ಒಂದು ಮದುವೆಯ ಕಥೆ

ಕಾಲದ ಪ್ರವಾಹದಲ್ಲಿ ನಾವು ಹಾಕಿಕೊಂಡ ಬಟ್ಟೆಗಳು ಇಸ್ತ್ರಿ ಮಾತ್ರವಲ್ಲ, ಹೊಳಪನ್ನೂ, ಬಣ್ಣವನ್ನೂ, ಕೊನೆಗೆ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತವೆ. ಸ್ಟೀವ್ಜೋಬ್ಸ್ ಬದುಕು ಗುಣಾತ್ಮಕವಾಗಿಯೂ ಋಣಾತ್ಮಕವಾಗಿಯೂ ಆದರ್ಶವೆನಿಸಬೇಕು. ಅಂಬಾನಿ-ಅದಾನಿಗಳಿಗೂ ಈ ವಿವೇಕೋದಯವಾಗಲಿ. ಆಗ ಈ ಮದುವೆ ಶುಭಂ ಅನ್ನಿಸೀತು.

Update: 2024-07-18 05:27 GMT

ಮದುವೆಗಳು ಅದ್ದೂರಿಯ ಅಥವಾ ಕನಿಷ್ಠ ಶಕ್ತಿಮೀರಿ ವೆಚ್ಚಮಾಡುವ ಸಮಾರಂಭಗಳು. ಅವುಗಳಿಗೆ ಬದುಕಿನ, ಸಾಮಾಜಿಕ ಬದ್ಧತೆಯ, ಸಿದ್ಧಾಂತಗಳ ಯಾವ ತರ್ಕವೂ ಹಿಡಿಸುವುದಿಲ್ಲ. ಆದರೂ ಕೆಲವೊಂದು ಮದುವೆಗಳನ್ನು ಗಮನಿಸಿದಾಗ ನಮ್ಮ ವ್ಯವಸ್ಥೆ ಯಾರ ಅನುಕೂಲಕ್ಕೆ, ಮತ್ತು ಇದರ ದುಷ್ಪರಿಣಾಮಗಳಲ್ಲದಿದ್ದರೂ ಅಡ್ಡ ಪರಿಣಾಮಗಳೇನು ಎಂಬುದು ಗಮನಾರ್ಹವಾಗುತ್ತದೆ. ಕಳೆದ ಕೆಲವು ವಾರಗಳಿಂದ ದೇಶದೆಲ್ಲೆಡೆ ಸುದ್ದಿಯಾದದ್ದು ಮುಕೇಶ್ ಅಂಬಾನಿಯವರ ಎರಡನೆಯ ಮಗ ಅನಂತ್ ಅಂಬಾನಿ ಮದುವೆಯಾಗುತ್ತಿರುವ ಬಗ್ಗೆ. ಅದೀಗ ನಿಶ್ಚಿತಾರ್ಥ ಮುಂತಾದ ಏಳು ಸುತ್ತಿನ ಕೋಟೆಯನ್ನು ದಾಟಿ, ಮದುವೆಯೆಂಬ ಅಂತಿಮ ಸುತ್ತನ್ನು ದಾಟಿದೆ. ನವವಿವಾಹಿತರಿಗೆ ಒಳ್ಳೆಯದಾಗಲಿ.

ಆದರೂ ಈ ಸಮಾರಂಭ ಹೊಸ ಗಡಿರೇಖೆಗಳನ್ನು ಸೃಷ್ಟಿಸಿದೆ. ಅಂಬಾನಿಗಳ ಕುಟುಂಬದ ಈ ಹಿಂದಿನ ಸಮಾರಂಭಗಳು ಇಷ್ಟೊಂದು ಮಹತ್ವವನ್ನು ಪಡೆದಿರಲಿಲ್ಲ. (ದಶಕಗಳ ಹಿಂದೆ ವಿಜಯ್ ಮಲ್ಯ ಅವರ ಮದುವೆ ಗೋವಾದಲ್ಲಿ ಹೀಗೇ ಅದ್ದೂರಿಯಾಗಿಯೇ ನಡೆದರೂ ಅದು ರಾಜಕೀಯ ಮತ್ತಿತರ ಕ್ಷೇತ್ರಗಳ ಶಕ್ತಿಪ್ರದರ್ಶನವಾಗಿರಲಿಲ್ಲ.) ಈ ಬಾರಿ ಅದು ಖಾಸಗಿ ಕ್ಷೇತ್ರದ ಚಿಪ್ಪೊಡೆದು ಸಮಾಜೋ-ರಾಜಕೀಯ-ಧಾರ್ಮಿಕ-ಮನೋರಂಜಕ ಆಯಾಮಗಳಲ್ಲಿ ಶಕ್ತಿಯುತವಾಗಿ ಪ್ರದರ್ಶಿತವಾಗಿದೆ. ಪ್ರಧಾನಿ ಮೋದಿಯಿಂದ ಆರಂಭವಾಗಿ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರು, ಕಲಾವಿದರು ಹೀಗೆ ಆರಿಸಲ್ಪಟ್ಟ ಅತಿಥಿ ಮಹೋದಯರ ದಂಡೇ ಹಾಜರಾಗಿದೆ. ಬಹುತೇಕ ಅತಿಥಿಗಳು ಉಡುಗೊರೆ ನೀಡಿದ್ದಾರೆ; ಉಂಡೂ ಹೋದ, ಕೊಂಡೂ ಹೋದ ಎಂಬ ಹಾಗೆ ಬೆಲೆಬಾಳುವ ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆಂದೂ, ಇವರಲ್ಲಿ ಸಾಕಷ್ಟು ಅತಿಥಿಗಳು ಅಂಬಾನಿಯವರ ವೆಚ್ಚದಲ್ಲೇ ಬಂದು ಹೋಗಿದ್ದಾರೆಂದೂ ಮಾಧ್ಯಮಗಳು ವರದಿಮಾಡಿವೆ. ಜನಮೇಜಯನ ಈ ಯಾಗಕ್ಕೆ ಯಾರನ್ನು ಬೇಕಾದರೂ ಎಳೆದು ತರುವ ಶಕ್ತಿಯಿರುವುದರಿಂದ ಇಂದ್ರನ ಕುದುರೆಯೂ ತಪ್ಪಿಸಿಕೊಳ್ಳಲಾರದು. ಈ ರೀತಿ ಕರೆಸಿ‘ಕೊಳ್ಳುವ’ ಅಗತ್ಯವಿತ್ತೇ? ನಿಶ್ಚಿತಾರ್ಥ ಸಂದರ್ಭದಲ್ಲಿ ಖಾಸಗಿ/ದೇಶೀ ವಿಮಾನ ನಿಲ್ದಾಣವನ್ನು ಅಂತರ್ರಾಷ್ಟ್ರೀಯಗೊಳಿಸಲಾಗಿತ್ತು. ಈ ಎಲ್ಲ ಸಮಾರಂಭಗಳೂ ವರನ ವೆಚ್ಚದಲ್ಲೇ ನಡೆದಿದ್ದರೆ ವಧುವಿನ ಮಾತಾಪಿತರು ಅದೃಷ್ಟವಂತರು. ಅದಲ್ಲವಾದರೆ ಆಂಗ್ಲ ಸಿನೆಮಾ ‘ಫಾದರ್ ಆಫ್ ದ ಬ್ರೈಡ್’ ಇಲ್ಲೂ ಸ್ವಲ್ಪ ಮಿಂಚಬಹುದು! ಈಗ ಯಾವ ಸಾರ್ವಜನಿಕ ಸೌಲಭ್ಯ ಸಲಕರಣೆಗಳೆಲ್ಲ ಅಂಬಾನಿಗೊಳಿಸಲ್ಪಟ್ಟಿವೆಯೆಂಬುದು ಕಾಲಗರ್ಭದಲ್ಲಿ ಚಿದಂಬರ ರಹಸ್ಯವಾಗಿ ಉಳಿಯುತ್ತದೆಯೇ ಅಥವಾ ಮಾಹಿತಿ ಹಕ್ಕಿನಡಿ ಬಹಿರಂಗವಾಗುತ್ತದೆಯೇ ಎಂಬುದನ್ನು ಕಾದು ನೋಡೋಣ.

ಉದ್ಯಮಿಗಳು ದೇಶವನ್ನಾಳುವುದೆಂದರೆ ಹೀಗೆ. ನಮ್ಮ ಶ್ರೀಸಾಮಾನ್ಯರು ಆರಾಧಿಸುವ ಸಿನೆಮಾ ತಾರೆಯರು, ಕ್ರೀಡಾಪಟುಗಳು, ಜೀಯಾ ಹಸಾದ ಎಂಬಂತೆ ಅಂಬಾನಿಯ ಒಡ್ಡೋಲಗದಲ್ಲಿ ಶೋಭಿಸಿದ್ದಾರೆ. ಇತರ ಪ್ರಾಯಃ ಎಲ್ಲ ಪ್ರತಿಪಕ್ಷ ನಾಯಕರೂ ಇದ್ದರು. ಅದರಲ್ಲೂ ಮಮತಾ ಬ್ಯಾನರ್ಜಿ, ಶರದ್ ಪವಾರ್, ಉದ್ಧವ್ ಠಾಕ್ರೆ ಮುಂತಾದವರು ರಾಜಕೀಯ ಮೇಲಾಟವನ್ನು ಬದಿಗೊತ್ತಿ ಪ್ರತ್ಯಕ್ಷರಾಗಿದ್ದರು. ರಾವಣನ ಒಡ್ಡೋಲಗದಲ್ಲಿ ಅಷ್ಟದಿಕ್ಪಾಲಕರು ಅಷ್ಟಮೂಲೆಗಳಲ್ಲಿ ಸ್ಥಾನ ಪಡೆದಿದ್ದರಂತೆ. ಅಂಬಾನಿಯ ಈ ವೈಢೂರ್ಯದಲ್ಲಿ ನಮ್ಮ ಸಿನೆಮಾ-ಕ್ರೀಡಾ ಆರಾಧ್ಯದೈವಗಳೆಲ್ಲ, ರಾಜಕಾರಣಿಗಳೆಲ್ಲ ಬಾಲ ಮಡಚಿಕೊಂಡು ದುಂಬಾಲು ಬಿದ್ದವರಂತೆ ಕಾಣುತ್ತಿದ್ದರು. ಧಾರ್ಮಿಕ ಮುಖಂಡರೂ ಈ ಯಾಗಕ್ಕೆ ಬಂದಿದ್ದಾರೆ. ಋಷಿಮುನಿಗಳು ಶಾಪ, ಪ್ರತಿಶಾಪ, ವರ ಮತ್ತು ಅದನ್ನು ನಿಷ್ಕ್ರಿಯಗೊಳಿಸಬಲ್ಲ ಪ್ರತಿವರ(?) ಹೊಂದಿದ್ದರಂತೆ. ಅಂತೆಯೇ ಇಂದಿನ ಧಾರ್ಮಿಕ ಮುಖಂಡರೂ. ಒಟ್ಟಿನಲ್ಲಿ ಇದೊಂದು ನಾವು ನೋಡದ ಮಾಯಾಬಝಾರ್ ಆಗಿ ಮೆರೆದಿದೆ. ವಿಶೇಷವೆಂದರೆ ಅಂಬಾನಿ-ಅದಾನಿ ವ್ಯವಹಾರ-ರಾಜಕಾರಣವನ್ನು ಟೀಕಿಸಿದ ಕಾಂಗ್ರೆಸಿನ ಸೋನಿಯಾ-ರಾಹುಲ್-ಪ್ರಿಯಾಂಕಾ ಅಥವಾ ಆಪ್ ಪಕ್ಷಾಧಾರಿತ ರಾಜಕಾರಣ ಇಲ್ಲಿ ಕಾಣಸಿಗಲಿಲ್ಲ. (ಡಿ.ಕೆ. ಶಿವಕುಮಾರ್ ಕಂಡರು!) ಬಾರದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯೂ ಇದ್ದರು!

ಮಾಧ್ಯಮದ ಪಾತ್ರವಂತೂ ವಿಶೇಷವಾಗಿ ಉಲ್ಲೇಖಗೊಳ್ಳಬೇಕು. ಮಾಧ್ಯಮಮಿತ್ರರು ಅದರಲ್ಲೂ ದೃಶ್ಯಮಾಧ್ಯಮದ ಅಗ್ನಿವೀರರು ಕಳೆದ ಕೆಲವು ವಾರಗಳಿಂದ ಅಲ್ಲೇ ಅಳಿಯತನದ ಆತಿಥ್ಯವನ್ನು ಉಂಡರೇನೋ ಎಂಬ ಹಾಗೆ ಪ್ರಚಾರವಿತ್ತು. ಅವರಿಗೆ ಸಿಕ್ಕ ಉಡುಗೊರೆಗಳ ಬಗ್ಗೆ ಉಲ್ಲೇಖವಿಲ್ಲ. ಅಂತೂ ಅನಂತ್ ಅಂಬಾನಿಯ ಮದುವೆ ಮುಗಿಸಿ ಹರಸಿದ ಮಾಧ್ಯಮದವರು ರಾಷ್ಟ್ರದ ಇತರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬಹುದು. (ಏಕೆಂದರೆ ಅವರಿಗೆ ಈ ಸಮಾರಂಭವೂ ಒಂದು ಸಾರ್ವಜನಿಕ ಸಮಸ್ಯೆಯೇ ಆಗಿತ್ತೆಂಬಂತೆ ಸುದ್ದಿ ಪ್ರಸಾರ ನಡೆಯಿತು.)

ಇವೆಲ್ಲದರ ನಡುವೆ ವಾಸ್ತವ ಚಿತ್ರಣ ‘ಕಭೀ ಖುಷ್, ಕಭೀ ಘಮ್’ ಎಂಬಂತೆ ವರನ ಆರೋಗ್ಯವೂ ಆತಂಕ ತರುವ ವಿಚಾರವೇ ಆಯಿತು. ಬಾಲ್ಯದಿಂದಲೂ ‘ಆಸ್ತಮಾ’ ಅಸೌಖ್ಯ ಹೊಂದಿದ ಅನಂತ್ ಸ್ಟಿರಾಯ್ಡ್ ಬಲದಿಂದ ಉಳಿದಿರಬೇಕು. ಪರಿಣಾಮವಾಗಿ 200 ಕಿಲೋಗ್ರಾಮ್ಗೂ ಹೆಚ್ಚು ತೂಕ ಹೊಂದಿದ ಈತ ಮದುವೆಯ ಪ್ರಯುಕ್ತ ವಿವಿಧ ಆರೈಕೆಗಳ ಪರಿಣಾಮವಾಗಿ 108 ಕಿಲೋಗ್ರಾಮ್ ತೂಕವನ್ನು ಕಳೆದುಕೊಂಡನಂತೆ. ವೈಯಕ್ತಿಕವಾಗಿ ಇದೊಂದು ಸುಧಾರಣೆ. ಕುಟುಂಬಕ್ಕೆ ಸಹಾನುಭೂತಿಪರ ಸಮಾಧಾನ. ಇದು ಅಳುವ ಕಡಲೊಳು ತೇಲಿ ಬಂದ ನಗೆಯ ಹಾಯಿದೋಣಿಯೇ? ಇಂತಹ ವಿಚಾರ ಈ ಎಲ್ಲ ಆಡಂಬರದ ನಡುವೆ ಸುಳಿಯುವ ಆತ್ಮವಾಗದಿರುತ್ತದೆಯೇ?

 

ಇವೆಲ್ಲದರ ಹಿಂದೆ ಸುಖ-ದುಃಖಗಳ ಮಿತಿಯನ್ನೂ ಚರ್ಚಿಸಬಹುದು. ಅದು ನಮ್ಮನ್ನು ಇನ್ನೆಲ್ಲಿಗೋ ಕೊಂಡೊಯ್ಯಬಹುದಾದರೂ ಪ್ರಸ್ತುತವೇ. ಇವೆಲ್ಲ ಮೆಫಿಸ್ಟೋಫಿಲಿಸ್ ಫಾಸ್ಟಸ್ಗೆ ಕರುಣಿಸಿದ ಸುಖ-ದುಃಖವೇ?

ಡಿವಿಜಿಯವರ ಮಂಕುತಿಮ್ಮನ ಕಗ್ಗ ಪಾರಂಪರಿಕ ಅರ್ಥದಲ್ಲಿ ಕಾವ್ಯ ಹೌದೋ ಅಲ್ಲವೋ, ಆದರೆ ಬದುಕಿನ ನೋವು ನಲಿವುಗಳನ್ನು ಕರ್ತವ್ಯಪರತೆಯಲ್ಲಿ ನಿರ್ವಹಿಸುವ ಬಗ್ಗೆ ಹೇಳಿದ ಬಗೆ ಮಾತ್ರ ಅನನ್ಯ. ಕನ್ನಡದ ದಿನಬಳಕೆಯಲ್ಲಿ ನಾವು ಓದದ ಭಗವದ್ಗೀತೆಯೋ ವೇದೋಪನಿಷತ್ತೋ ಬಳಕೆಯಾದಂತೆ ಮಂಕುತಿಮ್ಮನ ಕಗ್ಗ ಪ್ರಯೋಗ ವಾಗುತ್ತಿರುತ್ತದೆ. ತಮ್ಮ ಹಿಗ್ಗನ್ನು ಹಂಚಿಕೊಂಡು ಸಂತೋಷಿಸುವುದು ಮನುಷ್ಯನ ಜಾಯಮಾನ. ಅದಕ್ಕೆ ‘ಹಿಗ್ಗು’ ಎಂದು ಹೆಸರು. ಬದುಕು ಸಂತೋಷವಾಗಿದ್ದಾಗ ಹಿಗ್ಗುತ್ತದೆ. ಹಂಚಿಕೊಂಡಾಗ ಇನ್ನಷ್ಟು ಹಿಗ್ಗುತ್ತದೆ. ದುಃಖದಲ್ಲಿ ಕುಗ್ಗುತ್ತದೆ. ಅದನ್ನೂ ಹಂಚಿಕೊಂಡಾಗ ಸ್ವಲ್ಪವಾದರೂ ಕುಗ್ಗುತ್ತದೆ. ಎರಡೂ ಇತ್ಯಾತ್ಮಕವಾದದ್ದೇ; ಗುಣಸಂಪನ್ನ. ನಮಗೆ ದುಃಖವಾದರೆ ನಾವೇ ಅನುಭವಿಸಬೇಕು. ಅದಕ್ಕೆ ಪರಕಾಯ ಪ್ರವೇಶದ ಅವಕಾಶವಿಲ್ಲ. ಡಿವಿಜಿ ಬರೆದ ‘ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ| ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ಅಳಲು ದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ|ನಿಳೆಗೆ ಹರಡುವುದೇಕೊ?’ (ಮಂಕುತಿಮ್ಮನ ಕಗ್ಗ-719). ದುಃಖವನ್ನು ಹಂಚಿದರೆ ಅದು ಕಡಿಮೆಯಾಗುತ್ತದೆಂದು ನಂಬುವುದು ಕಷ್ಟ. ಮಡಿಲೊಳಗಿಟ್ಟ ಕೆಂಡ ಸುಡುತ್ತಿರುವಾಗ ಪರರು ಸಮಾಧಾನ ಹೇಳಿದರೆ ಅದು ನಿವೃತ್ತಿಯಾಗದು. ಬದುಕು ಅದನ್ನು ಸಹಿಸಿ ಮುಂದುವರಿಯಬೇಕಾಗುತ್ತದೆ. ಯಾರಾದರೂ ‘ಈ ದುಃಖವನ್ನು ಮರೆಯಿರಿ’ ಎಂದರೆ ಅವರಿಗೆ ದುಃಖದ ಪರಿಕಲ್ಪನೆಯಿಲ್ಲವೆಂದೇ ಅರ್ಥ. ‘ಸಹಿಸುವ ಪ್ರಯತ್ನಮಾಡಿ’ ಎಂದರೆ ಅದು ಸ್ವಲ್ಪ ವಿವೇಕದ ಮಾತಾಗಬಹುದು. ಆದ್ದರಿಂದ ದುಃಖವನ್ನು ಅನುಭವಿಸಿದವರು ಮತ್ತು ಅನುಭವಿಸುತ್ತಿರುವವರು ಮಾಡಬಹುದಾದ್ದೆಂದರೆ ತುಟಿಗಳನ್ನು ಹೊಲಿಯುವುದು ಅಥವಾ ಏನೂ ನಡೆದಿಲ್ಲವೆಂಬಂತೆ ನಡೆದುಕೊಳ್ಳುವುದು ಅಥವಾ ಅಧ್ಯಾತ್ಮದ ಅನುಭೂತಿಯನ್ನು ಪಡೆಯಲೆತ್ನಿಸುವುದು. ಇವನ್ನೂ ಹೇಳುವುದು ಸುಲಭ; ಅನುಸರಿಸುವುದು ಕಷ್ಟ. ಹಸಿದವನ ಮುಂದೆ ಹೇಗೋ ಹಾಗೆಯೇ ದುಃಖಿಯ ಮುಂದೆಯೂ ವೇದಾಂತವನ್ನು ಹೇಳದಿರುವುದು ಉಚಿತ. ಇಂತಹ ಸಂದರ್ಭದಲ್ಲಿ ವಿವೇಕಿಗಳು ಯಾವ ರೀತಿಯ ಸಲಹೆಗಳನ್ನೂ ನೀಡದೆ ಮೌನವಾಗಿರುತ್ತಾರೆ. ಇದು ಸಂಕ್ಷಿಪ್ತವಾಗಿ ದುಃಖ ಸಂಹಿತೆ.

ಇದು ದುಃಖದ ಕಥೆಯಾದರೆ ಸುಖದ ಕಥೆಯೇ ಬೇರೆ. ಯಾವುದು ಸುಖ, ಯಾವುದು ದುಃಖ ಎಂಬ ಪ್ರಮೇಯವೇ ಬೇರೆ. ಲೌಕಿಕದ ಮೋಹವೇ ದುಃಖವೆಂದು ಬುದ್ಧ ಸುಖಕ್ಕೆ ಬೆನ್ನು ಹಾಕಿ ಲೋಕಕಲ್ಯಾಣಕ್ಕೆ ಮರುಗಿದ. ಮಹಾನುಭಾವರ ಉದಾತ್ತ ಚರಿತ್ರೆಯೇ ಹೀಗೆ. ವ್ಯಾಸರಾಗಲಿ, ಯೇಸುವಾಗಲಿ, ಬಸವಣ್ಣನಾಗಲಿ ತನ್ನ ಕಾಲದ ಸಮಾಜದ ಬಗ್ಗೆ ಸಮಾಧಾನಪಡಲಿಲ್ಲ. ಎಲ್ಲರೂ ಅಸಹಾಯಕತೆಯಲ್ಲೇ ಬದುಕನ್ನು ಕೊನೆಗೊಳಿಸಿದರು. (ಪುರಾಣದಲ್ಲಿ ಬರುವ ಚಿರಂಜೀವತ್ವಕ್ಕೆ ನಾವು ತಲೆಯಾಡಿಸಬೇಕಿಲ್ಲ. ಅದೊಂದು ಅಮೂರ್ತ ಪ್ರತಿಮೆ.)

ತನ್ನ ಹಿಗ್ಗನ್ನು ಹಂಚಿಕೊಳ್ಳುವ ಅವಸರದಲ್ಲಿ ಮನುಷ್ಯನ ಎಲ್ಲ ರೀತಿಯ ಪ್ರದರ್ಶನಗಳೂ ಬಹಿರಂಗವಾಗುವುದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ನಡವಳಿಕೆಯಲ್ಲಿ. ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಮಾಡಿಕೊಂಡು ಬಂದದ್ದು ಇದನ್ನೇ. ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗವೆಂದು ಅದನ್ನು ಶೇಖರಿಸಿಡುವುದಲ್ಲ, ಬದಲಾಗಿ ಸಮಯ, ಸಂದರ್ಭ ಬಂದಾಗ ಸಂಗ್ರಹಿಸುತ್ತೇವೆ. ಸತ್ತಮೇಲೂ ಉತ್ತರಕ್ರಿಯೆಗಳಲ್ಲಿ ಸಿಹಿ ಉಣ್ಣುತ್ತೇವಲ್ಲ! ಅದು ಸಾವಿನ ಸವಿಯೇನೋ? ಸೀತಾ ಕಲ್ಯಾಣದ ಬಗ್ಗೆ ತ್ಯಾಗರಾಜರು ಬರೆದದ್ದೇ ಅದನ್ನು ವೈಭೋಗಕರಿಸುತ್ತದೆಂದು ನಂಬಬೇಕಾಗಿಲ್ಲ. ರಾಮಾಯಣದಲ್ಲೇ ಈ ಬಗ್ಗೆ ವೈಭವವನ್ನು ವಿವರಿಸಲಾಗಿದೆ. ಮಹಾಭಾರತದಲ್ಲೂ ಇದು ಉದಾಹರಿಸಲ್ಪಟ್ಟಿದೆ. ಬಹಳಷ್ಟು ಆಡಂಬರಗಳು ಪರಸ್ಪರ ದ್ವೇಷ, ಮತ್ಸರಗಳನ್ನು ಹುಟ್ಟಿಸಿದ್ದೇ ಹೆಚ್ಚು. ಸುವರ್ಣಲಂಕೆಯ ರಾವಣನ ಕಾಲದಲ್ಲಿ ಎಲ್ಲ ಮನೆಗಳೂ ಸುವರ್ಣಮಯವೆಂಬ ಉಲ್ಲೇಖವಿಲ್ಲ. ಬಡವರಿದ್ದಿರಬಹುದು. ಅಂತೂ ರಾವಣನ ನಾಶದೊಂದಿಗೆ ರಾಜನನ್ನೇ ಪ್ರತ್ಯಕ್ಷ ದೈವವಾಗಿ ನಂಬಿರಬಹುದಾದ ಅನೇಕ ಅಮಾಯಕ ಬಡವರೂ ನಾಶವಾದರು. ವಿಭೀಷಣನಿಗೆ ಎಂತಹ ರಾಷ್ಟ್ರ ಸಿಕ್ಕಿತೋ ಗೊತ್ತಿಲ್ಲ. ರಾಜಸೂಯದ ಸಂದರ್ಭದಲ್ಲಿ ಕೌರವನು ಜಾರಿಬಿದ್ದಾಗ ದ್ರೌಪದಿ ನಕ್ಕಿದ್ದು, ಹಸ್ತಿನಾವತಿಗೆ ಬಂದ ಶ್ರೀಕೃಷ್ಣನು ಭೂಪಾಲನ ಆತಿಥ್ಯವನ್ನು ತಿರಸ್ಕರಿಸಿ ತೊತ್ತಿನಮಗ ವಿದುರನ ಮನೆಗೆ ಹೋದದ್ದು, ಕುರುಕುಲದ ನಾಶಕ್ಕೆ ಕಾರಣವಾಯಿತು. ಪಾಂಡವರಿಗೆ ರಕ್ತ ಮತ್ತು ಕಣ್ಣೀರು ಮಿಶ್ರಿತ ಮಣ್ಣು ದಕ್ಕಿತು.

ಯುಗಯುಗಕ್ಕೂ ಇವು ಶಾಶ್ವತವೆಂದೇ ಪುರಾಣ-ಇತಿಹಾಸ ಹೇಳಿವೆ. ಪರಮೋಚ್ಚ ಅಧಿಕಾರವನ್ನು ಅಥವಾ ಜಗತ್ತಿನ ಸಂಪತ್ತಿನ ಬಹುಭಾಗದ ಒಡೆತನವನ್ನು, ಅನುಭವಿಸಿದವರು ಈ ಕ್ಷಣಿಕ ಸುಖಕ್ಕೆ ಬಲಿಯಾಗಿದ್ದಾರೆಯೇ ಹೊರತು ಭವಿಷ್ಯಕ್ಕೆ ಯಾವ ಒಳ್ಳೆಯ ಸಂದೇಶವನ್ನೂ ನೀಡಲು ವಿಫಲರಾದರು. ಮಕ್ಕಳಿಲ್ಲ, ಮರಿಯಿಲ್ಲ, ಆದರೂ ತಮ್ಮ ಅಧಿಕಾರವನ್ನು, ಸಂಪತ್ತನ್ನು, ಹಂಚಿ ಇತರರಿಗೆ ಸುಖವನ್ನು ಕಲ್ಪಿಸಬೇಕೆಂದು ಬಯಸಿದವರ ಉದಾಹರಣೆ ದುರ್ಲಭ.

ಈ ನಿದರ್ಶನಗಳು ಮನುಷ್ಯನ ವಿಕಾಸಕ್ಕೆ ಕಾರಣವಾಗುವುದಿಲ್ಲ. ಇಂದು, ಆಧುನಿಕತೆಯ ಮೆರುಗಿನಲ್ಲಿ ಭಗವಂತ ಕೊಟ್ಟನೋ, ಪ್ರಕೃತಿ ಕೊಟ್ಟಿತೋ, ವ್ಯಾವಹಾರಿಕ ಕೌಶಲ್ಯ ಕೊಟ್ಟಿತೋ, ಕೃತ್ರಿಮ ಬುದ್ಧಿಮತ್ತೆ ಒದಗಿಸಿತೋ, ಅಂತೂ ನಡುಗಡ್ಡೆಯ ದ್ವೀಪದಂತೆ ಬಡತನದ ಜಲರಾಶಿಯ ನಡುವೆ ಕಂಗೊಳಿಸುವವರು ಕೆಲವೇ ಮಂದಿ. ಇಂತಹ ನಡುಗಡ್ಡೆಗಳು ಒಂಟಿತನವನ್ನು ಅನುಭವಿಸಬೇಕಾಗಿತ್ತು. ಆದರೆ ಹಾಗಾಗದಿರುವುದು ದುರಂತ. ಎಲ್ಲ ಕಾಲದಲ್ಲೂ ಇಂತಹ ನಡುಗಡ್ಡೆಗಳು ಎತ್ತರದಲ್ಲಿ ನಿಂತು ತನ್ನ ಸುತ್ತಲಿನ ಸಮಾಜ ಎಷ್ಟೇ ಆಳದಲ್ಲಿರಲಿ ಅದನ್ನು ವೀಕ್ಷಿಸುತ್ತ, ಕಾಣದಿದ್ದರೆ ದೂರದರ್ಶಕಗಳ ನೆರವಿನಿಂದ ಪರಿಶೀಲಿಸುತ್ತ, ತನ್ನ ವೈಭವವನ್ನು ಈ ‘ಸಾಮಾನ್ಯರು’ ಕಾಣಬೇಕೆಂದು ಬಯಸುತ್ತವೆ. ಇದನ್ನು ಸಮಾಜದ ಉನ್ನತಿಯೆಂದು ಭ್ರಮಾಧೀನ ಜನ ತಿಳಿಯುತ್ತಾರೆ. ಮಾಧ್ಯಮಗಳಂತೂ ಇಂತಹ ವೈಭವದ ಪ್ರದರ್ಶನಗಳು ಲೋಕಕಲ್ಯಾಣವೆಂದು ಬಣ್ಣಿಸುತ್ತಾರೆ.

ಅಂಬಾನಿಗಳು ಈ ವೆಚ್ಚ-ವೈಭವವನ್ನು ಮಿತಿಗೊಳಿಸಿ ದೇಶದ ಶ್ರೀಮಂತಿಕೆಯ ರೇಖೆಯನ್ನು ದಾಟಿ ಜನಮಾನಸಕ್ಕಿಳಿಯಬಹುದಿತ್ತು. ಒಂದಷ್ಟು ಆಸ್ಪತ್ರೆಗಳನ್ನು ಕಟ್ಟಿಸಬಹುದಿತ್ತು; ಉದ್ಯೋಗಿಗಳ ಮಕ್ಕಳಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆಯನ್ನು ಮಾಡಬಹುದಿತ್ತು; ಅಥವಾ ಇನ್ನೇನೋ. ಅದೊಂದು ವಿಶ್ವಮಾನ್ಯ ಆದರ್ಶವಾಗುತ್ತಿತ್ತು. ಹೀಗೆ ಬದುಕಿದ ಯಾರೂ ಶಾಶ್ವತಿಗಳಲ್ಲ. ಇಂದೋ ನಾಳೆಯೋ ಅಳಿಯಲೇಬೇಕು. ಸಾಮ್ರಾಜ್ಯಗಳೇ ಅಳಿದಿವೆ; ಇನ್ನು ಉದ್ಯಮಿಗಳು?

ಕಾಲದ ಪ್ರವಾಹದಲ್ಲಿ ನಾವು ಹಾಕಿಕೊಂಡ ಬಟ್ಟೆಗಳು ಇಸ್ತ್ರಿ ಮಾತ್ರವಲ್ಲ, ಹೊಳಪನ್ನೂ, ಬಣ್ಣವನ್ನೂ, ಕೊನೆಗೆ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತವೆ. ಸ್ಟೀವ್ಜೋಬ್ಸ್ ಬದುಕು ಗುಣಾತ್ಮಕವಾಗಿಯೂ ಋಣಾತ್ಮಕವಾಗಿಯೂ ಆದರ್ಶವೆನಿಸಬೇಕು. ಅಂಬಾನಿ-ಅದಾನಿಗಳಿಗೂ ಈ ವಿವೇಕೋದಯವಾಗಲಿ. ಆಗ ಈ ಮದುವೆ ಶುಭಂ ಅನ್ನಿಸೀತು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News