ಬಿಜೆಪಿ ಪ್ರಣಾಳಿಕೆ: ಹಿಂದುತ್ವದ ಸೂತ್ರ, ಸುಳ್ಳು ಸಾಧನೆಗಳು ಮತ್ತು ಪೊಳ್ಳು ಭರವಸೆಗಳು

Update: 2023-05-03 03:57 GMT

ಮೋದಿ- ಅಮಿತ್ ಶಾ ಇಬ್ಬರೂ ತಮ್ಮ ಪ್ರತಿಯೊಂದು ಭಾಷಣಗಳಲ್ಲೂ ಬಹಿರಂಗವಾಗಿಯೇ ಸಂವಿಧಾನ ವಿರೋಧಿ ಹಿಂದುತ್ವದ ಅಜೆಂಡಾಗಳ ಮೇಲೆ ಜನರಲ್ಲಿ ಉನ್ಮಾದವನ್ನು ಬಡಿದೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಮ್ ಮೀಸಲಾತಿ ರದ್ದತಿಯ ಹೆಗ್ಗಳಿಕೆಯನ್ನು ಇದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಣಾಳಿಕೆಯು ಅದೇ ಬಗೆಯ ಅಜೆಂಡಾಗಳನ್ನು ಹೊಂದಿದ್ದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ರಾಜ್ಯದ ಗತಿ ಏನಾಗಲಿದೆ ಎಂಬುದಕ್ಕೆ ಅದು ನೀಲನಕ್ಷೆಯಾಗಿದೆ. ಆದ್ದರಿಂದ ಕರ್ನಾಟಕದ ಜನತೆ ತಮಗೆ ಎದುರಾಗಲಿರುವ ಆಪತ್ತನ್ನು ಅರ್ಥ ಮಾಡಿಕೊಳ್ಳಲಾದರೂ ಒಮ್ಮೆ ಈ ಪ್ರಣಾಳಿಕೆಯತ್ತ ಕಣ್ಣು ಹಾಯಿಸುವ ಅಗತ್ಯವಿದೆ.


ಚುನಾವಣೆಗೆ ಕೇವಲ ಒಂಭತ್ತು ದಿನಗಳಿರುವಾಗ ಬಿಡುಗಡೆಯಾಗಿರುವ ಬಿಜೆಪಿಯ ಪ್ರಣಾಳಿಕೆ ನಿರೀಕ್ಷೆಯಂತೇ ಸುಳ್ಳು ಹಾಗೂ ವಂಚನೆಗಳಿಂದ ಕೂಡಿರುವುದು ಮಾತ್ರವಲ್ಲ, ಬಿಜೆಪಿಯು ಹಿಂದುತ್ವವನ್ನು ಹಿಂದಕ್ಕೆ ಸರಿಸಿ ಅಭಿವೃದ್ಧಿ ಮತ್ತು ಜನಕಲ್ಯಾಣದ ಅಜೆಂಡಾಗಳಿಗೆ ಮರಳಿದೆ ಎಂಬ ಕೆಲವು ರಾಜಕೀಯ ಪಂಡಿತರ ಬಯಕೆಯನ್ನು ಸುಳ್ಳು ಮಾಡಿದೆ. ಈ ಚುನಾವಣೆ ಪ್ರಣಾಳಿಕೆಗಳಿಗೆ ತಾನು ಅಂಥ ಮಹತ್ವ ಕೊಡುವುದಿಲ್ಲ ಎನ್ನುವುದನ್ನು ಬಿಜೆಪಿ ಪದೇಪದೇ ರುಜುವಾತು ಮಾಡುತ್ತಲೇ ಇದೆ. ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಮೂರನೇ ಹಂತದ ಮತದಾನ ಪ್ರಾರಂಭವಾದಾಗ. ಈಗ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಇನ್ನೊಂದು ವಾರದಲ್ಲಿ ಮುಗಿಯಲಿದೆ ಎನ್ನುವಾಗ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಇದಕ್ಕಿಂತ ಭಿನ್ನವಿಲ್ಲ. ಹೀಗಾಗಿ ಈ ಪ್ರಣಾಳಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಿ ಅದರ ಆಧಾರದಲ್ಲಿ ವೋಟು ಕೇಳುವ ಇರಾದೆಯೇನೂ ಬಿಜೆಪಿಗಿಲ್ಲ.

ಸ್ವಂತ ಸಾಧನೆ ಇರಲಿ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಜನರ ಬದುಕನ್ನು ಇನ್ನಷ್ಟು ದಿಕ್ಕೆಡಿಸಿರುವ ಬೊಮ್ಮಾಯಿ ನೇತೃತ್ವದ ಕರ್ನಾಟಕ ಬಿಜೆಪಿ ನೆಚ್ಚಿಕೊಂಡಿರುವುದೇ ಮೋದಿ ಮತ್ತು ಅಮಿತ್ ಶಾರನ್ನು. ಮೋದಿ ಅಭಿವೃದ್ಧಿಯ ಹುಸಿ ಬಲೂನುಗಳನ್ನು ಹಾರಿಬಿಡುತ್ತಿದ್ದರೆ, ಅಮಿತ್ ಶಾ ತಳಮಟ್ಟದಲ್ಲಿ ವೋಟುಗಳನ್ನು ಧ್ರುವೀಕರಿಸಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ಪ್ರತಿಯೊಂದು ಭಾಷಣಗಳಲ್ಲೂ ಬಹಿರಂಗವಾಗಿಯೇ ಸಂವಿಧಾನ ವಿರೋಧಿ ಹಿಂದುತ್ವದ ಅಜೆಂಡಾಗಳ ಮೇಲೆ ಜನರಲ್ಲಿ ಉನ್ಮಾದವನ್ನು ಬಡಿದೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಮ್ ಮೀಸಲಾತಿ ರದ್ದಿನ ಹೆಗ್ಗಳಿಕೆಯನ್ನು ಇದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಣಾಳಿಕೆಯು ಅದೇ ಬಗೆಯ ಅಜೆಂಡಾಗಳನ್ನು ಹೊಂದಿದ್ದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ರಾಜ್ಯದ ಗತಿ ಏನಾಗಲಿದೆ ಎಂಬುದಕ್ಕೆ ಅದು ನೀಲನಕ್ಷೆಯಾಗಿದೆ. ಆದ್ದರಿಂದ ಕರ್ನಾಟಕದ ಜನತೆ ತಮಗೆ ಎದುರಾಗಲಿರುವ ಆಪತ್ತನ್ನು ಅರ್ಥ ಮಾಡಿಕೊಳ್ಳಲಾದರೂ ಒಮ್ಮೆ ಈ ಪ್ರಣಾಳಿಕೆಯತ್ತ ಕಣ್ಣು ಹಾಯಿಸುವ ಅಗತ್ಯವಿದೆ. ಒಟ್ಟಾರೆ ಈ ಪ್ರಣಾಳಿಕೆಯನ್ನು ಬಿಜೆಪಿ ಪಕ್ಷ ಅನ್ನ, ಅಭಯ, ಅಕ್ಷರ, ಆರೋಗ್ಯ, ಅರಿವು, ಅಭಿವೃದ್ಧಿ ಎಂಬ ಆರು ಅಂಶಗಳ ಆಧಾರದ ಮೇಲೆ ರೂಪಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅವರ ಪ್ರಣಾಳಿಕೆಯು ಅಂತರ್ಗಾಮಿನಿಯಾಗಿ ಹರಿದಿರುವ ಹಿಂದುತ್ವ ದ್ವೇಷ ಸಿದ್ಧಾಂತ, ಸಾಧನೆಯ ಬಗೆಗೆ ವಂಚಕ ಸುಳ್ಳುಗಳು ಮತ್ತು ಭವಿಷ್ಯದ ಬಗ್ಗೆ ಪೊಳ್ಳು ಭರವಸೆಗಳೆಂಬ ಮೂರು ಜನದ್ರೋಹಿ ನೆಲೆಯ ಮೇಲೆ ರೂಪಿಸಲಾಗಿದೆ ಎಂಬುದು ಅವರ ಪ್ರಣಾಳಿಕೆಯನ್ನು ಓದಿದರೆ ಸ್ಪಷ್ಟವಾಗುತ್ತದೆ.

ಈ ಮೂರೂ ಅಂಶಗಳ ಬಗ್ಗೆ ಕೆಲವು ಪ್ರಾತಿನಿಧಿಕ ಉದಾಹರಣೆಗಳನ್ನು ಗಮನಿಸಬಹುದು.

ಕುವೆಂಪುವೂ ಇಲ್ಲ-ಶಾಂತಿಯ ತೋಟವೂ ಇಲ್ಲ-ಕೇವಲ ಆಲೂರರ ವಿಜಯನಗರ!

ಬಿಜೆಪಿಯ ಪ್ರಣಾಳಿಕೆಯಲ್ಲಿ ಶಾಂತಿಯ ತೋಟವೂ ಇಲ್ಲ. ಕುವೆಂಪುವೂ ಇಲ್ಲ. ಇರುವುದು ಆಲೂರು ವೆಂಕಟರಾಯರು ಮುಂದಿಟ್ಟ ಬ್ರಾಹ್ಮಣೀಯ ಹಿಂದೂ ಗತವೈಭವ. ಹೀಗಾಗಿ ಪ್ರಣಾಳಿಕೆಯು ಮೊದಲನೇ ಪುಟದಿಂದಲೇ ‘‘ವಿಜಯನಗರದ ಗತ ವೈಭವವನ್ನು ಮರುಸ್ಥಾಪಿಸುತ್ತೇವೆಂದೂ’’ ಘೋಷಿಸುತ್ತದೆ ಹಾಗೂ ಕರ್ನಾಟಕವನ್ನು ಬ್ರಾಹ್ಮಣೀಯ ಹಿಂದುತ್ವದ ಮತ್ತು ಮುಸ್ಲಿಮ್ ದ್ವೇಷದ ಆಧಾರದಲ್ಲಿ ಮರುಕಟ್ಟಬಯಸುವ ಇಂಗಿತವನ್ನು ಸ್ಪಷ್ಟಪಡಿಸುತ್ತದೆ. ಕರ್ನಾಟಕದ ಗತ ವೈಭವವನ್ನು ಪುನರುಜ್ಜೀವಗೊಳಿಸುವುದಾಗಿ ಪ್ರಣಾಳಿಕೆಯುದ್ದಕ್ಕೂ ಘೋಷಿಸುವ ಬಿಜೆಪಿ ವಿಜಯನಗರದ ಹೆಸರನ್ನು ಬಳಸಿಕೊಂಡಿರುವುದೇ ತನ್ನ ಅಪವ್ಯಾಖ್ಯಾನಕ್ಕೆ ತಕ್ಕಂತೆ ಮುಸ್ಲಿಮ್ ದ್ವೇಷವನ್ನು ಜೀವಂತವಾಗಿಡುವುದಕ್ಕೆ. ಹೀಗಾಗಿ ಇಡೀ ಪ್ರಣಾಳಿಕೆಯಲ್ಲಿ ಆಲೂರು ವೆಂಕಟರಾಯರ ಕರ್ನಾಟಕವಿದೆಯೇ ವಿನಾ ಕುವೆಂಪು ಕನಸಿದ ‘‘ಸರ್ವ ಜನಾಂಗದ ಶಾಂತಿಯ ತೋಟದ’’ ವಿಶ್ವಮಾನವ ದರ್ಶನವೇ ಇಲ್ಲ. ಕುವೆಂಪು ಅವರು ‘ರೈತನ ದೃಷ್ಟಿ’ ಎಂಬ ಕವನದಲ್ಲಿ ‘‘ವಿಜಯನಗರವೋ ಮೊಗಲರಾಳ್ವಿಕೆಯೋ ..ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ’’ ಎಂದು ಹೇಳುತ್ತಲೇ, ‘‘ಕತ್ತಿ ಪರರದಾದರೆ ಮಾತ್ರ ನೋವೆ, ನಮ್ಮವರೇ ಹದಹಾಕಿ ತಿವಿದರದು ಹೂವೆ’’ ಎಂದು ಪ್ರಶ್ನಿಸುತ್ತಾರೆ. ಇದು ಕರ್ನಾಟಕದ ಗತದ ಬಗ್ಗೆ ಒಂದು ಜನಪರ ದೃಷ್ಟಿಕೋನ. ಆದರೆ ಆಲೂರು ವೆಂಕಟರಾಯರು, ಗಳಗನಾಥರು ಇತಿಹಾಸವನ್ನು ಬ್ರಿಟಿಷರು ಕೊಟ್ಟ ಕನ್ನಡಕದಿಂದ ನೋಡಿದರು. ವಿಜಯನಗರದಲ್ಲಿ ಕೂಲಿ ಮತ್ತು ರೈತಾಪಿ ಬದುಕಿನ ದಾರುಣತೆಯನ್ನು ಕಾಣದೆ ಹಿಂದೂ ವೈಭವವನ್ನು ಕಂಡರು. ವಿಜಯನಗರದ ಸೈನ್ಯದಲ್ಲಿ ಮುಸ್ಲಿಮರು ಇದ್ದದ್ದು, ಬಹಮನಿ ಸುಲ್ತಾನರ ಸೈನ್ಯದಲ್ಲಿ ಹಿಂದೂಗಳು ಇದ್ದದ್ದನ್ನು ಕಾಣಲಿಲ್ಲ. ಬಹಮನಿ ಹಾಗೂ ವಿಜಯನಗರ ಸಂಘರ್ಷವನ್ನು ಎರಡು ಸಂಸ್ಥಾನಗಳ ಸಂಘರ್ಷವೆಂದು ಗ್ರಹಿಸದೆ ಹಿಂದೂ-ಮುಸ್ಲಿಮ್ ಸಂಘರ್ಷವೆಂದು ಗ್ರಹಿಸಿದರು. ಈ ಗ್ರಹಿಕೆ ಇಂದಿನ ಬಿಜೆಪಿ ಕಟ್ಟಬೇಕೆಂದುಕೊಂಡಿರುವ ಹಿಂದೂರಾಷ್ಟ್ರ ಪರಿಕಲ್ಪನೆಗೆ ಅಡಿಪಾಯ. ಆದ್ದರಿಂದಲೇ ಈ ಪ್ರಣಾಳಿಕೆಯು ವಿಜಯನಗರದ ಗತ ವೈಭವದ ಮರುಸ್ಥಾಪನೆಯನ್ನು ತನ್ನ ಆದರ್ಶವೆಂದು ಘೋಷಿಸುತ್ತದೆ. ಆದರೆ ಬಿಜೆಪಿಯ ವಿಜಯನಗರ ಮುಸ್ಲಿಮ್ ದ್ವೇಷಿ ಮಾತ್ರವಲ್ಲ, ಅಬ್ರಾಹ್ಮಣ ಹಿಂದೂಗಳನ್ನು ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುವ ಬ್ರಾಹ್ಮಣ ರಾಷ್ಟ್ರವೂ ಆಗಿದೆ. ಇದು ನಂತರ ಪ್ರಣಾಳಿಕೆಯಲ್ಲಿ ಅವರು ಜನಪರ ಯೋಜನೆಗಳೆಂದು ಘೋಷಿಸಿರುವ ಹಲವಾರು ಯೋಜನೆಗಳಲ್ಲೂ ಅಂತರ್ಗಾಮಿನಿಯಾಗಿ ಹರಿಯುತ್ತದೆ.

ಗಣೇಶ ಹಬ್ಬಕ್ಕೆ ಉಚಿತ ಸಿಲಿಂಡರ್- ರಮಝಾನ್‌ಗಿಲ್ಲ, ಕ್ರಿಸ್ಮಸ್‌ಗಿಲ್ಲ, ಮಾರ್ನವಮಿಗಿಲ್ಲ!

ಉದಾಹರಣೆಗೆ, ಬಿಪಿಎಲ್ ಕಾರ್ಡುದಾರರಿಗೆ ಬಿಜೆಪಿ ಪ್ರಣಾಳಿಕೆ ಪ್ರತೀ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ಮೂರು ಸಿಲಿಂಡರ್‌ಗಳನ್ನು ಉಚಿತವಾಗಿ ಕೊಡುವುದಾಗಿ ಹೇಳುತ್ತದೆ. ರಾಜ್ಯದ ಎಲ್ಲಾ ಬಿಪಿಎಲ್ ವರ್ಗದವರಿಗೆ ವರ್ಷಕ್ಕೆ ಮೂರು ಸಿಲಿಂಡರ್ ಉಚಿತ ಎಂದು ಘೋಷಿಸದೆ ನಿರ್ದಿಷ್ಟವಾಗಿ ಯುಗಾದಿ, ಗಣೇಶ ಮತ್ತು ದೀಪಾವಳಿಯ ಸಂದರ್ಭವನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಬಿಜೆಪಿಯ ಕೋಮುವಾದಿ-ಬ್ರಾಹ್ಮಣವಾದಿ ದೃಷ್ಟಿಕೋನ ಸ್ಪಷ್ಟವಾಗಿದೆ. ಬಿಜೆಪಿ ಉಚಿತ ಸಿಲಿಂಡರ್ ನೀಡಲು ಕ್ರಿಶ್ಚ್ಚಿಯನ್ನರ ಕ್ರಿಸ್ಮಸ್, ಗುಡ್ ಫ್ರೈಡೇ, ಈಸ್ಟರ್, ಮುಸ್ಲಿಮರ ರಮಝಾನ್, ಬಕ್ರೀದ್, ಬೌದ್ಧರ ಬುದ್ಧ ಪೂರ್ಣಿಮೆಗಳನ್ನಾಗಲೀ ಅಥವಾ ಈ ನಾಡಿನ ಬಹುಸಂಖ್ಯಾತ ದಲಿತ ಶೂದ್ರಾದಿ ಸಮುದಾಯಗಳಿಗೆ ಗಣೇಶ, ದೀಪಾವಳಿಗಳಿಗಿಂತಲೂ ಪ್ರಮುಖ ಹಬ್ಬವಾಗಿರುವ ಮಾರ್ನವಮಿ, ಊರ ಹಿರಿಯರ ಹಬ್ಬ, ಸಂಕ್ರಾಂತಿಗಳನ್ನಾಗಲೀ ಆಯ್ಕೆ ಮಾಡಿಕೊಂಡಿಲ್ಲ. ಇದು ಕಾಕತಾಳೀಯವಲ್ಲ. ಅದರ ಹಿಂದೆ ಸರಕಾರವೇ ಅಧಿಕೃತವಾಗಿ ಒಂದು ಧರ್ಮೀಯರ ಹಬ್ಬವನ್ನು ಮಾತ್ರ ಹೆಚ್ಚು ಅಧಿಕೃತಗೊಳಿಸಿ, ಉಳಿದ ಧರ್ಮೀಯರ ಹಬ್ಬವನ್ನು ಎರಡನೇ ದರ್ಜೆಗೆ ಇಳಿಸುವ ಹುನ್ನಾರವಿದೆ. ಹಾಗೆಯೇ ಅಬ್ರಾಹ್ಮಣ ಹಿಂದೂಗಳ ಹಬ್ಬಗಳ ಪ್ರಾಮುಖ್ಯತೆಯನ್ನು ಅಮಾನ್ಯಗೊಳಿಸಿ ಅಧೀನಗೊಳಿಸಿಕೊಳ್ಳುವ ಬ್ರಾಹ್ಮಣೀಯ ವ್ಯೆಹತಂತ್ರವಿದೆ.

ಎನ್‌ಆರ್‌ಸಿ ಮತ್ತು ಸಮಾನ ನಾಗರಿಕ ಸಂಹಿತೆ 

ನೆರೆಬಂದಾಗ, ಬರ ಬಂದಾಗ ರೈತಾಪಿಯನ್ನು ಕಾಪಾಡಲು ಕೈಲಾಗದ ಬಿಜೆಪಿ ಸರಕಾರ ಕರ್ನಾಟಕದ ಜನತೆಗೆ ಆಪತ್ತುಗಳಿಂದ ಅಭಯವನ್ನು ಕೊಡಲು ಎನ್‌ಆರ್‌ಸಿ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಈ ಎರಡೂ ಯೋಜನೆಗಳಿಗೂ ಕರ್ನಾಟಕ ಸರಕಾರಕ್ಕೂ ಯಾವ ಸಂಬಂಧವೂ ಇಲ್ಲ. ಇವೆರಡೂ ಕೇಂದ್ರ ಸರಕಾರದ ಅಧಿಕಾರದ ಪರಿಧಿಗೆ ಬರುವ ವಿಷಯ. ಈಗಾಗಲೇ ಮೋದಿ ಸರಕಾರ ಈ ಎರಡೂ ವಿಷಯಗಳಲ್ಲಿ ತನ್ನ ಕೋಮುವಾದಿ ನಿಲುವನ್ನು ಸ್ಪಷ್ಟಪಡಿಸಿದೆ. ಸಮಾನ ನಾಗರಿಕ ಸಂಹಿತೆಯ ಹೆಸರಿನಲ್ಲಿ ಅದು ಜಾರಿ ಮಾಡಬೇಕೆಂದಿರುವುದು ಹಿಂದುತ್ವವಾದಿ ನಾಗರಿಕ ಸಂಹಿತೆ. ಇನ್ನು ಎನ್‌ಆರ್‌ಸಿಯಂತೂ ಈ ದೇಶದ ಮುಸ್ಲಿಮರಿಗೂ ಮತ್ತು ಎಲ್ಲಾ ಧರ್ಮಗಳಿಗೆ ಸೇರಿದ ಮತ್ತು ಹುಟ್ಟಿನ ಬಗ್ಗೆ ಸೂಕ್ತ ದಾಖಲಾತಿಗಳಿಲ್ಲದ ಎಲ್ಲಾ ಬಡವರಿಗೂ ನಾಗರಿಕತ್ವ ನಿರಾಕರಿಸುವ ಹಿಂದುತ್ವವಾದಿ ಷಡ್ಯಂತ್ರವಾಗಿದೆ. ಈ ದೇಶದ ನೈಜ ಹಾಗೂ ಬಡ ಭಾರತೀಯರಿಗೆ ನಾಗರಿಕತ್ವವನ್ನೇ ನಿರಾಕರಿಸುವ ಇಂತಹ ಶಾಸನಗಳನ್ನು ಭರವಸೆಯನ್ನಾಗಿ ಕೊಡುವ ಪಕ್ಷಕ್ಕೆ ಜನರು ಚುನಾವಣೆಯಲ್ಲಿ ಸೋಲಿಸಿಯೇ ಪಾಠ ಕಲಿಸಬೇಕಷ್ಟೆ. ಇದಲ್ಲದೆ ಶಿಕ್ಷಣದಲ್ಲಿ ತಾನು ತರಬೇಕೆಂದಿರುವ ಆಧುನೀಕರಣದ ಯೋಜನೆಗಳಿಗೆ ವಿಶ್ವೇಶ್ವರಯ್ಯನವರ ಹೆಸರಿಡುವುದರ ಹಿಂದೆಯೂ ಬಿಜೆಪಿ ಕರ್ನಾಟಕದ ದಲಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಬ್ರಾಹ್ಮಣೀಯ ಸವಾಲನ್ನೇ ಹಾಕಿದೆ. ವಿಶ್ವೇಶ್ವರಯ್ಯನವರು ಪ್ರತಿಭಾವಂತರಾಗಿದ್ದರೂ ಆಳದಲ್ಲಿ ಸಾಮಾಜಿಕ ನ್ಯಾಯಕ್ಕೆ ಕಡು ವಿರೋಧಿಯಾಗಿದ್ದರು. ದಲಿತ ವಿರೋಧಿ ಬ್ರಾಹ್ಮಣೀಯ ಪ್ರತಿಭಾವಾದಿಯಾಗಿದ್ದರು. ಅವರ ಹೆಸರನ್ನು ತನ್ನ ಶೈಕ್ಷಣಿಕ ಯೋಜನೆಗಳಿಗೆ ಇಡುವ ಮೂಲಕ ಬಿಜೆಪಿ ತಾನು ಎಂತಹ ಬ್ರಾಹ್ಮಣಶಾಹಿ ಶೈಕ್ಷಣಿಕ ವ್ಯವಸ್ಥೆಯನ್ನು ಕಟ್ಟಲಿದ್ದೇನೆಂದು ಬಹಿರಂಗವಾಗಿ ಘೋಷಿಸಿ ಕರ್ನಾಟಕದ ಜನರಿಗೆ ಸವಾಲು ಹಾಕಿದೆ. ಹೀಗೆ ಬಿಜೆಪಿಯ ಜನವಿರೋಧಿ, ಸಂವಿಧಾನ ವಿರೋಧಿ ಹಿಂದುತ್ವವಾದಿ ರಾಜಕಾರಣ ಇಡೀ ಪ್ರಣಾಳಿಕೆಯ ಉದ್ದಕ್ಕೂ ಸೂತ್ರಪ್ರಾಯವಾಗಿ ಹರಿದಿದೆ. ಎರಡನೆಯದಾಗಿ ಪ್ರಣಾಳಿಕೆಯು ಮಾಡಿಲ್ಲದ ಸಾಧನೆಯನ್ನು ಅಥವಾ ಇದ್ದದ್ದನ್ನು ಕಿತ್ತುಕೊಂಡಿದ್ದನ್ನು ಸಾಧನೆಯಾಗಿ ಜನರ ಮುಂದಿಟ್ಟಿದೆ ಸುಳ್ಳು ಸಾಧನೆಗಳು 
 

1. ಐದು ಕೆಜಿ ಕಿತ್ತುಕೊಂಡು 10 ಕೆಜಿ ಕೊಟ್ಟೆ ಎನ್ನುವ ಬಿಜೆಪಿ 

ವಾಸ್ತವದಲ್ಲಿ ಜನರ ಹೋರಾಟ ಮತ್ತು ಕೋರ್ಟುಗಳ ಒತ್ತಡಕ್ಕೆ ಮಣಿದು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು (ಎನ್‌ಎಫ್‌ಎಸ್‌ಎ-2013) ಜಾರಿ ಮಾಡಿತ್ತು. ಅದರ ಭಾಗವಾಗಿ ಈ ದೇಶದ 80 ಕೋಟಿ ಬಡಜನರಿಗೆ ಹೆಚ್ಚೆಂದರೆ ತಿಂಗಳಿಗೆ 11 ರೂ.ಗೆ (ಅಕ್ಕಿ ಕೆಜಿಗೆ 2 ರೂ., ಗೋಧಿ ಕೆಜಿಗೆ 3 ರೂ.) ಐದು ಕೆಜಿ ಆಹಾರ ಧಾನ್ಯ ಒದಗಿಸಬೇಕೆಂಬುದು ಶಾಸನವಾಯಿತು. ಹೀಗಾಗಿ ಮೋದಿ ಸರಕಾರವು ಅದನ್ನು ಅನುಸರಿಸಬೇಕಾಯಿತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ದಾಳಿ ಮಾಡಿ ಮೋದಿಯವರ ಸರ್ವಾಧಿಕಾರಿ ಲಾಕ್‌ಡೌನ್ ನೀತಿಯಿಂದಾಗಿ ಈ ದೇಶದ ಬಡಜನ ಆದಾಯ, ಉದ್ಯೋಗ, ದುಡಿಮೆ ಇಲ್ಲದೆ ದೈನಂದಿನ ಆಹಾರಕ್ಕೂ ಆತಂಕ ಎದುರಾಗಿತ್ತು. ಆದರೂ ಮೋದಿ ಸರಕಾರ ಅದರ ಬಗ್ಗೆ ದಿವ್ಯ ನಿರ್ಲಕ್ಷ ತೋರುತ್ತಿದ್ದಾಗ ಕೋವಿಡ್ ನಡುವೆಯೂ ನಡೆದ ಪ್ರತಿಭಟನೆಗಳು, ಎದುರಾಗಲಿದ್ದ ಚುನಾವಣೆಗಳು ಮತ್ತು ಸುಪ್ರೀಂ ಕೋರ್ಟಿನ ಕೆಲವು ನ್ಯಾಯಪೀಠದ ಮಧ್ಯಪ್ರವೇಶದಿಂದಾಗಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಜಾರಿ ಮಾಡಬೇಕಾಗಿ ಬಂತು. ಅದರ ಭಾಗವಾಗಿ ಈಗಾಗಲೇ ಆಹಾರ ಭದ್ರತಾ ಕಾಯ್ದೆಯ ಭಾಗವಾಗಿ 5 ಕೆಜಿ ಆಹಾರ ಧಾನ್ಯ ಪಡೆಯುತ್ತಿದ್ದ ಕುಟುಂಬಗಳಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುವ ಯೋಜನೆ ಜಾರಿಯಾಯಿತು. ಮೋದಿ ಸರಕಾರ ಇದೇ ಜನವರಿಯಿಂದ ಆಹಾರ ಭದ್ರತಾ ಯೋಜನೆಯ ಭಾಗವಾಗಿ ಜನರು ಐದು ಕೆಜಿ ಧಾನ್ಯಕ್ಕೆ ಕೊಡುತ್ತಿದ್ದ 11 ರೂ. ಅನ್ನು ಮನ್ನಾ ಮಾಡಿ ಉಚಿತಗೊಳಿಸಿದೆ. ಆದರೆ ಅದೇ ಸಮಯದಲ್ಲಿ ಮೋದಿ ಸರಕಾರ 2022ರ ಡಿಸೆಂಬರ್‌ನಲ್ಲಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ರದ್ದು ಮಾಡಿದೆ. ಅಂದರೆ ಈ ದೇಶದ ಬಡಜನರಿಗೆ ಸಿಗುತ್ತಿದ್ದ ಉಚಿತ ಐದು ಕೆಜಿ ಆಹಾರ ಧಾನ್ಯವನ್ನು ಕಿತ್ತುಕೊಂಡಿದೆ. ಇದರಿಂದಾಗಿ ಪ್ರತೀ ಬಡ ಕುಟುಂಬ ಇನ್ನು ಮುಂದೆ ಅಷ್ಟು ಆಹಾರವನ್ನು ಮಾರುಕಟ್ಟೆಯಿಂದಲೇ ಖರೀದಿ ಮಾಡಬೇಕಿದೆ. ಇದರಿಂದಾಗಿ ಪ್ರತೀ ಕುಟುಂಬಕ್ಕೆ ಏನಿಲ್ಲವೆಂದರೂ ಹೆಚ್ಚುವರಿಯಾಗಿ 200-250 ರೂ. ಹೊರೆ ಬೀಳುತ್ತದೆ. ಹೀಗಾಗಿ ಮೋದಿ ಸರಕಾರ ಹತ್ತು ಕೆಜಿ ಅಹಾರ ಧಾನ್ಯದಲ್ಲಿ ಅದು 5 ಕೆಜಿ ಕಿತ್ತುಕೊಂಡಿದೆಯೇ ವಿನಾ 10 ಕೆಜಿ ಕೊಟ್ಟಿಲ್ಲ.

2. ದಲಿತರ ಮೀಸಲಾತಿ ಹೆಚ್ಚಳ ಸಿಂಧುವಾಗಿಲ್ಲ 

ಬಿಜೆಪಿಯು ತನ್ನ ಜಾಹಿರಾತಿನಲ್ಲಿ ಮತ್ತು ಪ್ರಣಾಳಿಕೆಯಲ್ಲಿ ತಮ್ಮ ಸರಕಾರವು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೂ ಹಾಗೂ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಶೇ. 3 ರಿಂದ ಶೇ. 7ಕ್ಕೂ ಏರಿಸಿರುವುದಾಗಿ ಸುಳ್ಳು ಹೇಳುತ್ತಿದೆ. ಏಕೆಂದರೆ ಈ ಎರಡೂ ಏರಿಕೆಗಳಿಂದಾಗಿ ಒಟ್ಟಾರೆ ಮೀಸಲಾತಿಯ ಪ್ರಮಾಣ ಶೇ. 50 ಇದ್ದದ್ದು ಶೇ. 56 ಆಗುತ್ತದೆ. ಹೀಗಾಗಿ ಅದು ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಇಂದಿರಾ ಸಹಾನಿ ಪ್ರಕರಣದಲ್ಲಿ ನಿಗದಿ ಮಾಡಿದ ಶೇ. 50ರ ಮೇಲ್ಮಿತಿಯನ್ನು ಮೀರುತ್ತದೆ. ಈ ಮೇಲ್ಮಿತಿಯನ್ನು ನಿಗದಿ ಮಾಡಿರುವುದು ಸಾಮಾಜಿಕ ಅನ್ಯಾಯ. ಆದರೆ ಈವರೆಗೆ ಯಾವ ಸರಕಾರಗಳು ಸುಪ್ರೀಂ ಕೋರ್ಟಿನ ಈ ತೀರ್ಮಾನದ ವಿರುದ್ಧ ಮೇಲ್ಮನವಿ ಮಾಡಿಲ್ಲ. ಹೀಗಾಗಿ ಸದ್ಯಕ್ಕೆ ಅದೇ ಕಾನೂನಾಗಿದೆ. ಆದರೆ ಸಂಸತ್ತು (ಮೇಲ್ಜಾತಿಗಳಿಗೆ ಇಡಬ್ಲುಎಸ್ ಮೀಸಲಾತಿ ಒದಗಿಸಲು ಮೋದಿ ಸರಕಾರ ಮಾಡಿದಂತೆ) ಒಂದು ಸಂವಿಧಾನ ತಿದ್ದುಪಡಿಯ ಮುಖಾಂತರ ಸುಪ್ರೀಂ ಕೋರ್ಟ್ ಹೇರಿರುವ ಈ ಮೇಲ್ಮಿತಿಯ ನಿರ್ಬಂಧವನ್ನು ನಿವಾರಿಸಿಕೊಳ್ಳಬಹುದು ಅಥವಾ ರಾಜ್ಯ ಸರಕಾರಗಳು ಮೇಲ್ಮಿತಿಯನ್ನು ಹೆಚ್ಚಿಸಿ ಮಾಡಿದ ಕಾಯ್ದೆಗಳನ್ನು ಆಯಾ ರಾಜ್ಯ ಸರಕಾರಗಳ ಮನವಿಯ ಮೇರೆಗೆ ಕಾಯ್ದೆಯ ಮುಖಾಂತರ ಶೆಡ್ಯೂಲ್ 9ಕ್ಕೆ ಸೇರಿಸಿ ಸುಪ್ರೀಂ ಪರಿವೀಕ್ಷಣೆಯಿಂದ ರಕ್ಷಿಸಬಹುದು. (ಆದರೆ ಇತ್ತೀಚಿನ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಶೆಡ್ಯೂಲ್ 9ರಲ್ಲಿರುವ ಕಾಯ್ದೆಗಳೂ ನ್ಯಾಯಾಂಗ ಪರಿವೀಕ್ಷಣೆಯಿಂದ ಮುಕ್ತವಲ್ಲ ಎಂದು ಸ್ಪಷ್ಟಪಡಿಸಿದೆ). ಹೀಗಾಗಿ ಕರ್ನಾಟಕದ ಬಿಜೆಪಿ ಸರಕಾರ ಮಾಡಿರುವ ಮೀಸಲಾತಿ ಹೆಚ್ಚಳವು ಶೇ. 50ರ ಮೀಸಲಾತಿ ಮೇಲ್ಮಿತಿ ದಾಟುವುದರಿಂದ ಒಂದೋ ಅದನ್ನು ಶೆಡ್ಯೂಲ್ 9ಕ್ಕೇ ಸೇರಿಸಲು ಕೇಂದ್ರ ಸರಕಾರ ಕಾಯ್ದೆ ತರಬೇಕು ಅಥವಾ ಕೇಂದ್ರ ಸರಕಾರವೇ ಶೇ. 50ರ ಮೇಲ್ಮಿತಿಯನ್ನು ಏರಿಸಲು ಸಂವಿಧಾನ ತಿದ್ದುಪಡಿ ತರಬೇಕು. ಆದರೆ ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾದ ನಾರಾಯಣ ಸ್ವಾಮಿಯವರೇ ರಾಜ್ಯ ಸಭೆಗೆ ಕೊಟ್ಟ ಉತ್ತರವೊಂದರಲ್ಲಿ ಶೇ. 50ರ ಮೀಸಲಾತಿಯನ್ನು ಹೆಚ್ಚಿಸುವ ಅಥವಾ ಕರ್ನಾಟಕ ಸರಕಾರ ಮೀಸಲಾತಿ ಹೆಚ್ಚಿಸಿ ಮಾಡಿರುವ ಕಾಯ್ದೆಯನ್ನು ಶೆಡ್ಯೂಲ್ 9ಕ್ಕೆ ಸೇರಿಸುವ ಯಾವುದೇ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಸರಕಾರದ ಮೀಸಲಾತಿ ಹೆಚ್ಚಳ ಸಿಂಧುವಾಗಿಲ್ಲ. ಆದ್ದರಿಂದ ದಲಿತರ ಮೀಸಲಾತಿ ಹೆಚ್ಚಳ ಮಾಡಿರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹಸಿಹಸಿ ಸುಳ್ಳು ಹೇಳಿದೆ.

3. ಒಳಮೀಸಲಾತಿ ಜಾರಿಯಾಗಿಲ್ಲ!

ಬಿಜೆಪಿ ಪಕ್ಷ ದಲಿತರಿಗೆ ಮಾಡುತ್ತಿರುವ ಅತಿ ದೊಡ್ದ ದ್ರೋಹ ಒಳಮೀಸಲಾತಿ ಜಾರಿ ಮಾಡಲಾಗಿದೆ ಎಂದು ಹೇಳುತ್ತಿರುವ ಸುಳ್ಳು. ವಾಸ್ತವದಲ್ಲಿ ಪರಿಶಿಷ್ಟ ಜಾತಿಗಳೊಳಗಿನ ಮರು ವರ್ಗೀಕರಣವನ್ನು ಮಾಡುವ ಅರ್ಥಾತ್ ಒಳಮೀಸಲಾತಿಯನ್ನು ಜಾರಿ ಮಾಡುವ ಶಾಸನಾತ್ಮಕ ಅಧಿಕಾರ ರಾಜ್ಯ ಸರಕಾರಕ್ಕೆ ಈವರೆಗೆ ಒದಗಿಲ್ಲ. 1999ರಲ್ಲಿ ಆಂಧ್ರದಲ್ಲಿ ಜಾರಿ ಮಾಡಲಾದ ಒಳಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ 2004ರಲ್ಲಿ ಕೊಟ್ಟ ಆದೇಶದಂತೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಿಸಬಾರದು ಮತ್ತು ಹಾಗೆ ಮಾಡುವ ಶಾಸನಾತ್ಮಕ ಅಧಿಕಾರ ರಾಜ್ಯ ಶಾಸನ ಸಭೆಗಳಿಗಿಲ್ಲ. ಆದರೆ 2020ರ ಪ್ರಕರಣವೊಂದರಲ್ಲಿ ಮತ್ತೊಂದು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಪರಿಶಿಷ್ಟ ಜಾತಿಗಳೊಳಗಿನ ಮೀಸಲಾತಿಯನ್ನು ಮರು ವರ್ಗೀಕರಣ ಮಾಡುವ ಶಾಸನಾತ್ಮಕ ಅಧಿಕಾರ ರಾಜ್ಯ ಶಾಸನ ಸಭೆಗಳಿಗಿದೆ ಎಂದು ತೀರ್ಪು ನೀಡಿದರೂ ಅದು ಕೂಡ ಐವರು ಸದಸ್ಯರ ಪೀಠವೇ ಆದ್ದರಿಂದ ಅದಕ್ಕೆ 2004ರ ಆದೇಶವನ್ನು ಅನೂರ್ಜಿತಗೊಳಿಸುವ ಅಧಿಕಾರವಿರಲಿಲ್ಲ. ಹೀಗಾಗಿ 2020ರಲ್ಲಿ ಆ ಪೀಠವು ಈ ವಿಷಯವನ್ನು ಏಳು ಅಥವಾ ಒಂಭತ್ತು ನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂದು ಮುಖ್ಯ ನ್ಯಾಯಾಧೀಶರಿಗೆ ಶಿಫಾರಸು ಮಾಡಿತು. ಆದರೆ ಇಲ್ಲಿಯವರೆಗೆ ಅಂಥ ಒಂದು ವಿಸ್ತೃತ ಪೀಠ ರಚನೆಯಾಗಿಲ್ಲವಾದ್ದರಿಂದ ಈಗಲೂ 2004ರಲ್ಲಿ ಮರುವರ್ಗೀಕರಣದ ಅಧಿಕಾರ ರಾಜ್ಯ ಸರಕಾರ ಮತ್ತು ಶಾಸನ ಸಭೆಗಳಿಗಿಲ್ಲ ಎಂಬ ಆದೇಶವೇ ಜಾರಿಯಲ್ಲಿದೆ. ಈಗಿರುವ ದಾರಿ ಸುಪ್ರೀಂ ಆದೇಶವನ್ನು ನಿವಾರಿಸಿಕೊಳ್ಳುವಂತೆ ಸಂವಿಧಾನದ ಆರ್ಟಿಕಲ್ 341ಕ್ಕೆ 341 (3) ಎಂಬ ಸೇರ್ಪಡೆಯನ್ನು ಮಾಡುವ ತಿದ್ದುಪಡಿಯನ್ನು ಮಾಡಿ ಮರುವರ್ಗೀಕರಣದ ಅಧಿಕಾರವನ್ನು ಪಡೆದುಕೊಳ್ಳುವುದು. ಅಂತಹ ಸಂವಿಧಾನ ತಿದ್ದುಪಡಿಗಳಿಗೆ ಬೇಕಾದ ಶಾಸನ ಬಲ ಸಂಸತ್ತಿನಲ್ಲಿ ತನಗಿದೆ ಎಂಬುದನ್ನು ಮೋದಿ ಸರಕಾರ ಇಡಬ್ಲುಎಸ್ ಮೀಸಲಾತಿ ಜಾರಿ ಮಾಡುವಾಗ ತೋರಿದೆ. ಅದರೆ ಇಡಬ್ಲುಎಸ್ ಜಾರಿಗೆ ತೋರಿದ ಇಚ್ಛಾಶಕ್ತಿಯನ್ನು ಒಳಮೀಸಲಾತಿ ಜಾರಿಗೆ ಮೋದಿ ಸರಕಾರ ತೋರುತ್ತಿಲ್ಲ. ಕಾರಣ ಸ್ಪಷ್ಟ. ಹೀಗಾಗಿ ಹೆಚ್ಚೆಂದರೆ ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯದಲ್ಲಿ ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಬಹುದೇ ವಿನಾ ತಾನೇ ಒಳಮೀಸಲಾತಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಈಗ ಬೊಮ್ಮಾಯಿ ಸರಕಾರವು ಮಾಡಿರುವುದು ಕೂಡ ಕೇಂದ್ರ ಸರಕಾರಕ್ಕೆ ಶಿಫಾರಸನ್ನೇ. ಆದರೆ ಅದನ್ನು ಕೂಡಾ ಕ್ರಮಬದ್ಧವಾಗಿ ಮಾಡಿಲ್ಲ. ಹೀಗಾಗಿ ಒಳಮೀಸಲಾತಿ ಜಾರಿ ಮಾಡಲಾಗಿದೆ ಎಂದು ಬಿಜೆಪಿಯು ಪ್ರಣಾಳಿಕೆಯಲ್ಲಿ ಹೇಳಿರುವುದು ಸುಳ್ಳು ಮತ್ತು ದಲಿತ ದ್ರೋಹ. ಇದಲ್ಲದೆ ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ವಿಷಯದಲ್ಲಿ ಬಿಜೆಪಿ ಮತ್ತೊಂದು ದ್ರೋಹವನ್ನು ಬಗೆಯುತ್ತಿದೆ. ಮೇಲೆ ನಾವು ನೋಡಿದಂತೆ ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ವಿಷಯ ಎರಡೂ ಈಗ ಕೇಂದ್ರದ ಅಂಗಳದಲ್ಲಿದೆ. ಕೇಂದ್ರ ಸರಕಾರದ ಪ್ರಧಾನ ಬಾಧ್ಯಸ್ಥರಾದ ಪ್ರಧಾನ�

Similar News