ಕರ್ನಾಟಕ ಸರಕಾರಕ್ಕೆ ಶ್ರೀಸಾಮಾನ್ಯನ ಮನವಿಗಳು
ನಿಮ್ಮ ಆಸೆ, ಸ್ವಾರ್ಥಗಳೇನೇ ಇದ್ದರೂ ಅವನ್ನು ಜನಹಿತದಿಂದಲೇ ಸಾಧಿಸಬೇಕೇ ಹೊರತು ಅಧಿಕಾರದ ಗರ್ವದಿಂದಲ್ಲ. ಇನ್ನೊಂದು ವರ್ಷದಲ್ಲಿ ಸಂಸತ್ತಿನ ಚುನಾವಣೆ ಎದುರಾಗಲಿದೆ. ಈಗ ನೀವೇನನ್ನು ಬಿತ್ತುತ್ತೀರೋ, ಬೆಳೆಸುತ್ತೀರೋ, ಪೋಷಿಸುತ್ತೀರೋ ಅದರ ಆಧಾರದಲ್ಲಿ ಮುಂದಿನ ಬೆಳೆ. ಹನಿಗೂಡಿ ಹಳ್ಳ ಎನ್ನುವಂತೆ ಒಂದೊಂದು ರಾಜ್ಯವೂ ಸೇರಿ ದೇಶವಾಗುವಲ್ಲಿ ನಿಮ್ಮ ಯಾನವು ಇಲ್ಲಿಂದಲೇ ಆರಂಭವಾಗಬೇಕಾಗಿದೆ. ಇದಕ್ಕೆ ನಿಮಗೆ ಸುದೃಢ ಅಧಿಕಾರಶಾಹಿಯ ಬೆಂಬಲ ಬೇಕಾಗುತ್ತದೆ.
ಕರ್ನಾಟಕದ ಜನರು ನಿಮ್ಮನ್ನು ಭರ್ಜರಿ ಗೆಲುವಿನ ಉಡುಗೊರೆಯೊಂದಿಗೆ ಸನ್ಮಾನಿಸಿದ್ದಾರೆ. 224 ಸದಸ್ಯರ ವಿಧಾನ ಸಭೆಯಲ್ಲಿ 135 ಸಣ್ಣ ಬಹುಮತವೇನೂ ಅಲ್ಲ. ವಿಧಾನ ಪರಿಷತ್ತಿನ ಮಂದಿಯೂ ಸೇರಿದಂತೆ ರಾಜ್ಯದ ಮುಂದಿನ 5 ವರ್ಷಗಳ ಆಡಳಿತದ ಹೊಣೆ ನಿಮ್ಮ ಮೇಲಿದೆ. ಯಾರು ಮುಖ್ಯಮಂತ್ರಿಗಳಾಗುತ್ತಾರೆ ಮತ್ತು ಯಾರು ಸಚಿವರಾಗುತ್ತಾರೆ, ಯಾರು ನಿಗಮ, ಮಂಡಳಿಗಳ ಅಧ್ಯಕ್ಷರಾಗುತ್ತಾರೆಂಬುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ; ನಮಗೆ ಗೊತ್ತಿಲ್ಲ. ಆ ಮೇಲಾದರೂ ಗೊತ್ತಾಗುತ್ತದಲ್ಲ! ಯಾರಾದರೂ ಆಗಿ- ಅದು ನಿಮ್ಮ ಪಕ್ಷದ ನಿರ್ಧಾರ. ಈ ಮನವಿ ಪ್ರಕಟವಾಗುವ ಹೊತ್ತಿಗೆ ಇವುಗಳಲ್ಲಿ ಆರಂಭದ ಆಯ್ಕೆಗಳು ಸುಲಲಿತವಾಗಿ ನಿರ್ಣಯವಾಗಿರಬಹುದೆಂದು ಆಶಿಸುತ್ತೇವೆ. ಆದರೆ ಅಧಿಕಾರ ಹೊತ್ತ ನೀವು ನಿಮ್ಮ ಹೆಗಲ ಮೇಲೆ ಜನತೆಯನ್ನು ಪ್ರತಿನಿಧಿಸಿದ ಮತದಾರರು ಇಟ್ಟ ನೊಗವನ್ನು ಹೇಗೆ ನಿಭಾಯಿಸುತ್ತೀರೆಂಬುದು ನಮಗೆ ನಿರೀಕ್ಷೆ, ಅಪೇಕ್ಷೆ ಮತ್ತು ಸ್ವಲ್ಪಮಟ್ಟಿನ ಆತಂಕದ ವಿಚಾರ.
ನಿಮ್ಮನ್ನು ಆಯ್ಕೆ ಮಾಡಲು ಮುಖ್ಯವಾಗಿ ಕಾರಣವಾದದ್ದು ನಭೂತೋ ಎನ್ನಿಸಿದ ಭ್ರಷ್ಟಾಚಾರ ಮತ್ತು ಕೋಮುವಾದ. ದೇಶವನ್ನಾಳುವ ನಾಯಕರು ‘‘ನ ಖಾವೂಂಗಾ ನ ಖಾನೇ ದೂಂಗಾ’’ (ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ) ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದರೂ ಈ ಉಕ್ತಿಯನ್ನು ಯುಕ್ತಿಯುತವಾಗಿ ಮರೆಮಾಚಿ ಆರಂಭದ ‘ನ’ ಮತ್ತು ಕೊನೆಯ ‘ನ ಖಾನೇ ದೂಂಗಾ’ ಎಂಬ ಕೊನೆಯ 3 ಪದಗಳನ್ನಷ್ಟೇ ಉಳಿಸಿಕೊಂಡಿದ್ದರಿಂದ ಭ್ರಷ್ಟಾಚಾರವು ವ್ಯಾಪಕವಾಗಿ ಬೆಳೆದಿದೆ. ಈ ಜಾತ್ಯತೀತ ಪಿಡುಗಿನ ಬೇರು ಬಹಳ ಆಳಕ್ಕಿಳಿದಿದ್ದು ಅದನ್ನು ಕಿತ್ತೆಸೆಯುವುದು ಸುಲಭ ಸಾಧ್ಯವಲ್ಲ ಎಂಬುದು ನಿಮಗೂ ಗೊತ್ತು; ನಮಗೂ ಗೊತ್ತು. ಆದರೂ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ. ಇದಕ್ಕಿಂತಲೂ ಘೋರವಾದದ್ದು ಕೋಮುವಾದ. ತುಷ್ಟೀಕರಣ ನೀತಿ ಈ ದೇಶ ಸ್ವಾತಂತ್ರ್ಯ ಪಡೆದಂದಿನಿಂದಲೂ ಇದೆ. ಕೆಲವೊಮ್ಮೆ ಅದು ಅತಿಯಾಗಿದೆ. ಸರಕಾರ ನೀಡುವ ಸೌಲಭ್ಯವನ್ನು ಹೇಗಾದರೂ ಪಡೆದುಕೊಳ್ಳಲು ಯತ್ನಿಸುವುದು ಮನುಷ್ಯ ಸಹಜ ದೌರ್ಬಲ್ಯ. ಅಲ್ಪಸಂಖ್ಯಾತರ ತುಷ್ಟೀಕರಣ ವೆಂಬ ಈ ಧೋರಣೆಯ ಲಾಭವನ್ನು ಕೋಮುವಾದಿಗಳು ಹೇಗೆ ಪಡೆದಿದ್ದಾರೆಂಬುದು ಕಳೆದೆರಡು-ಮೂರು ದಶಕಗಳ ರಾಜಕಾರಣದಲ್ಲಿ ಸ್ಪಷ್ಟ. ಆದರೆ ದುರದೃಷ್ಟವೆಂದರೆ ಇದೀಗ ಸಮಾಜವನ್ನು ಅಶಾಂತಿಯತ್ತ ಮತ್ತು ವಿಭಜನೆಯತ್ತ ತಳ್ಳಿದೆ. ಕರ್ನಾಟಕವು ಕವಿವಾಣಿಯಂತೆ ‘ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕೆಂಬುದು ಸಜ್ಜನರ ಮಹದಾಸೆ. ದೇಶದೆಲ್ಲೆಡೆ ಮತಾಂಧತೆಯ ಪಿಡುಗು ರಾಶಿ ಬಿದ್ದಿದೆ. ಅದನ್ನು ಗುಡಿಸಿ ನಿವಾರಿಸುವುದು ಸುಲಭವಲ್ಲ. ಆದರೆ ಕನ್ನಡ ನೆಲದಲ್ಲಾದರೂ ಇದನ್ನು ಸಾಧ್ಯವಾಗಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ ಇಲ್ಲ.
ದಶಕಗಳ ಬಳಿಕ ನೀವೀಗ ಸ್ವಸಾಮರ್ಥ್ಯದಿಂದ ಅಧಿಕಾರಕ್ಕೆ ಬಂದಿದ್ದೀರಿ. ಈ ಪ್ರಯತ್ನಗಳಲ್ಲಿ ನಿಮಗೆ ಕೇಂದ್ರ ಸರಕಾರದ ನೆರವಾಗಲೀ, ಪ್ರೋತ್ಸಾಹವಾಗಲೀ ಸಿಗುತ್ತದೆಂಬ ಆಸೆ ಬೇಡ. ಅವರು ನಿಮಗೆ ಹೆಜ್ಜೆಹೆಜ್ಜೆಗೆ ಅಡ್ಡಿ ಆತಂಕಗಳನ್ನು ತರದೆ ಇರಲಾರರು. ಕೇಂದ್ರದ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಈ.ಡಿ., ಐಟಿ ಇವೆಲ್ಲ ನಿಮ್ಮ ಕಾಲುಗಳನ್ನೆಳೆದು ತಮ್ಮ ಧಣಿಗಳನ್ನು ತೃಪ್ತಿಪಡಿಸಲು ಸದಾ ಸಿದ್ಧರಿರಬಹುದು. ಆದ್ದರಿಂದ ನಿಮ್ಮ ಕಾರ್ಯಸೂಚಿಯು ಈ ಅಪಾಯಗಳನ್ನೆಳೆದುಕೊಳ್ಳುವಂತಿರಬಾರದು.
ಒಂದು ಪುಟ್ಟ ಉದಾಹರಣೆಯಿದೆ: ಈ ಚುನಾವಣೆಯಲ್ಲಿ ನೀವು ಜಯಿಸಿದ ತಕ್ಷಣ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಅವರನ್ನು ಕೇಂದ್ರವು ಸಿಬಿಐ ಮುಖ್ಯಸ್ಥರಾಗಿ ನೇಮಿಸಿದೆ. ಇದು ಕಾಕತಾಳೀಯವೋ ಗೊತ್ತಿಲ್ಲ. ಅವರ ಆಯ್ಕೆಯ ಸಮಿತಿಯಲ್ಲಿ ಲೋಕಸಭಾ ಪ್ರತಿಪಕ್ಷದ ನಾಯಕರಿದ್ದರೆಂಬ ಕಹಿಯನ್ನು ನೀವು ನುಂಗಿಕೊಳ್ಳಬೇಕು. ಅವರಿಗೆ ನಿಮ್ಮ ಕೆಲವು ನಾಯಕರ ಕುರಿತು ಇರುವ ಪೂರ್ವಗ್ರಹಗಳನ್ನು ಕೇಂದ್ರವು ದುರುಪಯೋಗಮಾಡದಿರದು. ಅದರೊಂದಿಗೆ ರಾಜ್ಯದ ಸೋತ ವಿರೋಧಿ ಪಡೆ ಗಾಯವನ್ನು ಕೆದಕಿಕೊಂಡು ಆಕ್ರಮಣ ಮಾಡಲು ಸಜ್ಜಾಗಿರುತ್ತದೆ. ನಿಮ್ಮ ಆಸೆ, ಸ್ವಾರ್ಥಗಳೇನೇ ಇದ್ದರೂ ಅವನ್ನು ಜನಹಿತದಿಂದಲೇ ಸಾಧಿಸಬೇಕೇ ಹೊರತು ಅಧಿಕಾರದ ಗರ್ವದಿಂದಲ್ಲ. ಇನ್ನೊಂದು ವರ್ಷದಲ್ಲಿ ಸಂಸತ್ತಿನ ಚುನಾವಣೆ ಎದುರಾಗಲಿದೆ. ಈಗ ನೀವೇನನ್ನು ಬಿತ್ತುತ್ತೀರೋ, ಬೆಳೆಸುತ್ತೀರೋ, ಪೋಷಿಸುತ್ತೀರೋ ಅದರ ಆಧಾರದಲ್ಲಿ ಮುಂದಿನ ಬೆಳೆ. ಹನಿಗೂಡಿ ಹಳ್ಳ ಎನ್ನುವಂತೆ ಒಂದೊಂದು ರಾಜ್ಯವೂ ಸೇರಿ ದೇಶವಾಗುವಲ್ಲಿ ನಿಮ್ಮ ಯಾನವು ಇಲ್ಲಿಂದಲೇ ಆರಂಭವಾಗಬೇಕಾಗಿದೆ. ಇದಕ್ಕೆ ನಿಮಗೆ ಸುದೃಢ ಅಧಿಕಾರಶಾಹಿಯ ಬೆಂಬಲ ಬೇಕಾಗುತ್ತದೆ. ಭ್ರಷ್ಟರಾಜ್ಯದ ನಿರ್ಮಾಣದಲ್ಲಿ ಅಧಿಕಾರಶಾಹಿಯ ಪಾತ್ರ ಬಹಳ ದೊಡ್ಡದು. ಸರಕಾರದ ಯೋಜನೆಗಳು ಜನರನ್ನು ತಲುಪುವ ದಾಮಾಶಯವು ಇವರನ್ನು ಅವಲಂಬಿಸಿದೆ. ಆದ್ದರಿಂದ ಅಧಿಕಾರಶಾಹಿಗೆ ಅವರ ಸ್ಥಾನವೇನೆಂಬುದನ್ನು ತೋರಿಸಿ ದುಡಿಸಿಕೊಳ್ಳಬೇಕಾಗಿದೆ. ಇವರಲ್ಲಿ ಪೊಲೀಸ್ ವ್ಯವಸ್ಥೆಯು ಎರಡು ಬಾಯಿಯ ಕತ್ತಿಯಂತೆ. ಆಳುವವರು ಹೇಳಿದಂತೆ ನಡೆದುಕೊಳ್ಳುವ ಕಟ್ಟಪ್ಪಗಳಿಗೆ ನ್ಯಾಯನಿರ್ಣಯವಿರುವುದಿಲ್ಲ. ಅವರನ್ನು ಕಾನೂನಿಗನುಸಾರವಾಗಿ ದುಡಿಸುವುದು ನಿಮ್ಮ ಕರ್ತವ್ಯ. ನೀವು 5 ಗ್ಯಾರಂಟಿಗಳನ್ನು ಘೋಷಿಸಿ ಇವನ್ನು ಸಚಿವ ಸಂಪುಟದ ಮೊದಲ ಸಭೆಯಲ್ಲೇ ಜಾರಿಗೊಳಿಸುವುದಾಗಿ ವಚನಬದ್ಧರಾಗಿದ್ದೀರಿ, ಅವನ್ನು ನೆನಪಿಸುವ ಅಗತ್ಯವಿಲ್ಲವಾದರೂ ಮುಂದಿನ ವಿವರಣೆಗಾಗಿ ಇಲ್ಲಿ ನೀಡಲಾಗಿದೆ:
1. ಗೃಹಲಕ್ಷ್ಮೀ: ಮನೆಯೊಡತಿಗೆ ಪ್ರತೀ ತಿಂಗಳು ರೂ.2,000.
2. ಅನ್ನ ಭಾಗ್ಯ: ಬಡವರಿಗೆ ಪ್ರತೀ ತಿಂಗಳು 10 ಕೆಜಿ ಅಕ್ಕಿ ಉಚಿತ.
3. ಯುವನಿಧಿ: ಪ್ರತೀ ತಿಂಗಳು ನಿರುದ್ಯೋಗ ಭತ್ತೆ: ರೂ.3,000 ಪದವೀಧರರಿಗೆ; ರೂ.1,500 ಡಿಪ್ಲೊಮಾ ಪದವೀಧರರಿಗೆ.
4. ಗೃಹ ಜ್ಯೋತಿ: -(ನಿಮ್ಮ) ಮನೆಗೆ 200 ಯುನಿಟ್ ವಿದ್ಯುತ್ ಪ್ರತೀ ತಿಂಗಳು ಉಚಿತ.
5. ಉಚಿತ ಪ್ರಯಾಣ: ಮಹಿಳೆಯರಿಗೆ ಬಸ್ ಸಂಚಾರ ಉಚಿತ.
ಈ 5 ಗ್ಯಾರಂಟಿಗಳದ್ದು ಒಂದು ಹಂತದ ಆಡಳಿತವಾದರೆ ಇನ್ನು ನೀವು ವಿರೋಧಿಸಿದ ಬಿಜೆಪಿ ಸರಕಾರದ ಬಗ್ಗೆ ನೀವು ಪ್ರಕಟಿಸಿದ ಈ 5 ಅಂಶಗಳ ಕಡೆಗೂ ನೀವು ಗಮನ ನೀಡಬೇಕಾಗಿದೆ:
1. ಹಗರಣದ ಮೇಲೆ ಹಗರಣ: -ಕಳೆದ 4 ವರ್ಷಗಳಲ್ಲಿ ಕನ್ನಡಿಗರಿಂದ ರೂ. 1,50,000 ಕೋಟಿ ಲೂಟಿ ಮಾಡಲಾಗಿದೆ.
2. ಬೆನ್ನೆಲುಬು ಮುರಿದ ಬೆಲೆ ಏರಿಕೆ: -ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಆಹಾರ ಪದಾರ್ಥಗಳು ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಜೇಬು ಸುಡುತ್ತಿದೆ.
3. ಹೆಚ್ಚಿದ ನಿರುದ್ಯೋಗ: ಉದ್ಯೋಗಗಳ ಅಭಾವ ಮತ್ತು ಹೆಚ್ಚಿದ ನಿರುದ್ಯೋಗದಿಂದ ಯುವ ಕನ್ನಡಿಗರು ಹತಾಶೆಗೊಂಡಿದ್ದಾರೆ.
4. ಕನ್ನಡಾಭಿಮಾನದ ಮೇಲೆ ದಾಳಿ: -ಕನ್ನಡ ಭಾಷೆ, ಸಂಸ್ಕೃತಿ, ಧ್ವಜ, ಗಡಿ ಮತ್ತು ಸಂಪನ್ಮೂಲಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ.
5. ದುರ್ಬಲ ಹಾಗೂ ಅಸಮರ್ಥ ಸರಕಾರ: -ಆಡಳಿತ ವೈಫಲ್ಯ, ದೂರದೃಷ್ಟಿಯ ಕೊರತೆ, ಕಾರ್ಯನೀತಿ ರೂಪಿಸುವಲ್ಲಿ ನಿಷ್ಕ್ರಿಯ. ಗ್ಯಾರಂಟಿಗಳನ್ನು ಈಡೇರಿಸುವುದು ಹೇಗೆ ಎಂಬುದು ನಿಮಗೆ ಗೊತ್ತು. ನೀವು ಘೋಷಿಸಿದ ಕೊಡುಗೆಗಳಿಗೆ ವಾರ್ಷಿಕ ಸುಮಾರು ರೂ.50 ಸಾವಿರ ಕೋಟಿ ವೆಚ್ಚವಾಗುವುದೆಂದು ನಮ್ಮ (ಮತ್ತು ಪ್ರಾಯಃ ನಿಮ್ಮದೂ) ಅಂದಾಜು. ಇದಕ್ಕೆ ಬೇಕಾದ ಮೂಲವನ್ನು ಕ್ರೋಡೀಕರಿಸುವುದನ್ನು ಯೋಚಿಸಿ. (ಅನ್ನ ಭಾಗ್ಯವನ್ನು ನೀವು ಹಿಂದೆಯೇ ಜಾರಿಗೊಳಿಸಿದ್ದೀರಿ. ಅದನ್ನು ಬಿಜೆಪಿ ಸರಕಾರ 4 ಕೆಜಿಗೆ ಇಳಿಸಿತು.) ಆಡಳಿತವೆಂಬುದೇ ಒಂಟಿತಂತಿಯ ಮೇಲಣ ಮಾತ್ರವಲ್ಲ, ಬೆಂಕಿಯ ಮೇಲಣ ನಡಿಗೆಯಾದ್ದರಿಂದ ಅದನ್ನು ನಿಭಾಯಿಸುವುದು ಸಾಹಸವೇ ಸರಿ. ಅನುಭವೀ ರಾಜಕಾರಣವು ಅದರ ಯಶಸ್ಸಿನ ಬುನಾದಿ. ಎಲ್ಲರಿಗೂ ಉಚಿತ ಉಡುಗೊರೆಗಳನ್ನು ಶರತ್ತುರಹಿತವಾಗಿ ಅನಿಯಂತ್ರಿತವಾಗಿ ನೀಡಿದರೆ ಅದು ಅಪಾತ್ರದಾನವಾಗುವ ಅಪಾಯವಿದೆ. ಬಹುರಾಷ್ಟ್ರೀಯ ಉದ್ಯಮಿಗಳಿಗೂ ಸ್ಲಮ್ಮಿನಲ್ಲಿರುವವರಿಗೂ ಒಂದೇ ಮಾಪನ ಸಲ್ಲದು. ಪ್ರಾಯಃ ‘ಬಡವರಿಗೆ’ ಎಂಬ ಷರಾ ಇದ್ದಿದ್ದರೆ ಇದು ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ಈ ಸವಲತ್ತುಗಳನ್ನು ಅವರಿಗೆ ಮೊದಲು ನೀಡಿ ಅದು ಯಶಸ್ವಿಯಾದರೆ ಇತರರಿಗೂ ವಿಸ್ತರಿಸಬಹುದು. ಹಾಗೆಯೇ ಕೃಷಿಸಾಲ ಮನ್ನಾ ಮುಂತಾದ ವಿನಾಯಿತಿ/ರಿಯಾಯಿತಿಗಳನ್ನು ಘೋಷಿಸುವುದರ ಬದಲಿಗೆ ಅವರಿಗೆ ಬೇಕಾದ ಗೊಬ್ಬರ ಮತ್ತಿತರ ಕೃಷಿ ಸ್ವತ್ತುಗಳನ್ನು ಕನಿಷ್ಠ ಬೆಲೆಗೆ ಒದಗಿಸಿದರೆ ಅದೇ ಅವರಿಗೆ ದೊಡ್ಡ ಕೊಡುಗೆ.
ಜನಸಾಮಾನ್ಯರಿಗೆ, ಉದ್ಯೋಗಿಗಳಿಗೆ, ದೈನಂದಿನ ಅಗತ್ಯಗಳ ವಿನಾಯಿತಿ ನೀಡಬೇಕಾದರೆ ತೈಲಬೆಲೆಯನ್ನು, ಅಡುಗೆ ಅನಿಲದ ಬೆಲೆಯನ್ನು ತಗ್ಗಿಸಿ. ಅದಕ್ಕೆ ಅನುಗುಣವಾಗಿ ಇತರ ಬೆಲೆಗಳೂ ತಾವಾಗಿಯೇ ತಗ್ಗುವವು. ಮಹಿಳೆಯರಿಗೆ ಬಸ್‌ಪ್ರಯಾಣ ಉಚಿತವೆಂಬ ಘೋಷಣೆಯನ್ನೇನೋ ಮಾಡಿದ್ದೀರಿ. ಅನಗತ್ಯವಾಗಿ ಪ್ರಯಾಣಿಸಲು ಇದು ಪ್ರಚೋದನೆಯಾಗಬಾರದು. ಅಗತ್ಯಪ್ರಯಾಣಕ್ಕೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳ ನಿರ್ದಿಷ್ಟತೆಯೊಂದಿಗೆ ವರ್ಗಾಯಿಸಲಾಗದ ಉಚಿತ ಪಾಸುಗಳನ್ನು ನೀಡಿದರೆ ಅವುಗಳ ಬೇಕಾಬಿಟ್ಟಿ ದುರುಪಯೋಗವಾಗುವುದಿಲ್ಲ. ಅಂತೆಯೇ ಮಹಿಳೆಯರಿಗೆ ಮಾಸಿಕ ರೂ. 2,000 ನೀಡುವುದಾಗಿ ಹೇಳಿದ್ದೀರಿ. ಇದಕ್ಕೂ ನಿಯಮಗಳು ಅನ್ವಯಿಸಬೇಕಲ್ಲವೇ? ಮನೆಯೊಡತಿಯಾಗುವುದಕ್ಕಾಗಿಯೇ ಕುಟುಂಬಗಳು ವಿಭಜನೆಯಾಗುವ ಅಪಾಯವಿದೆ. ಇವನ್ನು ಟೀಕಿಸಿದವರೇ ಬಿಟ್ಟಿ ಸಿಗುವುದಾದರೆ ‘ನನಗೂ ಇರಲಿ, ನಮ್ಮಪ್ಪನಿಗೂ ಇರಲಿ’ ಎಂದು ಸ್ವೀಕರಿಸುತ್ತಾರೆ. ಅದು ಮನುಷ್ಯ ಜಾಯಮಾನ. ಈಗ ರಾಜ್ಯವು ಸಾಕಷ್ಟು ಸಾಲದ ಸುಳಿಯಲ್ಲಿದೆ. ತನ್ಮಧ್ಯೆ ಸಂಬಳ-ಸವಲತ್ತುಗಳನ್ನು ಹೆಚ್ಚಿಸಲು ಎಲ್ಲ ಹಂತದ ಅಧಿಕಾರಿಗಳು/ನೌಕರರು ಬೇಡಿಕೆಯನ್ನು ಹೂಡಬಹುದು. ಇದಕ್ಕೆ ಅತೃಪ್ತ ವಿರೋಧಿ ರಾಜಕಾರಣವು ಕುಮ್ಮಕ್ಕು ನೀಡಬಹುದು. ಆದ್ದರಿಂದ ಆರಂಭದಲ್ಲೇ ರಾಜ್ಯದ ಶೋಚನೀಯ ಆರ್ಥಿಕ ಸ್ಥಿತಿಯನ್ನು ವಿವರಿಸಿ ಬೇಡಿಕೆಗಳನ್ನು ಕನಿಷ್ಠ ಒಂದು ವರ್ಷಕಾಲ ಶೈತ್ಯಾಗಾರದಲ್ಲಿಡಲು ವ್ಯವಸ್ಥೆ ಮಾಡುವುದು ಒಳ್ಳೆಯದು. ಮಿತವ್ಯಯವು ನಿಮ್ಮ ಮಂತ್ರವಾಗಬೇಕು. ಮೇಜವಾನಿಗೆ ಬಹಳ ಕಾಲ ಕಾಯಬೇಕು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರವು ಜಿಎಸ್‌ಟಿಯನ್ನು ಸಂಗ್ರಹಿಸುತ್ತದೆ. ಅದೇ ಪ್ರಮಾಣದಲ್ಲಿ ಅದನ್ನು ಮರಳಿಸುವುದಿಲ್ಲ. ಕರ್ನಾಟಕದಿಂದ ಸಂಗ್ರಹವಾಗುವ ಹಣದಲ್ಲಿ ನ್ಯಾಯವಾಗಿ ನೀಡಬೇಕಾದ ಪಾಲನ್ನೂ ಕೇಂದ್ರವು ನೀಡುತ್ತಿಲ್ಲವೆಂಬ ತಗಾದೆಯನ್ನು ಎಲ್ಲ ಅರ್ಥಶಾಸ್ತ್ರಜ್ಞರೂ ಮಾಡುತ್ತಾರೆ. ಆದರೆ ಡಬಲ್ ಇಂಜಿನಿನ ಸರಕಾರದಲ್ಲಿ ಕೇಂದ್ರ ದೊಡ್ಡಣ್ಣನಾಗಬೇಕು ತಾನೇ? ಈ ದೊಡ್ಡಣ್ಣನಲ್ಲಿ ಪ್ರಶ್ನೆಮಾಡುವ ಧೈರ್ಯ, ಅಭಿಮಾನ, ಕೆಚ್ಚು, ಟ್ರೈಲರ್‌ನಂತಿರುವ ತಮ್ಮನಲ್ಲಿರುವುದಿಲ್ಲ. ಈಗ ಅದಿಲ್ಲ. ನಿಮ್ಮ ಹೊಸಹಗಲು ಮೂಡಿದೆ. ಆದ್ದರಿಂದ ಕಳೆದ ಅನೇಕ ವರ್ಷಗಳ ಮತ್ತು ಮುಂದೆ ಬರಲಿರುವ ಪಾಲನ್ನು ಪಡೆಯಲು ಬೇಕಾದ ಕ್ರಮಕ್ಕೆ ನೀವು ಸಿದ್ಧರಿರಬೇಕು. ಮಗು ಅತ್ತರೆ ಮಾತ್ರ ಅನ್ನ. ಕಳೆದ ಐದು ವರ್ಷಗಳ ಆಡಳಿತದಲ್ಲಿ ಕೋಮುವಾದವನ್ನು ಬಲಪಡಿಸುವ ಎಲ್ಲ ವಿಭಜನವಾದಿ ಹುನ್ನಾರಗಳು ನಡೆದಿವೆ. ಕೋಮುವಾದಿ, ಮೂಲಭೂತವಾದಿ ಸಂಘಟನೆಗಳಿಗೆ, ಸಂಸ್ಥೆಗಳಿಗೆ, ಮುಫತ್ತಾಗಿ ಇಲ್ಲವೇ ನಾಮ್‌ಕೇವಾಸ್ತೇ ಬೆಲೆಯಲ್ಲಿ ಅಪಾರ ಬೆಲೆಯ ಸೌಕರ್ಯಗಳನ್ನು ನೀಡಲಾಗಿದೆ. ಅವುಗಳ ಪುನರಾವಲೋಕನ ಅಗತ್ಯ. ಅಪಾತ್ರದಾನವಾಗಿದ್ದಲ್ಲಿ ಅವನ್ನು ಕಾನೂನು ರೀತ್ಯಾ ದಂಡ ಸಹಿತ ಮರಳಿ ಪಡೆಯುವುದು ಜನಹಿತ ಕರ್ತವ್ಯ. ಇಂಥಲ್ಲೆಲ್ಲ ಕಾನೂನಿನ ಅಧ್ಯಯನ ಮತ್ತು ಅನುಷ್ಠಾನ ಅಗತ್ಯ. ಯಾರನ್ನೋ ತೃಪ್ತಿಗೊಳಿಸಲು ಅವಸರದಲ್ಲಿ ಕ್ರಮಕೈಗೊಂಡು ಅವು ನ್ಯಾಯಾಲಯಗಳಿಂದ ರದ್ದಾಗುವುದು ಯಾರಿಗೂ ಬೇಡ. ಸರಕಾರಗಳು ಹಾವು ಸಾಯಲೂ ಬಾರದು; ಕೋಲು ಮುರಿಯಲೂ ಬಾರದು; ಎಂದು ಇಂತಹ ಮೇಲ್ನೋಟಕ್ಕೆ ನ್ಯಾಯವೆಂದು ಕಾಣುವ ಆದೇಶಗಳನ್ನು ‘ಕರ್ಮಣ್ಯೇವ ಅಧಿಕಾರಸ್ತೇ ಮಾಫಲೇಷು ಕದಾಚನ’ ಮಾಡಿ ಜಾರಿಕೊಳ್ಳುವುದಿದೆ. ನೀವು ಫಲವಿಲ್ಲದ್ದನ್ನು ಮಾಡಬೇಡಿ. ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ನೀವೇ ಅಂದಂತೆ ‘ಹಗರಣದ ಮೇಲೆ ಹಗರಣ’ ನಡೆದಿದೆ. ಗುತ್ತಿಗೆದಾರರ ದೂರು ಇನ್ನೂ ನ್ಯಾಯಾಲಯದ ವರೆಗೆ ಹೋಗದೆ ಪ್ರಧಾನಿಗೆ ಮೊರೆಹೋಗುವಲ್ಲಿಗೆ ಸ್ಥಗಿತವಾಗಿದೆ. ಕೋವಿಡ್-19ರಿಂದ ಆರಂಭವಾದ ಹಗರಣಗಳಿಂದಾಗಿ ಖಜಾನೆ ಲೂಟಿಯಾದದ್ದು ಮಾತ್ರವಲ್ಲ, ಸಮಾಜದ ಹಿತಕ್ಕೆ, ಶಾಂತಿಗೆ ಭಂಗ ಬಂದಿದೆ. ಇದರಲ್ಲಿ ಅಧಿಕಾರಿಗಳೂ ರಾಜಕಾರಣಿಗಳೂ ಸಮಪಾಲಿನ ಸಿಂಹಗಳು. ಇವನ್ನು ‘ಯಾರೂ ದೂರು ನೀಡಿಲ್ಲ’ವೆಂಬ ಕುಂಟು ನೆಪ ಹೇಳದೆ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿ ವಿಚಾರಿಸಿ ಅಥವಾ ಲೋಕಾಯುಕ್ತದಿಂದಲೋ ಇತರ ತನಿಖಾ/ಪರಿಣತರ ತಂಡದಿಂದಲೋ ವರದಿಗಳನ್ನು ತರಿಸಿ. ಕಾಟಾಚಾರದ ಬದಲು ಅವನ್ನು ತಕ್ಷಣ ದಂಡಿಸಿ. ಬಹುಕಾಲದಿಂದ ಅನೇಕ ವರದಿಗಳು ದಶಕಗಳಿಂದ ಶೈತ್ಯಾಗಾರದಲ್ಲಿವೆ, ಧೂಳು ಹಿಡಿದು ಉಳಿದಿವೆ; ವಾಸ್ತವವಾಗಿ ನಿಷ್ಫಲವಾಗಿ ಅಳಿದಿವೆ.
ಎಲ್ಲರೂ ಸಾಮರಸ್ಯದಿಂದ ಬದುಕಬೇಕಾದರೆ ಕೋಮು, ಜಾತಿ, ಧರ್ಮ ಇವೆಲ್ಲ ಮನೆಯೊಳಗೇ ಇರಬೇಕು. ಅವನ್ನು ಈಗಾಗಲೇ ಬೀದಿಪಾಲು ಮಾಡಲಾಗಿದೆ. ಅವು ದ್ವೇಷದ ಬೆಂಕಿಯನ್ನುಗುಳುತ್ತಿವೆ. ನೊಂದವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಶಾಂತಿಸಮಿತಿಗಳು ಎಲ್ಲ ಊರಿನಲ್ಲೂ ಇದ್ದರೆ ಒಳ್ಳೆಯದು. ಯಾವುದೇ ಸಮಿತಿಗಳಲ್ಲಿ ಅಧಿಕಾರ ವರ್ಗಕ್ಕೆ ಮಣೆ ಹಾಕುವುದು ಕಡಿಮೆಯಾಗಬೇಕು.
ಇಂದಿನ ಮಕ್ಕಳೇ ಮುಂದಿನ ಜನಾಂಗ. ಈ ಮಾತನ್ನು ಕೇಳೀಕೇಳೀ ಸಾಕಾಗಿದೆಯಾದರೂ ಮತ್ತೆ ಮತ್ತೆ ನೆನಪಿಸಬೇಕಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವು ಉಳಿಯಬೇಕಾದರೆ, ಬೆಳೆಯಬೇಕಾದರೆ ಅವರಲ್ಲಿ ಮೂಢನಂಬಿಕೆಗಳು ಕಡಿಮೆಯಾಗಬೇಕು. ಅನುಸರಿಸಬೇಕಾದ, ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು ಹೊಸದಾಗಿರಬೇಕು; ಪುರೋಗಾಮಿಯಾಗಿರಬೇಕು. ವಿಜ್ಞಾನವನ್ನು ಹಿಂದಕ್ಕೆ ಸರಿಸಲು ಬೇಕಾದ ಏರ್ಪಾಡನ್ನು ಹಿಂದಿನ ಶಿಕ್ಷಣ ಸಚಿವರು ಮಾಡಿದ್ದಾರೆ. ಅವನ್ನು ಮತ್ತೆ ಪರಿಶೀಲಿಸಿ ವ್ಯಕ್ತಿತ್ವ ವಿಕಸನದ ಶಿಕ್ಷಣ ವ್ಯವಸ್ಥೆಯು ಬರಬೇಕಾಗಿದೆ. ಶಿಕ್ಷಣ ಅಂತಲ್ಲ ಎಲ್ಲ ಕ್ಷೇತ್ರಗಳಲ್ಲೂ ಹಿಂದೆ ಸರಿದ ಪಠ್ಯ ಕ್ರಮವು ಮುಂದೆ ಬರಬೇಕು. ಕನ್ನಡ ಭಾಷೆ ಎಂದಿಗಿಂತ ಅಪಾಯದಲ್ಲಿದೆ. ಹಿಂದೆಲ್ಲ ಹೆಚ್ಚಿದ ನಗರೀಕರಣ, ಕನ್ನಡಿಗರ ಇಚ್ಛಾಶಕ್ತಿಯ ಕೊರತೆ ಮುಂತಾದ ಕಾರಣಗಳಿದ್ದವು. ಆದರೆ ಈಗ ಕೇಂದ್ರ ಸರಕಾರದ ಯಾಜಮಾನ್ಯವು ಒಕ್ಕೂಟ ಸಭ್ಯತೆಯನ್ನೇ ದೂರೀಕರಿಸಿದೆ. ಹಿಂದಿಯ ಬಲವಂತ ಹೇರುವಿಕೆ ನಡೆಯುತ್ತಿದೆ. ನಂದಿನಿಯನ್ನು ನುಂಗಲು ಅಮುಲ್ ಕಾದಿದೆ. ಬ್ಯಾಂಕುಗಳ ತಪದ ಮನೆಯಾಗಿದ್ದ ಕರ್ನಾಟಕದಿಂದ ಅವನ್ನು ಬಲಾತ್ಕಾರವಾಗಿ ಒಯ್ದ ಉದಾಹರಣೆಗಳು ಕಣ್ಣಮುಂದಿವೆ. ಇವೆಲ್ಲ ನಡೆದರೂ ಕರಾವಳಿಯ ಬುದ್ಧಿವಂತರು ಮಾನಭಂಗವನ್ನು ಒಪ್ಪಿಕೊಂಡಂತಿದ್ದಾರೆ. ಅವನ್ನು ನೀವೇ ನಿರ್ಮೋಹಿಗಳಾಗಿ ಸರಿಪಡಿಸಬೇಕು. ಹೀಗಾಗಬೇಕಾದರೆ ಅನುಭವ ಮತ್ತು ಅರ್ಹತೆಯ ವ್ಯಕ್ತಿಗಳು ಆಯಾಯ ಸ್ಥಾನದಲ್ಲಿರಬೇಕು. ನಿಮ್ಮಲ್ಲಿ ಬೇಕಾದ ಪರಿಣತ ರಾಜಕಾರಣಿಗಳಿದ್ದಾರೆ. ಬೇಕಾದದ್ದು ಇಚ್ಛಾಶಕ್ತಿ. ನೀವು ಏನು ಮಾಡಿದರೂ ತಪ್ಪೆಂದು ವಿರೋಧಿಗಳು ಹೇಳಬಹುದು. ಅವರು ಹೇಳಬೇಕಾದ್ದು ಅವರ ರಾಜಕೀಯ ಕರ್ತವ್ಯ. ಆದರೆ ಸರಿಯಾದ್ದು ನಡೆಯಬೇಕೆಂಬುದು ನಿಮ್ಮ ಕರ್ತವ್ಯವಾಗಿರಬೇಕು. ಅವರು ಹೇಳುತ್ತಿರಲಿ; ಸರಿದಾರಿಯಲ್ಲಿ ನಡೆದರೆ ನಿಮಗೇಕೆ ಅಳುಕು, ಭಯ?
ಹಾಗೆಯೇ ನೀವು ಮಾಡುವುದೆಲ್ಲವೂ ಸರಿಯೆಂದು ಹೊಗಳುವ ಇನ್ನೊಂದು ತಂಡವು ಇದ್ದೇ ಇರುತ್ತದೆ. ಅವರನ್ನೂ ಅಗತ್ಯ ದೂರದಲ್ಲಿಡುವುದೂ ಒಳ್ಳೆಯದು. ‘‘ನನ್ನ ಶತ್ರುಗಳಿಂದ ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ; ನನ್ನ ಮಿತ್ರರಿಂದ ನೀನೇ ರಕ್ಷಿಸಬೇಕಷ್ಟೇ’’ ಎಂದು ದೇವರಲ್ಲಿ ಒಬ್ಬಾನೊಬ್ಬ ಪ್ರಾರ್ಥಿಸಿದ್ದಾನಂತೆ. ಅದನ್ನೇ ನೀವೂ ಅನುಸರಿಸುವುದು ಒಳ್ಳೆಯದು. ಅವರವರ ಲಾಭಕ್ಕಾಗಿ ನಿಮ್ಮ ಜೊತೆ ಕೋರಸ್ ಹಾಡಲು ಬೇಕಾದಂತೆ ಶ್ರುತಿ ಬದಲಾಯಿಸಿಕೊಳ್ಳುವ ವಿದ್ವಾಂಸರು ಬೇಕಷ್ಟಿರುತ್ತಾರೆ. ‘ರಾಮಾಯ ಸ್ವಸ್ತಿ ರಾವಣಾಯ ಸ್ವಸ್ತಿ’ಯ ಪಡೆಯ ಬಗ್ಗೆಯೂ ಜಾಗ್ರತೆಯಿರಲಿ. 2024ರ ಸಂಸತ್ ಚುನಾವಣೆಯು ಎದುರಿದೆ. ಸದ್ಯ ದಕ್ಷಿಣ ಭಾರತದ ಇತರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಇವುಗಳು ಬಿಜೆಪಿಯೇತರ ಸರಕಾರಗಳನ್ನು ಹೊಂದಿವೆ. ಇದರಿಂದಾಗಿ ಇವುಗಳು ನಿಮ್ಮೆಂದಿಗೆ ಸಮಾನ ಪ್ರಾದೇಶಿಕ ಆಸಕ್ತಿಯನ್ನು ಹೊಂದಿರಬಹುದು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾದರೂ ಸದ್ಯ ಕೇಂದ್ರ ಸರಕಾರವು ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸಲು ಹೂಡುವ ತಂತ್ರವನ್ನು ವಿರೋಧಿಸಲು, ಪ್ರತಿಭಟಿಸಲು, ಇದು ಒಳ್ಳೆಯ ಸಂದರ್ಭ. ಕಾಂಗ್ರೆಸ್ ಸರಕಾರವಿರುವ ಇತರ ರಾಜ್ಯಗಳೊಂದಿಗೂ ಒಂದು ಜಂಟಿ ವೇದಿಕೆಯನ್ನು ಸ್ಥಾಪಿಸಬಹುದು. ಕೇಂದ್ರದ ಕೆಲವು ಪ್ರತಿಗಾಮಿ ನೀತಿಗಳನ್ನು, ಜಿಎಸ್‌ಟಿ ಸೂತ್ರಗಳನ್ನು, ನಿಮ್ಮದೇ ಪಕ್ಷದ ಇತರ ಸರಕಾರಗಳು ಬೆಂಬಲಿಸುವ ಮೂಲಕ ನಿಮ್ಮನ್ನು ಅಸಹಾಯಕತೆಗೆ ದೂಡಿ ನಿಮ್ಮ ಪಕ್ಷದ ಸೈದ್ಧಾಂತಿಕ ಬುನಾದಿಯನ್ನೇ ಅಲುಗಾಡಿಸುವ ವಿರೋಧಾಭಾಸಗಳಿಗೆ ಎಡೆಕೊಡಬೇಡಿ. ಒಟ್ಟಿನಲ್ಲಿ ತೀರ ಕರುಣೆಯೂ ಅಲ್ಲದ, ತೀರ ಕ್ರೌರ್ಯವೂ ಅಲ್ಲದ, ಒತ್ತಡಗಳನ್ನು ಹೇರದ, ತಾಳಿಕೊಳ್ಳುವ, ವೇಗನಡಿಗೆಯ ಮಧ್ಯಮಮಾರ್ಗವೊಂದು ನಿಮ್ಮನ್ನು ಸಲಹುತಿರಲಿ. ನಿಮ್ಮ ಅನುಭವೀ ತಂಡ ಈ ಅಂಶಗಳನ್ನು ಗಮನಿಸಿದರೆ ಸರ್ವರಿಗೂ ಒಳ್ಳೆಯದು. ಈ ಎಲ್ಲ ಪ್ರಯಾಣದಲ್ಲಿ ನಿಮ್ಮಿಂದ ಅಪಾರ ನಿರೀಕ್ಷೆಯನ್ನು ಇಟ್ಟಿರುವ ಜನಸಾಮಾನ್ಯರು ನಿಮ್ಮ ಜೊತೆಗಿರುತ್ತಾರೆ.