ಮಾಜಿ ಸಚಿವರ ಹತ್ಯೆ ಪ್ರಕರಣ: ಸಂಸದ ಅವಿನಾಶ್ ರೆಡ್ಡಿಗೆ ನಿರೀಕ್ಷಣಾ ಜಾಮೀನು ಮಂಜೂರು
ಹೈದರಾಬಾದ್: ಚಿಕ್ಕಪ್ಪ ಹಾಗೂ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ವೈಎಸ್‌ಆರ್‌ಸಿ ಸಂಸದ ವೈಎಸ್ ಅವಿನಾಶ್ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಸಿಬಿಐನ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗದಂತೆ ಅವಿನಾಶ್ ರೆಡ್ಡಿಗೆ ನ್ಯಾಯಾಲಯ ಸೂಚಿಸಿದೆ.
"ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಹಾಗೂ 2023 ರ ಜೂನ್ ಅಂತ್ಯದವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಿಬಿಐ ಪೊಲೀಸರ ಮುಂದೆ ಹಾಜರಾಗಬೇಕು ಮತ್ತು ಅವರು ತನಿಖೆಗೆ ಅಗತ್ಯವಿರುವಾಗ ಮತ್ತು ನಿಯಮಿತವಾಗಿ ಹಾಜರಾಗಬೇಕು" ಎಂದು ನ್ಯಾಯಮೂರ್ತಿ ಎಂ. ಲಕ್ಷ್ಮಣ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿಯಾಗಿರುವ ಅವಿನಾಶ್ ರೆಡ್ಡಿ ಮಾರ್ಚ್ 2019 ರಲ್ಲಿ ತನ್ನ ಸಂಬಂಧಿಯಾಗಿರುವ ವಿವೇಕಾನಂದ ರೆಡ್ಡಿ ಅವರ ಹತ್ಯೆಯ ನಂತರ ಸಿಬಿಐಯಿಂದ ತನಿಖೆ ಎದುರಿಸುತ್ತಿದ್ದಾರೆ. ವೈಎಸ್ ವಿವೇಕಾನಂದ ರೆಡ್ಡಿ ಆರೋಪಿ ಅವಿನಾಶ್ ನ ಚಿಕ್ಕಪ್ಪ.
ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರಾದ ವಿವೇಕಾನಂದ ರೆಡ್ಡಿ ಅವರು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ವಾರಗಳ ಮೊದಲು ಮಾರ್ಚ್ 15, 2019 ರ ರಾತ್ರಿ ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ಕೊಲೆಯಾಗಿದ್ದರು.