ಮುಂದುವರಿದ ಕುಸ್ತಿಪಟುಗಳ ಪ್ರತಿಭಟನೆ: ಇನ್ನೂ ಮೌನ ಮುರಿಯದ ಪ್ರಧಾನಿ ಮೋದಿ, ಅಮಿತ್ ಶಾ

Update: 2023-05-30 15:55 GMT
ಮುಂದುವರಿದ ಕುಸ್ತಿಪಟುಗಳ ಪ್ರತಿಭಟನೆ: ಇನ್ನೂ ಮೌನ ಮುರಿಯದ ಪ್ರಧಾನಿ ಮೋದಿ, ಅಮಿತ್ ಶಾ
  • whatsapp icon

ಹರಿದ್ವಾರ: ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಸಂಗೀತಾ ಫೋಗಟ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಆಡಳಿತ ಪಕ್ಷದ ಉನ್ನತ ನಾಯಕರು ಮೌನ ವಹಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಗಮನಾರ್ಹವೆಂದರೆ, ಬಿಜೆಪಿಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ದನಿಯೆತ್ತುವ ಸ್ಮೃತಿ ಇರಾನಿ ಕೂಡ ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡದೆ ಮೌನವಹಿಸಿದ್ದಾರೆ.

ಪ್ರಧಾನಿ ಮೋದಿ ಅವರ ಇತ್ತೀಚಿನ ಟ್ವೀಟ್ ಕಾಂಬೋಡಿಯಾದ ರಾಜನನ್ನು ಸ್ವಾಗತಿಸುವುದು ಬಿಟ್ಟರೆ ಬೇರೆ ಯಾವುದೇ ಟ್ವೀಟ್ ಮಾಡದೆ ಮೌನ ಸೂಚಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಆಚರಿಸುವ ಟ್ವೀಟ್‌ ಮಾಡಿದ್ದು ಬಿಟ್ಟರೆ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಅವರೂ ಮೌನವಹಿಸಿದ್ದಾರೆ.  ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಹೆಮ್ಮೆ ತಂದಾಗ ಸ್ವತಃ ಪ್ರಧಾನಿ ಮೋದಿಯವರೇ ಈ ಕುಸ್ತಿಪಟುಗಳ ಬಗ್ಗೆ ಪ್ರಶಂಸಿಸಿ ಟ್ವೀಟ್‌ ಮಾಡಿರುವುದರಿಂದ ಈಗಿನ ಮೌನದ ಬಗ್ಗೆ ಟೀಕೆಗಳೂ ವ್ಯಕ್ತವಾಗಿವೆ. 
 
ತಾವು ಕಷ್ಟಪಟ್ಟು ಗಳಿಸಿದ ಪದಕಗಳನ್ನು ನೀರಿನಲ್ಲಿ ಬಿಡುವ ಕುಸ್ತಿಪಟುಗಳ ನಿರ್ಧಾರವು, ಸರ್ಕಾರದ ಮೇಲಿನ ಅವರ ಹತಾಶೆಯನ್ನು ಸಂಕೇತಿಸುತ್ತದೆ. ಅಲ್ಲದೆ, ಅವರ ಕಳವಳಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದರ ಸಂಕೇತವಾಗಿದೆ. ಕ್ರೀಡಾಪಟುಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿರುವುದು ಅವರ ನಿರಾಸೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾರತಕ್ಕೆ ಹೆಮ್ಮೆ ತಂದ ಕ್ರೀಡಾಳುಗಳ ಪ್ರತಿಭಟನೆಯು ದೇಶದ ಗಮನ ಸೆಳೆದರೂ ಸರ್ಕಾರ ಅವಡುಗಚ್ಚಿ ಮೌನವಾಗಿರುವುದು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿವೆ.

Similar News