ಕೋಮುವಾದ-ಕೋಮುವಾದಿಗಳು ಸೋಲದೆ, ಬಿಜೆಪಿಗೆ ಸೋಲಾಗಬಹುದೇ?

Update: 2023-04-19 02:57 GMT

 ಮಾಜಿ, ಹಾಲಿ, ಭಾವಿ ಕೋಮುವಾದಿ ಪಕ್ಷಾಂತರಿಗಳನ್ನು, ಅವಕಾಶವಾದಿಗಳನ್ನು ಕಟ್ಟಿಕೊಂಡು ಸದ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೂ, ಅಧಿಕಾರಕ್ಕೆ ಬರುವ ಸರಕಾರ ಕೋಮುವಾದಿ ವಿರೋಧಿ ಅಜೆಂಡಾವನ್ನು ಜಾರಿ ಮಾಡಬಲ್ಲದೇ? ಕರ್ನಾಟಕದ ಸಂದರ್ಭದಲ್ಲಿ ಟಿಪ್ಪುಜಯಂತಿ ಮತ್ತೊಮ್ಮೆ ಶುರು ಮಾಡಬಲ್ಲದೇ? ಜಾನುವಾರು ಹತ್ಯಾ ನಿಷೇಧ ಮಸೂದೆ, ಮತಾಂತರ ನಿಷೇಧ ಮಸೂದೆ ರದ್ದಾಗುವುದೇ? ಕರ್ನಾಟಕದೊಳಗೆ ವಿವಿಧ ಇಲಾಖೆ, ಪ್ರದೇಶಗಳಲ್ಲಿ ರಾಜ್ಯಭಾರ ಮಾಡುತ್ತಿರುವ ವೈದಿಕ ರಿಪಬ್ಲಿಕ್ ರದ್ದಾಗುವುದೇ?


ಇಂದು, ಜನರ ಬಗ್ಗೆ ಮತ್ತು ದೇಶದ ಬಗ್ಗೆ ಕಾಳಜಿಯುಳ್ಳ ಪ್ರಜ್ಞಾವಂತ ರೆಲ್ಲರೂ ಬಿಜೆಪಿ ಸೋಲಬೇಕೆಂದು ಬಯಸುತ್ತಿದ್ದಾರೆ. ಏಕೆಂದರೆ ಬಿಜೆಪಿ ಎಂಬುದು ಭಾರತೀಯ ಹಿಟ್ಲರ್‌ವಾದಿಗಳ ರಾಜಕೀಯ ಅಭಿವ್ಯಕ್ತಿಯಾಗಿದೆ. ಏನಿಲ್ಲವೆಂದರೂ ಬಿಜೆಪಿಯನ್ನು ಕನಿಷ್ಠ ಪಕ್ಷ ನೇರ ಅಧಿಕಾರದಿಂದಲಾದರೂ ದೂರವಿಟ್ಟರೆ ಒಂದಷ್ಟು ಅನಾಹುತ ಕಡಿಮೆಯಾದೀತು ಎಂಬುದು ಕಳೆದ ನಾಲ್ಕು ವರ್ಷಗಳ ಬಿಜೆಪಿಯ ಕೋಮುವಾದಿ-ಜನದ್ರೋಹಿ ಆಡಳಿತವನ್ನು ಅನುಭವಿಸಿದ, ಕಣ್ಣು-ಕಿವಿ ಕಳೆದುಕೊಳ್ಳದ ಬಹುಪಾಲು ಜನರ ಅಭಿಪ್ರಾಯವೂ ಆಗಿದೆ. ಈ ಅಭಿಪ್ರಾಯದ ಹಿಂದಿರುವ ಕಾಳಜಿ ಮತ್ತು ಬದ್ಧತೆಗಳು ಅನುಸರಣೀಯ ಮತ್ತು ಅಭಿನಂದನೀಯವೂ ಆಗಿದೆ. ಈ ನಿಟ್ಟಿನಲ್ಲಿ ಕೆಲವು ಹಿರಿಯರು ಮತ್ತು ಕಿರಿಯರು ದಣಿವರಿಯದಂತೆ ನಿರಂತರ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆದರೆ ಈ ಕಾರ್ಯಕ್ರಮಗಳು ಕೋಮುವಾದಿಗಳನ್ನು ಸೋಲಿಸುವ ಉದ್ದೇಶಕ್ಕೆ ನಿಜಕ್ಕೂ ಪೂರಕವಾಗುತ್ತದೆಯೇ ಎಂಬ ಪ್ರಶ್ನೆಗಳು ಕಳೆದೆರಡು ವಾರಗಳ ಬೆಳವಣಿಗೆಗಳಿಂದಾಗಿ ಸಹಜವಾಗಿಯೇ ಸಾಕಷ್ಟು ಜನರಲ್ಲಿ ಹುಟ್ಟುತ್ತಿದೆ. ಬಿಜೆಪಿ ಅಧಿಕಾರದಿಂದ ದೂರವಿರಬೇಕೆಂದರೆ, ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ ಆ ಜಾಗವನ್ನು ಕಾಂಗ್ರೆಸ್ ಒಂಟಿಯಾಗಿಯೋ ಅಥವಾ ಕಾಂಗ್ರೆಸ್ -ಜೆಡಿಎಸ್ ಜಂಟಿಯಾಗಿಯೋ ತುಂಬಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಗಳಿಗಿಂತಲೂ ಜನಪರವಾಗಿರುವ ಪಕ್ಷಗಳಿಗೆ ಬೆರಳೆಣಿಕೆಯಷ್ಟು ಸೀಟುಗಳನ್ನು ಗೆಲ್ಲುವ ಶಕ್ತಿಯೂ ಇಲ್ಲ. ಇನ್ನು ಜೆಡಿಎಸ್ ಪಕ್ಷದ ಕೋಮುವಾದಿ ವಿರೋಧಿ ಪ್ರಣಾಳಿಕೆ ಮತ್ತು ಇತಿಹಾಸ ಗಟ್ಟಿಯಾದ ಭರವಸೆ ಹುಟ್ಟಿಸುವಂತಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಗುರಿ ಹೊಂದಿರುವ ಹಲವು ಶಕ್ತಿಗಳು ಕಾಂಗ್ರೆಸ್‌ನ ಬಗ್ಗೆ ನೂರೆಂಟು ದೂರುಗಳಿದ್ದರೂ ಸದ್ಯಕ್ಕೆ ಬಾರಾ ಖೂನ್ ಮಾಫಿ ಮಾಡಿ, ಸದ್ಯದ ಶತ್ರುವನ್ನು ಸೋಲಿಸಲು ಕಾಂಗ್ರೆಸ್ ಪರವಾಗಿ ಕಾಂಗ್ರೆಸಿಗರಿಗಿಂತ ನಿಷ್ಠವಾಗಿ, ಕೆಲವೊಮ್ಮೆ ಅವಿಮರ್ಶಾತ್ಮಕ ಬ್ಯಾಟಿಂಗ್ ಆಡುತ್ತಿದ್ದಾರೆ.

ಇವರಲ್ಲಿ ಹೆಚ್ಚಿನ ಜನರು ತಮ್ಮ ಜೀವಮಾನದ ಬಹುಪಾಲು ಸಮಯವನ್ನು ಕಾಂಗ್ರೆಸನ್ನು ತೀವ್ರವಾಗಿ ವಿರೋಧಿಸಿದವರೇ. ಹೀಗಾಗಿ ಅವರು ಪ್ರಧಾನ ಶತ್ರುವನ್ನು ಸೋಲಿಸಲು ಸದ್ಯಕ್ಕೆ ಅವರ ಪ್ರಕಾರ ಕಡಿಮೆ ದುಷ್ಟನಾದ ಕಾಂಗ್ರೆಸ್ ಕೊಡುತ್ತಿರುವ ಬೆಂಬಲವನ್ನು ಕಾಂಗ್ರೆಸ್‌ನ ಸಮರ್ಥನೆಗೆ ಸಮೀಕರಿಸಲಾಗದು. ಸದ್ಯದ ಶತ್ರುವನ್ನು ನೀಗಿಸಿಕೊಂಡರೆ ಗೆದ್ದವರ ಜೊತೆ ನಂತರ ಗುದ್ದಾಡಬಹುದು ಎಂಬ ಅವರ ವಾದದ ಹಿಂದಿನ ಆತಂಕಗಳನ್ನು ನಿರಾಕರಿಸಲಾಗುವುದಿಲ್ಲವಾದರೂ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರ ರಾಜಕೀಯ ನಿರೀಕ್ಷೆಗಳನ್ನು ಮಾತ್ರ ಅವರು ನೆಚ್ಚಿಕೊಂಡಿರುವ ಪಕ್ಷಗಳು ಹೆಚ್ಚೆಚ್ಚು ಹುಸಿ ಮಾಡುತ್ತಿರುವುದಂತೂ ಸತ್ಯ. ಅದರಲ್ಲೂ ವಿಶೇಷವಾಗಿ ಅತೃಪ್ತ ಬಿಜೆಪಿಯ ನಾಯಕರು ಹಾಗೂ ಹಲವು ಪರಮ ಕೋಮುವಾದಿಗಳು ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆ ದಾಂಗುಡಿ ಇಡುತ್ತಿರುವುದು, ಅವರನ್ನು ಕಾಂಗ್ರೆಸ್-ಜೆಡಿಎಸ್‌ಗಳು ಎರಡೂ ಕೈಗಳಿಂದ ತಬ್ಬಿಕೊಂಡು ಬರಮಾಡಿ ಕೊಳ್ಳುತ್ತಿರುವುದು ಬಿಜೆಪಿಯನ್ನು ಸೋಲಿಸುವುದು ಎಂದರೇನು ಎಂಬ ಪ್ರಶ್ನೆಯನ್ನು ಗಂಭೀರವಾಗಿ ಮುನ್ನೆಲೆಗೆ ತಂದಿದೆ. ಕೋಮುವಾದವನ್ನು ಮತ್ತು ಕೋಮುವಾದಿಗಳನ್ನು ಸೋಲಿಸದೆ ಬಿಜೆಪಿಯನ್ನು ಸೋಲಿಸಬಹುದೇ? ಒಂದು ವೇಳೆ ಬಿಜೆಪಿ ಸೋತರೂ ಅದು ಕೋಮುವಾದದ ಸೋಲಾಗಿರಬಹುದೇ? ಬಿಜೆಪಿಯ ಸೋಲನ್ನು ಅಥವಾ ಬಿಜೆಪಿಯೇತರ ಪಕ್ಷದ ಗೆಲುವನ್ನು ಕೋಮುವಾದದ ಸೋಲೆಂದೂ-ಸೆಕ್ಯುಲರಿಸಂನ ಗೆಲುವೆಂದೂ ಬಣ್ಣಿಸಬಹುದೇ? ಅಂತಹ ಗೆಲುವು ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವುದೇ?

ಬಿಜೆಪಿ ಮತ್ತು ಕಾಂಗ್ರೆಸ್‌ಗಳು (ಅಥವಾ ಇತರ ವಿರೋಧ ಪಕ್ಷಗಳು) ಎರಡೂ ಒಂದೇ ಅನ್ನುವುದು ರಾಜಕೀಯ ದುಡುಕು ಎನ್ನುವುದು ಖಂಡಿತಾ ನಿಜ. ಆದರೆ ಅವರೆಡರ ನಡುವಿನ ಅಂತರವೆಷ್ಟು? ಈ ಅಂತರವನ್ನು ಫ್ಯಾಶಿಸಂ ಮತ್ತು ಫ್ಯಾಶಿಸಂ ವಿರೋಧದಷ್ಟು ಆಳ-ಅಗಲವಿರುವ ಅಂತರವೆಂದು ಭಾವಿಸುವುದು ರಾಜಕೀಯ ಮುಠ್ಠಾಳತನವೇ ಆಗಿಬಿಡುತ್ತದೆ. ಅಶೋಕ ವಿಶ್ವವಿದ್ಯಾನಿಲಯದ 'ತ್ರಿವೇದಿ ಸೆಂಟರ್ ಫಾರ್ ಪೊಲಿಟಿಕಲ್ ಡೇಟಾ' ಎಂಬ ಸಂಸ್ಥೆಯು ಕಳೆದ ಐದು ವರ್ಷಗಳಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿದಿರುವ ವಿದ್ಯಮಾನಗಳ ಬಗ್ಗೆ ಒಂದು ಅಧ್ಯಯನ ಮಾಡಿದೆ. ಅದರ ಪ್ರಕಾರ ಇಂದು ದೇಶಾದ್ಯಂತ 31 ವಿಧಾನ ಸಭೆಗಳಲ್ಲಿ 1,418 ಬಿಜೆಪಿ ಶಾಸಕರಿದ್ದರೆ ಅವರಲ್ಲಿ 400 ಕ್ಕೂ ಹೆಚ್ಚು ಜನ ಪ್ರಧಾನವಾಗಿ ಕಾಂಗ್ರೆಸ್ ಮತ್ತು ಇತರ 'ಸೆಕ್ಯುಲರ್' ಪಕ್ಷಗಳಿಂದ ಜಿಗಿದು ಹೋಗಿರುವ ಕಾಂಗ್ರೆಸ್ ನಾಯಕರೇ. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಜನತಾ ಪರಿವಾರದಿಂದ ಚಡ್ಡಿ ತೊಟ್ಟರೆ, ಅಸ್ಸಾಮಿನ ಹಿಮಂತ್ ಬಿಸ್ವಾಸ್ ಶರ್ಮಾರಿಂದ ಹಿಡಿದು ಇಂದು ಈಶಾನ್ಯ ರಾಜ್ಯಗಳಲ್ಲಿರುವ ಎಲ್ಲಾ ಬಿಜೆಪಿ ಮುಖ್ಯಮಂತ್ರಿಗಳು ಹಿಂದಿನ ಹಿರಿಯ ಕಾಂಗ್ರೆಸ್ ನಾಯಕರೇ. (https://www.thehindu.com/data/data-a-decade-of-turncoats/article65576046.ece) 

ಬಿಜೆಪಿಯ ಸೋಲು ಕೋಮುವಾದದ ಸೋಲಾಗುತ್ತಿಲ್ಲವೇಕೆ

ಹೀಗಾಗಿ, ಮಾಜಿ, ಹಾಲಿ, ಭಾವಿ ಕೋಮುವಾದಿ ಪಕ್ಷಾಂತರಿಗಳನ್ನು, ಅವಕಾಶವಾದಿಗಳನ್ನು ಕಟ್ಟಿಕೊಂಡು ಸದ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೂ, ಅಧಿಕಾರಕ್ಕೆ ಬರುವ ಸರಕಾರ ಕೋಮುವಾದಿ ವಿರೋಧಿ ಅಜೆಂಡಾವನ್ನು ಜಾರಿ ಮಾಡಬಲ್ಲದೇ? ಕರ್ನಾಟಕದ ಸಂದರ್ಭದಲ್ಲಿ ಟಿಪ್ಪು ಜಯಂತಿ ಮತ್ತೊಮ್ಮೆ ಶುರು ಮಾಡಬಲ್ಲದೇ? ಜಾನುವಾರು ಹತ್ಯಾ ನಿಷೇಧ ಮಸೂದೆ, ಮತಾಂತರ ನಿಷೇಧ ಮಸೂದೆ ರದ್ದಾಗುವುದೇ? ಕರ್ನಾಟಕದೊಳಗೆ ವಿವಿಧ ಇಲಾಖೆ, ಪ್ರದೇಶಗಳಲ್ಲಿ ರಾಜ್ಯಭಾರ ಮಾಡುತ್ತಿರುವ ವೈದಿಕ ರಿಪಬ್ಲಿಕ್ ರದ್ದಾಗುವುದೇ? ಅಥವಾ ಭಾವಿ ಬಿಜೆಪಿಯೇತರ ಸರಕಾರ ಟಿಪ್ಪುಜಯಂತಿ ಜಾರಿ ಮಾಡಿದರೂ ಅದರ ವಿರುದ್ಧ ಸಂಘಪರಿವಾರ ಸೃಷ್ಟಿಸಬಹುದಾದ ಸಾಮಾಜಿಕ ಅಶಾಂತಿಯನ್ನು ಕಾನೂನಾತ್ಮಕವಾಗಿ ಮೆಟ್ಟಿ ನಿಲ್ಲುವ ಉದ್ದೇಶ ಅಥವಾ ನಿಯತ್ತು ಅಥವಾ ಸಿದ್ಧತೆ ಅಥವಾ ಜನಸಂಘಟನೆ ಯಾವುದಾದರೂ ಪಕ್ಷಕ್ಕಿದೆಯೇ? ಅಗ ಅನಗತ್ಯವಾಗಿ ಕೋಮುವಾದಿಗಳ ಶಕ್ತಿಯನ್ನು ಹೆಚ್ಚಿಸುವುದೇಕೆ ಎಂಬ ನೆಪದಲ್ಲಿ ಟಿಪ್ಪುಜಯಂತಿ ರದ್ದತಿ ಹಾಗೆಯೇ ಮುಂದುವರಿದು ಹಿಂದುತ್ವದ ಅಜೆಂಡಾಗೆ ಕುಮ್ಮಕ್ಕಾಗುವುದಿಲ್ಲವೇ? ಅಷ್ಟೆಲ್ಲಾ ಏಕೆ? 'ಭಾರತ್ ಜೋಡೊ ಯಾತ್ರೆ' ಟಿಪ್ಪುವಿನ ಶ್ರೀರಂಗಪಟ್ಟಣದಲ್ಲಿ ಮೂರು ದಿನಗಳ ಕಾಲ ತಂಗಿದ್ದರೂ ಯಾವೊಬ್ಬ ನಾಯಕರೂ ಟಿಪ್ಪು ಹುತಾತ್ಮನಾದ ಜಾಗಕ್ಕೆ ಭೇಟಿ ಕೊಡದಿದ್ದುದು ರಾಜಕೀಯ ಜಾಣ್ಮೆಯ ಪಟ್ಟಿಗೆ ಹಾಕಬಹುದೇ? ಏಕೆಂದರೆ ಅದರಿಂದಾಗಿ ಟಿಪ್ಪುವಿನ ಬಗ್ಗೆ ಹಿಂದುತ್ವ ರಾಜಕಾರಣದ ಅಪಪ್ರಚಾರವನ್ನು ಹಿಮ್ಮೆಟ್ಟಿಸದೆ ಅದಕ್ಕೆ ಮತ್ತಷ್ಟು ಮಾನ್ಯತೆಯನ್ನೇ ಒದಗಿಸಲಾಯಿತು. ಇದೇ ಹಿಂದುತ್ವದ ಹೆಜಿಮೊನಿ..ಯಾಜಮಾನ್ಯ. ಇದನ್ನು ಜನಮಾನಸದಲ್ಲಿ ಸೋಲಿಸದೆ ಕೋಮುವಾದ-ಕೋಮುವಾದಿ-ಬಿಜೆಪಿ ಸೋಲುವುದಿಲ್ಲ. ಹೀಗಾಗಿ ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಸೋತರೂ ಕೋಮುವಾದ ಮತ್ತೊಮ್ಮೆ ಗೆದ್ದಿರುತ್ತದೆ. ಅಲ್ಲವೇ?

ಉದಾಹರಣೆಗೆ:

ಹಿಂದುತ್ವದ ಹೆಜಿಮೊನಿ ಮತ್ತು ಭಾರತದ ಪ್ರಜಾತಂತ್ರ

ಬಾಬರಿ ಮಸೀದಿ ಕೆಡವಿದ್ದು ತಪ್ಪುಎಂದು ಇಂದು ಯಾವ ವಿರೋಧ ಪಕ್ಷಗಳೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಬದಲಿಗೆ ಕಳೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್, ಆಪ್, ಬಿಎಸ್‌ಪಿ ಮತ್ತು ಎಸ್‌ಪಿಯಂತಹ ಎಲ್ಲಾ 'ಸೆಕ್ಯುಲರ್' ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದಲೇ ಪ್ರಾರಂಭಿಸಿ ತಾವು ಅಧಿಕಾರಕ್ಕೆ ಬಂದರೆ ಬಿಜೆಪಿಗಿಂತ ಬೇಗ ಮತ್ತು ಭವ್ಯವಾದ ರಾಮಮಂದಿರ ಕಟ್ಟಿಸಿಕೊಡುತ್ತೇವೆ ಎಂದೇ ಭರವಸೆ ನೀಡಿದ್ದವು. ಈ ಎಲ್ಲಾ ಪಕ್ಷಗಳ ಯುವ ಘಟಕಗಳು ಭವ್ಯ ರಾಮಮಂದಿರಕ್ಕೆ ಹಣಕಾಸು ಸಂಗ್ರಹವನ್ನೂ ಮಾಡಿದವು. ಹಾಗೆಯೇ ಸಾಮಾಜಿಕ ನ್ಯಾಯದ ವಿರುದ್ಧ ಬ್ರಾಹ್ಮಣಶಾಹಿ ಕುತಂತ್ರದ ಘನೀಭವಿಸಿದ ಕಾರ್ಯತಂತ್ರವಾಗಿರುವ ಇಡಬ್ಲುಎಸ್ ಮೀಸಲಾತಿಯನ್ನು ಸಕಲ ವಿರೋಧ ಪಕ್ಷಗಳೂ ಸ್ವಾಗತಿಸಿದವು. ಪ್ರಜಾತಂತ್ರ ದೇಶಕ್ಕೆ ಕಳಂಕವಾಗಿರುವ ಯುಎಪಿಎ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ... ಬರಲಿರುವ ರಾಜಸ್ಥಾನದ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಾನು ಕೂಡ ಹಿಂದೂ ಪಕ್ಷವೇ ಎಂದು ಸಾಬೀತು ಪಡಿಸಲು ''ಸನಾತನ ಧರ್ಮವನ್ನು ಉಳಿಸಿ-ಬೆಳೆಸುವ ಲಕ್ಷವನ್ನು ಹೊಂದಿರುವ'' ವೇದ ವಿದ್ಯಾನಿಲಯಗಳಿಗೆ ಮತ್ತು ಸಂಸ್ಕೃತಕ್ಕೆ ನೂರಾರು ಕೋಟಿ ರೂ. ವೆಚ್ಚಮಾಡಿ ಅಪಾರ ಪೋಷಣೆ ನೀಡುತ್ತಿದೆ. ಇದರ ಜೊತೆಗೆ ಇತ್ತೀಚೆಗೆ 369 ಅಡಿ ಎತ್ತರದ ಜಗತ್ತಿನಲ್ಲೇ ದೊಡ್ಡದಾದ ಶಿವಮೂರ್ತಿಯನ್ನು ಸ್ಥಾಪಿಸಿ ಕರ್ನಾಟಕದ ಬಿಜೆಪಿಗಳಿಗೆ ಸವಾಲನ್ನೇ ಹಾಕಿದೆ.

ಛತ್ತೀಸ್‌ಗಡ ಕಾಂಗ್ರೆಸ್ ಪಕ್ಷ 2023ರ ಜೂನ್ ಒಳಗೇ ಛತ್ತೀಸ್‌ಗಡದಲ್ಲಿ 8 ಕಡೆಗಳಲ್ಲಿ ಬೃಹತ್ ರಾಮ ಪ್ರತಿಮೆಯನ್ನು ಸ್ಥಾಪಿಸುತ್ತಿದೆ. ಇದರ ಜೊತೆಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆಯೆಂದು ಹೇಳಲ್ಪಡುವ ಛತ್ತೀಸ್ ಗಡದ ಪ್ರದೇಶಗಳಲ್ಲಿ 'ರಾಮ ವನವಾಸ ಗಮನ ಪ್ರವಾಸ' ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಹಸುವಿನ ಪವಿತ್ರ ಗಂಜಲ ಸಂಗ್ರಹಕ್ಕೆ ಒಂದು ಇಲಾಖೆಯನ್ನು ಪ್ರಾರಂಭಿಸಿದೆ. ಇವೆಲ್ಲವನ್ನೂ ಕೂಡ ರಾಜಕೀಯ ಜಾಣ್ಮೆಯ ಲೆಕ್ಕಕ್ಕೆ ಸೇರಿಸಿ ಸದ್ಯಕ್ಕೆ ಛತ್ತೀಸ್‌ಗಡದಲ್ಲಿ ಬಿಜೆಪಿಯ ಅಪಾಯವಿಲ್ಲ ಎಂದು ಕೊಂಡು ಸಮಾಧಾನಿಸಿಕೊಳ್ಳಬಹುದು. ಆದರೆ ಇವೆಲ್ಲವೂ ಹಿಂದೂ ರಾಷ್ಟ್ರವನ್ನು ಕಟ್ಟುತ್ತಿರುವ ಇಟ್ಟಿಗೆಗಳು ಎಂದು ಅರ್ಥಮಾಡಿಕೊಂಡಲ್ಲಿ ಬಿಜೆಪಿಯೇತರ ಸರಕಾರಗಳೂ ಅದನ್ನೇ ಮಾಡುತ್ತಿವೆ ಎಂದಾಗಲಿಲ್ಲವೇ? ಹಾಗಿದ್ದಲ್ಲಿ ರಾಜಸ್ಥಾನದಲ್ಲಿ ಮತ್ತು ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತಿದೆ ಎಂದು ಹೇಗೆ ಹೇಳಲು ಸಾಧ್ಯ? ಇವು ಕೇವಲ ಕೆಲವು ಉದಾಹರಣೆಗಳು. ಇಂಥ ಹತ್ತು ಹಲವಿವೆ. ಇದು ಕೇವಲ ಕಾಂಗ್ರೆಸ್‌ನ ಕಥೆಯಲ್ಲ. ಮೋದಿಗೆ ಪರ್ಯಾಯವೆಂಬಂತೆ ಬಿಂಬಿತವಾದ ಆಮ್ ಆದ್ಮಿ ಪಕ್ಷ ಪ್ರತೀ ಸಂದರ್ಭದಲ್ಲೂ ತಾನು ಬಿಜೆಪಿಗಿಂತಲೂ ಹೆಚ್ಚಿನ ಹಿಂದುತ್ವವಾದಿ ಎಂದು ಸಾಬೀತು ಮಾಡುವ ಪೈಪೋಟಿಗೆ ಬಿದ್ದಿರುತ್ತದೆ.

ರೂಪಾಯಿ ನೋಟಿನಲ್ಲಿ ಲಕ್ಷ್ಮೀ ಗಣೇಶ ಫೋಟೊ, ಎಲ್ಲಾ ದೇವಸ್ಥಾನಗಳಲ್ಲಿ ದಿಲ್ಲಿ ಸರಕಾರದಿಂದ ಅಧಿಕೃತವಾಗಿ ಹನುಮಾನ್ ಚಾಲಿಸ್ ಪಠಣ, ಅಂಬೇಡ್ಕರ್ ವಾದಿ ಮಂತ್ರಿಯ ಮಂತ್ರಿಗಿರಿ ರದ್ದು, ಮುಸ್ಲಿಮ್ ವಿರೋಧಿ ದಂಗೆಗಳಿಗೆ ಮೂಕ ಬೆಂಬಲ..ಒಂದೇ ಎರಡೇ ..ಆಪ್ ಪಕ್ಷವಿದ್ದರೆ ಸಂಘಪರಿವಾರಕ್ಕೆ ಬಿಜೆಪಿಯ ಅಗತ್ಯವೇ ಬೀಳುವುದಿಲ್ಲ ಎಂಬಂತೆ ಅದು ಹಿಂದುತ್ವದ ಹೆಜಿಮೊನಿಯ ದಾಸ. ಚುನಾವಣಾ ರಾಜಕಾರಣವನ್ನು ಹೊರತು ಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯ ಎದುರು ಚುನಾವಣಾ ಪರ್ಯಾಯ ಎಂದು ಭಾವಿಸಲ್ಪಡುವ ಇತರ ಯಾವುದೇ ವಿರೋಧ ಪಕ್ಷಗಳಿಗೆ ಬಿಜೆಪಿಯ ಸಾಮಾಜಿಕ-ರಾಜಕೀಯ ಸಾಂಸ್ಕೃತಿಕ ಅಜೆಂಡಾಗಳಿಗೆ ಪರ್ಯಾಯವಾದ ಸಂಘಟನೆಯಾಗಲೀ, ತಿಳವಳಿಕೆಯಾಗಲೀ ಇಲ್ಲ. ಬದಲಿಗೆ ಆಯಾ ಪಕ್ಷಗಳೂ ಸಂಘಪರಿವಾರದ ಈ ಅಜೆಂಡಾಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೂರಕವಾದ ಕೆಲಸವನ್ನೇ ಮಾಡುತ್ತಾ ಬಂದಿವೆ.

ಹೀಗಾಗಿ ಈ ವಿರೋಧ ಪಕ್ಷಗಳು ಹೆಚ್ಚೆಂದರೆ ಬಿಜೆಪಿ ವಿರೋಧಿ ಪಕ್ಷಗಳೇ ಅಥವಾ ಫ್ಯಾಶಿಸ್ಟ್ ವಿರೋಧಿ ಪಕ್ಷಗಳೇ ಎಂಬ ಪ್ರಶ್ನೆಯನ್ನು ಗಂಭೀರವಾಗಿರು ವರೆಲ್ಲರೂ ಕೇಳಲೇಬೇಕಿದೆ...

ಇವು ಕಳೆದ ಮೂರು ದಶಕಗಳಲ್ಲಿ ಸಮಾಜದಲ್ಲಿ ಮತ್ತು ರಾಜಕಾರಣದಲ್ಲಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚುತ್ತಿರುವ ಹಿಂದುತ್ವದ ಪಾರಮ್ಯವು ವಿರೋಧ ಪಕ್ಷಗಳ ಮೇಲೂ ಹಿಂದುತ್ವದ ಹೆಜಿಮೊನಿ ಸ್ಥಾಪಿಸಿರುವುದರ ಒಂದು ಸಣ್ಣ ಉದಾಹರಣೆ. ಅಂದರೆ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದರೂ, ಹಿಂದೂ ರಾಷ್ಟ್ರದ ಅಜೆಂಡಾವನ್ನು ಉಗ್ರವಾಗಿಯಲ್ಲವಾದರೂ ಮೃದುವಾಗಿ ಮುಂದುವರಿಸುವುದನ್ನು ಸ್ಪ್ಟಪಡಿಸುತ್ತವೆ. ಹಿಂದೂ ವೋಟುಗಳನ್ನು ಕಳೆದುಕೊಳ್ಳುವ ಭಯ ಎಂಬುದು ಇದಕ್ಕೆ ಕೊಡುವ ಸಬೂಬೇ ಆಗಿದ್ದರೂ, ಬಿಜೆಪಿ ಅಧಿಕಾರದಿಂದ ದೂರವಿದ್ದಾಗಲೂ ಹಿಂದುತ್ವದ ಈ ಹೆಜಿಮೊನಿಯನ್ನು ಬೆಳೆಸಿದ್ದು ಬಿಜೆಪಿಯೇತರ ವಿರೋಧ ಪಕ್ಷಗಳೇ ಅಲ್ಲವೇ? ಅದಕ್ಕೆ ಇಜಾಝ್ ಅಹ್ಮದ್ ಎಂಬ ಚಿಂತಕ ''ಬಿಜೆಪಿಯದ್ದು ಯೋಜಿತ ಕೋಮುವಾದ, ಕಾಂಗ್ರೆಸ್ ಅಥವಾ ಬಿಜೆಪಿಯೇತರ ಪಕ್ಷಗಳದ್ದು ವ್ಯಾವಹಾರಿಕ ಕೋಮುವಾದ'' ಎಂದು ಮೂರು ದಶಕಗಳ ಕೆಳಗೇ ಬಣ್ಣಿಸಿದ್ದರು. ವ್ಯಾವಹಾರಿಕ ಕೋಮುವಾದದ ರಾಜಕಾರಣವೇ ಯೋಜಿತ ಕೋಮುವಾದಕ್ಕೆ ಫ್ಯಾಶಿಸಂಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ನಾವು ಬೆಂಬಲಿಸುವ ಪಕ್ಷಗಳು ಹೇಗಾದರೂ ಸರಿ, ಬಿಜೆಪಿಯನ್ನು ಇಂದಿನ ಚುನಾವಣೆಯಲ್ಲಿ ಸೋಲಿಸಿದರೆ ಸಾಕು ಎಂದುಕೊಂಡು, ಈ ಬಿಜೆಪಿಯೇತರ ಪಕ್ಷಗಳು ಈಗಲೂ ಟಿಕೆಟ್ ಹಂಚಿಕೆಯಲ್ಲಿ, ಪಕ್ಷಾಂತರಗಳಲ್ಲಿ, ಅಜೆಂಡಗಳಲ್ಲಿ, ಚುನಾವಣಾ ತಂತ್ರಗಳಲ್ಲಿ ತೋರುತ್ತಿರುವ ಗುಪ್ತ, ಸುಪ್ತ, ಬಹಿರಂಗ, ಯೋಜಿತ ಕೋಮುವಾದಿ ವರಸೆಗಳನ್ನು ನಿರ್ಲಕ್ಷ ಮಾಡುತ್ತಾ ಬಂದರೆ ''ಗೆದ್ದಾದ ಮೇಲೆ ಗುದ್ದಾಡುವುದಕ್ಕೆ'' ಪ್ರಾಯಶಃ ಏನೂ ಉಳಿದಿರುವುದಿಲ್ಲ.. ಈಗ ಇಂತಹ ಟೀಕೆಯನ್ನು ಕೂಡ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಗುಪ್ತ ಕೋಮುವಾದದ ಬಗ್ಗೆ ಮಾತಡಬಾರದು ಎನ್ನುವವರು ಮತ್ತೊಂದು ಐತಿಹಾಸಿಕ ಉದಾಹರಣೆ ಕೊಡುತ್ತಾರೆ. ಸದ್ಯದ ಗೆಲುವು ಶಾಶ್ವತ ಸೋಲಾಗಬಾರದು

ತುರ್ತುಸ್ಥಿತಿಯ ಕಾಲದಲ್ಲಿ ಹೇಗೆ ಇಂದಿರಾಗಾಂಧಿಯ ಸರ್ವಾಧಿಕಾರದ ವಿರುದ್ಧದ ಏಕೈಕ ಲಕ್ಷಕ್ಕಾಗಿ ಎಲ್ಲಾ ಬಗೆಯ ಕಾಂಗ್ರೆಸ್ ವಿರೋಧಿ ರಾಜಕೀಯ ಶಕ್ತಿಗಳ ಒಕ್ಕೂಟ ರೂಪುಗೊಂಡಿತೋ ಇಂದು ಅದೇ ಬಗೆಯಲ್ಲಿ ಬಿಜೆಪಿಯ ವಿರುದ್ಧ ಎಲ್ಲಾ ಬಗೆಯ ರಾಜಕೀಯ ಶಕ್ತಿಗಳ ಒಕ್ಕೂಟದ ಅಗತ್ಯವಿದೆ ಎಂಬುದು ಅದರ ಸಿದ್ಧಾಂತ. ಆದರೆ ಸರ್ವಾಧಿಕಾರಿ ವಿರೋಧಿ ಒಕ್ಕೂಟದಲ್ಲಿ ಆರೆಸ್ಸೆಸ್‌ನಂಥ ಪರಮ ಫ್ಯಾಶಿಸ್ಟ್ ಶಕ್ತಿಗಳು ಪ್ರಮುಖ ಭೂಮಿಕೆ ಪಡೆದಿದ್ದರಿಂದಲೇ ಕಾಂಗ್ರೆಸ್ ವಿರೋಧಿ ಸರಕಾರವೂ ಉಳಿಯಲಿಲ್ಲ. ಮಾತ್ರವಲ್ಲ. ಈ ಫ್ಯಾಶಿಸ್ಟ್ ಶಕ್ತಿಗಳು ಪುನರ್ಜನ್ಮವನ್ನು ಪಡೆದುಕೊಂಡು ಇಂದು ಇಡೀ ಭಾರತ ಗಣರಾಜ್ಯವನ್ನೇ ನಾಶ ಮಾಡುವ ಶಕ್ತಿಯನ್ನು ಪಡೆದುಕೊಂಡವು. ಆಗಲೂ ಆರೆಸ್ಸೆಸ್ ವಿರೋಧಿ ಶಕ್ತಿಗಳು ತಕ್ಷಣದ ಶತ್ರುವನ್ನು ನಿವಾರಿಸಿಕೊಳ್ಳಬೇಕೆಂಬ ಸದ್ಯದ ತುರ್ತಿನ ರಾಜಕಾರಣ ಮಾಡಿದ್ದರಿಂದಲೇ ದೀರ್ಘ ಕಾಲದ ಶತ್ರುವಿಗೆ ಜೀವ ಕೊಟ್ಟಂತಾಯಿತು. ಇಂದು ಇತಿಹಾಸ ಒಂದು ಸುತ್ತು ಸುತ್ತಿ ಮತ್ತದೇ ಬಿಂದುವಿಗೆ ಬಂದು ನಿಂತಿದೆ. ತುರ್ತುಸ್ಥಿತಿ ವಿರೋಧಿ ಹೋರಾಟದಲ್ಲಿ ಮಧು ಲಿಮಯೆ ಅಂತಹವರು ಕೇಳಿದ ಪ್ರಶ್ನೆಗಳನ್ನು ಈಗಲಾದರೂ ಕೇಳಿಕೊಳ್ಳದಿದ್ದರೆ, ತಿದ್ದುಕೊಳ್ಳದಿದ್ದರೆ ಎಡವಿದ ಕಡೆಯೇ ಮತ್ತೆ ಎಡವುದಿಲ್ಲವೇ? ಈ ಚುನಾವಣೆಯಲ್ಲಿ ಹಾಲಿ, ಮಾಜಿ, ಭಾವಿ ಕೋಮುವಾದಿ ಶಕ್ತಿಗಳ ಜೊತೆ ಸೇರಿಕೊಂಡು, ಸುಪ್ತ, ಗುಪ್ತ, ಮೃದು, ಕೋಮುವಾದಿ ಅಜೆಂಡಾಗಳೊಂದಿಗೆ ರಾಜಿ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಬಹುದೇ? ಒಂದು ವೇಳೆ ಸೋತರೂ ಅದು ಕೋಮುವಾದದ ಸೋಲು ಮತ್ತು ಸೆಕ್ಯುಲರಿಸಂನ ಗೆಲುವಾಗಿರಬಹುದೇ? ಹಿಂದುತ್ವದೊಂದಿಗೆ ಚುನಾವಣಾ ವಿರೋಧ ಪಕ್ಷಗಳ ಪರೋಕ್ಷ ಸೈದ್ಧಾಂತಿಕ ಸಹಚರ್ಯವು ಜನಮಾನಸದಲ್ಲಿ ಹಿಂದುತ್ವದ ಅರ್ಥಾತ್ ಸಂಘಪರಿವಾರದ ರಾಜಕಾರಣವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಹಿಂದುತ್ವ ರಾಜಕಾರಣಕ್ಕೆ ಸಾಮಾಜಿಕ ಬಲವನ್ನು ತಂದುಕೊಟ್ಟು...

ಒಂದು ಹಿಂದುತ್ವ ವೋಟ್ ಬ್ಯಾಂಕ್ ಅನ್ನು ಸೃಷ್ಟಿಸುತ್ತದೆ. ಹಿಂದುತ್ವದ ವೋಟ್ ಬ್ಯಾಂಕ್ ಹಿಂದೂ ರಾಷ್ಟ್ರಕ್ಕೆ ಓಟು ಹಾಕುತ್ತದೆ. ಈ ಹಿಂದುತ್ವ ವೋಟ್ ಬ್ಯಾಂಕ್ ಅನ್ನು ಎದುರು ಹಾಕಿಕೊಳ್ಳಲಾಗದ ಭಯದಿಂದ ವಿರೋಧ ಪಕ್ಷಗಳು ಅದರೊಂದಿಗೆ ಇನ್ನಷ್ಟು ಹೆಚ್ಚು ರಾಜಿಗಳನ್ನು ಮಾಡಿಕೊಂಡು ಅದನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಹೋಗುತ್ತವೆ. ಹೀಗಾಗಿ ಅಂತಿಮವಾಗಿ ಹಿಂದುತ್ವ ಫ್ಯಾಶಿಸಂ ಅನ್ನು ಸೋಲಿಸುವ ಶಕ್ತಿ ವಿರೋಧ ಪಕ್ಷಗಳಿಗೆ ಮಾತ್ರವಲ್ಲ ಚುನಾವಣಾ ರಾಜಕಾರಣಕ್ಕೆ ಇಲ್ಲವಾಗುತ್ತಾ ಹೋಗುತ್ತಿದೆ. ಇದು ಇಂದಿನ ಭೀಕರ ವಾಸ್ತವ. ಇದೆಲ್ಲದರ ಆಳದಲ್ಲಿ ಇರುವುದು ಜನಮಾನಸದಲ್ಲಿ ಹಿಂದುತ್ವದ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ನೀತಿಗಳು ಸರಿ ಎಂಬ ಭಾವನೆ ದಲಿತ-ಹಿಂದುಳಿದ ಸಮಾಜಗಳನ್ನೂ ಒಳಗೊಂಡಂತೆ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಗಟ್ಟಿಗೊಳ್ಳುತ್ತಿರುವುದು.
ಅವನ್ನು ತಪ್ಪು ಎಂದು ಮನವರಿಕೆ ಮಾಡಿಸಿ ಜನರ ಮನಸ್ಸಿನಿಂದ ಮೋದಿ ಮತ್ತು ಹಿಂದುತ್ವವನ್ನು ತೆಗೆದುಹಾಕುವ ಪರ್ಯಾಯ ಪ್ರಯತ್ನಗಳೇ ಇಲ್ಲದಿರುವುದು ಮತ್ತು ವಿರೋಧ ಪಕ್ಷಗಳಿಗೆ ಆ ಅಜೆಂಡಾ ಮತ್ತು ವಿಶ್ವಾಸಾರ್ಹತೆ ಇಲ್ಲದಿರುವುದು.

ಈ ಎಲ್ಲಾ ಕಾರಣಗಳಿಂದ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿಲ್ಲ. ಸೋತರೂ ಹಿಂದುತ್ವ ರಾಜಕಾರಣ ರಾಜಕೀಯವಾಗಿ ಸೋಲುತ್ತಿಲ್ಲ. ಆದ್ದರಿಂದ ಇಂದು ಚುನಾವಣಾ ಸಂದರ್ಭದಲ್ಲಿ ನಡೆಯುತ್ತಿರುವ ಬಿಜೆಪಿಯೇ ಅಥವಾ ಕಾಂಗ್ರೆಸೇ ಅಥವಾ ಮತ್ತೊಂದು ಪಕ್ಷವೇ ಎಂಬ ಚರ್ಚೆ ಚುನಾವಣಾ ಬೈನರಿಗಳನ್ನು ದಾಟಿ ''ಹಿಂದುತ್ವದ ರಾಜಕೀಯ-ಸಾಮಾಜಿಕ ನೀತಿಗಳ ದುಷ್ಪರಿಣಾಮದ ಅರಿವು ಉಂಟು ಮಾಡುವ'' ಪಕ್ಷಾತೀತ ಅಭಿಯಾನವಾಗಬೇಕಿದೆ. ಅದರಿಂದ ಪವಾಡವೇನೂ ಸಂಭವಿಸುವುದಿಲ್ಲ. ನೂರು ವರ್ಷಗಳಿಂದ ಅದರಲ್ಲೂ ಕಳೆದ 30 ವರ್ಷಗಳಿಂದ ಸಂಘಿಗಳು ಸಮಾಜದ ಸಕಲ ಕ್ಷೇತ್ರಗಳಲ್ಲೂ ಪರಿಣಾಮಕಾರಿ ವಿರೋಧವನ್ನೇ ಎದುರಿಸದೆ ಕಟ್ಟಿರುವ ಹಿಂದುತ್ವ ವೋಟ್ ಬ್ಯಾಂಕ್ ಅನ್ನು ಕೇವಲ ಎರಡು ತಿಂಗಳ ಅವಧಿಯಲ್ಲಿ ಅಥವಾ ಒಂದು ವರ್ಷದ ಅವಧಿಯಲ್ಲಿ ಸೋಲಿಸಲಾಗದು. ಜನಮಾನಸದಲ್ಲಿರುವ ಸಂಘೀ ಜೀವಪಕ್ಷಿ

ಹಿಂದೂ ರಾಷ್ಟ್ರ ರಾಜಕಾರಣ 2024-29ರಲ್ಲಿ ಕ್ಲೈಮಾಕ್ಸ್ ಅನ್ನೂ ತಲುಪಬಹುದು.

ಅದೇನೇ ಇದ್ದರೂ... ಸಂಘಿಗಳ ದುಷ್ಟ ರಾಜಕಾರಣದ ಜೀವಪಕ್ಷಿ ಇರುವುದು ಜನಮಾನಸದಲ್ಲೇ.. ಮತ್ತು ಅದನ್ನು ಅಲ್ಲಿಯೇ ಸೋಲಿಸಬೇಕು. ಅದನ್ನು ಜನಚಳವಳಿಗಳೇ ಮಾಡಬೇಕು. ದೀರ್ಘಕಾಲದವರೆಗೆ ಮಾಡುತ್ತಲೇ ಇರಬೇಕು. ಚುನಾವಣೆಯ ಕಾಲದಲ್ಲೂ, ನಂತರದಲ್ಲೂ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಿರಂತರ ಪ್ರತಿರೋಧ- ಪರ್ಯಾಯಗಳನ್ನು ಸೃಷ್ಟಿಸುತ್ತಾ ಹಿಂದುತ್ವ ವೋಟ್ ಬ್ಯಾಂಕ್ ಅನ್ನು ನಾಶ ಮಾಡಿ ಪ್ರಜಾತಾಂತ್ರಿಕ ಮೌಲ್ಯಗಳ ನಾಗರಿಕರನ್ನು ಮರುಸೃಷ್ಟಿ ಮಾಡ�

Similar News