್ಡ ಸಹಕಾರಿಯಾದ ಅಮುಲ್ ಮತ್ತು ನಂದಿನಿಗಳು ವಿಲೀನವಾದರೆ ಬೃಹತ್ ಹಾಲು ಒಕ್ಕೂಟ ಸಾಧ್ಯವಾಗುತ್ತದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಮುಂಚೆ 2022ರ ಅಕ್ಟೋಬರ್‌ನಲ್ಲಿ ಸಿಕ್ಕಿಂನಲ್ಲಿ ಭಾಷಣ ಮಾಡುತ್ತಾ ‘‘ಅಮುಲ್ ಜೊತೆಗೆ ಇತರ ಐದು ರಾಜ್ಯಗಳ ಹಾಲು ಒಕ್ಕೂಟಗಳು ವಿಲೀನಗೊಂಡು ಒಂದು ಬೃಹತ್ ಬಹುರಾಜ್ಯ ಹಾಲು ಸಹಕಾರಿ ಒಕ್ಕೂಟ ಸ್ಥಾಪನೆಯಾಗಲಿದೆ’’ ಎಂದು ಘೋಷಿಸಿದ್ದರು. ಅದಾದ ಒಂದೇ ತಿಂಗಳಲ್ಲಿ ಸಂಸತ್ತಿನಲ್ಲಿ ಕೇಂದ್ರ ಸರಕಾರದ ನೇರ ಆಧಿಪತ್ಯ ಸಾಧ್ಯ ಮಾಡುವ ಬಹುರಾಜ್ಯ ಸಹಕಾರಿ ಸಂಸ್ಥೆಗಳ ಮಸೂದೆಯನ್ನು ಆಮಿತ್ ಶಾ ಮಂಡಿಸಿದ್ದರು. ಇವೆಲ್ಲಾ ಮಾಡಿ ಮುಗಿಸಿದ ನಂತರವೇ ಅಮಿತ್ ಶಾ ಮಂಡ್ಯಕ್ಕೆ ಬಂದು ಅಮುಲ್-ನಂದಿನಿ ವಿಲೀನ ಪ್ರಸ್ತಾಪ ಮಂಡಿಸಿದರು. ಹೀಗಾಗಿ ಅದು ಯೋಜಿತ ಹುನ್ನಾರದ ಪ್ರಸ್ತಾಪವೇ ವಿನಾ ಬಾಯಿ ಜಾರಿ ಆಡಿದ ಮಾತಲ್ಲ.

ಕ್ರೋನಾಲಜಿ-6-ಕೇಂದ್ರದಿಂದ ಮೂರು ರಾಷ್ಟ್ರೀಯ ಬಹುರಾಜ್ಯ ರಫ್ತು ಸಹಕಾರಿ ಸ್ಥಾಪನೆ

ಸಹಕಾರಿಗಳ ಕಾರ್ಪೊರೇಟೀಕರಣದ ಯೋಜನೆಯ ಮುಂದಿನ ಹಂತವಾಗಿ 2023ರ ಜನವರಿ 11ರಂದು ಮೋದಿ ಸರಕಾರ ಮೂರು ರಾಷ್ಟ್ರೀಯ ಬಹುರಾಜ್ಯ ರಫ್ತು ಸಹಕಾರಿಗಳನ್ನು ಸ್ಥಾಪಿಸಿತು. ಅದರಲ್ಲಿ ಒಂದು ಹಾಲು ಉತ್ಪನ್ನ ರಫ್ತು ಸಹಕಾರಿ. ಅದಕ್ಕೆ ಅಮುಲ್ ಸಂಸ್ಥೆಯನ್ನೇ ನೇತೃತ್ವ ವಹಿಸುವ ಸಂಯೋಜಕನ್ನಾಗಿ ಅಮಿತ್ ಶಾ ನೇತೃತ್ವದ ಸಹಕಾರಿ ಸಚಿವಾಲಯ ನೇಮಿಸಿತು. ಅದರ ಮುಂದಿರುವ ಯೋಜನೆ 2025ರ ವೇಳೆಗೆ ಜಾಗತಿಕ ಹಾಲು ಮಾರುಕಟ್ಟೆಯಲ್ಲಿ ಭಾರತವು ಶೇ. 30ರಷ್ಟು ಪಾಲನ್ನು ಹೊಂದುವಂತೆ ಮಾಡಲು ಹಾಲು ಸಂಸ್ಕರಣೆ, ಉತ್ಪನ್ನಗಳ ಜಾಗತಿಕ ಮಾರಾಟಕ್ಕೆ ಬೇಕಾದಂತೆ ಭಾರತದ ಹಾಲು ಉತ್ಪಾದಕ ವಲಯವನ್ನು ಸಜ್ಜುಗೊಳಿಸುವುದು. ಅದಕ್ಕೆ ಸಂಸ್ಕರಣೆ ಮತ್ತು ಜಾಗತಿಕ ಮಾರಾಟ ವಲಯದಲ್ಲಿ ಕಾರ್ಪೊರೇಟ್ ಬಂಡವಾಳ ಮತ್ತು ಭಾಗೀದಾರಿಕೆಯನ್ನು ಉತ್ತೇಜಿಸುವುದು.

ಕ್ರೋನಾಲಜಿ-7-ದೇಶದ 2 ಲಕ್ಷ ಪಂಚಾಯತ್‌ಗಳಲ್ಲಿ ಕೇಂದ್ರದ ಹಾಲು ಸಂಗ್ರಹ ಸಮಿತಿ

ಇದೇ ಮಾರ್ಚ್ 10ರಂದು ಗುಜರಾತಿನ ಡೇರಿ ಅಸೋಸಿಯೇಶನ್‌ನ ಸಮ್ಮೇಳನದಲ್ಲಿ ಮಾತನಾಡುತ್ತಾ ಅಮಿತ್ ಶಾ ಅವರು ದೇಶದ 2 ಲಕ್ಷ ಪಂಚಾಯತ್‌ಗಳಲ್ಲಿ ಕೇಂದ್ರ ಸರಕಾರವು ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡಿನ ಸಹಕಾರದೊಂದಿಗೆ ನೇರವಾಗಿ ಹಾಲು ಉತ್ಪಾದಕ ಮತ್ತು ಸಂಗ್ರಹ ಸಮಿತಿಗಳನ್ನು ಸ್ಥಾಪಿಸುವುದಾಗಿಯೂ ಮತ್ತು ಈ ಎರಡು ಲಕ್ಷ ಸಮಿತಿಗಳು ಅಮುಲ್ ನೇತೃತ್ವದ ರಫ್ತು ಸಹಕಾರಿಯೊಂದಿಗೆ ನೇರ ಸಂಬಂಧ ಹೊಂದಿರುತ್ತದೆಂದು ತಮ್ಮ ಯೋಜನೆಯನ್ನು ಸ್ಪಷ್ಟಗೊಳಿಸಿದರು. ಅದರಿಂದ ಭಾರತದ ಹಾಲು ರಫ್ತು ಈಗಿಗಿಂತ ನಾಲ್ಕು ಪಟ್ಟು ಹೆಚ್ಚಾಗುವುದೆಂದು ಘೋಷಿಸಿದರು. ಇದರ ಅರ್ಥವೇನು? ಇರುವ ಸಹಕಾರಿಗಳು ಒಂದೋ ಅಮುಲ್‌ಗೆ ಅಧೀನವಾಗಬೇಕು ಅಥವಾ ನಂದಿನಿಯಂಥ ಬಲಶಾಲಿಯಾದ ಹಾಗೂ ಅಮುಲ್ ಜೊತೆ ವಿಲೀನವಾಗದ ಸಹಕಾರಿಗಳಿದ್ದಾಗ ಅಂತಹ ಕಡೆಗಳಲ್ಲಿ ಕೇಂದ್ರವೇ ಅಮುಲ್ ಅನ್ನು ಆ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಅಥವಾ ಪರ್ಯಾಯವಾಗಿ ವಿಸ್ತರಿಸಲಿದೆ. ಇದು ಅಮುಲ್ ಕರ್ನಾಟಕದಲ್ಲಿ ನಂದಿನಿಗೆ ಪರ್ಯಾಯವಾಗಿ ಮತ್ತು ಪ್ರತ್ಯೇಕವಾಗಿ ತಾಜಾ ಹಾಲು ಮಾರುಕಟ್ಟೆಯಲ್ಲೂ ಮತ್ತು ಅದರ ಉತ್ಪಾದನೆ ಮತ್ತು ಸಂಗ್ರಹದಲ್ಲೂ ಕಾಲಿಡುತ್ತಿರುವ ಸಂದರ್ಭದ ಹಿನ್ನೆಲೆ.

ಕ್ರೋನಾಲಜಿ-8- ನಂದಿನಿ ಹಾಲಿನ ಅಭಾವ, ನಂದಿನಿ ಮೊಸರಿನ ‘ದಹಿ’ಕರಣ

ಕೇಂದ್ರದ ಮೋದಿ ಸರಕಾರದ ಈ ರೈತ ವಿರೋಧಿ, ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಕರ್ನಾಟಕದ ರೈತಾಪಿಯನ್ನು ರಕ್ಷಿಸಬೇಕಾದ ಬೊಮ್ಮಾಯಿ ಸರಕಾರ ನಂದಿನಿಯನ್ನು ನಾಶ ಮಾಡಿ ಅಮುಲೀಕರಿಸಿ ಆನಂತರ ಕಾರ್ಪೊರೇಟೀಕರಿಸುವ ಎಲ್ಲಾ ಯೋಜನೆಗಳಿಗೂ ಸಂಪೂರ್ಣ ಸಹಕರಿಸುತ್ತಾ ಬಂದಿತು. ಅದರ ಭಾಗವಾಗಿಯೇ ಹಿಂದೆಂದೂ ಇಲ್ಲದಂತೆ ನಂದಿನಿ ಉತ್ಪನ್ನಗಳ ದೊಡ್ಡ ಅಭಾವ ಕಾಣತೊಡಗಿತು. ಹಾಗೆಯೇ ರಾಜ್ಯಗಳಿಗೆ ನಿರ್ದಿಷ್ಟವಾಗಿದ್ದ ಸಹಕಾರಿಗಳನ್ನು ‘ರಾಷ್ಟ್ರೀಕರಿಸುವ’ ಯೋಜನೆಯ ಭಾಗವಾಗಿ ನಂದಿನಿಯ ಮೊಸರು ಪ್ಯಾಕೆಟ್‌ಗೆ ದೊಡ್ಡಕ್ಷರದಲ್ಲಿ ಹಿಂದಿಯಲ್ಲಿ ‘ದಹಿ’ ಎಂದು ಅಚ್ಚಾಗಬೇಕು, ಬೇಕಿದ್ದರೆ ಅದರ ಪಕ್ಕದಲ್ಲಿ ಸ್ಥಳೀಯ ಭಾಷೆಯಲ್ಲಿ ಮೊಸರು, ಥೈರ್, ಪೆರುಗು ಎಂದು ಅಚ್ಚು ಮಾಡಬೇಕು ಎಂಬ ಸುತ್ತೋಲೆಯನ್ನು ಕೇಂದ್ರದ ಆಹಾರ ಸುರಕ್ಷಾ ಇಲಾಖೆ ಪ್ರಕಟಿಸಿತು. ದಕ್ಷಿಣ ರಾಜ್ಯಗಳ ಬೃಹತ್ ಪ್ರತಿರೋಧದ ನಂತರ ಆ ಸುತ್ತೋಲೆಯನ್ನು ಕೇಂದ್ರ ವಾಪಸ್ ತೆಗೆದುಕೊಂಡಿದ್ದರೂ ಅದರ ಹಿಂದಿನ ಉದ್ದೇಶ ವಿವಿಧ ರಾಜ್ಯಗಳ ಸ್ವತಂತ್ರ ಹಾಲು ಸಹಕಾರಿಗಳನ್ನು ಕೇಂದ್ರದ ನಿಯಂತ್ರಣದಲ್ಲಿ ತರುವ ಭಾಗವೇ ಆಗಿದೆ.

ಕ್ರೋನಾಲಜಿ-9- ಬೆಂಗಳೂರಿನಲ್ಲಿ ಅಮುಲ್ ತಾಜಾ ಹಾಲು
ಈ ಯೋಜನೆಯ ಮುಂದುವರಿದ ಭಾಗವೇ 2023ರ ಎಪ್ರಿಲ್ 5ರಂದು ಬೆಂಗಳೂರಿಗರಿಗೆ ಅಮುಲ್ ತಾಜಾ ಹಾಲು ಸರಬರಾಜು ಮಾಡುವ ಬಗ್ಗೆ ಅಮುಲ್ ಸಂಸ್ಥೆ ಕೊಟ್ಟಿರುವ ಜಾಹೀರಾತು. ಈಗಾಗಲೇ ಪ್ರಾರಂಭದಲ್ಲೇ ಚರ್ಚಿಸಿರುವಂತೆ ಇನ್ನಾರು ತಿಂಗಳಲ್ಲಿ ಅಮುಲ್ ಸಂಸ್ಥೆಯೇ ನಂದಿನಿಗೆ ಪರ್ಯಾಯವಾದ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟಗಳನ್ನು ಪ್ರಾರಂಭಿಸಲಿದೆ. ಬಿಜೆಪಿ ಸರಕಾರವೇ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಲ್ಲಿ ನಂದಿನಿಯ ನಾಶ ಮತ್ತು ಅಮುಲಿನ ದಾಳಿ ಇನ್ನೂ ವೇಗವಾಗಿ ನಡೆಯಲಿದೆ.

ಬಿಜೆಪಿ ಸರಕಾರ ಹೊಸದಾಗಿ ಸ್ಥಾಪಿಸಿರುವ ಅಮುಲ್ ಸಂಯೋಜಕತ್ವದ ರಫ್ತು ಸಹಕಾರಿ ಸಂಸ್ಥೆ ಒಂದು ಕಾರ್ಪೊರೇಟ್ ನೇತೃತ್ವ ದ ಸಹಕಾರಿಯಾಗಲಿದ್ದು ಅಲ್ಲಿ ಹಾಲು ಉತ್ಪಾದನೆಯು ಕಾರ್ಪೊರೇಟ್ ರಫ್ತು ಯೋಜನೆಯ ಭಾಗವಾಗಿರುತ್ತದೆ ಮತ್ತು ಆ ರಫ್ತಿನ ಲಾಭ ವ್ಯಾಪಾರ ಮತ್ತು ಸಂಸ್ಕರಣಗಳಲ್ಲಿ ಪಾತ್ರ ವಹಿಸುವ ದೊಡ್ಡ ದೊಡ್ಡ ಕಾರ್ಪೊರೇಟುಗಳ ಪಾಲಾಗುತ್ತದೆ. ಹೊಸ ಬಹುರಾಜ್ಯ ಸಹಕಾರಿ ಮಸೂದೆಯ ನಿಯಮಾವಳಿಗಳಂತೆ ಒಮ್ಮೆ ಒಂದು ಸಹಕಾರಿಯು ಇಂತಹ ಬಹುರಾಜ್ಯ ಸಹಕಾರಿಯ ಭಾಗವಾಗಿಬಿಟ್ಟರೆ ಆಯಾ ರಾಜ್ಯ ಸರಕಾರಗಳಿಗೂ ತಮ್ಮ ರಾಜ್ಯದ ರೈತಾಪಿಯ ಹಿತರಕ್ಷಿಸುವುದು ಸಾಧ್ಯವಾಗುವುದಿಲ್ಲ. ಹೀಗೆ ಬಿಜೆಪಿ ಸರಕಾರದ ಕಾರ್ಪೊರೇಟ್ ಪರ ನೀತಿಗಳಿಂದಾಗಿ ನಂದಿನಿಯಂತಹ ಸಮೃದ್ಧ ಹಾಗೂ ರೈತ ಶ್ರಮದ ನಂದಿನಿ ಒಂದೋ ನಾಶವಾಗುತ್ತದೆ ಅಥವಾ ಕಾರ್ಪೊರೇಟ್ ಲೂಟಿಗೆ ಬಲಿಯಾಗುತ್ತದೆ. ಅದಕ್ಕೆ ಅಮುಲ್ ಅನ್ನು ಮೋದಿ ಸರಕಾರ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಅಷ್ಟೆ.

ಆದ್ದರಿಂದ ಕರ್ನಾಟಕದ ಸ್ವಾಭಿಮಾನಿ ರೈತರು ಮತ್ತು ಕರ್ನಾಟಕದ ಜನತೆ ಯಾವ ಕಾರಣಕ್ಕೂ ನಂದಿನಿಯ ಅಮುಲೀಕರಣಕ್ಕೆ ಅಥವಾ ಸಹಕಾರಿ ಕ್ಷೇತ್ರದ ಕಾರ್ಪೊರೇಟೀಕರಣಕ್ಕೆ ಅವಕಾಶ ಕೊಡದಂತೆ ಬೃಹತ್ ಜನಾಂದೋಲ�

Similar News