ನೋವಿನ ಭಯ

Update: 2023-05-20 19:30 GMT

ಆ್ಯಲ್ಗೋಫೋಬಿಯಾ ಅಂದರೆ ನೋವಿನ ಭಯವಿರುವುದು. ಟೋಮೋಫೋಬಿಯಾ ಅಂದರೆ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ನಡೆಯುವ ಶಸ್ತ್ರಚಿಕಿತ್ಸೆ, ಇಂಜೆಕ್ಷನ್ ಮತ್ತು ಇತರ ವಿಧಾನಗಳನ್ನು ಕಂಡರೆ ಹೆದರುವುದು. ಕನ್ನಡದಲ್ಲಿ ಈ ಎರಡಕ್ಕೂ ಒಟ್ಟಾಗಿ ನೋವಂಜಿಕೆ ಎನ್ನಬಹುದು. ನೋವಿಗೆ ಅಂಜುವುದು ಅಥವಾ ನೋವು ಉಂಟಾಗುವುದು ಎಂದು ಅಂಜುವುದು. ಆ್ಯಲ್ಗೋಫೋಬಿಯಾ ಸಾಧಾರಣ ನೋವಂಜಾದರೆ, ಟೋಮೋಫೋಬಿಯಾ ಚಿಕಿತ್ಸೆಯ ನೋವಂಜು. ಈ ನೋವಂಜಿಕೆ ಇರುವವರು ವಿಪರೀತವಾಗಿ ದೈಹಿಕವಾಗಿ ಉಂಟಾಗಬಹುದಾದ ನೋವಿಗೆ ಅಂಜುತ್ತಾರೆ, ಆತಂಕಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಇಂತಹ ನೋವು ಸಂಭವಿಸಬಹುದು ಎಂಬ ಖಿನ್ನತೆಗೂ ಒಳಗಾಗುತ್ತಾರೆ.

ಹಾಗೆ ನೋಡಲು ಹೋದರೆ ಆ್ಯಲ್ಗೋಫೋಬಿಯಾ ಅಥವಾ ನೋವಂಜಿಕೆ ಸಾಮಾನ್ಯವೇ. ಬಹಳಷ್ಟು ಜನಕ್ಕೆ ಇದಿರುತ್ತದೆ. ನಮ್ಮ ಮೆದುಳು ಭಯ ಅಥವಾ ಆತಂಕ ಉಂಟಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಅಂತಹ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು, ಪ್ರತಿರೋಧವನ್ನು ಒಡ್ಡುವುದು. ಕೂಗುವುದು, ಕಿರುಚುವುದು, ತಡೆಯಲು ಯತ್ನಿಸುವುದು ಮತ್ತು ಸಹಾಯಕ್ಕಾಗಿ ಇತರರನ್ನು ಕರೆಯುವುದು. ಮತ್ತೊಂದು ಎಂದರೆ, ಸನ್ನಿವೇಶದಿಂದ ತಪ್ಪಿಸಿಕೊಳ್ಳುವುದು ಅಥವಾ ಪಲಾಯನ ಮಾಡುವುದು. ಮೆದುಳಿನಲ್ಲಿ ಭಾವನೆಗಳನ್ನು ಉಂಟುಮಾಡುವ ಭಾಗವಾದ ಅಮಿಗ್ಡಲದಲ್ಲಿ ಭಯ ಮತ್ತು ಆತಂಕವನ್ನು ಉಂಟು ಮಾಡುವ ರಾಸಾಯನಿಕ ದ್ರವ್ಯವೇ (ಅಡ್ರೆನಲಿನ್), ನೋವನ್ನು ಗ್ರಹಿಸುವ ಮತ್ತು ಸಹಿಸುವ ಕೆಲಸವನ್ನು ಉಂಟು ಮಾಡುವುದು. ಅಮಿಗ್ಡಲವು ತಂತಾನೇ ಅಂದರೆ ಅನೈಚ್ಛಿಕವಾಗಿ ಕೆಲಸ ಮಾಡುವಂತಹ ಮೆದುಳಿನ ಭಾಗ. ಆದರೆ ನೋವಂಜಿಕೆ ಇರುವಂತಹ ವ್ಯಕ್ತಿಗಳ ಅಮಿಗ್ಡಲದಲ್ಲಿ ಒಂದೇ ರಾಸಾಯನಿಕ ದ್ರವ್ಯವು ಎರಡೂ ಕೆಲಸ ಮಾಡುವುದರಿಂದ ವಿಪರೀತವಾಗಿ ಸಮತೋಲನ ತಪ್ಪುತ್ತದೆ. ಈ ರಾಸಾಯನಿಕ ಅಸಮತೋಲನ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ವ್ಯಕ್ತಿಗಳು ತಮ್ಮ ಭಯ ಮತ್ತು ನೋವು ಈ ಎರಡನ್ನೂ ಉತ್ಪ್ರೇಕ್ಷಿತವಾಗಿ ತೋರುತ್ತಾರೆ.

ನೋವು ಮತ್ತು ಭಯದಲ್ಲಿ ಕಾಣುವಂತಹ ಉತ್ಪ್ರೇಕ್ಷೆ ನೋಡುಗರಿಗೆ ಗೊಂದಲವನ್ನು ಉಂಟು ಮಾಡುತ್ತದೆ. ಇವರ ಪ್ರತಿಕ್ರಿಯೆ ನೋವಿನದ್ದೋ ಅಥವಾ ಭಯದ್ದೋ ಎಂದು ತಿಳಿಯುವುದಿಲ್ಲ. ಅದರಲ್ಲೂ ಟೋಮೋಫೋಬಿಯಾ, ಅಂದರೆ ಚಿಕಿತ್ಸೆಯ ವಿಧಿವಿಧಾನಗಳ ನೋವಂಜಿಕೆ ಇರುವವರ ನೋವನ್ನು ವಾಸ್ತವವಾಗಿ ಗ್ರಹಿಸಲು ವೈದ್ಯರಿಗೆ ಅಥವಾ ಉಪಚರಿಸುವವರಿಗೆ ವಿಪರೀತ ಗೊಂದಲವಾಗುತ್ತದೆ. ಉದಾಹರಣೆಗೆ, ದಂತವೈದ್ಯರು ರೋಗಿಗೆ ಚಿಕಿತ್ಸೆ ನೀಡುವಾಗ ನೋವಾದರೆ ಕೈ ಎತ್ತಿ ಸಂಕೇತವನ್ನು ನೀಡಿ ಎಂದು ಹೇಳಿರುತ್ತಾರೆ. ಆದರೆ ಟೋಮೋಫೋಬಿಯಾ ಇರುವಂತಹ ವ್ಯಕ್ತಿ ನೋವಂಜಿಕೆ ಇರುವ ಕಾರಣದಿಂದ ಹುಸಿಪ್ರತಿಕ್ರಿಯೆಯನ್ನು ನೀಡುವನು. ಆಗ ಇದು ನೋವಿನ ಭಯದ ಸಂಕೇತವೋ, ನೋವಿನ ಸಂಕೇತವೋ ಎಂದು ವೈದ್ಯರಿಗೆ ತಿಳಿಯದೆ ಗೊಂದಲಕ್ಕೀಡಾಗಬಹುದು. ಹಾಗೆಯೇ ನೋವಂಜಿಕೆ ಇರುವವರಿಗೂ ಕೂಡಾ ತಮಗೆ ನಿಜವಾಗಿ ನೋವಾಗುತ್ತಿದೆಯೋ ಅಥವಾ ನೋವಿನ ಭಯದಿಂದ ಆ ನೋವಿನ ಭ್ರಮೆಯನ್ನು ಹೊಂದಿರುವರೋ ಎಂದು ತಿಳಿಯಲು ಕಷ್ಟವಾಗುತ್ತದೆ.

ನೋವಂಜಿಕೆ ಇರುವವರು ನೋವನ್ನು ಅನುಭವಿಸುತ್ತಿರುವ ಭ್ರಮೆಯನ್ನೂ ಹೊಂದುವ ಸಾಧ್ಯತೆಗಳಿರುತ್ತವೆ. ನೋವಂಜಿಕೆಯ ವ್ಯಕ್ತಿಗಳು ವಿಪರೀತವಾಗಿ ಥರಗುಟ್ಟಬಹುದು, ವಿಪರೀತವಾಗಿ ಬೆವರುವರು, ತಲೆಸುತ್ತಿಬಂದು ಬೀಳಬಹುದು, ಹೊಟ್ಟೆಯಲ್ಲಿ ಏರುಪೇರು ಆಗಬಹುದು, ಹೃದಯದ ಬಡಿತ ವಿಪರೀತವಾಗಿ ಏರುವುದು, ಕೆಲವೊಮ್ಮೆ ವಾಂತಿ ಮಾಡಬಹುದು, ಉಸಿರಾಟ ವೇಗವೂ ಆಗಬಹುವುದು, ವಿಪರೀತವಾಗಿ ಕಿರುಚುವುದು, ಎದೆಯಲ್ಲಿ ಮತ್ತು ದೇಹದಲ್ಲಿ ಬಿಗಿತ ಕಾಣುವುದು, ಒದ್ದಾಡುವುದು, ಕೈ ಕಾಲು ಒದರುವುದು, ನಾಟಕೀಯವಾಗಿ ಹಾಗೂ ಅನಿರೀಕ್ಷಿತವಾಗಿ ಕೂಗಾಡಬಹುದು, ಸಂಪೂರ್ಣ ಭಾವೋದ್ವೇಗಕ್ಕೆ ಒಳಗಾಗಬಹುದು, ಕೆಲವರ ವಿಪರೀತವಾದ ಪ್ರಸಂಗಗಳಲ್ಲಿ ಮೂತ್ರವಿಸರ್ಜನೆ ಮತ್ತು ಮಲವಿಸರ್ಜನೆ ಕೂಡಾ ಆಗಬಹುದು. ವ್ಯಾಸೋವ್ಯಾಗಲ್ ಸಿನ್ಕೋಪ್ ಎನ್ನುವ ಪ್ರಕ್ರಿಯೆಯಲ್ಲಿ ದೇಹವು ಅತಿಯಾಗಿ ಪ್ರತಿಕ್ರಿಯಿಸುತ್ತಾ ರಕ್ತದೊತ್ತಡವು ಹೆಚ್ಚಾಗಿ ಪ್ರಜ್ಞೆತಪ್ಪುವ ಸಾಧ್ಯತೆಯೂ ಇರುತ್ತದೆ. ನರಮಂಡಲಕ್ಕೆ ಮೆದುಳು ನೀಡುವ ಭಯದ ಸಂದೇಶಗಳಿಂದ ಅನಿಚ್ಛಿಕವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಾ ವರ್ತಿಸುತ್ತದೆ. ಇದನ್ನು ಟೋಮೋಫೋಬಿಯಾ ಅಥವಾ ಚಿಕಿತ್ಸೆಯ ನೋವಂಜಿಕೆಯಲ್ಲಿ ಢಾಳಾಗಿ ಕಾಣುತ್ತದೆ.

ಒಂದು ಹಂತದ ಅಂಜಿಕೆ ಎಲ್ಲರಲ್ಲೂ ಇದ್ದರೂ ನೋವಂಜಿಕೆಯ ವ್ಯಕ್ತಿಗಳದ್ದು ವಿಪರೀತವಾದ ಪ್ರದರ್ಶನವಾಗಿರುತ್ತದೆ. ಟೋಮೋಫೋಬಿಯಾ ಇರುವ ಕಾರಣದಿಂದಲೇ ಕೆಲವು ವ್ಯಕ್ತಿಗಳು ವೈದ್ಯಕೀಯ ತಪಾಸಣೆಗೇ ಮುಂದಾಗುವುದಿಲ್ಲ. ಟ್ರೈಪ್ಯಾನೋಫೋಬಿಯಾ ಅಂತಾನೂ ಒಂದಿದೆ. ಅದು ಒಂದು ರೀತಿಯಲ್ಲಿ ಇದರ ಭಾಗವೇ ಆದರೂ ಇದರ ಪ್ರಮುಖ ಲಕ್ಷಣ ಸೂಜಿಗಳಿಗೆ ವಿಪರೀತವಾಗಿ ಹೆದರುವುದು. ಸೂಜಿಯಂಜಿಕೆ ಎನ್ನಬಹುದು. ಸೂಜಿಯ ದರ್ಶನ ಮಾತ್ರವೇ ಸಾಕು ಅವರ ಎದೆಯಲ್ಲಿ ಏರಿಳಿತ ಪ್ರಾರಂಭವಾಗುತ್ತದೆ. ಅದನ್ನು ಹಿಡಿದಿರುವ ವೈದ್ಯರೋ ಅಥವಾ ಇತರ ಚಿಕಿತ್ಸಕರೋ ಹತ್ತಿರ ಬರುತ್ತಿದ್ದಂತೆ ತಮ್ಮನ್ನು ಕೊಲೆ ಮಾಡುವುದಕ್ಕೆ ಚಾಕು ಚೂರಿ ಹಿಡಿದುಕೊಂಡು ಬರುತ್ತಿರುವ ಕೊಲೆಗಾರನ ಕಂಡಂತೆ ಬೆವರುತ್ತಾರೆ. ಟೋಮೋಫೋಬಿಯಾದವರ ಕೆಲವು ಲಕ್ಷಣಗಳನ್ನು ಇವರೂ ತೋರುತ್ತಾರೆ. ಇವರಿಗೆ ಸೂಜಿ ಚುಚ್ಚಿಸಿಕೊಳ್ಳಲು ಇತರರ ಸಹಾಯ, ಸಹಕಾರ ಬೇಕಾಗುತ್ತದೆ. ಒಮ್ಮೆ ಚುಚ್ಚಿ ತೆಗೆದರೆ ತಮ್ಮ ಚುಚ್ಚುವ ಹಿಂದಿನ ವರ್ತನೆಗೆ ತಾವೇ ನಗುತ್ತಾರೆ. ಇಷ್ಟಕ್ಕೆ ಅಷ್ಟು ಆಡಿದೆನಾ ಎಂದು ಅವರಿಗೇ ಅನ್ನಿಸುತ್ತದೆ. ನೀವು ಸಣ್ಣ ಮಕ್ಕಳಿಗೆ ಅದೂ ಇದೂ ಮಾತಾಡಿಸುತ್ತಾ, ಬೇರೆ ಕಡೆ ಗಮನ ಸೆಳೆಯುತ್ತಾ ಸೂಜಿಯನ್ನು ಚುಚ್ಚಿಬಿಡುವಂತೆ ಇವರ ವಿಷಯದಲ್ಲಿ ಸಾಧ್ಯವಾಗುವುದಿಲ್ಲ. ಆ ವ್ಯಕ್ತಿಗೆ ನಿಮ್ಮ ತಂತ್ರ ತಿಳಿದಿರುತ್ತದೆ. ಉತ್ತರಿಸಲೂ ಅವರಿಗೆ ಇಷ್ಟವಿರುವುದಿಲ್ಲ ಮತ್ತು ನೀವು ಪ್ರಶ್ನಿಸುವ ಕಾರಣವೂ ತಿಳಿದಿರುವುದರಿಂದ ಅದಕ್ಕೆ ಮಾನ್ಯತೆಯನ್ನೂ ಕೊಡುವುದಿಲ್ಲ.

ಈ ಫೋಬಿಯಾ ಅಥವಾ ಅಂಜಿಕೆಗಳಿಗೆ ನಿರ್ದಿಷ್ಟ ಕಾರಣವಿದೆ ಎಂದು ಹೇಳಲಾಗುವುದಿಲ್ಲ. ಯಾವುದಾದರೂ ಹಿಂದಿನ ನೋವಿನ ಅನುಭವದಿಂದ ಅಂಜಿಕೆಗೆ ಒಳಗಾಗಿರಬಹುದು ಅಥವಾ ಅವರ ಮೆದುಳಿನ ರಾಸಾಯನಿಕ ಕ್ರಿಯೆಯ ವ್ಯತ್ಯಯವೇ ಆ ರೀತಿಯಲ್ಲಿ ಆಗುವಂತಹ ಸಮಸ್ಯೆಯನ್ನು ಒಳಗೊಂಡಿರಬಹುದು. ದೀರ್ಘಕಾಲೀನ ಮನೋಭಾವದಿಂದ ಅಂತಹ ಮಾನಸಿಕ ಸ್ಥಿತಿ ಉಂಟಾಗಿರಬಹುದು. ಯಾವ ವಿಷಯಕ್ಕೆ ಹೆದರುತ್ತಾರೋ ಆ ವಿಷಯದ ಬಗ್ಗೆ ವಿಪರೀತವಾದ ನಕಾರಾತ್ಮಕವಾದ ಮಾಹಿತಿಗಳನ್ನು ಗ್ರಹಿಸಿದ್ದಿರಬಹುದು, ಇತರ ಅನುಭವಗಳು ನಕಾರಾತ್ಮಕವಾಗಿರುವುದನ್ನು ಪದೇ ಪದೇ ಕೇಳಿರಬಹುದು, ಕೆಲವರು ಮಾನಸಿಕವಾಗಿಯೇ ಅತಿ ಸೂಕ್ಷ್ಮವ್ಯಕ್ತಿಗಳಾಗಿದ್ದು; ವಿಷಯಗಳನ್ನು ವಿಪರೀತವಾಗಿ ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ವ್ಯಕ್ತಿಗಳಿರಬಹುದು: ಏನು ಬೇಕಾದರೂ ಆಗಿರಬಹುದು. ಈ ನೋವಂಜಿಕೆಯಿಂದ ಬಿಡುಗಡೆ ಸಾಧ್ಯವಿಲ್ಲವೇ?

ಸಂಪೂರ್ಣ ಸಾಧ್ಯ ಎನ್ನಲಾಗದಿದ್ದರೂ, ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಿಂದ ಒಂದು ಹಂತದ ನಿಯಂತ್ರಣ ಸಾಧ್ಯ. ಇದೇ ರೀತಿ ಅಕ್ಸೆಪ್ಟೆನ್ಸ್ ಮತ್ತು ಕಮಿಟ್‌ಮೆಂಟ್ ಥೆರಪಿ ಕೂಡಾ ಮಾಡುತ್ತಾರೆ. ಮನಸ್ಸು ಮತ್ತು ದೇಹವು ವಿಶ್ರಾಂತವಾಗುವಂತಹ ಸೂತ್ರಗಳನ್ನು ಕಂಡುಕೊಳ್ಳುವುದು ಕೂಡಾ ಸಹಾಯಕವಾಗುತ್ತದೆ.

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು