ಭೋಲೆ ಬಾಬಾಗಳಿಗೆ ಬಾಗಿದ ಭಾರತ

ಆಧುನಿಕತೆಯೆಂದರೆ ವರ್ಷಗಳು ದಾಟುವುದಷ್ಟೇ ಅಲ್ಲ. ಅದು ಹೊಸ ಹೊಸ ಬೆಳವಣಿಗೆಯೊಂದಿಗೆ ವಿಕಾಸಗೊಳ್ಳುವುದು. ನಮ್ಮ ಜಗತ್ತು ದೊಡ್ಡದಾಗಿದೆ. ಸ್ಪರ್ಧೆ ತೀವ್ರಗೊಂಡಿದೆ. ನಾವು ಇತರರನ್ನು ನೋಡುವಂತೆಯೇ ಇತರರೂ ನಮ್ಮನ್ನು ನೋಡುತ್ತಿದ್ದಾರೆ. ಆದರೆ ನಮ್ಮ ವಿಕಾಸ ಹಿಮ್ಮುಖವಾದರೆ ಹೇಗೆ? ಅದಕ್ಕೆ ಸರಕಾರ ಮಾತ್ರವಲ್ಲ ಸಮಾಜದ ಮುಖ್ಯವಾಹಿನಿಯು ಅಂತಹ ಹಿಮ್ಮುಖ ಚಲನೆಗೆ ವೇಗೋತ್ಕರ್ಷವಾದರೆ ಹೇಗೆ? ಭೋಲೆ ಬಾಬಾ ಈ ಅನಿಷ್ಟಗಳ ಪ್ರತೀಕ ಮತ್ತು ಪ್ರತಿನಿಧಿ ಮಾತ್ರ. ಭಾರತ ಇಂತಹವರಿಗೆ ತಲೆಬಾಗಿದರೆ ಅವನತಿಯ ನೆಲಕ್ಕಿಳಿದೀತೇ ಹೊರತು ಮುಂದೆ ನಡೆಯದು.

Update: 2024-07-11 04:47 GMT

ಭಾರತದಲ್ಲಿ ದೇವರು, ಧರ್ಮದ(ಗಳ), ಮಠ-ಮಾನ್ಯಗಳ, ದೇವಮಾನವರ ಹೆಸರಿನಲ್ಲಿ ನಡೆಯುವಷ್ಟು ಮಾನಗೇಡಿ ಮತ್ತು ಅಮಾನವೀಯ ಕೆಲಸಗಳು ಇನ್ಯಾವ ರೀತಿಯಲ್ಲೂ ನಡೆಯಲಿಲ್ಲ/ನಡೆಯುವುದಿಲ್ಲ. ಇದಕ್ಕೆ ಕಾರಣ ನಾವು ನಮ್ಮ ಬದುಕನ್ನು ಸಂಪ್ರದಾಯದ, ಸಂಸ್ಕೃತಿಯ ಹೆಸರಿನಲ್ಲಿ ನಿರ್ದಿಷ್ಟ ಮಾನದಂಡಗಳಿಗೆ ಒಗ್ಗಿಸಿದ್ದು, ಬಗ್ಗಿಸಿದ್ದು. ಧಾರ್ಮಿಕ ಕ್ಷೇತ್ರಗಳೆಂದಾಕ್ಷಣ ಜನಸಾಮಾನ್ಯರು ಅವರೆಷ್ಟೇ ಆಧುನಿಕರಾಗಿದ್ದರೂ ಕೈಮುಗಿದು ಪ್ರವೇಶಿಸುತ್ತಾರೆ. ಅಪವಾದಗಳ ಹೊರತಾಗಿ ಮಠ-ಮಾನ್ಯಗಳೆಂದರೆ, ದೇವಮಾನವರೆಂದರೆ ಒಂದು ಸಮುದಾಯವನ್ನು ಆಳುವ ಮತ್ತು ತಮ್ಮ ಇಷ್ಟಾನಿಷ್ಟಗಳಿಗೆ ದುಡಿಸಿಕೊಳ್ಳಬಲ್ಲ, ರಾಜಕೀಯವಾಗಿ, ಅಧಿಕಾರಪೂರ್ವಕವಾಗಿ ಲಾಭ ತರುವ ಶ್ರೀಮಂತ ಸಂಸ್ಥೆಗಳಾಗಿವೆ. ಆದರೆ ಇವುಗಳಲ್ಲಿ ನಡೆಯುವ ಅಕ್ರಮಗಳು ಮುಚ್ಚಿಹೋಗುವ ಅವಕಾಶಗಳೇ ಹೆಚ್ಚು. ಧರ್ಮನಿರಪೇಕ್ಷವಾಗಿರಬೇಕಾದ ಸರಕಾರ ತಮ್ಮ ವೈಯಕ್ತಿಕ ಒಲವುನಿಲುವುಗಳನ್ನು ರಾಜಕೀಯಕ್ಕೆ, ಅಧಿಕಾರಕ್ಕೆ, ತುರುಕಿ ಇಂತಹ ಅಕ್ರಮಿಗಳಿಗೆ ಒಂದಲ್ಲ ಒಂದು ಸಂದರ್ಭಗಳಲ್ಲಿ ಗೌರವ, ಅವಕಾಶ ನೀಡಿ ಅವನ್ನು ದಷ್ಟಪುಷ್ಟವಾಗಿಸುತ್ತವೆ. ಒಮ್ಮೆ ಅವರೊಂದಿಗೆ ಇಂತಹ ಸ್ನೇಹಭಾವ ಒದಗಿ ಬಂದರೆ ಆನಂತರ ಅವರು ಸಮಾನಾಂತರ ಸರಕಾರ ನಡೆಸಿದರೂ ಸರಕಾರಗಳು ಮೌನವಾಗುತ್ತವೆ. ಇದು ಕಾಂಗ್ರೆಸ್ ಕಾಲದ ಧೀರೇಂದ್ರ ಬ್ರಹ್ಮಚಾರಿಯಿರಲಿ, ಬಿಜೆಪಿ ಕಾಲದ ಆಸಾರಾಂ ಅಥವಾ ಪತಂಜಲಿಯಿರಲಿ ಎಲ್ಲ ಕಾಲಕ್ಕೂ ಎಲ್ಲ ಸಂದರ್ಭಗಳಿಗೂ ಸತ್ಯ. ಧಾರ್ಮಿಕರೆಂಬ ಹುಂಬತನವನ್ನು ಮತ್ತು ಡಾಂಭಿಕತನವನ್ನು ಧರಿಸಿಕೊಂಡು ಎಲ್ಲರನ್ನೂ ಕಾಲಿಗೆ ಬೀಳಿಸಿಕೊಂಡು ನಲಿದಾಡುವವರನ್ನು ರಾಜಕೀಯದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡುವಾಗ ಯಾವ ಸರಕಾರಕ್ಕೂ, ರಾಜಕೀಯ ಪಕ್ಷಕ್ಕೂ ಇವು ಸಿದ್ಧಾಂತಗಳ ಅವಹೇಳನವೆಂಬ ಅಳುಕಾಗಲಿ, ನಾಚಿಕೆೆಯಾಗಲಿ, ಸಂಕೋಚವಾಗಲಿ ಆಗುವುದಿಲ್ಲ. ಯಾರೊಬ್ಬನ ಯೋಗ್ಯತೆ ಆತ ಹೊಂದಿರುವ ಧಾರ್ಮಿಕ ಅಥವಾ ಇಂತಹ ‘ಸಾಂಸ್ಕೃತಿಕ’, ‘ಸಾಮಾಜಿಕ’ ನಾಯಕತ್ವವನ್ನು ಅವಲಂಬಿಸಿರಬಾರದು. ಸಂವಿಧಾನವು ಜಾತ್ಯತೀತ ಅಂಶಗಳನ್ನು ಒಳಗೊಂಡಿದೆ. ಇದಕ್ಕೆ ಸಾಮರಸ್ಯದ ಹಾದಿಯಾಗಿ ‘ಧರ್ಮನಿರಪೇಕ್ಷತೆ’ಯ ಹೊದಿಕೆಯಿದೆ. ಆದರೆ ನಮ್ಮಲ್ಲಿ ಕೈಗಾರಿಕೋದ್ಯಮಿಗಳು ಹಣದ ಮೂಲಕ, ಧರ್ಮಾಧಿಕಾರಿಗಳು ಧರ್ಮದ ಹೆಸರಿನಲ್ಲಿ ರಾಜಕೀಯವನ್ನು ಪ್ರವೇಶಿಸುವುದನ್ನು ಕಾಣುತ್ತೇವೆ. ಮೂಗಿನ ಮೇಲೆ ಬೆರಳಿಟ್ಟು ಸುಮ್ಮನಾಗುತ್ತೇವೆ. ಅನುಕೂಲವಾಗುವುದಿದ್ದರೆ ಅವರನ್ನು ಹಿಂಬಾಲಿಸುತ್ತೇವೆ. ಇವರಲ್ಲನೇಕರು ಕೊಲೆ, ಮಾನಭಂಗ ಮುಂತಾದ ಗುರುತರವಾದ ಅಪರಾಧಗಳನ್ನು ನಡೆಸಿ ಜೀವಾವಧಿ ಶಿಕ್ಷೆಯನ್ನು ಪಡೆದರೂ ಅವರಿಗೆ ಜೈಲಿನ ಹೊರಗಿನಿಂದ ಸಿಗುವ ಬೆಂಬಲ ಅಚ್ಚರಿ ತರುವ ಮಾತ್ರವಲ್ಲ, ಸಾಮಾಜಿಕ ಸ್ಥಾನ-ಮಾನಗಳ ಮಾನದಂಡವನ್ನು ಪಲ್ಲಟಗೊಳಿಸುವ, ತಲ್ಲಣಗೊಳಿಸುವ, ಬಹಿರಂಗವಾಗಿಯೇ ಹೀಗಳೆಯುವ ವಿಚಾರ. ಇವೆಲ್ಲ ಆಧುನಿಕ ‘ಸತ್ಸಂಗ’ಗಳು!

ಈ ತಂಡಕ್ಕೆ ಉತ್ತರಪ್ರದೇಶದ ಹಾಥರಸ್‌ನ ‘ಸತ್ಸಂಗ’ದಲ್ಲಿ ಕಾಲ್ತುಳಿತದ ದುರ್ಘಟನೆಯ ಕುಲದೈವ ಭೋಲೆ ಬಾಬಾ ಇತ್ತೀಚೆಗಿನ ಸೇರ್ಪಡೆ. ಈತನ ಚರಿತ್ರೆ ಈಗಾಗಲೇ ಮಾಧ್ಯಮಗಳಲ್ಲಿ ಬಂದಿವೆ. ಈತನ ಒಂದು ಕೂಟದಲ್ಲಿ 121 ಮಂದಿ ಸಾವಿಗೀಡಾದರೂ ಈತ ಇನ್ನೂ ಬಂಧಿತನಾಗದಿರುವುದು ಆತನ ಯೋಗ್ಯತೆಗಿಂತಲೂ ದೇಶದ ಕಾನೂನು ವ್ಯವಸ್ಥೆಯ ಯೋಗ್ಯತೆಯ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಒಂದು ಅಪಘಾತದಲ್ಲಿ ಅಥವಾ ಕಲಬೆರಕೆ ಆಹಾರ ಸೇವನೆಯಿಂದ, ಕೆಲವೇ ಸಾವುಗಳು ನಡೆದರೂ, ಅದಕ್ಕೆ ಕಾರಣವಾದವರನ್ನು ಬಂಧಿಸುವುದು ಮತ್ತು ಅವರನ್ನು ಅದಕ್ಕೆ ಹೊಣೆಯಾಗಿಸುವುದು ಜವಾಬ್ದಾರಿಯುತ ಸರಕಾರದ ಆದ್ಯತೆಯಾಗಿರಬೇಕು. ವಿಶೇಷವೆಂದರೆ ಇಲ್ಲಿ ಈ ಬಾಬಾನ ಗುಣಗಾನ ನಡೆಯುತ್ತಿದೆ. ಆತ ಈ ದುರ್ಘಟನೆಗೆ ಯಾವ ರೀತಿಯಲ್ಲೂ ಕಾರಣನಲ್ಲವೆಂಬ ಸಮರ್ಥನೆ ಬೇರೆ. ಸರಕಾರಕ್ಕೆ ಕನಿಷ್ಠ ಆತ್ಮಗೌರವವಿದ್ದಿದ್ದರೆ ಇಷ್ಟುಹೊತ್ತಿಗೆ ಆತ ಜೈಲು ಸೇರಬೇಕಾಗಿತ್ತು. ಅದಿನ್ನೂ ಆಗಿಲ್ಲ. ಸರಕಾರವು ಒಂದು ನ್ಯಾಯಾಂಗ ತನಿಖೆಗೆ ಆದೇಶಿಸಿ ಕೈತೊಳೆದುಕೊಂಡಿದೆ. ಯಾರಾದರೂ ಸರಕಾರವನ್ನು ಪ್ರಶ್ನಿಸಿದರೆ ಅದು ‘ಸಬ್ ಜುಡೀಸ್’ ಎಂಬ ರಕ್ಷಣಾತ್ಮಕ ಮತ್ತು ಇನ್ನೂ ಹೆಚ್ಚಾಗಿ ಜಾರಿಕೆಯ ಉತ್ತರಕ್ಕೆ ಸರಕಾರ ಸದಾ ಸಿದ್ಧ. ವಿಶೇಷವೆಂದರೆ ಈ ತನಿಖೆಯು ಈಗಾಗಲೇ ಹಾದಿ ಮತ್ತು ದಿಕ್ಕು ತಪ್ಪಿದಂತಿದೆ. ತನಿಖಾ ತಂಡವು ಈ ದುರ್ಘಟನೆಯ ಹಿಂದೆ ಭಾರೀ ಸಂಚಿರುವಂತೆ ಕಾಣಿಸುತ್ತಿದೆಯೆಂದು ಹೇಳಿದ ಆಧಾರದಲ್ಲಿ ಸರಕಾರವು ಒಂದಷ್ಟು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಒಂದೆಡೆ ಈ ಸುಬ್ಬಾಶಾಸ್ತ್ರಿಯು ಭಕ್ತರಿಗೆ ತನ್ನ ಪಾದಧೂಳಿಯನ್ನು ಶಿರಸಾವಹಿಸುವಂತೆ ಸೂಚಿಸಿದ್ದೇ ಭಕ್ತರ ಮಹೋತ್ಸಾಹಕ್ಕೆ ಕಾರಣವಾಯಿತೆಂಬ ವರದಿಯಿದೆ. ಜನಜಂಗುಳಿ ಪರಮಪದವನ್ನು ತಲುಪಲು ತೋರಿದ ಶ್ರದ್ಧೆಯೇ ಅನೇಕರನ್ನು ಪರಂಧಾಮವನ್ನು ತಲುಪಲು ಕಾರಣವಾಯಿತು ಎಂಬುದಂತೂ ಸತ್ಯ. ಇಷ್ಟಾದರೂ ಈ ದೇವ ಮಾನವ ನಿಷ್ಕಳಂಕ ನಿರಂಜನನಂತೆ ಶೋಭಿಸುತ್ತಿದ್ದಾನೆ; ಸರಕಾರ ಎಂದಿನಂತೆಯೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಸಿದ್ಧವಿಲ್ಲ. ಅದು ಪತಂಜಲಿಯಾದರೂ ಅಷ್ಟೇ, ಯಾವ ಗುಲಗುಂಜಿ ಗುರೂಜಿಯಾದರೂ ಅಷ್ಟೇ.

ಭಾರತದ ಒಂದು ಗುಣವಿಶೇಷವೆಂದರೆ, ಜೈಲಿನಲ್ಲಿರಬೇಕಾದ ಅನೇಕರು ಅಧಿಕಾರದಲ್ಲಿ, ಸಂಸತ್ತು, ಶಾಸನ ಸಭೆಗಳಲ್ಲಿ, ಆಶ್ರಮಗಳಲ್ಲಿ, ಮಠಗಳಲ್ಲಿರುವುದು ರಹಸ್ಯವೇನಲ್ಲ. ಎದುರಿನಿಂದ ಅಭಿನಂದಿಸುವವರೂ ಆನಂತರ ತಮ್ಮ ಖಾಸಗಿಯಾಗಿ ಈ ಅಭಿನಂದನೀಯರ ಗುಟ್ಟುಗಳನ್ನು ಹೇಳುತ್ತಾರೆ ಮತ್ತು ಅವರನ್ನು ಅಭಿನಂದಿಸುವುದರಿಂದ, ಅನುಸರಿಸುವುದರಿಂದ (ಬಹುತೇಕ ಇವು ನಾಟಕಗಳೇ!) ತಮಗಾಗುವ ಆಗಿರುವ ಲಾಭಗಳನ್ನು ಕುರಿತೇ ಹೇಳುತ್ತಿರುತ್ತಾರೆ.

ಈ ಸಮಸ್ಯೆಯ ಬೇರನ್ನು ಶೋಧಿಸಿ ಅದನ್ನು ಅನುಷ್ಠಾನಕ್ಕೆ ತರದಿದ್ದರೆ ಯಾವ ಚಿಂತನೆಯೂ ಫಲಕಾಣದು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಆಧುನಿಕತೆ, ವಿಜ್ಞಾನ, ವಿಚಾರಪರತೆ ಮತ್ತು ಇವುಗಳಿಗೆ ಬಣ್ಣ ಬಳಿದ, ಬಳಿಯುತ್ತಿರುವ ವಿದ್ಯಮಾನವಿದು. ಇದು ಚರಿತ್ರೆಯ ಭಾಗವೂ ಹೌದು; ಸಂಪ್ರದಾಯದ ಭಾಗವೂ ಹೌದು.

ಭಾರತವು ಅಥವಾ ನಾವಿಂದು ಭಾರತವೆಂದು ಕರೆಯುವ ಭೂಭಾಗವು ಒಂದು ಕಾಲದಲ್ಲಿ ಮಹೋನ್ನತ ಸಂಸ್ಕೃತಿಯನ್ನು ಕಂಡಿದೆಯೆಂದು ನಮ್ಮ ಇತಿಹಾಸ ಹೇಳುತ್ತದೆ. ಇಲ್ಲಿಂದ ವಿದ್ವತ್ತು, ಪ್ರತಿಭೆ ವಿಶ್ವದ ಅನೇಕ ಭಾಗಗಳಿಗೆ ವಿಸ್ತರಿಸಿದೆ. ಕುತೂಹಲಿಗಳಾದ ವಿದ್ಯಾಸಕ್ತರು, ಜ್ಞಾನಾಸಕ್ತರು ಇಲ್ಲಿಗೆ ಪ್ರವಾಸ ಬಂದು ಬೆರಗಾಗಿ ಹೋಗಿದ್ದಾರೆ. ಚೋಳರ ಪಾರುಪತ್ಯದಿಂದ ಮೊದಲ್ಗೊಂಡು ವಿಜಯನಗರದ ಅಶೋಕನಿಂದ ಕೋಹಿನೂರ್‌ನ ವರೆಗೂ ಭಾರತೀಯ ಚರಿತ್ರೆ ನಮ್ಮ ವೈಭವದ ದ್ಯೋತಕವಾಗಿದೆ. ಇಷ್ಟೆಲ್ಲ ಇದ್ದೂ ಭಾರತದ ಜನಜೀವನವನ್ನು ಸಾಂಪ್ರದಾಯಿಕ ಮೌಢ್ಯಗಳೇ ಆಳಿದ್ದವೆಂಬುದು ಮತ್ತು ಅವು ಈ ವೈಭವದ ಬೆಳೆಯ ನಡುವೆಯೂ ಕಳೆಯಂತೆ ಬೆಳೆದವು ಎಂಬುದು ಆತಂಕಕಾರಿ ಸಂಗತಿ.

ಯುರೋಪಿಯನ್ನರು (ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಮುಖ್ಯವಾಗಿ ಬ್ರಿಟಿಷರು) ಭಾರತವನ್ನು ವಸಾಹತಾಗಿ ಆಳುತ್ತಿರುವಾಗ ಭಾರತದ ಮೂಢನಂಬಿಕೆಗಳನ್ನು ಅಪಹಾಸ್ಯಮಾಡುತ್ತಿದ್ದರು. ಇವು ಮುಖ್ಯವಾಗಿ ಸಂಪ್ರದಾಯ ಮತ್ತು ಧಾರ್ಮಿಕತೆಯನ್ನು ಆಧರಿಸಿದ ನಂಬಿಕೆಗಳೇ. ಪಾಶ್ಚಾತ್ಯರ ಪೌರಾತ್ಯ ಚಿಂತನೆಗಳಲ್ಲಿ ಕಟುವಾಗಿ ಟೀಕೆಗೊಳಪಟ್ಟ ಅಂಶಗಳು ಇವು. ಸತಿಸಹಗಮನ, ಬಾಲ್ಯವಿವಾಹ, ಅಸ್ಪಶ್ಯತೆ, ಅತಿ ಮಡಿವಂತಿಕೆ, ಇವನ್ನೆಲ್ಲ ಭಾರತದ ಕುರುಹುಗಳಾಗಿ ಪಾಶ್ಚಾತ್ಯರು ಮಾತ್ರವಲ್ಲ, ಭಾರತದ ಅನೇಕ ಪುರೋಗಾಮೀ ಚಿಂತಕರು ಕಂಡರು. ಅನೇಕ ಆಧುನಿಕ ಚಿಂತಕರು ಹೇಳುವಂತೆ ‘ಬಹಳಷ್ಟು ದೇಶಗಳಿಗೆ ತನ್ನ ಜ್ಞಾನವನ್ನು ವಿಸ್ತರಿಸಿದ ಈ ದೇಶವು ಈಗ ಅಸಭ್ಯತೆಯ ಕೂಪಕ್ಕೆ ಬಿದ್ದಿದೆ’. ಪ್ರಾಯಃ ನಾವು ಸಾಮಾನ್ಯ ಜ್ಞಾನಕ್ಕೂ ರಾಜಕೀಯ/ಸಾಮಾಜಿಕ, ಸಾಂಸ್ಕೃತಿಕ ಜ್ಞಾನಕ್ಕೂ ಇರುವ ಸಾಮ್ಯತೆ ಅಥವಾ ಅಂತರಗಳನ್ನು ಗಮನಿಸುವುದಿಲ್ಲ. ಇದು ಎಲ್ಲಿಯ ವರೆಗೆ ತಲುಪಿತೆಂದರೆ ನಾವು ನಮ್ಮನ್ನು ಆಳುವುದಕ್ಕೆ ಅಯೋಗ್ಯರು ಎಂಬುದನ್ನು ವಿದೇಶೀಯರಷ್ಟೇ ಕಂಡುಕೊಂಡದ್ದಲ್ಲ, ನಾವೇ ಅದನ್ನು ಸಾಬೀತು ಪಡಿಸಿದೆವು. ಪರಿಣಾಮವಾಗಿ ನಾವು ವಸಾಹತುಗಳಾದೆವು.

ಇವನ್ನು ನಿರ್ಮೂಲವಾಗಿಸಲು ಅನೇಕರು ಹೆಣಗಿದರು. ಸತಿ ಸಹಗಮನದಂತಹ ಕೆಲವು ಸಂಪ್ರದಾಯಗಳು ಅವಶೇಷವಾದವು. ಬಾಲ್ಯವಿವಾಹದಂತಹ ಕೆಲವು ಪದ್ಧತಿಗಳು ಕಾನೂನಿನಲ್ಲಾದರೂ ಅಳಿದವು. (ವಾಸ್ತವದಲ್ಲಿ ಇಂದಿಗೂ ಇವೆ.) ಅಸ್ಪಶ್ಯತೆ ಮತ್ತು ಇದಕ್ಕೆ ಕಾರಣವಾದ ಸನಾತನ ಧರ್ಮದ ಹೆಸರಿನಲ್ಲಿ ಬೇರುಬಿಟ್ಟ ವರ್ಣಾಶ್ರಮ ಧರ್ಮ, ಇದರ ನೇರ ಪರಿಣಾಮವಾದ ಅಸ್ಪಶ್ಯತೆ ಇಂದಿಗೂ ಭಾರತವನ್ನು ವಿಶ್ವದಲ್ಲಿ ಬೆತ್ತಲೆ ನಿಲ್ಲಿಸಿವೆ. ಆದರೂ ಇವೆಲ್ಲ ಧರ್ಮದ ಹೆಸರಿನಲ್ಲಿ ಭಾರತದ ಎಲ್ಲೆಡೆ ಸರಕಾರದಿಂದಲೂ ಪೋಷಿತವಾಗಿರುವುದು ನಮ್ಮ ದುರದೃಷ್ಟ.

ನಮ್ಮದು ಹಾವಾಡಿಗರ, ಕಾಳಿಯ ಬಲಿಪೀಠಗಳ ದೇಶವಲ್ಲ ಎನ್ನುತ್ತಲೇ ನಾವು ಸಾಮಾಜಿಕ ವಿಷಮತೆಯ, ಪರಸ್ಪರ ದ್ವೇಷದ ದೇಶವನ್ನು ಕಟ್ಟತೊಡಗಿದ್ದೇವೆ. ವಿನಾಶವಿಶೇಷವೆಂದರೆ ಆಧುನಿಕರಾಗಬೇಕಾದ, ಮೌಢ್ಯಗಳ ವಿರುದ್ಧ ಜನರನ್ನು ಎಚ್ಚರಿಸಬೇಕಾದ ನಾಯಕರು ಮೌಢ್ಯದ ಪರವಾಗಿ ಪ್ರೀತಿಯ, ಸರ್ವಧರ್ಮಸಮಭಾವದ, ಧರ್ಮನಿರಪೇಕ್ಷತೆಯ, ಸಮಾನತೆಯ ವಿರುದ್ಧವಾಗಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸ್ವಭಾವತ: ಸ್ವಾರ್ಥಿಯೂ, ಕ್ರೂರಿಯೂ ಆದ ಜನರು ಈ ಉನ್ಮಾದದಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಯಾವುದು ಮನುಷ್ಯನನ್ನು ಆರ್ದ್ರನಾಗಿ ಮಾಡಬೇಕಿತ್ತೋ ಅಂತಹ ಸಾಧನಗಳಾದ ಸಾಹಿತ್ಯ, ಕಲೆ ಮುಂತಾದ ಮಾಧ್ಯಮಗಳು ಮತ್ತು ಮೂರ್ತ ಸ್ಥಾನಗಳಾದ ಪೂಜಾಕೆಂದ್ರಗಳು, ಮಠ-ಮಾನ್ಯಗಳು, ಸತ್ಸಂಗದ ಕೇಂದ್ರಗಳು ಜನವಿರೋಧಿ ತಾಣಗಳಾಗಿವೆ.

ಕಳೆದ ಕೆಲವು ದಶಕಗಳಲ್ಲಿ ಇವು ಹೆಚ್ಚಿವೆಯೇ ಹೊರತು ಒಂದಿಷ್ಟೂ ಕಡಿಮೆಯಾಗಿಲ್ಲ. ಬದುಕನ್ನು ಸುಂದರವಾಗಿಸಬೇಕಾದ ಅಗತ್ಯವಿದೆ ಎಂದು ಬೋಧಿಸುವ ಸನ್ಯಾಸಿಗಳು ನೇರ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ತಮ್ಮ ಪಂಥ, ತತ್ವಗಳನ್ನು ಪ್ರಚುರಪಡಿಸಲು ಅವರು ಆಯ್ದುಕೊಳ್ಳುವುದು ವೈಭವೋಪೇತ ಸುರಸುಂದರ ಮಹಲುಗಳನ್ನು. ಒಬ್ಬ ದೇವಮಾನವರು ಯಮುನಾನದಿಯ ತಟದಲ್ಲಿ ಭಕ್ತಾದಿಗಳ ಮೂಲಕ ತಮ್ಮದೊಂದು ಉತ್ಸವವನ್ನು ನಡೆಸಿ ವಾತಾವರಣವನ್ನು ಮಲಿನಗೊಳಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಕೋಟ್ಯಂತರ ರೂಪಾಯಿಗಳನ್ನು ದಂಡರೂಪದಲ್ಲಿ ಕಟ್ಟಿದ್ದಾರೆ. ಇನ್ನೊಬ್ಬ ಯೋಗಿ ಜನರ ಮೌಢ್ಯದ ಬಂಡವಾಳದಿಂದ ತನ್ನ ಉದ್ದಿಮೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಲ್ಲದೆ ವಿದೇಶದಲ್ಲೂ ಹಣ ಹೂಡಿ, ಕೊನೆಗೆ ತಮ್ಮ ಹಲವಾರು ಉತ್ಪಾದನೆಗಳು ಜೀವವಿರೋಧಿಯಾದವೆಂಬುದನ್ನು ನ್ಯಾಯಾಲಯದ ಮೂಲಕ ಅರಿತಿದ್ದಾರೆ. ಇನ್ನೊಬ್ಬ ಸದ್ಗುರು ಮರನೆಡುವ ಪ್ರಚಾರ ನಡೆಸಿ ಹಲವಾರು ಕೋಟಿ ಹಣ ಸಂಪಾದಿಸಿ ಈಗ ಸರಕಾರಿ ಸ್ವತ್ತನ್ನು ದೋಚಿದ ಆಪಾದನೆಗೆ ಗುರಿಯಾಗಿದ್ದಾರೆ. ಆಸಾರಾಂ ಬಾಪು ಎಂಬವರು ಲೌಕಿಕರೂ ಮಾಡದಷ್ಟು ಅನೈತಿಕ ಚಟುವಟಿಕೆಯನ್ನು ಮಾಡಿ ಕಂಬಿ ಎಣಿಸುತ್ತಿದ್ದಾರೆ. ಇಂತಹವರ ಪಟ್ಟಿ ಸುದೀರ್ಘವಿದೆ. ಇವರೊಂದಿಗೆ ಯಾವ್ಯಾವ ರಾಜಕಾರಣಿ ಶಾಮೀಲಾಗಿದ್ದಾರೆಂಬ ಶ್ವೇತಪತ್ರವನ್ನು ಸರಕಾರ ಹೊರಡಿಸಿದರೆ ಮಾತ್ರ ಚಿದಂಬರ ರಹಸ್ಯಗಳು ಬಯಲಾದಾವು.

ಆಧುನಿಕತೆಯೆಂದರೆ ವರ್ಷಗಳು ದಾಟುವುದಷ್ಟೇ ಅಲ್ಲ. ಅದು ಹೊಸ ಹೊಸ ಬೆಳವಣಿಗೆಯೊಂದಿಗೆ ವಿಕಾಸಗೊಳ್ಳುವುದು. ನಮ್ಮ ಜಗತ್ತು ದೊಡ್ಡದಾಗಿದೆ. ಸ್ಪರ್ಧೆ ತೀವ್ರಗೊಂಡಿದೆ. ನಾವು ಇತರರನ್ನು ನೋಡುವಂತೆಯೇ ಇತರರೂ ನಮ್ಮನ್ನು ನೋಡುತ್ತಿದ್ದಾರೆ. ಆದರೆ ನಮ್ಮ ವಿಕಾಸ ಹಿಮ್ಮುಖವಾದರೆ ಹೇಗೆ? ಅದಕ್ಕೆ ಸರಕಾರ ಮಾತ್ರವಲ್ಲ ಸಮಾಜದ ಮುಖ್ಯವಾಹಿನಿಯು ಅಂತಹ ಹಿಮ್ಮುಖ ಚಲನೆಗೆ ವೇಗೋತ್ಕರ್ಷವಾದರೆ ಹೇಗೆ? ಭೋಲೆ ಬಾಬಾ ಈ ಅನಿಷ್ಟಗಳ ಪ್ರತೀಕ ಮತ್ತು ಪ್ರತಿನಿಧಿ ಮಾತ್ರ. ಭಾರತ ಇಂತಹವರಿಗೆ ತಲೆಬಾಗಿದರೆ ಅವನತಿಯ ನೆಲಕ್ಕಿಳಿದೀತೇ ಹೊರತು ಮುಂದೆ ನಡೆಯದು.

ಬೇರೆ ಕಡೆ ಇವು ಇಲ್ಲವೆಂದಲ್ಲ, ಅಮೆರಿಕದಂತಹ ಸ್ವಘೋಷಿತ ಅಭಿವೃದ್ಧಿಶೀಲ ರಾಷ್ಟ್ರದಲ್ಲೂ ವರ್ಣದ್ವೇಷ ಇಂದಿಗೂ ಇದೆ. ಆದರೆ ಅವು ಅಪವಾದಗಳಾಗಿ ಮತ್ತು ಸರಕಾರದ ನಿರ್ದಯ ದೃಷ್ಟಿಗೊಳಗಾಗಿವೆ. ಆ ಬಗ್ಗೆ ನಾವು ಚಿಂತಿತರಾಗಬೇಕಾಗಿಲ್ಲ. ನಮ್ಮ ಕಾಯಿಲೆಯೇ ಕೀವು ತುಂಬಿ ಅಸಹ್ಯವಾಗಿರುವಾಗ ನಾವು ‘ವಿಶ್ವಗುರು’ವಾಗುವುದು ಯಾವಾಗ? ನಾವು ಸ್ವಘೋಷಿಸಿಕೊಳ್ಳುವ ದಿವ್ಯ-ಭವ್ಯ ಶ್ರೇಷ್ಠತೆಯ ಕಿರೀಟ ನಮ್ಮ ತಲೆಗೇರುವುದು ಯಾವಾಗ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News