ಸಂಬಂಧಗಳ ಅಡಿಪಾಯ

Update: 2023-05-27 18:43 GMT

ತನ್ನ ಜೈವಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಇಡೀ ಸೃಷ್ಟಿಯೇ ಒಂದನ್ನೊಂದು ಅವಲಂಬಿಸಿದೆ. ಇನ್ನು ಸಾಮಾಜಿಕ ಪ್ರಾಣಿಯಾಗಿರುವ ಸಂಘಜೀವಿ ಮನುಷ್ಯನು ಮಾಡಿಕೊಂಡಿರುವಂತಹ ವ್ಯವಸ್ಥೆಯಲ್ಲಿ ಅವಲಂಬನೆ ಸ್ವಾಭಾವಿಕವೇ. ಮನುಷ್ಯನ ಅನೇಕಾನೇಕ ಕೆಲಸಗಳು ನಡೆಯಲು, ಅಗತ್ಯವಾದ ಉತ್ಪಾದನೆಗಳನ್ನು ಮಾಡಲು, ತಮ್ಮ ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರಸ್ಪರ ಅವಲಂಬನೆ ಹೊಂದಿರಲೇ ಬೇಕು. ಮಾನಸಿಕವಾದ ಪರಾವಲಂಬತನ ಸಂಕೀರ್ಣವಾದದ್ದು. ಇದರಲ್ಲಿ ವ್ಯಕ್ತಿಯು ತನ್ನ ಆನಂದಕ್ಕಾಗಿ, ಸಮಾಧಾನಕ್ಕಾಗಿ, ತೃಪ್ತಿಗಾಗಿ, ಆಸೆಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ, ಭಯದಿಂದ ಮುಕ್ತರಾಗುವುದಕ್ಕಾಗಿ ಇತರರ ಮೇಲೆ ಅವಲಂಬಿಸುವುದು. ಇಂತಹ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ಕುಟುಂಬ ಎನ್ನುವ ವ್ಯವಸ್ಥೆಗೆ ಮನುಷ್ಯ ಬಹಳ ಒತ್ತು ನೀಡುವುದು. ಮಾನಸಿಕ ಅವಲಂಬನದಲ್ಲಿ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಒಬ್ಬರಿಗೊಬ್ಬರು ಪೂರೈಸುವ ನಿರೀಕ್ಷೆ ಮತ್ತು ಅಪೇಕ್ಷೆಗಳ ಆಸೆ ಕಣ್ಣುಗಳಲ್ಲೇ ಒಬ್ಬರನ್ನೊಬ್ಬರು ನೋಡುತ್ತಿರುವರು. ಸಂಬಂಧಗಳು ಎನ್ನುವ ಛದ್ಮವೇಷಗಳನ್ನು ತೊಟ್ಟಿರುವ ಆಂತರಿಕ ಭಿಕ್ಷುಕರು. ಯಾವಾಗ ಒಂದು ವ್ಯಕ್ತಿಯ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಯಾವುದೇ ಸಂಬಂಧದೊಡನೆ ಗುರುತಿಸಿಕೊಂಡಿರುವ ವ್ಯಕ್ತಿಯು ಪೂರೈಸದೆ ಹೋದರೆ ನಿರಾಸೆ, ಹತಾಶೆ ಮತ್ತು ಕೋಪ ಉಂಟಾಗುತ್ತದೆ. ಇಲ್ಲಿಯೂ ಶಕ್ತಿ ಪ್ರದರ್ಶನವಾಗುತ್ತದೆ. ಬಲಾಬಲಗಳ ಸಂಘರ್ಷವಾಗುತ್ತದೆ.

ಸಮಾನತೆ ಎಂಬುದು ಒಂದು ಆಶಯ, ಕನಸು. ಆದರೆ ಮನುಷ್ಯನ ಮಾನಸಿಕ ವಾಸ್ತವದಲ್ಲಿ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗಿಂತ ಬಲದಲ್ಲಿ ಅಧಿಕನೂ, ಮತ್ತೊಬ್ಬನನ್ನು ಅಧೀನದಲ್ಲಿಟ್ಟುಕೊಳ್ಳಲೂ ಸಮರ್ಥನೂ ಆಗಿರಬೇಕೆಂಬ ಬಯಕೆ. ಈ ಬಯಕೆಯು ಈಡೇರಿದಾಗ ಗರ್ವವೂ, ಈಡೇರದಿದ್ದಾಗ ನಿರಾಶನಾಗುತ್ತಾನೆ ಅಥವಾ ವ್ಯಗ್ರನಾಗುತ್ತಾನೆ. ಗಂಡ ಹೆಂಡಿರ ನಡುವಿನ ಸಂಘರ್ಷಗಳನ್ನು ಗಮನಿಸಿ. ಇಬ್ಬರಿಗೂ ಪರಸ್ಪರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಗಂಡ ಅವಳ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಪೂರೈಸುವುದು ತನ್ನ ಕರ್ತವ್ಯ ಎನ್ನುವುದಕ್ಕಿಂತ ಅವಳು ತನ್ನ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಪೂರೈಸುವಂತೆ ಒತ್ತಾಯಿಸುವುದು ತನ್ನ ಅಧಿಕಾರ ಎಂದು ಭಾವಿಸುತ್ತಾನೆ. ಅದೇ ರೀತಿ ಹೆಂಡತಿಯ ಕಡೆಯಿಂದಲೂ ಆಗಬಹುದು. ಇಲ್ಲಿ ವ್ಯಕ್ತಿಗಳು ಪರಸ್ಪರ ತೃಪ್ತಿಯನ್ನು ನೀಡುವುದರ ಬದಲು ನಿರಾಶೆ ಮತ್ತು ಅತೃಪ್ತಿಯನ್ನು ಹಂಚಿಕೊಂಡು ಅದನ್ನು ಹೇಗಾದರೂ ಪಡೆದುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಯಾವಾಗ ಪರ್ಯಾಯವಾಗಿಯೂ ತಮ್ಮ ವ್ಯಕ್ತಿಗತ ಅಪೇಕ್ಷೆ ಮತ್ತು ನಿರೀಕ್ಷೆಗಳಿಗೆ ಸೂಕ್ತವಾದಂತಹ ಪರಿಹಾರ ಅಥವಾ ತೃಪ್ತಿ ಸಿಗದೆ ಹೋದಾಗ ಸೇಡಿನ ಭಾವ ಹುಟ್ಟಿಕೊಳ್ಳುತ್ತದೆ. ಈ ಸೇಡನ್ನು ತೀರಿಸಿಕೊಳ್ಳಲು ನಾನು ಗಂಡ, ನಾನು ಹೆಂಡತಿ, ನಾನು ಹೀಗೆ, ಹಾಗೆ, ನಾನು ಅಷ್ಟು ಮಾಡಿದ್ದೇನೆ, ಇಷ್ಟು ಮಾಡುತ್ತೇನೆ, ನನ್ನ ಸಾಧನೆ ಇಷ್ಟು, ನನ್ನ ಸ್ಥಾನಮಾನ ಇಂತಹದು; ಹೀಗೆಲ್ಲಾ ತನ್ನ ಅಧಿಕಾರ ಮತ್ತು ಎತ್ತರಿತ ಸ್ಥಾನವನ್ನು ತೋರ್ಪಡಿಸುತ್ತಾ ನೀನು ಎಂದೆಂದಿಗೂ ಕಡಿಮೆಯೇ ಎಂದು ಮತ್ತೊಂದು ವ್ಯಕ್ತಿಗೆ ಪ್ರದರ್ಶಿಸಲು ಪ್ರಯತ್ನಿಸುತ್ತಿರುತ್ತಾರೆ.

ಗಂಡನು ದೈಹಿಕವಾಗಿ ಮತ್ತು ಅಧಿಕಾರದ ವಿಷಯದಲ್ಲಿ ಶಕ್ತಿಶಾಲಿಯಾಗಿದ್ದಾನೆ ಎಂದು ಹೆಂಡತಿಗೆ ತೋರಿದಾಗ ಅವನನ್ನು ಮಣಿಸಲು ತಾನೆಷ್ಟು ದುಃಖಿತೆ, ಆತನಿಂದ ಶೋಷಿತಳಾಗಿದ್ದೇನೆ ಎಂಬುದನ್ನು ಪ್ರಚಾರ ಮಾಡುವ ಮೂಲಕ ಅವನ ಶಕ್ತಿಯನ್ನು ದಮನ ಮಾಡಲು ಯತ್ನಿಸುತ್ತಾಳೆ. ಹಾಗೆಯೇ ವೈಸ್ವರ್ಸಾ ಕೂಡಾ ಇರಬಹುದು. ಹೀಗೆ ಎಲ್ಲಾ ಬಗೆಯ ಸಂಬಂಧಗಳಲ್ಲೂ ಕೂಡಾ ನಡೆಯುತ್ತಿರುತ್ತದೆ. ಒಟ್ಟಾರೆ ವ್ಯಕ್ತಿಯು ತನ್ನ ಅಪೇಕ್ಷೆಯನ್ನು ಇತರರು ತೃಪ್ತಿಗೊಳಿಸಬೇಕು ಎಂಬ ನಿರೀಕ್ಷೆಯನ್ನು ಹೊಂದಿರುತ್ತಾರೆ. ಇದರ ಅತೃಪ್ತಿಯ ಉತ್ಪನ್ನಗಳಾಗಿ ಸಂಘರ್ಷ, ಸೇಡು, ಅಧಿಕಾರ ಪ್ರದರ್ಶನ, ಬಲಾಬಲ ಪ್ರದರ್ಶನ, ತಮ್ಮ ಒಳ್ಳೆಯತನ ಮತ್ತು ಮತ್ತೊಬ್ಬರ ನೀಚತನದ ಪ್ರದರ್ಶನ; ಎಲ್ಲಾ ನಡೆಯುತ್ತಿರುತ್ತದೆ. ತನ್ನ ಒಳ್ಳೆಯತನದ ಮಾನದಂಡ ಮತ್ತೊಬ್ಬರ ನೀಚತನವಾಗುವುದು ಈಗಲೇ. ಇನ್ನೊಂದು ತಮಾಷೆ ಎಂದರೆ, ಇಬ್ಬರ ನಡುವಿನ ಅನ್ಯೋನ್ಯತೆಗೆ ಅಥವಾ ಸಂಘರ್ಷ ರಹಿತ ಸಂಬಂಧಗಳಲ್ಲಿ ಒಬ್ಬರು ಮತ್ತೊಬ್ಬರ ಅಧಿಕಾರವನ್ನು ಅಥವಾ ಹೆಚ್ಚುಗಾರಿಕೆಯನ್ನು ಮನ್ನಿಸಿಬಿಟ್ಟಿರುತ್ತಾರೆ.

ತಮ್ಮ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ತಾವು ಒಪ್ಪಿರುವ ವ್ಯಕ್ತಿಯ ಯಜಮಾನ್ಯದ ಅಧಿಕಾರಕ್ಕೆ ತಕ್ಕಂತೆ ಹೊಂದಿಸಿಕೊಂಡುಬಿಟ್ಟಿರುತ್ತಾರೆ. ಇದು ವ್ಯಕ್ತಿ ವ್ಯಕ್ತಿಗಳ ನಡುವೆ ಮಾತ್ರವಲ್ಲ ಸಮಾಜದಲ್ಲಿಯೂ ಕೂಡಾ ಸಾಮುದಾಯಿಕವಾಗಿಯೂ ಆಗಿಬಿಟ್ಟಿರುತ್ತದೆ. ನಮ್ಮ ದೇಶದಲ್ಲಿ ಜಮೀನುದಾರರಿಗೆ ಜೀತದಾಳುಗಳು, ಮೇಲ್ಜಾತಿ ಎನಿಸಿಕೊಂಡವರಿಗೆ ಕೆಳವರ್ಗದ ಜಾತಿಯವರು, ಶ್ರೀಮಂತರಿಗೆ ಬಡವರು ಇದೇ ರೀತಿಯಲ್ಲಿ ತಮ್ಮ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಹೊಂದಿಸಿಕೊಂಡುಬಿಟ್ಟರು. ಈ ಉಳ್ಳವರ, ಮೇಲ್ಜಾತಿಯವರ ಶಕ್ತಿಯ ಮುಂದೆ ತಮ್ಮ ನಿರ್ಬಲತೆಯನ್ನು ಒಪ್ಪಿಕೊಂಡು ಪ್ರತಿಭಟಿಸಲೂ ಕೂಡ ಹೆದರಿಕೊಂಡು ಬಡವನ ಕೋಪ ದವಡೆಗೆ ಮೂಲ ಎಂದು ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಶ್ರೇಣೀಕೃತವಾಗಿ ಸಮಾಜದ ವಿಂಗಡಣೆ; ಇವೆಲ್ಲಾ ಆಗಿದ್ದು. ಸರಿ, ಇವೆಲ್ಲಾ ಸಾಮಾಜಿಕ ಪಿಡುಗುಗಳು ಮಾತ್ರವಲ್ಲ. ಬಂಡವಾಳಶಾಹಿಯ ದೌರ್ಜನ್ಯ, ಅಸ್ಪೃಶ್ಯತೆ, ಆಳುವ ದಣಿಗಳ ದರ್ಪ, ಅಸಮಾನತೆ, ಶ್ರೇಣೀಕೃತವಾಗಿ ವ್ಯಕ್ತಿಗಳ ಮತ್ತು ಸಂಬಂಧಗಳ ವಿಂಗಡಣೆ ಕುಟುಂಬಗಳಲ್ಲಿ ಕೂಡಾ ಇರುತ್ತದೆ. ಸಾಮಾಜಿಕವಾಗಿದ್ದಂತೆ ವ್ಯಕ್ತಿಗತವಾಗಿಯೂ ವ್ಯಕ್ತಿಗಳ ನಡುವೆ ಇರುತ್ತದೆ. ಆದರೆ ಅವೆಲ್ಲವೂ ಬಹಳ ಸೂಕ್ಷ್ಮರೂಪದಲ್ಲಿರುತ್ತದೆ. ಸಮೂಹಗಳದ್ದು ಮನೆಯ ಹೊರಗೆಯಾದ್ದರಿಂದ ಕಾಣುತ್ತವೆ.

ಇವು ಮನೆಯೊಳಗೆ, ಮನದೊಳಗೆ ಆದ್ದರಿಂದ ಅವರಿರುವುದೇ ಹೀಗೆ ಎಂಬ ತೀರ್ಮಾನಕ್ಕೆ ಬಂದು ಸಂಬಂಧಗಳ ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಇಬ್ಬರು ವ್ಯಕ್ತಿಗಳು ತಮ್ಮ ಸಂಬಂಧಗಳಲ್ಲಿ ಸಾಮರಸ್ಯ ಸಾಧಿಸಬೇಕೆಂದರೆ ಒಂದೋ ರಾಜಿ ಮಾಡಿಕೊಳ್ಳುತ್ತಾರೆ ಅಥವಾ ತಮ್ಮ ಅಧೀನತೆಯನ್ನು ಒಪ್ಪಿಕೊಂಡುಬಿಟ್ಟಿರುತ್ತಾರೆ. ಒಬ್ಬರನ್ನೊಬ್ಬರು ಅಧೀನಗೊಳಿಸದೆ, ಅಪೇಕ್ಷೆಗಳನ್ನು ಪೂರೈಸಬೇಕೆಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ, ಪರಸ್ಪರ ಅವಲಂಬಿತವಾಗದೆ, ಅಂತರಾಳದಲ್ಲಿ ಬೆಸುಗೆಯನ್ನು ಹೊಂದಿದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಅಂತರವನ್ನು ಹೊಂದಿದ್ದರೆ; ಅದು ಅಪರೂಪದ ಮನಸ್ಥಿತಿಯ ಉದಾಹರಣೆಗಳು. ಅವರಲ್ಲಿ ಸಂಘರ್ಷವಿರುವುದಿಲ್ಲ. ತಮಗೆ ಸಮ್ಮತವಾಗದಿರುವಂತಹ ವಿಷಯದಲ್ಲಿ ಸಂಗಾತಿಯನ್ನು ಒಂದು ನಿಟ್ಟುಸುರು ಮತ್ತು ಮುಗುಳ್ನಗೆ ಸಹಿತವಾಗಿ ಬಿಟ್ಟು ಸ್ವೀಕೃತಸ್ಥಿತಿಯಲ್ಲಿಯೇ ಸಾಕ್ಷೀಕರಿಸುವ ಅಪರೂಪದ ಮನಸ್ಥಿತಿಗಳೂ ಇಲ್ಲದೇನಿಲ್ಲ. ಆದರೆ ಅದಕ್ಕೆ ಬಹಳಷ್ಟು ಮಾನಸಿಕವಾದ ಸಿದ್ಧತೆ ಮತ್ತು ತರಬೇತಿಗಳು ಬೇಕಾಗಿರುತ್ತದೆ. ಸಂಬಂಧಗಳ ಹಕ್ಕು ಮತ್ತು ಕರ್ತವ್ಯಗಳ ಅಡಿಪಾಯವೇ ಸಾಮಾನ್ಯ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಪೂರೈಸುವುದು.

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು